ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ವಿ ಸೋಮಣ್ಣ ಅವರು ಇದೀಗ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಶನಿವಾರ ದೆಹಲಿಗೆ ತೆರಳಿದ್ದ ಸೋಮಣ್ಣ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸುವ ನಿಲುವನ್ನು ಬದಲಿಸಿಕೊಂಡಿದ್ದಾರೆ. “ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವ ರಿಸ್ಕ್ ತೆಗೆದುಕೊಳ್ಳಬೇಡಿ” ಎಂದು ಬಿಜೆಪಿ ವರಿಷ್ಠರು ಅವರಿಗೆ ಮನವರಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋಮಣ್ಣ ಸ್ಪರ್ಧಿಸಲು ಇಚ್ಛಿಸಿದ್ದರು. ಆದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಅವರಿಗೆ ತುಮಕೂರಿನಲ್ಲಿ ಸ್ಪರ್ಧಿಸಲು ಬೆಂಬಲ ನೀಡುತ್ತಿದ್ದಾರೆ. ರಾಜ್ಯ ನಾಯಕರ ಬೆಂಬಲವಿಲ್ಲದಿದ್ದರೂ ಸೋಮಣ್ಣ ಮತ್ತು ತುಮಕೂರಿನ ಹಾಲಿ ಸಂಸದ ಜಿ.ಎಸ್ ಬಸವರಾಜು ತುಮಕೂರು ಕ್ಷೇತ್ರಕ್ಕಾಗಿ ಲಾಬಿ ನಡೆಸಿದ್ದರು. ಆದರೆ, ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರ, ಸೋಮಣ್ಣಗೆ ಕ್ಷೇತ್ರದಲ್ಲಿ ಮನ್ನಣೆ ಸಿಗುವುದಿಲ್ಲ ಎಂಬುದನ್ನು ಉಲ್ಲೇಖಿಸಿ, ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅಮಿತ್ ಶಾ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
“ಸೋಮಣ್ಣ ಹಾಗೂ ಯಡಿಯೂರಪ್ಪ ಮತ್ತು ವಿಜಯೇಂದ್ರ ನಡುವಿನ ವೈಮನಸ್ಯ ಹಿನ್ನೆಲೆಯಲ್ಲಿ ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ” ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ.
“ಹೈಕಮಾಂಡ್ ನಾಯಕರ ಸಲಹೆಯಿಂದ ನಾನು ತೃಪ್ತನಾಗಿದ್ದೇನೆ. ಅವರು ನಾನಾ ವಿಚಾರಗಳನ್ನು ಸರಿಯಾಗಿ ಹೊಂದಿಸಿಕೊಂಡು ಹೋಗಲು ಸೂಚಿಸಿದ್ದಾರೆ. ಕಾದು ನೋಡುತ್ತೇನೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ನಾನು ಹೇಳಿಲ್ಲ. ಆದರೆ, ರಾಜ್ಯಸಭಾ ಸದಸ್ಯತ್ವಕ್ಕೆ ಮನವಿ ಮಾಡಿದ್ದೇನೆ. ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು” ಎಂದು ಸೋಮಣ್ಣ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಅಯೋಗ್ಯ ರಾಜಕಾರಣಿಗಳಿಗೆ ರಾಮ ಬರೀ ರಾಜಕೀಯ ಲಾಭದ ಸರಕು ಅಷ್ಟೇ: ನಟ ಕಿಶೋರ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ವೀರಶೈವ-ಲಿಂಗಾಯತ ನಾಯಕ ಸೋಮಣ್ಣ ಅವರಿಂದ ಬೆಂಗಳೂರಿನ ಗೋವಿಂದರಾಜ ನಗರವನ್ನು ಕಿತ್ತುಕೊಂಡ ಬಿಜೆಪಿ ಹೈಕಮಾಂಡ್, ಸೋಮಣ್ಣಾ ಅವರನ್ನು ವರುಣಾ ಮತ್ತು ಚಾಮರಾಜನಗರ ಕ್ಷೇತ್ರಗಳಿಗೆ ಕಳಿಸಿತ್ತು. ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಸೋಮಣ್ಣ, ಎರಡರಲ್ಲೂ ಸೋಲುಂಡರು. ಆ ಚುನಾವಣೆಯಲ್ಲಿ ತಮ್ಮ ಪರವಾಗಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಕೆಲಸ ಮಾಡಿಲ್ಲ ಎಂದು ಸೋಮಣ್ಣ ಆರೋಪಿಸಿದ್ದರು.
ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ವಿಜಯೇಂದ್ರ ಆಯ್ಕೆಯಾದ ಬಳಿಕ ಪಕ್ಷದ ಚಟುವಟಿಕೆಗಳಿಂದ ತಮ್ಮನ್ನು ದೂರವಿಟ್ಟಿದ್ದಾರೆ ಎಂದೂ ಸೋಮಣ್ಣ ಬೇಸರಗೊಂಡಿದ್ದರು. ಅವರು ಹೈಕಮಾಂಡ್ ನಾಯಕರು ಮಧ್ಯಪ್ರವೇಶಿಸಬೇಕೆಂದೂ ಹೇಳಿದ್ದರು.
ಕಳೆದ ಚುನಾವಣೆಯಲ್ಲಿ ಒಲ್ಲದ ಮನಸ್ಸಿನಲ್ಲಿ ಎರಡು ದೋಣಿಗಳ ಮೇಲೆ ಕಾಲಿಟ್ಟು ಮುಳುಗಿದ್ದ ಸೋಮಣ್ಣ, ಈಗ ಲೋಕಸಭೆಯಿಂದಲೂ ದೂರ ಉಳಿದ್ದಿದ್ದಾರೆ. ಇನ್ನು, ರಾಜ್ಯಸಭೆಯಲ್ಲಿ ಅವರಿಗೆ ಸ್ಥಾನ ದೊರೆಯುವುದೇ ಪ್ರಶ್ನೆ ಈಗ ಮುನ್ನೆಲೆಯಲ್ಲಿದೆ.