ಕೋಲಾರ ಜಿಲ್ಲೆ | ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಸ್ಪರ್ಧೆ; ಬಿಜೆಪಿಗೆ ಒಂದು ಕ್ಷೇತ್ರದಲ್ಲಷ್ಟೇ ಬಲ

Date:

ಕೋಲಾರ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಚಿತ್ರಣವನ್ನು ನೋಡಿದರೆ, ಎದ್ದು ಕಾಣುವ ಅಂಶ, ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿಯದ್ದು. ಕ್ಷೇತ್ರದಲ್ಲಿ ಬಿಜೆಪಿ ಅಷ್ಟಾಗಿ ಪ್ರಭಾಶಾಲಿಯಾಗಿಲ್ಲ. ಕೋಲಾರ ಕ್ಷೇತ್ರದಲ್ಲಿ ಪಕ್ಷೇತರರಾಗಿದ್ದ ವರ್ತೂರು ಪ್ರಕಾಶ್ ಅವರ ಮೂಲಕ ಕಮಲ ಪಕ್ಷ ಖಾತೆ ತೆರೆಯಲು ನೋಡುತ್ತಿದೆ. ಮುಳುಬಾಗಿಲಿನಲ್ಲಿ ಮೂರು ಮುಖ್ಯ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್‌ ವರ್ಸಸ್‌ ಜೆಡಿಎಸ್‌ ನಡುವೆ ನೇರ ಪೈಪೋಟಿ ಇದೆ.

ಕೆಜಿಎಫ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ಗೆ ವರ್ಚಸ್ಸು ಇಲ್ಲದಿರುವುದರಿಂದ ಒಂದು ಬಾರಿಯೂ ಈ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿಯೂ ಅಲ್ಲಿ ಕಾಂಗ್ರೆಸ್‌ನ ರೂಪಕಲಾ ಶಶಿಧರ್‌ರವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ. ಶ್ರೀನಿವಾಸಪುರದಲ್ಲಿ ವೆಂಕಟಶಿವಾರೆಡ್ಡಿ ಮತ್ತು ರಮೇಶ್ ಕುಮಾರ್ ಅವರ ನಡುವೆ ಇದು ಕೊನೆಯ ಕದನ ಎನ್ನಲಾಗುತ್ತಿದ್ದು, ಸಮಬಲದ ಪೈಪೋಟಿಯಿದೆ.

ಕೋಲಾರದಲ್ಲಿ ತ್ರಿಕೋನ ಸ್ಪರ್ಧೆ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೋಲಾರ ವಿಧಾನಸಭಾ ಕ್ಷೇತ್ರ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆನ್ನುವ ಕಾರಣಕ್ಕೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಕೊನೇ ಕ್ಷಣದಲ್ಲಿ ಸಿದ್ದರಾಮಯ್ಯ ಅಲ್ಲಿಂದ ಸ್ಪರ್ಧಿಸದ ಕಾರಣ ಕಾಂಗ್ರೆಸ್ ಕೊತ್ತೂರು ಮಂಜುನಾಥ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತು. ಇನ್ನು ಜೆಡಿಎಸ್‌ ಪಕ್ಷದಿಂದ ಹೊಸ ಮುಖ ಸಿ.ಎಂ.ಆರ್.ಶ್ರೀನಾಥ ಅಭ್ಯರ್ಥಿಯಾದರೆ, ಬಿಜೆಪಿಯಿಂದ ವರ್ತೂರು ಪ್ರಕಾಶ್‌ ಕಣದಲ್ಲಿದ್ದಾರೆ.

ಕೊತ್ತೂರು ಮಂಜುನಾಥ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಕಾರ್ಯಕರ್ತರಲ್ಲಿ ರಾತ್ರಿ ಬೆಳಗಾಗುವುದರಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕಾಂಗ್ರೆಸ್ ಕಾರ್ಯಕರ್ತರಲ್ಲಂತೂ ಹೊಸ ಹುರುಪು ಮೂಡಿದೆ. ಕ್ಷೇತ್ರದಲ್ಲಿ ಪಕ್ಷದ ಸಂಘಟನೆ ಪ್ರಬಲವಾಗಿದ್ದು, ಜೊತೆಗೆ ಕೊತ್ತೂರು ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ; ಅವರು ದಲಿತ-ಅಹಿಂದ ಮತಗಳ ಮೇಲೆ ಕಣ್ಣಿಟ್ಟಿದ್ದು ಈಗಾಗಲೇ ದಲಿತ ಸಂಘಟನೆಗಳು ಬೆಂಬಲ ಸೂಚಿಸಿರುವುದರಿಂದ ಮತ್ತಷ್ಟು ಶಕ್ತಿ ತುಂಬಿದಂತಾಗಿ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ನಗರದಲ್ಲಿ ದೊಡ್ಡ ಟೊಮ್ಯಾಟೋ ಮಂಡಿ ನಡೆಸುತಿದ್ದು ಜನರ ಜೊತೆಗೆ ಸಂಪರ್ಕವಿರುವಂಥವರು. ಅವರು ಕೊರೊನಾ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡಿದ್ದಾರೆ. ಜೊತೆಗೆ ಸ್ಥಳೀಯರೂ ಆಗಿರುವುದರಿಂದ ಜನರ ಕಷ್ಟಕ್ಕೆ ಸಿಗುತ್ತೇನೆಂದು ಪ್ರಚಾರ ಮಾಡುತ್ತಿದ್ದಾರೆ. ಪಂಚರತ್ನ ಯೋಜನೆಗಳ ಮೇಲೆ ನಂಬಿಕೆಯಿಟ್ಟು ಅವರು ಮತಯಾಚನೆ ಮಾಡುತ್ತಿದ್ದಾರೆ. ಇವರು ಒಕ್ಕಲಿಗ ಮತ್ತು ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟು ಪ್ರಬಲ ಪೈಪೋಟಿಗೆ ಸಿದ್ದರಾಗಿದ್ದಾರೆ.

ಬೆಜೆಪಿ ಪಕ್ಷ ಇದುವರೆಗೂ ಕ್ಷೇತ್ರದಲ್ಲಿ ಒಂದು ಬಾರಿಯೂ ಖಾತೆ ತೆಗೆಯಲು ಸಾಧ್ಯವಾಗಿಲ್ಲ. ಈ ಬಾರಿ ಕಮಲ ಪಕ್ಷದ ಅಭ್ಯರ್ಥಿಯಾಗಿರುವವರು ಮಾಜಿ ಶಾಸಕ ವರ್ತೂರು ಪ್ರಕಾಶ್‌. 2008 ಮತ್ತು 2013- ಎರಡು ಬಾರಿ ಪಕ್ಷೇತರ ಶಾಸಕರಾಗಿ ಆಯ್ಕೆಯಾಗಿದ್ದ ಅವರು ಈಗ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸಲು, ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆಗೆಯಲು ಕಾತರರಾಗಿದ್ದಾರೆ. ಕುರುಬ ಸಮುದಾಯದ ಅವರು ದಲಿತ ಮತ್ತು ಮುಸ್ಲಿಂ ಮತಗಳನ್ನು ಸೆಳೆಯಲು ರಣತಂತ್ರ ರೂಪಿಸುತ್ತ ಪ್ರಬಲ ಪೈಪೋಟಿ ನೀಡಲು ತಯಾರಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ: ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್ ವಿರುದ್ಧ ಅರೆಸ್ಟ್‌ ವಾರಂಟ್‌

ಕೋಲಾರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಹಣಬಲ, ಜಾತಿಬಲ ಮತ್ತು ಪಕ್ಷ ಬಲಗಳೊಂದಿಗೆ ಪೈಪೋಟಿಗೆ ಇಳಿದಿದ್ದಾರೆ. ಕಾಂಗ್ರೆಸ್ ಅಥವಾ ಜೆಡಿಎಸ್‌ ಗೆಲ್ಲಬಹುದು ಎನ್ನಲಾಗುತ್ತಿದ್ದು, ಬಿಜೆಪಿ ಖಾತೆ ತೆರೆದರೂ ಅಚ್ಚರಿಯೇನಿಲ್ಲ ಎನ್ನಲಾಗುತ್ತಿದೆ.

ಕ್ಷೇತ್ರದಲ್ಲಿ ದಲಿತ ಮತಗಳು ಅಧಿಕವಾಗಿದ್ದು ಪ.ಜಾತಿ ಮತ್ತು ಪ.ಪಂಗಡ ಮತದಾರರು 70,000 ಇದ್ದರೆ, ಮುಸ್ಲಿಂ ಮತದಾರರು ಎರಡನೇ ಸ್ಥಾನದಲ್ಲಿ 60,000 ದಷ್ಟಿದ್ದಾರೆ. ಒಕ್ಕಲಿಗರು 40,000, ಕುರುಬರು 24,000, ಬಲಿಜ ಮತದಾರರು 10,000 ಇದ್ದಾರೆ. ಇನ್ನುಳಿದಂತೆ ಕ್ಷತ್ರಿಯರು, ಮರಾಠರು, ಕುಂಬಾರರು ಎಲ್ಲಾ ಮತದಾರರು ಸೇರಿ 10,000 ದಷ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಳುಬಾಗಿಲು: ಕಾಂಗ್ರೆಸ್, ಜೆಡಿಎಸ್ ಹಣಾಹಣಿ

ಮುಳುಬಾಗಿಲು ವಿಧಾನಸಭಾ ಕ್ಷೇತ್ರ ಎಸ್.ಸಿ.ಮೀಸಲು ಕ್ಷೇತ್ರ. ಕಾಂಗ್ರೆಸ್‌ನ ಭದ್ರಕೋಟೆಯಾದರೂ ಇಲ್ಲಿ ಪಕ್ಷೇತರರು ಐದು ಬಾರಿ ಶಾಸಕರಾಗಿದ್ದಾರೆ. ಇಲ್ಲಿ ಮೂರು ಮುಖ್ಯ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್‌ ವರ್ಸಸ್‌ ಜೆಡಿಎಸ್‌ ನೇರ ಪೈಪೋಟಿ ಇದೆ. ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಈ ಕ್ಷೇತ್ರದಲ್ಲಿ ದಲಿತ ಮತದಾರರು ಮೊದಲ ಸ್ಥಾನಲ್ಲಿದ್ದರೂ, ಎರಡನೆಯ ಸ್ಥಾನದಲ್ಲಿರುವ ಒಕ್ಕಲಿಗರು ಮತ್ತು ಮೂರನೆಯ ಸ್ಥಾನ ಪಡೆದ ಮುಸ್ಲಿಮರು ನಿರ್ಣಾಯಕವಾಗಿದ್ದಾರೆ.

ಜೆಡಿಎಸ್‌ ಪಕ್ಷ ಈ ಬಾರಿ ಶತಾಯಗತಾಯ ಗೆಲ್ಲಲೇಬೇಕೆಂದು ಕಳೆದ ಬಾರಿ 6,000 ಮತಗಳ ಅಂತರದಿಂದ ಸೋತಿರುವ ಸಮೃದ್ಧಿ ಮಂಜುನಾಥ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಅವರು ಅಂದಿನಿಂದ ಕ್ಷೇತ್ರದಾದ್ಯಂತ ಜನರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಈ ಬಾರಿ ಗೆದ್ದೇ ತೀರುವ ಪಣ ತೊಟ್ಟಿದ್ದಾರೆ. ಜೊತೆಗೆ ಪಕ್ಷದ ಪಂಚರತ್ನ ಯೋಜನೆಯ ಪ್ರಚಾರವನ್ನು ಇಲ್ಲಿಂದಲೇ ಪ್ರಾರಂಭಿಸಿದ್ದು ಅವರಿಗೆ ಶಕ್ತಿ ತುಂಬಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಪಕ್ಷ ಮೊದಲು ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಡಾ. ಬಿ.ಸಿ ಮುದ್ದುಗಂಗಾಧರ್ ಎಂಬುವವರ ಹೆಸರನ್ನು ಪ್ರಕಟಿಸಿತ್ತು. ಆದರೆ ಕೊತ್ತೂರು ಮಂಜುನಾಥ ಅವರ ತಮ್ಮ ಪ್ರಭಾವವನ್ನು ತೋರಿಸುವ ಮೂಲಕ 10 ಗಂಟೆಗಳಲ್ಲಿ ಅವರನ್ನು ಬದಲಿಸಿ ಆದಿನಾರಾಯಣ ಎಂಬುವವರಿಗೆ ಬಿ.ಫಾರಂ ನೀಡುವಂತೆ ಮಾಡಿದರು. ಹೊಸ ಮುಖವಾಗಿರುವ ಇವರನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನು ಕೊತ್ತೂರು ಮಂಜುನಾಥ ವಹಿಸಿಕೊಂಡಿದ್ದರೂ ಅವರು ಅಲ್ಲಿ ಇಲ್ಲದಿರುವುದರಿಂದ ಅದು ಅಷ್ಟು ಸುಲಭವಲ್ಲ ಎನ್ನಲಾಗುತ್ತಿದೆ.

ಇನ್ನು ಕ್ಷೇತ್ರದಲ್ಲಿ ಬಿಜೆಪಿಗೆ ನೆಲೆಯಿಲ್ಲದಿದ್ದರೂ ಪಕ್ಷದ ಅಭ್ಯರ್ಥಿಯನ್ನಾಗಿ ಶೀಗೆಹಳ್ಳಿ ಸುಂದರ್‌ ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಲು ಇನ್ನಿಲ್ಲದ ಕಸರತ್ತು, ತಂತ್ರಗಾರಿಕೆ ನಡೆಸುತಿದ್ದರೂ ಬಿಜೆಪಿ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಕಾಂಗ್ರೆಸ್‌ V/S ಜೆಡಿಎಸ್‌ ನಡುವಿನ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಜೆಡಿಎಸ್‌ ಗೆಲ್ಲುವ ನಿರೀಕ್ಷೆ ಇದ್ದರೂ ಮತದಾರನ ಮನಸ್ಸನ್ನು ಗೆದ್ದು ಯಾರು ಅದೃಷ್ಟದ ಬಾಗಿಲು ತಟ್ಟುತ್ತಾರೋ ಕಾದು ನೋಡಬೇಕಿದೆ.

ಕೆಜಿಎಫ್‌: ರೂಪಕಲಾಗೆ ಗೆಲುವಿನ ಸಾಧ್ಯತೆ

ಕೆಜಿಎಫ್‌ ಎಂದಾಕ್ಷಣ ಥಟ್ಟನೆ ನೆನಪಿಗೆ ಬರುವುದು ಕೋಲಾರ ಚಿನ್ನದ ಗಣಿ. ದುಡಿಯುವ ಶ್ರಮಿಕರು, ಕಾರ್ಮಿಕರು ಒಗ್ಗೂಡಿ ಹೋರಾಟಗಳನ್ನು ರೂಪಿಸಿದ ನೆಲವಿದು. ಕಾರ್ಮಿಕ ಚಳವಳಿ ಪ್ರಥಮವಾಗಿ ಹುಟ್ಟಿಕೊಂಡಿದ್ದು ಕೂಡ ಇಲ್ಲಿಯೇ. ಇಲ್ಲಿ ತಮಿಳುನಾಡಿನ ಎಐಎಡಿಎಂಕೆ ಅಸ್ತಿತ್ವ ಕಂಡುಕೊಂಡಿದ್ದಲ್ಲದೆ ಪಕ್ಷದಿಂದ ಮೂರು ಬಾರಿ ಶಾಸಕರು ಆಯ್ಕೆಯಾಗಿದ್ದರು. ಆರ್‌ಪಿಐ, ಸಿಪಿಐ, ಸಿಪಿಎಂನಂಥ ಪರ್ಯಾಯ ರಾಜಕಾರಣದ ಪಕ್ಷಗಳ ಅಭ್ಯರ್ಥಿಗಳೂ ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ಹತ್ತಿರುವುದಿದೆ.

ಈ ಸುದ್ದಿ ಓದಿದ್ದೀರಾ: ಬಾಗೇಪಲ್ಲಿ: ಸಿಪಿಎಂನ ಡಾ.ಅನಿಲ್‌ಕುಮಾರ್ ನಾಗಾಲೋಟದ ಮುಂದೆ ಬಿಜೆಪಿ ಪರದಾಟ

ಈ ಬಾರಿ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಲಿ ಶಾಸಕಿ ರೂಪಕಲಾ ಶಶಿಧರ್‌ರವರು ಐದು ವರ್ಷ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕೆಲಸಗಳು, ಸದನದಲ್ಲಿ ಕ್ಷೇತ್ರದ ಕುರಿತು ಮಾತನಾಡಿರುವುದು, ವಿರೋಧ ಪಕ್ಷದ ಸರ್ಕಾರವಿದ್ದರೂ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ತಂದಿರುವುದು, ನಿರಂತರವಾಗಿ ಜನರ ಜೊತಗಿನ ಸಂಪರ್ಕ ಹೊಂದಿರುವುದು.. ಇವುಗಳಿಂದಾಗಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ಅವರು ಹ್ಯಾಟ್ರಿಕ್‌ ಗೆಲುವು ಸಾಧಿಸಲು ಮುಂದಾಗಿದ್ದಾರೆ.

ವೈ.ಸಂಪಂಗಿಯವರ ಮೇಲೆ ಇನ್ನೂ ಲಂಚದ ಪ್ರಕರಣ ಇರುವುದರಿಂದ ಈ ಬಾರಿಯೂ ಮತ್ತೆ ಬಿಜೆಪಿ ಪಕ್ಷ ಅವರ ಮಗಳಾದ ಅಶ್ವಿನಿ ಸಂಪಗಿಯವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 40 ಸಾವಿರ ಮತಗಳ ಅಂತರದಿಂದ ಸೋಲನ್ನು ಕಂಡಿದ್ದ ಅವರು ಹೊರಗಿನವರು ಎನ್ನುವ ಕಾರಣಕ್ಕೆ ಸ್ಥಳೀಯ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗುತಿದ್ದು ಈ ಬಾರಿಯೂ ಗೆಲ್ಲುವುದಿರಲಿ ಪೈಪೋಟಿ ಕೊಡುವುದು ಕೂಡ ಅಸಾಧ್ಯವೆಂದು ಹೇಳಲಾಗುತ್ತಿದೆ.

ಮಾಜಿ ಶಾಸಕ ಎಸ್.ರಾಜೇಂದ್ರನ್‌ರವರು ಆರ್‌ಪಿಐ ಅಭ್ಯರ್ಥಿಯಾಗಿದ್ದಾರೆ. ಇವರು ಈ ಹಿಂದೆ ಎರುಡು ಬಾರಿ ಶಾಸಕರಾಗಿದ್ದು, 2004 ಮತ್ತು 2008ರ ಚುನಾವಣೆಗಳಲ್ಲಿ ತೀವ್ರ ಪೈಪೋಟಿ ನೀಡುವ ಮೂಲಕ ಗಮನ ಸೆಳೆದಿದ್ದರು. ಅ ನಂತರ ನಡೆದ ಚುನಾವಣೆಗಳಲ್ಲಿ ಗಮನ ಸೆಳೆಯುವಂಥ ಸಾಧನೆ ಮಾಡಿರಲಿಲ್ಲ. ಆದರೆ ಕ್ಷೇತ್ರದಲ್ಲಿ ನಿರಂತರವಾಗಿ ಸಂಚರಿಸುತ್ತ ಕಾಂಗ್ರೆಸ್‌ಗೆ ಪೈಪೋಟಿ ನೀಡಿ ಈ ಬಾರಿ ಗೆಲುವು ಸಾಧಿಸಿ ಮೂರನೇ ಬಾರಿಗೆ ವಿಧಾನಸಭೆ ಪ್ರವೇಶಿಸುವ ತವಕದಲ್ಲಿದ್ದಾರೆ.

ಜೆಡಿಎಸ್ ಪಕ್ಷದಿಂದ ವಿ.ಎಂ ರಮೇಶ್ ಬಾಬು ಅಭ್ಯರ್ಥಿಯಾಗಿದ್ದು, ಪಂಚರತ್ನ ಯೋಜನೆಗಳನ್ನು ಮುಂದಿಟ್ಟುಕೊಂಡು ಕ್ಷೇತ್ರದಲ್ಲಿ ಮತಯಾಚನೆ ಮಾಡುತಿದ್ದಾರೆ. ಕೆಜಿಎಫ್‌ನಲ್ಲಿ ಜೆಡಿಎಸ್‌ಗೆ ವರ್ಚಸ್ಸು ಇಲ್ಲದಿರುವುದರಿಂದ ಒಂದು ಬಾರಿಯೂ ಈ ಕ್ಷೇತ್ರದಲ್ಲಿ ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಈ ಬಾರಿಯೂ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ರೂಪಕಲಾ ಶಶಿಧರ್‌ರವರು ಗೆಲ್ಲುವ ಸಾಧ್ಯತೆ ಹೆಚ್ಚಿದೆ.

ಶ್ರೀನಿವಾಸಪುರ: ಸ್ವಾಮಿ ವರ್ಸಸ್ ರೆಡ್ಡಿ ನಡುವಿನ ಕೊನೆಯ ಕದನ!

ಶ್ರೀನಿವಾಸಪುರ ಅತಿ ಹೆಚ್ಚು ಮಾವು ಬೆಳೆಯುವ ಪ್ರದೇಶ. ಇಲ್ಲಿನ ಮಾವಿನ ಹಣ್ಣುಗಳ ಸುವಾಸನೆಯಲ್ಲಿ ರಾಜಕೀಯದ ಜಿದ್ದಾಜಿದ್ದಿ ಪೈಪೋಟಿಗಳ ರಕ್ತದ ವಾಸನೆಯೂ ಇದೆ. ಇದು ಆಂಧ್ರದ ಗಡಿಭಾಗದಲ್ಲಿರುವುದರಿಂದ ಅಲ್ಲಿನ ರಾಜಕೀಯದ ಪ್ರಭಾವ ಕ್ಷೇತ್ರದ ಮೇಲೆ ಬೀರಿರಬಹುದು. ಈ ಕ್ಷೇತ್ರದ ವಿಶೇಷವೆಂದರೆ 45 ವರ್ಷಗಳಿಂದ ಇಬ್ಬರ ಮಧ್ಯೆಯೇ ಪೈಪೋಟಿ ನಡೆಯುತ್ತಿದ್ದು, ಮೂರನೆಯವರು ಸ್ಪರ್ಧಿಸಿದರೂ ಅವರ್ಯಾರೂ 10 ಸಾವಿರ ಮತಗಳನ್ನು ದಾಟಲು ಸಾಧ್ಯವಾಗಿಲ್ಲ.

ದಲಿತ ಮತದಾರರು ಹೆಚ್ಚಾಗಿರುವ ಕ್ಷೇತ್ರದಲ್ಲಿ ಬ್ರಾಹ್ಮಣ ಸಮುದಾಯದ ರಮೇಶಕುಮಾರ್‌ ಆರು ಬಾರಿ ಶಾಸಕರಾಗಿದ್ದರೆ, ಒಕ್ಕಲಿಗ ರೆಡ್ಡಿ ಸಮುದಾಯದ ವೆಂಕಟಶಿವಾರೆಡ್ಡಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಒಮ್ಮೆ ಅವರಾದರೆ ಇನ್ನೊಮ್ಮೆ ಇವರು ಎನ್ನುವಂತೆ ಕ್ಷೇತ್ರದ ರಾಜಕೀಯ ನಡೆದುಬಂದಿದೆ. 2018ರ ಚುನಾವಣೆಯಲ್ಲಿ ರಮೇಶ ಕುಮಾರ್‌ ಅವರು ಸಂಪ್ರದಾಯವನ್ನು ಮುರಿದಿದ್ದರು. ಸ್ವಾಮಿ ವರ್ಸಸ್‌ ರೆಡ್ಡಿ ನಡುವೆ ಇದು ಕೊನೆಯ ಕದನ ಎನ್ನಲಾಗುತ್ತಿದೆ.

ಈ ಸುದ್ದಿ ಓದಿದ್ದೀರಾ: ಚಿಕ್ಕಬಳ್ಳಾಪುರ | ಕಾಂಗ್ರೆಸ್-ಜೆಡಿಎಸ್ ನಡುವೆ ಜಿದ್ದಾಜಿದ್ದಿಯ ಹೋರಾಟ; ಠೇವಣಿ ಉಳಿಸಿಕೊಳ್ಳಲೂ ಬಿಜೆಪಿ ಪರದಾಟ

ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ರಮೇಶ್‌ ಕುಮಾರ್ ಸ್ಪರ್ಧಿಸಿದ್ದು, ಇದೇ ಕೊನೆಯ ಚುನಾವಣೆಯೆಂದು ಹಲವು ರೀತಿಯ ಕಸರತ್ತು, ತಂತ್ರಗಾರಿಕೆ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಭಾವನಾತ್ಮಕ ಮಾತುಗಳ ಮೂಲಕ ಕ್ಷೇತ್ರದ ಜನರಲ್ಲಿ ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಕೇಳುತ್ತಾ ಹ್ಯಾಟ್ರಿಕ್‌ ಗೆಲುವು ಸಾಧಿಸಬೇಕೆಂಬ ತವಕದಲ್ಲಿದ್ದಾರೆ.

ಜೆಡಿಎಸ್‌ನಿಂದ ವೆಂಕಟಶಿವಾರೆಡ್ಡಿ ಅಭ್ಯರ್ಥಿಯಾಗಿದ್ದು, ಸತತ ಎರಡು ಬಾರಿ ಸೋತರೂ ಅವರ ಉತ್ಸಾಹ ಮಾತ್ರ ಕಮ್ಮಿಯಾಗಿಲ್ಲ. ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ಯಶಸ್ವಿಗೊಳಿಸಿದ ಅವರು ತನಗೆ 76 ವರ್ಷ ವಯಸ್ಸಾಗಿರುವುದರಿಂದ ಇದೇ ಕೊನೆಯ ಚುನಾವಣೆಯೆಂದು ಪ್ರಚಾರ ಮಾಡುತ್ತಿದ್ದಾರೆ. ಸತತ ಎರಡು ಬಾರಿ ಸೋತಿರುವುದರ ಅನುಕಂಪ ಗಿಟ್ಟಿಸಿಕೊಂಡು ಗೆಲ್ಲುವ ತವಕದಲ್ಲಿದ್ದಾರೆ.

ಇನ್ನು ಬಿಜೆಪಿಯಿಂದ ಗುಂಜೂರು ಶ್ರೀನಿವಾಸ ರೆಡ್ಡಿ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿಗೆ ಮತ್ತು ಅಭ್ಯರ್ಥಿಗೆ ವರ್ಚಸ್ಸು ಇಲ್ಲ. ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಐದು ಸಾವಿರ ಮತಗಳನ್ನೂ ದಾಟಿಲ್ಲ. ಕಾಂಗ್ರೆಸ್‌ v/s ಜೆಡಿಎಸ್‌ ನಡುವಿನ ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಕ್ಷೇತ್ರದ ಚುಕ್ಕಾಣಿ ಯಾರು ಹಿಡಿಯುತ್ತಾತಾರೋ ಕಾದು ನೋಡಬೇಕು.

Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚರ್ಚೆಗೆ ಸಿದ್ದ ಇದ್ದೇನೆ ಬನ್ನಿ; ಡಿಕೆ ಶಿವಕುಮಾರ್‌ಗೆ ಕುಮಾರಸ್ವಾಮಿ ಪ್ರತಿ ಸವಾಲು

"ಮಿಸ್ಟರ್​ ಕುಮಾರಸ್ವಾಮಿ, ಹೆದರಿ ಪಕ್ಕದ ಜಿಲ್ಲೆಗೆ ಹೋಗಿದ್ದೀಯ​. ಚರ್ಚೆ ಮಾಡಲು ಸದನಕ್ಕೆ...

ಯಾರಿಗೂ ಮುಖ ತೋರಿಸದ ಸನ್ನಿವೇಶ ಕುಮಾರಸ್ವಾಮಿಗೆ ನಿರ್ಮಾಣವಾಗಲಿದೆ: ಡಿಕೆ ಶಿವಕುಮಾರ್‌

ಕುಮಾರಸ್ವಾಮಿ ಅವರು ನನ್ನ ಮೇಲೆ ಮನಬಂದಂತೆ ಆರೋಪಿಸುವುದನ್ನು ನೋಡಿಯೂ ನಮ್ಮ ಸಮುದಾಯಕ್ಕಾಗಿ...

ಇಂಫಾಲ| ಮಣಿಪುರವನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ ಎಂದ ಅಮಿತ್ ಶಾ!

ಮಣಿಪುರದ ಜನರನ್ನು ವಿಭಜಿಸಲು ಪಿತೂರಿ ಮಾಡಲಾಗುತ್ತಿದೆ, ಆದರೆ ಬಿಜೆಪಿ ರಾಜ್ಯದ ವಿಭಜನೆಗೆ...

ರೇಟ್ ಫಿಕ್ಸ್, ಬ್ಲ್ಯಾಕ್‌ಮೇಲ್ ಮಾಡುವುದು ಕುಮಾರಸ್ವಾಮಿ ಗುಣ: ಡಿಸಿಎಂ ಡಿ.ಕೆ.ಶಿವಕುಮಾರ್

"ಕುಮಾರಸ್ವಾಮಿ ಅವರು ಯಾವ ರೇಟು, ಎಂತಹ ರೇಟು ಎಂದು ಹೇಳಬೇಕು. ಕುಮಾರಣ್ಣ,...