- ಮೋದಿ ಗೋ ಬ್ಯಾಕ್ ಮೂಲಕ ರಾಜಸ್ಥಾನ ಭೇಟಿಗೆ ವಿರೋಧ
- 30 ದಿನಗಳ ಅವಧಿಯಲ್ಲಿ ಬಿಜೆಪಿ, ದೇಶಾದ್ಯಂತ 50 ರ‍್ಯಾಲಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮುಂದಿನ 30 ದಿನಗಳ ಅವಧಿಯಲ್ಲಿ ಬಿಜೆಪಿ, ದೇಶಾದ್ಯಂತ 50 ರ‍್ಯಾಲಿಗಳನ್ನು ಆಯೋಜಿಸಿದೆ. ಈ ಪೈಕಿ ಮೊದಲ ರ‍್ಯಾಲಿ ರಾಜಸ್ಥಾನದಲ್ಲಿ ನಡೆಯಲಿದ್ದು, ಮೋದಿ ಆಗಮನ ವಿರೋಧಿಸಿ ಮೋದಿ ಗೋ ಬ್ಯಾಕ್ ಎಂಬ ವಿರೋಧ ವ್ಯಕ್ತವಾಗಿದೆ.
ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಿ ಮಂಗಳವಾರ 9 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ರ‍್ಯಾಲಿಗಳನ್ನು ಆಯೋಜಿಸಿದೆ. ರಾಜಸ್ಥಾನದ ಆಜ್ಮೀರ್‌ನಲ್ಲಿ ಬುಧವಾರ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಆದರೆ ಮೋದಿ ರಾಜಸ್ಥಾನ ಭೇಟಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಬುಧವಾರ ಬೆಳಗ್ಗಿನಿಂದಲೇ ಟ್ವಿಟರ್‌ನಲ್ಲಿ ಮೋದಿ ಗೋ ಬ್ಯಾಕ್ ಮತ್ತು ಮೋದಿ ವಾಪಾಸ್ ಭಾಗೊ ಟ್ರೆಂಡಿಂಗ್ ಆಗಿದೆ. ಮಧ್ಯಾಹ್ನದ ವೇಳೆಗೆ ಸುಮಾರು ಒಂದು ಲಕ್ಷದ ಹದಿನೈದು ಸಾವಿರಕ್ಕೂ ಅಧಿಕ ಮಂದಿ ʻಮೋದಿ ಗೋ ಬ್ಯಾಕ್ʼ ಹ್ಯಾಷ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಕೂಟಗಳಲ್ಲಿ ಪ್ರಶಸ್ತಿ ಗೆದ್ದು ದೇಶದ ಕೀರ್ತಿ ಬೆಳಗಿಸಿದ ಕುಸ್ತಿಪಟುಗಳು ರಾಜಧಾನಿಯ ಬೀದಿಗಳಲ್ಲಿ ಪ್ರತಿಭಟಿಸುತ್ತಿದ್ದಾರೆ. ಆದರೆ ಅವರ ಅಹವಾಲನ್ನು ಆಲಿಸಲು ಸಮಯವಿಲ್ಲದ ಪ್ರಧಾನಿ, ಸಾರ್ವಜನಿಕ ಸಭೆಗಳಲ್ಲಿ ಭಾಷಣ ಮಾಡುವುದಕ್ಕೆ ಜನಸಾಮಾನ್ಯರ ಜತೆ ಪ್ರಮುಖವಾಗಿ ಜಾಟ್ ಸಮುದಾಯದವರಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಇವರಿಗೆ ಸಾಥ್ ನೀಡಿದ್ದಾರೆ.
“ಅತಿಥಿಗಳನ್ನು ದೇವರಂತೆ ಕಾಣುವುದು ಮತ್ತು ನಮ್ಮ ಭೂಮಿಗೆ ಅವರನ್ನು ಸ್ವಾಗತಿಸುವುದು ರಾಜಸ್ಥಾನದ ಸಂಪ್ರದಾಯ. ಮೋದಿ ಜೀ, ನೀವು ಪ್ರಧಾನಿ ಸ್ಥಾನದ ಘನತೆ ಎತ್ತಿ ಹಿಡಿದಿದ್ದರೆ, ನಾವು ನಿಮ್ಮನ್ನು ಅದೇ ರೀತಿಯಲ್ಲಿ ಗೌರವಿಸುತ್ತಿದ್ದೆವು. ಆದರೆ ನೀವು ಸ್ಥಾನ ಮತ್ತು ದೇಶ ಎರಡಕ್ಕೂ ಕಳಂಕ ತಂದಿದ್ದೀರಿ. ಈ ದೇಶದ ಹೆಮ್ಮೆಯ ಹೆಣ್ಣುಮಕ್ಕಳು ಬೀದಿಯಲ್ಲಿ ಅಳುತ್ತಿದ್ದಾರೆ. ಆದರೆ ನೀವು ಅವರ ಕುರಿತು ಅಸಡ್ಡೆ ಹೊಂದಿದ್ದೀರಿ” ಎಂದು ಜಾಟ್ ಯುನಿಟಿ ಎಂಬ ಟ್ವಿಟರ್ ಬಳೆಕದಾರರು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕಾನೂನುಬಾಹಿರ ಚಟುವಟಿಕೆ; ಬೆಳ್ಳಂಬೆಳಗ್ಗೆ ಕರ್ನಾಟಕದ 16 ಸ್ಥಳಗಳಲ್ಲಿ ಎನ್‌ಐಎ ದಾಳಿ
ಸಿಯಾ ಚೌಧರಿ ಎಂಬುವವರು, ʻಮೋದಿ ನೋ ಎಂಟ್ರಿʼ ಎಂಬ ಹೋರ್ಡಿಂಗ್ ಚಿತ್ರವನ್ನು ಹಂಚಿಕೊಂಡಿದ್ದು, ಇದು ರಾಜಸ್ಥಾನ, ನೀವು ಗುಜರಾತ್ ಎಂದು ಅಂದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.