ನನ್ನ ಹೋರಾಟಕ್ಕೆ ಮುಕ್ತಿ ತಂದುಕೊಟ್ಟವರು ಅರಸು ಎಂದ ಅರಸು ಪ್ರಶಸ್ತಿ ಪುರಸ್ಕೃತ ಕಾಗೋಡು ತಿಮ್ಮಪ್ಪ

Date:

ದೇವರಾಜ ಅರಸು ನಾಡು ಕಂಡ ಅಪ್ರತಿಮ ರಾಜಕಾರಣಿ. ಜೀವನದುದ್ದಕ್ಕೂ ಹೋರಾಟವನ್ನೇ ಉಸಿರಾಡಿ, ಹೋರಾಟವೇ ಸಾಮಾಜಿಕ ಬದಲಾವಣೆಗೆ ಮಾರ್ಗವೆಂದವರು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪನವರು. ಅರಸು ಮತ್ತು ಕಾಗೋಡು ತಿಮ್ಮಪ್ಪನವರ ಆಶಯ ಮತ್ತು ಬದ್ಧತೆ ಒಂದೇ ಆಗಿತ್ತು. ಅಂತಹ ತಿಮ್ಮಪ್ಪನವರಿಗೆ ಆ. 20 ರಂದು ರಾಜ್ಯ ಸರ್ಕಾರ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ನೀಡಿ ಪುರಸ್ಕರಿಸಿದೆ. 

1932ರಲ್ಲಿ ಶಿವಮೊಗ್ಗ ಜಿಲ್ಲೆಯ ಕಾಗೋಡು ಎಂಬ ಪುಟ್ಟ ಹಳ್ಳಿಯಲ್ಲಿ, ಬಡ ರೈತ ಕುಟುಂಬದಲ್ಲಿ ಜನಿಸಿದ ತಿಮ್ಮಪ್ಪನವರು, ಹುಟ್ಟಿದ ಊರು ಕಾಗೋಡನ್ನೇ ಹೋರಾಟದ ಕಾರ್ಯಕ್ಷೇತ್ರವನ್ನಾಗಿಸಿಕೊಂಡವರು. ಅಪ್ಪನಿಂದ ಕಲಿತ ಸಾಮಾಜಿಕ ಕಳಕಳಿಯನ್ನು ಕಾಪಿಟ್ಟುಕೊಂಡವರು. ಗೋಪಾಲಗೌಡರ ಮಾರ್ಗದರ್ಶನ ಮತ್ತು ಕಾಗೋಡು ಚಳವಳಿಯಿಂದ ಹುರಿಗಟ್ಟಿದ ವೈಚಾರಿಕ ಚಿಂತನೆಯನ್ನು ಮೈಗೂಡಿಸಿಕೊಂಡು ಬೆಳೆದವರು. ರಾಮಮನೋಹರ ಲೋಹಿಯಾರವರ ಸಮಾಜವಾದಿ ಸಿದ್ಧಾಂತವನ್ನು ತಲೆತುಂಬಿಕೊಂಡವರು. ಜೀವನದುದ್ದಕ್ಕೂ ಹೋರಾಟವನ್ನೇ ಉಸಿರಾಡಿ, ಹೋರಾಟವೇ ಸಾಮಾಜಿಕ ಬದಲಾವಣೆಗೆ ಮಾರ್ಗವೆಂದು ಕಂಡುಕೊಂಡವರು. ಬಿ.ಕಾಂ, ಬಿ.ಎಲ್ ಪದವಿ ಪಡೆದು, ಸಾಗರದಲ್ಲಿ ವಕೀಲಿ ವೃತ್ತಿಗಿಳಿದು, ಸಮಾಜವಾದಿ ಪಕ್ಷದಿಂದ ರಾಜಕಾರಣಕ್ಕೆ ಕಾಲಿಟ್ಟವರು. ಸಾಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಎರಡು ಬಾರಿ ಸೋತು, ಮೂರನೇ ಬಾರಿಗೆ 1972ರಲ್ಲಿ ಗೆದ್ದು ವಿಧಾನಸೌಧ ಪ್ರವೇಶಿಸಿದವರು. 1973ರಲ್ಲಿ ಸಂಡೂರು ಭೂ ವಿಮೋಚನಾ ಸತ್ಯಾಗ್ರಹದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪೀಕೆಟಿಂಗ್ ಮಾಡಿ ಬಂಧನಕ್ಕೊಳಗಾದವರು.

ಇಂತಹ ಕಾಗೋಡು ತಿಮ್ಮಪ್ಪನವರು ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಸಲ್ಲಿಸಿದ ಸೇವೆ ಶ್ಲಾಘನೀಯ. ಸಚಿವರಾಗಿ ಹಲವು ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ, ಗಳಿಸಿದ ಅನುಭವ ಅಪಾರ. ಅನಿಸಿದ್ದನ್ನು ಆಡುವ ಗುಣವಿದೆ. ಭ್ರಷ್ಟಗೊಂಡ ರಾಜಕಾರಣಿಗಳು ಮತ್ತು ಜಡಗೊಂಡ ಅಧಿಕಾರಿ ವರ್ಗದ ವಿರುದ್ಧ ಆಕ್ರೋಶವಿದೆ. ವ್ಯವಸ್ಥೆ ಬಗ್ಗೆ ಸಿಟ್ಟಿದೆ. ಎಚ್ಚರ ತಪ್ಪಿದ ಸರಕಾರದ ವಿರುದ್ಧವೇ ಸೆಟೆದು ನಿಲ್ಲುವ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ(2013-2018)ದಲ್ಲಿ ವಿಧಾನಸಭಾಧ್ಯಕ್ಷರಾಗಿ, ಕಂದಾಯ ಸಚಿವರಾಗಿ ಕಾರ್ಯ ನಿರ್ವಹಿಸಿದ ರೀತಿ ಅನುಕರಣೀಯವಾಗಿದೆ.    

1972ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಗೋಡು ತಿಮ್ಮಪ್ಪನವರಿಗೆ, ಶೋಷಿತರ, ಹಿಂದುಳಿದವರ, ಬಡವರ ಬಗೆಗಿದ್ದ ಅತೀವ ಕಾಳಜಿ-ಕಳಕಳಿಗಳೇ ಮುಖ್ಯಮಂತ್ರಿ ದೇವರಾಜ ಅರಸು ಅವರಲ್ಲಿಯೂ ಇದ್ದವು. ಇಬ್ಬರ ನಡುವಿನ ವಯಸ್ಸಿನ ಅಂತರ ಹೆಚ್ಚಿದ್ದರೂ ಆಶಯ, ಮನಃಸ್ಥಿತಿ ಒಂದೇ ಆಗಿತ್ತು. ಅದು ಭೂ ಸುಧಾರಣಾ ಕಾಯ್ದೆ ಮತ್ತು ಹಾವನೂರು ವರದಿಯನ್ವಯ ರೂಪಗೊಂಡ ಮೀಸಲಾತಿ ಕಾಯ್ದೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸಾಬೀತಾಗಿತ್ತು. ಆ ದಿನಗಳ ದೇವರಾಜ ಅರಸರ ಆಡಳಿತವನ್ನು ಮೆಲುಕುಹಾಕುತ್ತ ಇಂದಿನ ರಾಜಕಾರಣದೊಂದಿಗೆ ತಳಕು ಹಾಕಿದ್ದು ಇಲ್ಲಿದೆ…

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

* ಅರಸು ಅಂದಾಕ್ಷಣ ನಿಮಗೆ ಥಟ್ಟಂತ ನೆನಪಾಗುವುದೇನು?

ಬಡವರಿಗಾಗಿ ಭೂ ಸುಧಾರಣಾ ಕಾಯ್ದೆ ಮತ್ತು ಹಿಂದುಳಿದ ವರ್ಗಗಳಿಗಾಗಿ ರೂಪಿಸಿದ ಮೀಸಲಾತಿ ಕಾಯ್ದೆಗಳು. ಉಳುವವನೇ ಹೊಲದೊಡೆಯ, ಕಾಗೋಡು ಚಳವಳಿ, ಹಿಂದುಳಿದ ವರ್ಗದ ಮೀಸಲಾತಿಗಾಗಿ ನಡೆಸಿದ ನನ್ನ ಹೋರಾಟಕ್ಕೆ ಮುಕ್ತಿ ತಂದುಕೊಟ್ಟವರು ಅರಸು. ನನ್ನ ಕನಸು ನನಸು ಮಾಡಿದವರು ಅರಸು.

* ದೇವರಾಜ ಅರಸರ ಭೂ ಸುಧಾರಣೆ ಕಾಯ್ದೆ ಜಾರಿಗೆ ಬರುವಲ್ಲಿ ನಿಮ್ಮ ಪಾತ್ರವೇನಿತ್ತು?

ಭೂ ಸುಧಾರಣೆ ಕಾಯ್ದೆ, ಅರಸು ಅವರ ಕ್ರಾಂತಿಕಾರಿ ಕಾಯ್ದೆ. ಅದರಲ್ಲಿ ನನ್ನ ಪಾತ್ರ ಅತ್ಯಲ್ಪ. ಅವರ ಇಚ್ಛಾಶಕ್ತಿ ಅಗಾಧವಾದದ್ದು. ಮೊದಲ ಬಾರಿಗೆ ಸಮಾಜವಾದಿ ಪಕ್ಷದಿಂದ ಶಾಸಕನಾಗಿದ್ದೆ. ನಾನು ಹೋರಾಟ ಮತ್ತು ಸಮಾಜವಾದಿ ಚಿಂತನೆಗಳ ಹಿನ್ನೆಲೆಯಿಂದ ಬಂದವನು. ಹಳ್ಳಿಯ ಬಡ ಗೇಣಿದಾರರ ಬದುಕು ಬವಣೆಯನ್ನು ಬಹಳ ಹತ್ತಿರದಿಂದ ಕಂಡವನು. ಅರಸು ಆಗಲೇ ನುರಿತ, ಅನುಭವಿ ರಾಜಕೀಯ ನಾಯಕರಾಗಿ ರೂಪುಗೊಂಡಿದ್ದರು. ಅವರಿಗೆ ಬಡವರನ್ನು ಕಂಡರೆ ಏನೋ ಕಕ್ಕುಲತೆ, ಅಸಹಾಯಕರ ದನಿಯಾಗಬೇಕೆಂಬ ತುಡಿತ. ಸಾಮಾಜಿಕ ನ್ಯಾಯ ಚಿಂತನೆಯಲ್ಲಿ ಅವರಿಗೆ ಅಪಾರವಾದ ನಂಬಿಕೆ ಮತ್ತು ವಿಶ್ವಾಸವಿತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿ ಅರಸು ಅವರು ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ರಚಿಸಿದ ಜಾಯಿಂಟ್ ಸೆಲೆಕ್ಟ್ ಕಮಿಟಿಗೆ ನನ್ನನ್ನೂ ಒಳಗೊಂಡಂತೆ ಭೈರೇಗೌಡ, ಕಕ್ಕಿಲಾಯ, ಬೊಮ್ಮಾಯಿ, ಸುಬ್ಬಯ್ಯ ಶೆಟ್ಟಿಯಂತಹ ತರುಣರನ್ನು, ಅನುಭವಿಗಳನ್ನು, ಅರ್ಹರನ್ನು ಆಯ್ದು ನೇಮಿಸಿದರು. ನನ್ನ ಪ್ರಕಾರ ಅದು ಅರಸರ ರಾಜಕೀಯ ಪ್ರಬುದ್ಧತೆಗೊಂದು ಉತ್ತಮ ಉದಾಹರಣೆ.

ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ನಮ್ಮ ಸಮಿತಿ ಕೈಗೊಂಡ ಕ್ಷೇತ್ರ ವೀಕ್ಷಣೆ, ಅಹವಾಲು ಸ್ವೀಕಾರ, ಮಾಹಿತಿ ಸಂಗ್ರಹಣೆ, ಸಿದ್ಧಪಡಿಸಿದ ವರದಿ ಬಹಳ ಮುಖ್ಯವಾಗಿತ್ತು. ಮೊದಲ ಹಂತದಲ್ಲಿ ಗೇಣಿದಾರನಿಗೆ ಹಕ್ಕು ನೀಡುವುದು; ಗೇಣಿ ಪದ್ಧತಿಯಲ್ಲಿ ಆಗ ಬೆಳೆದ ಬೆಳೆಯನ್ನು ಅವೈಜ್ಞಾನಿಕ ಪದ್ಧತಿಯಲ್ಲಿ ಹಂಚಿಕೊಳ್ಳಲಾಗುತ್ತಿತ್ತು. ಅದನ್ನು ನಮ್ಮ ಕಮಿಟಿ ಬೆಳೆ ಬದಲಿಗೆ ಕಂದಾಯ ಕಟ್ಟುವ ವಿಧಾನಕ್ಕೆ ಪರಿವರ್ತಿಸಿತು, ಅದು ಎರಡನೇ ಹಂತ; ಮೂರನೇ ಹಂತದಲ್ಲಿ ಭೂ ಟ್ರಿಬ್ಯುನಲ್‌ಗಳನ್ನು ರಚಿಸಿ ನಿಂತ ನಿಲುವಿನಲ್ಲಿಯೇ ಗೇಣಿದಾರನಿಗೆ ಭೂ ಒಡೆತನ ನೀಡಿದ್ದು, ಭೂ ಮಾಲೀಕ ಅಪೀಲು ಹೋಗದಂತೆ ತಡೆಯುವ ಕಾನೂನನ್ನು ಜಾರಿಗೆ ತಂದಿದ್ದು- ವಕೀಲರು, ನ್ಯಾಯಾಧೀಶರನ್ನು ಬದಿಗಿಟ್ಟಿದ್ದು- ಇದೇ ಕ್ರಾಂತಿಕಾರಿ ಕ್ರಮ. ಅದಕ್ಕೆ ಒತ್ತಾಸೆಯಾಗಿ ನಿಂತವರು ಅರಸು. ಇದು ನಾನು ಕಾಗೋಡು ಚಳವಳಿಯಲ್ಲಿ ಕಂಡ ಕನಸಾಗಿತ್ತು. ಅದನ್ನು ಅರಸು ಅವರು ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ನನಸು ಮಾಡುತ್ತಿದ್ದಾಗ, ನಾನೇ ಮಾಡಿದಷ್ಟು ಖುಷಿಯಾಯಿತು.

* ಭೂ ಮಾಲೀಕರು ಸಾಮಾನ್ಯವಾಗಿ ಒಕ್ಕಲಿಗ-ಲಿಂಗಾಯತರೇ ಆಗಿದ್ದರು, ಅವರಿಂದ ವ್ಯಕ್ತವಾದ ವಿರೋಧವನ್ನು ನಿಭಾಯಿಸಿದ ರೀತಿ ಹೇಗಿತ್ತು?

ಹೌದು, ನಮ್ಮ ರಾಜ್ಯದ ಮಟ್ಟಿಗೆ ಲಿಂಗಾಯತರು-ಒಕ್ಕಲಿಗರೇ ಬಹುಸಂಖ್ಯಾತರು, ಬಲಾಢ್ಯರು, ಭೂ ಒಡೆತನ ಹೊಂದಿದ್ದವರು. ರಾಜಕಾರಣವೂ ಅವರ ಹಿಡಿತದಲ್ಲಿಯೇ ಇತ್ತು. ಅಂತಹ ಸಂದರ್ಭದಲ್ಲಿ ಸಣ್ಣ ಸಮುದಾಯದಿಂದ ಬಂದ ದೇವರಾಜ ಅರಸು ಬಹುಸಂಖ್ಯಾತ ಬಲಾಢ್ಯರನ್ನು ಎದುರು ಹಾಕಿಕೊಂಡು ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದರಲ್ಲ, ಅದು ನಿಜವಾದ ಸಾಹಸ. ಅವರ ಅಧಿಕಾರವನ್ನು ಒತ್ತೆಯಿಟ್ಟು, ಪ್ರಬಲ ವಿರೋಧಗಳನ್ನು ಮೆಟ್ಟಿ ನಿಂತು ಜಾರಿಗೆ ತಂದದ್ದು ಅವರ ರಾಜಕೀಯ ಚಾಣಾಕ್ಷತನ.

ನೋಡಿ, ಲಿಂಗಾಯತರ ಕೈಯಲ್ಲಿ ಭೂಮಿ ಇತ್ತು, ಅಧಿಕಾರ ಇತ್ತು, ನಿಜ. ಆದರೆ ಎಲ್ಲ ಲಿಂಗಾಯತರು ಶ್ರೀಮಂತರಾಗಿರಲಿಲ್ಲ, ಎಲ್ಲರೂ ಅಧಿಕಾರ ಹೊಂದಿರಲಿಲ್ಲ. ಲಿಂಗಾಯತರಲ್ಲೇ ಹತ್ತಾರು ಉಪಜಾತಿಗಳಿತ್ತು. ಅವರಲ್ಲಿಯೇ ಶ್ರೇಷ್ಠರೆನಿಸಿಕೊಂಡವರು ಇತರ ಉಪಜಾತಿಯ ಲಿಂಗಾಯತರನ್ನು ನಿರ್ಲಕ್ಷಿಸಿದ್ದರು. ಕೀಳಾಗಿ ಕಾಣುತ್ತಿದ್ದರು. ದೇವರಾಜ ಅರಸು ಅವರು ಇಂತಹ ನಿರ್ಲಕ್ಷಿತರಾದ ಗಾಣಿಗ, ಸಾದರ ಲಿಂಗಾಯತರನ್ನು ಆಯ್ದು ರಾಜಕೀಯ ಸ್ಥಾನಮಾನ ನೀಡಿದರು. ಇದೇ ರೀತಿ ಒಕ್ಕಲಿಗರಲ್ಲಿಯೂ ದಾಸಗೌಡ, ಕುಂಚಟಿಗ, ಹೊಸ ದೇವರ ಒಕ್ಕಲುಗಳಂತ ನಿರ್ಲಕ್ಷಿತ ಒಕ್ಕಲಿಗ ಜಾತಿಯ ಜನರಿಗೆ ಟಿಕೆಟ್ ನೀಡಿ ಗೆಲ್ಲಿಸಿದರು.

ಹಾಗೆಯೇ ಕರಾವಳಿ ಕಡೆ ಸಾಮಾನ್ಯವಾಗಿ ಭಂಟರೆಂದರೆ ಭೂ ಮಾಲೀಕರು. ಅಲ್ಲಿ ಅವರದೇ ದರ್ಬಾರು. ಅರಸು ಅವರಲ್ಲಿಯೇ ಕಂಡೂ ಕಾಣದಂತಿದ್ದ ಸುಬ್ಬಯ್ಯ ಶೆಟ್ಟರನ್ನು ಪಿಕ್ ಮಾಡಿ, ಟಿಕೆಟ್ ನೀಡಿ ಗೆಲ್ಲಿಸಿದರು. ಅಷ್ಟೇ ಅಲ್ಲ ಅವರನ್ನು ಭೂ ಸುಧಾರಣೆ ಖಾತೆಯ ಮಂತ್ರಿ ಮಾಡಿದರು. ಅವರ ಸ್ವಂತ ಭೂಮಿಯನ್ನೇ ಅವರ ಗೇಣಿದಾರರಿಗೆ ಕೊಡಿಸಿ, ಇತರರಿಗೆ ಮಾದರಿಯಾಗುವಂತೆ ನೋಡಿಕೊಂಡರು.

ಇದನ್ನು ಓದಿದ್ದೀರಾ?: ಶಿಕ್ಷಣ ಕ್ಷೇತ್ರದ ಸುಧಾರಣೆಯೇ ಸಂವಿಧಾನದ ಗೆಲುವಿಗೆ ಸೋಪಾನ;‌ ಆದರೆ, ಆಗುತ್ತಿರುವುದೇನು?

ಹೀಗಾಗಿ ಬಹುಸಂಖ್ಯಾತರಲ್ಲಿದ್ದ ನಿರ್ಲಕ್ಷಿತರು ಸಹಜವಾಗಿಯೇ ತಮ್ಮದೇ ಜಾತಿಯ ಬಲಾಢ್ಯರ ವಿರುದ್ಧವಿದ್ದು, ಅರಸು ಅವರ ಬೆನ್ನಿಗೆ ನಿಂತರು. ಇನ್ನು ಬಡ ಗೇಣಿದಾರರು, ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರಂತೂ ಅರಸು ಅವರ ಪರವಾಗಿದ್ದರು. ಹೀಗಾಗಿ ಈ ದೊಡ್ಡ ಸಮೂಹದ ಬೆಂಬಲ ಗಳಿಸಿದ ಅರಸು, ಆ ಬಲದಿಂದ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದರು. ಹೀಗೆ ಜನರ ನಂಬಿಕೆಗೆ ಪಾತ್ರವಾಗುವುದು, ಅವರ ಮನಸ್ಸನ್ನು ಗೆಲ್ಲುವುದು ಸಾಮಾನ್ಯ ರಾಜಕಾರಣಿಗೆ ಸಾಧ್ಯವಿಲ್ಲದ ಗುಣ. ಅದು ಅರಸು ಅವರಲ್ಲಿತ್ತು. ಇದ್ದರಷ್ಟೇ ಸಾಲದು, ಅದನ್ನು ಬಳಸಿಕೊಂಡು ಜನಪರ ಕೆಲಸಗಳನ್ನು ಮಾಡಿದ್ದು ಅವರ ಹೆಚ್ಚುಗಾರಿಕೆ. ಹಾಗಾಗಿಯೇ ಅವರು ಇತಿಹಾಸದ ಪುಟಗಳಲ್ಲಿ ದಾಖಲಾದರು.

* ಭೂ ಸುಧಾರಣೆ ಕಾಯ್ದೆ, ಈ ಹಿಂದೆ ಕಾಂಗ್ರೆಸ್‌ನ ಕಾರ್ಯಕ್ರಮವೇ ಆಗಿತ್ತಲ್ಲವೆ?

ಭೂ ಸುಧಾರಣೆ ಕಾಯ್ದೆಯ ಬಗ್ಗೆ ಬಿ.ಡಿ. ಜತ್ತಿ ಬಹಳ ಹಿಂದೆಯೇ ಮಾತನಾಡಿದ್ದರು. ಆದರೆ ಕಾರ್ಯರೂಪಕ್ಕೆ ತರುವುದು ಸಾಧ್ಯವಾಗಿರಲಿಲ್ಲ. ಕಾಗೋಡು ಚಳವಳಿಯೂ ಅದೇ ಆಗಿತ್ತು. ಇನ್ನು ಇಂದಿರಾಗಾಂಧಿಯವರ ಗರೀಬಿ ಹಠಾವೋ, 10-20 ಅಂಶದ ಕಾರ್ಯಕ್ರಮಗಳೆಲ್ಲ ಬಡವರ, ಶೋಷಿತರ ಪರವಾಗಿಯೇ ಇದ್ದವು. ಇವು ಇಡೀ ದೇಶಕ್ಕಾಗಿ ರೂಪಿಸಿದ ಕಾರ್ಯಕ್ರಮಗಳಾಗಿದ್ದವು. ಆಶ್ಚರ್ಯವೆಂದರೆ, ದೇಶದ ಇತರ ರಾಜ್ಯಗಳಲ್ಲಿ ಈ ಕಾರ್ಯಕ್ರಮಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರದಿದ್ದರೂ, ಕರ್ನಾಟಕದಲ್ಲಿ ಜಾರಿಗೆ ಬಂದವು. ಅದಕ್ಕೆ ಕಾರಣ ದೇವರಾಜ ಅರಸು. ಇಂದಿರಾ ಗಾಂಧಿಯವರ ಆಶಯವೇ ಅರಸು ಅವರದ್ದೂ ಆಗಿದ್ದರಿಂದ, ಆ ಕಾರ್ಯಕ್ರಮಗಳೆಲ್ಲ ಇಲ್ಲಿ ಜಾರಿಗೆ ಬಂದವು, ಯಶಸ್ವಿಯೂ ಆದವು. ಅರಸರ ಎಲ್ಲ ಕಾರ್ಯಕ್ರಮಗಳ ಹಿಂದೆ ಇಂದಿರಾ ಗಾಂಧಿಯವರ ಅಭಯ ಹಸ್ತವಿತ್ತು. ಅದೇ ಅವರ ದೊಡ್ಡ ಶಕ್ತಿಯಾಗಿತ್ತು.

* ದೇವರಾಜ ಅರಸರ ಕಾಲದ ಶಾಸನ ಸಭೆ ನೆನಪು ಮಾಡಿಕೊಳ್ಳುವುದಾದರೆ…?

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ವಿರೋಧ ಪಕ್ಷ ಪ್ರಬಲವಾಗಿತ್ತು. ಎಚ್.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ, ಎ.ಕೆ. ಸುಬ್ಬಯ್ಯರಂತಹ ಘಟಾನುಘಟಿಗಳು ವಿರೋಧ ಪಕ್ಷದ ನಾಯಕರಾಗಿದ್ದರು. ಅಷ್ಟೇ ಅಲ್ಲ, ದೇವರಾಜ ಅರಸರಿಗೆ ತಮ್ಮದೇ ಪಕ್ಷವಾದ ಕಾಂಗ್ರೆಸ್‌ನಲ್ಲಿಯೇ ವಿರೋಧವಿತ್ತು. ಪ್ರಬಲ ಕೋಮಿನ ನಾಯಕರಾಗಿದ್ದ ಕೆ.ಎಚ್. ಪಾಟೀಲ್ ಮಂತ್ರಿಯಾಗಿದ್ದರೂ, ಅರಸು ಅವರ ವಿರುದ್ಧವಿದ್ದರು. ಹೀಗೆ ಒಳಗೆ ಮತ್ತು ಹೊರಗೆ, ಎರಡೂ ಕಡೆಯಿಂದ ವಿರೋಧವಿದ್ದರೂ ಶಾಸನ ಸಭೆಯನ್ನು ಅರಸರು ಜಾಣ್ಮೆ, ಬುದ್ಧಿವಂತಿಕೆ ಮತ್ತು ಮುತ್ಸದ್ದಿತನದಿಂದ ಸಮರ್ಥವಾಗಿ ನಿಭಾಯಿಸುತ್ತಿದ್ದರು.

ಒಂದು ಸಲ ನಾನು ಶಾಸನ ಸಭೆಯಲ್ಲಿ ರೈತರಿಗೆ ಪಾಣಿ ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ಗಂಟೆಗಳ ಕಾಲ ನಿರಂತರವಾಗಿ ಮಾತನಾಡಿದೆ. ನೀವು ನಂಬಲ್ಲ, ಮುಖ್ಯಮಂತ್ರಿ ದೇವರಾಜ ಅರಸು ಮೂರು ಗಂಟೆಗಳ ಕಾಲ ಕೂತು ನನ್ನ ಮಾತನ್ನು ಕಿವಿಗೊಟ್ಟು ಕೇಳಿದರು. ನನ್ನಂತಹ ಹೊಸ ಶಾಸಕನಿಗೆ ಅಷ್ಟು ಸಮಯ ಕೊಡುವುದು, ನಮ್ಮಂತಹವರ ಮಾತನ್ನು ಮನಸ್ಸಿಟ್ಟು ಕೇಳುವುದು ಸಾಮಾನ್ಯವಾದ ಸಂಗತಿಯಲ್ಲ. ವಿರೋಧ ಪಕ್ಷದ ನಾಯಕ ಎಚ್.ಡಿ. ದೇವೇಗೌಡರು ಆಪ್ಯಾಯಮಾನ ಎಂದು ಶ್ಲಾಘಿಸಿದರು. ಮಿಕ್ಕವರು ಮುಖ್ಯಮಂತ್ರಿಗಳ ಮೇಲೆ ಮೋಡಿ ಮಾಡಿಬಿಟ್ಟಲ್ಲಪ್ಪ ಎಂದು ಕಿಚಾಯಿಸಿದರು.

ಮುಖ್ಯಮಂತ್ರಿ ಹೀಗೆ ಕೂತು ಸಂಯಮದಿಂದ ಕೇಳುವುದು, ಸಿಕ್ಕ ಅವಕಾಶವನ್ನು ಶಾಸಕ ಸದುಪಯೋಗಪಡಿಸಿಕೊಳ್ಳುವುದು, ಅದು ರಾಜ್ಯದ ಜನರ ಒಳಿತಿಗಾಗಿ ಶಾಸನದ ರೂಪ ಪಡೆಯುವುದು ಬಹಳ ಮುಖ್ಯ. ಶಾಸನ ಸಭೆ ಅಂದರೆ ರಾಜ್ಯದ ಆಗುಹೋಗುಗಳನ್ನು ಚರ್ಚಿಸುವ, ಕಾಯ್ದೆ ಕಾನೂನುಗಳನ್ನು ಜಾರಿಗೆ ತರುವ ಪವಿತ್ರವಾದ ಸ್ಥಳ. ನಮ್ಮ ಈಗಿನ ಶಾಸಕರಿಗೆ ಆ ಪರಿಜ್ಞಾನವೇ ಇಲ್ಲ. ಮಂತ್ರಿಗಳಿಗೂ ಆ ಜಾಗದ ಮಹತ್ವ, ಮಹಿಮೆ ಅರ್ಥವಾಗಿಲ್ಲ. ಆರೂವರೆ ಕೋಟಿ ಜನಕ್ಕೆ ಸಿಗದ ಸ್ಥಾನಮಾನ ತಮಗೆ ಸಿಕ್ಕಿದೆ, ಅದನ್ನು ನನ್ನ ಆರಿಸಿ ಕಳುಹಿಸಿದ ಜನರಿಗಾಗಿ ಮೀಸಲಿಟ್ಟು, ಅವರ ಒಳಿತಿಗಾಗಿ ವಿನಿಯೋಗಿಸಬೇಕೆಂಬ ಕನಿಷ್ಠ ಕಾಳಜಿಯೂ ಕಾಣುತ್ತಿಲ್ಲ. ಅಮೂಲ್ಯ ಸಮಯ ಹಾಳು ಮಾಡುವುದನ್ನು ನೋಡಿ ತುಂಬಾ ವ್ಯಥೆಯಾಗುತ್ತೆ, ಖಾಲಿ ಸದನವನ್ನು ನೋಡಿ ಮೈ ಉರಿದುಹೋಗುತ್ತೆ, ಜನಪ್ರತಿನಿಧಿಗಳು ಆಡುವ ಆಟಕ್ಕೆ ಸಿಟ್ಟು ಬರುತ್ತೆ. ಅತ್ಯುತ್ತಮ ಸಂಸದೀಯ ಪಟುವಾಗಿ ಪುಟಿದೇಳಬಹುದಾದ ಅಪೂರ್ವ ಅವಕಾಶವನ್ನು ಕಳೆದುಕೊಳ್ಳುವುದನ್ನು ನೋಡಿ ಅಯ್ಯೋ ಅನಿಸುತ್ತದೆ.

* ಇವತ್ತಿನ ರಾಜಕಾರಣಿಗಳು ದೇವರಾಜ ಅರಸರಿಂದ ಕಲಿಯಬೇಕಾದ್ದೇನು?

ತುಂಬಾ ಇದೆ. ದೇವರಾಜ ಅರಸು ಅವರ ಕಾರ್ಯಕ್ರಮಗಳು, ಆಡಳಿತಾತ್ಮಕ ನಿಲುವುಗಳು, ಕಾರ್ಯರೂಪಕ್ಕೆ ತಂದ ಕಾಯ್ದೆಗಳು, ಅದರಿಂದಾದ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗಳು… ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಸ್ವಾರ್ಥರಹಿತ, ದ್ವೇಷರಹಿತ ರಾಜಕಾರಣ. ಅವರ ಜನಪರ ನಿಲುವು. ಬಡವರನ್ನು ಕಂಡರೆ ಅಯ್ಯೋ ಅನ್ನುವುದಲ್ಲ, ಅವರಿದ್ದಲ್ಲಿಗೇ ಹೋಗಿ ಧೈರ್ಯ, ಸ್ಥೈರ್ಯ ತುಂಬಿ ಬದುಕುವ ಭರವಸೆ ನೀಡುವುದಿತ್ತಲ್ಲ, ಅದು ಅರಸರ ವಿಶಿಷ್ಟ ಗುಣ. ರಾಜ್ಯದ ಅಭಿವೃದ್ಧಿಯ ಬಗೆಗಿದ್ದ ದೂರದೃಷ್ಟಿ, ಸಾಮಾಜಿಕ ಬದಲಾವಣೆಗಳ ಬಗೆಗಿದ್ದ ಚಿಂತನೆಗಳನ್ನು ನಮ್ಮ ಈಗಿನ ರಾಜಕಾರಣಿಗಳು ಮೈಗೂಡಿಸಿಕೊಳ್ಳಬೇಕಿದೆ. ಆಮೇಲೆ ಅರಸರು ಚುನಾವಣೆ, ಸೋಲು-ಗೆಲುವುಗಳಿಗೆ ಎಂದೂ ತಲೆ ಕೆಡಿಸಿಕೊಂಡವರಲ್ಲ. ರಾಜಕಾರಣವೆಂದರೆ ಅದೆಲ್ಲ ಮಾಮೂಲಿ ಎಂದೇ ಭಾವಿಸಿದ್ದರು. ಆದರೆ ಇವತ್ತಿನ ರಾಜಕಾರಣಿಗಳಿಗೆ ಸಂಘಟನೆಯ ಸ್ಕಿಲ್ ಇಲ್ಲ. ಕ್ರಿಯಾಶೀಲತೆ ಇಲ್ಲ. ಕಲಿಕಾ ಸಂಸ್ಕೃತಿ ಇಲ್ಲ. ಚುನಾವಣಾ ಸಂಸ್ಕೃತಿ ಬಿಟ್ಟರೆ ಇನ್ನೊಂದು ಗೊತ್ತಿಲ್ಲ.

(ಕೃಪೆ: ನಮ್ಮ ಅರಸು, ಪ್ರ: ಪಲ್ಲವ ಪ್ರಕಾಶನ, ಸಂಪರ್ಕ: 94803 53507)

Basavaraju Megalkeri
+ posts

ಲೇಖಕ, ಪತ್ರಕರ್ತ

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

1 COMMENT

  1. ಈ ಸಂದರ್ಶನ ಈಗಿನ ನಾಯಕರಿಗೆ ಮಾದರಿಯಾಗಲಿ…ಸಂದರ್ಶಕರಿಗೆ ಧನ್ಯವಾದಗಳು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು ಅಭಿವೃದ್ಧಿಗೆ ನಯಾಪೈಸೆ ಬಿಡುಗಡೆ ಮಾಡದ ಸರ್ಕಾರ: ಆರ್.ಅಶೋಕ್

ಬೆಂಗಳೂರು ನಗರದ ಅಭಿವೃದ್ಧಿಗೆ ರಾಜ್ಯದ ಕಾಂಗ್ರೆಸ್ ಸರಕಾರ ಒಂದು ನಯಾಪೈಸೆಯನ್ನೂ ಬಿಡುಗಡೆ...

ಮತಗಟ್ಟೆಯ ಮತದಾನದ ಅಂಕಿಅಂಶ ನೀಡುವಂತೆ ಚುನಾವಣಾ ಆಯೋಗಕ್ಕೆ ಸೂಚನೆ ನೀಡಲು ಸುಪ್ರೀಂ ನಕಾರ

ಪ್ರತಿ ಮತಗಟ್ಟೆಯ ಮತದಾನದ ಅಂಕಿಅಂಶಗಳನ್ನು ಒದಗಿಸುವ ಫಾರ್ಮ್‌ 17ಸಿ ಪ್ರತಿಗಳನ್ನು ತನ್ನ...

ವಿಜಯಪುರ | ರೈತರ ಸಮಸ್ಯೆಗಳ ಪರಿಹಾರಕ್ಕೆ ರೈತಸಂಘ ಆಗ್ರಹ

ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು...

ಮೇ ಸಾಹಿತ್ಯ ಮೇಳ | ಹುಚ್ಚಮ್ಮ ಚೌಧರಿ ಕುಣಿಕೇರಿಗೆ ‘ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ’

ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ...