- ನಿಜ್ಜರ್ ಹತ್ಯೆಯ ಆರೋಪ; ಮುಂದುವರಿದ ಭಾರತ-ಕೆನಡಾ ನಡುವಿನ ಶೀತಲ ಸಮರ
- ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆ
ಕೆನಡಾದಲ್ಲಿ ಖಲಿಸ್ತಾನಿ ಉಗ್ರನ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪ ಮಾಡಿದ ಬಳಿಕ ಭಾರತ-ಕೆನಡಾ ನಡುವಿನ ಶೀತಲ ಸಮರ ಮುಂದುವರಿದಿದ್ದು, ಭಯೋತ್ಪಾದಕರಿಗೆ ಕೆನಡಾ ಸುರಕ್ಷಿತ ಅಡಗುದಾಣವಾಗುತ್ತಿದೆ ಎಂದು ಭಾರತ ಗಂಭೀರ ಆರೋಪ ಹೊರಿಸಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಕೆನಡಾ ಇತ್ತೀಚಿನ ದಿನಗಳಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಗೆ ಸುರಕ್ಷಿತ ಸ್ವರ್ಗವಾಗಿ ಪರಿಣಮಿಸಿದೆ. ಪಾಕಿಸ್ತಾನವು ಪ್ರತ್ಯೇಕತಾವಾದಿಗಳಿಗೆ ಹಣ ನೀಡುತ್ತಿದೆ ಎಂದು ಗುರುವಾರ ಹೇಳಿದ್ದಾರೆ.
ಭಾರತ-ಕೆನಡಾ ರಾಜತಾಂತ್ರಿಕ ಸಮರ ಆರಂಭವಾದ ನಂತರ ಮೊದಲ ಬಾರಿಗೆ ಪತ್ರಿಕಾಗೋಷ್ಠಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಈ ಹೇಳಿಕೆ ನೀಡಿದ್ದಾರೆ.
#WATCH | MEA Spokesperson Arindam Bagchi says, "Safe haven is being provided in Canada, we want the Canadian govt to not do so and take action against those who have terrorism charges or send them here to face justice…We've sought either extradition request or assistance… pic.twitter.com/0ikMJFu8M6
— ANI (@ANI) September 21, 2023
“ಕೆನಡಾದ ಪ್ರಧಾನಿ ಭಾರತದ ಮೇಲೆ ಮಾಡಿರುವ ಆರೋಪವು ರಾಜಕೀಯ ಪ್ರೇರಿತವಾದುದು. ಈ ಬಗ್ಗೆ ನಮ್ಮ ಅಭಿಪ್ರಾಯಗಳನ್ನು ಈಗಾಗಲೇ ನಾವು ತಿಳಿಸಿದ್ದೇವೆ. ಕೆನಡಾಗೆ ವಲಸೆ ಹೋಗಿ ಖಲಿಸ್ತಾನ್ ಉಗ್ರರ ನಾಯಕನಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಮೊದಲು ಅಥವಾ ಈಗಲೂ ಹಂಚಿಕೊಂಡಿಲ್ಲ. ಈ ಬಗ್ಗೆ ಮಾಹಿತಿಯನ್ನು ಪಡೆಯಲು ನಾವು ಸಿದ್ಧರಿದ್ದೇವೆ” ಎಂದು ಅರಿಂದಮ್ ಬಾಗ್ಚಿ ಹೇಳಿಕೆ ನೀಡಿದ್ದಾರೆ.
ಭಾರತಕ್ಕೆ ಬೇಕಾಗಿರುವ ಅಪರಾಧಿಗಳು ಮತ್ತು ‘ವಾಂಟೆಡ್’ ವ್ಯಕ್ತಿಗಳ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ನಾವು ಒದಗಿಸಿದ್ದೇವೆ. ಆದರೆ ಕೆನಡಾ ಎಂದಿಗೂ ಅದರ ಮೇಲೆ ಕಾರ್ಯನಿರ್ವಹಿಸಲಿಲ್ಲ ಎಂದಿರುವ ಅವರು, “ಕೆನಡಾ ಸರ್ಕಾರವು ಈ ರೀತಿಯಲ್ಲಿ ವರ್ತಿಸಬಾರದು. ಭಯೋತ್ಪಾದನೆ ಆರೋಪಗಳನ್ನು ಹೊಂದಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಥವಾ ನ್ಯಾಯವನ್ನು ಎದುರಿಸಲು ಅವರನ್ನು ಭಾರತಕ್ಕೆ ಕಳುಹಿಸಬೇಕು ಎಂದು ನಾವು ಆಗ್ರಹಿಸುತ್ತೇವೆ” ಎಂದು ಬಾಗ್ಚಿ ತಿಳಿಸಿದ್ದಾರೆ.
India Canada ties on the brink. Canadian PM Justin Trudeau accuses Indian govt of killing Khalistani leader Hardeep Singh Nijjar in the Canadian Parliament. pic.twitter.com/gXpMrWWuTf
— Sidhant Sibal (@sidhant) September 19, 2023
“ಕೆನಡಾದಲ್ಲಿ ಭಯೋತ್ಪಾದಕರಿಗೆ ಸುರಕ್ಷಿತ ನೆಲೆಯನ್ನು ಒದಗಿಸಲಾಗಿದೆ. ಸುಮಾರು 20-25ಕ್ಕಿಂತ ಹೆಚ್ಚು ವ್ಯಕ್ತಿಗಳನ್ನು ಭಾರತಕ್ಕೆ ಹಸ್ತಾಂತರ ಮಾಡುವಂತೆ ನಾವು ಹಲವು ವರ್ಷಗಳಿಂದ ವಿನಂತಿ ಮಾಡಿದ್ದೇವೆ. ಅಲ್ಲದೇ, ಇದಕ್ಕೆ ಸಂಬಂಧಿಸಿ ಅವರನ್ನು ತಮ್ಮದೇ ನೆಲದಲ್ಲಿ ವಿಚಾರಣೆ ನಡೆಸುವಂತೆಯೂ ತಿಳಿಸಿದ್ದೆವು. ಆದರೆ ಭಾರತಕ್ಕೆ ಕೆನಡಾವು ಯಾವುದೇ ನೆರವು ನೀಡುತ್ತಿಲ್ಲ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಏನಿದು ವಿವಾದ?
ಪಂಜಾಬ್‌ನ ಜಲಂಧರ್ ನಿವಾಸಿ ಹರ್ದೀಪ್ ಸಿಂಗ್ ನಿಜ್ಜರ್, ಕೆನಡಾ ದೇಶಕ್ಕೆ ಪರಾರಿಯಾಗಿದ್ದನು. ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಈತ, ಕೆನಡಾದಲ್ಲಿ ವಲಸೆ ಹೋಗಿ ಖಲಿಸ್ತಾನ್ ಉಗ್ರರ ನಾಯಕನಾಗಿದ್ದ. ಕೆನಡಾ ದೇಶದ ಸರ್ರೆ ಎನ್ನುವ ಪ್ರದೇಶದಲ್ಲಿರುವ ಗುರುದ್ವಾರದ ಹೊರಗೆ 2023ರ ಜುಲೈ 18 ರಂದು ಅಪರಿಚಿತ ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಈತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು.
ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಯ ಗುಂಪಿನ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್‌ನ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಕೆನಡಾ ಸಂಸತ್‌ನಲ್ಲೇ ಗಂಭೀರ ಆರೋಪ ಮಾಡಿದ್ದರು. ಆ ಹೇಳಿಕೆಯ ಬಳಿಕ ಭಾರತ-ಕೆನಡಾ ನಡುವೆ ಶೀತಲ ಸಮರ ಆರಂಭವಾಗಿದೆ.