ಮಹಿಳೆಯರು ಮನೆಗಳಿಗಷ್ಟೇ ಸೀಮಿತವಾಗಿರಬೇಕು, ಸಾರ್ವಜನಿಕ ರಂಗಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಸುನ್ನಿ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲದೆ, ತಮ್ಮ ಹೇಳಿಕೆಗೆ ಸಮಜಾಯಷಿಯನ್ನೂ ನೀಡಿರುವ ಅಹ್ಮದ್, “ಮಹಿಳೆಯರನ್ನು ಸಾರ್ವಜನಿಕ ಬದುಕಿನಿಂದ ದೂರವಿಡುವುದು ಎಂದರೆ, ಅವರನ್ನು ಕೀಳಾಗಿ ಕಾಣುವುದಲ್ಲ; ಅವರ ಗೌರವ ಮತ್ತು ಘನತೆಯನ್ನು ರಕ್ಷಿಸುವ ಕ್ರಮ” ಎಂದು ವಾದಿಸಿದ್ದಾರೆ.
‘ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್’ ಎಂದೂ ಪರಿಚಿತರಾಗಿರುವ ಅಹ್ಮದ್, ಕೊಚ್ಚಿಯಲ್ಲಿ ನಡೆದ ‘ಹುಬ್ಬುಲ್ ರಸೂಲ್’ ಸಮ್ಮೇಳನದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಮಹಿಳೆಯರು ಪೆಟ್ಟಿಗೆಯಲ್ಲಿ ಸುರಕ್ಷಿತವಾಗಿ ಇಡುವ ಚಿನ್ನದ ಆಭರಣದಂತೆ ಮನೆಯೊಳಗೆ ಇರಬೇಕು. ಮಹಿಳೆಯರು ಸಾರ್ವಜನಿಕ ರಂಗಕ್ಕೆ ಪ್ರವೇಶಿಸುವುದು ‘ಭಾರೀ ವಿನಾಶ’ಕ್ಕೆ ಕಾರಣವಾಗಬಹುದು” ಎಂದಿದ್ದಾರೆ.
“ಹಾರ ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಬೇಕಾದರೆ ಅದನ್ನು ಪೆಟ್ಟಿಗೆಯೊಳಗೆ ಸುರಕ್ಷಿತವಾಗಿ ಇಡಬೇಕು. ಮಹಿಳೆಯರನ್ನು ಸಾರ್ವಜನಿಕ ರಂಗಕ್ಕೆ ಕರೆತಂದರೆ ಅದು ದೊಡ್ಡ ಹಾನಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಇಸ್ಲಾಂ ಪರ್ದಾ ಪದ್ಧತಿಯನ್ನು ವಿಧಿಸಿದೆ. ಮಹಿಳೆಯರು ಮನೆಗಳಲ್ಲೇ ಉಳಿಯಬೇಕು ಎಂಬ ನಿಲುವನ್ನು ಧಾರ್ಮಿಕ ವಿದ್ವಾಂಸರು ದೀರ್ಘಕಾಲದಿಂದ ಬೋಧಿಸಿಕೊಂಡು ಬಂದಿದ್ದಾರೆ” ಎಂದು ಅವರು ಹೇಳಿದ್ದಾರೆ.
ತಮ್ಮ ಹೇಳಿಕೆಯನ್ನು ಮಹಿಳಾ ವಿರೋಧಿ ನಿಲುವಾಗಿ ನೋಡಬಾರದು ಎಂದಿರುವ ಅಹ್ಮದ್, “ಇಸ್ಲಾಂ ಮಹಿಳೆಯರ ಸ್ಥಾನಮಾನವನ್ನು ಐತಿಹಾಸಿಕವಾಗಿ ಮೇಲಕ್ಕೆತ್ತಿದೆ. ಪೂರ್ವ ಅರೇಬಿಯಾದಲ್ಲಿ ಹೆಣ್ಣು ಶಿಶುಹತ್ಯೆ ನಡೆಯುತ್ತಿದ್ದ ಸಂದರ್ಭದಲ್ಲಿ ಅದನ್ನು ಇಸ್ಲಾಂ ನಿಷೇಧಿಸಿತು. ಮಹಿಳೆಯರಿಗೆ ಆಸ್ತಿ ಹಕ್ಕು ನೀಡಿತು. ಆದ್ದರಿಂದ, ಮಹಿಳೆಯರ ಸಾರ್ವಜನಿಕ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನೂ ‘ಗೌರವ ಮತ್ತು ರಕ್ಷಣೆಯ ಭಾಗ’ವಾಗಿ ನೋಡಬೇಕು ” ಎಂದು ಹೇಳಿದ್ದಾರೆ.
“ಇಸ್ಲಾಂ ಧರ್ಮವನ್ನು ಆಳವಾಗಿ ಅಧ್ಯಯನ ಮಾಡಿರುವ ಧಾರ್ಮಿಕ ವಿದ್ವಾಂಸರಿಗೆ ತಮ್ಮ ಸಮುದಾಯದ ಕುರಿತು ಮಾತನಾಡುವ ಹಕ್ಕು ಮತ್ತು ಜವಾಬ್ದಾರಿ ಇದೆ. ನಾವು ನಮ್ಮ ಧರ್ಮವನ್ನು ಅಧ್ಯಯನ ಮಾಡಿದ್ದೇವೆ. ಆದ್ದರಿಂದ ಇದನ್ನು ಹೇಳುವುದು ನಮ್ಮ ಕರ್ತವ್ಯ. ನಾವು ಹೇಳುತ್ತೇವೆ, ಹೇಳುತ್ತಲೇ ಇರುತ್ತೇವೆ. ಯಾರೂ ಅದನ್ನು ತಡೆಯಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.



