ಬಿಜೆಪಿಯು ದೇಶದಲ್ಲಿ ವಿರೋಧ ಪಕ್ಷಗಳ ಸರ್ಕಾರಗಳನ್ನು ಬುಡಮೇಲುಗೊಳಿಸುತ್ತಿದ್ದು, ಈ ಕುರಿತು ಸುಪ್ರೀಂ ಕೋರ್ಟ್ ಗಮನ ಹರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಸಂಸದ ಕಪಿಲ್ ಸಿಬಲ್ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನೇತೃತ್ವದಲ್ಲಿ ಎಂಟು ಶಾಸಕರು ಬಿಜೆಪಿ ಸರ್ಕಾರ ಸೇರಿದ ನಂತರ ವಕೀಲರೂ ಆದ ಕಪಿಲ್ ಸಿಬಲ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಪಿಲ್ ಸಿಬಲ್, ‘2016ರಲ್ಲಿ ಉತ್ತರಾಖಂಡ, ಅರುಣಾಚಲ ಪ್ರದೇಶ, 2019ರಲ್ಲಿ ಕರ್ನಾಟಕ, 2020ರಲ್ಲಿ ಮಧ್ಯಪ್ರದೇಶ, 2022ರಲ್ಲಿ ಮಹಾರಾಷ್ಟ್ರ ಸರ್ಕಾರಗಳನ್ನು ಬಿಜೆಪಿ ಉರುಳಿಸಿದೆ. ಇದಕ್ಕೆ ಈಗ ಕಾನೂನಿನಲ್ಲಿ ಅವಕಾಶವಿದೆಯೇ’ ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದಿದ್ದ ರಾಜಕೀಯ ಬೆಳವಣಿಗೆಯಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿ ಕೂಟದ ಭಾಗವಾಗಿರುವ ಎನ್‌ಸಿಪಿ ನಾಯಕ ಅಜಿತ್ ಪವಾರ್ ತಮ್ಮೊಂದಿಗೆ ಪ್ರಫುಲ್ ಪಟೇಲ್ ಮತ್ತಿತರ ಏಳು ಶಾಸಕರನ್ನು ಸೇರಿಸಿಕೊಂಡು ಶಿಂಧೆ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದರು. ಅದರ ಫಲವಾಗಿ ಸರ್ಕಾರದಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾದರು.