ಭೀಕರ ಬರಗಾಲದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ಸಮರ್ಪಕ ವಿದ್ಯುತ್ ಪೂರೈಕೆ, ಕೃಷಿಕರ ಸಂಪೂರ್ಣ ಸಾಲ ಮನ್ನಾ, ಬೆಳೆನಷ್ಟಕ್ಕೆ ವೈಜ್ಞಾನಿಕ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸೋಮವಾರ ತುಮಕೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ, ರಾಜ್ಯ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಸೇರಿದಂತೆ ವಿವಿಧ ಮುಖಂಡರ ನೇತೃತ್ವದಲ್ಲಿ ನಗರದ ಬಿಜಿಎಸ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದ ರೈತರು, ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಕೈಬಿಡಬೇಕು, ಜಿಲ್ಲೆಯ ಎಲ್ಲ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು, ನಂದಿಹಳ್ಳಿ–ವಸಂತನರಸಾಪುರ ರಿಂಗ್ ರಸ್ತೆಗಾಗಿ ಉದ್ದೇಶಿಸಿರುವ ಭೂಸ್ವಾಧೀನ ಕೈಬಿಡಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ, ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ರೈತರ ರಕ್ಷಣೆಗೆ ಸರ್ಕಾರಗಳು ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ರೈತರ ಸಮಸ್ಯೆಗಳು, ಸಾಲಮನ್ನಾ, ನೀರಾವರಿ ಯೋಜನೆಗಳು ಸೇರಿದಂತೆ ಕೃಷಿಕರ ಮೂಲಭೂತ ಬೇಡಿಕೆಗಳಿಗಾಗಿ ಹೋರಾಟ ನಡೆಸುವುದರ ಜೊತೆಗೆ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ರೈತ ಸಂಘ ಮುಂದಾಗಬೇಕು ಎಂದು ಅವರು ಹೇಳಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಕೃಷಿಗೆ ಪ್ರಥಮ ಆದ್ಯತೆ ನೀಡುವುದಾಗಿ ಸರ್ಕಾರ ಹೇಳಿರುವ ಹಿನ್ನೆಲೆಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಕನಿಷ್ಠ 7 ಗಂಟೆಗಳ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ಅಕ್ರಮ-ಸಕ್ರಮ ಯೋಜನೆಯಡಿ ಬಾಕಿ ಇರುವ ರೈತರಿಗೆ ತುರ್ತಾಗಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಬಾಕಿ ಇರುವ ಉಪಸ್ಥಾವರ, 220 ಕೆ.ವಿ. ಸ್ಟೇಷನ್‌ಗಳು ಹಾಗೂ ಲಿಂಕ್‌ಲೈನ್‌ಗಳ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಹಳೆಯ ವಿದ್ಯುತ್ ಕಂಬ, ತಂತಿ ಹಾಗೂ ಸುಟ್ಟ ಪರಿವರ್ತಕಗಳನ್ನು 48 ಗಂಟೆಯೊಳಗೆ ಬದಲಾಯಿಸಬೇಕು ಎಂದು ಆಗ್ರಹಿಸಿದರು
ಬರ ಪರಿಹಾರವಾಗಿ ರೈತರಿಗೆ ನೀಡಲಾಗುತ್ತಿರುವ ₹2,500 ಮೊತ್ತದ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಗೋವಿಂದರಾಜು, “ರೈತರಿಗೆ ₹2,500 ಭಿಕ್ಷೆಯ ರೀತಿಯಲ್ಲಿ ನೀಡುವುದು ಬೇಡ. ವೈಜ್ಞಾನಿಕವಾಗಿ ಬೆಳೆನಷ್ಟವನ್ನು ಅಂದಾಜಿಸಿ ಸಮರ್ಪಕ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದರು.
ಕೃಷಿ ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾಲಿಗೆ ಕನಿಷ್ಠ ಲೀಟರ್‌ಗೆ ₹60 ಬೆಲೆ ನೀಡಬೇಕು. ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕು ಹಾಗೂ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನವನ್ನು ₹10 ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಹತ್ತಿ ಬೀಜ ಕಂಪನಿಗಳು ರೈತರಿಗೆ ಪಾವತಿಸಬೇಕಿರುವ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು. ಅಧಿಕೃತ ಕರಾರು ಮಾಡಿಕೊಂಡು ಮಾತ್ರ ರೈತರೊಂದಿಗೆ ವ್ಯವಹರಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂದರು.
ತುಮಕೂರು ಜಿಲ್ಲೆಯ ಮಧುಗಿರಿ, ಶಿರಾ ಹಾಗೂ ಕೊರಟಗೆರೆ–ಪಾವಗಡ ಭಾಗಗಳಲ್ಲಿ ಹುಣಸೆ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹುಣಸೆ ಉತ್ಪಾದಕರ ಹಿತ ರಕ್ಷಿಸಲು ಹುಣಸೆ ಮಂಡಳಿ ರಚಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ತುಮಕೂರು ಜಿಲ್ಲೆಯ ಹಲವು ತಾಲ್ಲೂಕುಗಳಿಗೆ ಶಾಶ್ವತ ಅಪಾಯ ಉಂಟುಮಾಡಲಿದೆ ಎಂದು ರೈತ ಸಂಘ ಆರೋಪಿಸಿರುವ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಕೈಬಿಡಬೇಕು ಎಂದು ಗೋವಿಂದರಾಜು ಒತ್ತಾಯಿಸಿದರು.
ಮೂಲ ನಾಲೆಯ ಮೂಲಕವೇ ಕುಣಿಗಲ್ ಭಾಗಕ್ಕೆ ನೀರು ಹರಿಸುವ ವ್ಯವಸ್ಥೆ ಮಾಡಬೇಕು. ಮಳೆಗಾಲದಲ್ಲಿ ಹೇಮಾವತಿ ನದಿಯಿಂದ ಹೆಚ್ಚುವರಿಯಾಗಿ ಸಮುದ್ರ ಸೇರುವ ನೀರನ್ನು ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ಭಾಗದ ಕೆರೆಗಳಿಗೆ ಹರಿಸಲು ಯೋಜನೆ ರೂಪಿಸಬೇಕು ಎಂದರು.
ಸರ್ಕಾರಕ್ಕೆ ರಾಗಿ ನೀಡಿರುವ ರೈತರಿಗೆ ಬಾಕಿ ಹಣವನ್ನು ತುರ್ತಾಗಿ ಪಾವತಿಸಬೇಕು. ಹೇಮಾವತಿ, ಎತ್ತಿನಹೊಳೆ, ರೈಲ್ವೆ ಸೇರಿದಂತೆ ವಿವಿಧ ಯೋಜನೆಗಳಿಗೆ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಪರಿಹಾರ ನೀಡಬೇಕಿದ್ದು, ಸುಮಾರು ₹500 ಕೋಟಿ ಬಾಕಿ ಇದೆ. ಈ ಹಣವನ್ನು ಶೀಘ್ರ ಪಾವತಿಸಬೇಕು ಎಂದು ಆಗ್ರಹಿಸಿದರು.
ತುರುವೇಕೆರೆ ತಾಲ್ಲೂಕಿನ ತಾಳೇಕೆರೆ ಗ್ರಾಮದ ಕೃಷ್ಣಪ್ಪ, ಚಂದ್ರಯ್ಯ, ನಾಗರಾಜು ಮತ್ತು ಆನಂದ್ ಅವರ 4.13 ಎಕರೆ ಜಮೀನಿಗೆ ಸಂಬಂಧಿಸಿದ ಪ್ರಕರಣವನ್ನು ಪ್ರಸ್ತಾಪಿಸಿದ ಗೋವಿಂದರಾಜು, ಸುಮಾರು ₹4 ಕೋಟಿಗೂ ಹೆಚ್ಚು ಮೌಲ್ಯದ ಜಮೀನನ್ನು ₹5 ಲಕ್ಷ ಸಾಲದ ವಸೂಲಿಗಾಗಿ ನಡೆದ ಪ್ರಕ್ರಿಯೆಯಲ್ಲಿ ₹34.80 ಲಕ್ಷಕ್ಕೆ ಆನ್‌ಲೈನ್ ಹರಾಜು ಮಾಡಲಾಗಿದೆ ಎಂದು ಆರೋಪಿಸಿದರು.
ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿ ಹಾಗೂ ಸರ್ಕಾರ ಮಧ್ಯಪ್ರವೇಶಿಸಿ ರೈತರ ಜಮೀನು ವಾಪಸ್ ಕೊಡಿಸಬೇಕು. ರೈತರಿಗೆ ಅನ್ಯಾಯವಾಗದಂತೆ ಆನ್‌ಲೈನ್ ಹರಾಜು ಪದ್ಧತಿಯನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ, ಸರ್ಕಾರಿ ಕಚೇರಿಗಳಲ್ಲಿ ಹಣ ನೀಡದೆ ಕೆಲಸಗಳು ನಡೆಯುತ್ತಿಲ್ಲ ಎಂಬ ಆರೋಪಗಳ ಕುರಿತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಭ್ರಷ್ಟಾಚಾರ ತಡೆಗಟ್ಟಬೇಕು ಎಂದು ಆಗ್ರಹಿಸಿದರು.
ನಂತರ ರೈತರ ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ. ಶಂಕರಪ್ಪ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರವೀಶ್, ತುಮಕೂರು ತಾಲ್ಲೂಕು ಅಧ್ಯಕ್ಷ ಚಿಕ್ಕಬೋರೇಗೌಡ, ಕಾರ್ಯದರ್ಶಿ ತಿಮ್ಮೇಗೌಡ, ಗುಬ್ಬಿ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ, ಯುವ ಘಟಕದ ಅಧ್ಯಕ್ಷ ಶಿವಕುಮಾರ್, ತುರುವೇಕೆರೆ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಮಧುಗಿರಿ ತಾಲ್ಲೂಕು ಅಧ್ಯಕ್ಷೆ ಭಾಗ್ಯಮ್ಮ, ಕೊರಟಗೆರೆ ತಾಲ್ಲೂಕು ಅಧ್ಯಕ್ಷ ಮಹಮದ್ ಶಬ್ಬೀರ್, ಮಧುಗಿರಿಯ ರೈತ ಮುಖಂಡ ನಿರ್ಕಲ್ ರಾಮಕೃಷ್ಣ ಸೇರಿದಂತೆ ವಿವಿಧ ತಾಲ್ಲೂಕುಗಳ ರೈತ ಮುಖಂಡರು, ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.




