ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವ ಭಗೀರಥ್ ಚೌಧರಿ ಅವರು ರಾಜಸ್ಥಾನದಲ್ಲಿರುವ ತಮ್ಮ ಜಮೀನಿನ ಸೌತೆಕಾಯಿ ಬೆಳೆಗಾಗಿ ತಮ್ಮದೇ ಸಚಿವಾಲಯದಿಂದ ಬರೋಬ್ಬರಿ 99.60 ಲಕ್ಷ ರೂ. ಸರ್ಕಾರಿ ಸಹಾಯಧನ (ಸಬ್ಸಿಡಿ) ಪಡೆದಿದ್ದಾರೆ. ಈ ವಿಷಯವು ಮಾಧ್ಯಮಗಳ ತನಿಖೆಯಿಂದ ಬೆಳಕಿಗೆ ಬಂದಿದೆ.
ವಿಶೇಷವೆಂದರೆ, ಈ ಸಬ್ಸಿಡಿಗೆ ಅನುಮೋದನೆ ನೀಡಿರುವ ‘ರಾಷ್ಟ್ರೀಯ ತೋಟಗಾರಿಕಾ ಮಂಡಳಿ’ಯ (NHB) ಉಪಾಧ್ಯಕ್ಷರೂ ಕೂಡ ಭಗೀರಥ್ ಚೌಧರಿ ಅವರೇ ಆಗಿದ್ದಾರೆ. ಕಳೆದ ವರ್ಷ, ದೇಶಾದ್ಯಂತ ವಾಣಿಜ್ಯ ಬೆಳೆಗಾಗಿ ಈ ಮಂಡಳಿಯಿಂದ ಅನುಮೋದನೆ ಪಡೆದ ಕೇವಲ 467 ಮಂದಿ ಫಲಾನುಭವಿಗಳಲ್ಲಿ ಚೌಧರಿಯೂ ಒಬ್ಬರಾಗಿದ್ದಾರೆ.
ರಾಜಸ್ಥಾನದ ದೀದ್ವಾನಾ-ಕುಚಾಮನ್ ಜಿಲ್ಲೆಯ ಪೀಹ್ ಗ್ರಾಮದಲ್ಲಿರುವ ಚೌದರಿ ಅವರು ಕಲ್ಲಿನ ಕೌಂಪೌಂಡ್, ಮುಳ್ಳುತಂತಿ ಬೇಲಿಗಳು, ಕೃತಕ ಹೊಂಡಗಳು ಹಾಗೂ ನಾಲ್ಕು ದೊಡ್ಡ ಪಾಲಿಹೌಸ್‌ಗಳಿರುವ 16,592 ಚದರ ಮೀಟರ್ ವಿಸ್ತೀರ್ಣದ ಜಮೀನು ಹೊಂದಿದ್ದಾರೆ. ಈ ವಿಶಾಲವಾದ ಕೃಷಿ ಭೂಮಿಯಲ್ಲಿ ಬಿಳಿ ಬಣ್ಣದ ಅಧಿಕೃತ ನಾಮಫಲಕವೊಂದನ್ನು ಅಳವಡಿಸಲಾಗಿದೆ. ಅದರಲ್ಲಿ “ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯಿಂದ ಸಹಾಯ ಪಡೆದಿದೆ” ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಫಲಾನುಭವಿಯ ಹೆಸರು ‘ಭಗೀರಥ್ ಚೌಧರಿ’ ಎಂದಿದ್ದು, 50%ರಷ್ಟು ಅಂದರೆ 99,60,000 ರೂ. ಸಬ್ಸಿಡಿ ಮೊತ್ತವನ್ನು ಉಲ್ಲೇಖಿಸಲಾಗಿದೆ.
ಆಯ್ದ ತರಕಾರಿಗಳು ಮತ್ತು ಹೂವುಗಳ ಬೃಹತ್ ಪ್ರಮಾಣದ ‘ವಾಣಿಜ್ಯ ಕೃಷಿ’ಗೆ ಪ್ರೋತ್ಸಾಹ ನೀಡುವ ಈ ಯೋಜನೆಯು 2014-15ರಲ್ಲಿ ಪ್ರಾರಂಭಿಸಲಾದ ‘ತೋಟಗಾರಿಕೆ ಸಮಗ್ರ ಅಭಿವೃದ್ಧಿ ಮಿಷನ್’ (MIDH) ಅಡಿಯಲ್ಲಿ ಬರುತ್ತದೆ. ಇದರ ಸಂಪೂರ್ಣ ಆಡಳಿತವನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ನೋಡಿಕೊಳ್ಳುತ್ತದೆ. ಈ ಯೋಜನೆಯಡಿ ಸೌತೆಕಾಯಿ, ದಪ್ಪ ಮೆಣಸಿನಕಾಯಿ, ಟೊಮೆಟೊ ಸೇರಿದಂತೆ ಎಂಟು ಥಳಿಗಳ ತರಕಾರಿ ಮತ್ತು ಹೂವುಗಳ ಕೃಷಿಗೆ ಗರಿಷ್ಠ 50%ರಷ್ಟು ಅಥವಾ ಪ್ರತಿ ಕುಟುಂಬಕ್ಕೆ ಗರಿಷ್ಠ 1 ಕೋಟಿ ರೂಪಾಯಿವರೆಗೆ ಸಬ್ಸಿಡಿ ನೀಡಲಾಗುತ್ತದೆ. ಸಚಿವರ ಸೌತೆಕಾಯಿ ಕೃಷಿ ಯೋಜನೆಗೆ 2025ರಲ್ಲಿ ಮಂಡಳಿಯಿಂದ ಸರಾಸರಿ 1 ಕೋಟಿ ರೂ. ಸಬ್ಸಿಡಿ ನೀಡಲಾಗಿದೆ.
ಈ ಲೇಖನ ಓದಿದ್ದೀರಾ?: ವಿದ್ಯುತ್ ಖಾಸಗೀಕರಣ: ಉಚಿತ ಯೋಜನೆಗಳ ಅಂತ್ಯಕ್ಕೆ ನಾಂದಿ
ಸಚಿವರ ತೋಟದಲ್ಲಿ ಅಳವಡಿಸಲಾಗಿರುವ ನಾಮಫಲಕದ ಪ್ರಕಾರ, ಈ ಯೋಜನೆಯ ಒಟ್ಟು ವೆಚ್ಚ 1,99,20,000 ರೂಪಾಯಿ (1.99 ಕೋಟಿ ರೂ.). ಇದರಲ್ಲಿ ಸಚಿವರ ಸ್ವಂತ ಪಾಲು 49,80,000 ರೂ.ಗಳಾಗಿದ್ದು, ಉಳಿದ 1,49,40,000 ರೂಪಾಯಿಗಳನ್ನು ಅವರು ಎಚ್‌ಡಿಎಫ್‌ಸಿ (HDFC) ಬ್ಯಾಂಕ್‌ನಿಂದ ಸಾಲವಾಗಿ ಪಡೆದಿದ್ದಾರೆ.
ದಾಖಲೆಗಳ ಪ್ರಕಾರ, ಅಜ್ಮೀರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿರುವ ಭಗೀರಥ್ ಚೌಧರಿ ಅವರು 2025ರ ಏಪ್ರಿಲ್ 15ರಂದು ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿದ್ದರು. ಕೇವಲ 14 ದಿನಗಳಲ್ಲೇ, ಅಂದರೆ ಏಪ್ರಿಲ್ 29ರಂದು ಅವರ ಅರ್ಜಿಗೆ ತಾತ್ವಿಕ ಅನುಮೋದನೆ ಸಿಕ್ಕಿತ್ತು. ತದನಂತರ 2026ರ ಮಾರ್ಚ್ 11ರಂದು ಅಂತಿಮ ಅನುಮೋದನೆ ದೊರೆತು, ಮಾರ್ಚ್ 30ರಂದು 99.03 ಲಕ್ಷ ರೂ.ಗಳ ಬಂಡವಾಳ ಹೂಡಿಕೆ ಸಬ್ಸಿಡಿಯನ್ನು ಸಚಿವರ ಬ್ಯಾಂಕ್ ಸಾಲದ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ.
2025ರ ಮಾರ್ಚ್ 31ರಂದು ಪ್ರಧಾನಿ ಕಚೇರಿಗೆ (PMO) ಸಚಿವರು ಸಲ್ಲಿಸಿದ್ದ ಆಸ್ತಿ ಘೋಷಣೆಯಲ್ಲಿ ತಮ್ಮ ಪೀಹ್ ಗ್ರಾಮದ ಕೃಷಿ ಭೂಮಿಯ ಮೌಲ್ಯವನ್ನು 5.85 ಲಕ್ಷ ರೂ. ಎಂದು ತೋರಿಸಿದ್ದರು ಮತ್ತು ಒಟ್ಟು 4.41 ಕೋಟಿ ರೂ. ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಘೋಷಿಸಿದ್ದರು. ಆದರೆ, ಈ ಸಬ್ಸಿಡಿ ಯೋಜನೆಯ ಬಗ್ಗೆ ಅದರಲ್ಲಿ ಯಾವುದೇ ನಿರ್ದಿಷ್ಟ ಉಲ್ಲೇಖವಿರಲಿಲ್ಲ. ಸಚಿವರು ಈ ಯೋಜನೆಗೆ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸುತ್ತಿರುವುದು ಇದೇ ಮೊದಲೇನಲ್ಲ; ಈ ಹಿಂದೆ 2018ರಲ್ಲಿ ಅವರು ಸಲ್ಲಿಸಿದ್ದ ಅರ್ಜಿ ತಾಂತ್ರಿಕ ಕಾರಣಗಳಿಂದ ತಿರಸ್ಕೃತಗೊಂಡಿತ್ತು. ಅದೇ ವರ್ಷ ಅವರ ಪುತ್ರ ಸುಭಾಷ್ ಚೌಧರಿ ಸಲ್ಲಿಸಿದ್ದ ಅರ್ಜಿಯೂ ನಿಯಮಾವಳಿಗಳಿಗೆ ಒಳಪಡದ ಕಾರಣ ತಿರಸ್ಕರಿಸಲ್ಪಟ್ಟಿತ್ತು ಎಂಬುದು ಸರ್ಕಾರಿ ದಾಖಲೆಗಳಿಂದ ತಿಳಿದುಬಂದಿದೆ.




