ಮೊದಲ ಬಾರಿಗೆ ಸಚಿವ ಸ್ಥಾನ ಗಿಟ್ಟಿಸಿಕೊಂಡ ಎಂಟು ಮಂದಿ

Date:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, 24 ಮಂದಿ ನೂತನ ಸಚಿವರು ರಾಜ್ಯಪಾಲರ ಸಮ್ಮುಖದಲ್ಲಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು.

24 ಮಂದಿ ನೂತನ ಸಚಿವರಲ್ಲಿ ಎಂಟು ಮಂದಿ ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮಧು ಬಂಗಾರಪ್ಪ, ಬಿ ನಾಗೇಂದ್ರ, ಬೈರತಿ ಸುರೇಶ್, ಮಂಕಾಳು ವೈದ್ಯ, ಬೋಸರಾಜ್, ಕೆ ಎನ್‌ ರಾಜಣ್ಣ, ಡಾ. ಎಂ ಸಿ ಸುಧಾಕರ್‌ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್‌ ಮೊದಲ ಬಾರಿಗೆ ಸಚಿವರಾದವರು. ಈ ನೂತನ ಸಚಿವರ ಸಂಕ್ಷಿಪ್ತ ಪರಿಚಯ ಕೆಳಗಿನಂತಿದೆ.

ಮಧು ಬಂಗಾರಪ್ಪ

ಮಧು ಬಂಗಾರಪ್ಪ ಅವರು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ (ಒಬಿಸಿ) ಕಾರ್ಯಾಧ್ಯಕ್ಷ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಪುತ್ರ. ಚಲನಚಿತ್ರ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹೋದರ. ರಾಜಕೀಯ ಹೊರತುಪಡಿಸಿ ‘ಕಲ್ಲರಳಿ ಹೂವಾಗಿ’ ಕನ್ನಡ ಚಿತ್ರ ನಿರ್ಮಾಣಕ್ಕಾಗಿ ರಾಷ್ಟ್ರಪತಿಗಳಿಂದ ಪದಕ ಪಡೆದಿದ್ದಾರೆ. ಚಲನಚಿತ್ರ ನಟರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.

1966ರ ಸೆಪ್ಟೆಂಬರ್‌ 4 ರಂದು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಬಟೂರು ಎಂಬಲ್ಲಿ ಜನಿಸಿದರು. ಮಧು ಬಂಗಾರಪ್ಪ ಪದವೀಧರರು. ತಂದೆ ಎಸ್ ಬಂಗಾರಪ್ಪ, ತಾಯಿ ಶಕುಂತಲಾ ಬಂಗಾರಪ್ಪ. ವ್ಯಾಪಾರೋದ್ಯಮಿಯಾದ ಮಧು ಬಂಗಾರಪ್ಪ ರಾಜಕೀಯಕ್ಕೆ ಬರುವ ಮೊದಲು ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಆಕಾಶ್ ಆಡಿಯೋ ಸಂಸ್ಥೆ ಸ್ಥಾಪಿಸಿ, ಅದರ ಕಾರ್ಯ ನಿರ್ವಹಣೆಯಲ್ಲಿ ತೊಡಗಿಕೊಂಡಿದ್ದರು.

2013ರಲ್ಲಿ ಸೊರಬ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರು. 2018ರಲ್ಲಿ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ವಿರುದ್ಧ ಸೋಲು ಅನುಭವಿಸಿದರು. 2014ರಲ್ಲಿ ಮಧು ಬಂಗಾರಪ್ಪ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತರಕಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. 2018ರ ಚುನಾವಣೆ ಬಳಿಕ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ನೇಮಕಗೊಂಡರು. 2019ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿಯ ಬಿ ವೈ ರಾಘವೇಂದ್ರ ಎದುರು ಸೋಲು ಕಂಡರು.

2021ರ ಜುಲೈ 30ರಂದು ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡರು. 2023ರ ವಿಧಾಸಭಾ ಚುನಾವಣೆಯಲ್ಲಿ 44,262 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಹಾಗೂ ತಮ್ಮ ಸಹೋದರ ಕುಮಾರ್ ಬಂಗಾರಪ್ಪ ಅವರನ್ನು ಸೋಲಿಸಿದರು.

ಬಿ ನಾಗೇಂದ್ರ

2023ರ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾದ ಬಳ್ಳಾರಿ ಗ್ರಾಮಾಂತರದಲ್ಲಿ ಬಿಜೆಪಿ ಪ್ರಭಾವಿ ನಾಯಕ ಶ್ರೀರಾಮುಲು ಅವರನ್ನು ಸೋಲಿಸಿ ಬಿ ನಾಗೇಂದ್ರ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.

ನಾಗೇಂದ್ರ ಬಳ್ಳಾರಿಯವರೇ ಆದರೂ 2008ರಲ್ಲಿ ಮೊದಲ ಸಲ ಕೂಡ್ಲಿಗಿ ಕ್ಷೇತ್ರದಿಂದ ಬಿಜೆಪಿ ಮತ್ತು 2013ರಲ್ಲಿ ಪಕ್ಷೇತರರಾಗಿ ಗೆದ್ದಿದ್ದರು. 2018ರಲ್ಲಿ ಬಳ್ಳಾರಿ ಗ್ರಾಮೀಣಕ್ಕೆ ಬಂದು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಹಲವಾರು ವರ್ಷ ಬಳ್ಳಾರಿ ಗ್ರಾಮಾಂತರ ಬಿಜೆಪಿಯ ಭದ್ರಕೋಟೆಯಾಗಿದ್ದರೂ, 2018 ರಲ್ಲಿ ಕಾಂಗ್ರೆಸ್ ಪಕ್ಷದ ನಾಗೇಂದ್ರ ಅವರು ಈ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದರು.

ಬೈರತಿ ಸುರೇಶ್

ಬೈರತಿ ಸುರೇಶ್ ಪ್ರಸ್ತುತ ಕೆಪಿಸಿಸಿ ಸದಸ್ಯ ಮತ್ತು ಕುರುಬ ಸಮುದಾಯದ ಪ್ರಭಾವಿ ನಾಯಕ. ಸಿಎಂ ಸಿದ್ದರಾಮಯ್ಯ ಅವರ ಅತ್ಯಾಪ್ತ ಶಾಸಕರಲ್ಲಿ ಒಬ್ಬರು.

2012ರಲ್ಲಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಬೈರತಿ ಸುರೇಶ್‌ ತಮ್ಮ ಎಂಎಲ್‌ಸಿ ಸ್ಥಾನ ತ್ಯಜಿಸಿ, 2018ರ ವಿಧಾನಸಭಾ ಚುನಾವಣೆಗೆ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಿ ವಿಧಾನಸಭೆಗೆ ಪ್ರವೇಶಿಸಿದ್ದರು. ಈಗ 2023ರಲ್ಲಿ ಮತ್ತೆ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿ ಕಟ್ಟಾ ಜಗದೀಶ್ ಕುಮಾರ್ ವಿರುದ್ಧ 30,754 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದರು. ಇದೀಗ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ.

ಬೈರತಿ ಸುರೇಶ್ ಅವರು 1972 ಜುಲೈ 19ರಂದು ಬೆಂಗಳೂರಿನ ಬೈರತಿಯಲ್ಲಿ ಜನಿಸಿದರು. ಪಿಯುಸಿ ವಿದ್ಯಾಭ್ಯಾಸ ಮುಗಿಸಿರುವ ಬೈರತಿ ಸುರೇಶ್ ಭೂಮಿ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ. 1991ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದ ಬೈರತಿ ಸುರೇಶ್, ನಂತರ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡಿದ್ದರು. ಬೈರತಿ ಸುರೇಶ್ ಅವರ ಸಹೋದರ ಬೈರತಿ ಬಸವರಾಜು ಕೂಡ ರಾಜಕೀಯದಲ್ಲಿದ್ದಾರೆ. ಹೆಬ್ಬಾಳ ಪಕ್ಕದ ಕೆ ಆರ್ ಪುರದಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದರು.

ಬೋಸರಾಜ್

ರಾಯಚೂರು ಜಿಲ್ಲೆಯ ಮಾನ್ವಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಕ್ಷತ್ರಿಯ ಸಮುದಾಯದ ನಾಯಕ ಎನ್‌ ಎಸ್ ಬೋಸರಾಜು ಈ ಬಾರಿಯ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಇವರು ಶಾಸಕರು ಅಲ್ಲ, ಎಂಎಲ್‌ಸಿ ಕೂಡ ಅಲ್ಲ ಆದರೂ ಸಚಿವ ಸ್ಥಾನ ಪಡೆದಿರುವುದು ಆಶ್ಚರ್ಯದ ಸಂಗತಿ. ಚುನಾವಣೆಯಲ್ಲಿ ಗೆದ್ದು ಸಚಿವ ಸ್ಥಾನಕ್ಕಾಗಿ ಪೈಪೋಟಿ ನೀಡುತ್ತಿದ್ದವರ ನಡುವೆ ಅದೃಷ್ಟ ಇವರನ್ನು ಹುಡುಕಿ ಬಂದಿದೆ.

ವಿಧಾನಸಭಾ ಚುನಾವಣೆ ವೇಳೆ ರಾಯಚೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿ ಆಗಿದ್ದ ಬೋಸರಾಜು ಅವರು ಟಿಕೆಟ್ ಸಿಗದ ಬಗ್ಗೆ ತಿಳಿದು ತಮ್ಮ ಮಗ ರವಿ ಬೋಸರಾಜು ಟಿಕೆಟ್ ನೀಡಬೇಕು ಎಂಬ ಬೇಡಿಕೆಯಿಟ್ಟಿದ್ದರು. ಆದರೆ, ಹೈಕಮಾಂಡ್ ಆದೇಶದ ಮೇಲೆ ಸುಮ್ಮನಾಗಿದ್ದರು. ಇವರ ಮೇಲೆ ಹೈಕಮಾಂಡ್‌ಗೆ ಅನುಕಂಪವಿದ್ದು, ಸಚಿವ ಸ್ಥಾನ ನೀಡಿದ ಎಂಬ ಮಾತು ಕೇಳಿ ಬಂದಿದೆ.

ಬೋಸರಾಜು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ ಆರು ತಿಂಗಳವರೆಗೆ ಅವರು ವಿಧಾನಸಭೆ ಅಥವಾ ವಿಧಾನ ಪರಿಷತ್‌ಗೆ ಸದಸ್ಯರಾಗುವ ಅವಕಾಶವಿರುತ್ತದೆ. ಹಾಗಾಗಿ ವಿಧಾನ ಪರಿಷತ್ ಚುನಾವಣೆಗೆ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ನಿಲ್ಲಿಸಿ ಗೆಲ್ಲಿಸಿ ಸಚಿವ ಸ್ಥಾನ ಗಟ್ಟಿ ಮಾಡಲು ಕಾಂಗ್ರೆಸ್ ನಿರ್ಧರಿಸಿದೆ. ತೆಲಂಗಾಣದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಇವರ ಸಚಿವ ಸ್ಥಾನ ಚುನಾವಣೆ ಮೇಲೆ ಪ್ರಭಾವ ಬೀರಲಿದೆ ಎಂಬುದು ಹೈಕಮಾಂಡ್ ತಂತ್ರವಾಗಿದೆ.

ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ. ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದ ಅವರು ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಏರಿದರು.

1975ರಲ್ಲಿ ಬೆಳಗಾವಿಯಲ್ಲಿ ಜನಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಮೈಸೂರು ವಿಶ್ವವಿದ್ಯಾಲಯದಿಂದ ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ರವೀಂದ್ರ ಹೆಬ್ಬಾಳ್ಕರ್‌ರನ್ನು ವಿವಾಹವಾಗಿದ್ದಾರೆ. ಬೆಳಗಾವಿಯಲ್ಲಿ ಹೆಬ್ಬಾಳ್ಕರ್ ಕುಟುಂಬ ಹೆಚ್ಚು ಪ್ರಭಾವ ಹೊಂದಿದ್ದು, ಇದು ಲಕ್ಷ್ಮೀ ಹೆಬ್ಬಾಳ್ಕರ್ ರಾಜಕೀಯ ಬೆಳವಣಿಗೆಗೂ ಸಹಾಯಕವಾಗಿದೆ.

2013ರ ವಿಧಾನಸಭೆ ಚುನಾವಣೆಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸೋಲು ಅನುಭವಿಸಿದ್ದರು. 2014 ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. 2015ರಲ್ಲಿ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕ ಆದರು. 2018 ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದು ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದರು.

2023ರ ವಿಧಾನಸಭಾ ಚುನಾವಣೆಯಲ್ಲಿ 1.8 ಲಕ್ಷ ಮತ ಪಡೆದು, ಬಿಜೆಪಿ ಅಭ್ಯರ್ಥಿಯನ್ನು 56 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸುವ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? 24 ನೂತನ ಸಚಿವರ ಸೇರ್ಪಡೆಯೊಂದಿಗೆ ಪೂರ್ಣ ಪ್ರಮಾಣದಲ್ಲಿ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ರಚನೆ

ಮಂಕಾಳು ವೈದ್ಯ

ಉತ್ತರ ಕನ್ನಡ ಜಿಲ್ಲೆ ಭಟ್ಕಳ ಕ್ಷೇತ್ರಕ್ಕೆ ಎರಡನೆ ಬಾರಿಗೆ ಶಾಸಕರಾಗಿ ಆಯ್ಕೆ ಆಗಿರುವ ಮಂಕಾಳು ವೈದ್ಯ ಅವರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಸಿಕ್ಕಿದೆ.

ಮಂಕಾಳು ವೈದ್ಯ ಅವರು ಮೀನುಗಾರ (ಮೊಗೇರ) ಸಮುದಾಯಕ್ಕೆ ಸೇರಿದವರಾಗಿದ್ದು, 8ನೇ ತರಗತಿ ಓದಿದ್ದಾರೆ. 2005, 2010ರಲ್ಲಿ ಎರಡು ಅವಧಿಗೆ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿ ಕೆಲಸ ಮಾಡಿದ್ದು ಅವರಿಗೆ ರಾಜಕೀಯ ಅನುಭವ ನೀಡಿದೆ.

2013ರಲ್ಲಿ ಮೊದಲ ಬಾರಿಗೆ ಮಂಕಾಳು ಅವರು ಭಟ್ಕಳ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಅಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತರೂ ಪಕ್ಷ ಸಂಘಟನೆ ಮಾಡಿ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು 32 ಸಾವಿರ ಮತಗಳ ಅಂತರದಲ್ಲಿ ಸೋಲಿಸಿದ್ದರು.

ಕೆ ಎನ್‌ ರಾಜಣ್ಣ

ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಕೆ ಎನ್‌ ರಾಜಣ್ಣ ಅವರಿಗೆ ಈಬಾರಿಯ ಸಚಿವ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ತುಮಕೂರು ಜಿಲ್ಲೆ ಮಧುಗಿರಿ ಕ್ಷೇತ್ರದ ಕೆ ಎನ್‌ ರಾಜಣ್ಣ ಅವರಿಗೆ 62 ವರ್ಷ ವಯಸ್ಸು, ತಂದೆ ದಿ. ನಂಜಪ್ಪ. ಇವರು ವಕೀಲ ಮತ್ತು ಕೃಷಿಕರಾಗಿದ್ದಾರೆ. 1973ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿಎಸ್ಸಿ ಮತ್ತು 1984 ರಲ್ಲಿ ತುಮಕೂರಿನ ವಿದ್ಯಾದಯ ಕಾನೂನು ಕಾಲೇಜಿನಲ್ಲಿ ಎಲ್ಎಲ್‌ಬಿ ಮುಗಿಸಿದ್ದಾರೆ.

ಕೆ ಎನ್‌ ರಾಜಣ್ಣ ಅವರು 2008ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್‌ನ ಡಿ ಸಿ ಗೌರಿಶಂಕರ್‌ ವಿರುದ್ಧ ಕೇವಲ 563 ಮತಗಳಿಂದ ಸೋಲು ಅನುಭವಿಸಿದ್ದರು. 2013ರಲ್ಲಿ ಜೆಡಿಎಸ್‌ನ ಎಂ ವಿ ವೀರಭದ್ರಯ್ಯ ವಿರುದ್ಧ 15 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. 2018ರಲ್ಲಿ ಜೆಡಿಎಸ್‌ನ ಎಂ ವಿ ವೀರಭದ್ರಯ್ಯ ವಿರುದ್ಧ 18,574 ಮತಗಳಿಂದ ಸೋತರು. 2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಜೆಡಿಎಸ್‌ನ ಎಂ ವಿ ವೀರಭದ್ರಯ್ಯ ವಿರುದ್ಧ 35,523 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿ ಸಿ ಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಡಾ. ಎಂ ಸಿ ಸುಧಾಕರ್‌

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಕ್ಷೇತ್ರದ ಶಾಸಕ ಡಾ. ಎಂ ಸಿ ಸುಧಾಕರ್‌ ಅವರಿಗೆ ಸಚಿವ ಸ್ಥಾನ ದೊರಕಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಸುಧಾಕರ್ ಪ್ರವೃತ್ತಿಯಲ್ಲಿ ರಾಜಕಾರಣಿ, ಚಿಂತಾಮಣಿ ಕ್ಷೇತ್ರದ ಶಾಸಕ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಭಾವಿ ನಾಯಕ. ಮೂರು ಬಾರಿ ಶಾಸಕ, ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರಾಗಿದ್ದ ಎಂ ಸಿ ಆಂಜನೇಯ ರೆಡ್ಡಿ ಅವರ ಮೊಮ್ಮಗನಾಗಿರುವ ಇವರು, ಐದು ಬಾರಿ ಶಾಸಕರಾಗಿದ್ದ ಎಂ ಸಿ ಚೌಡರೆಡ್ಡಿ ಅವರ ಪುತ್ರನಾಗಿದ್ದು, ತಮ್ಮ ಕುಟುಂಬದ ರಾಜಕಾರಣದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಡಾ. ಎಂ ಸಿ ಸುಧಾಕರ್ 1994ರಲ್ಲಿ ಮೈಸೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಎಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯಲ್ಲಿ ದಂತ ವಿಜ್ಞಾನದಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದು, ಎಂಡಿಎಸ್‌ ಕೂಡ ಮಾಡಿದ್ದಾರೆ. ರಾಜಕೀಯಕ್ಕೆ ಬರುವ ಮುನ್ನ ದಂತ ವೈದ್ಯರಾಗಿ ಸೇವೆ ಸಲ್ಲಿಸಿದ್ದು, ಅಂಬೇಡ್ಕರ್‌ ದಂತ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಮಾರುತಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಪೆಸರ್‌ ಆಗಿ ಸೇವೆ ಸಲ್ಲಿಸಿದ್ದರು. ಸುಧಾಕರ್‌ ಅವರು ಕರ್ನಾಟಕ ಚಾಪ್ಟರ್‌ ಆಫ್‌ ಭಾರತೀಯ ದಂತ ವೈದ್ಯಕೀಯ ಅಸೋಸಿಯೇಷನ್‌ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

1999ರಲ್ಲಿ ತಂದೆ ಚೌಡರೆಡ್ಡಿ ಅವರು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಸೋತ ಬಳಿಕ ಡಾ. ಎಂ ಸಿ ಸುಧಾಕರ್‌ ಅವರು ರಾಜಕೀಯದಲ್ಲಿ ಸಕ್ರಿಯರಾಗುತ್ತಾರೆ. 2004ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿ, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2008ರ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆಲುವು. ಆದರೆ, 2013ರಲ್ಲಿ ಕಾಂಗ್ರೆಸ್‌ ಟಿಕೆಟ್‌ ನಿರಾಕರಿಸಿದ ಹಿನ್ನೆಲೆ ಕಾಂಗ್ರೆಸ್‌ ತೊರೆದು, 2013ರಲ್ಲಿ ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿ ಕೇವಲ ಒಂದುವರೆ ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.

2016ರ ಫೆಬ್ರವರಿಯಲ್ಲಿ ವಾಪಸ್‌ ಕಾಂಗ್ರೆಸ್‌ಗೆ ಸೇರಿದರು. ಆದರೆ, 2018ರಲ್ಲಿ ಮತ್ತೆ ಟಿಕೆಟ್‌ ಸಿಗದ ಕಾರಣ ಪಕ್ಷ ತೊರೆದು, ಭಾರತೀಯ ಪ್ರಜಾ ಪಕ್ಷದಿಂದ ಪಕ್ಷೇತರರಾಗಿ ಸ್ಪರ್ಧಿಸಿ ಮತ್ತೆ ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದರು. 2023ರ ಚುನಾವಣೆಯಲ್ಲಿ ಚಿಂತಾಮಣಿ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್‌ ಅಭ್ಯರ್ಥಿ ಜೆ ಕೆ ಕೃಷ್ಣಾರೆಡ್ಡಿ ವಿರುದ್ಧ ಗೆಲುವು ಸಾಧಿಸಿದ್ದರು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಸಚಿವರು | ಮಾಸ್ ಲೀಡರ್ ಆಗುವ ಲಕ್ಷಣವುಳ್ಳ ಪ್ರಿಯಾಂಕ್ ಖರ್ಗೆ; ಕ್ಷೇತ್ರದ ಅಭಿವೃದ್ಧಿಗೆ ನೀಡಬೇಕಿದೆ ಆದ್ಯತೆ

ಪ್ರಿಯಾಂಕ್ ಖರ್ಗೆ ಅವರು  ಕಾಂಗ್ರೆಸ್‌ನಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ತಂದೆಯ ಹಾದಿಯಲ್ಲಿಯೇ...

ಮೈಸೂರಿನಲ್ಲಿ ಅನ್ನಭಾಗ್ಯ ಯೋಜನೆಗೆ ಚಾಲನೆ: ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳ ಉದ್ಘಾಟನೆಗೆ ಸ್ಥಳ ನಿಗದಿ ನಾಳೆ ಬೆಂಗಳೂರಿನಲ್ಲಿ ಮೊದಲ ಯೋಜನೆಗೆ ಚಾಲನೆ ಕಾಂಗ್ರೆಸ್...

ಕಾಂಗ್ರೆಸ್ ಸರಕಾರದ ದ್ವೇಷದ ರಾಜಕಾರಣ: ಕಾರ್ಯಕರ್ತರ ನೆರವಿಗಾಗಿ ಸಹಾಯವಾಣಿ ಆರಂಭಿಸಿದ ಬಿಜೆಪಿ

24 ಗಂಟೆ ಕಾರ್ಯಾಚರಣೆ ನಡೆಸಲಿರುವ ಬಿಜೆಪಿ ಸಹಾಯವಾಣಿ ಸಹಾಯವಾಣಿ ಕಾರ್ಯಾಚರಣೆಗೆ 100 ಜನ...

ಧಾರವಾಡ | ವಿದ್ಯುತ್ ದರ ಹೆಚ್ಚಳ; ಕೈಗಾರಿಕಾ ಉದ್ಯಮಿಗಳ ಸಂಘ ಖಂಡನೆ

ವಿದ್ಯುತ್ ಶುಲ್ಕ ಗಣನೀಯ ಹೆಚ್ಚಳವನ್ನು ವಿರೋಧಿಸಿ ಧಾರವಾಡ ಬೆಳವಣಿಗೆ ಕೇಂದ್ರ ಮತ್ತು...