ಕಾರಿನ ಲೋನ್ ಪಾವತಿಸಲು ಮನೆಗಳಲ್ಲೇ ಕಳ್ಳತನ ನಡೆಸಿ, ಕದ್ದ ಚಿನ್ನಾಭರಣಗಳನ್ನು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಹಣ ಪಡೆದು ಸಾಲ ತೀರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೈಲಹೊಂಗಲ ತಾಲೂಕಿನ ಹೊಳಿ ನಾಗಲಾಪುರ ಗ್ರಾಮದ ಪತ್ರಯ್ಯ ಹಾಗೂ ಬೈಲಹೊಂಗಲ ನಗರದ ಅನಿಲಕುಮಾರ ಎಂದು ಗುರುತಿಸಲಾಗಿದೆ.
ಚನ್ನಮ್ಮ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದ ರೇಣುಕಾ ಆನಂದ ಪುರದ ಅವರ ಮನೆಯ ಮೇಲ್ಬಾವಣಿಯ ಹಂಚುಗಳನ್ನು ತೆಗೆದು ಒಳನುಗ್ಗಿದ್ದ ಆರೋಪಿಗಳು, ಟ್ರೆಜರಿಯಲ್ಲಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಚಿಕ್ಕ ನಂದಿಹಳ್ಳಿ ಕ್ರಾಸ್ ಬಳಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನದ ಪ್ರಕರಣಗಳು ಬೆಳಕಿಗೆ ಬಂದಿವೆ.
ವಿಚಾರಣೆ ವೇಳೆ ಆರೋಪಿಗಳು 2025ರ ಡಿಸೆಂಬರ್‌ನಲ್ಲಿ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಮನೆಯೊಂದರಲ್ಲೂ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ ಒಟ್ಟು 60 ಗ್ರಾಂ ಚಿನ್ನಾಭರಣ (₹9 ಲಕ್ಷ ಮೌಲ್ಯ) ಹಾಗೂ ₹15 ಸಾವಿರ ಮೌಲ್ಯದ ಬೆಳ್ಳಿಯ ಆಭರಣಗಳು ವಶಪಡಿಸಿಕೊಳ್ಳಲಾಗಿದೆ.
ಕದ್ದ ಚಿನ್ನಾಭರಣಗಳನ್ನು ಬೈಲಹೊಂಗಲದ ಮಣಪ್ಪುರಂ ಗೋಲ್ಡ್ ಫೈನಾನ್ಸ್, ಮುತ್ತೂಟ್ ಫೈನಾನ್ಸ್, ಕಿತ್ತೂರಿನ ಮುತ್ತೂಟ್ ಮನಿ ಫೈನಾನ್ಸ್, ಹುಕ್ಕೇರಿಯ ಮುತ್ತೂಟ್ ಫಿನ್‌ಕಾರ್ಪ್ ಹಾಗೂ ಬೆಳಗಾವಿಯ ಖಡೇಬಜಾರ್‌ನ ಮುತ್ತೂಟ್ ಎಕ್ಸಿಮ್ ಫೈನಾನ್ಸ್ ಸಂಸ್ಥೆಗಳಲ್ಲಿ ಅಡವಿಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಅಲ್ಲಿಂದ ಎಲ್ಲಾ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳ್ಳತನದಿಂದ ಪಡೆದ ಹಣವನ್ನು ಕಾರಿನ ಲೋನ್ ಪಾವತಿಸಲು ಬಳಸಿದ್ದ ಆರೋಪಿಗಳಿಂದ, ಲೋನ್ ಕಟ್ಟಿದ ಕಾರು ಹಾಗೂ ಕಳ್ಳತನಕ್ಕೆ ಬಳಸಿದ್ದ ಬೈಕ್‌ನ್ನೂ ಜಪ್ತಿ ಮಾಡಲಾಗಿದೆ.
ಈ ಸುದ್ದಿ ಓದಿದ್ದಿರಾ ? ಬೆಳಗಾವಿ | ಗಂಡು ಮಗು ಹುಟ್ಟಿದ ಪಾರ್ಟಿ ಕೇಳಿದ್ದಕ್ಕೆ ಗೆಳೆಯನ ಕೊಲೆ
ಈ ಯಶಸ್ವಿ ಕಾರ್ಯಾಚರಣೆ ನಡೆಸಿದ ಕಿತ್ತೂರು ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ. ಬಸರಗಿ ಅಭಿನಂದಿಸಿದ್ದಾರೆ




