ಪ್ರಪಂಚದಾದ್ಯಂತ ನಡೆಯುವ ಬಹುಪಾಲು ತೈಲ ವ್ಯಾಪಾರವು ಅಮೆರಿಕದ ‘ಡಾಲರ್’ ಮೂಲಕವೇ ನಡೆಯುತ್ತದೆ. ತೈಲ ಮಾರಾಟದಿಂದ ಗಳಿಸುವ ಈ ಡಾಲರ್ ಹಣವನ್ನೇ ‘ಪೆಟ್ರೋ ಡಾಲರ್’ ಎಂದು ಕರೆಯಲಾಗುತ್ತದೆ. ದಶಕಗಳಿಂದ ಅಮೆರಿಕ ಮತ್ತು ಗಲ್ಫ್ (ಮಧ್ಯಪ್ರಾಚ್ಯ) ದೇಶಗಳ ನಡುವೆ ಒಂದು ಪ್ರಮುಖ ಒಪ್ಪಂದವಿತ್ತು: ಗಲ್ಫ್ ದೇಶಗಳು ತಮ್ಮ ತೈಲವನ್ನು ಡಾಲರ್‌ನಲ್ಲಿಯೇ ಮಾರಾಟ ಮಾಡಬೇಕು, ಅದಕ್ಕೆ ಪ್ರತಿಯಾಗಿ ಅಮೆರಿಕವು ಆ ದೇಶಗಳಿಗೆ ಸೇನಾ ರಕ್ಷಣೆ ನೀಡಬೇಕು.
ಇರಾನ್ ಯುದ್ಧವು ತೈಲ ಸಂಪತ್ತಿರುವ ಗಲ್ಫ್ ದೇಶಗಳ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಅಮೆರಿಕ ನೀಡುತ್ತಿರುವ ಸೇನಾ ಬೆಂಬಲದಿಂದ ನಿಜಕ್ಕೂ ನಮಗೆ ಲಾಭ ಇದೆಯೇ ಎಂಬ ಪ್ರಶ್ನೆ ಈಗ ಆ ದೇಶಗಳಿಗೆ ಕಾಡುತ್ತಿದೆ. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ದಾಳಿ ಮಾಡಿದವು. ಆ ನಂತರ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ಪಕ್ಕದ ಗಲ್ಫ್ ದೇಶಗಳಿಗೇ ಅತಿ ಹೆಚ್ಚು ನಷ್ಟವಾಗಿದೆ. ಅಮೆರಿಕದ ರಕ್ಷಣೆಯ ಭರವಸೆ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದು ಈಗ ಬಯಲಾಗಿದೆ. ಈ ಘಟನೆಯು ಕೇವಲ ಸೇನಾ ವಿಚಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ಆ ದೇಶಗಳ ಆರ್ಥಿಕತೆ, ವ್ಯಾಪಾರ ಮತ್ತು ಡಾಲರ್ ಹಣದ ಮೇಲಿನ ಅವಲಂಬನೆಯನ್ನು ಮರುಪರಿಶೀಲಿಸುವಂತೆಯೂ ಮಾಡಿದೆ.
ಪೆಟ್ರೋ ಡಾಲರ್ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು ದಶಕಗಳ ಹಿಂದಿನ ಒಪ್ಪಂದವನ್ನು ಗಮನಿಸಬೇಕು. ದಶಕಗಳ ಕಾಲ, ಅಮೆರಿಕ ಮತ್ತು ಗಲ್ಫ್ ದೇಶಗಳು ಒಂದು ಅಲಿಖಿತ ಒಪ್ಪಂದ ಮಾಡಿಕೊಂಡಿದ್ದವು. ಅಮೆರಿಕವು ಗಲ್ಫ್ ದೇಶಗಳಿಗೆ ಸೇನಾ ರಕ್ಷಣೆ ನೀಡುತ್ತದೆ, ಅದಕ್ಕೆ ಪ್ರತಿಯಾಗಿ ಗಲ್ಫ್ ದೇಶಗಳು ತೈಲವನ್ನು ಅಮೆರಿಕದ ಡಾಲರ್‌ನಲ್ಲೇ ಮಾರಾಟ ಮಾಡಬೇಕು ಎಂಬುದು ಈ ಒಪ್ಪಂದವಾಗಿತ್ತು. 1970ರ ದಶಕದಿಂದ ಬೆಳೆದುಬಂದ ಈ ವ್ಯವಸ್ಥೆಯು ಅಮೆರಿಕ-ಸೌದಿ ಸಂಬಂಧಗಳ ಪ್ರಮುಖ ಭಾಗವಾಗಿದೆ.
ಇದನ್ನು ಓದಿದ್ದೀರಾ? ಎಚ್ಚರಿಕೆ ನೀಡಿದ ಒಂದು ಗಂಟೆಯಲ್ಲೇ ಅಮೆರಿಕದ ‘ಯುಎಸ್‌ಎಸ್ ಅಬ್ರಹಾಂ ಲಿಂಕನ್’ ಯುದ್ಧನೌಕೆಯತ್ತ ಕ್ಷಿಪಣಿ ಹಾರಿಸಿದ ಇರಾನ್
ಅಮೆರಿಕದ ಆರ್ಥಿಕತೆಯನ್ನು ಪೆಟ್ರೋ ಡಾಲರ್ ಆರ್ಥಿಕತೆ ಎಂದು ಕರೆಯಲು ಮುಖ್ಯ ಕಾರಣ ಈ ತೈಲದ ಹಣದ ಮರುಬಳಕೆ. ತೈಲ ಮಾರಾಟದಿಂದ ಬಂದ ನೂರಾರು ಬಿಲಿಯನ್ ‘ಪೆಟ್ರೋಡಾಲರ್’ ಹಣವನ್ನು ಗಲ್ಫ್ ದೇಶಗಳು ಮರಳಿ ಅಮೆರಿಕದ ಶಸ್ತ್ರಾಸ್ತ್ರಗಳು, ತಂತ್ರಜ್ಞಾನ ಹಾಗೂ ಷೇರುಗಳು ಮತ್ತು ಬಾಂಡ್‌ಗಳಲ್ಲೇ ಹೂಡಿಕೆ ಮಾಡುತ್ತವೆ. ಈ ವ್ಯವಸ್ಥೆಯು ಅಮೆರಿಕದ ಡಾಲರ್ ಅನ್ನು ವಿಶ್ವದ ಅತ್ಯಂತ ಬಲಿಷ್ಠ ಕರೆನ್ಸಿಯಾಗಿ (ರಿಸರ್ವ್ ಕರೆನ್ಸಿ) ಉಳಿಸಿಕೊಳ್ಳಲು ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ.
ಈ ಪೆಟ್ರೋಡಾಲರ್ ಒಪ್ಪಂದದ ಗಾತ್ರ ಎಷ್ಟಿದೆ ಎಂಬುದಕ್ಕೆ ಅಂಕಿ-ಅಂಶಗಳೇ ಸಾಕ್ಷಿ. ಸೌದಿ ಅರೇಬಿಯಾ, ಯುಎಇ, ಕತಾರ್, ಒಮಾನ್ ಮತ್ತು ಬಹ್ರೇನ್ ದೇಶಗಳು ತಮ್ಮ ದೇಶದ ಹಣದ ಮೌಲ್ಯವನ್ನು ಡಾಲರ್‌ಗೆ ಜೋಡಿಸಿವೆ. ಇದಕ್ಕಾಗಿ ಅವು ಅಂದಾಜು 800 ಬಿಲಿಯನ್ ಡಾಲರ್‌ಗಳಷ್ಟು(75,414 ಲಕ್ಷ ಕೋಟಿ ರೂ – ತುಸು ಕಡಿಮೆಯಾದರೂ ಭಾರತದ ಎರಡು ವಾರ್ಷಿಕ ಬಜೆಟ್) ಬೃಹತ್ ಹಣವನ್ನು ಕಾಯ್ದಿರಿಸಬೇಕಾಗಿದೆ. ಇದಲ್ಲದೆ, ಗಲ್ಫ್ ದೇಶಗಳ ಸರ್ಕಾರಿ ಹೂಡಿಕೆ ನಿಧಿಗಳು (ಸಾವರಿನ್ ವೆಲ್ತ್ ಫಂಡ್ಸ್) ಪ್ರಪಂಚದಾದ್ಯಂತ ಬಾಂಡ್‌ಗಳು, ಷೇರುಗಳು ಮತ್ತು ಅಮೆರಿಕದ ಕಂಪನಿಗಳಲ್ಲಿ ಬರೋಬ್ಬರಿ 6 ಟ್ರಿಲಿಯನ್ (6 ಲಕ್ಷ ಕೋಟಿ) ಡಾಲರ್‌ಗಿಂತಲೂ ಹೆಚ್ಚು ಮೊತ್ತವನ್ನು ತೊಡಗಿಸಿವೆ.
ಅಮೆರಿಕದ ಆರ್ಥಿಕತೆಯಲ್ಲಿ ಗಲ್ಫ್ ಹಣದ ಪ್ರಭಾವ ಎಷ್ಟಿದೆ ಎಂಬುದನ್ನು ಅಮೆರಿಕದ ಸರ್ಕಾರಿ ಖಜಾನೆಯ (ಯು.ಎಸ್. ಟ್ರೆಷರಿ) ಲೆಕ್ಕಾಚಾರಗಳು ಹೇಳುತ್ತವೆ. ಅಮೆರಿಕದ ಸರ್ಕಾರಿ ಬಾಂಡ್‌ಗಳನ್ನು ಅತಿ ಹೆಚ್ಚು ಹೊಂದಿರುವ ಪ್ರಮುಖ 20 ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ಸೇರಿವೆ. ಇವೆರಡೂ ದೇಶಗಳೇ ಸುಮಾರು 250 ಬಿಲಿಯನ್ ಡಾಲರ್‌ಗಳಷ್ಟು(23,567 ಲಕ್ಷ ಕೋಟಿ ರೂ) ಹೂಡಿಕೆ ಮಾಡಿವೆ. ಇದರ ಜೊತೆಗೆ, ಲಂಡನ್‌ನಂತಹ ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಇನ್ನೂ ಕೋಟ್ಯಂತರ ಡಾಲರ್‌ಗಳು ಇರುವ ಸಾಧ್ಯತೆಯಿದೆ.
ಪೆಟ್ರೋಡಾಲರ್ ವ್ಯವಸ್ಥೆಯು ಪ್ರಮುಖವಾಗಿ ಮೂರು ಆಧಾರಸ್ತಂಭಗಳ ಮೇಲೆ ನಿಂತಿದೆ. ಅವುಗಳೆಂದರೆ: ಅಮೆರಿಕಕ್ಕೆ ತೈಲದ ಅಗತ್ಯವಿರುವುದು, ತೈಲವನ್ನು ಡಾಲರ್‌ಗಳಲ್ಲೇ ಮಾರಾಟ ಮಾಡುವುದು ಮತ್ತು ಅಮೆರಿಕ ಗಲ್ಫ್ ದೇಶಗಳಿಗೆ ನೀಡುವ ಸೇನಾ ರಕ್ಷಣೆ. ಆದರೆ, ಪ್ರಸ್ತುತ ಈ ಮೂರೂ ಆಧಾರಸ್ತಂಭಗಳು ಅಲುಗಾಡುತ್ತಿವೆ.
ಮೊದಲನೆಯದಾಗಿ, ಅಮೆರಿಕವು ಈಗ ತನ್ನ ದೇಶದಲ್ಲೇ ಹೆಚ್ಚು ಇಂಧನ ಉತ್ಪಾದಿಸುತ್ತಿರುವುದರಿಂದ, ಅದಕ್ಕೆ ಮಧ್ಯಪ್ರಾಚ್ಯದ ತೈಲದ ಅನಿವಾರ್ಯತೆ ಮೊದಲಿನಂತಿಲ್ಲ. ಎರಡನೆಯದಾಗಿ, ಯುದ್ಧಕ್ಕೂ ಮುನ್ನವೇ ತೈಲವನ್ನು ಡಾಲರ್‌ನಲ್ಲಿ ಮಾತ್ರ ಮಾರಾಟ ಮಾಡುವ ಪದ್ಧತಿ ನಿಧಾನವಾಗಿ ಕಡಿಮೆಯಾಗುತ್ತಿತ್ತು. ಚೀನಾ, ರಷ್ಯಾ ಮತ್ತು ಇರಾನ್‌ನಂತಹ ಅನೇಕ ದೇಶಗಳು ವರ್ಷಗಳಿಂದ ತಮ್ಮದೇ ಆದ ಕರೆನ್ಸಿಗಳಲ್ಲಿ ತೈಲ ವ್ಯಾಪಾರ ಮಾಡಲು ಪ್ರಯತ್ನಿಸುತ್ತಿವೆ ಮತ್ತು ಇದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸನ್ನೂ ಕಂಡಿವೆ.
ಇದನ್ನು ಓದಿದ್ದೀರಾ? ಭಾರತಕ್ಕೆ ಹಾರ್ಮುಜ್ ಜಲಸಂಧಿ ಮುಕ್ತ: 5 ಸ್ನೇಹಿ ರಾಷ್ಟ್ರಗಳಿಗೆ ದಿಗ್ಬಂಧನವಿಲ್ಲ ಎಂದ ಇರಾನ್
ಮೂರನೆಯದಾಗಿ ಹಾಗೂ ಅತ್ಯಂತ ಗಂಭೀರವಾಗಿ, ಈ ಯುದ್ಧವು ಅಮೆರಿಕದ ಸೇನಾ ರಕ್ಷಣೆಯ ಮೇಲಿನ ನಂಬಿಕೆಯನ್ನು ಅಲುಗಾಡಿಸಿದೆ. ಅಮೆರಿಕದೊಂದಿಗೆ ಸ್ನೇಹ ಬೆಳೆಸಿದರೆ ಭದ್ರತೆ ಸಿಗುತ್ತದೆ ಎಂಬ ಗ್ಯಾರಂಟಿ ಈಗ ಇಲ್ಲದಂತಾಗಿದೆ ಎಂದು ಆರ್ಥಿಕ ತಜ್ಞ ಜಿಮ್ ಒ’ನೀಲ್ ಹೇಳಿದ್ದಾರೆ. ಈ ಕಾರಣದಿಂದಾಗಿ, ಗಲ್ಫ್ ದೇಶಗಳು ಚೀನಾ, ಭಾರತ ಮತ್ತು ಇತರ ಪ್ರಮುಖ ತೈಲ-ಬಳಕೆದಾರ ದೇಶಗಳಿಗೆ ಹತ್ತಿರವಾಗಬಹುದು. ಏಷ್ಯಾ ಖಂಡವು ನೀಡುತ್ತಿರುವ ಆರ್ಥಿಕ ಅವಕಾಶಗಳು ದಿನೇ ದಿನೇ ಹೆಚ್ಚು ಆಕರ್ಷಕವಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಡಾಯ್ಚೆ ಬ್ಯಾಂಕ್ (Deutsche Bank) ವರದಿಯ ಪ್ರಕಾರ, ಸೌದಿ ಅರೇಬಿಯಾವು ಅಮೆರಿಕಕ್ಕಿಂತ ನಾಲ್ಕು ಪಟ್ಟು ಹೆಚ್ಚು ತೈಲವನ್ನು ಚೀನಾಕ್ಕೆ ಮಾರಾಟ ಮಾಡುತ್ತಿದೆ. ಮಧ್ಯಪ್ರಾಚ್ಯದ ಹೆಚ್ಚಿನ ತೈಲವು ಈಗ ಏಷ್ಯಾಕ್ಕೆ ಹೋಗುತ್ತಿದೆ ಎಂದು ಆರ್ಥಿಕ ತಜ್ಞೆ ಮಲ್ಲಿಕಾ ಸಚ್ದೇವಾ ಹೇಳುತ್ತಾರೆ. ಅಮೆರಿಕದ ನಿರ್ಬಂಧಕ್ಕೆ ಒಳಗಾಗಿರುವ ರಷ್ಯಾ ಮತ್ತು ಇರಾನ್‌ನ ತೈಲ ವ್ಯಾಪಾರವು ಡಾಲರ್ ಬಿಟ್ಟು ಬೇರೆ ಕರೆನ್ಸಿಗಳಲ್ಲಿ ನಡೆಯುತ್ತಿದೆ. ಅಲ್ಲದೆ, ಸೌದಿ ಅರೇಬಿಯಾ ತನ್ನದೇ ಆದ ಶಸ್ತ್ರಾಸ್ತ್ರ ಕಾರ್ಖಾನೆಗಳನ್ನು ಕಟ್ಟುತ್ತಿದ್ದು, ಡಾಲರ್ ಅಲ್ಲದ ಬೇರೆ ಹಣದಲ್ಲಿ ತೈಲ ಮಾರಾಟ ಮಾಡುವ ಪ್ರಯೋಗಗಳನ್ನು ಮಾಡುತ್ತಿದೆ.
ಗಲ್ಫ್ ದೇಶಗಳು ತಮ್ಮ ಯುದ್ಧದ ನಷ್ಟವನ್ನು ಸರಿದೂಗಿಸಲು ಅಮೆರಿಕದಲ್ಲಿರುವ ತಮ್ಮ ಆಸ್ತಿಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು, ಇದು ಅಮೆರಿಕದ ಡಾಲರ್ ಮೇಲಿನ ಪ್ರಭಾವವನ್ನು ಇನ್ನಷ್ಟು ವೇಗಗೊಳಿಸಬಹುದು. ಅಮೆರಿಕದ ಡಾಲರ್ ಬಲವಾಗಿರಲು ಮಧ್ಯಪ್ರಾಚ್ಯದ ಪಾತ್ರ ದೊಡ್ಡದಿದೆ, ಆದರೆ ಪ್ರಸ್ತುತ ಯುದ್ಧವು ಈ ಪೆಟ್ರೋಡಾಲರ್ ವ್ಯವಸ್ಥೆಯ ಬುನಾದಿಯನ್ನೇ ಪರೀಕ್ಷಿಸುತ್ತಿದೆ ಎಂದು ಡಾಯ್ಚೆ ಬ್ಯಾಂಕ್ ಎಚ್ಚರಿಸಿದೆ.
ಕೇವಲ ಅಮೆರಿಕದ ಡಾಲರ್‌ನಲ್ಲೇ ತೈಲ ವ್ಯಾಪಾರ ಮಾಡುವ ‘ಪೆಟ್ರೋ ಡಾಲರ್’ ಜಗತ್ತು ಈಗ ಬದಲಾವಣೆಯ ಹಾದಿಯಲ್ಲಿದೆ. ಗಲ್ಫ್ ದೇಶಗಳು ಈಗ ಅಮೆರಿಕಕ್ಕಿಂತ ಹೆಚ್ಚಾಗಿ ಚೀನಾ ಮತ್ತು ಏಷ್ಯಾದ ಇತರ ದೇಶಗಳತ್ತ ಮುಖ ಮಾಡಿವೆ. ಮುಂದಿನ ದಿನಗಳಲ್ಲಿ ಡಾಲರ್ ಬದಲು ಚೀನಾದ ‘ಯುವಾನ್’ (ಪೆಟ್ರೋ-ಯುವಾನ್) ಅಥವಾ ಭಾರತದ ‘ರೂಪಾಯಿ’ (ಪೆಟ್ರೋ-ರೂಪಾಯಿ) ಬಳಸಿ ತೈಲ ವ್ಯಾಪಾರ ಮಾಡುವ ಕಾಲ ದೂರವಿಲ್ಲ. ಇದರ ಜೊತೆಗೆ, ಭವಿಷ್ಯದಲ್ಲಿ ಪ್ರಪಂಚವು ಪೆಟ್ರೋಲ್-ಡೀಸೆಲ್ ವಾಹನಗಳನ್ನು ಬಿಟ್ಟು ಪರಿಸರ ಸ್ನೇಹಿ ಇಂಧನಗಳತ್ತ ಮುಖ ಮಾಡಿದರೆ, ಡಾಲರ್‌ನ ಶಕ್ತಿ ಇನ್ನಷ್ಟು ಕುಗ್ಗುವುದು ಖಚಿತ. ಅಮೆರಿಕದ ಡಾಲರ್ ಇಂದಿಗೂ ವಿಶ್ವದ ಅತಿ ದೊಡ್ಡ ಕರೆನ್ಸಿಯಾಗಿ ಮೆರೆಯುತ್ತಿರುವುದರ ಹಿಂದೆ ಮಧ್ಯಪ್ರಾಚ್ಯ ದೇಶಗಳ ಪಾತ್ರ ಬಹಳ ದೊಡ್ಡದಿದೆ. ಆದರೆ, ಈಗ ನಡೆಯುತ್ತಿರುವ ಯುದ್ಧ ಹಾಗೂ ಜಾಗತಿಕ ಆರ್ಥಿಕ ಬದಲಾವಣೆಗಳು ಈ ‘ಪೆಟ್ರೋ ಡಾಲರ್’ ಸಾಮ್ರಾಜ್ಯದ ಅಡಿಪಾಯವನ್ನೇ ಪರೀಕ್ಷೆಗೆ ಒಡ್ಡಿವೆ.




