ಶಾಂತಿನಗರ ಗಲಭೆ ಮತ್ತು ನ್ಯೂಸ್‌ಚಾನಲ್‌ಗಳ ಘಾತಕ ಪತ್ರಿಕೋದ್ಯಮ!

Date:

ದೇವರ ಕುರಿತು ಅನಂತಮೂರ್ತಿ ಅವರು ಆಡಿದ್ದ ಮಾತುಗಳನ್ನೆ ಉದಾಹರಿಸಿ‌ದ್ದ ಎಂ ಎಂ ಕಲಬುರಗಿ ಅವರ ಹತ್ಯೆಗೆ ಭೂಮಿಕೆಯನ್ನು ಒದಗಿಸಿಕೊಟ್ಟಿದ್ದೆ ಇದೇ ಕನ್ನಡದ ನ್ಯೂಸ್ ಚಾನಲ್‌ಗಳು

ನಮ್ಮ ಸಮಾಜವನ್ನು ಈಗ ಪರಿಪರಿಯಾಗಿ ಕಾಡುತ್ತಿರುವ ಅನೇಕ ಸಂಗತಿಗಳಲ್ಲಿ ಕೋಮುವಾದವೂ ಒಂದು. ಅದನ್ನು ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಎಂದು ಸೀಳಿ ನೋಡುವುದಲ್ಲ. ಕೋಮುವಾದ ಕೋಮುವಾದವೇ ಆಗಿರುತ್ತದೆ. ದ್ವೇಷ-ಹಿಂಸೆಯ ಮೂಲಕ ಮನುಕುಲವನ್ನೆ ನಿರ್ನಾಮ ಮಾಡುವ ಮತ್ತು ಅದಕ್ಕಾಗಿ ಧರ್ಮವನ್ನು ಗುರಾಣಿಯಾಗಿಸಿಕೊಳ್ಳುವ ಅಧರ್ಮದ ಕೆಲಸದ ವಿರುದ್ದ ಪ್ರತಿಯೊಬ್ಬರು ಹೋರಾಡಬೇಕು. ಹೀಗೆ ಹೋರಾಡುವವರಲ್ಲಿ ನ್ಯೂಸ್‌ ಚಾನೆಲ್‌ಗಳು/ಪತ್ರಕರ್ತರು ಪ್ರಜ್ಞಾಪೂರ್ವಕವಾಗಿ ಪಾಲುದಾರರಾಗಿರಬೇಕು.

ಶಿವಮೊಗ್ಗದ ಶಾಂತಿನಗರ(ರಾಗಿಗುಡ್ಡ)ದಲ್ಲಿ ಅ.1 ರಂದು ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆಯನ್ನು ವೈಭವೀಕರಣಗೊಳಿಸುವಲ್ಲಿ ಕನ್ನಡದ ಒಂದರೆಡು ನ್ಯೂಸ್ ಚಾನಲ್‌ಗಳು ತೋರಿದ ಆತುರದ ವರ್ತನೆಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದು, ಪತ್ರಿಕೋದ್ಯಮದ ನನ್ನ ಗೆಳೆಯರೆ ಆದ ಈ ಚಾನಲ್‌ಗಳ ಸ್ಥಳೀಯ ವರದಿಗಾರರು ಎದುರಿಸುತ್ತಿದ್ದ ವೃತ್ತಿಸಂಕಟವನ್ನು ಗಮನದಲ್ಲಿಟ್ಟುಕೊಂಡು ಈ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದೇನೆ.

ಶಾಂತಿನಗರದ ಗಲಭೆಯನ್ನು ವರದಿ ಮಾಡುವ ಅತ್ಯುತ್ಸಾಹದಲ್ಲಿ ಕನ್ನಡದ ಕೆಲವು ನ್ಯೂಸ್‌ಚಾನಲ್‌ಗಳು ವಾಸ್ತವಕ್ಕೆ ದೂರವಾದ ಸಂದರ್ಭವನ್ನು ಉದ್ರೇಕಕಾರಿಯಾಗಿ ಪ್ರಸಾರ ಮಾಡುವಲ್ಲಿ ಪೈಪೋಟಿಗಿಳಿದವಂತೆ ಕಂಡು ಬಂದವು. ಆ ಚಾನಲ್‌ಗಳು, ಅದರ ವರದಿಗಾರರ ವರದಿಗಾರಿಕೆಗಳು ಕೋಮುಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆಯ ಪರಿಧಿ ದಾಟಿ ದ್ವೇಷವನ್ನು, ಆತಂಕವನ್ನು ಸೃಷ್ಟಿಸುವತ್ತ ಬೆಂಕಿಯುಗುಳತೊಡಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಷ್ಟೆ ಅಲ್ಲದೆ, ನೇರವಾಗಿ ಸಾಮಾನ್ಯ ಜನರಿಂದಲೇ ವ್ಯಾಪಕ ಟೀಕೆಯನ್ನು, ಜನಪರ ಪತ್ರಿಕೋದ್ಯಮದ ಪಾಠವನ್ನು ಹೇಳಿಸಿಕೊಳ್ಳಬೇಕಾದ ಬೌದ್ಧಿಕ ದಿವಾಳಿತನಕ್ಕೆ ತುತ್ತಾಗಬೇಕಾಯಿತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇಸ್ರೇಲ್‌ನ ಪ್ರವಾಸದಲ್ಲಿದ್ದ ಯು.ಆರ್ ಅನಂತಮೂರ್ತಿ ಅವರು ಇಸ್ರೇಲ್‌ನ ರಾಜಧಾನಿಯ ಹೋಟೆಲ್ ವೊಂದರಲ್ಲಿ ತಂಗಿದ್ದ ಸಂದರ್ಭ. ಸಂಜೆ ವೇಳೆಗೆ ಹೋಟೆಲ್‌ನ ಮುಂಭಾಗದ ರಸ್ತೆಯಲ್ಲಿ ಭಾರೀ ಸ್ಪೋಟವೊಂದು ನಡೆಯುತ್ತದೆ. ಇದರಿಂದ ಆತಂಕಗೊಂಡ ಅನಂತಮೂರ್ತಿ ಅವರು ತಕ್ಷಣವೆ ಬಹುಮಹಡಿಯ ತಮ್ಮ ಕೋಣೆಯಿಂದ ಹೊರಬಂದು ಮೆಟ್ಟಿಲಿಳಿಯಲು ದೌಡಾಯಿಸುತ್ತಿರುವಾಗ ಎದುರಿಗೆ ಸಿಕ್ಕ ಹೋಟೆಲ್‌ನ ಸರ್ವರ್ ‘ಸರ್, ಏನಾಗಿಲ್ಲ, ಗಾಬರಿ ಬೇಡ, ನೀವು ನಿರುಮ್ಮಳವಾಗಿರಿ’ ಎಂದು ಹೇಳುತ್ತಾನೆ. ಇಷ್ಟೊಂದು ದೊಡ್ಡ ಸದ್ದು ಆಗಿರುವಾಗ ಹೋಟೆಲ್ ಸಿಬ್ಬಂದಿಗಳು, ಹೋಟೆಲ್‌ನಲ್ಲಿದ್ದ ಇಸ್ರೇಲಿಗಳು ಏನೂ ಆಗೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿರುವುದು ಅನಂತಮೂರ್ತಿ ಅವರಿಗೆ ಆಶ್ಚರ್ಯ ಹುಟ್ಟಿಸುತ್ತದೆ.

ಕೋಣೆಗೆ ಮರಳಿದ ಅನಂತಮೂರ್ತಿಯವರು ಕಿಟಿಕಿಯಿಂದ ಹೊರಗೆ ನೋಡಿದಾಗ ರಸ್ತೆಯಲ್ಲಿ ಇಸ್ರೇಲ್‌ನ ಪೊಲೀಸರು, ಆಂಬ್ಯುಲೆನ್ಸ್‌ಗಳು ನಿಂತಿದ್ದು, ರಸ್ತೆ ತುಂಬಾ ಹರಿದಿದ್ದ ರಕ್ತವನ್ನು ಅಲ್ಲಿನ ನಾಗರಿಕ ಆಡಳಿತ ಸಿಬ್ಬಂದಿಗಳು ತೊಳೆಯುತ್ತಿರುವುದು ಕಾಣಿಸುತ್ತದೆ. ಇಸ್ರೇಲ್ ಮತ್ತು ಪ್ಯಾಲಸ್ತೇನಿಗಳ ನಡುವಿನ ಸಂಘರ್ಷದ ಬಗ್ಗೆ ಮೊದಲೆ ತಿಳಿದಿದ್ದ ಅನಂತಮೂರ್ತಿ ಅವರಿಗೆ ಇದೇನು ಯುದ್ಧವೇ ನಡೆದು ಬಿಡುತ್ತದೇನೋ ಎಂಬ ಆತಂಕಕ್ಕೊಳಗಾಗುತ್ತಾರೆ. ಆದರೆ ಹೊರಗೆ ನಡೆದ ಘಟನೆ ಬಗ್ಗೆ ಸ್ಪಷ್ಟ ಮಾಹಿತಿ ಆ ಕ್ಷಣಕ್ಕೆ ಯಾರೂ ಹೇಳದಂತಾಗಿದ್ದರು. ತಮ್ಮ ಕೋಣೆಯಲ್ಲಿದ್ದ ಟಿವಿಯ ನ್ಯೂಸ್‌ಚಾನಲ್‌ಗಳನ್ನೆಲ್ಲಾ ತಡಕಾಡಿದರೂ ಹೊರಗೆ ನಡೆದ ಘಟನೆ ಬಗ್ಗೆ ಯಾವುದೇ ಸಣ್ಣ ಬ್ರೇಕಿಂಗ್ ಸುದ್ದಿಯೂ ಕಾಣಸಿಗಲಿಲ್ಲ. ಪ್ಯಾಲಸ್ತೇನಿ ಉಗ್ರರು ನಡೆಸಿದ ದಾಳಿಗೆ ನಾಲ್ಕಾರು ಜನ ಇಸ್ರೇಲಿಗಳು ಸಾವು ಕಂಡಿದ್ದರು. ಉಗ್ರರನ್ನು ಇಸ್ರೇಲ್ ಸೇನೆ ಬೇಟೆಯಾಡಿದ್ದರಿಂದ ರಕ್ತ ಹರಿದಿತ್ತು. ಇಂತಹ ಬಾರೀ ಅನಾಹುತವೇ ನಡೆದಿದ್ದರೂ ಅಲ್ಲಿನ ಸುದ್ದಿ ಮಾಧ್ಯಮಗಳು ಏನೂ ಆಗಿಲ್ಲವೇನೊ ಎಂಬಂತೆ ಇರುವುದು ಅನಂತಮೂರ್ತಿ ಅವರಿಗೆ ವಿಸ್ಮಯ.

ಇದೇ ಯೋಚನೆಯಲ್ಲಿ ರಾತ್ರಿ ಕಳೆದ ಅವರು, ಬೆಳಗ್ಗೆನೆ ಲಘುಬಗೆಯಿಂದ ಇಸ್ರೇಲ್‌ನ ನ್ಯೂಸ್ ಪೇಪರ್ ಗಳನ್ನೆಲ್ಲಾ ತರಿಸಿಕೊಂಡು ನೆನ್ನೆಯ ಘಟನೆಯ ಸುದ್ದಿಗಾಗಿ ಜಾಲಾಡುತ್ತಾರೆ. ನ್ಯೂಸ್ ಚಾನಲ್‌ಗಳಲ್ಲೂ ಹುಡುಕಾಡುತ್ತಾರೆ. ಆದರೆ ಯಾವ ಪತ್ರಿಕೆಯಲ್ಲೂ/ ಚಾನಲ್‌ಗಳಲ್ಲೂ ಹಿಂದಿನ ದಿನದ ಸುದ್ದಿಯೇ ಕಾಣುವುದಿಲ್ಲ. ಯಾವ ಸುದ್ದಿವಾಹಿನಿಗಳಲ್ಲೂ ಪ್ಯಾನಲ್ ಚರ್ಚೆಗಳಿರುವುದಿಲ್ಲ. ಆ ದೇಶದ ಖ್ಯಾತ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಇಸ್ರೇಲ್‌ನ ಬರಡು ನೆಲದಲ್ಲಿ ರೈತನೋರ್ವ ಕೃಷಿ ಮಾಡಿ ಭರ್ಜರಿ ಫಸಲು ಬೆಳೆದ ಸುದ್ದಿಯೊಂದು ಅಗ್ರ ಸುದ್ದಿಯಾಗಿ ಪ್ರಕಟಿಸಿತ್ತು. ಇಸ್ರೇಲ್‌ನ ಅನೇಕ ಮುಖ್ಯವಾಹಿನಿಯ ಪತ್ರಿಕೆಗಳು ಅನ್ಯ ಸುದ್ದಿಗಳನ್ನೆ ಮುಖ್ಯಸುದ್ದಿಗಳನ್ನಾಗಿ ಪ್ರಕಟಿಸಿ ಉಗ್ರರ ದಾಳಿ, ನಾಗರಿಕರ ಸಾವನ್ನು ಹತ್ತಾರು ಸಾಲುಗಳ ಸುದ್ದಿಯಾಗಿ ಕೊನೆಯ ಪುಟಗಳ ಮೂಲೆಯಲ್ಲಿ ಪ್ರಕಟಿಸಿರುತ್ತವೆ. ನ್ಯೂಸ್ ಚಾನಲ್‌ಗಳು ಸ್ಕ್ರೋಲ್ ತೋರಿಸಿ ಸುಮ್ಮನಾಗಿರುತ್ತವೆ. ಒಂದು ರಾಷ್ಟ್ರದ ಸಾರ್ವಭೌಮತೆಯ ಮೇಲೆ ನಡೆದ ದಾಳಿಯನ್ನೇ ಅಲ್ಲಿನ ಮಾಧ್ಯಮಗಳು ಎದುರುಗೊಂಡ ಹೊಣೆಗಾರಿಕೆಯ ಪರಿಗೆ ಅನಂತಮೂರ್ತಿ ಸೋಜಿಗಗೊಂಡಿದ್ದರು.

ಇದೇ ಘಟನೆ ಭಾರತದಲ್ಲಿ ನಡೆದಿದ್ದರೆ ಭಾರತದ ಮಾಧ್ಯಮಗಳು ಹೇಗೆ ವರ್ತಿಸುತ್ತಿದ್ದವು ಎಂದು ಅನಂತಮೂರ್ತಿ ಪ್ರಶ್ನಿಸುತ್ತಾರೆ. ಅನಂತಮೂರ್ತಿ ಅವರ ಪ್ರಶ್ನೆಗೆ ಉತ್ತರ ಹುಡುಕಾಡುತ್ತಿರುವ ಹೊತ್ತಿನಲ್ಲೇ ಶಿವಮೊಗ್ಗದ ಶಾಂತಿನಗರದಲ್ಲಿ ನಡೆದ ಒಂದು ಸಣ್ಣ ಗಲಭೆಯ ಹಿನ್ನಲೆಯಲ್ಲಿ ಪರಿಸ್ಥಿತಿ ಉದ್ರೇಕಗೊಂಡಿದೆ (ಧಗ..ಧಗ, ಕೊತ..ಕೊತ..ಇತ್ಯಾದಿ) ಎಂಬಂತೆ ದಿನದ 24 ಗಂಟೆಗಳ ಬ್ರೇಕಿಂಗ್ ಸುದ್ದಿಯಾಗಿ ಪ್ರಸಾರ ಮಾಡಿದ ನಮ್ಮ ಸುದ್ದಿ ಮಾಧ್ಯಮಗಳ ಹೊಣೆಗಾರಿಕೆಯನ್ನು ಇಂದು ಸಾಮಾನ್ಯರು ಪ್ರಶ್ನಿಸುತ್ತಾ ಲೇವಡಿ ಮಾಡುವುದನ್ನು ಕಾಣುವ ಪರಿಸ್ಥಿತಿ ಬಂದಿದೆ.

ದೇವರ ಕುರಿತು ಅನಂತಮೂರ್ತಿ ಅವರು ಆಡಿದ್ದ ಮಾತುಗಳನ್ನೆ ಉದಾಹರಿಸಿ‌ದ್ದ ಎಂ ಎಂ ಕಲಬುರಗಿ ಅವರ ಹತ್ಯೆಗೆ ಭೂಮಿಕೆಯನ್ನು ಒದಗಿಸಿಕೊಟ್ಟಿದ್ದೆ ಇದೇ ಕನ್ನಡದ ನ್ಯೂಸ್ ಚಾನಲ್‌ಗಳು. ಕೊರೋನಾ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ವಲಸೆ ಹೊರಟ ಸಾವಿರಾರು ಕೂಲಿ ಕಾರ್ಮಿಕರ ಬದುಕಿನ ಬರ್ಬರತೆಗಿಂತಲೂ ಐಟಿ/ಬಿಟಿ ಟೆಕ್ಕಿಗಳ ಬದುಕಿನ ಬಗ್ಗೆ ಮಾಧ್ಯಮಗಳು ಚಿಂತಾಕ್ರಾಂತವಾಗಿದ್ದವು. ಅಂಗಾಲಿನ ಚರ್ಮ ಕಿತ್ತು ನೆತ್ತರು ತೊಟ್ಟಿಕ್ಕುವಂತೆ ನಡೆಯುತ್ತಾ ಸಾಗಿದ ಅಸಹಾಯಕ ಜನಸಮುದಾಯಕ್ಕೆ ಊರು ಸೇರಲು ವ್ಯವಸ್ಥೆ ಮಾಡಲಾರದ ಸರ್ಕಾರಗಳು ಬದುಕಿದ್ದು ಸತ್ತಂತೆ ಎಂಬ ಪ್ರಶ್ನೆಯನ್ನೆ ಎಸೆಯದ ಮಾಧ್ಯಮಗಳು/ಪತ್ರಕರ್ತರು ಸ್ಪೆಷಲ್ ಫ್ಲೈಟ್‌ನಲ್ಲಿ ಬರುವ ವಿಐಪಿ ಸಂತತಿಗಳ ರಕ್ಷಣೆಯೇ ಸರ್ಕಾರದ ದೊಡ್ಡ ಕ್ರಮವೆಂದು ಭಜನೆಯಲ್ಲಿ ತೊಡಗಿದ್ದವು.

ಇಡೀ ದೇಶ ಮಹಾಮಾರಿ ಕೊರೋನಾ ವಿರುದ್ದ ಹೋರಾಡುತ್ತಿದ್ದರೆ ಭಾರತದ ನ್ಯೂಸ್‌ಚಾನಲ್‌ಗಳು ಮುಸ್ಲಿಮರ  ವಿರುದ್ದ ಹೋರಾಡುತ್ತಿದ್ದವು. ಈ ಸೋಂಕನ್ನು ಒಂದು ಧರ್ಮದ ತಲೆಗೆ ಕಟ್ಟಿ ಜನರಲ್ಲಿ ಕೊರೋನಾಗಿಂತಲೂ ಭೀಕರವಾದ ಕೋಮು ಸೋಂಕನ್ನು ಬಿತ್ತುವ ಕೆಲಸದಲ್ಲಿ ನಿರಂತರವಾಗಿದ್ದವು. ಇಂದಿಗೂ ನಿಲ್ಲದೆ ಇರುವ ಮಣಿಪುರದಲ್ಲಿನ ಆದಿವಾಸಿಗಳ ಮಾರಣಹೋಮಕ್ಕಿಂತ ನಮ್ಮ ನ್ಯೂಸ್ ಚಾನಲ್‌ಗಳಿಗೆ ನಮ್ಮ ಪ್ರಧಾನಮಂತ್ರಿಗಳ ವಿಶ್ವನಾಯಕರ ಸಭೆಯಲ್ಲಿನ ವೈಭವವನ್ನು ತೋರಿಸುವದೇ ಪರಮ ಕರ್ತವ್ಯವಾಗಿತ್ತು. ದೂರದ ಮಾತಿರಲಿ, ನಮ್ಮದೆ ರಾಜ್ಯದಲ್ಲಿ ಮೂರ‍್ನಾಲ್ಕು ತಿಂಗಳ ಹಿಂದೆಯಷ್ಟೆ ನಡೆದ ಸಾಮಾಜಿಕ ಬಹಿಷ್ಕಾರಗಳು, ಅಸ್ಪೃಶ್ಯತೆಯ ಕ್ರೌರ್ಯಗಳು, ಮರ್ಯಾದೆಗೇಡು ಹತ್ಯೆಗಳ ಕುರಿತು ಕನ್ನಡದ ನ್ಯೂಸ್ ಚಾನಲ್‌ಗಳು ಎಷ್ಟೊಂದು ಪರಿಣಾಮಕಾರಿ ಹೊಣೆಗಾರಿಕೆಯ ವರದಿಗಳನ್ನು ಮಾಡಿದ್ದವು? ಇಂತಹ ಹೊಣೆಗೇಡಿತನದ ನೂರಾರು ಉದಾಹರಣೆಗಳು ಪ್ರತಿದಿನ ಸಿಗುತ್ತವೆ.

ಹೊಸ ತಲೆಮಾರಿನ ಯುವ ಪತ್ರಕರ್ತರಿಗೆ ಇಂದು ಆದರ್ಶವಾಗಬಲ್ಲ, ಮಾದರಿಯಾಗಬಲ್ಲ ಮಾಧ್ಯಮ/ಪತ್ರಕರ್ತರು ಬೇಕಾಗಿದ್ದಾರೆ. ಅದರ ಕೊರತೆ ಎದ್ದು ಕಾಣುತ್ತಿದೆ. ವಿಶ್ವವಿದ್ಯಾಲಯಗಳ ತರಗತಿಗಳಲ್ಲಿ ಕಲಿತು ಹೊರಬರುವ ಹೊಸತಲೆಮಾರಿನ ಪತ್ರಕರ್ತರು ನ್ಯೂಸ್ ಚಾನಲ್ ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿತ್ತು. ಅವುಗಳಿಗೆ ಈಗ ಬೇಕಾಗಿರುವ ಅತಿರಂಜಕ ಸುಳ್ಳು, ನಟನೆ, ವಿತಂಡವಾದ, ಕಿರುಚಾಟ, ಸಮುದಾಯ ಒಡೆಯುವ ತಂತ್ರ ಕುಶಲತೆಯನ್ನು ಕಲಿಯಬೇಕಿದೆ. ಇದಕ್ಕಾಗಿ ಮತ್ತೆ ವಿಶ್ವವಿದ್ಯಾಲಯಗಳ ಮೊರೆ ಹೋಗಬೇಕಿಲ್ಲ. ಈಗಿರುವ ಈ ಎಲ್ಲಾ ಕೌಶಲ್ಯ ಹೊಂದಿರುವ ಪತ್ರಕರ್ತ(?)ರನ್ನೆ ಮಾದರಿಯಾಗಿಸಿಕೊಳ್ಳುವ ದಾರಿ ಅವರೆದುರಿಗಿದೆ. ಸುಳ್ಳು, ಹಿಂಸಾವಿನೋಧ ಮತ್ತು ಪ್ರಚೋದನಾಕಾರಿ ಗುಣಗಳೇ ಪತ್ರಿಕೋದ್ಯಮದ ಮೌಲ್ಯಗಳು ಅಥವಾ ಪತ್ರಕರ್ತನ ಗುಣಲಕ್ಷಣಗಳು ಎಂದು ಸಾಂಸ್ಥೀಕರಣಗೊಳ್ಳತೊಡಗಿರುವುದು ಆತಂಕದ ಸಂಗತಿ. ಆದರ್ಶಗಳನ್ನೆ ಇಟ್ಟುಕೊಂಡು ಪತ್ರಿಕೋದ್ಯಮಕ್ಕೆ ಕಾಲಿಡುವ ಯುವ ಸಮೂಹ ಕ್ರಮೇಣ ಹೊಟ್ಟೆಪಾಡಿನ ಅನಿವಾರ್ಯ ಬದುಕಿನ ಅಭದ್ರತೆಗೆ ತುತ್ತಾಗಿ ಕೂಗುಮಾರಿತನಕ್ಕೆ ಒಗ್ಗಿ ಹೋಗಿ ಬಿಡುತ್ತದೆ. ಇಲ್ಲವೆ ಅವರನ್ನು ಮಾಧ್ಯಮ ಸಂಸ್ಥೆಗಳು ಒಗ್ಗಿಸಿಕೊಂಡುಬಿಡುತ್ತವೆ.

ಮುದ್ರಣ ಮಾಧ್ಯಮವನ್ನು ಹೊರತುಪಡಿಸಿ ಇಂದು ಅಂತರ್‌ಜಾಲದ ಬಹುಸಾಧ್ಯತೆಗಳನ್ನು (ವೆಬ್ ಜರ್ನಲ್) ಬಳಸಿಕೊಂಡು ಹುಟ್ಟಿಕೊಂಡಿರುವ ಸುದ್ದಿಮಾಧ್ಯಮ ಜಾಲತಾಣಗಳು ಜನಪರ ಪತ್ರಿಕೋದ್ಯಮ ಮತ್ತು ಮೌಲ್ಯಾಧಾರಿತ ಪತ್ರಿಕೋದ್ಯಮಕ್ಕೆ ಹೊಸ ಭಾಷ್ಯ ಬರೆದಂತೆಯೂ, ಭರವಸೆಯಂತೆಯೂ ಕಾಣುತ್ತಿವೆ.
ಮೆಕ್ ಲೂಹನ್ ಹೇಳುವಂತೆ “ಮಾಧ್ಯಮಗಳು ಜನರ ಸಂದೇಶದ (ಜನರೆಂದರೆ ಸರ್ಕಾರವೂ ಕೂಡ) ವಾಹಕವೇ ವಿನಃ ಮಾಧ್ಯಮವೇ ಸಂದೇಶವಲ್ಲ”. ಆದರೆ ಇಂದು “ಮಾಧ್ಯಮವೇ ಸಂದೇಶ”ವಾಗಿದೆ. ಇದು ಮುಂದುವರೆದು ಮಾಧ್ಯಮಗಳು ಇಂದು ಶಾಸಕಾಂಗದಂತೆಯೂ, ಕಾರ್ಯಾಂಗದಂತೆಯೂ, ನ್ಯಾಯಾಂಗದಂತೆಯೂ ವರ್ತಿಸುತ್ತಿವೆ. ಮಾಧ್ಯಮಗಳಿಗೆ ಸಂವಿಧಾನದತ್ತ ವಿಶೇಷ ಅಧಿಕಾರವಿಲ್ಲ. ಪತ್ರಕರ್ತರಾಗಲಿ/ ಸುದ್ದಿ ಮಾಧ್ಯಮಗಳಾಗಲಿ ಸಾರ್ವಭೌಮರಲ್ಲ. ತಮ್ಮ ನಡೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲಿ (ಆರ‍್ಟಿಕಲ್ 19(ಎ)) ಇರುವ ಮಿತಿಗೊಳಪಟ್ಟಿದೆ ಎಂಬ ಅರಿವು ಮರೆತಂತೆ ಮೆರೆಯುತ್ತಿರುವ ಬಹುತೇಕ ಸುದ್ದಿ ಮಾಧ್ಯಮಗಳು‌ ಅಧಿಕಾರ ರಾಜಕಾರಣ ಮತ್ತು ಕೋಮುವಾದ ಹಿತಾಸಕ್ತಿಯ ಭಾಗವಾಗುತ್ತಿವೆ.

ಸಂವಿಧಾನದ ಮೂಲತತ್ವಗಳಾದ ಸ್ವಾತಂತ್ರ್ಯ, ಸಮಾನತೆ, ಸೌಹಾರ್ದತೆ, ಧರ್ಮ ನಿರಪೇಕ್ಷತೆ ಅರ್ಥವತ್ತಾಗಿರುವಂತೆ ನೋಡಿಕೊಳ್ಳುವುದು ಮಾಧ್ಯಮಗಳ ಜವಾಬ್ದಾರಿ. ಜನರ ದನಿಯಾಗಬೇಕಾದ ಮಾಧ್ಯಮಗಳೇ ರಾಜಕೀಯ ಅಜೆಂಡಾಗಳ ವಕ್ತಾರರಂತೆ ಸುಳ್ಳು, ಟಿಆರ್‌ಪಿ ರೂಪದ ವ್ಯಾಪಾರಿ ಸರಕು ಸೃಷ್ಟಿಸಿಕೊಳ್ಳುವ (Saleable Material) ಲಾಭಕೋರ ದನಿಯನ್ನು ಜನರ ದನಿಯೆಂದೇ ನಂಬಿಸಲಾಗುತ್ತಿದೆ.

ಶಿವಮೊಗ್ಗದ ಶಾಂತಿನಗರದ ಗಲಭೆಯನ್ನು ಅತಿರಂಜಿಸುತ್ತಿರುವ, ಉದ್ರೇಕಗೊಳಿಸುತ್ತಿರುವ ಕೆಲವು ಕನ್ನಡದ ನ್ಯೂಸ್‌ಚಾನಲ್‌ಗಳ ಆಂತರ್ಯದಲ್ಲಿ ಇದೆ ಸ್ವಭಾವ ಮಿಸುಕಾಡುತ್ತಿದೆ. ಇವತ್ತಿನ ಮಾಧ್ಯಮಗಳ ಕುರಿತು ಮಾತನಾಡುವಾಗ 18 ನೇ ಶತಮಾನದಲ್ಲಿ ಸುದ್ದಿಮಾಧ್ಯಮಗಳನ್ನು ವಿಶ್ಲೇಷಿಸುತ್ತಾ ಸ್ವತಃ ಪತ್ರಕರ್ತ ಆಗಿದ್ದ‌ ಕಾರ್ಲ್‌ಮಾರ್ಕ್ಸನ ಈ ಮಾತು ನೆನಪಾಗುತ್ತದೆ: “ಬರೆಯಲು, ಬದುಕಲು ಸಂಪಾದನೆ ಅಗತ್ಯ, ಆದರೆ ಸಂಪಾದನೆಗಾಗಿಯೆ ಬರೆಯುವ, ಬದುಕುವ ಅವಸ್ಥೆ ಪತ್ರಕರ್ತನದ್ದಾಗಬಾರದು”. ಇವತ್ತು ಏನಾಗಿದೆ ಎಂಬುದು (ವರ್ತಮಾನದ ಸುದ್ದಿಮಾಧ್ಯಮ ಕ್ಷೇತ್ರಕ್ಕೆ ಅನ್ವಯಿಸಿಕೊಂಡು) ನಿಮ್ಮ ಊಹೆಗೆ ಬಿಡುತ್ತೇನೆ.

ಪೋಸ್ಟ್ ಹಂಚಿಕೊಳ್ಳಿ:

ಎನ್‌ ರವಿಕುಮಾರ್
ಎನ್‌ ರವಿಕುಮಾರ್
ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೋದಿಯನ್ನು ಬದಿಗೊತ್ತಿ ಯುವ ಭಾರತ ಗೆಲ್ಲುವತ್ತ ಚಿತ್ತ ಹರಿಸುವರೇ ರಾಹುಲ್‌ ಗಾಂಧಿ?

ದೇಶದ ಉದ್ದಗಲಕ್ಕೂ ನಡೆದ ಎರಡು ಭಾರತ್ ಜೋಡೋ ಯಾತ್ರೆಗಳು ಮತ್ತು 2024ರ...

ಪೋಷಕರು ತಮ್ಮ ಮನೆಯಿಂದಲೇ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಸಬೇಕು: ಸ್ಪೀಕರ್ ಯು ಟಿ ಖಾದರ್

ಮಾತೃಭಾಷೆ, ಸಾಹಿತ್ಯಗಳು ಉಳಿದು ಬೆಳೆಯಬೇಕಾದರೆ ಮುಂದಿನ ಪೀಳಿಗೆಗೆ ವರ್ಗಾಯಿಸುವ ಅವಶ್ಯಕತೆ ಇದೆ....

ಹಗರಣಗಳು ಬಯಲಿಗೆ ಬರುವ ಭಯದಿಂದ ಸದನದಲ್ಲಿ ಬಿಜೆಪಿ ಗದ್ದಲ: ಡಿ ಕೆ ಶಿವಕುಮಾರ್ ವಾಗ್ದಾಳಿ

ಸರ್ಕಾರದ ಮೇಲೆ ಆರೋಪ ಮಾಡಿದ ಬಿಜೆಪಿಯವರಿಗೆ ಉತ್ತರವನ್ನು ಕೇಳುವ ಸಹನೆ, ಸಂಯಮ...

ಹಗರಣ ಮುಚ್ಚಿಹಾಕಲು ಮಳೆ ವಿಷಯ ಚರ್ಚೆಗೆ ಎತ್ತಿಕೊಂಡ ಸ್ಪೀಕರ್‌: ಆರ್‌.ಅಶೋಕ್

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಬಿಜೆಪಿ ಸದಸ್ಯರು ಧ್ವನಿ ಎತ್ತಿದರೆ...