ಆಡಳಿತಾರೂಢ ಪಕ್ಷ ಡಿಎಂಕೆ ತನ್ನ ಮಿತ್ರ ಪಕ್ಷವಾದ ವಿಡುಥಲೈ ಚಿರುಥೈಗಲ್ ಕಚ್ಚಿ (ವಿಸಿಕೆ)ಪಕ್ಷದೊಂದಿಗೆ ಸೀಟು ಹಂಚಿಕೆ ಮಾಡಿಕೊಂಡಿದೆ. ಎರಡು ಸಾಮಾನ್ಯ ಕ್ಷೇತ್ರಗಳು ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳನ್ನು ವಿಸಿಕೆ ಪಕ್ಷಕ್ಕೆ ಬಿಟ್ಟುಕೊಟ್ಟಿದೆ.
ಡಿಎಂಕೆ ಕೇಂದ್ರ ಕಚೇರಿಯಲ್ಲಿ ಎರಡೂ ಪಕ್ಷಗಳ ನಾಯಕರು ಸೀಟು ಹಂಚಿಕೆಯ ಮಾತುಕತೆ ನಡೆಸಿದ್ದರು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹಾಗೂ ವಿಸಿಕೆ ಮುಖ್ಯಸ್ಥ ತಿರುಮಾವುಳನ್ ಅವರು ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಮೀಸಲು ಕ್ಷೇತ್ರಗಳಲ್ಲಿ ಹಾಗೂ ಎರಡು ಸಾಮಾನ್ಯ ಕ್ಷೇತ್ರಗಳಲ್ಲಿ ವಿಸಿಕೆ ಪಕ್ಷ ಡಿಎಂಕೆ ಮೈತ್ರಿಕೂಟದ ಅಂಗ ಪಕ್ಷವಾಗಿ ಕಣಕ್ಕಿಳಿಯಲಿದೆ.
ಇದನ್ನೂ ಓದಿ : 48 ಗಂಟೆಗಳ ಹಿಂದಿನ ಆ ಫೋನ್ ಕರೆ ಖಮೇನಿ ಹತ್ಯೆಗೆ ಮುನ್ನುಡಿ ಬರೆದಿದ್ದೇಗೆ?
ವಿಸಿಕೆ ಈ ಹಿಂದೆ ಹತ್ತು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿತ್ತು, ಹಲವು ಸುತ್ತಿನ ಮಾತುಕತೆಯ ಬಳಿಕ 8 ಕ್ಷೇತ್ರಗಳಿಗೆ ಒಪ್ಪಂದ ಮಾಡಿಕೊಂಡಿದೆ.
ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ 18 ಪಕ್ಷಗಳಿದ್ದು, ಕೆಲವು ಪಕ್ಷಗಳು ಇತ್ತೀಚೆಗೆ ಸೇರ್ಪಡೆಗೊಂಡಿವೆ. ಹೀಗಾಗಿ ಮಿತ್ರ ಪಕ್ಷಗಳ ನಡುವಿನ ಸೀಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ಇನ್ನೂ ನಡೆಯುತ್ತಿದ್ದು, ಎಲ್ಲಾ ಪಕ್ಷಗಳೊಂದಿಗೆ ಸಮನ್ವಯ ಸಾಧಿಸಿ ಸೀಟು ಹಂಚಿಕೆ ಮಾಡಬೇಕಿರುವ ಸ್ಥಾನದಲ್ಲಿ ಡಿಎಂಕೆ ಇದೆ. ಎಐಎಡಿಎಂಕೆ ಮತ್ತು ಬಿಜೆಪಿಯ ಚುಣಾವಣಾ ರಾಜಕೀಯ ತಂತ್ರಗಾರಿಕೆಯನ್ನು ಮುಂದಿಟ್ಟುಕೊಂಡು ಡಿಎಂಕೆ ಸೀಟು ಹಂಚಿಕೆ ಮಾಡಬೇಕಿದೆ.




