ಮಹಾರಾಷ್ಟ್ರ ರಾಜಕೀಯದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಬಣವು ‘ಆಪರೇಷನ್ ಟೈಗರ್’ ನಡೆಸುತ್ತಿದೆ ಎಂಬ ಸುದ್ದಿಗಳ ನಡುವೆ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ತಮ್ಮ ಪಕ್ಷದ ಸಂಸದರ ತುರ್ತು ಸಭೆಯನ್ನು ಕರೆದಿದ್ದಾರೆ. ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಅವರ ನಿವಾಸ ‘ಮಾತೋಶ್ರೀ’ ಯಲ್ಲಿ ಜೂನ್ 14ರಂದು ಮಧ್ಯಾಹ್ನ ಸಭೆ ನಡೆಯಲಿದೆ.
ಉದ್ಧವ್ ಠಾಕ್ರೆ ಬಣದ ಒಟ್ಟು 9 ಲೋಕಸಭಾ ಸಂಸದರ ಪೈಕಿ, ಕನಿಷ್ಠ 7 ಸಂಸದರನ್ನು ತಮ್ಮತ್ತ ಸೆಳೆಯಲು ಶಿಂದೆ ನೇತೃತ್ವದ ಶಿವಸೇನೆ ತೀವ್ರ ಕಸರತ್ತು ನಡೆಸುತ್ತಿದೆ ಎಂಬ ವರದಿಗಳು ಹರಿದಾಡುತ್ತಿವೆ. ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಸಚಿವರೊಬ್ಬರ ನಿವಾಸದಲ್ಲಿ ಶಿಂದೆ ಬಣದ ನಾಯಕರು ಮತ್ತು ಉದ್ಧವ್ ಬಣದ ಕೆಲವು ಸಂಸದರ ನಡುವೆ ರಹಸ್ಯ ಮಾತುಕತೆ ನಡೆದಿದೆ ಎಂದು ವರದಿಯಾಗಿದೆ. ಇವೆಲ್ಲವೂ ಶ್ರೀಕಾಂತ್ ಶಿಂದೆ ನೇತೃತ್ವದಲ್ಲಿ ನಡೆಯುತ್ತಿದೆ ಎಂಬ ಮಾತುಗಳಿವೆ.
ಇದನ್ನು ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ : ಮಹಾ ವಿಕಾಸ್ ಅಘಾಡಿಯ ಐಕಾನ್ ಉದ್ಧವ್ ಠಾಕ್ರೆ!
ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯಿಂದ ಪಾರಾಗಲು ಒಟ್ಟು ಸಂಸದರಲ್ಲಿ 2/3 ರಷ್ಟು (ಅಂದರೆ 9 ರಲ್ಲಿ ಕನಿಷ್ಠ 6 ಸಂಸದರು) ಬೆಂಬಲ ಶಿಂದೆ ಬಣಕ್ಕೆ ಅಗತ್ಯವಿದೆ. ಅದಕ್ಕಾಗಿ ಈಗ ಉದ್ಧವ್ ಠಾಕ್ರೆ ಬಣದ ಸಂಸದರನ್ನು ಸೆಳೆಯುವ ತಂತ್ರ ನಡೆಯುತ್ತಿದೆ.
ಶಿಂದೆ ಬಣದ ಕೇಂದ್ರ ಸಚಿವ ಪ್ರತಾಪ್‌ರಾವ್ ಜಾಧವ್ ಅವರು ‘ಆಪರೇಷನ್ ಟೈಗರ್’ ಕೊನೆಯ ಹಂತದಲ್ಲಿದೆ ಎಂದೂ ಹೇಳಿಕೆ ನೀಡಿದ್ದಾರೆ. ಆದರೆ, ಉದ್ಧವ್ ಬಣದ ಸಂಸದ ಸಂಜಯ್ ರಾವತ್ ಮತ್ತು ಇತರ ನಾಯಕರು ಇದು ಕೇವಲ ವದಂತಿ, ಮುಂಬರುವ ಸಂಸತ್ ಮುಂಗಾರು ಅಧಿವೇಶನದ ಹಿನ್ನೆಲೆಯಲ್ಲಿ ಇದು ಸಾಮಾನ್ಯ ಸಭೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.





