ಅತ್ತೆ ಮನೆಯಲ್ಲಿ ಅಳಿಯನೇ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅತ್ತೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿಟ್ಟಿದ್ದ ಚಿನ್ನಾಭರಣ, ನಗದು ಸೇರಿ ಬರೋಬ್ಬರಿ ₹40 ಲಕ್ಷ ಮೌಲ್ಯದ ವಸ್ತುಗಳನ್ನು ಆರೋಪಿ ಅಳಿಯ ಕದ್ದಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರದೀಪ್ ಕುಮಾರ್ ಬಂಧಿತ ಆರೋಪಿ. ರೆಜಿನಾ ಆರೋಪಿಯ ಅತ್ತೆ. ಕಳೆದ ಒಂದು ವರ್ಷದ ಹಿಂದೆ ರೆಜಿನಾ ಅವರ ಚಿಕ್ಕ ಮಗಳು ಲಾವಣ್ಯಳನ್ನು ಪ್ರದೀಪ್ ಪ್ರೀತಿಸಿ ಆಕೆಯನ್ನು ಕರೆದುಕೊಂಡು ಓಡಿ ಹೋಗಿದ್ದನು.
ರೆಜಿನಾ ಕನ್ಯಾಕುಮಾರಿಗೆ ತೆರಳಿದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿಕೊಂಡು ಆರೋಪಿ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ್ದಾನೆ. ಈ ವೇಳೆ, ಚಿನ್ನಾಭರಣ, ನಗದು ಸೇರಿ ಬರೋಬ್ಬರಿ ₹40 ಲಕ್ಷ ಕಳ್ಳತನ ಮಾಡಿದ್ದಾನೆ.
ಇದರಿಂದ ಅನುಮಾನಗೊಂಡ ಸ್ಥಳೀಯರು ಆತನನ್ನು ತಡೆದು ಪ್ರಶ್ನಿಸಿದ್ದಾರೆ. ಆತ ತನ್ನನ್ನು ರೆಜಿನಾ ಅವರ ಸಂಬಂಧಿ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಆದರೂ ಅನುಮಾನಗೊಂಡ ಸ್ಥಳೀಯರು ಆತ ಕದ್ದುಕೊಂಡು ಹೋಗುತ್ತಿದ್ದ ವಸ್ತುಗಳ ಸಮೇತ ಫೋಟೋ ಸೆರೆ ಹಿಡಿದಿದ್ದಾರೆ. ರೆಜಿನಾ ಅವರಿಗೆ ಈ ಬಗ್ಗೆ ತಿಳಿಸಲು ಕರೆ ಮಾಡಿದ್ದಾರೆ. ಆದರೆ, ಕರೆ ಹೋಗಿರಲಿಲ್ಲ.
ಈ ಸುದ್ದಿ ಓದಿದ್ದೀರಾ? ನ.22ರಂದು ಅಂಗನವಾಡಿ ಕಾರ್ಯಕರ್ತೆಯರಿಂದ ‘ಬೆಂಗಳೂರು ಚಲೋ’
ರೆಜಿನಾ ಕೆಲವು ದಿನಗಳ ಬಳಿಕ ಕನ್ಯಾಕುಮಾರಿಯಿಂದ ಮನೆಗೆ ವಾಪಸ್ ಬಂದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಸ್ಥಳೀಯರು ಸೆರೆ ಹಿಡಿದ ಫೋಟೋ ತೋರಿಸಿದಾಗ ಆತ ತನ್ನ ಅಳಿಯ ಎಂಬುದು ತಿಳಿದುಬಂದಿದೆ.
ರೆಜಿನಾ ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.