ಮುಂದುವರಿದ ರಾಜ್ಯವಾದ ಕರ್ನಾಟಕದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2023ರಲ್ಲಿ 830, 2024ರಲ್ಲಿ 804, 2025ರಲ್ಲಿ 650 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ. ದಾಖಲಾಗದ ಪ್ರಕರಣಗಳು ಅದೆಷ್ಟಿವೆಯೋ! ಇಷ್ಟೊಂದು ಬಾಲ್ಯ ವಿವಾಹವಾದ ಮಕ್ಕಳು ಬಾಲ ಅಮ್ಮಂದಿರಾಗಿ, ಬಾಲ ಗೃಹಿಣಿಯರಾಗಿ ರಾಷ್ಟ್ರನಿರ್ಮಾಣದ ಕೆಲಸ ಮಾಡುತ್ತಿದ್ದಾರೆ ಎನ್ನಲು ಸಾಧ್ಯವೇ?
“ಮನೆ, ಮಕ್ಕಳನ್ನು ನೋಡಿಕೊಳ್ಳುವ ಮಹಿಳೆ ಸಂಬಳವಿಲ್ಲದೆ ದುಡಿಯುತ್ತಾಳೆ. ಆಕೆಗೆ ಬರೀ ಗೃಹಿಣಿ ಪಟ್ಟ ಕೊಟ್ಟರೆ ಅದು ಸೂಕ್ತವಲ್ಲ. ಆಕೆ ಕೆಲಸ ರಾಷ್ಟ್ರ ನಿರ್ಮಾಣದ ಕೆಲಸ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೇಳಿಕೆಯೇನೋ ಚೆನ್ನಾಗಿದೆ. ವಾಸ್ತವದಲ್ಲಿ ಮಹಿಳೆಯರ ಸ್ಥಾನಮಾನ, ಸಾರ್ವಜನಿಕ ನಡವಳಿಕೆಗಳು, ಮನೆ-ಕುಟುಂಬಗಳಲ್ಲಿ ಆಕೆಯ ಸ್ಥಾನಮಾನ ನೋಡಿದರೆ ರಾಷ್ಟ್ರನಿರ್ಮಾಪಕರಿಗೆ ಸಮಾನವಾಗಿ ಪರಿಗಣಿಸುವ ಸಮಾಜ ನಿರ್ಮಾಣವಾಗಲು ಅದೆಷ್ಟು ಶತಮಾನ ಕಾಯಬೇಕೋ! ಸದ್ಯ ಆಕೆಯನ್ನು ಮನುಷ್ಯಳು ಎಂದು ಪರಿಗಣಿಸುವ ದೊಡ್ಡತನ ತೋರಬೇಕಿದೆ ಸಮಾಜ.
ಶಿಕ್ಷಣ, ಉದ್ಯೋಗ, ಸ್ವಾವಲಂಬನೆ ಗಳಿಸಿದ ಮಹಿಳೆಯರನ್ನು ಈ ಸಮಾಜ ಉದಾಸೀನತೆಯಿಂದ ನೋಡುತ್ತಿರುವಾಗ ಗೃಹಿಣಿಯರನ್ನು ರಾಷ್ಟ್ರ ನಿರ್ಮಾಪಕರು ಎಂದು ಪರಿಗಣಿಸಬೇಕೆಂದು ಬಯಸುವುದೇ ಹಾಸ್ಯಾಸ್ಪದವಾದೀತು. ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ, ಆಕೆಯ ಘನತೆಯ ಮೇಲಿನ ದಾಳಿ, ಕನಿಷ್ಠ ಮನುಷ್ಯಳು ಎಂದು ಪರಿಗಣಿಸಲು ಒಪ್ಪದ ಪುರುಷಾಹಂಕಾರ; ದಿನದಿಂದ ದಿನಕ್ಕೆ ಮಹಿಳೆಯರ ಬದುಕು ಹೆಚ್ಚು ಹೆಚ್ಚು ಶೋಚನೀಯಗೊಳ್ಳುತ್ತಿದೆ.
ಐಎಎಸ್/ ಐಪಿಎಸ್ನಂತಹ ದೇಶದಲ್ಲಿಯೇ ಅತ್ಯುನ್ನತ ಸರ್ಕಾರಿ ಹುದ್ದೆಯಲ್ಲಿರುವ ಮಹಿಳಾ ಅಧಿಕಾರಿಗಳನ್ನೇ ಅವರ ಕೈ ಕೆಳಗೆ ಕೆಲಸ ಮಾಡುವ ಪುರುಷರು ಗೌರವಿಸದಿರುವ, ಲಘುವಾಗಿ ಪರಿಗಣಿಸುವ ಹಲವು ಉದಾಹರಣೆಗಳಿವೆ. ಅಧಿಕಾರಿ ಎಂಬುದನ್ನು ಪರಿಗಣಿಸದೇ ಅತ್ಯಾಚಾರ, ಕೊಲೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ.
ಮಹಿಳೆಯರ ಆಸ್ತಿಯ ಹಕ್ಕನ್ನು ಇಂದಿಗೂ ಗೌರವಿಸುತ್ತಿಲ್ಲ. ಕಾಯಿದೆಯಲ್ಲಿದ್ದರೂ ಬಹುತೇಕ ಕಾಗದದಲ್ಲಿಯೇ ಉಳಿದು ಹೋಗಿದೆ. ಗಂಡ ಸತ್ತರೆ ಆತನ ಪಾಲಿನ ಆಸ್ತಿ ನೀಡಲು ನಿರಾಕರಿಸುವ ಕುಟುಂಬ ಆಕೆಯನ್ನು ತವರಿಗೆ ಅಟ್ಟುತ್ತಿದೆ. ಮನೆಯಲ್ಲಿ ಇಡೀ ದಿನ ಕೆಲಸದವಳಂತೆ ದುಡಿಯುವ ಹೆಣ್ಣಿಗೆ ಆಕೆಯ ಗಂಡನಿಂದಲೂ ಗೌರವ ಸಿಗುವ ಭರವಸೆಯಿಲ್ಲ. ಗಂಡ ಆಕೆಯ ನೆರವಿಗೆ ಬಂದರೆ, ಮನೆ ಕೆಲಸಕ್ಕೆ ನೆರವಾದರೆ ಆತನನ್ನು ಅದೇ ಪುರುಷ ಸಮಾಜ ʼಹೆಣ್ಣಿಗʼ ಎಂದು ಲೇವಡಿ ಮಾಡುತ್ತದೆ. ಗೃಹಿಣಿಯರ ಕತೆಗಳು ಒಂದೆಡೆಯಾದರೆ, ದುಡಿಯುವ ಮಹಿಳೆಯರ ಕಷ್ಟಗಳು ಒಂದೆರಡಲ್ಲ. ಬಹುತೇಕ ಮಧ್ಯಮ ವರ್ಗದ ಕುಟುಂಬಗಳು ಕೆಲಸದವರನ್ನು ಇಟ್ಟುಕೊಳ್ಳುತ್ತಿಲ್ಲ. ಮನೆಯೊಡತಿ ಬೆಳಗ್ಗೆದ್ದು ಅಡುಗೆ, ಗಂಡ ಮಕ್ಕಳ ಬೇಕು ಬೇಡಗಳನ್ನು ಪೂರೈಸಿ, ಹತ್ತು ಕೈಗಳಿರುವಂತೆ ಕೆಲಸ ಮಾಡಿ ಆಫೀಸಿಗೆ ಓಡಬೇಕು. ಬಸ್, ಆಟೋಗಳನ್ನು ಹಿಡಿದು ಕೆಲಸದ ಜಾಗ ಸೇರಿದರೆ ಅದೇ ಆಕೆಗೆ ಸಿಗುವ ವಿಶ್ರಾಂತಿ. ಕಚೇರಿ ಕೆಲಸ ಅಲ್ಲಿನ ಕಿರಿಕಿರಿ ಸಹಿಸಿಕೊಂಡು ಸಂಜೆ ಮತ್ತೆ ಮನೆಗೆ ಅದೇ ಧಾವಂತದಲ್ಲಿ ಓಡಬೇಕು. ಮತ್ತದೇ ಮನೆ ಮಂದಿ ಚಾಕರಿ. ಹೀಗೆ ಅದೆಷ್ಟು ಮಹಿಳೆಯರು ತಮಗೆ ವೈಯಕ್ತಿಕ ಬದುಕು ಇದೆ ಎಂಬುದನ್ನೇ ಮರೆತು ಬದುಕುತ್ತಿದ್ದಾರೆ. ಕಚೇರಿಯಲ್ಲಿ ದುಡಿಯುವ ಮಹಿಳೆ ಮತ್ತು ಕೂಲಿ ಕಾರ್ಮಿಕ ಮಹಿಳೆಯರ ಪರಿಸ್ಥಿತಿ ಹೆಚ್ಚು ಭಿನ್ನವಾಗಿಲ್ಲ. ಹೊರಗೆ ದುಡಿಯುವ ಮಹಿಳೆ ಮನೆಯ ಒಳಗೂ ಏಗುತ್ತಿದ್ದಾಳೆ.
ಈಗಲೂ ಭಾರತದಲ್ಲಿ ಬಾಲ್ಯವಿವಾಹ ಜಾರಿಯಲ್ಲಿದೆ. ಗ್ರಾಮೀಣ ಕುಟುಂಬಗಳಲ್ಲಿ ಪುಟ್ಟ ಬಾಲೆಯರಿಗೆ ಶಿಕ್ಷಣ ಕೊಡುವ ಬದಲು ಮಾಂಗಲ್ಯಭಾಗ್ಯ ಕೊಡಲಾಗುತ್ತಿದೆ. ಪುಟ್ಟ ಪುಟ್ಟ ಕನಸು ಕಂಗಳ ಬಾಲೆಯರು ಹದಿ ಹರೆಯ ಮುಗಿಯುವುದರೊಳಗೆ ಕಂಕುಳಲ್ಲಿ ಎರಡೆರಡು ಮಕ್ಕಳನ್ನು ಹೊತ್ತಿರುತ್ತಾರೆ. ಒಂದು ಕಡೆ ಗಂಡನ ದೈಹಿಕ ಬಯಕೆಗಳನ್ನು ತೀರಿಸಬೇಕು, ಬಸಿರು -ಬಾಣಂತನ ಅನುಭವಿಸಬೇಕು, ಗಂಡ ಮಕ್ಕಳ ಚಾಕರಿ ಹೀಗೆ ಚಿಕ್ಕ ವಯಸ್ಸಿನಲ್ಲಿ ಬೆಟ್ಟದಷ್ಟು ಹೊರೆ ಹೊರಿಸಿ ಆಕೆಯನ್ನು ಜೀವಂತ ಶವವಾಗಿಸಲಾಗುತ್ತಿದೆ. ಹೆಣ್ಣುಮಕ್ಕಳನ್ನು ಬೇಗ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಬೇರೆಯವರ ಹೆಗಲಿಗೆ ವರ್ಗಾಯಿಸುವ ಹೆತ್ತವರಿದ್ದಾರೆ. ಇದು ಸ್ವಂತ ಮಗಳನ್ನೇ ನರಕಕ್ಕೆ ತಳ್ಳುವ ದ್ರೋಹದ ಕೆಲಸ.
ಮುಂದುವರಿದ ರಾಜ್ಯವಾದ ಕರ್ನಾಟಕದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, 2023ರಲ್ಲಿ 830, 2024ರಲ್ಲಿ 804, 2025ರಲ್ಲಿ 650 ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿವೆ. ದಾಖಲಾಗದ ಪ್ರಕರಣಗಳು ಅದೆಷ್ಟಿವೆಯೋ! ಇಷ್ಟೊಂದು ಬಾಲ್ಯ ವಿವಾಹವಾದ ಮಕ್ಕಳು ಬಾಲ ಅಮ್ಮಂದಿರಾಗಿ, ಬಾಲ ಗೃಹಿಣಿಯರಾಗಿ ರಾಷ್ಟ್ರನಿರ್ಮಾಣದ ಕೆಲಸ ಮಾಡುತ್ತಿದ್ದಾರೆ ಎನ್ನಲು ಸಾಧ್ಯವೇ?
ಇದನ್ನೂ ಓದಿ ಮೀನಾಕ್ಷಿ ನಟರಾಜನ್ ನಾಮಪತ್ರ ರದ್ದತಿ; ಸೋಲುವ ಪಂದ್ಯವನ್ನು ಮೋಸದಿಂದ ಗೆದ್ದ ಬಿಜೆಪಿ!
ಈಗಲೂ ಆರೆಸ್ಸೆಸ್ನಂತಹ ಮನುವಾದಿ ಸಂಘಟನೆಗಳು ಮಹಿಳೆಯರ ಘನತೆಯ ಬದುಕು ನಿರಾಕರಿಸುವ ಹೇಳಿಕೆ ನೀಡುತ್ತಿವೆ. ಹೆಣ್ಣು ಮನೆ ವಾರ್ತೆ ನೋಡಿಕೊಂಡಿರಬೇಕು. ಅಂದ್ರೆ ಗಂಡಿನ ಅಡಿಯಾಳಾಗಿರಬೇಕು ಎಂಬ ಮನಸ್ಥಿತಿ ಬದಲಾಗಿಲ್ಲ. ಗಂಡು ಹುಟ್ಟುತ್ತಲೇ ಎಲ್ಲ ಅವಕಾಶ, ಹಕ್ಕು, ಅನುಕೂಲಗಳಿಗೆ ಭಾಜನನಾಗುತ್ತಾನೆ. ಹೆಣ್ಣನ್ನು ಕಟ್ಟುಪಾಡುಗಳಲ್ಲೇ ಬೆಳೆಸಲಾಗುತ್ತದೆ. ಮನೆ ಕೆಲಸ, ಅಡುಗೆ ಹೆಣ್ಣಷ್ಟೇ ಮಾಡಬೇಕು. ಗಂಡು ಉಂಡು ಓಡಾಡಿಕೊಂಡಿರಬೇಕು ಎಂಬ ಮನಸ್ಥಿತಿಯಿದೆ. ಹೆಣ್ಣಾಗಿರುವ ಕಾರಣಕ್ಕೆ ಆಕೆ ಎಲ್ಲಿ ಹೋಗಬೇಕು, ಹೋಗಬಾರದು, ಏನು ಉಡಬೇಕು, ಹೇಗೆ ನಗಬೇಕು ಎಂಬುದನ್ನು ಪುರುಷಪ್ರಧಾನ ಮನಸ್ಥಿತಿಗಳು ನಿರ್ಧರಿಸುವ ಈ ಸಮಾಜದಲ್ಲಿ, ಮನೆಗೆಲಸ ಮಾಡಿಕೊಂಡು ಬಿದ್ದಿರಬೇಕು ಎಂದು ಬಯಸುವ ಜನರ ಮಧ್ಯೆ ಆಕೆಯ ಕೆಲಸಕ್ಕೆ ಗೌರವ ಸಿಗುವುದು ಕನಸಿನ ಮಾತು.
ಸುಪ್ರೀಂ ಕೋರ್ಟ್ ಗೃಹಿಣಿಯ ಕೆಲಸವನ್ನು ರಾಷ್ಟ್ರನಿರ್ಮಾಣಕ್ಕೆ ಹೋಲಿಸಿದೆ. ಹಾಗೆಂದ ಮಾತ್ರಕ್ಕೆ ಇಂದಿನಿಂದಲೇ ಗೃಹಿಣಿಯರಿಗೆ ಎಲ್ಲಾ ಪುರುಷರು, ಕುಟುಂಬದವರು ಗೌರವ ಸಮ್ಮಾನ ಕೊಡುತ್ತಾರೆ ಎಂದು ನಿರೀಕ್ಷಿಸಲು ಸಾದ್ಯವೇ? ಈ ದೇಶದ ಹಲವು ಹೈಕೋರ್ಟ್ಗಳು ಮಹಿಳೆಯ ಘನತೆಗೆ ಧಕ್ಕೆ ತರುವ ಹೇಳಿಕೆಗಳನ್ನು ನೀಡಿದ್ದೂ ಇದೆ. ಹೆಣ್ಣಿನ ಪೈಜಾಮದ ಲಾಡಿ ಎಳೆದರೆ ಅದು ಅತ್ಯಾಚಾರ ಯತ್ನ ಎನ್ನಲಾಗದು ಎಂದು ನ್ಯಾಯಾಧೀಶರೊಬ್ಬರು ಹೇಳಿದ್ದಾರೆ. ಸರಿಯಾದ ಕಾರಣಗಳಿಲ್ಲದೇ ಪತ್ನಿ ಲೈಂಗಿಕ ಸಂಭೋಗಕ್ಕೆ ನಿರಾಕರಿಸುವುದು ಮತ್ತು ವೈವಾಹಿಕ ಹಕ್ಕುಗಳನ್ನು ನಿರಾಕರಿಸುವುದು ಪತಿಯ ಮೇಲೆ ನಡೆಸುವ ಮಾನಸಿಕ ಕ್ರೌರ್ಯ ಎಂದು ಸುಪ್ರೀಂಕೋರ್ಟ್ ಇದೇ ಜೂನ್ ೭ರಂದು ಹೇಳಿದೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಸಹಕರಿಸಬೇಕು ಎಂದು ಹೇಳುವುದು ಆಕೆಯ ಮೇಲಿನ ಮಾನಸಿಕ ಕ್ರೌರ್ಯ ಎಂದು ನ್ಯಾಯಾಧೀಶರಿಗೆ ಅನ್ನಿಸಿಯೇ ಇಲ್ಲವಲ್ಲ!. ಪುರುಷಹಂಕಾರ ರಕ್ತಗತವಾಗಿ ತಲೆಮಾರಿನಿಂದ ತಲೆಮಾರಿಗೆ ದಾಟುತ್ತಿರುವ ದಟ್ಟ ಲಕ್ಷಣಗಳಿವು.
ಕೂಲಿ ಕಾರ್ಮಿಕರಾಗಿ ಕೆಲಸ ಮಾಡುವ ಮಹಿಳೆಯರು ಪುರುಷರಿಗೆ ಸಮಾನವಾಗಿ ಕೆಲಸ ಮಾಡಿದರೂ ಪುರುಷನಿಗಿಂತ ಕಡಿಮೆ ವೇತನ ಕೊಡುವ ಕಡು ಅಸಮಾನತೆಯ ಸಮಾಜ ನಮ್ಮದು. ರೈತ ಮಹಿಳೆಯರು ಮನೆಗೆಲಸ, ಹೈನುಗಾರಿಕೆಯ ಜೊತೆಗೆ ಹೊಲದಲ್ಲೂ ದುಡಿಯುತ್ತಿದ್ದಾರೆ. ಆದರೆ ಆಕೆಯನ್ನು ರೈತ ಎಂದು ಪರಿಗಣಿಸಲ್ಲ. ಆಕೆ ಮಾಡಿದ ಕೆಲಸಕ್ಕೆ ಗೌರವವೂ ಇಲ್ಲ ಕೂಲಿಯೂ ಇಲ್ಲ. ಜಮೀನು ಮಹಿಳೆಯ ಹೆಸರಿನಲ್ಲಿ ಇರುವುದಿಲ್ಲ. ಗಂಡ ಸತ್ತರೆ ಮಗನ ಹೆಸರಿಗೆ ವರ್ಗಾವಣೆ ಮಾಡಲಾಗುತ್ತದೆ. ತವರಿನಲ್ಲೂ, ಗಂಡನ ಮನೆಯಲ್ಲೂ ಆಕೆ ಆಸ್ತಿ ವಂಚಿತಳು. ರಾಷ್ಟ್ರ ನಿರ್ಮಾಣ ಬಿಡಿ, ಸದೃಢ ಕುಟುಂಬ ನಿರ್ಮಾಣದಲ್ಲಿ ಆಕೆಯನ್ನು ಪರಿಗಣಿಸಲ್ಲ.
ಮಹಾರಾಷ್ಟ್ರದ ಛತ್ರಪತಿ ಸಾಂಬಾಜಿ ನಗರದಲ್ಲಿ ರೈತನೊಬ್ಬ ಉಳುಮೆಗೆ ಬಳಸುತ್ತಿದ್ದ ಒಂದು ಎತ್ತು ಸತ್ತಿತೆಂದು ಮತ್ತೊಂದು ಎತ್ತು ಕೊಳ್ಳಲಾಗದೇ, ಮುಂಗಾರು ಕಾಲಿಡುತ್ತಿದ್ದಂತೆ ಉಳುಮೆ ಮಾಡದೇ ಹೆಚ್ಚು ದಿನ ಕಾಯಲೂ ಆಗದೇ ತನ್ನ ಪತ್ನಿಯನ್ನು ಮತ್ತೊಂದು ಎತ್ತಿನ ಬದಲಿಗೆ ನೊಗ ಎಳೆಯಲು ಹಚ್ಚಿದ್ದ. ಈ ಕರುಣಾಜನಕ ಪರಿಸ್ಥಿತಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸರ್ಕಾರದ ಗಮನಕ್ಕೆ ಬಂದು ರೈತನಿಗೆ ಎತ್ತು ಕೊಡಿಸಲಾಯಿತು. ಹೆಣ್ಣಿನ ಶೋಷಣೆಗೆ ಇದೊಂದು ಪ್ರಾತಿನಿಧಿಕ ರೂಪಕ ಮಾತ್ರ. ಇಂತಹ ಹತ್ತು ಹಲವು ಮನುಷ್ಯತ್ವ ಮೀರುವ ಪರಿಸ್ಥಿತಿಗೆ ಹೆಣ್ಣುಮಕ್ಕಳು ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದಾರೆ. ಆದರೆ ಅದಕ್ಕೆ ಒಂದು ಕೃತಜ್ಞತೆಯ ಧನ್ಯವಾದವನ್ನು ಕೂಡ ಆಕೆ ನಿರೀಕ್ಷಿಸುವಂತಿಲ್ಲ. ಅದು ಹೆಣ್ಣಿನ ಸಹಜ ಸ್ವಾಭಾವಿಕ ಕರ್ತವ್ಯ ಎಂಬ ಮುದ್ರೆಯನ್ನು ಸ್ತ್ರೀ ಪುರುಷರಿಬ್ಬರ ಮಿದುಳಿಗೆ ಒತ್ತಿ ಅಚ್ಚು ಮಾಡಲಾಗಿದೆ.
ಪಾಶ್ಚಿಮಾತ್ಯರ ಪ್ರಭಾವ ನಮ್ಮ ಊಟ, ಉಡುಗೆ, ಜೀವನಶೈಲಿಯಲ್ಲಿ ಮಾತ್ರ ಕಾಣುತ್ತಿದೆ. ಎಷ್ಟೇ ಓದಿರಲಿ, ಎಂತಹ ಹುದ್ದೆಯಲ್ಲಿರಲಿ ಸ್ತ್ರೀ ಪುರುಷರ ಸಮಾನತೆಯ ವಿಚಾರಕ್ಕೆ ಬಂದರೆ ಅದೇ ತಾತ ಮುತ್ತಾತರು ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವುದಷ್ಟೇ. ಇಂತಹ ಊಳಿಗಮಾನ್ಯ ಮನಸ್ಥಿತಿಯನ್ನು ಹೋಗಲಾಡಿಸುವಂಥ ಪಠ್ಯಗಳು, ಸಿನಿಮಾಗಳು ಹೆಚ್ಚು ಹೆಚ್ಚು ಬರಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಲಿಂಗ ಸಮಾನತೆಯ ಪಾಠ, ಅಮ್ಮಂದಿರ ಕೆಲಸದ ಬಗ್ಗೆ ಕೃತಜ್ಞತೆ, ಗೌರವದ ಭಾವ ಮೂಡುವಂತಾಗಬೇಕು.





