- ಜಾಮೀನು ರದ್ದು ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ನಾಪತ್ತೆ
- ಯಾವುದೇ ಕ್ಷಣದಲ್ಲಾದರೂ ಬಂಧನವಾಗುವ ಸಾಧ್ಯತೆ
ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜಾಮೀನನ್ನು ಹೈಕೋರ್ಟ್ ರದ್ದು ಮಾಡಿರುವ ಬೆನ್ನಲ್ಲೆ ನಾಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಆರೋಪಿಯನ್ನು ಬಂಧಿಸಲು ಸಿದ್ದತೆ ನಡೆಸಿದ್ದಾರೆ ಎನ್ನುವ ಮಾಹಿತಿ ಈ ದಿನ.ಕಾಂಗೆ ಲಭ್ಯವಾಗಿದೆ.
ಲೋಕಾಯುಕ್ತ ಪೊಲೀಸರ ತಂಡವು ಪ್ರತ್ಯೇಕವಾಗಿ ದಾವಣಗೆರೆ, ಚನ್ನಗಿರಿ ಹಾಗೂ ಬೆಂಗಳೂರಿನ ನಿವಾಸದತ್ತ ತೆರಳಿದ್ದು, ಯಾವುದೇ ಕ್ಷಣದಲ್ಲಾದರೂ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪನವರನ್ನು ಬಂಧಿಸುವ ಸಾಧ್ಯತೆ ಇದೆ.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್) ಸಂಸ್ಥೆಗೆ ಕೆಮಿಕಲ್ ಆಯಿಲ್ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡುವುದಕ್ಕೆ ಪ್ರತಿಯಾಗಿ ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಆರೋಪಕ್ಕೆ ಸಿಲುಕಿ ಎ1 ಆರೋಪಿಯಾಗಿದ್ದ ಮಾಡಾಳು ಲೋಕಾಯುಕ್ತ ಪೊಲೀಸರು ಬಂಧಿಸುವಷ್ಟರಲ್ಲಿ ತಲೆಮರೆಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? : ಮಾಡಾಳು ವಿರೂಪಾಕ್ಷಪ್ಪ ಜಾಮೀನು ರದ್ದು: ಬಂಧನ ಭೀತಿಯಲ್ಲಿ ಬಿಜೆಪಿ ಶಾಸಕ
ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದ ನಂತರ, ಚನ್ನಗಿರಿಯಲ್ಲಿ ತಮ್ಮ ಬೆಂಬಲಿಗರೊಂದಿಗೆ ತೆರೆದ ವಾಹನದಲ್ಲಿ ವಿಜಯೋತ್ಸವ ಆಚರಿಸಿಕೊಂಡಿದ್ದರು. ಇದು ಸಾರ್ವಜನಿಕರಿಂದ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಬಿಜೆಪಿಗೆ ಮುಜುಗರ ತಂದಿತ್ತು.
ಬೆಳಿಗ್ಗೆ ಕ್ಷೇತ್ರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಶಾಸಕರು ಜಾಮೀನು ರದ್ದಾದ ಸುದ್ದಿ ಬರುತ್ತಿದ್ದಂತೆ ಅಜ್ಞಾತ ಜಾಗಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.