ತಮಿಳುನಾಡು ರಾಜಕೀಯದಲ್ಲಿ ದಶಕಗಳಿಂದ ಬೇರೂರಿದ್ದ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆಯಾಗಿದೆ. ಸುಮಾರು 60 ವರ್ಷಗಳಿಂದ DMK ನೇತೃತ್ವದ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ಇದೀಗ ಅಧಿಕೃತವಾಗಿ ಮೈತ್ರಿಕೂಟದಿಂದ ಹೊರಬಂದಿದೆ.
ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಉದಯವು ರಾಜ್ಯದ ರಾಜಕೀಯ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ಬದಲಿಸುತ್ತಿದೆ. ಈ ಹಿಂದೆ DMKಗೆ ಬೆಂಬಲ ನೀಡುತ್ತಿದ್ದ ಅಲ್ಪಸಂಖ್ಯಾತ ಮತದಾರರು, ಈ ಬಾರಿ TVK ಕಡೆಗೆ ವಾಲಿದ್ದು, IUML ಮೈತ್ರಿಕೂಟ ತೊರೆಯಲು ಪ್ರಮುಖ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಕ್ಷದ ರಾಜ್ಯ ಸಾಮಾನ್ಯ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. DMK ಜೊತೆಗಿನ ದಶಕಗಳ ಸಂಬಂಧವನ್ನು ಕಡಿದುಕೊಳ್ಳುವ ನಿರ್ಣಯವನ್ನು ಸಭೆಯಲ್ಲಿ ಅಂಗೀಕರಿಸಲಾಗಿದೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬುದನ್ನು ನಂತರದ ಹಂತದಲ್ಲಿ ತೀರ್ಮಾನಿಸಲಾಗುವುದು ಎಂದು ಪಕ್ಷ ತಿಳಿಸಿದೆ.
ಈ ನಿರ್ಧಾರದ ಕುರಿತು ಪ್ರತಿಕ್ರಿಯಿಸಿದ IUML ರಾಷ್ಟ್ರೀಯ ಅಧ್ಯಕ್ಷ ಕೆ ಎಂ ಖಾದರ್ ಮೊಹಿದೀನ್, “ನಾವು ಸುಮಾರು 60 ವರ್ಷಗಳ ಕಾಲ DMK ಜೊತೆಗಿದ್ದೆವು. ಆದರೆ ಈಗ ರಾಜಕೀಯ ಸನ್ನಿವೇಶಗಳು ಬದಲಾಗಿವೆ. ದ್ರಾವಿಡ ಮಾದರಿಯ ಆಡಳಿತ ಮುಂದುವರಿಯುತ್ತದೆ ಎಂದು ನಾವು ಭಾವಿಸಿದ್ದೆವು, ಆದರೆ ಜನರ ತೀರ್ಪು ಭಿನ್ನವಾಗಿತ್ತು. TVK ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದಾಗ, ರಾಜ್ಯದಲ್ಲಿ ರಾಜಕೀಯ ಸ್ಥಿರತೆ ಕಾಪಾಡಲು ಮತ್ತು ರಾಷ್ಟ್ರಪತಿ ಆಳ್ವಿಕೆಯನ್ನು ತಪ್ಪಿಸಲು ನಾವು TVK ಸರ್ಕಾರಕ್ಕೆ ಬೆಂಬಲ ನೀಡಿದ್ದೆವು,” ಎಂದು ವಿವರಿಸಿದರು.
2026ರ ವಿಧಾನಸಭಾ ಚುನಾವಣೆಯಲ್ಲಿ IUML, DMK ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಿ ಎರಡು ಸ್ಥಾನಗಳನ್ನು ಗೆದ್ದಿತ್ತು. ಆದರೆ ಫಲಿತಾಂಶದ ನಂತರ, ಪಕ್ಷವು TVK ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡಿ, ಸಚಿವ ಸಂಪುಟದಲ್ಲೂ ಸ್ಥಾನ ಪಡೆದಿತ್ತು.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ಬೆಲೆ ಏರಿಕೆ ಬಿಸಿ; ಸರ್ಕಾರಿ ಬಸ್ ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ
IUML ನಿರ್ಗಮನವು DMKಗೆ ದೊಡ್ಡ ಆಘಾತವಾಗಿದೆ. ಈಗಾಗಲೇ ಕಾಂಗ್ರೆಸ್, ಎಡಪಕ್ಷಗಳು ಮತ್ತು ವಿಡುತಲೈ ಚಿರುತೈಗಳ ಕಚ್ಚಿ (VCK)ಗಂಳು DMK ಮೈತ್ರಿಕೂಟದಿಂದ ಹೊರಬಂದಿವೆ. ಸದ್ಯ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK) ಕೂಡ ಮೈತ್ರಿಯಿಂದ ಹೊರಬರುವ ಬಗ್ಗೆ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಈ ರಾಜಕೀಯ ಬೆಳವಣಿಗೆಗಳು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತಮಿಳುನಾಡಿನ ರಾಜಕೀಯ ಚಿತ್ರಣವನ್ನು ಹೇಗೆ ಬದಲಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. DMK ನಾಯಕಿ ಕನಿಮೊಳಿ ಅವರು ಪಕ್ಷದ ತಳಮಟ್ಟದ ಸಂಘಟನೆ ಬಲಪಡಿಸುವಂತೆ ಇತ್ತೀಚೆಗೆ ಕಾರ್ಯಕರ್ತರಿಗೆ ಕರೆ ನೀಡಿದ್ದು, ಈ ಬೆಳವಣಿಗೆಯನ್ನು ಅವರು ಮೊದಲೇ ಊಹಿಸಿದ್ದರು ಎಂಬುದು ಸ್ಪಷ್ಟವಾಗುತ್ತಿದೆ.




