ಬಿಜೆಪಿ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಅಥವಾ ತಿದ್ದುಪಡಿ ತರುವ ಬಗ್ಗೆ ಚರ್ಚೆ ಮಾಡಿ, ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್ ಹೇಳಿದರು.
ಮೈಸೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕೋಣ ಮತ್ತು ಎಮ್ಮೆಗಳ ವಧೆಗೆ ಅವಕಾಶವಿದೆ. ಆದರೆ ಹಸುವನ್ನು ಕಡಿಯಲು ಅವಕಾಶ ಇಲ್ಲ, ಹಸುವನ್ನು ಯಾಕೆ ಕಡಿಯಬಾರದು? ಈ ಕಾಯ್ದೆಯಿಂದಾಗಿ ರೈತರಿಗೆ ಬಹಳ ತೊಂದರೆ ಆಗುತ್ತಿದೆ” ಎಂದು ಪ್ರತಿಪಾದಿಸಿದರು.
“ನನ್ನ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ. ಈ ಪೈಕಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ತುಂಬಾ ಕಷ್ಟ ಪಡಬೇಕಾಯಿತು. 25 ಮಂದಿ ಬಂದರೂ ಸತ್ತ ಹಸುವಿನ ಮೃತದೇಹ ಎತ್ತಲು ಸಾಧ್ಯವಾಗಲಿಲ್ಲ. ಕೊನೆಗೆ ಜೆಸಿಬಿ ತರಿಸಿ ಮೃತ ಹಸುವನ್ನು ಎತ್ತಿಸಿ ಗುಂಡಿ ತೋಡಿ ಹೂಳಬೇಕಾಯಿತು” ಎಂದರು.
“ರೇಷ್ಮೆ ಬೆಲೆ ಭಾರಿ ಕುಸಿತವಾಗಿರುವ ವಿಷಯವನ್ನು ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಆದ್ದರಿಂದ ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ವಿಭಾಗದ ಮೂಲಕ ರೇಷ್ಮೆ ಖರೀದಿಗೆ ಆದೇಶ ನೀಡಲಾಗಿದ್ದು, ಈಗಾಗಲೇ ಖರೀದಿ ಆರಂಭವಾಗಿದೆ. ಸರ್ಕಾರ ಖರೀದಿ ಆರಂಭಿಸಿದ ನಂತರ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗುವ ನಿರೀಕ್ಷೆ ಇದೆ” ಎಂದು ಹೇಳಿದರು.
ಇಲಾಖೆಯಲ್ಲಿ ಸಿಬ್ಬಂದಿ ಕೊರತೆ
“ಪಶುಸಂಗೋಪನೆ ಬಹಳ ದೊಡ್ಡ ಇಲಾಖೆ. ಆದರೆ, ಕೆಲಸ ಮಾಡಲು ಸಿಬ್ಬಂದಿಯ ಕೊರತೆ ಇದೆ. ಇಲಾಖೆಗೆ ಮಂಜೂರಾಗಿರುವ ಸಿಬ್ಬಂದಿ ಸಂಖ್ಯೆ 18,000, ಆದರೆ ಹಾಲಿ ಇರುವ ಸಿಬ್ಬಂದಿ ಸಂಖ್ಯೆ 9 ಸಾವಿರ ಮಾತ್ರ. ರಾಜ್ಯದಲ್ಲಿ 4,234 ಪಶು ಆಸ್ಪತ್ರೆಗಳಿದ್ದು, 1600 ವೈದ್ಯರ ಕೊರತೆ ಇದೆ. 400 ವೈದ್ಯರ ನೇಮಕಾತಿಗೆ ಪರೀಕ್ಷೆ ನಡೆಸುವಂತೆ ರಾಜ್ಯ ಲೋಕಸೇವಾ ಆಯೋಗಕ್ಕೆ ಸರ್ಕಾರ ಆದೇಶಿಸಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಗ್ಯಾರಂಟಿಗಳ ಟೀಕಿಸುವ ಮುನ್ನ ಬಿಜೆಪಿ ಕೊಟ್ಟ ಮಾತು ಉಳಿಸಿಕೊಳ್ಳಲಿ: ಡಿಕೆಶಿ ತಿರುಗೇಟು
ಅಮುಲ್ ಬಂದಾಗ ನೋಡಿಕೊಳ್ಳೋಣ
“ರಾಜ್ಯಕ್ಕೆ ಅಮುಲ್ ಬಂದಿಲ್ಲ. ಸದ್ಯಕ್ಕೆ ಅಮುಲ್ ನಿಂದ ನಂದಿನಿಗೆ ಯಾವುದೇ ತೊಂದರೆ ಆಗಿಲ್ಲ. ಮುಂದಿನ ದಿನಗಳಲ್ಲಿ ಅಮುಲ್ ಬಂದಾಗ ನೋಡೋಣ. ನಂದಿನಿ ಉತ್ಪನ್ನಗಳ ಉತ್ತೇಜನಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹಸು ದತ್ತು ಯೋಜನೆ ಏನಾಗಿದೆ ಎಂದು ಪರಿಶೀಲಿಸುತ್ತೇವೆ. ಗೋ ಶಾಲೆಗಳ ನಿರ್ವಹಣೆ ಮಾಡಲು ಹಣದ ಕೊರತೆಯಿಲ್ಲ. ಆದರೆ ನಿರ್ವಹಣೆ ಸರಿಯಾಗಿ ಆಗಿಲ್ಲ. ಮುಂದೆ ಎಲ್ಲವನ್ನೂ ಸರಿಪಡಿಸಲಾಗುವುದು” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.