ಇಸ್ರೇಲ್ ಸರ್ಕಾರವು ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ಭದ್ರತೆಗೆ ಬೆದರಿಕೆ ಹಾಕಿದ ಅಥವಾ ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವವರ ಕುಟುಂಬದ ಮನೆಗಳನ್ನು ಯಾವುದೇ ನ್ಯಾಯಾಲಯದ ವಿಲೇವಾರಿಗೆ ಕಾಯದೆ ಧ್ವಂಸಗೊಳಿಸುತ್ತದೆ. ಅಂದರೆ ‘ಬುಲ್ಡೋಜರ್’ ಪ್ರಯೋಗಿಸಲಾಗುತ್ತದೆ. ಇದನ್ನು ‘ಸಾಮೂಹಿಕ ಶಿಕ್ಷೆ’ ಎಂದು ಪರಿಗಣಿಸಲಾಗುತ್ತದೆ.
ಉತ್ತರ ಪ್ರದೇಶ ಸೇರಿದಂತೆ ದೇಶದ ಬಹುತೇಕ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಸರ್ಕಾರ ವಿರುದ್ಧ ಧ್ವನಿ ಎತ್ತಿದವರನ್ನು, ಪ್ರತಿಭಟನಾಕಾರರು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ‘ಬುಲ್ಡೋಜರ್’ ಪ್ರಯೋಗ ಮಾಡಲಾಗುತ್ತಿದೆ. ಈ ರೀತಿ ರಾಜಕೀಯ ವಿರೋಧಿಗಳ ಆಸ್ತಿಗಳನ್ನು ‘ಬುಲ್ಡೋಜರ್’ ಮೂಲಕ ನೆಲಸಮಗೊಳಿಸುತ್ತಿರುವ ಪ್ರವೃತ್ತಿಯು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ. ಅಷ್ಟಕ್ಕೂ ಇದು ಇಸ್ರೇಲಿ ಮಾದರಿ ‘ಬುಲ್ಡೋಜರ್’ ಪ್ರಯೋಗವಲ್ಲವೇ? ಇಸ್ರೇಲಿ ಮಾದರಿಯನ್ನು ಪಾಲಿಸುತ್ತಾ ಬಂದಿರುವ ಬಿಜೆಪಿ ಸರ್ಕಾರ ಮುಂದೆ ಕೊಳಚೆ ಅಸ್ತ್ರ (ಸ್ಟಂಕ್ ಕೆಮಿಕಲ್ ಸ್ಪ್ರೇ -Skunk Water) ಪ್ರಯೋಗಕ್ಕೂ ಇಳಿಯಬಹುದೇ?
ದೇಶದಲ್ಲಿ ಬಿಜೆಪಿ ನಡೆಸುತ್ತಿರುವ ಈ ‘ಬುಲ್ಡೋಜರ್’ ಕ್ರಮವನ್ನು ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಸರ್ಕಾರವು ಪ್ಯಾಲೆಸ್ತೀನ್ ಪ್ರತಿಭಟನಾಕಾರರು ಹಾಗೂ ಸಶಸ್ತ್ರ ಗುಂಪುಗಳ ವಿರುದ್ಧ ಬಳಸುವ “ಪಾಲಿಸಿ ಆಫ್ ಹೌಸ್ ಡೆಮೊಲಿಷನ್” (ಮನೆ ಧ್ವಂಸಗೊಳಿಸುವ ಧೋರಣೆ) ಕಾರ್ಯತಂತ್ರಕ್ಕೆ ಹಲವು ಅಂತಾರಾಷ್ಟ್ರೀಯ ವಿಶ್ಲೇಷಕರು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು ಹೋಲಿಸಿವೆ.
ಇದನ್ನೂ ಓದಿ: ಕೂಳು ಕಸಿದುಕೊಳ್ಳುವ ಕ್ರೌರ್ಯ: ಆಧುನಿಕ ಯುದ್ಧಗಳ ಕರಾಳ ಮುಖ
ಏನಿದು ಇಸ್ರೇಲಿ ಧೋರಣೆ?
ಇಸ್ರೇಲ್ ಸರ್ಕಾರವು ಪ್ಯಾಲೆಸ್ತೀನ್ ಪ್ರದೇಶಗಳಲ್ಲಿ ಭದ್ರತೆಗೆ ಬೆದರಿಕೆ ಹಾಕಿದ ಅಥವಾ ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವವರ ಕುಟುಂಬದ ಮನೆಗಳನ್ನು ಯಾವುದೇ ನ್ಯಾಯಾಲಯದ ವಿಲೇವಾರಿಗೆ ಕಾಯದೆ ಧ್ವಂಸಗೊಳಿಸುತ್ತದೆ. ಅಂದರೆ ‘ಬುಲ್ಡೋಜರ್’ ಪ್ರಯೋಗಿಸಲಾಗುತ್ತದೆ. ಇದನ್ನು ‘ಸಾಮೂಹಿಕ ಶಿಕ್ಷೆ’ (Collective Punishment) ಎಂದು ಪರಿಗಣಿಸಲಾಗುತ್ತದೆ.
ಇದೇ ಮಾದರಿಯಲ್ಲಿ, ಉತ್ತರ ಪ್ರದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿ ಪ್ರತಿಭಟನೆಗಳು ಅಥವಾ ಕೋಮು ಘರ್ಷಣೆಗಳು ಸಂಭವಿಸಿದ ತಕ್ಷಣವೇ, ಅಂತಹ ಘಟನೆಗಳಲ್ಲಿ ಭಾಗಿಯಾದ ಆರೋಪಿಗಳ ಆಸ್ತಿಗಳನ್ನು ಅದರಲ್ಲೂ ಹೆಚ್ಚಾಗಿ ಮುಸ್ಲಿಮರ ಮನೆಗಳನ್ನು‘ಅಕ್ರಮ ನಿರ್ಮಾಣ’ ಎಂಬ ನೆಪದಲ್ಲಿ ಕೆಡವಲಾಗುತ್ತಿದೆ.
ಇಂತಹ ಘಟನೆಗಳು ಹೇರಳವಾಗಿ ನಡೆಯುತ್ತಿದ್ದರೂ ಹೆಚ್ಚು ಚರ್ಚೆಗೆ ಗ್ರಾಸವಾದ ಒಂದು ಉದಾಹರಣೆ 2022ರ ಪ್ರಯಾಗ್‌ರಾಜ್ ಕಾರ್ಯಾಚರಣೆ. ಪ್ರವಾದಿ ಮೊಹಮ್ಮದ್ ಕುರಿತಾದ ಹೇಳಿಕೆ ವಿರೋಧಿಸಿ ನಡೆದ ಪ್ರತಿಭಟನೆಯ ಬೆನ್ನಲ್ಲೇ, ಹೋರಾಟಗಾರ ಜಾವೇದ್ ಅಹ್ಮದ್ ಅವರ ನಿವಾಸವನ್ನು ಮಹಾನಗರ ಪಾಲಿಕೆ ಮತ್ತು ಪೊಲೀಸರ ನೇತೃತ್ವದಲ್ಲಿ ಧ್ವಂಸಗೊಳಿಸಲಾಗಿತ್ತು. ಹೀಗೆಯೇ ಬಿಜೆಪಿ ಸರ್ಕಾರವು ಅನೇಕ ಪ್ರಕರಣಗಳಲ್ಲಿ ಕಾನೂನುಬದ್ಧ ನೋಟಿಸ್ ನೀಡದೆ, ರಾತ್ರೋರಾತ್ರಿ ತೆರವು ಕಾರ್ಯಾಚರಣೆ ನಡೆಸಿದೆ.
ಸುಪ್ರೀಂ ಕೋರ್ಟ್ ಈ ‘ಬುಲ್ಡೋಜರ್ ನ್ಯಾಯ’ವನ್ನು ತೀವ್ರವಾಗಿ ಖಂಡಿಸಿದೆ. “ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು (Due Process of Law) ಪಾಲಿಸದೆ ನಾಗರಿಕರ ಮನೆಗಳನ್ನು ಕೆಡವುವುದು ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ” ಎಂದು ತಿಳಿಸಿರುವ ನ್ಯಾಯಪೀಠ, ಈ ರೀತಿ ಸಂವಿಧಾನ ಬಾಹಿರವಾಗಿ ಮನೆ ಧ್ವಂಸಗೊಳಿಸಿದ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಆದರೆ ಸರ್ಕಾರ ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ಪಾಲಿಸಿದೆಯೇ? ಇಲ್ಲ.
ಇನ್ನು ಅಮ್ನೆಸ್ಟಿ ಇಂಟರ್‌ನ್ಯಾಷನಲ್ (Amnesty International) ಮತ್ತು ಹ್ಯೂಮನ್ ರೈಟ್ಸ್ ವಾಚ್ (HRW) ನಂತಹ ಜಾಗತಿಕ ಸಂಸ್ಥೆಗಳು ತಮ್ಮ ವರದಿಗಳಲ್ಲಿ, ಈ ಕಾರ್ಯಾಚರಣೆಯು ವಿರೋಧಿ ದನಿಗಳನ್ನು ಅಡಗಿಸಲು ಮತ್ತು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಲು ಬಳಸಲಾಗುತ್ತಿರುವ ಅಸ್ತ್ರ ಎಂದು ಕಳವಳ ವ್ಯಕ್ತಪಡಿಸಿವೆ. ಆದರೆ ಬಿಜೆಪಿ ಸರ್ಕಾರ ಮಾತ್ರ ಅತಿಕ್ರಮಣದ ನೆಪವೊಡ್ಡುತ್ತಿದೆ. ಸರ್ಕಾರದ ಧೋರಣೆಗಳ ವಿರುದ್ಧ ಧ್ವನಿ ಎತ್ತಿದಾಗಲೇ ಸಾಮಾಜಿಕ ಹೋರಾಟಗಾರರು, ಮುಸ್ಲಿಮರ ಮನೆಗಳು ಅತಿಕ್ರಮಣವಾಗುವುದು ಹೇಗೆ ಎಂಬ ಪ್ರಶ್ನೆ ನಾವು ಎತ್ತಲೇಬೇಕಾಗುತ್ತದೆ.
ವಿರೋಧಿ ದನಿ ಎದುರಿಸಲು ಕೊಳಚೆ ಅಸ್ತ್ರ
‘ಸ್ಟಂಕ್ ಕೆಮಿಕಲ್ ಸ್ಪ್ರೇ’ ಅಥವಾ ಕೊಳಚೆ ಅಸ್ತ್ರ (Skunk Water) ಎಂಬುದು ಪ್ರತಿಭಟನಾಕಾರರನ್ನು ಚದುರಿಸಲು ಬಳಸಲಾಗುವ ಅತ್ಯಂತ ದುರ್ನಾತ ಬೀರುವ ಒಂದು ರಾಸಾಯನಿಕ ದ್ರವವಾಗಿದೆ. ಇದನ್ನು ಇಸ್ರೇಲ್‌ನ ‘ಆಡೋರ್‌ಟೆಕ್’ (Odortec) ಎಂಬ ಸಂಸ್ಥೆಯು ಅಭಿವೃದ್ಧಿಪಡಿಸಿತು. 2008ರಲ್ಲಿ ಇಸ್ರೇಲಿ ಭದ್ರತಾ ಪಡೆಗಳು ಪಶ್ಚಿಮ ದಂಡೆಯಲ್ಲಿ (West Bank) ಇದನ್ನು ಮೊದಲ ಬಾರಿಗೆ ಬಳಸಿದವು.
ಇದನ್ನೂ ಓದಿ: ಅಮಾಯಕ ಕಂದಮ್ಮಗಳು ಸಾಯುತ್ತಿವೆ, ಜಗತ್ತು ಮೌನವಾಗಿದೆ: ಕ್ರಿಕೆಟಿಗ ಇರ್ಫಾನ್ ಪಠಾಣ್ ನೋವಿನ ನುಡಿ
ಇದು ಈಸ್ಟ್ (Yeast), ಬೇಕಿಂಗ್ ಪೌಡರ್ ಮತ್ತು ನೀರಿನಂತಹ ಸಾವಯವ ಘಟಕಗಳ ಮಿಶ್ರಣವಾಗಿದೆ. ಇದು ಕೊಳೆತ ಶವ, ಚರಂಡಿಯ ನೀರು ಮತ್ತು ಕೊಳೆತ ಆಹಾರದ ತೀವ್ರ ದುರ್ನಾತವನ್ನು ಹೋಲುತ್ತದೆ. ಇದು ಜೈವಿಕವಾಗಿ ಜೀವಕ್ಕೆ ತಕ್ಷಣದ ಅಪಾಯ ತರದಿದ್ದರೂ, ತೀವ್ರವಾದ ವಾಂತಿ, ತಲೆಸುತ್ತು, ಚರ್ಮ ಕಿರಿಕಿರಿ ಮತ್ತು ಕಣ್ಣು ಉರಿಯನ್ನು ಉಂಟುಮಾಡುತ್ತದೆ. ಈ ದ್ರವ ಬಿದ್ದ ಬಟ್ಟೆ ಅಥವಾ ಸ್ಥಳಗಳಿಂದ ವಾಸನೆ ವಾರಗಟ್ಟಲೆ ಹೋಗುವುದಿಲ್ಲ.
ಮಾನವ ಹಕ್ಕುಗಳ ಸಂಸ್ಥೆಗಳಾದ ‘ಆಮ್ನೆಸ್ಟಿ ಇಂಟರ್‌ನ್ಯಾಷನಲ್’ ಮತ್ತು ‘ಬಿಸೇಲಮ್’ (B’Tselem) ನ ವರದಿಗಳ ಪ್ರಕಾರ, ಇಸ್ರೇಲ್ ಪಡೆಗಳು ಈ ದ್ರವವನ್ನು ಕೇವಲ ಪ್ರತಿಭಟನಾಕಾರರ ಮೇಲಷ್ಟೇ ಅಲ್ಲದೆ, ಪ್ಯಾಲೆಸ್ತೀನಿಯನ್ನರ ಮನೆಗಳು, ಅಂಗಡಿಗಳು ಮತ್ತು ಬೀದಿಗಳ ಮೇಲೆಯೂ ಸ್ಪ್ರೇ ಮಾಡಿವೆ. ಇದನ್ನು “ಸಾಮೂಹಿಕ ಶಿಕ್ಷೆ” ರೂಪದಲ್ಲಿ ಬಳಸಲಾಗುತ್ತಿದೆ ಎಂದು ಮಾನವ ಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಭಾರತದಲ್ಲಿ ಈ ಅಸ್ತ್ರದ ಪ್ರಯೋಗಕ್ಕೆ ಯೋಜನೆ ಇದೆಯೇ?
ಪೆಲೆಟ್ ಗನ್ ಎಂದಾಕ್ಷಣ ನಿಮಗೆ ಇತ್ತೀಚೆಗೆ ಜಂತರ್‌ಮಂತರ್‌ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯ ನೆನಪಾಗಬಹುದು. ದೇಶದಲ್ಲಿ ಮೊದಲಾಗಿ 2016-2017ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿಭಟನೆಗಳನ್ನು ಹತೋಟಿಗೆ ತರಲು ಭಾರತೀಯ ರಕ್ಷಣಾ ಪಡೆಗಳು ಪೆಲೆಟ್ ಗನ್‌ಗಳನ್ನು (Pellet Guns) ಬಳಸುತ್ತಿದ್ದವು. ಇದರಿಂದ ಅನೇಕ ನಾಗರಿಕರು ಮತ್ತು ಯುವಕರ ಕಣ್ಣಿಗೆ ತೀವ್ರ ಗಾಯಗಳಾಗಿ ದೃಷ್ಟಿ ಕಳೆದುಕೊಳ್ಳುವಂತಾಗಿತ್ತು. ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರವು ಪೆಲೆಟ್ ಗನ್‌ಗೆ ಪರ್ಯಾಯವಾಗಿ ಇಸ್ರೇಲ್‌ನ ‘ಸ್ಕಂಕ್’ (Skunk) ದ್ರವದ ಬಳಕೆಯನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿತ್ತು.
2017ರ ಮಾರ್ಚ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಪೀಠಕ್ಕೆ (ಅಂದಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಪೀಠ) ಕೇಂದ್ರ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹತ್ಗಿ ಅವರು ಈ ಮಾಹಿತಿ ನೀಡಿದ್ದರು. ಪೆಲೆಟ್ ಗನ್‌ಗಳ ಬಳಕೆಯನ್ನು ಕಡಿಮೆ ಮಾಡಲು ಮಾರಕವಲ್ಲದ (Non-lethal) ವಿವಿಧ ಪರ್ಯಾಯಗಳನ್ನು (PAVA ಶೆಲ್‌ಗಳು, ಸ್ಕಂಕ್ ದ್ರವ, ಟಿಯರ್ ಗ್ಯಾಸ್ ಇತ್ಯಾದಿ) ಪರಿಶೀಲಿಸಲಾಗುತ್ತಿದೆ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.
ದೆಹಲಿಯಲ್ಲಿ ಸಿಆರ್‌ಪಿಎಫ್ ಪಡೆಗಳು ಇದನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿದಾಗ, ಭಾರತದ ವಾತಾವರಣ ಮತ್ತು ಜನರ ಸಹನಶೀಲತೆಯ ಮುಂದೆ ಈ ದುರ್ನಾತವು ಪ್ರತಿಭಟನಾಕಾರರನ್ನು ಓಡಿಸಲು ಯಶಸ್ವಿಯಾಗಲಿಲ್ಲ ಎಂದು ವರದಿಯಾಯಿತು. ಪ್ರಸ್ತುತ ಭಾರತದಲ್ಲಿ ಇದನ್ನು ಅಧಿಕೃತವಾಗಿ ಸೇವೆಗೆ ಸೇರಿಸಲಾಗಿಲ್ಲ ಅಥವಾ ಸಾರ್ವಜನಿಕರ ಮೇಲಿನ ಬಳಕೆಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಆದರೆ ಈವರೆಗೆ ಇಸ್ರೇಲ್ ಮಾದರಿಯನ್ನು ಪಾಲಿಸುತ್ತಾ ಬಂದಿರುವ ಮೋದಿ ಸರ್ಕಾರ ಮುಂದೊಂದು ದಿನ ಈ ಕೊಳಚೆ ಅಸ್ತ್ರದ ಪ್ರಯೋಗಕ್ಕೂ ಮುಂದಾಗಬಹುದೇ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ.




