ಜಾಗತಿಕವಾಗಿ ಕಚ್ಚಾ ತೈಲ ದರ ಏರಿಕೆಯಾದಾಗ ಇಂಧನ ಬೆಲೆ ಏರಿಸುವ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕಚ್ಚಾ ತೈಲ ದರ ಇಳಿಕೆಯಾದಾಗ ಪೆಟ್ರೋಲ್, ಡಿಸೇಲ್ ಬೆಲೆ ಯಾಕೆ ಇಳಿಸಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರವು (Crude Oil Price) ಇಳಿಕೆಯಾಗಿದೆ. ಪ್ರಸ್ತುತ ಬ್ರೆಂಟ್ ಕ್ರೂಡ್ (Brent Crude) ಪ್ರತಿ ಬ್ಯಾರೆಲ್‌ಗೆ ಸುಮಾರು $71.99 ಹಾಗೂ ಡಬ್ಲ್ಯುಟಿಐ (WTI) ಕ್ರೂಡ್ ಪ್ರತಿ ಬ್ಯಾರೆಲ್‌ಗೆ ಸುಮಾರು $69.23 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ. ಬ್ರೆಂಟ್ ಕ್ರೂಡ್ ಬ್ಯಾರೆಲ್‌ಗೆ USD 70.71ವರೆಗೂ ಇಳಿದಿದೆ.
ಇದನ್ನೂ ಓದಿ: ಇರಾನ್ ಇತಿಹಾಸ, ಕಚ್ಚಾತೈಲ ಮತ್ತು ಅಮೆರಿಕದ ಆಟ!
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, “ಬಿಜೆಪಿಗೆ ಲೂಟಿ ಮಾಡುವುದು ಮತ್ತು ಜನರ ಜೇಬಿನಲ್ಲಿರುವ ಹಣ ಕದಿಯುವುದು ಚಾಳಿಯಾಗಿ ಬಿಟ್ಟಿದೆ. ಸದ್ಯ ಕಚ್ಚಾ ತೈಲ ಬೆಲೆಗಳು ಕುಸಿಯುತ್ತಿವೆ. ಆದರೂ ಪೆಟ್ರೋಲ್, ಡೀಸೆಲ್ ಮತ್ತು ಅನಿಲದ ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ. ಬದಲಾಗಿ ಮೋದಿ ಸರ್ಕಾರ ಜನರ ಉಳಿತಾಯದ ಮೇಲೆ ತನ್ನ ಹಿಡಿತವನ್ನು ಇನ್ನಷ್ಟೂ ಬಿಗಿಗೊಳಿಸುತ್ತಿದೆ!” ಎಂದು ಹೇಳಿದ್ದಾರೆ.
ಹಾಗೆಯೇ ಖರ್ಗೆ ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಮೊದಲನೆಯದಾಗಿ, “ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಉತ್ತುಂಗದಲ್ಲಿದ್ದಾಗ, ಕಚ್ಚಾ ತೈಲವು ಬ್ಯಾರೆಲ್‌ಗೆ USD 138 ರಷ್ಟಿತ್ತು. ಆ ಸಮಯದಲ್ಲಿ, ಪೆಟ್ರೋಲ್ ₹94.77/ಲೀಟರ್ ಮತ್ತು ಡೀಸೆಲ್ ₹87.67/ಲೀಟರ್ ಆಗಿತ್ತು. ಇಂದು, ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ USD 70.71 ಕ್ಕೆ ಇಳಿದಿದೆ. ಹಾಗಿರುವಾಗ ಮೋದಿ ಸರ್ಕಾರವು ಪೆಟ್ರೋಲ್ ಅನ್ನು ₹102.12/ಲೀಟರ್ ಮತ್ತು ಡೀಸೆಲ್ ಅನ್ನು ₹95.20/ಲೀಟರ್‌ಗೆ ಮಾರಾಟ ಮಾಡುತ್ತಿರುವುದೇಕೆ” ಎಂದು ಪ್ರಶ್ನಿಸಿದ್ದಾರೆ.
ಎರಡನೆಯದಾಗಿ, “ಯುದ್ಧವನ್ನು ಉಲ್ಲೇಖಿಸಿ, ಬಿಜೆಪಿ ಸರ್ಕಾರ ವಾಣಿಜ್ಯ LPG ಬೆಲೆಯನ್ನು ದ್ವಿಗುಣಗೊಳಿಸಿದೆ. ಈಗ ಸರಬರಾಜು ಸಾಮಾನ್ಯ ಸ್ಥಿತಿಗೆ ಮರಳಿದೆ. LPG ಬೆಲೆಗಳನ್ನು ಏಕೆ ಕಡಿಮೆ ಮಾಡುತ್ತಿಲ್ಲ? ಸಾರ್ವಜನಿಕರಿಗೆ ಒಂದು ಪೈಸೆಯೂ ಪರಿಹಾರ ಯಾಕೆ ನೀಡುತ್ತಿಲ್ಲ” ಎಂದೂ ಕೇಳಿದ್ದಾರೆ.
ಮೂರನೆಯದಾಗಿ, “ಗೃಹಬಳಕೆ ಸಿಲಿಂಡರ್‌ಗಳು, ವಲಸಿಗರು ಬಳಸುವ 5 ಕೆಜಿ ಸಣ್ಣ ಸಿಲಿಂಡರ್‌ಗಳು ಮತ್ತು ಸಿಎನ್‌ಜಿ – ಹೀಗೆ ಎಲ್ಲವೂ ದುಬಾರಿಯಾಗಿವೆ. ಈಗ ಪರಿಸ್ಥಿತಿ ಸಾಮಾನ್ಯಗೊಂಡ ನಂತರವೂ ಮೋದಿ ಸರ್ಕಾರ ಬೆಲೆಗಳನ್ನು ಕಡಿಮೆ ಮಾಡಲು ಹಿಂಜರಿಯುತ್ತಿರುವುದೇಕೆ” ಎಂದು ಪ್ರಶ್ನಿಸಿದ್ದಾರೆ.
“ಕಚ್ಚಾ ತೈಲ ದುಬಾರಿಯಾಗಿದ್ದಾಗ ಸಾರ್ವಜನಿಕರೇ ಹೊರೆಯನ್ನು ಹೊತ್ತರು. ಈಗ ಕಚ್ಚಾ ತೈಲ ಅಗ್ಗವಾಗಿದೆ. ಇನ್ನೂ ಜನರು ಹೊರೆಯನ್ನು ಹೊರುತ್ತಿರುವುದೇಕೆ? ಬಿಜೆಪಿಗೆ, ಜನರ ತೆರಿಗೆ ಸಂಗ್ರಹಿಸುವ ಮತ್ತು ಹಣ ಸುಲಿಗೆ ಮಾಡುವ ಮೂಲವೇ ಇದು ಎಂಬುದು ಸ್ಪಷ್ಟವಾಗುತ್ತಿದೆ” ಎಂದು ಹೇಳಿದ್ದಾರೆ.




