ಅಲೆಮಾರಿ ಬದುಕು: ಉಳಿಯೋಕೆ ಒಂದಿಷ್ಟು, ಹೂಳೋಕೆ ಒಂದಿಷ್ಟು ಜಾಗ ಕೊಡಿ ನಮಗೆ..!

Date:

ಚಿಕ್ಕನಾಯಕನಹಳ್ಳಿ, ಹುಳಿಯಾರು ಮುಂತಾಗಿ ರಾಜ್ಯದಾದ್ಯಂತ ಇರುವ ಅಲೆಮಾರಿಗಳು, ಅರೆಅಲೆಮಾರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳು ಇವರೆಲ್ಲರ ಬದುಕು ನೀರುಮುಳುಗಾಗಿದೆ. ಬದುಕೋದಕ್ಕೆ ಭೂಮಿಯಿಲ್ಲ. ಸತ್ತರೆ ಹೂಳಲು ಸ್ಮಶಾನವಿಲ್ಲ. ಅಲೆಮಾರಿಗಳ ಬದುಕಿನ ದಾರುಣ ಸ್ಥಿತಿಯ ಬಗ್ಗೆ ಉಜ್ಜಜ್ಜಿ ರಾಜಣ್ಣ ಅವರ ಚಿಂತನೆಗೆ ಹಚ್ಚುವ ಲೇಖನ.

ಭೂಮಿಯ ಮೇಲೆ ಬಲಹೀನ ಸಮುದಾಯಗಳು ಇರಲೇ ಬಾರದೇ? ಬೇಡುತ್ತೇವೆ, ಕೂಲಿ ಮಾಡುತ್ತೇವೆ. ಉಟ್ಟಿದರೆ ಉಣ್ಣುತ್ತೇವೆ; ಉಟ್ಟದಿದ್ದರೆ ಉಪವಾಸ ಮಲಗುತ್ತೇವೆ. ಉಳಿಯೋಕೆ ಅಂಗೈಲ ಭೂಮಿ ಕೊಟ್ಟರೆ ಸಾಕು. ಸತ್ತ ಮೇಲೆ ತೀರಾ ನಾಯಿ ನರಿ ತಿಂದೋಗಲಿ, ಬಯಲು ಮೇಲೆ ಬಿಸಾಡುವ ಈ ದೇಹವನ್ನು. ಬದುಕಿರುವಾಗಲೇ ಬೆಲೆ ಇಲ್ಲದ ಈ ದೇಹಕ್ಕೆ ಸತ್ತ ಮೇಲೆ ಇನ್ಯಾತರ ಬೆಲೆ? ನಾಯಿ ನರಿಗಳಿಗಾದರೂ ಒಪ್ಪೊತ್ತು ಕೂಳಿನ ಪಾಡು ಈಡೇರಲಿ. ಒಂದು ಕಡೆ ಇರೋಕೆ ಜಾಗ ಕೊಡದ ಸರ್ಕಾರ ಹೂಳೋಕೆ ಮಶಾಣ ಕೊಟ್ಟೀತೆ ಎಂದು ಕಂಡಕಂಡವರನ್ನು ದೈಮೋ ಎಂದು ಬೇಡುತ್ತಿವೆ ಅಲೆಮಾರಿ ಸಮುದಾಯಗಳು; ಚಿಕ್ಕನಾಯಕನಹಳ್ಳಿ ಸೀಮೆಯೂ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ.

ಅವಧೂತ ಮಹಲಿಂಗಪ್ಪ ತಾತ, ಅವಧೂತ ಬುಡೇನ್ ಸಾಬ್ ಮಠಪರಂಪರೆಯೊಳಗೆ ದಿನದ ಮಟ್ಟಿಗೆ ಅಲೆಮಾರಿಗಳ ಜೊತೆಯಲ್ಲಿ ಮಾತುಕತೆ ಮಾಡಿ ಹುಳಿಯಾರು ಪಟ್ಟಣಕ್ಕೆ ಭೇಟಿ ನೀಡಿದಾಗ ಅವರ ಬದುಕು, ದಿನದೂಡುವ ಇರುಸ್ಥಿತಿಯನ್ನು ಕಂಡು ಹೀಗೆನ್ನಿಸಿತು. ಅಲೆಮಾರಿ ಬುಡಕಟ್ಟು ಮಹಾಸಭಾ ಗೌರವಾಧ್ಯಕ್ಷರು ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಸಿ ಎಸ್ ದ್ವಾರಕಾನಾಥ್, ರಾಜ್ಯ ಅಲೆಮಾರಿ ಬುಡಕಟ್ಟು ಮಹಾಸಭಾ ಅಧ್ಯಕ್ಷರು ಹನುಮಂತಪ್ಪ, ಕಾರ್ಯದರ್ಶಿ, ವಕೀಲ ನಾಗರಾಜ್, ಹಿರಿಯ ಪತ್ರಕರ್ತರಾದ ದಿಲಾವರ್ ರಾಮದುರ್ಗ ಕಳೆದ ಭಾನುವಾರ ಅಲ್ಲಿಗೆ ಭೇಟಿ ನೀಡಿದ್ದರು.

ಮಹಿಳೆಯರು, ಮಕ್ಕಳು, ವಯೋವೃದ್ಧರು, ವಿಕಲಚೇತನರು, ಅಲೆಮಾರಿಗಳು, ಅರೆಅಲೆಮಾರಿಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿಗಳು ಇವರೆಲ್ಲರ ಬದುಕು ನೀರುಮುಳುಗಾಗಿದೆ, ಹುಳಿಯಾರು ಅಮಾನಿ ಕೆರೆಯ ನೀರಿನೊಂದಿಗೆ. ಓದುವ ಮಕ್ಕಳ ಪಾಡೇನು? ಹೂ ಹುಂ. ಚಿಕ್ಕನಾಯಕನಹಳ್ಳಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಣ್ಣೆತ್ತಿ ನೋಡಿದಂತಿಲ್ಲ. ಅಂಗನವಾಡಿ ಮಕ್ಕಳ ಪಾಡೇನು? ಹೂ ಹುಂ ಚಿಕ್ಕನಾಯಕನಹಳ್ಳಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನಿಸಿದಂತಿಲ್ಲ. ತಾಲ್ಲೂಕು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳೂ ಜೀವಂತವಾಗಿರುವಂತಿಲ್ಲ. ಹುಳಿಯಾರು ಪಟ್ಟಣ ಪಂಚಾಯಿತಿಯ ಪುನರ್ವಸತಿ ಕಾರ್ಯಕ್ರಮಗಳೇನು ಈ ಮುಳುಗಡೆಯಾಗಿರುವ ಅಲೆಮಾರಿಗಳ ಬದುಕಿನ ಉಳಿವಿಗೆ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆಗಳು ಕೈಗೊಳ್ಳುವ ಸರ್ಕಾರದ ಕೆಲಸಗಳೂ ಇಲ್ಲಿ ನಡೆದಿಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಂದರವಾದ ಕಲ್ಯಾಣ ಮಂಟಪಗಳಲ್ಲಿ, ಕಣ್ಣು ಕೋರೈಸುವ ಉತ್ಸವಗಳಲ್ಲಿ, ಕಣ್ಣಿಗೆ ಬೇಕಾದ ವಧುವರರನ್ನು ವರಿಸಿ, ಬೆಲೆಬಾಳುವ ಬಂಗಲೆಗಳಲ್ಲಿ ರಾಜಾಂಸತೂಲಿಕ ಶೃಂಗಾರಭರಿತವಾದ ಮಂಚಗಳೇರಿ, ಸಂಸಾರ ಹೂಡುವ ಅವಕಾಶವನ್ನು ಹೊಂಚಿಕೊಳ್ಳಬಯಸುವ ಆಳುವ ವರ್ಗದ ವಧುವರರೇ ಒಮ್ಮೆಯಾದರೂ ಗಮನಿಸಿ ಅಲೆಮಾರಿ ಸಮುದಾಯಗಳ ಜೀವನ ಕ್ರಮಗಳ ಪಾಡು ಫಲಗಳನ್ನು. ಎಲ್ಲರೂ ಸಂಸಾರವೂಡಲು, ಫಸಲೀಕರಣ ಹೊಂದಲು ‘ತಾವು’ ಇರುವಾಗ ಅಲೆಮಾರಿಗಳು ಮಾತ್ರ ಮರದ ಕೆಳಗೆ ಮಲಗಿದರೆ ಹೇಗೆ ಎಂಬುದು ಅರ್ಥವಾಗದ ಸತ್ಯವೇನಲ್ಲ. ಆದರೂ ಅವರ ಸಂತಾನಗಳು ಬೆಳೆದಿವೆ. ಅವರ ಮಕ್ಕಳು ಶಾಲೆ ಕಲಿಯಲಾದರೂ ಅವಕಾಶ ಮಾಡಿಕೊಡಿ, ಹೂಳಲು ಒಂದು ಕಂಬಳಿ ಅಗಲ ಮಶಾಣ ಜಾಗ ಒದಗಿಸಿಕೊಡಿ. ಅತ್ತೊಂದು ಇತ್ತೊಂದು ಗುಜ್ಜು ನೆಟ್ಟು ಜೋಲಿ ಕಟ್ಟಲಾದರೂ ಅವರಿಗೊಂದು ಸ್ವಂತದ ಜಾಗ ಇಲ್ಲದಿದ್ದರೆ ಹೇಗೆ?

ಬಲಾಢ್ಯ ಸಮುದಾಯಗಳಲ್ಲಿ ಹುಟ್ಟದಿದ್ದಕ್ಕಾಗಿ ಹೀಗಾಗಿದೆ ಅಲೆಮಾರಿಗಳ ಪಾಡು ಎನ್ನುವುದಾದರೆ ಹುಟ್ಟೇನು ಇವರ ಕೈಯಲ್ಲಿತ್ತೇ ಎಂದು ಆಳುವವರನ್ನು ಉಗಿದು ಕೇಳಬೇಕಾಗಿದೆ. ಅಲೆಮಾರಿಗಳು ಉಳಿಯುವ ವಸತಿಗಾಗಿ ರವಷ್ಟು ಜಾಗ ದೊರೆಯದಿದ್ದರೆ ಕಾಲಾವರಣ ಮಾಡುವುದಾದರೂ ಹೇಗೆ. ಉಳಿಯೋಕು ಜಾಗ ಕೇಳಬೇಕು, ಹೂಳೋಕು ಜಾಗ ಕೇಳಬೇಕು. ಜನುಮಾಪ್ಯಾ ಇದೇ ಬದುಕಾದರೆ, ಸಾಯೋ ತನಕ ಆಡಳಿತದ ಕಾಟ, ಇವರು ಬದುಕೋದು ಇನ್ಯಾವಾಗ? ಇವರ ಮಕ್ಕಳು ಶಾಲೆಗೆ ಹೋಗುವುದು ಎಲ್ಲಿಂದಾ. ಬಯಲಿಗೆ ಸಮೀಪ ದೂರ ಎಂಬುದು ಇದೆಯೇ?

ಅಲೆಮಾರಿಗಳು ಇವರು; ಮನೆ ಕಟ್ಟಿಕೊಳ್ಳಲು ಜಾಗ ಇಲ್ಲ, ಉತ್ತಾಕೊಂದಂಗೈಯಗಲ ಭೂಮಿ ಇಲ್ಲ; ಆಳುವ ಧಣಿಗಳ ಸ್ವಾತಂತ್ರ್ಯೋತ್ಸವಗಳ ಸಾಲುಸಾಲು ಸಂದೇಶಗಳು ಹೊರಬಿದ್ದರೂ ಸಹ. ಸ್ವಂತ ವಿಳಾಸವೇ ಇಲ್ಲಾ ಎಂದ ಮೇಲೆ ಇವರ ಮೇಲೆ ಪೊಲೀಸ್ ಠಾಣೆಗಳಲ್ಲಿ ಇವರ ವಿರುದ್ಧ ಐಪಿಸಿ ಮತ್ತು ಸಿಆರ್‌ಪಿಸಿ ಸೆಕ್ಷನ್‌ಗಳ ಜಡಿದು ಪ್ರಕರಣಗಳ ಹೇಗೆ ದಾಖಲಾಗುತ್ತವೆ, ಏಕೆ ಇವರನ್ನು ಕಾನೂನಿನ ಪರಿಧಿಯಲ್ಲಿ ತರಬೇಕು? ಹಾಗಾದರೆ ಬಿಟ್ಟು ಬಿಡಿ ಏನೂ ತಿಳಿಯದೋರು ಯಾಸಟ್ಟಿಗೆ ಎಂದು. ದೇಶದ ಊರು ಉದ್ಯಾನಗಳಲ್ಲಿ ಅಲೆಮಾರಿಗಳು ಸನಿವಾಸಿಗಳೇ ಅಲ್ಲವೆಂದ ಮೇಲೆ ಇವರ ವಿರುದ್ಧದ ಕಾನೂನು ಪ್ರಕ್ರಿಯೆಗಳು ಏಕೆ ಕೈಗೊಳ್ಳಬೇಕು ಎನಿಸದಿರಲಾರದು.

ಸರ್ಕಾರ ಇವರನ್ನು ನಿಗಾ ಮಾಡದೆ ಇಡೀ ಇವರ ಬದುಕಿನ ಉದ್ದಕ್ಕೂ ಕಾನೂನಿನ ನಿಗಾ ಮಾತ್ರ ಇಟ್ಟು ಇವರ ನಾಗರಿಕ ಬದುಕನ್ನು ಹತ್ತಿಕ್ಕುತ್ತಲೇ ಇವರ ಬಗ್ಗೆ ತಾತ್ಸಾರ ತೋರುತ್ತಿದೆಯಲ್ಲ; ಸರ್ಕಾರದ ಇಂತಹ ನಡೆಯನ್ನು “ನಾಗರಿಕ ಸೇವೆ’ ಎಂದು ಹೇಗೆ ತಾನೆ ಒಪ್ಪುವುದು. ಅಲೆಮಾರಿಗಳಿಗೆ ಒಪ್ಪಾವರಣವಾದ ಬದುಕು ಸಾಗಿಸಲು ಒಂದು ಒಪ್ಪವಾದ ನೆಲೆ ಗೊತ್ತುಪಡಿಸದಿದ್ದರೆ ಅಲೆಮಾರಿಗಳು ವರ್ಷ ಒಪ್ಪೊತ್ತು ದಶಕಗಳ ದಿನದೂಡುವುದಾದರೂ ಹೇಗೆ, ಎಲ್ಲಿ?

ಜೀವಮಾನ ಇಡೀ ಅಲೆಮಾರಿಗಳ ಬದುಕು ಮೇಲಿಂದಮೇಲೆ ಎತ್ತಂಗಡಿಯಾಗುತ್ತಲೇಯಿರುತ್ತದೆ, ಕಾನೂನಾತ್ಮಕವಾಗಿಯೂ ಮತ್ತು ಪರಿಸ್ಥಿತಿಯ ಒತ್ತಡಕ್ಕಾಗಿಯೂ. ಇವರನ್ನೇನು ಹದ್ದು ಕಾಗೆಗಳು ಹೊರಗಿನಿಂದ ತಂದು ಬಿಸಾಡಿವೆಯೇನು ಭಾರತದ ನೆಲದ ಮೇಲೆ. ಆಡಳಿತ ಜವಾಬ್ದಾರಿಗಳನ್ನು ಹೊತ್ತವರು ಉತ್ತರಿಸಬೇಕು. ಕಚೇರಿಗಳಲ್ಲಿರುವವರು ಕಣ್ಣುಕವುರು ಕಳೆದುಕೊಂಡವರ ಹಾಗೆ ಅಂಡೊರೆಸಿಕೊಂಡು ಬೆನ್ನು ತೋರಿ ತಿರುಗಾಡಿದರೆ ಅಲೆಮಾರಿಗಳ ಬದುಕು ನೇರುಪಾಗಲಾರದು. ಸಂಬಂಧಿಸಿದ ಅಧಿಕಾರಿಗಳು ಈ ಸಲುವಾಗಿ ನಿರುತ್ತರರಾದರೆ ಮುಂಬರುವ ದಿನಗಳಲ್ಲಿ ನ್ಯಾಯದ ಕಟ್ಟೆಯಲ್ಲಿ ನಿಂತು ಉತ್ತರಿಸಬೇಕಾದ ದಿನಗಳೂ ಅಧಿಕಾರಿಗಳಿಗೆ ಎದುರಾಗದಿರಲಾರವು ಎಂಬ ಎಚ್ಚರಿಕೆಯೂ ಅಧಿಕಾರ ವಹಿಸಿಕೊಂಡವರ ಎದೆಯಲ್ಲಿ ಸದಾ ಇರಬೇಕಾಗುತ್ತದೆ. ಅಲೆಮಾರಿಗಳವೇನು ಸರ್ಕಾರಿ ಅಧಿಕಾರಿಗಳು ಅಥವಾ ನೌಕರರುಗಳ ಕುಟುಂಬಗಳೇ, ಕೈ ಸವರಿಕೊಂಡು ಸುಮ್ಮನಾಗಲು. ನೌಕರಿಗೊಂದು ಊರಲ್ಲ ಕೊಕ್ಕರೆಗೊಂದು ಕೆರೆಯಲ್ಲ ಎನ್ನುವಷ್ಟರ ಮಟ್ಟಿಗೆ ಅಲೆಮಾರಿಗಳ ಬದುಕು ಸಲೀಸಾಗಿಲ್ಲ ಹಾಗೂ ಸುಧಾರಿಸಿಲ್ಲ. ಅಲೆಮಾರಿಗಳ ಬಗ್ಗೆ ಮಾತನಾಡಲು ಆಡಳಿತದ ನಾಲಿಗೆ ಸೇದೋಗಿದೆ ಎಂದಾದರೆ ದೂರುಗಳ ಅರ್ಜಿಯಲ್ಲಿ ಅಲೆಮಾರಿಗಳು ತೋಡಿಕೊಂಡ ಸಮಸ್ಯೆಗಳಿಗೆ ಪರಿಹಾರ ಹುಡುಕುವವರನ್ನು ಕರೆತರುವುದಾದರೂ ಎಲ್ಲಿಂದ. ಏಕೆಂದರೆ ತಡವಾಗಿಯಾದರೂ ಅಲೆಮಾರಿಗಳ ಪರಿಸ್ಥಿತಿ ತಿಳಿದು ಆಡಳಿತದೊಳಗೆ ಯಾವೊಬ್ಬ ಮುಖ್ಯ ಸ್ಥಾನಿಕ ಅಧಿಕಾರಿಗಳೂ ಮಾತನಾಡುತ್ತಿಲ್ಲ. ನೋಡುವ ಕಣ್ಣು ಇಂಗಿವೋಗಿರುವಂತಿವೆ ಅಧಿಕಾರಿಗಳಿಗೆ. ಅಲೆಮಾರಿಗಳು ದೈನಂದಿನ ಜೀವನದಲ್ಲಿ ಅವರು ಎದುರಿಸುವ ಕಷ್ಟಗಳನ್ನು ಕಣ್ಣೆತ್ತಿಯೂ ನೋಡಲಾರದೆ; ಅರ್ಜಿ ಹಿಡಿದು ಹೋದ ಅಲೆಮಾರಿಗಳ ಅನುಗಾಲದ ಅನುಗೊರಲೆಗಳನ್ನು ಕೇಳಲಾರದ ಮಟ್ಟಿಗೆ ಸರ್ಕಾರ ಕಿವುಡಾದರೆ, ಅಡವಿ ಮೇಲೆ ಜೋಲಿ ಕಟ್ಟಿ ಅಧ್ವಾನವಾಗಿರುವ ಅಲೆಮಾರಿಗಳ ಬದುಕು ಬಾಣಂತನಗಳಂತಹ ವಿಕಲಚೇತನ ಸ್ಥಿತಿಯನ್ನು ನೆಟ್ಟಗೆ ಯಾರು ಮಾಡುತ್ತಾರೆಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಅರ್ಥಮಾಡಿಕೊಳ್ಳಲು ಕನಿಷ್ಠಪಕ್ಷ ಪ್ರಯತ್ನವಾದರೂ ಆಗಲೇಬೇಕಾಗುವುದು ಈಗಿನ ಇರುಸ್ಥಿತಿ.

ಈ ಸುದ್ದಿ ಓದಿದ್ದೀರಾ: ಮಹಿಳೆಯರನ್ನು ‘ಈ ರೀತಿ’ ಉಲ್ಲೇಖಿಸದಿರಿ: ಮಹತ್ವದ ಕೈಪಿಡಿ ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ಇಲಾಖೆಯಿಂದ ಇಲಾಖೆಗೆ ಭೂಮಿ ಹಸ್ತಾಂತರವೇ ಆಗುವುದಿಲ್ಲ. ಆಗಲೇಬೇಕಾದ ಆಡಳಿತಾತ್ಮಕ ದಾಖಲಾತಿ ಪ್ರಕ್ರಿಯೆಗಳು ನಡೆಯದಿದ್ದರೂ ಗುತ್ತಿಗೆ ಕಂಪನಿಗಳಿಗೆ ಯೋಜನೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಭೂಮಿ ದೊರೆಯುತ್ತದೆ. ಬಂಡವಾಳ ಹೂಡಿಕೆಗೆ ಭೂಮಿ ನೀರು ವಿದ್ಯುತ್ ಇಲ್ಲಿ ದೊರೆಯುತ್ತವೆ. ಭೂಸ್ವಾಧೀನ ಮತ್ತು ಭೂಮಿ ಹಸ್ತಾಂತರವಾಗದೆ ಸಾವಿರಾರು ಕೋಟಿಗಳ ಬಿಲ್‌ಗಳಾಗುತ್ತವೆ. ಕಾಮಗಾರಿಗಳು ಮುಕ್ತಾಯಗೊಂಡು, ವರ್ಕ್ ಕಂಪ್ಲೀಟ್ ಸರ್ಟಿಫಿಕೇಟ್ ಗಳಾಗುತ್ತವೆ. ಅಲೆಮಾರಿ ಉಳಿಯಲು ಹೂಳಲು ಭೂಮಿ ದೊರೆಯದು ಹತ್ತಿರದ ತಹಶಿಲ್ದಾರರ ಕಚೇರಿಯಲ್ಲಿ. ಒಬ್ಬೊಬ್ಬ ತಹಶೀಲ್ದಾರರ ಅವಧಿಯಲ್ಲಿಯೂ ಬೇರೆ ಬೇರೆಯದೇ ವರಸೆಯಲ್ಲಿ ಭೂ ದುರ್ಬಳಕೆ ಮಾಡಿಕೊಂಡ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಏಕೆ? ದುರ್ಬಲವಾದ ಸಮುದಾಯಗಳಿಗೆ ಭೂ ಮುಂಜೂರಾತಿ ಮಾಡುವಾಗ ಇವರಿಗೆ ಬರಬಹುದಾದ ಎದೆನೋವಾದರೂ ಏನು ಎಂಬುದನ್ನು ಸಾರ್ವಜನಿಕರು ಅರ್ಥಮಾಡಿಕೊಳ್ಳಬೇಕಾಗಿದೆ ಹಾಗೂ ಪರ್ಯಾಯ ಹೋರಾಟದ ಹಾದಿ ತುಳಿಯಬೇಕಾಗಿದೆ. ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯ ಮೂಲಕ ಲಕ್ಷಾಂತರ ಹೆಕ್ಟೇರ್ ಅಭೂತಪೂರ್ವವಾದ ಬೇಸಾಯದ ಭೂಮಿಯನ್ನು ಪರಿಹಾರ ನೀಡಿ ಸರ್ಕಾರ ಒದಗಿಸುವುದಾದರೆ, ಅಲೆಮಾರಿಗಳಿಗೆ, ಯೋಜನಾ ನಿರಾಶ್ರಿತರಿಗೆ, ವಸತಿರಹಿತರಿಗೆ, ಭೂರಹಿತರಿಗೆ ಇದೇ ಪ್ರಕ್ರಿಯೆಯ ಮೂಲಕ ಭೂಮಿ ಒದಗಿಸಬಹುದಲ್ಲವೇ? ಏಕೆ ಸರ್ಕಾರಕ್ಕೆ ಜನರ ಹೀನಾಯ ಪರಿಸ್ಥಿತಿ ಆಡಳಿತದ ಸೌಂದರ್ಯವಾಗಿ ಕಾಣತೊಡಗಿದೆ?

ಕೊನೆಯ ಮಾತು: ಸರುವೊತ್ತಿಲ್ಲಿ ಮಳೆ ಸುರಿದರೆ ಹಿಂಡೇನಾದವೋ ಎಂದು ಒಬ್ಬ ಸಾಮಾನ್ಯ ಸದಾ ಜಾಗೃತನಾಗಿರುವುದಾದರೆ; ಅದೇ ಮಳೆ, ಬಿಸಿಲು, ಬಿರುಗಾಳಿ ಬಂದಾಗ ಆಡಳಿತ ವ್ಯಾಪ್ತಿಯ ಜನರ ಬದುಕೇನಾಯಿತೋ ಎಂಬುವ ಅಂಗಲಾಪು, ಎಚ್ಚರಿಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇರದಿದ್ದರೆ ಹೇಗೆ? ಪಡೆದ ವೇತನದಲ್ಲಿ ಉಂಡು ಅನ್ನ ಮೈಗೆತ್ತಿಸಿಕೊಳ್ಳುವುದಾದರೂ ಹೇಗೆ? ಹುಳಿಯಾರು ಪಟ್ಟಣದ ಅಲೆಮಾರಿಗಳ ಪಾಡು ಕಂಡಾಗ ಎಂತಹವರಿಗೂ ಹೀಗನಿಸದಿರಲಾರದು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಎಚ್‌ಡಿಕೆ ಹೇಳಿಕೆಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರ ಖಂಡನೆ

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು...

ಕಲಬುರಗಿ | ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜ್ಯಾದ್ಯಂತ ಕಾಂಗ್ರೆಸ್‌ಗೆ ಬೆಂಬಲ: ದಸಂಸ

2024ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿವಿಗಾಗಿ ರಾಜ್ಯಾದ್ಯಂತ ಕಾಂಗ್ರೆಸ್‌...

ದಾವಣಗೆರೆ | ಭಾರತ ದೇಶ ಇರುವವರೆಗೂ ಸಂವಿಧಾನ ಇರುತ್ತದೆ: ಪ್ರಾಂಶುಪಾಲ ಕಲ್ಲೇಶ್‌

ಭಾರತ ದೇಶ ಇರುವವರೆಗೂ ಸಂವಿಧಾನ ಇರುತ್ತದೆ. ಅದರ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ...

ರಾಯಚೂರು | ಎಚ್‌ಡಿಕೆಯಿಂದ ಮಹಿಳೆಯರಿಗೆ ಅವಮಾನ, ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ...