370ನೇ ವಿಧಿ ರದ್ದತಿಗೆ 5 ವರ್ಷ | ಬಿಜೆಪಿ ಹಿಂದುತ್ವಕ್ಕೆ ಬಲಿಯಾದ ಕಾಶ್ಮೀರ; ಇನ್ನೂ ಸಿಗದ ಉಸಿರು

Date:

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರದ್ದುಗೊಳಿಸಿ ಐದು ವರ್ಷಗಳಾಗಿವೆ. 370ನೇ ವಿಧಿಯ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವವನ್ನೂ ಕಸಿದುಕೊಂಡು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಿದೆ. 2019ರ ಆಗಸ್ಟ್‌ 5ರಂದು ರಾಜ್ಯತ್ವವನ್ನು ಕಳೆದುಕೊಂಡ ಜಮ್ಮು-ಕಾಶ್ಮೀರವು ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಕಾಶ್ಮೀರಿ ಜನರ ಹಕ್ಕುಗಳ ಉಲ್ಲಂಘನೆಗಳಾಗಿವೆ. ಉಳ್ಳವರು, ಬಂಡವಾಳಶಾಹಿಗಳು ಕಾಶ್ಮೀರವನ್ನು ಆವರಿಸಿಕೊಳ್ಳುತ್ತಿದ್ದಾರೆ. ಚುನಾವಣೆಗಳು ನಡೆಯದೆ, ಜನಪ್ರತಿನಿಧಿಗಳಿಲ್ಲದೆ, ಅಧಿಕಾರಿಗಳ ಆಡಳಿತದಲ್ಲಿ ಕಾಶ್ಮೀರ ಕಂಗಾಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಜನರು ಅವಮಾನ, ಅನ್ಯಾಯ ಮತ್ತು ದಬ್ಬಾಳಿಕೆಯನ್ನು ಎದುರಿಸುತ್ತಲೇ ಐದು ವರ್ಷಗಳನ್ನು ಕಳೆದಿದ್ದಾರೆ. ಕ್ಯಾಲೆಂಡರ್‌ನಲ್ಲಿ ವರ್ಷಗಳ ಬದಲಾವಣೆಯು ತಮ್ಮ ಪರಿಸ್ಥಿತಿಗಳಿಗೆ ಬದಲಾವಣೆ ತರುತ್ತವೆಯೇ ಎಂದು ಅಲ್ಲಿನ ಜನರು ಎದುರು ನೋಡುತ್ತಿದ್ದಾರೆ.

ಕಾಶ್ಮೀರಿ ಜನರಿಗೆ ಅವಮಾನ ಮತ್ತು ದಬ್ಬಾಳಿಕೆಯನ್ನು ನೆನಪಿಸುವ ಕರಾಳ ದಿನವು ಭಾರತದ ಉಳಿದ ಭಾಗಗಳಿಗೆ ಸಂತೋಷದ ದಿನವಾಗಿದೆ. ಆ ಜನರ ನಡುಬಗ್ಗಿಸಿದ ಸಂಕೇತವು ಉಳಿದವರಿಗೆ ವಿಜಯದ ಸಂಕೇತವಾಗಿದೆ ಎಂಬುದನ್ನು ಕಾಶ್ಮೀರಿಗರು ನೋವಿನಿಂದಲೇ ನೋಡುತ್ತಿದ್ದಾರೆ. ಇದು ಒಂದು ತುಂಡು ಭೂಮಿಯನ್ನು ಸಂಪೂರ್ಣವಾಗಿ ಹಿಂದೂಸ್ತಾನದ ಭಾಗವಾಗಿಸಲು ಸ್ವಾಧೀನಪಡಿಸಿಕೊಳ್ಳುವ ಪೈಶಾಚಿಕ ಸಂತೋಷವೆಂದು ಅವರು ಭಾವಿಸುತ್ತಿದ್ದಾರೆ. ಭಾರತದ ಉಳಿದ ಭಾಗದವರ, ಬಿಜೆಪಿಗರ ಈ ಸಂತೋಷವು ಕಾಶ್ಮೀರಿ ಜನರ ಅಸ್ತಿತ್ವವನ್ನೇ ಕೊನೆಗಾಣಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ದಿನದಂದು ಕಾಶ್ಮೀರವು ಭಾರತೀಯ ಸಂವಿಧಾನವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದೆ ಎಂದು ಹೇಳುವ ಮೂಲಕ ಆಗಸ್ಟ್ 5 ಅನ್ನು ವೈಭವೀಕರಿಸಲಾಗಿದೆ. ಇದಕ್ಕಿಂತ ದೊಡ್ಡ ಸುಳ್ಳು ಅಥವಾ ವಂಚನೆ ಮತ್ತೊಂದು ಇರಲಾರದು. 370ನೇ ವಿಧಿಯನ್ನು ರದ್ದುಗೊಳಿಸಿದಾಗ ಸಂಸತ್ತು ಸ್ವತಃ ಭಾರತೀಯ ಸಂವಿಧಾನದ ಆತ್ಮವನ್ನು ಕೊಂದಿತು. ಇದು ಕಾಶ್ಮೀರಿಗಳನ್ನು ಭಾರತದೊಂದಿಗೆ ಸಂಪರ್ಕಿಸುವ ಕೊಂಡಿಯನ್ನು ಮುರಿದು ಹಾಕಿತು ಎಂದು ಜಮ್ಮು-ಕಾಶ್ಮೀರದ ಜನರು ಹೇಳುತ್ತಾರೆ.

ಆರ್ಟಿಕಲ್ 370 ಭಾರತ ಮತ್ತು ಕಾಶ್ಮೀರದ ನಡುವಿನ ಗೋಡೆಯಾಗಿರಲಿಲ್ಲ, ಅದು ಎರಡು ಹೃದಯಗಳನ್ನು ಬೆಸೆಯುವ ಬೆಸುಗೆಯಾಗಿತ್ತು. ಭಾರತ ಸರ್ಕಾರ ಅಥವಾ ಸಂಸತ್ತಿನಲ್ಲಿ ಕಾಶ್ಮೀರ ಸಂಬಂಧ ಯಾವುದೇ ಬದಲಾವಣೆ ತರುವುದಿಲ್ಲವೆಂದು ಈ ಹಿಂದೆ ಕಾಶ್ಮೀರಿ ಜನರಿಗೆ ಭರವಸೆ ನೀಡಲಾಗಿತ್ತು. ಯಾವುದೇ ಬದಲಾವಣೆಗೆ ಕಾಶ್ಮೀರಿಗರ ಒಪ್ಪಿಗೆ ಕಡ್ಡಾಯವಾಗಿತ್ತು. ಆದರೆ, ಈಗ ಅವರ ಸಮ್ಮತಿಯ ಅಗತ್ಯವಿಲ್ಲದೆ ಶಾಸಕಾಂಗವು ಬದಲಾವಣೆಗಳನ್ನು ತರುವಂತಹ ಕ್ರಮವನ್ನು ಬಿಜೆಪಿ ಸರ್ಕಾರ ಅಳವಡಿಸಿದೆ. ಶಾಸಕಾಂಗ ಸಭೆಯನ್ನೇ ಅಮಾನತುಗೊಳಿಸಿ ಕೇಂದ್ರಾಡಳಿತವನ್ನು ಹೇರಲಾಗಿದೆ.

ಮಾತ್ರವಲ್ಲದೆ, ರಾಜ್ಯಪಾಲರ ಅನುಮೋದನೆಯನ್ನು ಶಾಸಕಾಂಗ ಸಭೆಯ ಅನುಮೋದನೆಗೆ ಸಮವೆಂದು ಹೇಳಲಾಗುತ್ತಿದೆ. ಶಾಸಕಾಂಗ ಸಭೆಯು ಜನಪ್ರತಿನಿಧಿಗಳನ್ನು ಒಳಗೊಂಡಿದೆ. ಅವರು ಜನರಿಂದ ಆಯ್ಕೆಯಾದವರಾಗಿದ್ದರು. ಅವರು ರಾಜ್ಯದ ಜನರ ಅಭಿಪ್ರಾಯವನ್ನು ಪ್ರತಿನಿಧಿಸುತ್ತಿದ್ದರು. ರಾಜ್ಯಪಾಲರು ಜನರ ಪ್ರತಿನಿಧಿಯಲ್ಲ; ಅವರು ಕೇಂದ್ರ ಸರ್ಕಾರದ ಪ್ರತಿನಿಧಿ. ಹಾಗಾದರೆ ಅವರನ್ನು ಶಾಸಕಾಂಗ ಸಭೆಗೆ ಹೇಗೆ ಸಮಾನ ಎಂದು ಪರಿಗಣಿಸಲಾಗುತ್ತದೆ? ಆದರೆ, ಶಾಸಕಾಂಗಕ್ಕೆ ರಾಜ್ಯಪಾಲರು ಸಮವೆಂದು ನಿರ್ಲಜ್ಜವಾಗಿ ಹೇಳಲಾಗುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಅದನ್ನು ಸರಿ ಎಂದು ಒಪ್ಪಿಕೊಂಡಿದೆ!

ಜಮ್ಮು ಮತ್ತು ಕಾಶ್ಮೀರದಿಂದ ರಾಜ್ಯದ ಸ್ಥಾನಮಾನವನ್ನು ಕಸಿದುಕೊಳ್ಳಲು ಮತ್ತು ಅದರ ಶಾಸಕಾಂಗವನ್ನು ವಿಸರ್ಜಿಸಲು ಕಾರಣ ಮತ್ತು ಉದ್ದೇಶ ಏನಾಗಿತ್ತು. ರಾಜ್ಯವನ್ನು ಎರಡು ಭಾಗಗಳಾಗಿ ವಿಭಜಿಸುವುದೇ? ಮತ್ತು ಎರಡೂ ಭಾಗಗಳನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ಪರಿವರ್ತಿಸುವುದೇ? ಬಂಡವಾಳಶಾಹಿಗಳು ರಾಜ್ಯವನ್ನು ಆವರಿಸಿಕೊಳ್ಳಲು ಅವಕಾಶ ಮಾಡಿಕೊಡುವುದೇ? ಹಾಗೆ ನೋಡಿದರೂ, ಮೂರು ಕೂಡ ಹೌದು.

ಕಾಶ್ಮೀರಿಗಳನ್ನು ಅವಮಾನಿಸಲು ಈ ರೀತಿ ಮಾಡಿಲ್ಲ ಎಂದಾದರೆ, ಮತ್ತೇನು ಕಾರಣ? ವಾಸ್ತವವಾಗಿ, ಕಾಶ್ಮೀರಿಗರು ಈಗ ಸಂಪೂರ್ಣವಾಗಿ ದೆಹಲಿಯ (ಕೇಂದ್ರ ಸರ್ಕಾರ) ಕರುಣೆಯಲ್ಲಿದ್ದಾರೆ. ಇಂದು ಭಾರತದ ಯಾವ ರಾಜ್ಯವೂ ಈ ಅವಮಾನವನ್ನು ಎದುರಿಸಿಲ್ಲ. ಯಾವುದೇ ಪೂರ್ಣ ರಾಜ್ಯವನ್ನು ಒಡೆದು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಲಾಗಿಲ್ಲ. ಇದನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಮಾಡಲಾಗಿದೆ. ಸರ್ಕಾರ ಏನೇ ಹೇಳಿದರೂ ಅದರ ಅರ್ಥ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ಶಿಕ್ಷೆಯಲ್ಲದೆ ಬೇರೇನಲ್ಲ ಎನ್ನುವುದು ಎಲ್ಲರಿಗೂ ತಿಳಿಯುತ್ತಿದೆ. ತಿಳಿದಿತ್ತು ಕೂಡ.

ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಮುಖ್ಯಮಂತ್ರಿಗಳು
ಜಮ್ಮು ಮತ್ತು ಕಾಶ್ಮೀರದ ಮುಸ್ಲಿಂ ಮುಖ್ಯಮಂತ್ರಿಗಳು

ಇದರ ಹಿಂದೆ ಮತ್ತೊಂದು ಅಜೆಂಡಾವೂ ಇದ್ದಂತಿದೆ. ಅದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರ ಮುಖ್ಯಮಂತ್ರಿಗಳು ಮುಸ್ಲಿಮರಾಗಿದ್ದರು. ಅಲ್ಲಿ ಮುಸ್ಲಿಮರು ರಾಜಕೀಯವಾಗಿ ಪ್ರಬಲರಾಗಿದ್ದರು. ಇದು ಸಂಪೂರ್ಣವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತಕ್ಕೆ ವಿರುದ್ಧವಾಗಿತ್ತು. ಆರೆಸ್ಸೆಸ್‌ನ ಅತ್ಯಂತ ನಿಕಟರಾಗಿದ್ದ ದೀನದಯಾಳ್ ಉಪಾಧ್ಯಾಯ ಕೂಡ ಮುಸ್ಲಿಮರನ್ನು ರಾಜಕೀಯವಾಗಿ ಸೋಲಿಸುವ ಉದ್ದೇಶದ ಬಗ್ಗೆ ಮಾತನಾಡಿದ್ದರು. ಮುಸ್ಲಿಮರು ಭಾರತದಲ್ಲಿ ಉಳಿಯಬಹುದು ಮತ್ತು ಬದುಕಬಹುದು. ಆದರೆ, ಅವರು ಎಲ್ಲಿಯೂ ರಾಜಕೀಯವಾಗಿ ಮುನ್ನೆಲೆಯಲ್ಲಿರುವುದು ಆರ್‌ಎಸ್‌ಎಸ್‌ಗೆ ಇಷ್ಟವಿಲ್ಲ. ಅದಕ್ಕೆ ಸಂಘವು ಬಿಡುವುದೂ ಇಲ್ಲ. ಅದಕ್ಕಾಗಿಯೇ, ಜಮ್ಮು-ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ರದ್ದು ಮಾಡಿ, ರಾಜ್ಯವನ್ನು ಒಡೆದುಹಾಕಿದೆ.

ಕೇಂದ್ರ ಸರ್ಕಾರವು ಮುಸ್ಲಿಂ ಜನರನ್ನು ನಿಯಂತ್ರಿಸಲು ತನ್ನ ಹಿಂಬಾಲಕರನ್ನು ಲೆಫ್ಟಿನೆಂಟ್ ಗವರ್ನರ್‌ಗಳಾಗಿ ಕಳುಹಿಸಿದೆ. ಅವರು ಮೋದಿ ಸರ್ಕಾರದ ಆದೇಶಗಳನ್ನು ಕಾಶ್ಮೀರದಲ್ಲಿ ಜಾರಿಗೆ ತರುತ್ತಿದ್ದಾರೆ. ಇದು ಕಾಶ್ಮೀರದಲ್ಲಿ ಭಾರತದ ಹಿಂದುತ್ವೀಕರಣದ ಪ್ರಮುಖ ಹೆಜ್ಜೆಯಾಗಿದೆ. ಅಂದರೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಮುಸ್ಲಿಂ ಪ್ರಾತಿನಿಧ್ಯದ ಪ್ರಾಮುಖ್ಯತೆಯನ್ನು ಕೊನೆಗೊಳಿಸುವ ಅಜೆಂಡಾದ ಭಾಗವಾಗಿದೆ.

ಈಗ ಕಾಶ್ಮೀರದಲ್ಲಿ ಭೂಮಿಯನ್ನು ಖರೀದಿಸಬಹುದು ಮತ್ತು ಕಾಶ್ಮೀರಿ ಹುಡುಗಿಯರನ್ನು ಮದುವೆಯಾಗಬಹುದು ಎಂಬ ಸಂಭ್ರಮದ ಅಲೆಯು ಐದು ವರ್ಷಗಳಿಂದ ಭಾರತದ ಉಳಿದ ಭಾಗಗಳಲ್ಲಿ ಹರಿದಾಡುತ್ತಿದೆ. ಇದರಲ್ಲಿ ಆಶ್ಚರ್ಯವೇನಿಲ್ಲ. 370ನೇ ವಿಧಿಯನ್ನು ರದ್ದುಪಡಿಸುವಲ್ಲಿ ಬಿಜೆಪಿ ಬೆಂಬಲಿಗರ ನೈಜ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಈ ಅಶ್ಲೀಲ ಸಂಭ್ರಮವೊಂದೇ ಸಾಕು. ಮುಸ್ಲಿಮರ ವಿರುದ್ಧದ ದ್ವೇಷದ ಹಿಂದೆ ಲೈಂಗಿಕ ಅಸೂಯೆಯೂ ಇದೆ ಎಂಬುದು ಈ ಅಸಭ್ಯ ಮತ್ತು ಅಸಹ್ಯ ಸಂಭ್ರಮದಲ್ಲಿ ಸ್ಪಷ್ಟವಾಗಿದೆ.

2019ರ ಆಗಸ್ಟ್‌ 5ರ ನಂತರ ಕಾಶ್ಮೀರವು ಬಹುತೇಕ ಮೌನವಾಗಿದೆ. ಅಲ್ಲಿ ಯಾವುದೇ ದೊಡ್ಡ ಪ್ರತಿರೋಧ ಕಂಡುಬರಲಿಲ್ಲ ಎಂದು ಅನೇಕ ಜನರು ನಂಬುತ್ತಾರೆ. ಆದರೆ, ಆ ಸಂದರ್ಭದಲ್ಲಿ ಕಾಶ್ಮೀರದ ಎಲ್ಲ ನಾಯಕರನ್ನು ಬಂಧಿಸಲಾಗಿತ್ತು, ಗೃಹಬಂಧನದಲ್ಲಿ ಇರಿಸಲಾಗಿತ್ತು. ಪ್ರಮುಖ ಸಂಘಟನೆಗಳ ನಾಯಕರು, ಪತ್ರಕರ್ತರನ್ನೂ ಬಂಧಿಸಲಾಗಿತ್ತು. ಇಂಟರ್‌ನೆಟ್‌ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು. ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿದರೆ, ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿತ್ತು. ಅಲ್ಲಿನ ಭೂಮಿಯ ಪ್ರತಿ ಇಂಚಿನಲ್ಲೂ ಸೇನೆಯನ್ನು ಇರಿಸಲಾಗಿತ್ತು.

ಕಾಶ್ಮೀರ 370ನೇ ವಿಧಿ

ಇಂತಹ ಸಂದರ್ಭದಲ್ಲಿ ಕಾಶ್ಮೀರಿಗಳು ಮೌನವಾಗಿರದೆ, ಬೇರೇನೂ ಮಾಡಲು ಸಾಧ್ಯ? ಅಲ್ಲಿನ ಜನರ ಮೌನವನ್ನು ಅವರ ಒಪ್ಪಿಗೆ ಎಂದು ಪರಿಗಣಿಸಿದ ಬಿಜೆಪಿಗರು ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಶ್ಮೀರಿಗಳ ಉತ್ತರವೇನು ಎಂಬುದನ್ನು ಫಲಿತಾಂಶದಲ್ಲಿ ಪಡೆದುಕೊಂಡಿದ್ದಾರೆ. ಅಂದಹಾಗೆ, ಕಾಶ್ಮೀರದಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಧೈರ್ಯವನ್ನೂ ಬಿಜೆಪಿ ಮಾಡಲಿಲ್ಲ. ಅಷ್ಟಕ್ಕೂ ಬಿಜೆಪಿ ಕಳೆದ ಐದು ವರ್ಷಗಳಿಂದ ಲೆಫ್ಟಿನೆಂಟ್ ಗವರ್ನರ್ ಮೂಲಕ ಕೇಂದ್ರ ಸರ್ಕಾರ ಆಡಳಿತ ನಡೆಸುತ್ತಿದೆ! ಬಿಜೆಪಿ ನಿರ್ಧಾರ ಮತ್ತು ಆಡಳಿತ ಒಳ್ಳೆಯದ್ದೂ, ಜನಪ್ರಿಯವೂ ಆಗಿದ್ದರೆ, ಅಲ್ಲಿನ ಜನರ ಬಳಿ ಹೋಗಿ ಮತ ಕೇಳುವ ಧೈರ್ಯವನ್ನು ಬಿಜೆಪಿ ಯಾಕೆ ಮಾಡಲಿಲ್ಲ? ಅಂದಹಾಗೆ, ಬಿಜೆಪಿ ಬೆಂಬಲಿಸಿದ ಎಲ್ಲ ಅಭ್ಯರ್ಥಿಗಳು ಅಲ್ಲಿ ಹೀನಾಯವಾಗಿ ಸೋತಿದ್ದಾರೆ. ಯಾಕೆಂದರೆ, 370ನೇ ವಿಧಿಯನ್ನು ರದ್ದುಗೊಳಿಸಿದ್ದನ್ನೂ, ರಾಜ್ಯವನ್ನು ವಿಭಜಿಸಿದ್ದನ್ನೂ ಅಲ್ಲಿನ ಜನರು ಒಪ್ಪಿಕೊಂಡಿಲ್ಲ. ಸಮ್ಮತಿಸಿಲ್ಲ.

ಇದೀಗ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಭರದ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಆದರೆ, ಅದಕ್ಕೂ ಮುನ್ನ ಲೆಫ್ಟಿನೆಂಟ್ ಗವರ್ನರ್‌ಗೆ ಅಸಾಧಾರಣ ಅಧಿಕಾರ ನೀಡಲಾಗಿದೆ. ಅಂತಹ ಸರ್ವಾಧಿಕಾರಿ ಲೆಫ್ಟಿನೆಂಟ್ ಗವರ್ನರ್ ಅಗಾಧ ಅಧಿಕಾರವನ್ನು ಹೊಂದಿರುವವರೆಗೆ ಶಾಸಕಾಂಗ ಸಭೆಗೆ ಯಾವುದೇ ಅರ್ಥವಿರುವುದಿಲ್ಲ. ಚುನಾಯಿತ ವಿಧಾನಸಭೆಗೆ ಅಥವಾ ಜನಪ್ರತಿನಿಧಿಗಳಿಗೆ ಹೆಚ್ಚಿನ ಅಧಿಕಾರವೂ ಇರುವುದಿಲ್ಲ.

ಈ ವರದಿ ಓದಿದ್ದೀರಾ?: ‘ವಚನ ದರ್ಶನ’ದ ನೆಪದಲ್ಲಿ ಹಿಂದುತ್ವದ ರಾಡಿ ಎಬ್ಬಿಸುತ್ತಿದೆಯೇ RSS?

ಈ ಐದು ವರ್ಷಗಳಲ್ಲಿ, ಕಾಶ್ಮೀರಿಗಳು ತಮ್ಮ ಜೀವನದ ಪ್ರತಿ ಹಂತದಲ್ಲಿಯೂ ಕೇಂದ್ರ ಸರ್ಕಾರದಿಂದ ಹಿಂಸೆಯನ್ನು ಅನುಭವಿಸಿದ್ದಾರೆ. ಯಾವುದೇ ಕಾರಣ ನೀಡದೆ ಯಾವುದೇ ಉದ್ಯೋಗಿಯನ್ನು ವಜಾ ಮಾಡಬಹುದು. ಕಾಶ್ಮೀರದ ಭೂಮಿಯನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರಿಸಬಹುದು. ಕಾಶ್ಮೀರದ ಸೇಬಿನ ವ್ಯಾಪಾರ ನಾಶವಾಗಬಹುದು ಎಂಬುದನ್ನು ಕೇಂದ್ರದ ನಿಯಮಗಳು ಹೇಳುತ್ತವೆ.

ಆದರೆ, ಕಾಶ್ಮೀರಿಗಳ ಮೌನದಲ್ಲಿ ಆಳವಾದ ನಿರಾಕರಣೆ ಇದೆ ಎಂಬುದು ಕೇಂದ್ರ ಸರ್ಕಾರಕ್ಕೆ ತಿಳಿದಿದೆ. ಆದ್ದರಿಂದಲೇ, ಸರ್ಕಾರವು ಮತ್ತೆ ಮತ್ತೆ ತನ್ನ ಶಕ್ತಿಯ ಮೂಲಕ ಕಾಶ್ಮೀರಿಗಳ ಮೇಲೆ ತನಗೆ ಪ್ರೀತಿಯಿದೆ ಎಂಬುದನ್ನು ತೋರಿಸಿಕೊಳ್ಳಲು ಯತ್ನಿಸುತ್ತಿದೆ.

ಮೋದಿ ಯೋಗ ದಿನ ಕಾಶ್ಮೀರ

ಇತ್ತೀಚೆಗೆ ಕಾಶ್ಮೀರದಲ್ಲಿ ಯೋಗ ದಿನವನ್ನು ಆಚರಿಸಲು ಪ್ರಧಾನಿ ಮೋದಿ ನಿರ್ಧರಿಸಿದ್ದರು. ಸರ್ಕಾರಿ ನೌಕರರು ಮತ್ತು ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ಹೇಳಲಾಗಿತ್ತು. ಸ್ಥಳವನ್ನು ತಲುಪುವ ಮೊದಲು ಅವರ ಬೂಟುಗಳನ್ನು ತೆಗೆಯುವಂತೆ ಒತ್ತಾಯಿಸಲಾಗಿತ್ತು. ಮುಚ್ಚಿದ ಕ್ರೀಡಾಂಗಣದಲ್ಲಿ ಅವರ ಫೋಟೋಗಳನ್ನು ತೆಗೆದು, ಸಂಭ್ರಮದ ರೀತಿಯಲ್ಲಿ ದೇಶಾದ್ಯಂತ ಹರಿಬಿಡಲಾಯಿತು. ಇದು ಕೇವಲ ಕೇಂದ್ರ ಸರ್ಕಾರದ ಶಕ್ತಿ ಪ್ರದರ್ಶನವಾಗಿತ್ತು. ಅಸಭ್ಯ, ಹಿಂಸಾತ್ಮಕ ಪ್ರದರ್ಶನವಾಗಿತ್ತು. ಆದರೆ, ಆ ಕಾರ್ಯಕ್ರಮವನ್ನು ಅಲ್ಲಿನ ಉದ್ಯೋಗಿಗಳು ಸೇರಿದಂತೆ ನೌಕರರು ಸಾಮೂಹಿಕ ಅವಮಾನವೆಂದೇ ಭಾವಿಸಿದ್ದರು.

ಕಾಶ್ಮೀರದ ತುಟಿಗಳನ್ನು ಹೊಲಿಯಲಾಗಿದೆ. ಕೇಂದ್ರ ಸರ್ಕಾರವು ತನ್ನ ಬೂಟುಗಾಲನ್ನು ಅವರ ಎದೆಯ ಮೇಲಿಟ್ಟು ತುಳಿಯುತ್ತಿದೆ. 2019ರ ಆಗಸ್ಟ್‌ 5ರ ನಂತರ ಕಾಶ್ಮೀರವು ಭಾರತಕ್ಕೆ ಕನ್ನಡಿಯಾಗಿದೆ. ಭಾರತದ ‘ಕಾಶ್ಮೀರೀಕರಣ’ ನಡೆಯುತ್ತಿದೆ. ದೇಶಾದ್ಯಂತ ಜನರ ಹಕ್ಕುಗಳನ್ನು ಕಸಿದುಕೊಳ್ಳುವುದು, ರಾಜ್ಯಗಳಲ್ಲಿ ರಾಜ್ಯಪಾಲರ ದೌರ್ಜನ್ಯವನ್ನು ಹೆಚ್ಚಿಸುವುದರೊಂದಿಗೆ ಕೇಂದ್ರ ಸರ್ಕಾರದ ನಿರಂಕುಶತೆ ಎಲ್ಲೆಡೆ ವ್ಯಾಪಿಸುತ್ತಿದೆ.

ಅದೇನೇ ಇರಲಿ, ಆರಂಭದಲ್ಲಿ ಕಾಶ್ಮೀರದಲ್ಲಿ ಭೂಮಿ ಖರೀದಿಸಬಹುದು ಎಂದು ಸಂಭ್ರಮಿಸಿದ್ದ ಭಾರತದ ಉಳಿದ ಭಾಗದ ಜನರು ಈಗ ಕೇಂದ್ರ ಸರ್ಕಾರ ತಮ್ಮನ್ನೂ ದಮನಿಸುತ್ತಿದೆ ಎಂಬುದನ್ನು ಅರಿತುಕೊಂಡಿದ್ದಾರೆ. ಅವರು ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ. ದೇಶದ ಎಲ್ಲ ಭಾಗಗಳ ಜನರಿಗೆ ಸ್ವಾತಂತ್ರ್ಯ ಬೇಕಾದರೆ, ಅವರು ಮೊದಲು ಕಾಶ್ಮೀರಿಗಳ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಬೇಕಿದೆ. ಭಾರತವು ಶಾಂತಿ ಮತ್ತು ನೆಮ್ಮದಿಯು ಕಾಶ್ಮೀರದ ಜನರು ಸಂತಸ ಪಡುವುದರಲ್ಲಿದೆ. ಕಾಶ್ಮೀರಿ ಜನರಿಗೆ ತಮ್ಮ ಹಕ್ಕು ದೊರೆಯದ ಹೊರತು, ಭಾರತವು ನೆಮ್ಮದಿ ಪಡೆಯಲಾರದು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ಗಾಳಿ ಕಲುಷಿತ : ಎಚ್ಚರಿಕೆ ನೀಡಿದ ಗ್ರೀನ್ ಪೀಸ್ ವರದಿ

ಕರ್ನಾಟಕ ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಹಾಗು ಮೈಸೂರಿನ...

ಅಬಕಾರಿ ನೀತಿ ಪ್ರಕರಣ | ಕೇಜ್ರಿವಾಲ್ ‘ಕ್ರಿಮಿನಲ್ ಪಿತೂರಿ’ಯಲ್ಲಿ ಭಾಗಿ: ಸಿಬಿಐ

ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ), ತನ್ನ...

ಹರಿಯಾಣ ವಿಧಾನಸಭಾ ಚುನಾವಣೆ: ಕಾಂಗ್ರೆಸ್‌ಗೆ ಸೇರಿದ ದಿನವೇ ವಿನೇಶ್ ಫೋಗಟ್‌ಗೆ ಟಿಕೆಟ್

ಹರಿಯಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಶುಕ್ರವಾರ ರಾತ್ರಿ ತನ್ನ...

ಬಾಲಕ ಪ್ರತಾಪ್‌ನ ಪ್ರಲಾಪ

ಸಂಸದರಾಗಿ ಆಯ್ಕೆಯಾದಾಗಿನಿಂದ ಸದಾ ವಿವಾದಾತ್ಮಕ ಹೇಳಿಕೆಗಳನ್ನು ಹುಟ್ಟು ಹಾಕುವಲ್ಲಿಯೇ ನಿರತರಾಗಿದ್ದ ಪ್ರತಾಪ್...