ʼಕೊಟ್ಟ ಹೆಣ್ಣು ಕುಲಕ್ಕೆ ಹೊರಗೆʼ ಎನ್ನುವ ಅಲಿಖಿತ ನಿಯಮಕ್ಕೆ ಮೀರತ್‌ನ ಜ್ಞಾನೇಂದ್ರ ಶರ್ಮಾ ತಿಲಾಂಜಲಿ ಇಟ್ಟಿದ್ದಾರೆ. ಸಮಾಜಕ್ಕೆ ಹೆದರಿ ಮಗಳ ಕಣ್ಣೀರನ್ನು ನಿರ್ಲಕ್ಷಿಸುವ ಪೋಷಕರಿರುವ ಈ ಕಾಲದಲ್ಲಿ, ಮಗಳ ಸ್ವಾತಂತ್ರ್ಯವನ್ನು ಹಬ್ಬದಂತೆ ಆಚರಿಸುವ ಇಂತಹ ತಂದೆಯಂದಿರು ನಿಜಕ್ಕೂ ʼಬದಲಾವಣೆಯ ಹರಿಕಾರರುʼ.
ಅನ್ಯಜಾತಿಯವನನ್ನೋ ಅಥವಾ ತನಗೆ ಇಷ್ಟವಾದವನನ್ನೋ ವಿವಾಹವಾದಳೆಂಬ ಕಾರಣಕ್ಕೆ ಹೆತ್ತ ಮಗಳನ್ನೇ ನಿರ್ದಾಕ್ಷಿಣ್ಯವಾಗಿ ಕೊಂದು ಗೌರವ (Honor Killing) ಹುಡುಕುವ ತಂದೆಯರ ನಡುವೆ, ಮದುವೆಯಾಗಿ ಹೋದ ಮೇಲೆ ಹೆಣ್ಣು ಗಂಡನ ಮನೆಯಲ್ಲಿಯೇ ಬಿದ್ದು ಸಾಯುವುದೇ ಕುಟುಂಬದ ʼಮರ್ಯಾದೆʼ ಎಂದು ನಂಬುವ ಸಾವಿರಾರು ಪೋಷಕರ ನಡುವೆ, ಮಕ್ಕಳ ಸಂಸಾರದಲ್ಲಿ ಬಿರುಕು ಮೂಡಿದರೆ ಅದನ್ನು ಬಹಿರಂಗವಾಗದಂತೆ ರಹಸ್ಯವಾಗಿಡಲು ಯತ್ನಿಸುವ ಜನರ ನಡುವೆ ಮೀರತ್‌ನ ತಂದೆಯೊಬ್ಬರು ವಿಚ್ಛೇದನ ಪಡೆದು ಬಂದ ಮಗಳನ್ನು ಡೋಲು-ನಗಾರಿ ಬಾರಿಸುತ್ತಾ, ಅದ್ದೂರಿ ಮೆರವಣಿಗೆ ಮೂಲಕ ಹೆಮ್ಮೆಯಿಂದ ಮನೆಗೆ ಬರಮಾಡಿಕೊಂಡಿದ್ದಾರೆ.
ಮೀರತ್‌ನ ನಿವೃತ್ತ ನ್ಯಾಯಮೂರ್ತಿ ಜ್ಞಾನೇಂದ್ರ ಶರ್ಮಾ ತಮ್ಮ ಮಗಳು ಪ್ರಣಿತಾ ವಸಿಷ್ಠ ಅವರ ಎಂಟು ವರ್ಷಗಳ ದಾಂಪತ್ಯ ಅಂತ್ಯಗೊಂಡು ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ, ಮಗಳಿಗೆ ಹೂಮಾಲೆ ಹಾಕಿ ಬರಮಾಡಿಕೊಂಡಿದ್ದಾರೆ. ಕುಟುಂಬಸ್ಥರು ಹಾಗೂ ಸ್ನೇಹಿತರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ವೇಳೆ ಎಲ್ಲರೂ ʼI LOVE MY DAUGHTERʼ ಪಠ್ಯವಿರುವ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ ಮಗಳಿಗೆ ಸುರಕ್ಷಿತ ಭಾವ ಮೂಡಿಸಿದ್ದಾರೆ.
ಪ್ರಣಿತಾ 2018 ರಲ್ಲಿ ಭಾರತೀಯ ಸೇನೆಯ ಮೇಜರ್ ಗೌರವ್ ಅಗ್ನಿಹೋತ್ರಿ ಅವರನ್ನು ಸಂಪ್ರದಾಯಬದ್ಧವಾಗಿ ವಿವಾಹವಾಗಿದ್ದರು. ಕಾಲಕ್ರಮೇಣ ಆ ಮನೆಯ ಪರಿಸ್ಥಿತಿ ಬದಲಾಯಿತು. ವರ್ಷ ಕಳೆದಂತೆ ಪ್ರಣಿತಾ ತಮ್ಮ ಪತಿಯ ಮನೆಯಲ್ಲಿ ನಿರಂತರವಾಗಿ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕ ಕಿರುಕುಳಕ್ಕೆ ಒಳಗಾಗತೊಡಗಿದರು. ಮಗು ಜನಿಸಿದ ಬಳಿಕವೂ ಪರಿಸ್ಥಿತಿ ಸುಧಾರಿಸಲಿಲ್ಲ. ಕೊನೆಗೆ ಈ ವಾತಾವರಣದಿಂದ ಹೊರಬರಲು ನಿರ್ಧರಿಸಿದ ಪ್ರಣಿತಾ, ಮೀರತ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ʼನನ್ನ ಮಗಳು ಅತೃಪ್ತ ದಾಂಪತ್ಯದಲ್ಲಿ ನರಳುತ್ತಿದ್ದರೆ ಅದನ್ನು ನೋಡಿ ಸುಮ್ಮನಿರುವುದು ತಂದೆಯಾಗಿ ನನ್ನ ಧರ್ಮವಲ್ಲ. ಅವಳನ್ನು ಆ ಪರಿಸರದಿಂದ ಹೊರತರುವುದು ನನ್ನ ಕರ್ತವ್ಯವಾಗಿತ್ತು. ಹೆಣ್ಣುಮಕ್ಕಳು ಆಸ್ತಿಯಲ್ಲ. ಸಮಾಜಕ್ಕಿಂತ ಅವರ ಖುಷಿ ಮತ್ತು ಘನತೆಗೆ ಆದ್ಯತೆ ನೀಡಬೇಕು. ಯಾವುದೇ ಜೀವನಾಂಶ (Alimony) ಅಥವಾ ಪರಿಹಾರವನ್ನು ಕೇಳದೆ ಆಕೆಯನ್ನು ಹೊರತಂದಿದ್ದೇನೆ. ನಮಗೆ ಬೇಕಿರುವುದು ಮಗಳ ನೆಮ್ಮದಿಯೇ ಹೊರತು ಹಣವಲ್ಲ” ಎಂದು ನ್ಯಾ.ಶರ್ಮಾ ಹೇಳಿದ್ದಾರೆ.
ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ಪ್ರಣಿತಾ ಸದ್ಯ ಹಣಕಾಸು ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. “ದಾಂಪತ್ಯದಲ್ಲಿ ಎದುರಾಗುವ ಕಿರುಕುಳವನ್ನು ಮೌನವಾಗಿ ಸಹಿಸಿಕೊಳ್ಳುವುದು ಸಹನೆಯಲ್ಲ, ಅದು ನಿಮ್ಮನ್ನು ನೀವೇ ಕೊಂದುಕೊಂಡಂತೆ; ಆದ್ದರಿಂದ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಮತ್ತು ಅಗತ್ಯವಿದ್ದಾಗ ಸಹಾಯ ಪಡೆಯಲು ಎಂದಿಗೂ ಹಿಂಜರಿಯಬೇಡಿ” ಎಂದು ಕರೆ ನೀಡಿರುವ ಅವರು, ಮಹಿಳೆಯರ ಪಾಲಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾವಲಂಬನೆಯೇ ಅತಿದೊಡ್ಡ ರಕ್ಷಾಕವಚ ಎಂದು ಸಾರಿದ್ದಾರೆ.
ಇದೇ ರೀತಿ ಸ್ಫೂರ್ತಿದಾಯಕ ಘಟನೆ 2023ರಲ್ಲಿ ಜಾರ್ಖಂಡ್‌ನ ರಾಂಚಿಯಲ್ಲೂ ನಡೆದಿತ್ತು. ಅಲ್ಲಿನ ನಿವಾಸಿ ಪ್ರೇಮ್ ಗುಪ್ತಾ ಅವರು ತಮ್ಮ ಮಗಳು ಸಾಕ್ಷಿ ಗುಪ್ತಾ ಅನುಭವಿಸುತ್ತಿದ್ದ ದಾಂಪತ್ಯದ ಕಿರುಕುಳಕ್ಕೆ ಅಲ್ಪವಿರಾಮವಿಟ್ಟು, ಆಕೆಗೆ ವಿಚ್ಛೇದನ ದೊರೆತಾಗ ಅದ್ದೂರಿ ಬ್ಯಾಂಡ್-ಬಾಜಾ ಮತ್ತು ಪಟಾಕಿಗಳೊಂದಿಗೆ ಮನೆಗೆ ವಾಪಸ್ ಕರೆತಂದಿದ್ದರು. “ಹೆಣ್ಣುಮಕ್ಕಳು ಅತ್ತೆ ಮನೆಯಲ್ಲಿ ಸತ್ತು ಹೆಣವಾಗಿ ಬರುವ ಬದಲು, ತವರು ಮನೆಗೆ ಮಗಳಾಗಿ ಬದುಕಿ ಬರಲಿ” ಎಂಬ ಪ್ರೇಮ್ ಗುಪ್ತಾ ಅವರ ಮಾತುಗಳು ಅಂದು ದೇಶಾದ್ಯಂತ ವೈರಲ್ ಆಗಿದ್ದವು. ಈಗ ಮೀರತ್‌ನ ಜ್ಞಾನೇಂದ್ರ ಶರ್ಮಾ ಅವರು ಅದೇ ಹಾದಿಯಲ್ಲಿ ನಡೆದು, ಮಗಳ ಮರಳಿ ಮನೆಗೆ ಬರುವಿಕೆಯನ್ನು ಒಂದು ಹಬ್ಬದಂತೆ ಆಚರಿಸುವ ಮೂಲಕ ‘ವಿಚ್ಛೇದನ ಎನ್ನುವುದು ಶಾಪವಲ್ಲ, ಅದು ಹೊಸ ಬದುಕಿನ ಆರಂಭ’ ಎಂಬ ಕ್ರಾಂತಿಕಾರಿ ಸತ್ಯವನ್ನು ಸಾರಿದ್ದಾರೆ.
ಇದನ್ನೂ ಓದಿ: ಪ್ರೀಮಿಯಂ ಲೇಖನ | ಯುದ್ಧ ನಿಂತರೂ ಕಾದಿವೆ ದುರ್ದಿನಗಳು! ಬದಲಾಗಲಿದೆ ಜಗತ್ತು, ಹಸಿರು ಇಂಧನವೊಂದೇ ಪರಿಹಾರ

ವಿಚ್ಛೇದನ ಎನ್ನುವುದು ಇಂದಿಗೂ ಸಮಾಜದಲ್ಲಿ ಸುಲಭವಾಗಿ ಒಪ್ಪಿಕೊಳ್ಳಲಾಗದ ಸಂಗತಿ. ಮಗಳನ್ನು ʼಧಾರೆಯೆರೆದುʼ ಕೊಟ್ಟ ಕ್ಷಣದಿಂದ ಆಕೆಯನ್ನು ಪರಕೀಯಳಂತೆ ನೋಡುವ ಅಲಿಖಿತ ನಿಯಮಕ್ಕೆ ಮೀರತ್‌ನ ಜ್ಞಾನೇಂದ್ರ ಶರ್ಮಾ ತಿಲಾಂಜಲಿ ಇಟ್ಟಿದ್ದಾರೆ. ಕುಹಕಕ್ಕೆ ಹೆದರಿ ಮಗಳ ಕಣ್ಣೀರನ್ನು ನಿರ್ಲಕ್ಷಿಸುವ ಪೋಷಕರಿರುವ ಈ ಕಾಲದಲ್ಲಿ, ಮಗಳ ಸ್ವಾತಂತ್ರ್ಯವನ್ನು ಹಬ್ಬದಂತೆ ಆಚರಿಸುವ ಇಂತಹ ತಂದೆಯಂದಿರು ನಿಜಕ್ಕೂ ʼಬದಲಾವಣೆಯ ಹರಿಕಾರರುʼ. ಇಂತಹ ಮಾನವೀಯ ನಡೆಗಳು ಹೆಚ್ಚಾದಾಗ ಮಾತ್ರ ಹೆಣ್ಣುಮಕ್ಕಳಿಗೆ ನಿಜವಾದ ಸುರಕ್ಷತೆ ಮತ್ತು ಘನತೆ ದೊರೆಯಲು ಸಾಧ್ಯ.




