- ತಮ್ಮ ಮೇಲೆ ದಾಖಲಾಗಿರುವ ದೂರು ರದ್ದುಪಡಿಸುವಂತೆ ಹೈಕೋರ್ಟ್ ಗೆ ಅರ್ಜಿ
- 2015ರಲ್ಲಿ ಗುರುಪಾದಯ್ಯ ಮಠದ್ ಎಂಬುವರಿಂದ ಲೋಕಾಯುಕ್ತದಲ್ಲಿ ದೂರು
ಆದಾಯಕ್ಕಿಂತಲು ಹೆಚ್ಚಿನ ಆಸ್ತಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಎಂ ಪಿ ರೇಣುಕಾಚಾರ್ಯ ಮೇಲೆ ಐಪಿಸಿ ಅಡಿಯಲ್ಲಿ ಲೋಕಾಯುಕ್ತ ಪೊಲೀಸರಿಂದ ದಾಖಲಾಗಿದ್ದ ಪ್ರಕರಣವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಶಾಸಕ ರೇಣುಕಾಚಾರ್ಯ ಅಕ್ರಮ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಆರೋಪಿಸಿ ದಾವಣಗೆರೆ ಮೂಲದ ಗುರುಪಾದಯ್ಯ ಮಠದ್ ಎಂಬುವರು ದೂರ ಸಲ್ಲಿಸಿದ್ದರು.
ತಮ್ಮ ದೂರಿನಲ್ಲಿ ರೇಣುಕಾಚಾರ್ಯ ಅವರು “ಹೊನ್ನಾಳಿಯಿಂದ ನಾಮಪತ್ರ ಸಲ್ಲಿಸಿದಾಗ ತಮ್ಮ ಬಳಿ 2004ರಲ್ಲಿ 26.07 ಲಕ್ಷ, 2008ರ ಚುನಾವಣೆಗೆ 73.97 ಲಕ್ಷ ರೂ. 2013ರಲ್ಲಿ ಅವರ ಆಸ್ತಿ 4.95 ಕೋಟಿ ರೂ. ಆಸ್ತಿ ಇದೆ ಎಂದು ಅಫಿಡೆವಿಟ್ ಸಲ್ಲಿಸಿದ್ದಾರೆ” ಎಂದು ತಿಳಿಸಿದ್ದರು.
“ಇದರನ್ವಯ ರೇಣುಕಾಚಾರ್ಯ ಸಚಿವರಾಗಿದ್ದ ವೇಳೆ ಆದಾಯ ಮತ್ತು ಆಸ್ತಿಯಲ್ಲಿ ಏರಿಕೆಯಾಗಿದೆ ಎಂದು ಆರೋಪಿಸಿ ಲೋಕಾಯುಕ್ತ ಪೊಲೀಸರಿಗೆ 2015ರ ಏಪ್ರಿಲ್ 28ರಂದು ಖಾಸಗಿ ದೂರು ಸಲ್ಲಿಸಿದ್ದರು.
ದೂರಿನ ಅನ್ವಯ ರೇಣುಕಾಚಾರ್ಯ ವಿರುದ್ಧ 2015ರಲ್ಲಿ ಎಫ್‌ಐಆರ್ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ, ಅಂತಿಮ ವರದಿ ಸಿದ್ಧಪಡಿಸಿದ್ದರು.
ಆರೋಪಿಯು ಜನಪ್ರತಿನಿಧಿಯಾಗಿರುವುದರಿಂದ, ತಮ್ಮ ವರದಿ ಸಲ್ಲಿಸಲು ಸಮಕ್ಷ ಪ್ರಾಧಿಕಾರದ ಪೂರ್ವಾನುಮತಿ ಪಡೆಯಬೇಕೆಂಬ ನಿಯಮವಿರುವುದರಿಂದ ಈ ಅನುಮತಿಗಾಗಿ ಕಾಯುತ್ತಿದ್ದರು.
ಈ ಸುದ್ದಿ ಓದಿದ್ದೀರಾ? : ಬೆಂಗಳೂರು | ರಾತ್ರಿ ವೇಳೆ ಹಾಡಿನ ಶಬ್ದ ಕಡಿಮೆ ಮಾಡಿ ಎಂದ ನೆರೆಯವರು; ಥಳಿತಕ್ಕೊಳಗಾದ ವ್ಯಕ್ತಿ ಸಾವು
ಆದರೆ, ಶಾಸಕ ರೇಣುಕಾಚಾರ್ಯ ಅವರು ತಮ್ಮ ಮೇಲೆ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಕೆ ನಟರಾಜನ್ ಅವರ ಪೀಠವು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿತ್ತು.
ಪ್ರಕರಣದ ಆರೋಪಿಯಾಗಿರುವ ರೇಣುಕಾಚಾರ್ಯ ಜನಪ್ರತಿನಿಧಿಯಾಗಿರುವುದರಿಂದ, ಇವರ ವಿರುದ್ಧ ವರದಿ ಸಲ್ಲಿಸಲು ಸಮಕ್ಷ ಪ್ರಾಧಿಕಾರದ ಪೂರ್ವಾನುಮತಿ ಪಡೆಯಲುಯ ಲೋಕಾಯುಕ್ತ ಪೊಲೀಸರು ಪ್ರಾಧಿಕಾರ ಅನುಮತಿಗೆ ಅರ್ಜಿ ಸಲ್ಲಿಸಿದ್ದಾರೆ.
ಇದಕ್ಕೆ ಒಪ್ಪಿಗೆ ಸಿಕ್ಕ ಕೂಡಲೇ ವಿಶೇಷ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ. ಇಂತಹ ಸಮಯದಲ್ಲಿ ಆರೋಪಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದೆ.