ಟಾಲಿವುಡ್ ನಲ್ಲಿ ಇದುವರೆಗೆ ಮುಸ್ಲಿಮರನ್ನು ವಿಲನ್‌ಗಳಂತೆ ಚಿತ್ರಿಸಿರುವ ಸಿನಿಮಾಗಳು ಬಂದಿವೆಯಾದರೂ ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ಯಂಥ ಪರಿಪೂರ್ಣ ಪ್ರಾಪಗಾಂಡಾ, ಮುಸ್ಲಿಂ ವಿರೋಧಿ ಎನ್ನುವಂಥ ಚಿತ್ರಗಳು ಬಂದಿಲ್ಲ. ಇದೀಗ ತೆಲಂಗಾಣ ಬಿಜೆಪಿ ಮುಖಂಡರು ಅಂಥ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಅದೇ ‘ರಜಾಕಾರ್’.
ಅವಿಭಜಿತ ಆಂಧ್ರಪ್ರದೇಶದಲ್ಲಿ ಹಿಂದೊಂದು ಕಾಲದಲ್ಲಿ ಕಮ್ಯುನಿಸ್ಟ್ ಚಳವಳಿ ಪ್ರಬಲವಾಗಿತ್ತು. ಹಳ್ಳಿ ಹಳ್ಳಿಗಳಲ್ಲೂ ಆ ಪಕ್ಷದ ಕೇಡರ್‌ಗಳಿದ್ದರು. ದಕ್ಷಿಣದಲ್ಲಿ ನಕ್ಸಲಿಸಂ ಪ್ರಬಲವಾಗಿದ್ದ ರಾಜ್ಯವದು. ಸಹಜವಾಗಿಯೇ ಒಂದು ಕಾಲದಲ್ಲಿ ಅಲ್ಲಿ, ಶೋಷಣೆ ವಿರೋಧಿಸುವ ಅನೇಕ ಚಿತ್ರಗಳು ತಯಾರಾಗುತ್ತಿದ್ದವು. ಮಾದಾಲ ರಂಗರಾವ್ ಎನ್ನುವ ನಟ, ನಿರ್ದೇಶಕರಂತೂ ಟಾಲಿವುಡ್ ನಲ್ಲಿ ಇಂಥ ಚಿತ್ರಗಳಿಂದ ‘ರೆಡ್ ಸ್ಟಾರ್’ ಎಂದೇ ಹೆಸರಾಗಿದ್ದರು. ಅವರು ಕಮ್ಯುನಿಸ್ಟ್ ಪಕ್ಷದ ಸದಸ್ಯರೂ ಆಗಿದ್ದರು, ಮಾದಾಲ ರಂಗರಾವ್ ಅವರ ‘ಯುವತರಂ ಕದಿಲಿಂದಿ’, ‘ಎರ್ರ ಮಲ್ಲೆಲು’, ‘ಪ್ರಜಾ ಶಕ್ತಿ’, ‘ಮಹಾಪ್ರಸ್ಥಾನಂ’, ‘ವಿಪ್ಲವ ಶಂಖಂ’, ‘ಸ್ವರಾಜ್ಯಂ’ ಮುಂತಾದವು ಶೋಷಣೆಯ ನಾನಾ ಅವತಾರಗಳನ್ನು ತೋರುವ ಚಿತ್ರಗಳಾಗಿದ್ದವು. ಮಾದಾಲ ರಂಗರಾವ್ ಅಲ್ಲದೇ ಟಿ ಕೃಷ್ಣ, ಆರ್ ನಾರಾಯಣಮೂರ್ತಿ, ಎನ್ ಶಂಕರ್, ದಾಸರಿ ನಾರಾಯಣ ರಾವ್, ಕೆ ಬಿ ತಿಲಕ್, ಧವಳ ಸತ್ಯಂ ಮುಂತಾದ ನಿರ್ದೇಶಕರು ಕಾರ್ಮಿಕರ ಬದುಕಿನ ಬಗ್ಗೆ, ರೈತ ಕೂಲಿಗಳ ಬಗ್ಗೆ, ಜಮೀನ್ದಾರಿ ದೌರ್ಜನ್ಯದ ಬಗ್ಗೆ ಸಾಲು ಸಾಲು ಚಿತ್ರಗಳನ್ನು ತೆಗೆದಿದ್ದರು. ಇವರೆಲ್ಲರಿಂದಾಗಿ ಟಾಲಿವುಡ್‌ನಲ್ಲಿ ‘ಎರ್ರ ಸಿನಿಮಾ’ (ಕೆಂಪು ಸಿನಿಮಾ) ಎನ್ನುವ ಒಂದು ಪ್ರಭೇದವೇ ಹುಟ್ಟಿಕೊಂಡಿತ್ತು.
ಆದರೆ, ಕಮ್ಯುನಿಸಂ ಒಲವಿದ್ದ ನಟರು, ನಿರ್ದೇಶಕರ ಕಾರಣಕ್ಕೆ ಆಗ ನಿರ್ಮಾಣವಾಗುತ್ತಿದ್ದ ಚಿತ್ರಗಳ ಕಂಟೆಂಟ್ ಹಾಗಿರುತ್ತಿತ್ತೇ ಹೊರತು ಆ ಪಕ್ಷಗಳು ಯಾವತ್ತೂ ಪ್ರತ್ಯಕ್ಷವಾಗಿಯಾಗಲಿ, ಪರೋಕ್ಷವಾಗಿಯಾಗಲಿ ಆ ಸಿನಿಮಾಗಳ ಜೊತೆ ಗುರುತಿಸಿಕೊಳ್ಳುತ್ತಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಹಾಗಿಲ್ಲ. ಹಿಂದೂತ್ವದ ಕಂಟೆಂಟ್ ಅನ್ನು ಚಿತ್ರಗಳಲ್ಲಿ ಅಳವಡಿಸುವುದರ ಜೊತೆಗೆ ತೆಲುಗು ಸಿನಿಮಾ ಸ್ಟಾರ್‌ಗಳನ್ನು ಮೆಚ್ಚಿಸಲು, ಅವರನ್ನು ತಮ್ಮ ಕಡೆ ಸೆಳೆದುಕೊಳ್ಳಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ಕಾರ್ಯತಂತ್ರದ ಭಾಗವಾಗಿಯೇ ಮೋದಿ, ಅಮಿತ್ ಶಾ ಜೂ ಎನ್‌ಟಿಆರ್, ರಾಮ್‌ಚರಣ್ ತೇಜಾ ಮುಂತಾದವರನ್ನು ಸಾಧ್ಯವಾದಾಗಲೆಲ್ಲ ಭೇಟಿಯಾಗಿ ಮಾತುಕತೆ ನಡೆಸುತ್ತಾರೆ. ಕೆಲವು ನಾಯಕ ನಟರ ಸಂಬಂಧಿಗಳು ನೇರವಾಗಿಯೇ ಬಿಜೆಪಿಯಲ್ಲಿ ಸಕ್ರಿಯವಾಗಿದ್ದಾರೆ. ನಟ ಪ್ರಭಾಸ್ ಅವರ ಚಿಕ್ಕಪ್ಪ ಕೃಷ್ಣಂರಾಜು ಬಿಜೆಪಿಯಿಂದ ಸಂಸದರಾಗಿದ್ದರು. ಜೊತೆಗೆ ವಾಜಪೇಯಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ರಾಮ್‌ಚರಣ್ ತೇಜಾ ಅವರ ಚಿಕ್ಕಪ್ಪ ಪವನ್ ಕಲ್ಯಾಣ್, ಜನಸೇನಾ ಪಕ್ಷದ ಸಂಸ್ಥಾಪಕರು. ಪವನ್ ಈಗಾಗಲೇ ಎನ್‌ಡಿಎ ಜೊತೆ ಗುರುತಿಸಿಕೊಂಡು ಮೋದಿ ಅಭಿಮಾನಿಯಾಗಿದ್ದಾರೆ.
ರಾಜಮೌಳಿಯ ತಂದೆ ವಿಜಯೇಂದ್ರ ಪ್ರಸಾದ್ ಬಾಹುಬಲಿ, ಆರ್‌ಆರ್‌ಆರ್, ಹಿಂದಿಯ ಭಜರಂಗಿ ಭಾಯಿಜಾನ್ ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳ ಕಥೆಗಾರರು. ಅವರನ್ನು ಸೆಳೆದುಕೊಂಡರೆ, ಸ್ಟಾರ್ ನಟ, ನಿರ್ದೇಶಕರ ದೊಡ್ಡ ತಂಡವೇ ತನ್ನ ತೆಕ್ಕೆಗೆ ಬರಲಿದೆ ಎನ್ನುವುದನ್ನು ಅರಿತ ಬಿಜೆಪಿ ಮೊದಲು ವಿಜಯೇಂದ್ರ ಪ್ರಸಾದ್ ಅವರನ್ನು ಬುಕ್ ಮಾಡಿತು. ಅಲ್ಲಿಂದ ಹಲವು ಆತಂಕಕಾರಿ ಬೆಳವಣಿಗೆಗಳು ಅಲ್ಲಿ ನಡೆಯುತ್ತಿವೆ. ವಿಜಯೇಂದ್ರ ಪ್ರಸಾದ್ ಆರ್‌ಎಸ್‌ಎಸ್ ಬಗ್ಗೆ ಒಂದು ಸಿನಿಮಾಗಾಗಿ ಕಥೆ ಬರೆದಿದ್ದಾರೆ. ಅದಕ್ಕಾಗಿ ಅವರು ನಾಗಪುರಕ್ಕೆ ಹೋಗಿ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಅಲ್ಲಿಯೇ ಒಂದು ದಿನ ಇದ್ದು, ಸಂಘದ ಬಗ್ಗೆ ಅಧ್ಯಯನ ಮಾಡಿ ಕಥೆ ಬರೆದರಂತೆ. ‘ಆ ಕಥೆ ತುಂಬಾ ಎಮೋಷನಲ್ ಆಗಿದೆ. ಆ ಕತೆ ಓದಿ ನನಗೆ ಕಣ್ಣೀರು ತಡೆಯಲಾಗಲಿಲ್ಲ. ಅಷ್ಟು ಚೆನ್ನಾಗಿದೆ. ಆದರೆ, ಅದರ ರಾಜಕೀಯ ಪರಿಣಾಮಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲ’ ಎಂದು ಆ ಕಥೆಯ ಬಗ್ಗೆ ರಾಜಮೌಳಿ ಹೇಳಿದ್ದಾರೆ. ಆ ಸಿನಿಮಾಗೆ ಕೆಲಸ ಮಾಡಿದ ನಂತರ ವಿಜಯೇಂದ್ರ ಪ್ರಸಾದ್ ಅವರ ಚಿಂತನೆಯೇ ಬದಲಾಗಿಬಿಟ್ಟಿದೆ. “ಆರ್‌ಎಸ್‌ಎಸ್ ಇಲ್ಲದಿದ್ದರೆ ಭಾರತದಲ್ಲಿ ಕಾಶ್ಮೀರವೇ ಇರುತ್ತಿರಲಿಲ್ಲ. ಅದು ಪಾಕಿಸ್ತಾನಕ್ಕೆ ಸೇರಿರುತ್ತಿತ್ತು. ಅದರಿಂದ ಲಕ್ಷಾಂತರ ಹಿಂದೂಗಳು ಸಾಯಬೇಕಾಗುತ್ತಿತ್ತು” ಎಂದು ಅವರು ಕಾರ್ಯಕ್ರಮವೊಂದರಲ್ಲಿ ಆರ್‌ಎಸ್‌ಎಸ್ ಅನ್ನು ಕೊಂಡಾಡಿದ್ದರು. ವಿಜಯೇಂದ್ರ ಪ್ರಸಾದ್, ರಾಜಮೌಳಿಯಂಥವರ ಬೆಂಬಲ ಸಿಕ್ಕರೆ ತನಗೆ ದೊಡ್ಡ ಬಲ ಎಂದು ಬಿಜೆಪಿ ಭಾವಿಸಿದೆ. ಇದೇ ಹಿನ್ನೆಲೆಯಲ್ಲಿಯೇ ವಿಜಯೇಂದ್ರ ಪ್ರಸಾದ್ ಅವರನ್ನು ಬಿಜೆಪಿ ರಾಜ್ಯಸಭೆಗೆ ಆಯ್ಕೆ ಮಾಡಿದ್ದು.
ವಿಜಯೇಂದ್ರ ಪ್ರಸಾದ್ ಅವರ ನಂತರ ಟಾಲಿವುಡ್‌ನಲ್ಲಿ ಬಲಪಂಥೀಯರ ಹಾಟ್ ಫೇವರೆಟ್ ನಟರಾಗಿ ಹೊರಹೊಮ್ಮಿರುವುದು ನಟ ನಿಖಿಲ್ ಸಿದ್ಧಾರ್ಥ್. ‘ಕಾರ್ತಿಕೇಯ 2’ ಚಿತ್ರದ ನಂತರ ನಿಖಿಲ್ ಸಿದ್ಧಾರ್ಥ್ ಉತ್ತರ ಭಾರತದ ರಾಜ್ಯಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದ. ಹಿಂದೂತ್ವದ ಕಂಟೆಂಟ್‌ಗೆ ಅಲ್ಲಿ ಬೇಡಿಕೆ ಇದೆ ಎನ್ನುವುದನ್ನು ಅರಿತ ಆತ ನಂತರ ‘ಸ್ಪೈ’ ಎನ್ನುವ ಚಿತ್ರವೊಂದರಲ್ಲಿ ನಟಿಸಿದ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ನಿಗೂಢ ಕಣ್ಮರೆ ಕುರಿತ ಚಿತ್ರ ಅದು. ಅದಾದ ನಂತರ ಈಗ ‘ದಿ ಇಂಡಿಯನ್ ಹೌಸ್’ ಎನ್ನುವ ಚಿತ್ರವೊಂದರಲ್ಲಿ ನಿಖಿಲ್ ನಟಿಸುತ್ತಿದ್ದಾನೆ. ಅದು ಲಂಡನ್‌ನಲ್ಲಿ ವೀರ ಸಾವರ್ಕರ್ ಅವರ ಚಟುವಟಿಕೆಗಳನ್ನು ಕುರಿತ ಚಿತ್ರ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ಮಿಸಿದ್ದ ಅಭಿಷೇಕ್ ಅಗರ್ವಾಲ್ ಆರ್ಟ್ಸ್, ರಾಮ್‌ಚರಣ್ ತೇಜಾ ಹೊಸದಾಗಿ ಹುಟ್ಟುಹಾಕಿರುವ ವಿ ಮೆಗಾ ಪಿಕ್ಚರ್ಸ್ ಇದರ ನಿರ್ಮಾಪಕರು.
ತೆಲುಗು ಚಿತ್ರರಂಗದಲ್ಲಿ ಇದುವರೆಗೆ ಮುಸ್ಲಿಮರನ್ನು ವಿಲನ್‌ಗಳಂತೆ ಚಿತ್ರಿಸಿರುವ ಸಿನಿಮಾಗಳು ಬಂದಿವೆಯಾದರೂ ‘ದಿ ಕಾಶ್ಮೀರ್ ಫೈಲ್ಸ್’, ‘ದಿ ಕೇರಳ ಸ್ಟೋರಿ’ಯಂಥ ಪರಿಪೂರ್ಣ ಪ್ರಾಪಗಾಂಡಾ, ಮುಸ್ಲಿಂ ವಿರೋಧಿ ಎನ್ನುವಂಥ ಚಿತ್ರಗಳು ತಯಾರಾಗಿಲ್ಲ. ಇದೀಗ ತೆಲಂಗಾಣ ಬಿಜೆಪಿ ಮುಖಂಡರು ಅಂಥ ಚಿತ್ರವೊಂದನ್ನು ನಿರ್ಮಿಸಲು ಮುಂದಾಗಿದ್ದಾರೆ. ಅದೇ ‘ರಜಾಕಾರ್’.
ಇತ್ತೀಚೆಗೆ ತೆಲಂಗಾಣ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್, ‘ರಜಾಕಾರ್’ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದರು. ರಜಾಕಾರರು ಅಂದರೆ, ಹೈದರಾಬಾದ್ ನಿಜಾಮನ ಪರವಾಗಿ ಕೆಲಸ ಮಾಡುತ್ತಿದ್ದ ಒಂದು ಖಾಸಗಿ ಸೈನ್ಯ. ಅದು ಹಿಂದೂಗಳ ಮೇಲೆ ಏನೆಲ್ಲ ದೌರ್ಜನ್ಯ ಎಸಗಿತು ಎನ್ನುವುದು ಚಿತ್ರದ ಕಥೆ, ಈ ಚಿತ್ರದ ಕಥಾ ರಚನೆಯಲ್ಲೂ ವಿಜಯೇಂದ್ರ ಪ್ರಸಾದ್ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆಯಾದರೂ, ಅದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಗೂಡೂರು ನಾರಾಯಣ ರಾವ್ ಎನ್ನುವ ಬಿಜೆಪಿ ಮುಖಂಡ ಈ ಚಿತ್ರದ ನಿರ್ಮಾಪಕ. ಈ ಚಿತ್ರದ ಪೋಸ್ಟರ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಂಡಿ ಸಂಜಯ್‌ಕುಮಾರ್, ಮುಂದೆ ಇದೇ ರೀತಿಯಲ್ಲಿ ‘ಪಾತ ಬಸ್ತಿ ಫೈಲ್ಸ್’ ಎನ್ನುವ ಸಿನಿಮಾವನ್ನು ಮಾಡಲಾಗುವುದು ಎಂದು ಹೇಳಿದರು. ಪಾತ ಬಸ್ತಿ ಎನ್ನುವುದು ಹೈದರಾಬಾದ್‌ನ ಮುಸ್ಲಿಮರೇ ಹೆಚ್ಚಾಗಿರುವ ಒಂದು ಪ್ರದೇಶ. ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ದಿನಮಾನಗಳಲ್ಲಿ ಇಂಥ ಚಿತ್ರಗಳನ್ನು ನಿರ್ಮಿಸಲು ಹೊರಟಿರುವ ಬಿಜೆಪಿ ಮುಖಂಡರ ಉದ್ದೇಶ ಏನಿರಬಹುದೆಂಬುದು ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. ಅಂದಹಾಗೆ, ಬಂಡಿ ಸಂಜಯ್ ತೆಲಂಗಾಣ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು. ಇತ್ತೀಚೆಗೆ ಅವರನ್ನು ಆ ಕುರ್ಚಿಯಿಂದ ಕೆಳಗಿಳಿಸಿದ್ದ ಬಿಜೆಪಿ ಹೈಕಮಾಂಡ್, ಅವರನ್ನು ಸಿ ಟಿ ರವಿ ಅವರಿಂದ ತೆರವಾದ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಿದೆ.
ತೆಲುಗು ಚಿತ್ರರಂಗ ವ್ಯಾಪಾರ ಹಾಗೂ ಜನಪ್ರಿಯತೆಯ ದೃಷ್ಟಿಯಿಂದ ಹಿಂದಿಗೆ ಸರಿಸಮನಾಗಿದೆ. ತೆಲುಗು ಡಬ್ಬಿಂಗ್ ಸಿನಿಮಾಗಳಿಗೆ ಹಿಂದಿ ಭಾಷಿಕ ರಾಜ್ಯಗಳಲ್ಲೂ ಭಾರಿ ಬೇಡಿಕೆ ಇದೆ. ತೆಲುಗು ಚಿತ್ರರಂಗದ ಸ್ಟಾರ್‌ಗಳಾದ ಅಲ್ಲು ಅರ್ಜುನ್, ರಾಮ್‌ಚರಣ್ ತೇಜಾ, ಜೂ.ಎನ್‌ಟಿಆರ್ ಮುಂತಾದವರರಿಗೆ ಅಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವಿದೆ. ಇದೇ ಕಾರಣಕ್ಕೆ ಬಿಜೆಪಿ ತೆಲುಗು ಚಿತ್ರರಂಗದ ಮೇಲೆ ವಿಶೇಷ ನಿಗಾ ಇಟ್ಟಿದೆ. ಈಚೆಗೆ ತೆಲುಗಿನ ಪ್ಯಾನ್ ಇಂಡಿಯನ್ ಚಿತ್ರಗಳು ಹೆಚ್ಚು ಯಶಸ್ಸು ಕಾಣುತ್ತಿರುವುದರಿಂದ ಟಾಲಿವುಡ್ ಅನ್ನು ರಾಜಕೀಯ ಅಸ್ತ್ರವಾಗಿ ಬಳಸುವ ಬಿಜೆಪಿ ಪ್ರಯತ್ನವು ಹೆಚ್ಚಿನ ವೇಗ ಪಡೆದುಕೊಂಡಿದೆ.
ಅವಿಭಜಿತ ಆಂಧ್ರಪ್ರದೇಶದಲ್ಲಿ ಈಗಲೂ ನಕ್ಸಲಿಸಂ, ಕಮ್ಯುನಿಸಂನ ದಟ್ಟ ಪ್ರಭಾವವಿದೆ. ಈಗಲೂ ಅಲ್ಲಿ ನಕ್ಸಲಿಸಂ ಕಥೆ ಇರುವ ಚಿತ್ರಗಳು ಬರುತ್ತಲೇ ಇರುತ್ತವೆ. ಅದೊಂದು ಉಪಧಾರೆಯಾಗಿ ಹರಿದುಕೊಂಡು ಬರುತ್ತಿದೆ. ಸಿಂಧೂರಂ, ಒಸೇಯ್ ರಾಮುಲಮ್ಮ, ವಿರೋಧಿ, ದಳಂ, ವಿರಾಟ ಪರ್ವಂ ಸಿನಿಮಾಗಳು ಇದಕ್ಕೆ ನಿದರ್ಶನ. ಒಂದು ಕಾಲದಲ್ಲಿ ಅಲ್ಲಿ ಜಮೀನ್ದಾರಿ ಪದ್ಧತಿಯನ್ನು ವೈಭವೀಕರಿಸುವ ‘ಪೆದರಾಯುಡು’ವಿನಂಥ ಸಾಲು ಸಾಲು ಚಿತ್ರಗಳು ಬಂದವು. ಅವುಗಳಲ್ಲಿ ಬಹುತೇಕ ಚಿತ್ರಗಳು ತಮಿಳಿನ ರೀಮೇಕ್ ಆಗಿದ್ದವು. ಅವುಗಳ ನಂತರ ಈಗ ಕೇಸರಿ ಚಿತ್ರಗಳ ಕಾವು ನಿಧಾನಕ್ಕೆ ಏರತೊಡಗಿದೆ. ಈ ಮೂಲಕ ತೆಲಂಗಾಣ ಮತ್ತು ಆಂಧ್ರಪ್ರದೇಶ ಮಾತ್ರವಲ್ಲದೇ ಹಿಂದಿ ಭಾಷಿಕ ರಾಜ್ಯಗಳಲ್ಲೂ ಹಿಂದೂತ್ವವನ್ನು ಹರಡಿ, ಅದರ ರಾಜಕೀಯ ಲಾಭ ಪಡೆದುಕೊಳ್ಳುವುದು ಬಿಜೆಪಿಯ ಕುತಂತ್ರವಾಗಿದೆ.