ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳು, ಮಂಗಳವಾರ ಮಧ್ಯರಾತ್ರಿ ನಿಗಮದ ಕಚೇರಿ ಸೇರಿದಂತೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ವಿಶ್ವೇಶ್ವರಯ್ಯ ಟವರ್ ಬಳಿಯಿರುವ ನಿಗಮದ ಕಚೇರಿ ಮೇಲೆ ದಾಳಿ ಮಾಡಿರುವ ಸಿಐಡಿ ಅಧಿಕಾರಿಗಳ ತಂಡವು ಸುಮಾರು ನಾಲ್ಕು ಗಂಟೆಗೂ ಅಧಿಕ ಕಾಲ ಶೋಧ ಕಾರ್ಯ ನಡೆಸಿ ಕಂಪ್ಯೂಟರ್, ಕೆಲವು ಕಡತಗಳನ್ನು ಜಪ್ತಿ ಮಾಡಿ ಪರಿಶೀಲನೆ ನಡೆಸಿದೆ. ಅಲ್ಲದೇ,ಅಧಿಕಾರಿಗಳು ನಿಗಮದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿಚಾರಣೆ ನಡೆಸಿ, ಪ್ರಾಥಮಿಕ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಭೋವಿ ಅಭಿವೃದ್ದಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರೂ. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿತ್ತು.
ಅಕ್ರಮ ಸಂಬಂಧ ಬೆಂಗಳೂರು, ಕಲಬುರಗಿಯಲ್ಲಿ ಪ್ರಕರಣಗಳು ದಾಖಲಾಗಿತ್ತು. ಕೋಟ್ಯಂತರ ರೂ. ಅಕ್ರಮವಾಗಿದ್ದರಿಂದ ಕೆಲ ದಿನಗಳ ಹಿಂದಷ್ಟೇ ಸರ್ಕಾರ, ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿತ್ತು. ಪ್ರಾಥಮಿಕ ತನಿಖೆಯಲ್ಲಿ 60 ಕೋಟಿಗೂ ಹೆಚ್ಚು ಅಕ್ರಮ ನಡೆದಿರುವ ಮಾಹಿತಿ ದೊರೆತಿದ್ದು ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ನಿಗಮದ ಕಚೇರಿಯಲ್ಲಿ 2021ರ ಏಪ್ರಿಲ್ 5ರಿಂದ 2022ರ ಜುಲೈ 8ರ ವರೆಗೆ ಕಚೇರಿ ಅಧೀಕ್ಷಕರಾಗಿದ್ದ ಪಿ ಡಿ ಸುಬ್ಬಪ್ಪ ಅವರನ್ನು ಬಂಧಿಸಿ, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಅಕ್ರಮ ಮರೆಮಾಚಲು ನಿಗಮದಲ್ಲಿದ್ದ ಲೆಕ್ಕಪತ್ರಗಳು, ನಗದು ನೋಂದಣಿ ಪುಸ್ತಕಗಳು, ಯೋಜನಾ ಕಡತ, ಬ್ಯಾಂಕ್ ಚೆಕ್‌ಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಕಡತಗಳನ್ನು ಕಳವು ಮಾಡಿರುವ ಆರೋಪ ಸುಬ್ಬಪ್ಪ ಮೇಲಿದೆ.
ಹಾಗೆಯೇ ಪ್ರಧಾನ ವ್ಯವಸ್ಥಾಪಕರಾಗಿದ್ದ ಡಾ.ಬಿ.ಕೆ. ನಾಗರಾಜಪ್ಪ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲೀಲಾವತಿ ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣ ಹಿನ್ನೆಲೆ ಏನು?
2021-22ನೇ ಸಾಲಿನಲ್ಲಿ ಭೋವಿ ನಿಗಮದಿಂದ ಉದ್ಯಮಿಗಳಿಗೆ ಸಾಲ ನೀಡುವ ಯೋಜನೆಯಲ್ಲಿ ನಡೆದಿದ್ದ ಅವ್ಯವಹಾರ ಆರೋಪದ ಮೇಲೆ ದೂರು ದಾಖಲಾಗಿತ್ತು. ಅಕ್ರಮ ಸಂಬಂಧ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕಲಬುರಗಿ ಜಿಲ್ಲೆಯಲ್ಲಿ ದೂರು ದಾಖಲಾಗಿದ್ದವು. 10 ಕೋಟಿಗೂ ಹೆಚ್ಚು ಹಣ ಅಕ್ರಮ ವರ್ಗಾವಣೆ ಮಾಡಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಸರ್ಕಾರ ಇತ್ತೀಚಿಗೆ ಸಿಐಡಿಗೆ ವರ್ಗಾವಣೆ ಮಾಡಿ ಆದೇಶ ಮಾಡಿತ್ತು. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಆರೋಪ ಬಿಚ್ಚಿಟ್ಟಿದ್ದ ಗೂಳಿಹಟ್ಟಿ ಡಿ.ಶೇಖರ್
ಸಂಸದ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಹೊಸದುರ್ಗದ ಮಾಜಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಅವರು ಇತ್ತೀಚೆಗೆ ಗಂಭೀರ ಆರೋಪ ಮಾಡಿ, “ಬಿಜೆಪಿ ಅಧಿಕಾರವಧಿಯಲ್ಲಿ ‘ಭೋವಿ ಅಭಿವೃದ್ಧಿ ನಿಗಮ’ದಲ್ಲಿ ನೂರಾರು ಕೋಟಿ ಅವ್ಯವಹಾರ ನಡೆದಿದೆ. ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಲಂಚ ಸಂದಾಯವಾಗಿದೆ” ಎಂದು ದೂರಿದ್ದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿರುವ ಸಂದರ್ಭದಲ್ಲಿ ಗೂಳಿಹಟ್ಟಿ ಮಾಡಿದ ಆರೋಪ ರಾಜಕೀಯ ಸಂಚಲನ ಸೃಷ್ಟಿಸಿತ್ತು.
13 ನಿಮಿಷಗಳ ಆಡಿಯೊ ಹೇಳಿಕೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಗೂಳಿಹಟ್ಟಿ, ” ‘ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಕೊನೆಯ ಮೂರು ತಿಂಗಳು ಭೋವಿ ಅಭಿವೃದ್ಧಿ ನಿಗಮ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಅಧಿಕಾರವಧಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ಆಗ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಇದರಲ್ಲಿ ಪಾಲಿದೆ” ಎಂದು ಆರೋಪಿಸಿದ್ದನ್ನು ಇಲ್ಲಿ ನೆನೆಯಬಹುದು.