ಕಾಂಗ್ರೆಸ್ LGBTOIA+ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಬೇಕು: ಕರ್ನಾಟಕ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ ಒತ್ತಾಯ

Date:

“ಇದುವರೆಗೂ ಯಾವ ಪಕ್ಷವೂ ಸರ್ಕಾರ ರಚನೆಯಲ್ಲಿ ನಮ್ಮ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವ ಬಗ್ಗೆ ಬದ್ಧತೆಯನ್ನು ತೋರಿಸಿಲ್ಲ. ನಮ್ಮ ಪ್ರಾತಿನಿಧ್ಯ ಹಾಗೂ ಒಳಗೊಳ್ಳುವಿಕೆಗಾಗಿ ನಾವು ಇಷ್ಟೆಲ್ಲ ಪ್ರಯತ್ನಗಳನ್ನು ನಡೆಸುತ್ತಿದ್ದಾಗಲೂ ಇದು ಸಾಧ್ಯವಾಗಿಲ್ಲ. ಈ ಗಂಭೀರ ವೈಫಲ್ಯಗಳನ್ನು ಇನ್ನಾದರೂ ಸರಿಪಡಿಸಲು ಭಾರತೀಯ ನ್ಯಾಷನಲ್ ಕಾಂಗ್ರೆಸ್ ಪಕ್ಷವು LGBTOIA+ ಸಮುದಾಯದ ರಾಜಕೀಯ ಪ್ರಾತಿನಿಧ್ಯವನ್ನು ಪ್ರಧಾನ ಚರ್ಚೆಯ ವಿಷಯವನ್ನಾಗಿ ಪರಿಗಣಿಸಬೇಕು ಹಾಗೂ ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯ ಕಲ್ಪಿಸಬೇಕು” ಕರ್ನಾಟಕ ರಾಜ್ಯ ಲಿಂಗತ್ವ ಮತ್ತು ಲೈಂಗಿಕತೆ ಅಲ್ಪಸಂಖ್ಯಾತರ ಒಕ್ಕೂಟ ಒತ್ತಾಯಿಸಿದೆ.

“ಭಾರತವು ಇಡೀ ಜಗತ್ತಿನಲ್ಲಿ LGBTOIA+ ಸಮುದಾಯದ ಹಕ್ಕುಗಳ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ನ್ನು ರದ್ದು ಪಡಿಸಿದಂತಹ ಸುಪ್ರೀಂ ಕೋರ್ಟ್‍ನ 2018ರ ಆದೇಶವನ್ನು ಜಾಗತಿಕವಾಗಿ ಒಂದು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ತೃತೀಯ ಲಿಂಗಿಗಳಿಗೆ ಅಧಿಕೃತ ಮಾನ್ಯತೆ ನೀಡಿರುವ ಜಗತ್ತಿನ ಕೇವಲ 16 ದೇಶಗಳಲ್ಲಿ ಭಾರತವೂ ಒಂದು.

ಈ ಬದಲಾವಣೆಗಳು ಮತ್ತು ಆಧುನಿಕ ಮನೋಭಾವವು ಕೇವಲ ನ್ಯಾಯಾಲಯದ ಪ್ರಬುದ್ಧತೆಯಿಂದ ಆದದ್ದಲ್ಲ. ಬದಲಿಗೆ ದಶಕಗಳ ಕಾಲದಿಂದ LGBTOIA+ ಕಾರ್ಯಕರ್ತರು ತಳಹಂತದಿಂದ ನಡೆಸಿಕೊಂಡು ಬಂದಿರುವ ಹೋರಾಟದ ಫಲವಾಗಿದೆ. ತಮ್ಮನ್ನು ಸಮಾಜದ ಭಾಗವಾಗಿ ಒಳಗೊಳ್ಳಿಸಿಕೊಳ್ಳಬೇಕು ಎಂಬ ಅವರ ಅವಿರತ ಹೋರಾಟದಿಂದ ಇಂದು ಭಾರತೀಯ ಸಮಾಜವು ಹೊಸ ಚೈತನ್ಯವನ್ನು ಪಡೆದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೂ, ಭಾರತದ ಪ್ರಜಾಪ್ರಭುತ್ವವು ಆಳವಾದ ಪ್ರತ್ಯೇಕತೆಯ ಮನೋಭಾವದ ಮೇಲೆ ರೂಪುಗೊಂಡಿದೆ. ರಾಜ್ಯಗಳ ವಿಧಾನಸಭೆ, ವಿಧಾನ ಪರಿಷತ್ತುಗಳಿಂದ ಹಿಡಿದು ಸಂಸತ್ತಿನ ಲೋಕಸಭೆ, ರಾಜ್ಯಸಭೆಗಳವರೆಗಿನ ಜನಪತ್ರಿನಿಧಿ ಸಭೆಗಳಲ್ಲಿರುವ ಸಾವಿರಾರು ಸ್ಥಾನಗಳಲ್ಲಿ ಕೇವಲ ಒಬ್ಬರಾದರೂ ಘೋಷಿತ LGBTOIA+ ಸಮುದಾಯದ ಪ್ರತಿನಿಧಿ ಇಲ್ಲ.

ಯಾವುದೇ ಪಕ್ಷದ ಅಥವಾ ಈ ದೇಶದ ಹಿರಿಮೆಯನ್ನು ಎತ್ತಿ ಹಿಡಿಯುವ ಕಾರಣಕ್ಕಾಗಿ ನಮ್ಮ ಸಮುದಾಯದ ಪ್ರತಿನಿಧಿಗಳಿಗೆ ಸಾಂಕೇತಿಕವಾಗಿ ಸದಸ್ಯತ್ವ ನೀಡಲು ನಾವು ಸಂತ್ರಸ್ಥರಲ್ಲ. ನಾವು ನಮ್ಮದೇ ಶಕ್ತಿ-ಸಾಮರ್ಥ್ಯವನ್ನು ಅವಲಂಬಿಸಿದ ಮುಖಂಡರಿದ್ದೇವೆ.

ಭಾರತದ ಜನಸಂಖ್ಯೆಯಲ್ಲಿ LGBTOIA+ ಸಮುದಾಯ ಗಣನೀಯ ಸಂಖ್ಯೆಯಲ್ಲಿದೆ. ಇತ್ತೀಚಿನ ಒಂದು ಜಾಗತಿಕ ಸಮೀಕ್ಷೆಯಲ್ಲಿ ಭಾರತದಲ್ಲಿ ಶೇ.2ರಷ್ಟು ಜನರು “ಟ್ರಾನ್ಸ್‍ಜೆಂಡರ್”, ‘ನಾನ್-ಬೈನರಿ” ಅಥವಾ “ಜೆಂಡರ್ ಫ್ಲೂಯಿಡ್” ವರ್ಗಕ್ಕೆ ಸೇರಿದ್ದಾರೆಂದು ಹಾಗೂ ಶೇ.17ರಷ್ಟು ಜನರು ಸಲಿಂಗ ಆಕರ್ಷಿತರು ಎಂದು ಹೇಳಲಾಗಿದೆ. ಭಾರತೀಯ ಸಮಾಜದ ಎಲ್ಲ ಆಯಾಮಗಳೂ LGBTOIA+ ಸಮುದಾಯ ಕೇಂದ್ರಿತವಾಗಿವೆ. ಆದರೂ ಈ ಸಮುದಾಯವನ್ನು ಭಾರತದ ಎಲ್ಲ ಪ್ರಜಾಸತ್ತಾತ್ಮಕ ಸಂಸ್ಥೆಗಳಿಂದಲೂ ಸಂಪೂರ್ಣವಾಗಿ ಹೊರಗಿಡಲಾಗಿದೆ.

ಭಾರತದ ರಾಜಕೀಯ ನಾಯಕತ್ವದಲ್ಲಿ ನಮ್ಮ ಗೈರುಹಾಜರಿಯು ಪ್ರಾತಿನಿಧಿತ್ವದ ಪ್ರಶ್ನೆ ಮಾತ್ರವಲ್ಲ, ಭಾರತದ ಪ್ರಜಾಪ್ರಭುತ್ವದಲ್ಲಿರುವ ಲೋಪ ಇದು. ‘ಸಾಮಾಜಿಕ ಪ್ರಜಾಪ್ರಭುತ್ವ ಇಲ್ಲವಾದರೆ ಪ್ರಜಾಪ್ರಭುತ್ವದ ಚೌಕಟ್ಟಿಗೆ ಯಾವುದೇ ಮೌಲ್ಯವಿಲ್ಲ ಹಾಗೂ ಅದು ಅಸಮರ್ಪಕ ಪ್ರಜಾಪಭುತ್ವವಾಗುತ್ತದೆ” ಎಂದಿದ್ದಾರೆ ಬಾಬಾಸಾಹೇಬ್ ಅಂಬೇಡ್ಕರ್. ಅವರು ಹೇಳಿದಂತೆ, “ಸಮಾಜದ ಇತರ ಸಹಚರರ ಕುರಿತು ಪರಸ್ಪರ ಗೌರವ ಮತ್ತು ಸಮಾನತೆಯ ಭಾವ ಇಲ್ಲವಾದರೆ” ಹಾಗೂ ಸಾಮಾಜಿಕ ಅಡೆತಡೆಗಳಿಂದ ಮುಕ್ತವಾಗದ ಹೊರತು ರಾಜಕೀಯ ಪ್ರಜಾಪ್ರಭುತ್ವ ಅಸಾಧ್ಯ.

LGBTOIA+ ಸಮುದಾಯದ ಬಹಿಷ್ಕಾರವು ನಮ್ಮ ರಾಜಕೀಯದ ಸಾಮಾಜಿಕ ಬಹಿಷ್ಕಾರ ಪರಂಪರೆಯ ಭಾಗವಾಗಿದೆ. ಇತ್ತೀಚೆಗೆ ಕಾನೂನುಗಳು ನಮ್ಮ ಸಮುದಾಯದ ಕುರಿತು ಪ್ರಗತಿಪರವಾಗಿದ್ದರೂ, ನಮ್ಮ ಸಮುದಾಯಗಳನ್ನು ಮುಖ್ಯವಾಹಿನಿ ಸಾಮಾಜಿಕ ವಲಯದಿಂದ ಹೊರಗಿಡಲಾಗಿದೆ, ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧಿಗಳು ಮತ್ತು ಕಳಂಕಿತರಂತೆ ನೋಡಲಾಗುತ್ತಿದೆ, ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಮತ್ತು ರಾಜಕೀಯದಲ್ಲಿ ಸಮಾನ ಅವಕಾಶಗಳಿಂದ ವಂಚಿಸಲಾಗಿದೆ. LGBTOIA+ ಸಮುದಾಯದ ಜನರು ದಿನನಿತ್ಯ ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಹಿಂಸೆಗೆ ಗುರಿಯಾಗುತ್ತಿದ್ದಾರೆ.

ಈ ಸಾಮಾಜಿಕ ಬಹಿಷ್ಕಾರದ ಪರಿಣಾಮವಾಗಿ ನಾವು ಎದುರಿಸುತ್ತಿರುವ ರಾಜಕೀಯ ಬಹಿಷ್ಕಾರವನ್ನು ಸರಪಡಿಸಲು ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. 2023ರಲ್ಲಿ ಸುಪ್ರೀಂ ಕೋರ್ಟ್‍ನ ಮುಂದೆ ಬಂದ ಸುಪ್ರಿಯೊ ವರ್ಸಸ್ ಯೂನಿಯನ್ ಆಫ್ ಇಂಡಿಯಾ ನಡುವಿನ ವೈವಾಹಿಕ ಸಮಾನತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಕ್ಕೂಟ ಸರ್ಕಾರವು LGBTOIA+ ಸಮುದಾಯದ ವಿವಾಹದ ಹಕ್ಕನ್ನು ಸಂಸತ್ತಿನಲ್ಲಿ ನಿರ್ಣಯಿಸಬೇಕು ಎಂದು ಒತ್ತಿ ಒತ್ತಿ ಹೇಳಿತು. ಆದರೆ ಸಂಸತ್ತಿನಲ್ಲಿ ನಮ್ಮ ಸಮುದಾಯದ ಒಬ್ಬರೇ ಒಬ್ಬ ಪ್ರತಿನಿಧಿಯೂ ಇಲ್ಲ. 2019ರಲ್ಲಿ ಲಿಂಗಾಂತರಿ ವ್ಯಕ್ತಿಗಳ (ಹಕ್ಕು ಸಂರಕ್ಷಣೆ) ಕಾಯಿದೆಯನ್ನು ಅಪ್ರಜಾಸತ್ತಾತ್ಮಕ ಹಾಗೂ ದೋಷಪೂರಿತ ಕ್ರಮಗಳಿಂದ ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಇದು ಲಿಂಗಾಂತರಿ ಸಮುದಾಯದ ಹಕ್ಕುಗಳನ್ನು ವಿಸ್ತರಿಸುವ ಬದಲು ಮತ್ತಷ್ಟು ಸಂಕುಚಿತಗೊಳಿಸಿದೆ.

ಈ ಬಹಿಷ್ಕಾರ ಅಥವಾ ಹೊರಗಿಡುವಿಕೆಯು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ. LGBTOIA+ ಸಮುದಾಯದ ಬದುಕಿನ ಕುರಿತು ಅಥವಾ ಹಕ್ಕುಗಳ ಕುರಿತ ಯಾವುದೇ ಸರ್ಕಾರ ಎಂತಹುದೇ ನಿರ್ಣಯಗಳನ್ನು ಕೈಗೊಳ್ಳುವಾಗ ನಮ್ಮ ಸಮುದಾಯದ ಪ್ರತಿನಿಧಿಗಳನ್ನು ಒಳಗೊಳ್ಳಬೇಕು.

LGBTOIA+ ಸಮುದಾಯವು ಭಾರತೀಯ ಸಮಾಜ, ಮಾಧ್ಯಮಗಳು, ಸಂಸ್ಕೃತಿ, ಧರ್ಮ ಹಾಗೂ ಸಾರ್ವಜನಿಕ ವಲಯದಲ್ಲಿ ಹಾಸುಹೊಕ್ಕಾಗಿದೆ. ನಾವು ಪ್ರತಿಷ್ಠಿತ ಸಮುದಾಯವಲ್ಲ ಆದರೆ ಭಾರತೀಯ ಸಮಾಜದ ನೇಯ್ಗೆಯಲ್ಲಿ ಹಾಸುಹೊಕ್ಕಾಗಿದ್ದೇವೆ. ನಾವು ಈ ನೆಲದ ಪರಂಪರೆಯನ್ನು ಹಾಗೂ ಭವಿಷ್ಯವನ್ನು ಪ್ರತಿನಿಧಿಸುತ್ತೇವೆ. ಭಾರತದ ರಾಜಕೀಯ ವಲಯವು ಸಮಾನ ಪ್ರಜೆಗಳಾಗಿ ಮತ್ತು ನಾಯಕರಾಗಿ ನಮ್ಮ ಪರಿವರ್ತನೆಯ ಸಾಮರ್ಥ್ಯವನ್ನು ಮಾನ್ಯ ಮಾಡಲು ಇದು ತಕ್ಕ ಸಮಯವಾಗಿದೆ” ಎಂದು ಒಕ್ಕೂಟ ಮನವಿ ಮಾಡಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇಂದು ನಡೆಯಲಿದೆ ಹೈ ಪ್ರೊಫೈಲ್‌ ಕೇಸುಗಳ ವಿಚಾರಣೆ; ಸಂಪೂರ್ಣ ಮಾಹಿತಿ ಇಲ್ಲಿದೆ

ಇಂದು ನಾಲ್ಕು ಹೈಪ್ರೊಫೈಲ್‌ ಕೇಸುಗಳ ವಿಚಾರಣೆ ಹೈಕೋರ್ಟ್‌ ಸೇರಿದಂತೆ ವಿವಿಧ ಕೋರ್ಟ್‌ಗಳಲ್ಲಿ...

ಲೈಂಗಿಕ ದೌರ್ಜನ್ಯ | ಸಿ ಪಿ ಯೋಗೇಶ್ವರ್ ಆಪ್ತ ಟಿ ಎಸ್‌ ರಾಜು ವಿರುದ್ಧ ದೂರು ದಾಖಲು, ಆರೋಪಿ ಪರಾರಿ

ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಚನ್ನಪಟ್ಟಣ ಬಿಜೆಪಿ ಗ್ರಾಮಾಂತರ ಮಂಡಳದ ಅಧ್ಯಕ್ಷ...

ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿ ಬಗ್ಗೆ ಚರ್ಚೆ: ಸಚಿವ ಪ್ರಿಯಾಂಕ್ ಖರ್ಗೆ

ಕಲಬುರಗಿಯಲ್ಲಿ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ...

ಆರ್ ಅಶೋಕ್‌ಗೆ ನಮ್ಮ ಪಕ್ಷದ ಉಸಾಬರಿ ಯಾಕೆ: ಗೃಹ ಸಚಿವ ಪರಮೇಶ್ವರ್‌ ಪ್ರಶ್ನೆ

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್‌ ಅವರಿಗೆ ನಮ್ಮ ಪಕ್ಷದ...