ಎಸ್‌ಯುವಿ ಮತ್ತು ಟ್ರಕ್ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಅಪ್ರಾಪ್ತರು ಸೇರಿದಂತೆ ಆರು ಮಂದಿ ಮೃತಪಟ್ಟ ಘಟನೆ ಜಾರ್ಖಂಡ್‌ನ ಹಜಾರಿಬಾಗ್ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಸಂಜೆ 6 ಗಂಟೆ ಸುಮಾರಿಗೆ ದನುವಾ ಕಣಿವೆ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ. ಅಧಿಕಾರಿಗಳು ಆರಂಭದಲ್ಲಿ ನಾಲ್ಕು ಮಂದಿ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಆದರೆ ಇನ್ನಿಬ್ಬರು ಮೃತದೇಹವು ಜಖಂಗೊಂಡ ವಾಹನದಲ್ಲಿ ಕಂಡುಬಂದಿದೆ.
ಇದನ್ನು ಓದಿದ್ದೀರಾ? ಒಡಿಶಾ ರೈಲು ದುರಂತ | ರೈಲು ಹಳಿ ಜೋಡಣೆ ಕಾರ್ಯಕ್ಕೆ ವೇಗ, ಸಾವಿರಾರು ಕಾರ್ಮಿಕರು ಭಾಗಿ
ಮೃತರಲ್ಲಿ ಒಂದೇ ಕುಟುಂಬದ ಐವರು ಸೇರಿದ್ದಾರೆ. 42 ವರ್ಷದ ವ್ಯಕ್ತಿ ಶಿವ ಕುಮಾರ್ ಭೂಯಾನ್, ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಧನ್ಬಾದ್‌ನಿಂದ ಗಯಾಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
ಬರ್ಹಿ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ ಅಜಿತ್ ಕುಮಾರ್, “ಎಸ್‌ಯುವಿಯನ್ನು ಅತಿ ವೇಗದಲ್ಲಿ ಚಲಾಯಿಸಲಾಗುತ್ತಿತ್ತು. ಡಿಕ್ಕಿ ಹೊಡೆಯುವ ಮೊದಲು ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿದ್ದರು” ಎಂದು ತಿಳಿಸಿದ್ದಾರೆ.
ಚೌಪರನ್ ಪೊಲೀಸ್ ಠಾಣಾಧಿಕಾರಿ ಸರೋಜ್ ಸಿಂಗ್ ಅವರು ಡಿಕ್ಕಿ ಹೊಡೆದ ಪರಿಣಾಮ ವಾಹನವು ತೀವ್ರವಾಗಿ ಹಾನಿಗೊಳಗಾಗಿದೆ ಎಂದು ಹೇಳಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.




