ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ನಿಗದಿಯಾದ ಹಿನ್ನೆಲೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.
ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾ, ಸಾಕಷ್ಟು ಸದ್ದು ಮಾಡಿರುವ ಕೆಆರ್‌ಎಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಕೆಆರ್‌ಎಸ್ ಅಧ್ಯಕ್ಷ ರವಿಕೃಷ್ಣಾರೆಡ್ಡಿ 47 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.
“ಪಕ್ಷವು ಕಳೆದ ಒಂದು ವರ್ಷದಿಂದ ನಿರಂತರವಾಗಿ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದು, ಚುನಾವಣೆ ಸಿದ್ಧತೆ ನಡೆಸಿದ್ದ ಕೆಆರ್‌ಎಸ್ ಪಕ್ಷ ಇಲ್ಲಿಯವರೆಗೆ ಪಕ್ಷವು 300ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿದೆ” ಎಂದು ಪಕ್ಷದ ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದೆ.
“ಕೆಆರ್‌ಎಸ್ ಈ ಹಿಂದೆ 110 ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಿತ್ತು. ಇದರಲ್ಲಿ 47 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ರಾಜ್ಯ ಸಮಿತಿಯು ಅಂತಿಮಗೊಳಿಸಿದೆ. ಉಳಿದ ಕ್ಷೇತ್ರಗಳಿಗೆ ಸದ್ಯದಲ್ಲಿಯೇ ಅಭ್ಯರ್ಥಿಗಳನ್ನು ಘೋಷಿಸಲಾಗುವುದು” ಎಂದು ತಿಳಿಸಿದೆ.
“ಅಭ್ಯರ್ಥಿಗಳಿಂದಲೂ ಅವರು ರಾಜ್ಯದ ಜನರ ಹಿತಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವ ಎನ್ನುವುದೂ ಸೇರಿದಂತೆ ಪ್ರತಿಜ್ಞೆ ತೆಗೆದುಕೊಂಡ ನಂತರವಷ್ಟೆ ಅವರಿಗೆ ಬಿ-ಫಾರಂ ನೀಡಲಾಗುತ್ತದೆ” ಎಂದು ಪಕ್ಷ ಹೇಳಿದೆ.
ಕೆಆರ್‌ಎಸ್ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಮೂರು ಕ್ಷೇತ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳಿದ್ದಾರೆ. ಕೆಆರ್‌ಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಕೆಳಗಿನಂತಿದೆ.