ಬ್ರಿಜ್ ಭೂಷಣ್ ಭಕ್ತಪಡೆಯ ಸಮರ್ಥನೆಗೆ ಅರ್ಥವಿದೆಯೇ?

Date:

ಒಬ್ಬ ಆಪಾದಿತನ ಅನಗತ್ಯ ರಕ್ಷಣೆಗೆ ಪ್ರಭುತ್ವ ಹೊರಟರೆ, ಅದು ಒಂದು ಸುಳ್ಳಿಗೆ ಹತ್ತು ಸುಳ್ಳು ಸೇರಿಸಬೇಕಾಗುತ್ತದೆ. ಬರುವ ವರ್ಷದ ಸಾರ್ವತ್ರಿಕ ಚುನಾವಣೆಗಳ ಮುನ್ನ ಇದು ಆಡಳಿತಪಕ್ಷಕ್ಕೆ ಹೊರಲಾಗದ ಹೊರೆಯಾಗುವ ಎಲ್ಲ ಲಕ್ಷಣಗಳೂ ಈ ಪ್ರಕರಣದಲ್ಲಿ ಕಾಣಿಸುತ್ತಿವೆ.

೧. ಈ ಇಡಿಯ ಗದ್ದಲದ ಹಿಂದೆ ಹರ್ಯಾಣಾ ಕುಸ್ತಿ ಫೆಡರೇಷನ್ ಮತ್ತು ಭಾರತೀಯ ಕುಸ್ತಿ ಫೇಡರೇಶನ್ ಗಳ ನಡುವಿನ ರಾಜಕೀಯ ಮೇಲಾಟ ಇದೆ. (ಇದು ಭಕ್ತವೃಂದದ ಕಳಕಳಿ)

೨. FIR ಆಗಿದೆ. ಲೈಂಗಿಕ ಕಿರುಕುಳ ಆಗಿದ್ದರೆ ಪ್ರೂಫ್ ಕೊಡಿ. ಅದಕ್ಕಿಂತ ಮೊದಲೇ ಅರೆಸ್ಟ್ ಮಾಡಿ ಎಂದರೆ ಹೇಗೆ? (ಇದು ಒಬ್ಬರು ಮಾಜೀ ಪೊಲೀಸ್ ಅಧಿಕಾರಿ ಹೇಳಿದ್ದು!)

೩. ಹೊಳೆಯಲ್ಲಿ ಪದಕ ಮುಳುಗಿಸಿದರೆ ನನಗೆ ಫಾಸಿ ಆಗದು. ನ್ಯಾಯಾಲಯದಲ್ಲಿ ಪ್ರೂಫ್ ಕೊಡಿ. ಆಗ ಫಾಸಿ ಆದೀತು. (ಸ್ವತಃ ಆರೋಪಿ ಹೇಳಿದ್ದು – ವೀಡಿಯೊ ಇದೆ).

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈಗ ಈ ಪ್ರಕರಣದ ಫ್ಯಾಕ್ಟ್‌ಗಳನ್ನು ಗಮನಿಸಿ.

೧. ಈ ಪ್ರಕರಣವನ್ನು ಸಂತ್ರಸ್ತೆಯರು ಪೊಲೀಸ್ ವ್ಯವಸ್ಥೆಯ ಬಳಿ ಕೊಂಡೊಯ್ದಾಗ, ಅವರು FIR ದಾಖಲಿಸಲಿಲ್ಲ. ಕಡೆಗೆ ಸುಪ್ರೀಂಕೋರ್ಟು ಹಸ್ತಕ್ಷೇಪ ಮಾಡಿದ ಬಳಿಕ ಪ್ರಕರಣ ದಾಖಲಾಯಿತು. ಆ ಬಳಿಕ ಇಲ್ಲಿಯ ತನಕ ಆಪಾದಿತರನ್ನು ಪೊಲೀಸ್ ತನಿಖೆಗೆ ಒಳಪಡಿಸಿಲ್ಲ, ಬಂಧಿಸಿಲ್ಲ.

೨. ಒಬ್ಬ ವ್ಯಕ್ತಿ ಲೈಂಗಿಕ ಕಿರುಕುಳ ನೀಡಿದ ಸಂದರ್ಭದಲ್ಲಿ ಅದನ್ನು ಸಂತ್ರಸ್ತೆ “ಸಾಕ್ಷ್ಯ ಸಮೇತ” ಕಾನೂನಿನ ಎದುರು ಸಾಬೀತುಪಡಿಸುವುದು ಹೇಗೆ? ನ್ಯಾಯಶಾಸ್ತ್ರದ ತತ್ವಗಳು ಬೇರೆಲ್ಲ ಪ್ರಕರಣಗಳಲ್ಲಿ “ಆಪಾದನೆ” ಮಾಡಿದಾಗ ಆಪಾದನೆಯನ್ನು ಸಾಬೀತುಪಡಿಸುವುದು ಆಪಾದನೆ ಮಾಡಿದವರ ಹೊಣೆ ಎಂದು ಹೇಳುತ್ತವೆ. ಆದರೆ ಲೈಂಗಿಕ ಪ್ರಕರಣಗಳಲ್ಲಿ (ರೇಪ್/ಕಿರುಕುಳ ಇತ್ಯಾದಿ), ಸಂತ್ರಸ್ತೆ “ಅಂತಹದೊಂದು ಕೃತ್ಯ ತನ್ನಮೇಲೆ ಆಗಿದೆ” ಎಂದರೆ ಸಾಕಾಗುತ್ತದೆ. ಈ ಆಪಾದನೆಯನ್ನು ಅಲ್ಲವೆಂದು ಸಾಬೀತು ಪಡಿಸುವುದು (burden of proof), ಆರೋಪಿಯ ಹೊಣೆ. POCSOದಂತಹ ಹೀನಸ್ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಪ್ರಕರಣ ದಾಖಲಾದ ತಕ್ಷಣ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸುವುದು ಮತ್ತು ಸಂತ್ರಸ್ತರಿಗೆ ಹಾನಿ ಮಾಡಲು/ಅವರ ಮೇಲೆ ಪ್ರಭಾವ ಬೀರಲು ಆರೋಪಿಗೆ ಅವಕಾಶ ನಿರಾಕರಿಸುವುದು ಸಹಜ ನ್ಯಾಯ. ಅದು ಈ ಪ್ರಕರಣದಲ್ಲಿ ಆಗಿಲ್ಲ. ಇದೆಲ್ಲ ಚೆನ್ನಾಗಿ ಗೊತ್ತಿರುವ ಒಬ್ಬರು ಮಾಜೀ ಪೊಲೀಸ್ ಅಧಿಕಾರಿ ಹೀಗೆ ತಟ್ಟಿಹಾರಿಸುವ ಕೆಲಸ ಮಾಡಿದಾಗ ನಿರಾಸೆ ಆಗುತ್ತದೆ.

೩. ಸ್ವತಃ ಆರೋಪಿ, ತಾನೇ ಸ್ವತಃ ಕಾನೂನು ನಿರೂಪಕನೂ, ಜನಪ್ರತಿನಿಧಿಯೂ ಆಗಿದ್ದು, ತನ್ನ ಮೇಲೆ ಗಂಭೀರ ಆಪಾದನೆ ಹೊರಿಸಿದವರ ವಿರುದ್ಧ ಸಭೆಗಳನ್ನು ಏರ್ಪಡಿಸಿ ಬೆದರಿಕೆಯ ಧ್ವನಿಯಲ್ಲಿ ಮಾತನಾಡುವುದು, ಪ್ರಕರಣವನ್ನು ರಾಜಕಿಯೀಕರಣಗೊಳಿಸುವುದು… ತನ್ನ ಅಪರಾಧವನ್ನು ಮುಚ್ಚಿಹಾಕುವ, ಸಂತ್ರಸ್ತರನ್ನು ಬೆದರಿಸುವ ಪ್ರಯತ್ನ ಅನ್ನಿಸುತ್ತದೆ. ಕಾನೂನು ತನ್ನ ಕೆಲಸ ಮಾಡದಿದ್ದಾಗ ಇದೆಲ್ಲ ಆಗುವುದು ಸಾಧ್ಯ.

೪. ಇದೆಲ್ಲದಕ್ಕಿಂತ ಹೆಚ್ಚಾಗಿ, ಒಂದು ಪ್ರಭುತ್ವ, ತನ್ನ ಸದಸ್ಯರೊಬ್ಬರ ಮೇಲೆ ಗಂಭೀರ ಆಪಾದನೆ ಬಂದಾಗ, ನಾಗರಿಕವಾಗಿ ವರ್ತಿಸುವುದು ಹೇಗೆ? ಅದು ಆಪಾದಿತನಿಗೆ ಕಾನೂನಿನ ಅಡಿ ತನ್ನ ನಿರಪರಾಧಿತ್ವ ಸಾಬೀತು ಮಾಡಲು ಹೇಳಬೇಕು. ಅದರ ಬದಲು ತಾನೇ ಸ್ವತಃ ಗಾಢ ಮೌನ ತೋರಿಸಿದರೆ, ಅದು ಬೇರೆಯೇ ಅರ್ಥ ಹೊರಡಿಸುತ್ತದೆ. ತಪ್ಪು ಆಗಿಲ್ಲ ಎಂದಾದರೆ ಅದನ್ನು ಸಾಬೀತುಪಡಿಸಲು ಕಾನೂನು ಪ್ರಕ್ರಿಯೆಯ ಒಳಗೆ ಹೆಚ್ಚು ಸಮಯ ಬೇಕಾಗದು.

೫. ಕುಸ್ತಿ ಫೆಡರೇಷನ್ನಿನ ರಾಜಕೀಯಗಳ ಬಗ್ಗೆ ತಿಳಿಯಲು ಒಮ್ಮೆ ಅವರ ವೆಬ್‌ಸೈಟ್ ಕಡೆ ಹೋಗಿಬನ್ನಿ. ಅಲ್ಲಿರುವ ಯಾವುದೇ ಸರ್ಕ್ಯುಲರ್‌ಗಳಿಗೆ (ಈ ರಾಜಕೀಯಕ್ಕೆ ಸಂಬಂಧಿಸಿದಂತಹವು) ಅವು ಪ್ರಕಟಗೊಂಡ ದಿನಾಂಕವಾಗಲೀ, ಸರ್ಕ್ಯುಲರ್ ನಂಬರ್ ಇತ್ಯಾದಿಗಳಾಗಲೀ ಇಲ್ಲ. ಇವೆಲ್ಲವೂ ಈಗ ಪ್ರಕರಣ ತೀವ್ರಗೊಂಡ ಬಳಿಕದ ಸೃಷ್ಟಿ ಆಗಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಅದು ಹೌದಾಗಿದ್ದಲ್ಲಿ, ಇವೆಲ್ಲವೂ ಸಾಕ್ಷ್ಯ ತಿರುಚುವ ಪ್ರಯತ್ನಗಳೇ. ನ್ಯಾಯಾಂಗೀಯ ತಪಾಸಣೆಗಳಲ್ಲಿ ಇವು ಸುಲಭವಾಗಿ ಬಯಲಾಗಬಲ್ಲವು.

ಒಬ್ಬ ಆಪಾದಿತನ ಅನಗತ್ಯ ರಕ್ಷಣೆಗೆ ಪ್ರಭುತ್ವ ಹೊರಟರೆ, ಅದು ಒಂದು ಸುಳ್ಳಿಗೆ ಹತ್ತು ಸುಳ್ಳು ಸೇರಿಸಬೇಕಾಗುತ್ತದೆ. ಬರುವ ವರ್ಷದ ಸಾರ್ವತ್ರಿಕ ಚುನಾವಣೆಗಳ ಮುನ್ನ ಇದು ಆಡಳಿತಪಕ್ಷಕ್ಕೆ ಹೊರಲಾಗದ ಹೊರೆಯಾಗುವ ಎಲ್ಲ ಲಕ್ಷಣಗಳೂ ಈ ಪ್ರಕರಣದಲ್ಲಿ ಕಾಣಿಸುತ್ತಿವೆ.

ಪೋಸ್ಟ್ ಹಂಚಿಕೊಳ್ಳಿ:

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ ಸೋಲಿನ ಸೇಡು ತೀರಿಸಿಕೊಳ್ಳಲು ಬಿಜೆಪಿ ತಹತಹ; ಕೇಸರಿ ಪಕ್ಷದ ಬತ್ತಳಿಕೆಯಲ್ಲಿರುವ ಆ ಅಸ್ತ್ರ ಯಾವುದು?

ಮೋದಿ ಮತ್ತು ಶಾ ಅವರ ಮೂಗುದಾರವನ್ನು ಹರಿದೊಗೆದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿರುವ...

ಮೋಹನದಾಸ ಪೈ : ರಾಮ ಆದ್ರೆ ರಾಮ; ರಾವಣ ಆದ್ರೆ ರಾವಣ!

ನಮ್ಮ ಸರ್ಕಾರಗಳು- ಯಡಿಯೂರಪ್ಪ/ಬೊಮ್ಮಾಯಿ/ಸಿದ್ಧರಾಮಯ್ಯ.. ಎಲ್ಲರೂ ಕೈಗಾರಿಕಾ ನೀತಿ ರೂಪಿಸಿ, ಬರುವವರಿಗೆ ಸಬ್ಸಿಡಿ...

ಈ ದಿನ ವಿಶೇಷ | ಮುಸ್ಲಿಮರಿಲ್ಲದ ‘ಮೊಹರಂ’ ಹಿಂದೆ ಏನೇನೆಲ್ಲ ಇದೆ ಗೊತ್ತಾ?

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೈಕನವಾಡಿಯಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ...

ವದಂತಿಗಳಿಗೆ ತೆರೆ: 4 ವರ್ಷಗಳ ದಾಂಪತ್ಯ ಜೀವನದಿಂದ ವಿಚ್ಛೇದನ ಪಡೆದುಕೊಂಡ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ

ಕಳೆದ ಕೆಲವು ತಿಂಗಳುಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಟೀಮ್...