ರಾಮಮಂದಿರ ಮತ್ತು ಭಾರತ್ ಜೋಡೋ ನ್ಯಾಯ ಯಾತ್ರೆ- ಈ ಎರಡಕ್ಕೂ ಕನ್ನಡದ ಮುಖ್ಯ ವಾಹಿನಿ ಮಾಧ್ಯಮಗಳು ಎಷ್ಟು ಆದ್ಯತೆ ನೀಡಿವೆ?- ಇಲ್ಲಿದೆ ವಿವರ…
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ’ಭಾರತ ಜೋಡೋ ಯಾತ್ರೆ’ ನಡೆಸಿ, ಕಾಲ್ಗಡಿಗೆಯ ಮೂಲಕ ಗಮನ ಸೆಳೆದಿದ್ದರು. ಅದರ ಮುಂದುವರಿದ ಭಾಗವಾಗಿ ’ಭಾರತ್ ಜೋಡೋ ನ್ಯಾಯ ಯಾತ್ರೆ’ಯನ್ನು ಮಣಿಪುರದಿಂದ ಮುಂಬೈವರೆಗೆ ಹಮ್ಮಿಕೊಂಡಿದ್ದಾರೆ. 66 ದಿನ 15 ರಾಜ್ಯಗಳಲ್ಲಿ ಸಾಗಿ 6,713 ಕಿಲೋಮೀಟರ್ ಕ್ರಮಿಸಲಿರುವ ಈ ಯಾತ್ರೆಗೆ ಜನವರಿ 14ರಂದು ಮಣಿಪುರದ ತೌಬಲ್‌ನಲ್ಲಿ ಚಾಲನೆ ದೊರಕಿದೆ.
ಮುಖ್ಯವಾಗಿ ಯಾತ್ರೆ ಎಲ್ಲಿಂದ ಆರಂಭವಾಗಿದೆ ಎಂಬುದು ಮಹತ್ವದ್ದಾಗಿದೆ. ಮೇ 3ರಂದು ಮಣಿಪುರದಲ್ಲಿ ಆರಂಭವಾದ ಜನಾಂಗೀಯ ಕಲಹ ಇನ್ನೂ ನಿಂತಿಲ್ಲ. ಪ್ರಧಾನಿ ಮೋದಿಯವರು ಈವರೆಗೆ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಲಿಲ್ಲ. ಹೀಗಿರುವಾಗ ರಾಹುಲ್, ಎರಡನೇ ಬಾರಿಗೆ ಮಣಿಪುರಕ್ಕೆ ಹೋಗಿದ್ದಾರೆ. ರಾಜ್ಯದ ರಾಜಧಾನಿ ಇಂಫಾಲ್‌ನಿಂದ ಯಾತ್ರೆ ಆರಂಭವಾಗಿತ್ತು. ಅಲ್ಲಿನ ಬಿಜೆಪಿ ಸರ್ಕಾರ ಅನುಮತಿ ನೀಡದ ಕಾರಣ ತೌಬಲ್ ಜಿಲ್ಲೆಯಿಂದ ಚಾಲನೆ ನೀಡಲಾಗಿದೆ.
ಮೈತೇಯಿ- ಕುಕಿ ಸಮುದಾಯಗಳ ಜನಾಂಗೀಯ ಕಲಹಕ್ಕೆ ತುತ್ತಾದ ಬಹುಮುಖ್ಯವಾದ ಜಿಲ್ಲೆಗಳಲ್ಲಿ ತೌಬಲ್ ಕೂಡ ಒಂದು. ಇದು ಮೈತೇಯಿ ಸಮುದಾಯ ಪ್ರಾಬಲ್ಯವಿರುವ ಪ್ರದೇಶ.
’ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಇಂಫಾಲ ಮೂಲದ ಪತ್ರಕರ್ತ ಚೌಬಾ, “ಮಣಿಪುರದ ಜನತೆ ಉತ್ಸುಕತೆಯಿಂದ ರಾಹುಲ್ ಯಾತ್ರೆಯನ್ನು ಸ್ವಾಗತಿಸಿದರು. ಅಪಾರ ಜನಸ್ತೋಮ ನೆರೆದಿತ್ತು. ರಾಹುಲ್ ಅವರ ಈ ಕಾರ್ಯಕ್ರಮಕ್ಕೆ ಉತ್ತಮ ಆರಂಭ ದೊರಕಿತು” ಎಂದು ತಿಳಿಸಿದರು.
ಮುಂದುವರಿದು, “ಈ ಯಾತ್ರೆಯು ಮೊದಲ ದಿನ ಇಂಫಾಲ್ ಪಶ್ಚಿಮದಲ್ಲಿ ಕೊನೆಯಾಗುತ್ತದೆ. ಇಲ್ಲಿ ರಾಹುಲ್ ತಂಗಲಿದ್ದಾರೆ. ಮಾರನೇ ದಿನ ಯಾತ್ರೆ ಮುಂದುವರಿದು, ಕಾಂಗ್ಪೊಪ್ಕಿ ತಲುಪಲಿದೆ. ನಂತರ ಸೇನಾಪತಿ ಜಿಲ್ಲೆಯನ್ನು ಕ್ರಮಿಸಿ, ನಾಗಾಲ್ಯಾಂಡ್ ರಾಜ್ಯಕ್ಕೆ ಪ್ರವೇಶಿಸಲಿದೆ” ಎಂದು ಮಾಹಿತಿ ನೀಡಿದರು.
ಹಿಂಸಾಚಾರ ಪೀಡಿತ ಜಿಲ್ಲೆಗಳಲ್ಲಿ ಕಾಂಗ್ಪೊಪ್ಕಿ ಹೆಸರು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದು ಕುಕಿ ಸಮುದಾಯ ಪ್ರಾಬಲ್ಯವಿರುವ ಜಿಲ್ಲೆಯಾದರೂ ಮೇ 3 ಮತ್ತು 4ರಂದು ನಡೆದ ಕಲಹದಲ್ಲಿ ಮೈತೇಯಿ ಪುರುಷರು ಕುಕಿ ಮಹಿಳೆಯರನ್ನು ಬೆತ್ತಲು ಮಾಡಿ ಮೆರವಣಿಗೆ ಮಾಡಿದ್ದು ಇದೇ ಪ್ರದೇಶದಲ್ಲಿ. ಇನ್ನು ಸೇನಾಪತಿ ಜಿಲ್ಲೆಯು ನಾಗ ಬುಡಕಟ್ಟು ಜನಾಂಗ ಹೆಚ್ಚಿರುವ ಪ್ರದೇಶ. ಒಟ್ಟಾರೆಯಾಗಿ ಮೈತೇಯಿ, ಕುಕಿ, ನಾಗ- ಈ ಮೂರು ಸಮುದಾಯಗಳಿರುವ ಪ್ರದೇಶಗಳನ್ನು ಭಾರತ್ ಜೋಡೋ ನ್ಯಾಯ ಯಾತ್ರೆ ಕ್ರಮಿಸುತ್ತದೆ. ಮಣಿಪುರದ ಮನಸ್ಸುಗಳು ಒಡೆದು ಹೋಗಿರುವ ಹೊತ್ತಿನಲ್ಲಿ ಈ ಯಾತ್ರೆ ಒಗ್ಗೂಡಿಸುತ್ತದೆಯೇ ಎಂಬ ಕುತೂಹಲವಂತೂ ಇದ್ದೇ ಇದೆ. ಇಂತಹ ಮಹತ್ವದ ಯಾತ್ರೆಗೆ ಕನ್ನಡದ ಮುಖ್ಯವಾಹಿನಿ ದೃಶ್ಯ ಮಾಧ್ಯಮಗಳ ಜಾಲತಾಣಗಳು ಹೇಗೆ ಸ್ಪಂದಿಸಿವೆ ಎಂಬುದನ್ನು ನೋಡೋಣ. ಮಾಧ್ಯಮಗಳು ಯಾವುದಕ್ಕೆ ಹೆಚ್ಚು ಆದ್ಯತೆ ನೀಡುತ್ತವೆ ಎಂಬುದು ಅವುಗಳು ಬರೆಯುವ ಸುದ್ದಿಗಳ ಸಂಖ್ಯೆಯ ಮೇಲೆ ಅವಲಂಬಿತವಾಗುತ್ತದೆ ಅಲ್ಲವೇ?
ಅಯೋಧ್ಯೆಯಲ್ಲಿ ಅರೆಬರೆ ನಿರ್ಮಾಣವಾಗಿರುವ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ಜನವರಿ 22ರಂದು ನಡೆಯುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿರುವ ಈ ಕಾರ್ಯಕ್ರಮದ ಸಂಬಂಧ ಈಗಾಗಲೇ ದಿನನಿತ್ಯವೂ ಸರಣಿ ವರದಿಗಳನ್ನು ಮಾಡುತ್ತಿರುವ ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು, ರಾಹುಲ್ ಅವರ ಮಹತ್ವದ ಯಾತ್ರೆಗೆ ಮೊದಲ ದಿನ ಎಷ್ಟು ಆದ್ಯತೆ ನೀಡಿದವು, ಅದೇ ದಿನ ರಾಮಮಂದಿರಕ್ಕೆ ಎಷ್ಟು ಸ್ಪೇಸ್ ನೀಡಿದವು ಎಂಬುದನ್ನು ಇಲ್ಲಿ ವಿಶ್ಲೇಷಿಸುವ ಕಿರು ಪ್ರಯತ್ನ ಮಾಡಲಾಗಿದೆ. ಕನ್ನಡದ ಆಯ್ದ ಮುಖ್ಯವಾಹಿನಿ ದೃಶ್ಯ ಮಾಧ್ಯಮಗಳ ಜಾಲತಾಣಗಳಲ್ಲಿ ಆಗಿರುವ ವರದಿಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ.
ಪಬ್ಲಿಕ್ ಟಿವಿ
‘ಅಯೋಧ್ಯ ರಾಮ ಮಂದಿರ್’ (Ayodhya Ram Mandir) ಎಂಬ ವಿಶೇಷ ಕ್ಯಾಟಗರಿಯನ್ನು ತೆರೆದಿರುವ ಪಬ್ಲಿಕ್ ಟಿವಿ ವಾಹಿನಿಯು ಜನವರಿ 14ರಂದು ರಾಮಮಂದಿರಕ್ಕೆ ಸಂಬಂಧಿಸಿದಂತೆ ಐದು ಸುದ್ದಿಗಳನ್ನು ಈ ಕ್ಯಾಟಗರಿಯಲ್ಲಿ ಪ್ರಕಟಿಸಿದೆ. ಅದರ ಶೀರ್ಷಿಕೆಗಳು ಹೀಗಿವೆ:
ಬೆಂಗಳೂರಿನ ಮಾಲ್‍ಗಳಲ್ಲಿ ರಂಗೋಲಿಯಲ್ಲಿ ಅರಳಿದ ರಾಮಮಂದಿರ
ರಾಮಮಂದಿರ ನಿರ್ಮಾಣವನ್ನು 74% ಮುಸ್ಲಿಮರು ಸಂಭ್ರಮಿಸ್ತಾರೆ: ಮುಸ್ಲಿಂ ರಾಷ್ಟ್ರೀಯ ಮಂಚ್
ಕಸ ಸಂಗ್ರಹಿಸಿ ಸಂಪಾದಿಸಿದ್ದರಲ್ಲಿ 20 ರೂ. ದೇಣಿಗೆ ನೀಡಿದ್ದ ವೃದ್ಧೆಗೆ ಅಯೋಧ್ಯೆಗೆ ಆಹ್ವಾನ
ರಾಮಮಂದಿರಕ್ಕಾಗಿ 44 ವರ್ಷಗಳಿಂದ ಊಟ ತ್ಯಾಗ, ಮೌನ ವ್ರತ – ಪ್ರಾಣಪ್ರತಿಷ್ಠೆಗೆ ಆಹ್ವಾನ ಸಿಗದೇ ಮೌನಿ ಬಾಬಾ ನಿರಾಸೆ
ರಾಮಮಂದಿರ ಪ್ರಾಣಪ್ರತಿಷ್ಠೆಗೆ 55 ರಾಷ್ಟ್ರಗಳ 100ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ – ಯಾವ್ಯಾವ ದೇಶಕ್ಕೆ ಆಮಂತ್ರಣ?
ಇದೇ ಪಬ್ಲಿಕ್ ಟಿವಿ ವೆಬ್‌ಸೈಟ್ ರಾಹುಲ್ ಗಾಂಧಿಯವರಿಗೆ ಸಂಬಂಧಿಸಿದ ಎರಡು ಸುದ್ದಿಗಳನ್ನು ಪ್ರಕಟಿಸಿದೆ. ಅದರಲ್ಲಿ ಒಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮತ್ತು ಫೇಕ್ ನ್ಯೂಸ್‌ಗಳ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿರುವ ಅಮಿತ್ ಮಾಳವೀಯ ಅವರು ಭಾರತ್ ಜೋಡೋ ಯಾತ್ರೆ ಕುರಿತು ಮಾಡಿರುವ ಕುಹಕಕ್ಕೆ ಸಂಬಂಧಿಸಿದೆ. National (ನ್ಯಾಷನಲ್) ಕ್ಯಾಟಗರಿಯಲ್ಲಿ ಈ ಸುದ್ದಿಗಳನ್ನು ಕಾಣಬಹುದು.
ಹೆಡ್‌ಲೈನ್ಸ್:
ಇಂದಿನಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆ ಆರಂಭ
ರಾಹುಲ್ ಗಾಂಧಿ ಮೊದಲು ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಲಿ- ʼಕೈʼ ಯಾತ್ರೆಗೆ ಅಮಿತ್ ಮಾಳವಿಯಾ ವ್ಯಂಗ್ಯ
ದಶಕಗಳಿಂದ ಕಾಂಗ್ರೆಸ್‌ನಲ್ಲಿದ್ದ ಮಿಲಿಂದ್ ದಿಯೋರಾ ಅವರು ಬೆಳಿಗ್ಗೆ ಕಾಂಗ್ರೆಸ್ ತೊರೆದು ಸಂಜೆ ವೇಳೆಗೆ ಏಕನಾಥ್ ಶಿಂಧೆ ಬಣದ ಶಿವಸೇನೆ ಸೇರಿದ್ದರು. ಈ ಕುರಿತು ನಾಲ್ಕು ಸುದ್ದಿಗಳನ್ನು (ಮಾಳವಿಯಾ ಅವರ ವ್ಯಂಗ್ಯ ಸೇರಿ) ಪಬ್ಲಿಕ್ ಟಿವಿ ಪ್ರಕಟಿಸಿದೆ.
55 ವರ್ಷಗಳ ಬಾಂಧವ್ಯ ಅಂತ್ಯಗೊಳಿಸಿದ್ದೇನೆ – ಕಾಂಗ್ರೆಸ್‌ಗೆ ಮಿಲಿಂದ್ ದಿಯೋರಾ ಗುಡ್‌ಬೈ
ರಾಹುಲ್ ಗಾಂಧಿ ಮೊದಲು ಪಕ್ಷದ ನಾಯಕರಿಗೆ ನ್ಯಾಯ ಕೊಡಿಸಲಿ- ʼಕೈʼ ಯಾತ್ರೆಗೆ ಅಮಿತ್ ಮಾಳವಿಯಾ ವ್ಯಂಗ್ಯ
ಮಿಲಿಂದ್ ದಿಯೋರಾ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇನೆ: ಏಕನಾಥ್ ಶಿಂಧೆ
ಕಾಂಗ್ರೆಸ್ ತೊರೆದು ಶಿವಸೇನೆ ಸೇರ್ಪಡೆಗೊಂಡ ಮಿಲಿಂದ್ ದಿಯೋರಾ
ಮಹಾರಾಷ್ಟ್ರದ ನಾಯಕನೊಬ್ಬ ಕಾಂಗ್ರೆಸ್ ಪಕ್ಷ ತೊರೆದದ್ದು ಮಹತ್ವ ಪಡೆದರೆ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಆರಂಭಿಸಿರುವ 6,713 ಕಿಲೋಮೀಟರ್ ಭಾರತ್ ಜೋಡೊ ಯಾತ್ರೆಗೆ ಸಂಬಂಧಿಸಿದಂತೆ ಒಂದು ಸುದ್ದಿ ಮಾತ್ರ ಪ್ರಕಟವಾಗಿದೆ.
ಟಿ.ವಿ. 9 ಕನ್ನಡ
‘ರಾಮ ಮಂದಿರ’ ಎಂಬ ಕ್ಯಾಟಗರಿಯನ್ನು ತೆರೆದಿರುವ ಟಿ.ವಿ. 9, ಜನವರಿ 14ರಂದು ಆರು ಸುದ್ದಿಗಳನ್ನು ಇಲ್ಲಿ ಪ್ರಕಟಿಸಿದೆ. ಅದರ ಶೀರ್ಷಿಕೆಗಳು ಹೀಗಿವೆ:
ಅನಂತಕುಮಾರ್ ಹೆಗಡೆ ಹೇಳಿಕೆಯಲ್ಲಿ ತಪ್ಪೇನು ಇಲ್ಲ -ಪ್ರಚೋದನಕಾರಿ ಹೇಳಿಕೆ ಸಮರ್ಥಿಸಿಕೊಂಡ ಕೆಎಸ್ ಈಶ್ವರಪ್ಪ
ಅಯೋಧ್ಯೆ ಪ್ರವಾಸ: ವಿವಿಧ ಟೂರ್ ಪ್ಯಾಕೇಜ್ ಘೋಷಿಸಿದ ಏಜೆನ್ಸಿಸ್
ಬಾಗಲಕೋಟೆ; ರಾಮಮಂದಿರ ನಿರ್ಮಾಣದ ಸಂಕಲ್ಪದೊಂದಿಗೆ 16 ಲಕ್ಷಕ್ಕೂ ಹೆಚ್ಚು ಬಾರಿ ರಾಮನಾಮ ಬರೆದ ವೃದ್ಧೆ
Ram Mandir Inauguration: ಅಯೋಧ್ಯೆಗೆ ಬರುವ ಗಣ್ಯ ಅತಿಥಿಗಳಿಗೆ ನೀಡುವ ಆ ಪವಿತ್ರವಾದ ಉಡುಗೊರೆ ಏನು ಗೊತ್ತಾ?
32 ವರ್ಷಗಳ ಹಿಂದೆ ಇದೇ ದಿನ ಅಯೋಧ್ಯೆಯ ರಾಮಮಂದಿರಕ್ಕೆ ಬಂದು ಸಂಕಲ್ಪ ಮಾಡಿದ್ದರು ಮೋದಿ
ಶಾಪ ವಿಮೊಚನೆಗೆ ಗೊಕರ್ಣದಲ್ಲಿ ಧ್ಯಾನ ಮಾಡಿದ್ದ ಶ್ರೀ ರಾಮ: ಇಂದು ರಾಮತಿರ್ಥವೆಂದು ಪ್ರಸಿದ್ಧ
ರಾಹುಲ್ ಅವರ ಯಾತ್ರೆಗೆ ಸಂಬಂಧಿಸಿದಂತೆ ಒಂದು ಸುದ್ದಿ ಮತ್ತು ಯಾತ್ರೆಯನ್ನು ಟೀಕಿಸಿರುವ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಕುರಿತು ಮತ್ತೊಂದು ಸುದ್ದಿಯನ್ನು ಟಿವಿ 9 ಪ್ರಕಟಿಸಿದೆ.
ರಾಹುಲ್ ಗಾಂಧಿಯದ್ದು ಭಾರತ್ ಜೋಡೋ ಅಲ್ಲ, ಭಾರತ್ ತೋಡೋ ಯಾತ್ರೆ:ಮಣಿಪುರ ಸಿಎಂ
ಇದರ ಜೊತೆಗೆ ಮಿಲಿಂದ್ ಕಾಂಗ್ರೆಸ್ ಪಕ್ಷದ ತೊರೆದ ವಿದ್ಯಮಾನಕ್ಕೆ ಸಂಬಂಧಿಸಿದಂತೆ ನಾಲ್ಕು ಸುದ್ದಿಗಳನ್ನು ಟಿವಿ9 ಪ್ರಕಟಿಸಿದೆ. ಅವುಗಳ ಶೀರ್ಷಿಕೆಗಳು ಹೀಗಿವೆ:
ಕಾಂಗ್ರೆಸ್ನಿಂದ ಮಿಲಿಂದ್ ಹೊರಕ್ಕೆ; 55 ವರ್ಷಗಳ ಸಂಬಂಧಕ್ಕೆ ತಿಲಾಂಜಲಿ
‘ಕೈ’ ಬಿಟ್ಟವರು; 2019ರ ನಂತರ ಕಾಂಗ್ರೆಸ್ ಪಕ್ಷ ತೊರೆದ ನಾಯಕರಿವರು
ಕಾಂಗ್ರೆಸ್ ತೊರೆದು ಶಿಂಧೆ ಸಮ್ಮುಖದಲ್ಲಿ ಶಿವಸೇನಾ ಸೇರಿದ ಮಿಲಿಂದ್ ದಿಯೋರಾ
ಮಿಲಿಂದ್ ದಿಯೋರಾ ಯಾರು? ಕಾಂಗ್ರೆಸ್ ಜೊತೆ 5 ದಶಕಗಳ ಬಾಂಧವ್ಯ ಹೇಗಿತ್ತು?
’ದೇಶ’ ಕ್ಯಾಟಗರಿಯಲ್ಲಿ ರಾಮಮಂದಿರಕ್ಕೆ ಸೇರಿದ ಮತ್ತೊಂದು ಸುದ್ದಿಯೂ ಇದೆ. ಅದರ ತಲೆಬರಹ, ’32 ವರ್ಷಗಳ ಹಿಂದೆ ಇದೇ ದಿನ ಅಯೋಧ್ಯೆಯ ರಾಮಮಂದಿರಕ್ಕೆ ಬಂದು ಸಂಕಲ್ಪ ಮಾಡಿದ್ದರು ಮೋದಿ’ ಎಂದಿದೆ.
ಏಷಿಯಾನೆಟ್ ಸುವರ್ಣ ನ್ಯೂಸ್
ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರ ಒಡೆತನದ ’ಏಷಿಯಾನೆಟ್ ಸುವರ್ಣ ನ್ಯೂಸ್’ ಚಾನೆಲ್‌ನಲ್ಲಿ ಒಂದು ಆಶ್ಚರ್ಯ ಕಂಡುಬಂದಿದೆ. ರಾಮಮಂದಿರ ಹೆಸರಿನ ವಿಶೇಷ ಕ್ಯಾಟಗರಿ ರೂಪಿಸಿಲ್ಲ ಎಂಬುದೇ ಆ ಸಂಗತಿ! ಆದರೆ ಭಾರತ್ ಜೋಡೋ ಆರಂಭವಾಗಿರುವ ಒಂದೇ ಒಂದು ಸುದ್ದಿಯೂ ಜನವರಿ 14ರಂದು ಪಬ್ಲಿಷ್ ಆಗಿಲ್ಲ. ’News’ (ನ್ಯೂಸ್) ಕ್ಯಾಟಗರಿಯಲ್ಲಿರುವ ’India News’, (ಇಂಡಿಯನ್ ನ್ಯೂಸ್) ‘Politics’ (ಪಾಲಿಟಿಕ್ಸ್) ಸಬ್ ಕ್ಯಾಟಗರಿಗಳನ್ನು ನೋಡಿದಾಗ ಅಲ್ಲಿ ’ಭಾರತ್ ಜೋಡೋ ಯಾತ್ರೆ’ಯ ಯಾವುದೇ ಶೀರ್ಷಿಕೆ ಕಂಡು ಬಂದಿಲ್ಲ. ಅದಕ್ಕೆ ಹೊರತಾಗಿ ರಾಮಮಂದಿರ ಮತ್ತು ಮಿಲಿಂದ್ ರಾಜೀನಾಮೆಯ ಸುದ್ದಿಗಳು ದಿಡ್ಡಿಯಾಗಿ ಸಿಗುತ್ತವೆ.
‘ಇಂಡಿಯನ್ ನ್ಯೂಸ್’ ಸಬ್‌ಕ್ಯಾಟಗರಿಯಲ್ಲಿ ಪ್ರಕಟವಾಗಿರುವ ಶೀರ್ಷಿಕೆಗಳು ಹೀಗಿವೆ:
ಹುಸಿ ಜಾತ್ಯತೀತತೆಯ ಬಣ್ಣ ಬಯಲು ಮಾಡಿದ ಅಯೋಧ್ಯೆ ರಾಮಮಂದಿರ ಹೋರಾಟ: ಅಡ್ವಾಣಿ
ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಮಿಲಿಂದ್ ದಿಯೋರಾ: ಇಂದು ಏಕನಾಥ್ ಶಿಂಧೆ ಬಣ ಶಿವಸೇನೆಗೆ ಸೇರ್ಪಡೆ!
ಮೈ ತುಂಬಾ ರಾಮನ ಹೆಸರಿನ ಹಚ್ಚೆ ಹಾಕಿಸಿಕೊಂಡ ರಾಮ ನಾಮಿ ಸಮುದಾಯದೊಂದಿಗೆ ಡಾ ಬ್ರೋ
ರಾಮ ಮಂದಿರ ಲೋಕಾರ್ಪಣೆ ದಿನ ಕಲಾರಾಮ್ ದೇಗುಲಕ್ಕೆ ಬನ್ನಿ: ರಾಷ್ಟ್ರಪತಿಗೆ ಉದ್ಧವ್ ಠಾಕ್ರೆ ಆಹ್ವಾನ
ರಾಮಮಂದಿರ ಕಟ್ಟಲು ಮೋದಿಗೆ ದೀಕ್ಷೆ ಕೊಟ್ಟನಂತೆ ಶ್ರೀರಾಮ: ರಾಮ ಸತ್ಯ ಬಿಚ್ಚಿಟ್ಟ ಬಿಜೆಪಿ ಭೀಷ್ಮ..! (ವಿಡಿಯೊ ಸುದ್ದಿ)
ರಾಮ ಮಂದಿರ ದರ್ಶನಕ್ಕೆ ಆಯೋಧ್ಯೆಗೆ ಬಂದಿಳಿದ ರಾಮಾಯಣದ ಶ್ರೀರಾಮ, ಅದ್ಧೂರಿ ಸ್ವಾಗತ!
ಕಾಂಗ್ರೆಸ್‌ಗೆ ಡಬಲ್ ಶಾಕ್, ಮಿಲಿಂದ್ ಬೆನ್ನಲ್ಲೇ ಮತ್ತೊರ್ವ ಹಿರಿಯ ನಾಯಕ ರಾಜೀನಾಮೆ!
ಶ್ರೀರಾಮ ನನ್ನ ಕನಸಿನಲ್ಲಿ ಬಂದು ಜ.22ಕ್ಕೆ ಆಯೋಧ್ಯೆ ಬರಲ್ಲ ಎಂದ, ಬಿಹಾರ ಸಚಿವರ ವಿಡಿಯೋ ವೈರಲ್!
ಈ ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಎಂಟು ಸುದ್ದಿಗಳು ಪ್ರಕಟವಾಗಿವೆ. ಅದರಲ್ಲಿ ’ಮತ್ತೊರ್ವ ಹಿರಿಯ ನಾಯಕ ರಾಜೀನಾಮೆ’ ಸುದ್ದಿಯಲ್ಲಿ ಭಾರತ್ ಜೋಡೋ ಕುರಿತು ಉಲ್ಲೇಖವಿದೆ. “ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಗೊಂಡ ಬೆನ್ನಲ್ಲೇ ಪಕ್ಷದ ಒಂದೊಂದೇ ವಿಕೆಟ್ ಪತನಗೊಳ್ಳುತ್ತಿದೆ. ಇಂದು ಕಾಂಗ್ರೆಸ್ ಹಿರಿಯ ನಾಯಕ ಮಿಲಿಂದ್ ದಿಯೋರಾ ರಾಜೀನಾಮೆ ಭಾರಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದೀಗ ಅಸ್ಸಾಂನ ಹಿರಿಯ ಕಾಂಗ್ರೆಸ್ ನಾಯಕ, ಅಸ್ಸಾಂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ವಕ್ತಾರರಾಗಿದ್ದ ಅಪುರ್ಬ ಕುಮಾರ್ ಭಟ್ಟಾಚಾರ್ಜಿ ರಾಜೀನಾಮೆ ನೀಡಿದ್ದಾರೆ” ಎಂದು ಮೊದಲ ಪ್ಯಾರಾದಲ್ಲಿ ಸುದ್ದಿ ಬರೆಯಲಾಗಿದೆ. ಆದರೆ ಭಾರತ್ ಜೋಡೋ ಆರಂಭವಾಗಿರುವ ಕುರಿತು ಪ್ರತ್ಯೇಕ ಸುದ್ದಿ ಸುವರ್ಣ ನ್ಯೂಸ್‌ನಲ್ಲಿ ಅಪ್ಲೋಡ್ ಆಗಿಲ್ಲ.
Politics ಸಬ್ ಕ್ಯಾಟಗರಿಯಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಸಂಬಂಧಿಸಿದ ಸುದ್ದಿಯೊಂದು ಇದೆ. ’ದೇಶಕ್ಕೆ ಶಕ್ತಿ ಮೂಡಿಸಲು ರಾಹುಲ್ ಗಾಂಧಿಯಿಂದ ದೊಡ್ಡ ಪ್ರಯತ್ನ: ಡಿ.ಕೆ.ಶಿವಕುಮಾರ್’ ಎಂಬ ಶೀರ್ಷಿಕೆಯನ್ನು ಅದಕ್ಕೆ ನೀಡಲಾಗಿದೆ. ಭಾರತ್ ಜೋಡೋ ನ್ಯಾಯ ಯಾತ್ರೆಗೆ ಸಿಎಂ ಮತ್ತು ಡಿಸಿಎಂ ಹೋಗುತ್ತಿರುವ ಸುದ್ದಿ ಇದಾಗಿದೆ.
’Karntaka News’ (ಕರ್ನಾಟಕ ನ್ಯೂಸ್) ಸಬ್ ಕ್ಯಾಟಗರಿಯಲ್ಲಿ ದಂಡಿಯಾಗಿ ರಾಮಮಂದಿರ ಸಂಬಂಧಿತ ಸುದ್ದಿಗಳೇ ಇವೆ.
ನ್ಯೂಸ್18 ಕನ್ನಡ
ಅಂಬಾನಿ ಒಡೆತನದ `ನ್ಯೂಸ್18 ಕನ್ನಡ’ ಮಾಧ್ಯಮದ ಜಾಲತಾಣವು ಭಾರತ್ ಜೋಡೋ ಯಾತ್ರೆಯ ಆರಂಭದ ಕುರಿತು ವಿಸ್ತೃತವಾಗಿ ಒಂದು ವರದಿಯನ್ನು ’ದೇಶವಿದೇಶ’ ಕ್ಯಾಟಗರಿಯಲ್ಲಿ ಜನವರಿ 14ರಂದು ಪ್ರಕಟಿಸಿದೆ. ಅದರ ಶೀರ್ಷಿಕೆ: ’Bharat Jodo Nyay Yatra: 6700 ಕಿಮೀ, 15 ರಾಜ್ಯಗಳು, ಇಂದಿನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಆರಂಭ’ ಎಂದಿದೆ. ಆದರೆ ಇದನ್ನು ಹೊರತುಪಡಿಸಿ ಮಿಲಿಂದ್ ರಾಜೀನಾಮೆಯ ಸುದ್ದಿಗೆ ಹೆಚ್ಚಿನ ಮಹತ್ವವನ್ನು ಈ ಕ್ಯಾಟಗರಿಯಲ್ಲಿ ನೀಡಲಾಗಿದೆ.
ಮಿಲಿಂದ್ ಸಂಬಂಧಿಸಿದ ಸುದ್ದಿಗಳ ಶೀರ್ಷಿಕೆಗಳು:
Congress: ಭಾರತ್ ಜೋಡೋ ಯಾತ್ರೆ ದಿನವೇ ಕಾಂಗ್ರೆಸ್‌ಗೆ ಶಾಕ್, ಪಕ್ಷ ಬಿಟ್ಟ ರಾಹುಲ್ ಪಡೆಯ ಪ್ರಮುಖ ನಾಯಕ..!
ಪಕ್ಷ ಬಿಟ್ಟ ಮಿಲಿಂದ್ ದಿಯೋರಾ, ಇದನ್ನು ನಿರ್ಧರಿಸಿದ್ದು ಮೋದಿಯೇ ಎಂದ ಜೈರಾಂ ರಮೇಶ್!
ಈ ಸಂಸ್ಥೆಯು ಕೂಡ ‘ಅಯೋಧ್ಯೆ ರಾಮ’ ಎಂಬ ಕ್ಯಾಟಗರಿಯನ್ನು ತೆರೆದಿದೆ. ಇಲ್ಲಿ ’ರಾಮಮಂದಿರದ ಟೈಮ್‌ಲೈನ್’, ’ರಾಮಮಂದಿರ ಚಿತ್ರಗಳು’, ’ರಾಮಮಂದಿರ ವಿಡಿಯೊಗಳು’, ’ರಾಮ ಮಂದಿರದ ವೆಬ್‌ಸ್ಟೋರೀಸ್’- ಹೀಗೆ ರಾಮ ಮಂದಿರ ಸಂಬಂಧಿಸಿದ ಅಪ್‌ಡೇಟ್‌ಗಳು ಸಿಗುತ್ತವೆ. ಈ ಕ್ಯಾಟಗರಿಯಲ್ಲಿ ರಾಮನಿಗೆ ಸಂಬಂಧಿಸಿದ ವಿಶೇಷ ಬರಹಗಳನ್ನು ಕಾಣಬಹುದು. ಅದಕ್ಕೆ ಹೊರತಾಗಿ ಸುದ್ದಿಗಳಲ್ಲಿ ನಿತ್ಯವೂ ರಾಮ ಮಂದಿರಕ್ಕೆ ಹೆಚ್ಚು ಆದ್ಯತೆ ನೀಡುವುದು ಕಂಡು ಬರುತ್ತದೆ.
ಇದಿಷ್ಟು ಪ್ರಮುಖ ನಾಲ್ಕು ಮಾಧ್ಯಮಗಳ ವೆಬ್‌ಸೈಟ್‌ನಲ್ಲಿ ಸಿಕ್ಕಿರುವ ಸುದ್ದಿಗಳ ಅವಲೋಕನ. ಮುಖ್ಯವಾಹಿನಿ ಪತ್ರಿಕೆಗಳ ವೆಬ್‌ಸೈಟ್‌ಗಳ ಸ್ಥಿತಿಯೂ ಇದಕ್ಕಿಂತ ಭಿನ್ನವೇನೂ ಇಲ್ಲ. ಮಾಧ್ಯಮಗಳು ಪ್ರತಿಪಕ್ಷಗಳಿಗೆ ಎಷ್ಟರ ಮಟ್ಟಿಗೆ ಆದ್ಯತೆ ನೀಡುತ್ತವೆ ಎಂಬುದನ್ನು ಓದುಗರು ಗಮನಿಸಬಹುದು.
ಅರೆಬರೆ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವಲ್ಲಿ ಆರ್‌ಎಸ್‌ಎಸ್, ಬಿಜೆಪಿ ರಾಜಕೀಯ ಮಾಡುತ್ತಿರುವುದು ತಿಳಿದ ವಿಚಾರವೇ. ರಾಮಮಂದಿರಕ್ಕೆ ಮಾಧ್ಯಮಗಳು ಏಕಿಷ್ಟು ಒತ್ತು ನೀಡುತ್ತವೆ ಮತ್ತು ಅದೇ ಅವಧಿಯಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಯಾಕೆ ಮಹತ್ವವನ್ನು ನೀಡುತ್ತಿಲ್ಲ ಎಂದು ಕೇಳಿಕೊಳ್ಳಬೇಕಿದೆ. ಬಿಜೆಪಿ ಪ್ರಾಪೊಗಾಂಡಗಳಿಗೆ ಮಾಧ್ಯಮಗಳು ಪೂರಕವಾಗಿವೆಯೇ? ಎಂಬ ಗುಮಾನಿ ಮೂಡುತ್ತದೆ. ಅಯೋಧ್ಯೆ ರಾಮಮಂದಿರಕ್ಕೆ ಸ್ಪೇಸ್ ನೀಡಿದಂತೆಯೇ ’ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಕ್ಷಣಕ್ಷಣದ ಅಪ್‌ಡೇಟ್ ನೀಡಲು ಮಾಧ್ಯಮಗಳು ವಿಶೇಷ ಕ್ಯಾಟಗರಿಯನ್ನು ತಮ್ಮ ಜಾಲತಾಣಗಳಲ್ಲಿ ತೆರೆದು, ಸುದ್ದಿ ಸಮತೋಲನವನ್ನು ಕಾಪಾಡಿಕೊಳ್ಳುತ್ತವೆಯೇ? ’ಧರ್ಮ, ಜಾತಿಗಳ ಸಂಕೋಲೆಯಲ್ಲಿ ಒಡೆದು ಹೋಗಿರುವ ದೇಶವನ್ನು ಒಗ್ಗೂಡಿಸುತ್ತೇನೆ’ ಎಂದು ಮೊದಲ ಕಂತಿನ ಭಾರತ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿಯವರು ಮಾಡಿದಾಗಲೂ ಮಾಧ್ಯಮಗಳ ಕವರೇಜ್ ತೀರಾ ಕಳಪೆಯಾಗಿತ್ತು ಎಂಬುದು ಅಷ್ಟೇ ಸತ್ಯ.
ಯತಿರಾಜ್ ಬ್ಯಾಲಹಳ್ಳಿ
ಪತ್ರಕರ್ತ, ಲೇಖಕ