ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಪತ್ನಿ ಸಂಗೀತಾ ಅವರು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ. ಇದರೊಂದಿಗೆ ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಾಲಯ ವಿಲೇವಾರಿ ಮಾಡಿದೆ.
ಶುಕ್ರವಾರ ನಡೆದ ವಿಚಾರಣೆಯಲ್ಲಿ ಸಂಗೀತಾ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ತಾವು ಸಲ್ಲಿಸಿರುವ ವಿಚ್ಛೇದನ ಅರ್ಜಿಯನ್ನು ಮುಂದುವರಿಸುವ ಉದ್ದೇಶ ಇಲ್ಲ. ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು. ಅವರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ವಿಚ್ಛೇದನ ಅರ್ಜಿಯನ್ನು ಹಿಂಪಡೆಯಲು ಅನುಮತಿ ನೀಡಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಸಂಗೀತಾ ಅವರು ಕುಟುಂಬ ನ್ಯಾಯಾಲಯಕ್ಕೆ ವಿಚ್ಛೇದನ ಅರ್ಜಿ ಹಿಂಪಡೆಯುವ ಸಂಬಂಧ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೀಡಿದ ಹೇಳಿಕೆಯಲ್ಲಿ, ಪ್ರಕರಣವನ್ನು ಮುಂದುವರಿಸಲು ಇಚ್ಛಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿವಾದಿ (ವಿಜಯ್) ಪರ ವಕೀಲರಿಗೂ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿತ್ತು. ಆದರೆ, ಅರ್ಜಿ ಹಿಂಪಡೆಯುವುದಕ್ಕೆ ಅವರಿಂದ ಯಾವುದೇ ಆಕ್ಷೇಪ ವ್ಯಕ್ತವಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ವಿಲೇವಾರಿ ಮಾಡಿದೆ.
ಈ ಲೇಖನ ಓದಿದ್ದೀರಾ?: ಇಲ್ಲಿ ಹೆಣ್ಣು ಮಕ್ಕಳನ್ನ ದಷ್ಟಪುಷ್ಟವಾಗಿ ಬೆಳೆಸುವುದು ಭದ್ರ ಭವಿಷ್ಯಕ್ಕಾಗಿ ಅಲ್ಲ, ʼಸಂಪಾದನೆʼಗಾಗಿ!
ಅಂದಹಾಗೆ, ಸಂಗೀತಾ ಅವರು 2026ರ ಫೆಬ್ರವರಿಯಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ, ಮುಖ್ಯಮಂತ್ರಿ ವಿಜಯ್ ಅವರು ಒಬ್ಬ ನಟಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದರು. 2021ರಲ್ಲೇ ಈ ಸಂಬಂಧದ ಬಗ್ಗೆ ತಮಗೆ ಮಾಹಿತಿ ದೊರೆತಿದ್ದು, ಆ ಸಂಬಂಧವನ್ನು ಕೊನೆಗೊಳಿಸುವುದಾಗಿ ವಿಜಯ್ ಭರವಸೆ ನೀಡಿದ್ದರೂ, ನಂತರವೂ ಅದನ್ನು ಮುಂದುವರಿಸಿದ್ದಾರೆ ಎಂದು ದೂರಿದ್ದರು.
“ವಿದೇಶ ಪ್ರವಾಸಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಆ ನಟಿಯೊಂದಿಗೆ ವಿಜಯ್ ಕಾಣಿಸಿಕೊಳ್ಳುತ್ತಿದ್ದರು. ಅವರಿಬ್ಬರ ಭೇಟಿಗಳ ಫೋಟೋಗಳು ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿದ್ದರೂ, ವಿಜಯ್ ಅವುಗಳನ್ನು ನಿರಾಕರಿಸಿಲ್ಲ ಅಥವಾ ಆಕ್ಷೇಪ ವ್ಯಕ್ತಪಡಿಸಿಲ್ಲ. ಅಲ್ಲದೆ, ಕ್ರಮೇಣ ನನ್ನನ್ನೇ ಸಾಮಾಜಿಕ ಮತ್ತು ವೃತ್ತಿಪರ ಜೀವನದಿಂದ ದೂರವಿಟ್ಟಿದ್ದಾರೆ” ಎಂದು ಸಂಗೀತಾ ಆರೋಪಿಸಿದ್ದರು.
“ವಿಜಯ್ ಅವರ ನಡೆ ಮತ್ತು ಧೋರಣೆಗಳಿಂದಾಗಿ ನನಗೂ ನಮ್ಮ ಮಕ್ಕಳಾದ ಜೇಸನ್ ಸಂಜಯ್ ಮತ್ತು ದಿವ್ಯಾ ಸಾಶಾ ಅವರಿಗೂ ಪದೇ ಪದೇ ಸಾರ್ವಜನಿಕವಾಗಿ ಅವಮಾನವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ನಮಗೆ ಲಭ್ಯವಿದ್ದ ಹಲವು ಸೌಲಭ್ಯಗಳನ್ನು ವಿಜಯ್ ಹಿಂಪಡೆದಿದ್ದು, ಹಣಕಾಸಿನ ಮೇಲೂ ನಿರ್ಬಂಧ ಹೇರಿ, ನಮ್ಮ ಓಡಾಟದ ಸ್ವಾತಂತ್ರ್ಯವನ್ನೂ ಸೀಮಿತಗೊಳಿಸಿದ್ದಾರೆ” ಎಂದು ಆರೋಪಿಸಿದ್ದರು.
“ನಮ್ಮ ವೈವಾಹಿಕ ಜೀವನ ಸಂಪೂರ್ಣವಾಗಿ ಮುರಿದುಬಿದ್ದಿದ್ದು, ಕೇವಲ ದಾಖಲೆಗಳಲ್ಲಿ ಮಾತ್ರ ಉಳಿದಿದೆ. ಈ ಸಂಬಂಧವನ್ನು ಮರುಸ್ಥಾಪಿಸುವ ಸಾಧ್ಯತೆಯೇ ಇಲ್ಲದಂತಾಗಿದ್ದು, ಇದರಿಂದ ತಮಗೆ ಮಾನಸಿಕ ಯಾತನೆ, ಅವಮಾನ, ಘನತೆಗೆ ಧಕ್ಕೆ ಹಾಗೂ ಅಪಾರ ನೋವು ಉಂಟಾಗಿದೆ” ಎಂದು ಅವರು ವಿಚ್ಛೇದನ ಅರ್ಜಿಯಲ್ಲಿ ವಿವರಿಸಿದ್ದರು.
ಇದೀಗ ಅವರು ತಮ್ಮ ಅರ್ಜಿಯನ್ನು ಹಿಂಪಡೆದಿದ್ದಾರೆ. ಅವರ ವಿಚ್ಛೇದನ ಪ್ರಕರಣಕ್ಕೆ ತೆರೆ ಬಿದ್ದಿದೆ.




