ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್ – ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್ (UGC NET) ಜೂನ್ 2026 ಹಾಗೂ ಸಿಎಸ್‌ಐಆರ್ ನೆಟ್ ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳನ್ನು (Answer Key) ಈ ವಾರವೇ ಬಿಡುಗಡೆ ಮಾಡಲಾಗುವುದು ಎಂದು ಪರೀಕ್ಷಾ ಸಂಸ್ಥೆಯಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಅಧಿಕೃತವಾಗಿ ತಿಳಿಸಿದೆ.
ಈ ಸಂಬಂಧ ಎನ್‌ಟಿಎ ಪ್ರಕಟಣೆ ಹೊರಡಿಸಿದ್ದು, ಯುಜಿಸಿ ನೆಟ್, ಸಿಎಸ್‌ಐಆರ್ ನೆಟ್ ಜೊತೆಗೆ ಐಸಿಎಆರ್ ಎಐಇಇಎ (ICAR AIEEA PG) ಮತ್ತು ಎಐಸಿಇ (AICE PhD) 2026 ಪರೀಕ್ಷೆಗಳ ತಾತ್ಕಾಲಿಕ ಕೀ ಉತ್ತರಗಳು ಹಾಗೂ ಅಭ್ಯರ್ಥಿಗಳ ‘ರೆಸ್ಪಾನ್ಸ್ ಶೀಟ್’ ಈ ವಾರದಲ್ಲಿ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿವೆ.
ಇದನ್ನೂ ಓದಿ: ನೀಟ್ ಮರುಪರೀಕ್ಷೆ: ಅಭ್ಯರ್ಥಿಗಳಿಗೆ ವಾಟ್ಸಾಪ್ ಮೂಲಕ ಅಪ್‌ಡೇಟ್ ಕಳುಹಿಸಲು ಪ್ರಾರಂಭಿಸಿದ ಎನ್‌ಟಿಎ
ಕೀ ಉತ್ತರ ಬಿಡುಗಡೆಯಾದ ಬಳಿಕ, ಲಾಗಿನ್ ವಿವರಗಳನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಕೀ ಉತ್ತರಗಳ ಪರಿಶೀಲಿಸಬಹುದು. ಯಾವುದೇ ಉತ್ತರಗಳ ಕುರಿತು ಗೊಂದಲ ಅಥವಾ ಆಕ್ಷೇಪವಿದ್ದರೆ ನಿಗದಿತ ಸಮಯದೊಳಗೆ ಆಕ್ಷೇಪ ಸಲ್ಲಿಸಬಹುದಾಗಿದೆ. ಪ್ರತಿಯೊಂದು ಆಕ್ಷೇಪಿತ ಪ್ರಶ್ನೆಗೆ ನಿಯಮಾವಳಿ ಪ್ರಕಾರ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ.
ನಿಯಮದಂತೆ ಅಭ್ಯರ್ಥಿಗಳು ಸಲ್ಲಿಸುವ ಆಕ್ಷೇಪಣೆಗಳನ್ನು ಎನ್‌ಟಿಎ ವಿಷಯ ತಜ್ಞರ ತಂಡವು ಪರಿಶೀಲಿಸಿ, ಬಳಿಕ ಅಂತಿಮ ಕೀ ಉತ್ತರ ಸಿದ್ಧಪಡಿಸಿ ಅದರ ಆಧಾರದಲ್ಲಿ ಫಲಿತಾಂಶ ಮತ್ತು ಕಟ್-ಆಫ್ ಅಂಕಗಳನ್ನು ಘೋಷಿಸಲಾಗುತ್ತದೆ. ಕೀ ಉತ್ತರ ಹಾಗೂ ಫಲಿತಾಂಶದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳನ್ನು ನಂಬದೆ, ಕೇವಲ ಎನ್‌ಟಿಎಯ ಅಧಿಕೃತ ವೆಬ್‌ಸೈಟ್‌ಗಳಾದ ugcnet.nta.nic.in ಮತ್ತು nta.ac.in ಗಳನ್ನು ನಿಯಮಿತವಾಗಿ ಗಮನಿಸುವಂತೆ ಎನ್‌ಟಿಎ ಅಭ್ಯರ್ಥಿಗಳಿಗೆ ಸೂಚಿಸಿದೆ.




