ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ- 4: ʼನಮ್ಮ ಆಸ್ಪತ್ರೆ, ನಮ್ಮ ಕ್ಲಿನಿಕ್‌’- ಅದೇ ಬಾಳು, ಅದೇ ಗೋಳು

Date:

ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಖಾಸಗೀಕರಣ ಸೇರಿದಂತೆ ಅನೇಕ ಪ್ರಯೋಗಗಳಾಗಿವೆ. ಅವೆಲ್ಲವುಗಳಿಂದ ಆಸ್ಪತ್ರೆಗಳ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. ಆರೋಗ್ಯ ಕ್ಷೇತ್ರವು ಆದ್ಯತಾ ವಲಯವಾಗಿದ್ದು, ಸರ್ಕಾರವೇ ಅದರ ನೇರ ಉಸ್ತುವಾರಿ ವಹಿಸುವುದು ಅವಶ್ಯಕ. ನಮ್ಮ ಕ್ಲಿನಿಕ್ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆ, ಔಷಧಿಗಳ ಪೂರೈಕೆ ಸೇರಿದಂತೆ ಸಕಲ ವ್ಯವಸ್ಥೆಗಳು ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯ.       

ತಮಿಳುನಾಡಿನ ಉಚಿತ ಔಷಧಿ ಯೋಜನೆಯನ್ನು ಕರ್ನಾಟಕದಲ್ಲೂ ಜಾರಿಗೆ ತರುವ ಬಗ್ಗೆ ಕರ್ನಾಟಕದಲ್ಲಿಯೂ ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಶ್ರಮ ಹಾಕುತ್ತಿದ್ದಾರೆ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ರಮೇಶ್‌ ಕುಮಾರ್‌ ಅವರು ಆರೋಗ್ಯ ಸಚಿವರಾಗಿದ್ದಾಗ ರಾಜ್ಯದ ಆರೋಗ್ಯ ಆಂದೋಲನದ ಕೆಲವು ಕಾರ್ಯಕರ್ತರು ಅವರನ್ನು ಭೇಟಿ ಮಾಡಿ ತಮಿಳುನಾಡು ಮಾದರಿ ಅಳವಡಿಕೆಗೆ ಒತ್ತಾಯ ಹೇರಿದ್ದರು. ರಮೇಶ್ ಕುಮಾರ್ ಅವರೂ ಕೂಡ ಆರಂಭದಲ್ಲಿ ಉಚಿತ ಔಷಧಿಗಳ ಯೋಜನೆ ಬಗ್ಗೆ ಉತ್ಸುಕರಾಗಿದ್ದರು. ನಂತರ ಅಧಿಕಾರಿಗಳು, ನಮ್ಮಲ್ಲಿ ಈಗಾಗಲೇ ಅದಕ್ಕಿಂತ ಉತ್ತಮ ವ್ಯವಸ್ಥೆ ಇದೆ ಎಂದು ಸುಳ್ಳು ಹೇಳಿ, ಅವರ ದಿಕ್ಕು ತಪ್ಪಿಸಿದರು. ನಮ್ಮಲ್ಲಿ ಉಚಿತ ಔಷಧಿ ನೀಡುವ ಬಗ್ಗೆ ಕಾಗದದ ಮೇಲೆ ಒಂದು ವ್ಯವಸ್ಥೆಯೇನೋ ಇದೆ. ಆದರೆ, ಆಚರಣೆಯಲ್ಲಿ ಯಾವುದೂ ಸಮರ್ಪಕವಾಗಿಲ್ಲ.

ರಾಜ್ಯದಲ್ಲಿ ಎಲ್ಲಕ್ಕಿಂತ ಮೊದಲು ಔಷಧಿಗಳನ್ನು ಉತ್ಪಾದಕರಿಂದಲೇ ನೇರವಾಗಿ ಕೊಳ್ಳುವ ವ್ಯವಸ್ಥೆ ಆಗಬೇಕು, ಔಷಧಿಯ ವಿತರಣೆ, ಬೇಡಿಕೆ ಇತ್ಯಾದಿಗಳ ಮೇಲೆ ನಿಗಾ ಇಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಮುಖ್ಯವಾಗಿ, ಔಷಧಿ ಕೊಳ್ಳುವಿಕೆಯನ್ನು ಕೇಂದ್ರೀಕೃತಗೊಳಿಸಬೇಕು. ರಾಜ್ಯದ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳನ್ನು ಕಂಪ್ಯೂಟರೀಕರಣಗೊಳಿಸಬೇಕು. ಆಗ ಔಷಧಿ ಬಳಕೆಯ ಖಚಿತ ಲೆಕ್ಕ ಸಿಗುತ್ತದೆ. ಅದರಿಂದ ಅಗತ್ಯ ಔಷಧಿಗಳ ಪಟ್ಟಿ ಸೇರಿದಂತೆ ಮುಖ್ಯ ಔಷಧಿಗಳನ್ನು ಆಸ್ಪತ್ರೆಗಳಿಗೆ ಪೂರೈಸಲು ಎಷ್ಟು ವೆಚ್ಚವಾಗುತ್ತದೆ ಎನ್ನುವ ಸ್ಪಷ್ಟ ಚಿತ್ರಣ ಕೂಡ ಲಭ್ಯವಾಗುತ್ತದೆ ಎನ್ನುತ್ತಾರೆ ಸಾರ್ವತ್ರಿಕ ಆರೋಗ್ಯ ಆಂದೋಲನ ಕರ್ನಾಟಕದ ಕಾರ್ಯಕರ್ತರಾದ ಪ್ರಸನ್ನ.

ಈ ಸುದ್ದಿ ಓದಿದ್ದೀರಾ? ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ -1 | ಬಡವರನ್ನು ಮತ್ತಷ್ಟು ಬಡವರನ್ನಾಗಿ ಮಾಡುತ್ತಿವೆ ಆಸ್ಪತ್ರೆಗಳು 

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರೋಗ್ಯದ ಮೇಲಿನ ಜನರ ಖರ್ಚನ್ನು ಕಡಿಮೆ ಮಾಡಬೇಕು ಎಂದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕನಿಷ್ಠ ಪಕ್ಷ ಅಗತ್ಯ ವಸ್ತುಗಳ ಪಟ್ಟಿಯಲ್ಲಿರುವ ಔಷಧಿಗಳನ್ನಾದರೂ ಕೊಡಬೇಕು, ಈಗ ಅವನ್ನೂ ಕೂಡ ಹೊರಗೆ ತೆಗೆದುಕೊಳ್ಳಿ ಎಂದು ವೈದ್ಯರು ಚೀಟಿ ಬರೆದುಕೊಡುವ ಪದ್ಧತಿ ಇದೆ. ಇನ್ನೊಂದು ಮುಖ್ಯವಾದ ವಿಚಾರ, ಜೆನರಿಕ್ ಔಷಧಿಗಳ ಬಳಕೆಯನ್ನು ಹೆಚ್ಚು ಮಾಡಬೇಕು. ಹಾಗಾಗಬೇಕು ಎಂದರೆ, ವೈದ್ಯರು ಜೆನರಿಕ್ ಔಷಧಿಗಳನ್ನು ಶಿಫಾರಸು ಮಾಡಬೇಕು.

‘ಜೆನರಿಕ್ ಔಷಧಿಗಳು ಕಳಪೆ ಎಂದು ನಂಬಿರುವ, ಅದನ್ನು ಜನರಿಗೂ ಕೂಡ ಹೇಳುವ ಸರ್ಕಾರಿ ವೈದ್ಯರ ಸಂಖ್ಯೆ ನಮ್ಮಲ್ಲಿ ದೊಡ್ಡದಿದೆ. ಅಂಥವರು ತಿಳಿಯಬೇಕಾದ ವಿಚಾರವೇನೆಂದರೆ, ಈ ದೇಶದಲ್ಲಿರುವ ಶೇ 90ರಷ್ಟು ಔಷಧಿಗಳು ಜೆನರಿಕ್ಕೇ. ಒಂದೇ ರಾಸಾಯನಿಕ ಸಂಯೋಜನೆಯಿರುವ ಔಷಧಿ ಬೇರೆ ಬೇರೆ ಹೆಸರಿನಲ್ಲಿ ಮಾರಾಟ ಆಗುತ್ತಿರುತ್ತದೆ. ಒಂದೊಂದಕ್ಕೆ ಒಂದೊಂದು ಬೆಲೆ ಇರುತ್ತೆ. ನಮ್ಮ ಆರೋಗ್ಯ ಕ್ಷೇತ್ರದ ವಿಪರ್ಯಾಸವೇನು ಗೊತ್ತಾ? ಜೀವನದ ಬೇರೆ ರಂಗಗಳಲ್ಲಿ ದುಬಾರಿಯಾಗಿರುವವು ಉದಾ: ಬೆಂಜ್ ಕಾರು, ದುಬಾರಿ ವಾಚು ಇತ್ಯಾದಿ ಕಡಿಮೆ ಮಾರಾಟವಾಗುತ್ತವೆ. ಆದರೆ, ಆರೋಗ್ಯ ಕ್ಷೇತ್ರದಲ್ಲಿ ಮಾತ್ರ ಮೆಡಿಕಲ್ ಲಾಬಿಯಿಂದಾಗಿ ದುಬಾರಿ ಔಷಧಿಗಳು ಹೆಚ್ಚು ಮಾರಾಟವಾಗುತ್ತಿವೆ’ ಎನ್ನುತ್ತಾರೆ ಪ್ರಸನ್ನ.

ಈ ಕುರಿತು, ಆಗಸ್ಟ್ 12, 2023ರಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ನಿಯಮಾವಳಿಯೊಂದನ್ನು ರೂಪಿಸಿದೆ. ವೈದ್ಯರು ರೋಗಿಗಳಿಗೆ ಜೆನರಿಕ್ ಔಷಧಿಗಳನ್ನೆ ಶಿಫಾರಸು ಮಾಡಬೇಕು. ವಿಫಲವಾದಲ್ಲಿ ವೈದ್ಯರಿಗೆ ದಂಡ ವಿಧಿಸುವ ಅಥವಾ ಅವರ ವೃತ್ತಿ ಪರವಾನಗಿಯನ್ನು ಅಮಾನತುಗಳಿಸುವ ಅವಕಾಶ ನಿಯಮಾವಳಿಯಲ್ಲಿದೆ. ಇದು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬರಲಿದೆ ಎನ್ನುವುದರ ಬಗ್ಗೆ ಆರೋಗ್ಯ ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸುತ್ತಾರೆ.

ಈ ಸುದ್ದಿ ಓದಿದ್ದೀರಾ? ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಯೋಜನೆ-2 | ತಮಿಳುನಾಡಿನಲ್ಲಿದೆ ಮಾದರಿ ಆರೋಗ್ಯ ವ್ಯವಸ್ಥೆ

ಈ ವಿಷಯದ ಬಗ್ಗೆ ಸರ್ಕಾರಿ ವೈದ್ಯಕೀಯ ಕಾಲೇಜೊಂದರ ಹೆಸರು ಹೇಳಲಿಚ್ಛಿಸದ ಪ್ರಾಧ್ಯಾಪಕರದ್ದು ಭಿನ್ನ ನಿಲುವು. ‘ನಮ್ಮ ವ್ಯವಸ್ಥೆಯಲ್ಲಿ ಎಲ್ಲರೂ ಲಾಭಕ್ಕಾಗಿಯೇ ಕೆಲಸ ಮಾಡುವುದು. ಹಾಗಾಗಿ ಕೆಲವು ಔಷಧಿಗಳ ಬೆಲೆ ಹೆಚ್ಚಾಗಿದೆ. ಹಾಗಾಗಬಾರದು ಎಂದರೆ, ಸರ್ಕಾರವೆ ಅಗತ್ಯ ವಸ್ತುಗಳನ್ನು ಉತ್ಪಾದಿಸಲಿ. ಕರ್ನಾಟಕ ಆಂಟಿಬಯಾಟಿಕ್ಸ್ ಲಿಮಿಟೆಡ್‌ನಂಥ ವ್ಯವಸ್ಥೆಯೊಂದು ಈಗಾಗಲೇ ನಮ್ಮಲ್ಲಿ ಇದೆ. ಅದನ್ನು ಸರ್ಕಾರ ಮತ್ತಷ್ಟು ಬಲಪಡಿಸಲಿ. ಉಳಿದ ಔಷಧಿಗಳನ್ನು ಕೊಳ್ಳುವಾಗ ಸಗಟಾಗಿ, ಉತ್ಪಾದಕರಿಂದಲೇ ನೇರವಾಗಿ ಕೊಳ್ಳಲಿ. ಮುಖ್ಯವಾಗಿ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ (ಕೆಎಸ್‌ಎಂಎಸ್‌ಸಿಎಲ್‌) ವನ್ನು ಒಂದು ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡಿ, ರಾಜಕಾರಣಿಗಳ ಮತ್ತು ಅಧಿಕಾರಿಗಳ ಹಸ್ತಕ್ಷೇಪ ತಪ್ಪಿಸಿದರೆ ಎಲ್ಲವೂ ಸರಿಹೋಗುತ್ತದೆ’ ಎನ್ನುತ್ತಾರೆ ಅವರು.

ಇದೆಲ್ಲದರ ನಡುವೆ ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ 400ಕ್ಕೂ ಹೆಚ್ಚು ‘ನಮ್ಮ ಕ್ಲಿನಿಕ್‌’ಗಳನ್ನು ಪ್ರಾರಂಭಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲೇ ಇವು ಪ್ರಾರಂಭವಾಗಿವೆಯಾದರೂ, ಇನ್ನೂ ಅವು ಪೂರ್ಣರೂಪದಲ್ಲಿ ಕಾರ್ಯಾರಂಭ ಮಾಡಿಲ್ಲ. ‘ನಮ್ಮ ಕ್ಲಿನಿಕ್‌’ಗಳಲ್ಲಿ ಮುಖ್ಯವಾಗಿ ಮಧುಮೇಹ, ರಕ್ತದೊತ್ತಡ ಪರೀಕ್ಷೆ, ಜ್ವರ ತಪಾಸಣೆ ಇತ್ಯಾದಿ ಆರಂಭಿಕ ಹಂತದ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿಯೊಂದು ನಮ್ಮ ಕ್ಲಿನಿಕ್‌ನಲ್ಲಿ ಓರ್ವ ವೈದ್ಯ, ಒಬ್ಬ ನರ್ಸ್, ಒಬ್ಬ ಲ್ಯಾಬ್ ಟೆಕ್ನೀಷಿಯನ್ ಹಾಗೂ ಒಬ್ಬ ಡಿ ಗ್ರೂಪ್ ನೌಕರ ಇರಬೇಕು ಎನ್ನುವ ನಿಯಮ ಇದೆ.

ನಿಯಮದ ಪ್ರಕಾರ, ನಮ್ಮ ಕ್ಲಿನಿಕ್‌ಗಳಲ್ಲಿ ಉಚಿತ ಆರೋಗ್ಯ ತಪಾಸಣೆ, ಔಷಧಗಳು, ಪ್ರಯೋಗ ಶಾಲೆಗಳು, ಮತ್ತು ಇತರ ಹದಿನಾಲ್ಕು ಪರೀಕ್ಷೆಗಳು ಲಭ್ಯ ಇರಬೇಕು. ಜೊತೆಗೆ ನಿರೀಕ್ಷಣಾ ಕೊಠಡಿ, ತಪಾಸಣಾ ಕೊಠಡಿ, ಪ್ರಯೋಗ ಕೊಠಡಿ ಮುಂತಾದವು ಇರಬೇಕು. ಆದರೆ, ನಮ್ಮ ಕ್ಲಿನಿಕ್‌ಗಳಲ್ಲಿ ವೈದ್ಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ತೀವ್ರ ಕೊರತೆ ಇದೆ. ಬಹುತೇಕ ಕ್ಲಿನಿಕ್‌ಗಳಲ್ಲಿ ಜಾಗದ ಕೊರತೆಯೂ ಇದೆ. ಹಾಗಾಗಿ ಇವು ಕೇವಲ ಬಿಪಿ ಹಾಗೂ ಡಯಾಬಿಟೀಸ್ ಪರೀಕ್ಷೆಯ ಕೇಂದ್ರಗಳಾಗಿವೆ.

ಫೆಬ್ರವರಿ ಏಳರಂದು ಉದ್ಘಾಟನೆಯಾಗಿದ್ದ ‘ನಮ್ಮ ಕ್ಲಿನಿಕ್‌’ಗಳಲ್ಲಿ ಜೂನ್ 15ರವರೆಗೆ ಬೆಂಗಳೂರಿನ 2.3 ಲಕ್ಷ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದರೆ, 87,000 ಮಂದಿ ರಕ್ತಪರೀಕ್ಷೆ ಮತ್ತಿತರ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದಾರೆ ಎಂದು ಸರ್ಕಾರದ ಅಂಕಿಅಂಶ ಹೇಳುತ್ತದೆ. ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನಸಂಖ್ಯೆಯ ಬೆಂಗಳೂರಿನಲ್ಲಿ ಇಷ್ಟು ಮಂದಿ ಮಾತ್ರ ‘ನಮ್ಮ ಕ್ಲಿನಿಕ್‌’ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನುವುದು ಅವುಗಳ ಕಾರ್ಯಶೈಲಿಯ ಸ್ಥೂಲ ಚಿತ್ರಣ ನೀಡುತ್ತದೆ. 

ಈ ಸುದ್ದಿ ಓದಿದ್ದೀರಾ? ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ- 3: ಜನರ ಮನೆ ಬಾಗಿಲಿಗೆ ಉಚಿತ ಚಿಕಿತ್ಸೆ ಕೊಂಡೊಯ್ದ ದ್ರಾವಿಡ ರಾಜ್ಯ!

ಕರ್ನಾಟಕದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅನೇಕ ಪ್ರಯೋಗಗಳಾಗಿವೆ. ಸರ್ಕಾರಿ ಆಸ್ಪತ್ರೆಗಳನ್ನು ನಿರ್ವಹಣೆಗಾಗಿ ಖಾಸಗಿಯವರಿಗೆ ವಹಿಸಲಾಗಿತ್ತು. ಆದರೆ, ಒಪ್ಪಂದದ ಅವಧಿ ಮುಗಿಯುವ ವೇಳೆಗೆ ನಿರ್ವಹಣೆ ಹೊಣೆ ಹೊತ್ತಿದ್ದವರು ಆಸ್ಪತ್ರೆಗಳನ್ನು ಮೊದಲಿಗಿಂತ ದಾರುಣ ಸ್ಥಿತಿಗೆ ತಂದು ಬಿಟ್ಟಿದ್ದರು. ಆರೋಗ್ಯ ಕ್ಷೇತ್ರವು ಆದ್ಯತಾ ವಲಯವಾಗಿದ್ದು, ಸರ್ಕಾರವೇ ಅದರ ನೇರ ಉಸ್ತುವಾರಿ ವಹಿಸುವುದು ಅವಶ್ಯಕ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಲಭ್ಯತೆ, ಔಷಧಿಗಳ ಪೂರೈಕೆ ಸೇರಿದಂತೆ ಸಕಲ ವ್ಯವಸ್ಥೆಗಳು ಉತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯ.    

ಕೇಂದ್ರ ಸರ್ಕಾರವೂ ಸೇರಿದಂತೆ ರಾಜ್ಯ ಸರ್ಕಾರಗಳು ಆರೋಗ್ಯ ಸೇವೆಗಳ ಮೇಲೆ ವೆಚ್ಚ ಮಾಡುತ್ತಿರುವ ಮೊತ್ತ ತೀರಾ ಕಡಿಮೆ ಇದೆ. ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ ನೀಡಿದ ಮಾಹಿತಿಯ ಪ್ರಕಾರ, 2022-23ರ ಹಣಕಾಸು ಸಮೀಕ್ಷೆಯಂತೆ, 2021ರ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿಯ ಶೇ.1.6 ರಷ್ಟು, 2022ರಲ್ಲಿ ಒಟ್ಟು ಜಿಡಿಪಿಯ ಶೇ.2.2ರಷ್ಟು ಹಾಗೂ 2023ರ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ.2.1ರಷ್ಟು ಹಣವನ್ನು ಆರೋಗ್ಯ ಸೇವೆಗಳಿಗೆ ವೆಚ್ಚ ಮಾಡಲಾಗಿದೆ. ತಮಿಳುನಾಡಿನಂಥ ಕೆಲವು ರಾಜ್ಯಗಳನ್ನು ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಆರೋಗ್ಯ ಸೇವೆಯ ಮೇಲೆ ಮಾಡಲಾಗುತ್ತಿರುವ ವೆಚ್ಚದ ಪ್ರಮಾಣ ತುಂಬಾ ಕಡಿಮೆ ಇದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿಗಳನ್ನು ನೀಡುವ ಮೂಲಕ ಜನರ ಆರೋಗ್ಯ ಕಾಪಾಡುವುದು, ವೈದ್ಯರು-ಔಷಧಿ ಕಂಪನಿಗಳ ಲಾಬಿಯನ್ನು ಮುರಿಯುವುದು, ಮಾನವ ಸಂಪನ್ಮೂಲವನ್ನು ಕಾಪಾಡಿಕೊಳ್ಳುವುದು, ಜನರ ಆರೋಗ್ಯಕ್ಕಾಗಿ ಸರ್ಕಾರದ ಮತ್ತು ಜನ ಮಾಡುತ್ತಿರುವ ವೆಚ್ಚವನ್ನು ಕಡಿಮೆ ಮಾಡುವುದು ಸೇರಿದಂತೆ ಹಲವು ಅನುಕೂಲಗಳಿವೆ. ಇಷ್ಟೆಲ್ಲ ಆಗಲು ಬೇಕಿರುವುದು ಸರ್ಕಾರದ ಇಚ್ಛಾಶಕ್ತಿ ಅಷ್ಟೆ. ಅಂಥ ಇಚ್ಛಾಶಕ್ತಿಯನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ತೋರುವುದೇ?

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ನಾಲೆಯ ಕೊನೆ ಭಾಗಕ್ಕೆ ನೀರು ಹರಿದಿಲ್ಲ; ಸಚಿವರು ರೈತರ ಹಿತ ಕಾಯುತ್ತಿಲ್ಲ: ಶಾಸಕ ಹರೀಶ್

ದಾವಣಗೆರೆ ಜಿಲ್ಲೆಯ ರೈತರಿಗೆ ಭದ್ರಾ ಜಲಾಶಯದಿಂದ ಸಮರ್ಪಕವಾಗಿ ನೀರು ಹರಿಸುವಲ್ಲಿ ಜಿಲ್ಲಾ...

ಮೈಸೂರು | ಪಂಚಮಿತ್ರ ಪೋರ್ಟಲ್ ಲೋಕಾರ್ಪಣೆ

ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಹಲವಾರು ಸೇವೆಗಳನ್ನು ಒದಗಿಸಲು ಗ್ರಾಮೀಣಾಭಿವೃದ್ಧಿ ಮತ್ತು...

ಚಿಕ್ಕಬಳ್ಳಾಪುರ | ಶಾಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ರಚನೆ ಕಡ್ಡಾಯ: ನ್ಯಾ. ನೇರಳೆ ವೀರಭದ್ರಯ್ಯ ಭವಾನಿ

ಮಕ್ಕಳ ಸುರಕ್ಷತೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರದ ಆದೇಶದಂತೆ ಪ್ರತಿ ಶಾಲೆಯಲ್ಲಿಯೂ...

ಚಿಕ್ಕಬಳ್ಳಾಪುರ | ವೀರಪ್ಪ ಮೊಯ್ಲಿ ವಿರಚಿತ ‘ವಿಶ್ವಸಂಸ್ಕೃತಿಯ ಮಹಾಯಾನ’ ಪುಸ್ತಕ ಬಿಡುಗಡೆ

ವೀರಪ್ಪ ಮೊಯ್ಲಿ ಮರೆಯಲಾರದ ರಾಜಕಾರಣಿಯೂ ಹೌದು ಮತ್ತು ಲೇಖಕರೂ ಹೌದು ಎಂದು...