ಪತ್ನಿಯು ಪತಿಯ ವಿರುದ್ಧ ನೀಡಿದ ದೂರು ಕೇವಲ ದಾಖಲಾದ ತಕ್ಷಣ ಅದನ್ನು ಪತಿಯ ಮೇಲಿನ ‘ವೈವಾಹಿಕ ಕ್ರೌರ್ಯ’ ಎಂದು ಪರಿಗಣಿಸಲಾಗದು. ಆ ದೂರು ಸಂಪೂರ್ಣವಾಗಿ ಸುಳ್ಳು ಅಥವಾ ದುರುದ್ದೇಶಪೂರ್ವಕವಾಗಿ ದಾಖಲಿಸಲ್ಪಟ್ಟಿದೆ ಎಂಬುದು ಕಾನೂನಾತ್ಮಕವಾಗಿ ಸಾಬೀತಾದರೆ ಮಾತ್ರ ಅದನ್ನು ‘ವೈವಾಹಿಕ ಕ್ರೌರ್ಯ’ ಎಂದು ಹೇಳಬಹುದು ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ವಿಚ್ಛೇದನಕ್ಕಾಗಿ ಪತಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸುವಾಗ ಮಧುರೈ ಪೀಠದ ನ್ಯಾಯಮೂರ್ತಿ ಪಿ ವಡಮಲೈ ಈ ಅಭಿಪ್ರಾಯ ವ್ಯಕ್ತಪಡಿಸಿದರು. “ನ್ಯಾಯಾಲಯವು ಯಾವುದೇ ಒಂದು ದೂರನ್ನು ಕ್ರೌರ್ಯ ಎಂದು ನಿರ್ಧರಿಸುವ ಮುನ್ನ, ಆ ದೂರಿನ ಹಿಂದಿನ ಸತ್ಯಾಸತ್ಯತೆ ಮತ್ತು ತನಿಖೆಯ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸುವುದು ಅತ್ಯಗತ್ಯ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪತ್ನಿಯೊಂದಿಗೆ ಪತಿ ‘ಅಸಹಜ ಲೈಂಗಿಕತೆ’ ನಡೆಸುವುದು ಅಪರಾಧವಲ್ಲ: ಮಧ್ಯಪ್ರದೇಶ ಹೈಕೋರ್ಟ್
ತನ್ನ ಹೆಂಡತಿ ತನ್ನನ್ನು ಕ್ರೌರ್ಯಕ್ಕೆ ಒಳಪಡಿಸಿ ತನ್ನನ್ನು ತೊರೆದಿದ್ದಾಳೆ ಎಂದು ಪತಿ ಹೇಳಿಕೊಂಡಿದ್ದರು. 2012ರ ಆಗಸ್ಟ್‌ನಲ್ಲಿ ಆಕೆ ಹೈದರಾಬಾದ್‌ನಲ್ಲಿರುವ ಮನೆಯನ್ನು ತೊರೆದು ತನ್ನ ಮತ್ತು ಕುಟುಂಬ ಸದಸ್ಯರ ವಿರುದ್ದ ಸುಳ್ಳು ದೂರುಗಳನ್ನು ದಾಖಲಿಸಿದ್ದಾಳೆ ಎಂದು ಆರೋಪಿಸಿದ್ದರು. ಹಾಗೆಯೇ ಈ ದೂರುಗಳು ನನಗೆ ಮಾನಸಿಕ ನೋವನ್ನುಂಟು ಮಾಡಿವೆ. ಆದ್ದರಿಂದ ಇದು ಕ್ರೌರ್ಯ ಎಂದು ವಾದಿಸಿದ್ದರು.
ಆದರೆ ಪತ್ನಿ ಆರೋಪಗಳನ್ನು ನಿರಾಕರಿಸಿದ್ದು ವರದಕ್ಷಿಣೆ ಕಿರುಕುಳ ಮತ್ತು ದೈಹಿಕ ಹಲ್ಲೆಗೆ ಒಳಗಾದ ನಂತರವೇ ನಾನು ದೂರು ನೀಡಿದ್ದೇನೆ. ಆದರೆ ಈಗ ವೈವಾಹಿಕ ಜೀವನವನ್ನು ಪುನರಾರಂಭಿಸಲು ತಾನು ಸಿದ್ಧಳಿದ್ದೇನೆ ಎಂದು ಹೇಳಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್, ಒಂದು ವೇಳೆ ಪತ್ನಿ ದಾಖಲಿಸಿದ ಕ್ರಿಮಿನಲ್ ದೂರು ಸುಳ್ಳು ಮತ್ತು ದುರುದ್ದೇಶಪೂರ್ವಕ ಎಂದು ನ್ಯಾಯಾಲಯದಲ್ಲಿ ಸಾಬೀತಾದರೆ, ಅದನ್ನು ಪತಿಯು ತನ್ನ ಪತ್ನಿಯಿಂದ ವಿಚ್ಛೇದನ ಪಡೆಯಲು ‘ಮಾನಸಿಕ ಕ್ರೌರ್ಯ’ದ ಪ್ರಬಲ ಆಧಾರವಾಗಿ ಬಳಸಿಕೊಳ್ಳಬಹುದು. ಅದರ ಹೊರತಾಗಿ ಇದು ಕ್ರೌರ್ಯ ಎಂದು ನೇರವಾಗಿ ಹೇಳಲಾಗದು ಎಂದಿದ್ದಾರೆ.





