ಶಿಕ್ಷಣ ಕ್ಷೇತ್ರದ ಸುಧಾರಣೆಯೇ ಸಂವಿಧಾನದ ಗೆಲುವಿಗೆ ಸೋಪಾನ;‌ ಆದರೆ, ಆಗುತ್ತಿರುವುದೇನು?

Date:

ಸೇವಾ ಹಿರಿತನಕ್ಕಿಂತ ವಿಷಯದ ಮೇಲಿನ ತಜ್ಞತೆ ಹಾಗು ಹೊಣೆಗಾರಿಕೆಗಳು ಅಕಾಡೆಮಿಕ್ ಬಾಡಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಡಿಗ್ರಿಗಿಂತ ಹೆಚ್ಚು ಕ್ರಿಯೇಟಿವ್, ಕ್ರಿಟಿಕಲ್ ಹಾಗು ಮುನ್ನುಗುವ ಛಾತಿಯುಳ್ಳ ಮಾನವ ಸಂಪನ್ಮೂಲ ಸೃಷ್ಟಿಗೆ ಒತ್ತು ನೀಡಬೇಕಾಗಿದೆ. ಇಂತಹ ಮಾನವ ಸಂಪನ್ಮೂಲ ಮಾತ್ರ ತನ್ನ ಕಣ್ಣ ಮುಂದಾಗುವ ಅನ್ಯಾಯಗಳನ್ನು ಪ್ರಶ್ನಿಸುವ ಮತ್ತು ಸೋತವರೊಂದಿಗೆ ನಿಲ್ಲುವ ಧೈರ್ಯ ಪ್ರದರ್ಶಿಸಲು ಸಾಧ್ಯ

ನಮ್ಮ ಸಂವಿಧಾನದ ಉದ್ದೇಶ ಜಾತ್ಯತೀತ, ಪ್ರಜಾಪ್ರಭುತ್ವ, ಸಮಾಜವಾದಿ ಸಮಾಜ ರೂಪಿಸುವುದು. ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹಾಗು ಮಾಧ್ಯಮ ರಂಗಗಳು ಸಂವಿಧಾನ ಉದ್ದೇಶಿಸಿರುವ ಸಮಾಜವನ್ನು ರೂಪಿಸುವ ಹೊಣೆಗಾರಿಕೆಯನ್ನು ಹೊಂದಿವೆ. ಈ ನಾಲ್ಕು ಅಂಗಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲರನ್ನೂ ಶಿಕ್ಷಣ ಸೃಷ್ಟಿಸುತ್ತದೆ. ಶಾಸಕ, ನ್ಯಾಯಧೀಶ, ಅಧಿಕಾರಿ, ಪತ್ರಕರ್ತರು ಮತ್ತು ನಾಲ್ಕು ಅಂಗಗಳಲ್ಲಿ ದುಡಿಯುವ ಎಲ್ಲರನ್ನೂ ಶಿಕ್ಷಣ ಸೃಷ್ಟಿಸುತ್ತದೆ. ಅಷ್ಟು ಮಾತ್ರವಲ್ಲ ವೈದ್ಯ, ಎಂಜಿನಿಯರ್‌, ಉಪನ್ಯಾಸಕ, ಗುಮಾಸ್ತ, ಪೊಲೀಸ್‌ ಹೀಗೆ ಸಮಾಜದ ವಿವಿಧ ಸಂಸ್ಥೆಗಳಲ್ಲಿ ದುಡಿಯುವ ಎಲ್ಲರನ್ನೂ ಶಿಕ್ಷಣ ಸೃಷ್ಟಿಸುತ್ತದೆ.

ಇವರೆಲ್ಲರಿಗೆ ಜಾತ್ಯತೀತ, ಪ್ರಜಾಪ್ರಭುತ್ವ, ಸಮಾಜವಾದಿ ಸಮಾಜ ರೂಪಿಸಲು ಅವಶ್ಯವಿರುವ ಪರಿಣಿತಿ ಹಾಗು ಮೌಲ್ಯಗಳನ್ನು ನೀಡುವುದು ಶಿಕ್ಷಣದ ಕರ್ತವ್ಯ. ಆದರೆ ಸಂವಿಧಾನ ಅನುಷ್ಟಾನಗೊಳಿಸುವ ಜವಾಬ್ದಾರಿ ಹೊತ್ತ ಸರಕಾರಗಳು ಶಿಕ್ಷಣವನ್ನು ಈ ದೃಷ್ಟಿಯಿಂದ ನೋಡಿವಿಯೇ? ಶಿಕ್ಷಣ ನೀತಿಯನ್ನು ರೂಪಿಸುವಾಗ ಭಾಷಾ ಪ್ರಶ್ನೆಗಳು, ಪ್ರಾದೇಶಿಕ ಪ್ರಶ್ನೆಗಳು, ಶಿಕ್ಷಣ ಸಂಸ್ಥೆಗಳ ಒಡೆತನ (ಪಬ್ಲಿಕ್ ವರ್ಸಸ್ ಪ್ರೈವೇಟ್), ಸ್ಕಿಲ್ ಪ್ರಶ್ನೆಗಳು, ಮೌಲ್ಯದ ಪ್ರಶ್ನೆಗಳು ಬಿಡಿಬಿಡಿಯಾಗಿ ಚರ್ಚೆಯಲ್ಲಿರುತ್ತವೆಯೇ ಹೊರತು ಶಿಕ್ಷಣದ ಮೂಲ ಉದ್ದೇಶ – ಸಂವಿಧಾನ ಉದ್ದೇಶಿಸಿರುವ ಸಮಾಜ ರೂಪಿಸುವ ಉದ್ದೇಶ- ಇಡಿಯಾಗಿ ಚರ್ಚೆಯಲ್ಲಿರುವುದೇ ಇಲ್ಲ. ಇದರಿಂದಾಗಿ ಉನ್ನತ ಶಿಕ್ಷಣ ಅದರಲ್ಲೂ ಸಂಶೋಧನೆ, ಬೋಧನೆ, ಜ್ಞಾನದ ಅನ್ವಯಿಕತೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ವಹಣ ಕ್ಷೇತ್ರಗಳಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಗಣನೀಯ ಬದಲಾವಣೆ ಮಾತ್ರ ಸಂವಿಧಾನ ಅನುಷ್ಠಾನದ ಹಾದಿಯನ್ನು ಸುಗಮಗೊಳಿಸಬಹುದೆಂದು ವಾದಿಸುವ ಲೇಖನ ಇದು.

ಜ್ಞಾನ ಸೃಷ್ಟಿಯ ಸಮಸ್ಯೆಗಳು
ಜ್ಞಾನವನ್ನು ಸತ್ಯವೆಂದು ಸಾಧಿಸಿ ತೋರಿಸಬಹುದಾದ ನಂಬಿಕೆಯೆಂದು ತತ್ತ್ವಜ್ಞಾನಿಗಳು ವ್ಯಾಖ್ಯಾನಿಸುತ್ತಾರೆ. ಸತ್ಯವೆಂದು ಸಾಧಿಸುವ ತೋರಿಸುವ ಎರಡು ಮೂರು ವಿಧಾನಗಳಿವೆ -ವಿಜ್ಞಾನದ ವಿಧಾನ, ಸಮಾಜವಿಜ್ಞಾನ/ಮಾನವಿಕದ ವಿಧಾನ ಮತ್ತು ಸ್ಥಳೀಯ ಜ್ಞಾನ ಪರಂಪರೆಯ ವಿಧಾನ. ಪ್ರಶ್ನಿಸಿ, ಪರೀಕ್ಷಿಸಿ, ಅವಲೋಕಿಸಿ, ವಿಶ್ಲೇಷಿಸಿ ತೀರ್ಮಾನಕ್ಕೆ ಬರುವುದು ವಿಜ್ಞಾನ ಮತ್ತು ಸಮಾಜವಿಜ್ಞಾನ ವಿಧಾನಗಳ ತಳಹದಿ. ಆದರೆ ಸ್ಥಳೀಯ ಜ್ಞಾನಪರಂಪರೆ ಪ್ರಶ್ನೆ, ಪರೀಕ್ಷೆಗಳಿಂದ ನಂಬಿಕೆಗೆ ಹೆಚ್ಚು ಮಹತ್ವ ನೀಡುತ್ತಿದೆ. ಮೂರೂ ವಿಧಾನಗಳು ಒಂದೆರಡು ಗಂಭೀರ ಸಮಸ್ಯೆ ಎದುರಿಸುತ್ತಿವೆ. ಒಂದು, ವಿಜ್ಞಾನ, ಸಮಾಜವಿಜ್ಞಾನ ಹಾಗು ಸ್ಥಳೀಯ ಜ್ಞಾನ ಪರಂಪರೆಗಳು ಪರಸ್ಪರ ಸಂವಾದ ನಡೆಸುತ್ತಿಲ್ಲ ಮತ್ತು ಸ್ಥಳೀಯ ಜ್ಞಾನಪರಂಪರೆ ಪ್ರಶ್ನೆ, ಪರೀಕ್ಷೆ, ಪರಾಮರ್ಶೆಗೆ ಒಡ್ಡಿಕೊಳ್ಳಲು ತಯಾರಿಲ್ಲ. ಈ ಎರಡೂ ಕೊರತೆಗಳನ್ನು ಸ್ವಲ್ಪ ವಿವರಿಸಬೇಕಾಗಿದೆ. ಮಾರುಕಟ್ಟೆ ಬೇಡಿಕೆಗಳು ವಿಜ್ಞಾನ, ಸಮಾಜವಿಜ್ಞಾನ ಸಂಶೋಧನೆಯ ಆದ್ಯತೆಗಳನ್ನು ಪ್ರಭಾವಿಸಿದಷ್ಟು ತಳಸ್ತರದ ಜನರ ಬದುಕು ಪ್ರಭಾವಿಸುತ್ತಿಲ್ಲ. ಅಂದರೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ವಿಷಯದ ಬಗ್ಗೆ ಅಧ್ಯಯನ ನಡೆಸಿದರೆ ಸಂಶೋಧಕರಿಗೆ ಉದ್ಯೋಗ ಪಡೆಯುವುದು ಸಮಸ್ಯೆಯಾಗುವುದಿಲ್ಲ ಎನ್ನುವ ಗ್ರಹಿಕೆ ಕೆಲಸ ಮಾಡುವುದು. ತೊಂಬತ್ತರ ನಂತರ ಮಾರುಕಟ್ಟೆ ನಿರ್ದೇಶಿತ ಅಭಿವೃದ್ಧಿ ಜಾರಿ ಬಂದ ನಂತರ ಈ ಟ್ರೆಂಡ್ ಹೆಚ್ಚಾಗಿದೆ. ಈ ಟ್ರೆಂಡ್‍ನ ಆಪಾಯ ಮಾರುಕಟ್ಟೆ ಬಗ್ಗೆ ಇರುವ ಗ್ರಹಿಕೆಯಲ್ಲಿ ಅಡಗಿದೆ.

ನಿಯೋ ಲಿಬರಲ್ ಚಿಂತಕರು ಮಾರುಕಟ್ಟೆಯನ್ನು ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ದೇವರ ರೂಪದಲ್ಲಿ ಮಂಡಿಸಿದ್ದಾರೆ. ಅಷ್ಟು ಮಾತ್ರವಲ್ಲ ಮಾರುಕಟ್ಟೆಯಲ್ಲಿ ಎಲ್ಲವೂ ಬೇಡಿಕೆ ಪೂರೈಕೆ ನೆಲೆಯಲ್ಲಿಯೇ ತೀರ್ಮಾನವಾಗುವುದು. ಮಾರುಕಟ್ಟೆಯ ಬೇಡಿಕೆ ಪೂರೈಕೆಗಳ ಬಲವನ್ನು ಸರಕಾರ ಬಿಡಿ ದೇವರು ಬಂದ್ರು ಏರುಪೇರು ಮಾಡಲು ಸಾಧ್ಯವಿಲ್ಲ ಎನ್ನುವ ಚಿತ್ರಣ ಇದೆ. ಇಂತಹ ಬುರಡೆ ಪುರಾಣೆಗಳನ್ನು ನಮ್ಮ ಪಠ್ಯಗಳು, ಅರ್ಥ ಶಾಸ್ತ್ರಜ್ಞರು, ಸರಕಾರಗಳು, ಮಾಧ್ಯಮಗಳು ಹೇಳುತ್ತಲೇ ಇವೆ. ಇದು ಸರಿಯಲ್ಲ. ಮಾರುಕಟ್ಟೆ ಇತರ ಸಂಸ್ಥೆಗಳ ರೀತಿಯಲ್ಲಿ ಮನುಷ್ಯ ಸೃಷ್ಟಿಸಿದ ಸಂಸ್ಥೆ. ನಾವು ಚುನಾಯಿಸಿದ ನಮ್ಮ ಪ್ರತಿನಿಧಿಗಳೇ ಮಾರುಕಟ್ಟೆಯನ್ನು ಸೃಷ್ಟಿಸುವುದು. ಮಾರುಕಟ್ಟೆಯ ಬೇಡಿಕೆ ಪೂರೈಕೆಗಳನ್ನು ಸರಕಾರ ತನ್ನ ಆದ್ಯತೆ ಅನುಸಾರ ಏರುಪೇರು ಮಾಡುತ್ತದೆ. ಮಾರುಕಟ್ಟೆಯಲ್ಲಿ ಖರೀದಿಸುವ ಶಕ್ತಿ ಅಥವಾ ಬೇಡಿಕೆಯುಳ್ಳ ಸರಕುಸೇವೆಗಳು ಮಾತ್ರ ಮುಖ್ಯ. ಜಾತಿ, ಲಿಂಗ, ಧರ್ಮ ಇತ್ಯಾದಿಗಳೆಲ್ಲ ಮುಖ್ಯ ಅಲ್ಲ ಎನ್ನುವ ಗ್ರಹಿಕೆಯೂ ಇದೆ. ಇದು ಕೂಡ ಸುಳ್ಳು. ಏಕೆಂದರೆ ಜಾತಿ, ಲಿಂಗ, ಧರ್ಮಗಳಿಗೂ ಖರೀದಿಸುವ ಶಕ್ತಿಗೂ ನೇರ ಸಂಬಂಧ ಇದೆ. ಇವತ್ತು ಖರೀದಿಸುವ ಶಕ್ತಿ ಶ್ರೇಣಿಯ ಮೇಲಿದ್ದವರಲ್ಲಿದ್ದಷ್ಟು ಕೆಳಗಿದ್ದವರಲ್ಲಿ ಇಲ್ಲ, ಪುರುಷರಲ್ಲಿದ್ದಷ್ಟು ಮಹಿಳೆಯರಲ್ಲಿ ಇಲ್ಲ ಮತ್ತು ಬಹುಸಂಖ್ಯಾತರಲಿದ್ದಷ್ಟು ಅಲ್ಪಸಂಖ್ಯಾತರಲ್ಲಿ ಇಲ್ಲ. ಸರಕುಸೇವೆಗಳ ಬೇಡಿಕೆಗಳೇ ಮಾರುಕಟ್ಟೆಯಲ್ಲಿ ಮುಖ್ಯವಾಗುತ್ತಿದ್ದರೆ ದಲಿತರ ಹೊಟೇಲೆಂದು ಬೋರ್ಡ್ ಹಾಕಿ ವ್ಯಾಪಾರ ಮಾಡುವುದು ಸಮಸ್ಯೆ ಆಗಬಾರದು. ಆದರೆ ಸಮಸ್ಯೆ ಆಗುತ್ತಿದೆ. ಇವೇ ಕಾರಣಗಳಿಂದ ಸಂಶೋಧನೆಗಳ ಸಂಖ್ಯೆ ಹೆಚ್ಚುತ್ತಾ ಹೋದರೂ ಜನಸಾಮಾನ್ಯರ ಬದುಕಿನ ಗುಣಮಟ್ಟದಲ್ಲಿ ವಿಶೇಷ ಪರಿವರ್ತನೆ ಕಾಣಲು ಸಾಧ್ಯವಾಗುತ್ತಿಲ್ಲ.

ಬಹುತೇಕರು ಇಂದು ಕೂಡ ತಮ್ಮ ಕೃಷಿ, ವ್ಯಾಪಾರ, ಉದ್ದಿಮೆ, ಸೇವಾವಲಯದ ಚಟುವಟಿಕೆಗಳನ್ನು, ತಮ್ಮ ಸಾಮಾಜಿಕ ಹಾಗು ಸಾಂಸ್ಕೃತಿಕ ಬದುಕನ್ನು ಸ್ಥಳೀಯ ಜ್ಞಾನಪರಂಪರೆಯ ನೆಲೆಗಟ್ಟಿನಲ್ಲಿಯೇ ಕಟ್ಟಿಕೊಂಡಿದ್ದಾರೆ. ಆದರೆ ಇವು ಎರಡು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿವೆ. ಒಂದು, ಇವಕ್ಕೆ ಭಾರತೀಯ ಜ್ಞಾನಪರಂಪರೆಯ ಸ್ಥಾನಮಾನ ಇಲ್ಲ. ವೇದ, ಉಪನಿಷತ್, ರಾಮಾಯಣ, ಮಹಾಭಾರತ ಇತ್ಯಾದಿಗಳೆಲ್ಲ ಮಹಾಕಾವ್ಯಗಳ ಸ್ಥಾನಮಾನ ಹೊಂದಿವೆ. ಆದರೆ ಮಂಟೇಸ್ವಾಮಿ, ಮಲೆಮದೇಶ್ವರ, ಜುಂಜಪ್ಪ ಕಾವ್ಯಗಳಿಗೆ ಮಹಾಕಾವ್ಯಗಳ ಸ್ಥಾನಮಾನ ಇಲ್ಲ. ಎರಡು, ಇವು ಪ್ರಶ್ನೆ, ಪ್ರಯೋಗ, ಪರಾಮರ್ಶೆಗಳಿಗೆ ಒಡ್ಡಿಕೊಳ್ಳದ ಕಾರಣ ಆರ್ಥಿಕವಾಗಿ ಯಶಸ್ಸು ಕಾಣುತ್ತಿಲ್ಲ. ನಮ್ಮಲ್ಲಿರುವ ಕೃಷಿ, ವ್ಯಾಪಾರ, ಉದ್ದಿಮೆಗಳಲ್ಲಿ ಮುಕ್ಕಾಲು ಭಾಗ ಸಣ್ಣ ಮತ್ತು ಅತೀ ಸಣ್ಣ ಕೃಷಿ, ವ್ಯಾಪಾರ, ಉದ್ದಿಮೆಗಳೇ. ಸಣ್ಣ ಕೃಷಿಕರು ರಸಗೊಬ್ಬರ, ಹಟ್ಟಿಗೊಬ್ಬರ ಬಳಸಿಕೊಂಡು ವೈಜ್ಞಾನಿಕವಾಗಿ ಕೃಷಿ ಮಾಡಿದರೆ ಕನಿಷ್ಠ ಎಕರೆಗೆ ರೂ.21000ದಷ್ಟು ಆದಾಯ ಗಳಿಸಬಹುದು. ಆದರೆ ವೈಜ್ಞಾನಿಕವಾಗಿ ಕೃಷಿ ಮ್ಯಾನೇಜ್ ಮಾಡದಿರುವುದರಿಂದ ಅತ್ಯಂತ ಕಡಿಮೆ ಆದಾಯ (ರೂ.7000ದಷ್ಟು) ಪಡೆಯುತ್ತಿದ್ದಾರೆ. ಇದೇ ರೀತಿ ಸಣ್ಣಪುಟ್ಟ ವ್ಯಾಪಾರ ಉದ್ದಿಮೆಗಳು ತಮ್ಮ ಹಣಕಾಸು, ಮಾರಾಟ, ಉತ್ಪಾದನೆ ಇತ್ಯಾದಿಗಳನ್ನು ಆಧುನಿಕ ಮ್ಯಾನೇಜ್‍ಮೆಂಟ್ ತತ್ವಗಳಿನುಸಾರ ನಡೆಸುತ್ತಿಲ್ಲ. ಇದರಿಂದಾಗಿ ಇವರ ಆದಾಯ ಕೂಡ ಇವರ ಶ್ರಮಕ್ಕೆ ಪೂರಕವಾಗಿಲ್ಲ.


ತಳಸ್ತರದ ಜನರಿಗೆ ತಮ್ಮ ಸಾಮಾಜಿಕ, ಸಾಂಸ್ಕೃತಿಕ ಬದುಕಿನಲ್ಲಿ ಬ್ರಾಹ್ಮಣ್ಯದ ಕಣ್ಣಲ್ಲಿ ಲೋಕನೋಡುವ ಅಭ್ಯಾಸದಿಂದ ಹೊರಬರಲಾಗುತ್ತಿಲ್ಲ. ಇದನ್ನು ಸ್ವಲ್ಪ ವಿವರಿಸಬೇಕಾಗಿದೆ. ಬ್ರಾಹ್ಮಣ್ಯ ಒಂದು ಸಿದ್ಧಾಂತ. ಇದು ಜಾತಿ, ಧರ್ಮ, ಲಿಂಗ ಸಮಾತನೆಯನ್ನು ಒಪ್ಪುವುದಿಲ್ಲ. ಶತಮಾನಗಳಿಂದ ಈ ಸಿದ್ಧಾಂತದ ಪ್ರಭಾವಕ್ಕೆ ಒಳಗಾಗಿರುವ ಜನರು ತಮ್ಮ ದಿನನಿತ್ಯದ ಬದುಕಿನಲ್ಲಿ ಜಾತಿ, ಲಿಂಗ, ಧರ್ಮ ತಾರತಮ್ಯಗಳನ್ನು ಚಾಚೂತಪ್ಪದೆ ಪಾಲಿಸುತ್ತಾರೆ. ಇವರಿಗೆ ಸಂವಿಧಾನ ಪ್ರತಿಪಾದಿಸುವ ಸಮಾನತೆ, ಸ್ವಾತಂತ್ರ್ಯ, ಭಾತೃತ್ವಗಳು ಪರಿಕೀಯವಾಗಿವೆ. ಇವೇ ಕಾರಣಗಳಿಂದ ಇವರು ಜಾತಿ, ಧರ್ಮಗಳ ಗಡಿಗಳನ್ನು ಮೀರಿ ರಾಜಕೀಯದಲ್ಲಿ ಪಾಲುಗೊಳ್ಳುವುದು ಕಷ್ಟವಾಗಿದೆ. ಜಾತಿ, ಧರ್ಮಗಳ ನೆಲೆಯಲ್ಲಿ ರಾಜಕೀಯ ತೀರ್ಮಾನ ಕೈಗೊಳ್ಳುವುದರಿಂದ ಇವರ ಆಸಕ್ತಿಗೆ ವಿರುದ್ದವಾದ ಪಾಲಿಸಿ ತರುವವರನ್ನು ಕೂಡ ಇವರು ಅಧಿಕಾರಕ್ಕೇರಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಇವರು ಸಮಾಜೋ-ಆರ್ಥಿಕ ಪರಿವರ್ತನೆಗಳಿಂದ ವಂಚಿತರಾಗಿದ್ದಾರೆ. ಆದುದರಿಂದ ಈ ಜನರ ಜ್ಞಾನಪರಂಪರೆಯೊಂದಿಗೆ ವಿಜ್ಞಾನ, ಸಮಾಜವಿಜ್ಞಾನಗಳು ಸಂವಾದ ನಡೆಸುವ ಅನಿವಾರ್ಯತೆ ಇದೆ. ಇವರ ಅರ್ಥ, ರಾಜಕೀಯ, ಸಮಾಜ, ಸಂಸ್ಕೃತಿಗಳು ಪಠ್ಯದೊಳಗೆ ಬರುವ ಅಗತ್ಯವಿದೆ. ಪಠ್ಯದಲ್ಲಿರುವವರು ಸಂಶೋಧಕರ ‘ಪ್ರಜ್ಞೆಯ ಭಾಗ’ ಆಗುತ್ತಾರೆ. ಸಂಶೋಧಕರ ಪ್ರಜ್ಞೆಯ ಭಾಗವಾದರೆ ಇವರ ಅರ್ಥ, ರಾಜಕೀಯ, ಸಮಾಜ, ಸಂಸ್ಕೃತಿಗಳನ್ನು ಬದಲಾಗುತ್ತಿರುವ ಲೋಕದೊಂದಿಗೆ ಸಂವಾದ ನಡೆಸಲು ಅಣಿಗೊಳಿಸಬಹುದು.

ಬೋಧನೆಯ ಸಮಸ್ಯೆಗಳು
1) ಬೋಧಕರ ಉಪನ್ಯಾಸಕ್ಕೂ ಸ್ವಾಮೀಜಿಯ ಪ್ರವಚನಕ್ಕೂ ವಿಶೇಷ ವ್ಯತ್ಯಾಸವಿಲ್ಲ. ಎರಡೂ ಕಡೆ ಪ್ರಶ್ನೆ, ವಿಮರ್ಶೆ, ಚರ್ಚೆಗೆ ಅವಕಾಶವಿಲ್ಲ. ಇದನ್ನೇ ಇನ್ನೊಂದು ರೂಪದಲ್ಲಿ ಹೇಳುವುದಾದರೆ ತರಗತಿಗಳು ಜ್ಞಾನ ಸೃಷ್ಟಿ, ಜ್ಞಾನ ವರ್ಗಾವಣೆಗಳಿಗಿಂತ ಹೆಚ್ಚು ಸಮಾಜದಲ್ಲಿರುವ ಅಧಿಕಾರ ಸಂಬಂಧಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಬಳಕೆ ಆಗುತ್ತಿವೆ.
2) ಕಲಿಕೆಯಲ್ಲಿ ಬೋಧನೆಯೇ ಪ್ರಧಾನವಾಗಿದ್ದು ವಿದ್ಯಾರ್ಥಿಗಳು ಪ್ರಯೋಗ, ಪರೀಕ್ಷೆಗಳನ್ನು ಮಾಡಿ ಕಲಿಯುವುದು ಕಡಿಮೆ ಇದೆ. ತರಗತಿಗಳಲ್ಲಿ ಗಂಟೆಗಟ್ಟಲೆ ಉಪನ್ಯಾಸಕರ ಕೊರೆತವನ್ನು ಅನಭವಿಸುವುದು ಉತ್ತಮ ವಿದ್ಯಾರ್ಥಿಯ ಲಕ್ಷಣ ಆಗಿದೆ.
3) ತರಗತಿ ಮತ್ತು ಶಿಕ್ಷಣ ಸಂಸ್ಥೆಗಳು ಲಿಂಗ, ಜಾತಿ, ಧರ್ಮ, ವರ್ಗ ತಾರತಮ್ಯಗಳನ್ನು ಜೀವಂತ ಇಡುವ ಮೌಲ್ಯಗಳನ್ನು ನಮ್ಮ ಸಂಸ್ಕೃತಿ ಹೆಸರಲ್ಲಿ ಆಚರಿಸುತ್ತಿವೆ.

ತರಗತಿಗಳಲ್ಲಿ ಹೆಣ್ಣು ಗಂಡು ಬೇರೆ ಬೇರೆ ಬೆಂಚುಗಳಲ್ಲಿ ಕುಳಿತುಕೊಳ್ಳಬೇಕು. ತಪ್ಪಿಕೂಡ ಜೊತೆಜೊತೆ ಕುಳಿತುಕೊಳ್ಳಬಾರದು. ಕೆಲವು ಮೇಸ್ಟ್ರುಗಳು ಲಿಂಗ ಪ್ರತ್ಯೇಕತೆ ಬಗ್ಗೆ ಎಷ್ಟು ಜಾಗರೂಕರಾಗಿದ್ದರೆಂದರೆ ಹಾಜರಾತಿ ಪುಸ್ತಕದಲ್ಲೂ ಹೆಣ್ಣುಗಂಡು ವಿದ್ಯಾರ್ಥಿಗಳ ಹೆಸರುಗಳನ್ನು ಜೊತೆ ಜೊತೆಯಲ್ಲಿ ಬರೆಯಲು ಹಿಂದೆ ಮುಂದೆ ನೋಡುತ್ತಾರೆ. ಕಾಲೇಜು, ವಿಶ್ವವಿದ್ಯಾಲಯಗಳ ಹಾಸ್ಟೆಲ್‍ಗಳಲ್ಲಿ ಹೆಣ್ಣು ಮಕ್ಕಳ ಹಾಸ್ಟೆಲ್‍ಗಳಿಗಿರುವ ಆವರಣ ಗೋಡೆ, ಸಿಸಿಟಿವಿ ಕ್ಯಾಮೆರಾಗಳು, ಸೆಕ್ಯುರಿಟಿಗಳು ಗಂಡು ಮಕ್ಕಳ ಹಾಸ್ಟೆಲ್‍ಗೆ ಇರುವುದಿಲ್ಲ. ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ದಲಿತ ಬುಡಕಟ್ಟುಗಳಿಗೆ ಪ್ರತ್ಯೇಕ ಹಾಸ್ಟೆಲ್‍ಗಳಿವೆ.

ಬಹುತೇಕ ಎಲ್ಲ ಶಾಲೆ, ಕಾಲೇಜುಗಳಲ್ಲಿ ಶಾರದ ಪೂಜೆ, ಗಣೇಶೋತ್ಸವ ನಡೆಯುತ್ತದೆ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸತ್ಯ ನಾರಾಯಣ ಪೂಜೆ, ಹೋಮ ಹವನಗಳು ನಡೆಯುತ್ತವೆ. ಇವೆಲ್ಲ ಕಾರಣಗಳಿಂದ ಇಂದು ಉನ್ನತ ಶಿಕ್ಷಣ ಪಡೆದವರು ಮತ್ತು ಪಡೆಯದವರ ನಡುವಿನ ವ್ಯತ್ಯಾಸವನ್ನು ಅವರು ಅನುಭೋಗಿಸುವ ಸರಕುಸೇವೆಗಳಿಂದ ಮಾತ್ರ ಗುರುತಿಸಬಹುದೇ ಹೊರತು ಅವರ ಬದುಕಿನ ಮೌಲ್ಯಗಳಿಂದ ಗುರುತಿಸಲು ಸಾಧ್ಯವಾಗುತ್ತಿಲ್ಲ.

ಇವೆಲ್ಲ ಬದಲಾಗಿ – 1) ಉಪನ್ಯಾಸಕರ ಬೋಧನೆ ಕಡಿಮೆ ಇದ್ದು ವಿದ್ಯಾರ್ಥಿಗಳ ಪ್ರಶ್ನೆ, ವಿಮರ್ಶೆಗಳು ಹೆಚ್ಚಾಗಬೇಕು. ಒಂದು ಗಂಟೆ ತರಗತಿ ಸಮಯದಲ್ಲಿ ಕಾಲು ಭಾಗ ಉಪನ್ಯಾಸಕರ ಬೋಧನೆಗೆ ಬಳಕೆ ಆದರೆ ಮಕ್ಕಾಲು ಭಾಗ ಕೂಡ ವಿದ್ಯಾರ್ಥಿಗಳ ಪ್ರಶ್ನೆ, ಚರ್ಚೆ, ಸಂವಾದಕ್ಕೆ ಮೀಸಲಿಡಬೇಕು. ಈ ಬದಲಾವಣೆ ಚಾಲ್ತಿಗೆ ಬರಬೇಕಾದರೆ ಬೋಧಕರು ಮತ್ತು ವಿದ್ಯಾರ್ಥಿಗಳು ಇಬ್ಬರೂ ಕಲಿಕೆಯನ್ನು ಗ್ರಹಿಸುವ ವಿಧಾನವನ್ನು ಸಂಪೂರ್ಣ ಬದಲಾಯಿಸಿಕೊಳ್ಳಬೇಕಾಗಿದೆ.
2) ಎಲ್ಲ ವಿಷಯಗಳ ಕಲಿಕೆಯಲ್ಲಿ ಪ್ರಯೋಗ, ಪರೀಕ್ಷೆಗಳ ಮೂಲಕ ಮಾಡಿ ಕಲಿಯುವ ಅವಕಾಶ ಹೆಚ್ಚಾಗಬೇಕು. ಸಮಾಜ ವಿಜ್ಞಾನದ ಎಲ್ಲ ವಿಷಯಗಳಲ್ಲೂ ಪ್ರಯೋಗ ಮಾಡಿ ಕಲಿಯುವ ವಿಧಾನಗಳಿವೆ. ಇವುಗಳೊಂದಿಗೆ ಬೊಧಕರು ಸ್ವಲ್ಪ ಪ್ರಯತ್ನಿಸಿದರೆ ಹೊಸ ವಿಧಾನಗಳನ್ನು ಹುಡುಕುವುದು ಕಷ್ಟವಲ್ಲ.
3) ಶಿಕ್ಷಣ ಸಂಸ್ಥೆ ಮತ್ತು ತರಗತಿಗಳ ಎಲ್ಲ ಚಟುವಟಿಕೆಗಳು, ಕಾರ್ಯಕ್ರಮಗಳು, ಸಭೆ, ಸಮಾರಂಭಗಳು ಸಂವಿಧಾನಿಕ, ಪ್ರಜಾಪ್ರಭುತ್ವ ಹಾಗು ಜಾತ್ಯಾತೀತ ಮೌಲ್ಯಗಳಿಗೆ ಅನುಸಾರ ನಡೆಯಬೇಕು.

ಜ್ಞಾನ ಅನ್ವಯಿಕೆಯ ಸಮಸ್ಯೆಗಳು
ಶಿಕ್ಷಣ ಸಂಸ್ಥೆಗಳು ಸೃಷ್ಟಿಸುವ ಜ್ಞಾನವನ್ನು ಆರ್ಥಿಕ ಚಟುವಟಿಕೆಗಳ (ಜಿಡಿಪಿ) ವೃದ್ಧಿಗೆ ಬಳಸುವುದನ್ನೇ ಜ್ಞಾನ ಅನ್ವಯಿಕೆ ಎಂದು ಭಾವಿಸಿವೆ. ಇಂತಹ ನಂಬಿಕೆ ಶಿಕ್ಷಣ ಸಂಸ್ಥೆಗಳ ಬಹುತೇಕ ಭಾಗವನ್ನು ಆವರಿಸಿಕೊಂಡಿದೆ. ಸರಕುಸೇವೆಗಳ ಉತ್ಪಾದನೆಯ ವೃದ್ಧಿ ಅವಶ್ಯ. ಹಾಗೆಂದು ಸರಕುಸೇವೆಗಳ ಉತ್ಪಾದನೆ ಹಾಗು ಪೂರೈಕೆ ಹೆಚ್ಚಾದ ಕೂಡಲೇ ಸಮಾಜದ ಎಲ್ಲರ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಸರಕುಸೇವೆಗಳ ಉತ್ಪಾದನೆಯಲ್ಲಿ ಜಾನಪದೀಯರು ಪಾಲ್ಗೊಳ್ಳಲು ಸಾಧ್ಯವಾದರೆ ಮಾತ್ರ ಅನುಭೋಗದಲ್ಲೂ ಪಾಲ್ಗೊಳ್ಳಲು ಸಾಧ್ಯ. ಇಲ್ಲವಾದರೆ ಇವರು ಸರಕಾರದ ‘ಕನಿಷ್ಠ ಆದಾಯದ ಕಾರ್ಯಕ್ರಮವನ್ನು ಅವಲಂಬಿಸಿ’ ಬದುಕಬೇಕಾಗುತ್ತದೆ. ಆದುದರಿಂದ ಆರ್ಥಿಕ ಪ್ರಗತಿಯಲ್ಲಿ ಸಮಾಜದ ಎಲ್ಲರೂ ಪಾಲ್ಗೊಳ್ಳುವುದು ಅನಿವಾರ್ಯ. ಆದರೆ ಈ ಕೆಳಗಿನ ತೊಡಕುಗಳು ಇವೆ.
1) ಲಿಂಗ, ಜಾತಿ, ಧರ್ಮ ತಾರತಮ್ಯಗಳು ಸೃಷ್ಟಿಸುವ ‘ಸಾಮಾಜಿಕ ಅಸಾಮರ್ಥ್ಯಗಳು
2) ಜನರ ಉಣ್ಣುವ, ಪೂಜಿಸುವ, ಪ್ರೀತಿಸುವ ವಿಷಯಗಳನ್ನು ಬಳಸಿಕೊಂಡು ನಡೆಸುವ ಸಾಂಸ್ಕೃತಿಕ ರಾಜಕೀಯ ಸೃಷ್ಟಿಸುವ ‘ಸಾಂಸ್ಕೃತಿಕ ಅಸಾಮರ್ಥ್ಯಗಳು
3) ಬಲವಾದ ದೇಶ ಕಟ್ಟುವ ನೆಪದಲ್ಲಿ ನಡೆಸುವ ‘ಕೇಂದ್ರೀಕೃತ ರಾಜಕೀಯ’ ಸೃಷ್ಟಿಸುವ ರಾಜಕೀಯ ಅಸಾಮಾಥ್ರ್ಯಗಳು ಉತ್ಪಾದಕರಿಗೆ ಆರ್ಥಿಕ ಪ್ರಗತಿಯಲ್ಲಿ ಪಾಲುಗೊಳ್ಳಲು ಅಡ್ಡಿಯಾಗಿವೆ.

ಸಾಮಾಜಿಕ, ಸಾಂಸ್ಕೃತಿಕ ಹಾಗು ರಾಜಕೀಯ ಅಸಾಮರ್ಥ್ಯಗಳನ್ನು ಹೋಗಲಾಡಿಸುವ ಉದ್ದೇಶದಿಂದ ಜಾರಿಗೆ ತಂದ ಕಾಯಿದೆ ಕಾನೂನುಗಳಿವೆ. ವರದಕ್ಷಿಣೆ ನಿಷೇಧ, ಭ್ರೂಣಹತ್ಯೆ ನಿಷೇಧ, ಲೈಂಗಿಕ ದೌರ್ಜನ್ಯ ತಡೆ, ಅಸ್ಪ್ರಶ್ಯತೆ ನಿಷೇಧ ಕಾಯಿದೆಗಳಿವೆ. ಆದರೆ ಅವುಗಳಿಗೆ ಸಾಮಾಜಿಕ, ಸಾಂಸ್ಕೃತಿಕ ಒಪ್ಪಿಗೆ ಇಲ್ಲದ ಕಾರಣ ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಆದುದರಿಂದ ಜ್ಞಾನ ಅನ್ವಯಿಕೆಯ ವ್ಯಾಪ್ತಿಯನ್ನು ಆರ್ಥಿಕ ಪ್ರಗತಿಗೆ ಸೀಮಿತಗೊಳಿಸುವ ಬದಲು ಸಾಮಾಜಿಕ, ಸಾಂಸ್ಕೃತಿಕ ಹಾಗು ರಾಜಕೀಯ ಕ್ಷೇತ್ರಗಳಿಗೂ ವಿಸ್ತರಿಸುವ ಅವಶ್ಯಕತೆ ಇದೆ. ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಸ್ವಾತಂತ್ರ್ಯಗಳಿಲ್ಲದೆ ರಾಜಕೀಯ ಸಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ ಎನ್ನುವ ಅಂಬೇಡ್ಕರ್ ಮಾತುಗಳು ಇಲ್ಲೂ ಅನ್ವಯವಾಗುತ್ತವೆ. ಮುಕ್ತ ಮಾರುಕಟ್ಟೆ ಬಗ್ಗೆ ಮಾತಾಡುವಾಗ ಮುಕ್ತ ಸಮಾಜದ ಬಗ್ಗೆಯೂ ಮಾತಾಡಬೇಕಾಗುತ್ತದೆ. ಏಕೆಂದರೆ ಮುಕ್ತ ಸಮಾಜದಲ್ಲಿ ಮಾತ್ರ ಮುಕ್ತ ಮಾರುಕಟ್ಟೆ ಸಮಾಜದ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಲು ಸಾಧ್ಯ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇದನ್ನು ಓದಿ ಕೇಂದ್ರದ ಏಕರೂಪ ನಾಗರಿಕ ಸಂಹಿತೆಗೆ ನಮ್ಮ ವಿರೋಧವಿದೆ: ಸಿಎಂ ಸಿದ್ದರಾಮಯ್ಯ

ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ವಹಣೆ
ವರ್ತಮಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಸಂಪನ್ಮೂಲದ, ಆಕಾಡೆಮಿಕ್, ಆಡಳಿತಾತ್ಮಕ ಮತ್ತು ಮಾನವ ಸಂಪನ್ಮೂಲ ಸೃಷ್ಟಿಸುವ ಸಮಸ್ಯೆಗಳನ್ನು ಎದುರಿಸುತ್ತಿವೆ.
1) ಸಂಪನ್ಮೂಲಕ್ಕೆ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸಂಪೂರ್ಣವಾಗಿ ಸರಕಾರವನ್ನು ಅವಲಂಬಿಸಿವೆ. ಕೆಲವು ವಿಶ್ವವಿದ್ಯಾಲಯಗಳ ಸ್ವಾಧೀನ ನೂರಾರು ಎಕರೆ ಭೂಮಿ ಮತ್ತು ಇತರ ಭೌತಿಕ ಸವಲತ್ತುಗಳಿವೆ. ಇವನ್ನು ಆದಾಯ ಹುಟ್ಟು ಹಾಕುವ ಯೋಜನೆಗಳಲ್ಲಿ ಬಳಸಿಕೊಳ್ಳಬಹುದು.
2) ಸೇವಾ ‘ಹಿರಿತನ’ ಮತ್ತು ಹೊಣೆಗಾರಿಕೆ ರಹಿತ ‘ಅಕಾಡೆಮಿಕ್ ಬಾಡಿಗಳು’ ಶೈಕ್ಷಣಿಕ ನಿರ್ವಹಣೆ ಮಾಡುತ್ತಿವೆ. ಇದು ಕೇವಲ ಶಿಕ್ಷಣ ಸಂಸ್ಥೆಯ ಸಮಸ್ಯೆಯಲ್ಲ. ಎಲ್ಲ ಸಂಸ್ಥೆಗಳಲ್ಲೂ ಈ ಸಮಸ್ಯೆ ಇದೆ. ಇದರಿಂದಾಗಿ ಮಹಾನ್ ಮೂರ್ಖರನ್ನು ಉನ್ನತ ಹುದ್ದೆಗಳಲ್ಲಿ ನೋಡುತ್ತಿದ್ದೇವೆ. ಹೊಣೆಗಾರಿಕೆ ಕೊರತೆಯಿಂದ ಎಲ್ಲ ಕ್ಷೇತ್ರಗಳಲ್ಲು ಬೇಕಾಬಿಟ್ಟಿ ತೀರ್ಮಾನ ಕೈಗೊಳ್ಳುವುದು ಸಾಮಾನ್ಯವಾಗಿದೆ. ಇವರ ಇಂತಹ ಬೇಕಾಬಿಟ್ಟಿ ತೀರ್ಮಾನಗಳಿಂದ ಸಾಮಾನ್ಯರು ಪಡಬಾರದ ಹಿಂಸೆ ಅನುಭವಿಸುತ್ತಿದ್ದಾರೆ.
3) ಬಂದವರಿಗೆಲ್ಲ ಡಿಗ್ರಿ ಕೊಡುವುದನ್ನೇ ಮಾನವ ಸಂಪನ್ಮೂಲ ಸೃಷ್ಟಿ ಎಂದು ಬಗೆಯಲಾಗಿದೆ. ಇವೆಲ್ಲವೂ ಬದಲಾಗಬೇಕಾಗಿದೆ.

ಇದನ್ನು ಓದಿ ಈ ದಿನ ಸಂಪಾದಕೀಯ | 2 ಗಂಟೆ 10 ನಿಮಿಷಗಳ ಕ್ರೌರ್ಯ, 3 ನಿಮಿಷಗಳ ತೋರಿಕೆಯ ಕಾರ್ಯ

ಉನ್ನತ ಶಿಕ್ಷಣ ಸಂಸ್ಥೆಗಳು ಬದಲೀ ಸಂಪನ್ಮೂಲ ಸೃಷ್ಟಿಯ ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿದೆ. ಎಕರೆ ಗಟ್ಟಲೆ ಭೂಮಿ ಇದ್ದ ವಿಶ್ವವಿದ್ಯಾಲಯಗಳು ಸೋಲಾರ್ ವಿದ್ಯುತ್ ಉತ್ಪಾದಿಸಿ ಸರಕಾರಕ್ಕೆ ಮಾರಬಹುದು. ಅಕಾಡೆಮಿಕ್ ಟೂರಿಸಂ ಅಥವಾ ಮೆಡಿಕಲ್ ಟೂರಿಸಂ ಬೆಳಸಬಹುದು. ಹೀಗೆ ಶಿಕ್ಷಣ ಸಂಸ್ಥೆಯಲ್ಲಿ ದುಡಿಯುವವರು ಮನಸ್ಸು ಮಾಡಿದರೆ ಆದಾಯ ಗಳಿಸುವ ಹಲವು ದಾರಿಗಳನ್ನು ಹುಡುಕಬಹುದು. ಸೇವಾ ಹಿರಿತನಕ್ಕಿಂತ ವಿಷಯದ ಮೇಲಿನ ತಜ್ಞತೆ ಹಾಗು ಹೊಣೆಗಾರಿಕೆಗಳು ಅಕಾಡೆಮಿಕ್ ಬಾಡಿಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಡಿಗ್ರಿಗಿಂತ ಹೆಚ್ಚು ಕ್ರಿಯೇಟಿವ್, ಕ್ರಿಟಿಕಲ್ ಹಾಗು ಮುನ್ನುಗುವ ಛಾತಿಯುಳ್ಳ ಮಾನವ ಸಂಪನ್ಮೂಲ ಸೃಷ್ಟಿಗೆ ಒತ್ತು ನೀಡಬೇಕಾಗಿದೆ. ಇಂತಹ ಮಾನವ ಸಂಪನ್ಮೂಲ ಮಾತ್ರ ತನ್ನ ಕಣ್ಣ ಮುಂದಾಗುವ ಅನ್ಯಾಯಗಳನ್ನು ಪ್ರಶ್ನಿಸುವ ಮತ್ತು ಸೋತವರೊಂದಿಗೆ ನಿಲ್ಲುವ ಧೈರ್ಯ ಪ್ರದರ್ಶಿಸಲು ಸಾಧ್ಯ.

ಪ್ರೊ ಚಂದ್ರ ಪೂಜಾರಿ
+ posts

ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ

ಪೋಸ್ಟ್ ಹಂಚಿಕೊಳ್ಳಿ:

ಪ್ರೊ ಚಂದ್ರ ಪೂಜಾರಿ
ಪ್ರೊ ಚಂದ್ರ ಪೂಜಾರಿ
ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೋಕ್ಸೊ ಪ್ರಕರಣ; ಯಡಿಯೂರಪ್ಪನವರ ರಕ್ಷಣೆಗೆ ಇಡೀ ವ್ಯವಸ್ಥೆ ನಿಂತಂತಿದೆ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲಿನ ಪ್ರಕರಣ ಪೋಕ್ಸೊ ಅಡಿ ದಾಖಲಾಗಿದೆ....

ಬಕ್ರೀದ್ ಹಬ್ಬ | ಹಜ್ಜ್‌ಗೆ ತೆರಳುವ ಮುಸಲ್ಮಾನ ‘ಹಾಜಿ’ಯಾಗುತ್ತಾನೆ; ಹಾಜಿ ಹೇಗಿರಬೇಕು?

ಜೂನ್ 17ರ ಸೋಮವಾರ ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ಒಂದಾದ ಈದುಲ್ ಅಝ್‌ಹಾ...

ನಟ ದರ್ಶನ್‌ ಅಂಧಾಭಿಮಾನಿಗಳು ಕೊಡುತ್ತಿರುವ ಸಂದೇಶವೇನು?

ಕೊಲೆ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಕನ್ನಡ ಚಲನಚಿತ್ರ ನಟ ದರ್ಶನ್‌ ತೂಗುದೀಪ ಅವರ...