- ದೇಶದ ಹಲವು ಕಡೆ ನಡೆದ ಘರ್ಷಣೆಯಲ್ಲಿ 6 ಮಂದಿ ಮೃತ
- ಪಾಕ್‌ನ ವಿವಿಧಡೆ ನಿಷೇಧಾಜ್ಞೆ, ಇಂಟರ್‌ನೆಟ್ ಸ್ಥಗಿತ
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನದಿಂದಾಗಿ ದೇಶದಾದ್ಯಂತ ಆಕ್ರೋಶ ಭುಗಿಲೆದ್ದಿದ್ದು, ಪಂಜಾಬ್‍ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಒಂದು ಸಾವಿರಕ್ಕೂ ಹೆಚ್ಚು ಜನರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಮ್ರಾನ್ ಖಾನ್ ಅವರನ್ನು 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಬಲೂಚಿಸ್ತಾನ, ಖೈಬರ್ ಪ್ರಾಂತ್ಯ ಹಾಗೂ ಪಂಜಾಬ್‌ನಲ್ಲಿ ಪಾಕ್ ಸೇನೆ ಕಟ್ಟೆಚ್ಚರ ವಹಿಸಿದೆ.
ಬಂಧಿತರಲ್ಲಿ ಬಹುತೇಕರು ಕಾನೂನು ಉಲ್ಲಂಘಿಸಿದ್ದು, ಉಳಿದವರು ಉಲ್ಲಂಘಿಸಿದವರಿಗೆ ಬೆಂಬಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್‍ನ ಹೈಕೋರ್ಟ್ ಬಳಿ ಪ್ಯಾರಾ ಮಿಲಿಟರಿ ಪಡೆ ಬಂಧಿಸಿತ್ತು. ನಂತರ ಉಂಟಾದ ಹಿಂಸಾಚಾರದಲ್ಲಿ ನೂರಾರು ಅಧಿಕಾರಿಗಳು ಗಾಯಗೊಂಡಿದ್ದರು.
ಪ್ರಕರಣವೊಂದರ ವಿಚಾರಣೆಗಾಗಿ ಇಸ್ಲಾಮಾಬಾದ್‍ನ ಹೈಕೋರ್ಟ್ ತೆರಳುತ್ತಿದ್ದ ವೇಳೆ ಇಮ್ರಾನ್‍ಖಾನ್ ಅವರನ್ನು ಬಂಧಿಸಲಾಗಿತ್ತು. ಇಮ್ರಾನ್ ಅವರ ಬಂಧನವನ್ನು ವಿರೋಧಿಸಿದ ಅವರ ಬೆಂಬಲಿಗರು ಲಾಹೋರ್‌ನಲ್ಲಿರುವ ಸೇನಾ ಕಮಾಂಡರ್‌ಗಳ ನಿವಾಸದ ಆವರಣವನ್ನು ಪ್ರವೇಶಿಸಿ ದಾಂಧಲೆ ನಡೆಸಿದ್ದರು. ವಾಯುಪಡೆ ಸ್ಮಾರಕವನ್ನು ಧ್ವಂಸಗೊಳಿಸಲಾಗಿತ್ತು. ಪೇಶಾವರದಲ್ಲಿ ರೇಡಿಯೋ ಕಟ್ಟಡಕ್ಕೂ ಬೆಂಕಿ ಹಚ್ಚಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ
ಇಸ್ಲಾಮಾಬಾದ್‍ನಾದ್ಯಂತ ಜನರು ಗುಂಪಾಗಿ ಸೇರುವುದನ್ನು ನಿಷೇಧಿಸಲಾಗಿದ್ದು, ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ಘರ್ಷಣೆಯಲ್ಲಿ ಆರು ಮಂದಿ ಮೃತ
ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಕಾರ್ಯಕರ್ತರು, ದೇಶಾದ್ಯಂತ ಬಂದ್‌ಗೆ ಕರೆ ನೀಡಿರುವ ಕಾರಣ ಪಾಕ್‌ನ ವಿವಿಧೆಡೆ ನಿಷೇಧಾಜ್ಞೆ ಹೇರಲಾಗಿದೆ. ಘರ್ಷಣೆಗಳಲ್ಲಿ ಈವರೆಗೂ ಆರು ಮಂದಿ ಮೃತಪಟ್ಟಿದ್ದಾರೆ. ಇಂಟರ್‌ನೆಟ್ ಸಂಪರ್ಕ ಸ್ಥಗಿತಗೊಂಡಿದೆ. ಇಸ್ಲಾಮಾಬಾದ್ ಸುತ್ತಮುತ್ತ ಬಿಗಿ ಬಂದೊಬಸ್ತ್ ವಹಿಸಲಾಗಿದೆ. ಇಮ್ರಾನ್ ಖಾನ್ ಬಿಡುಗಡೆಯಾಗುವವರೆಗೂ ಹೋರಾಟ ಮುಂದುವರೆಸುವುದಾಗಿ ಪಿಟಿಐ ಕಾರ್ಯಕರ್ತರು ತಿಳಿಸಿದ್ದಾರೆ.
ಅಲ್ ಖಾದಿರ್ ಟ್ರಸ್ಟ್ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಪಂಜಾಬ್ ಪ್ರಾಂತ್ಯದ ಝೇಲಂನಲ್ಲಿ ಅಲ್ ಖಾದಿರ್ ವಿವಿ ಸ್ಥಾಪನೆಯ ವಿಚಾರವಾಗಿ ರಿಯಲ್ ಎಸ್ಟೇಟ್ ಉದ್ಯಮಿ ಮಲಿಕ್ ರಿಯಾಜ್ ಅವರಿಂದ ಕಿಕ್ ಬ್ಯಾಕ್ ರೂಪದಲ್ಲಿ ಜಮೀನು ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಇಮ್ರಾನ್ ಖಾನ್ ವಿರುದ್ಧ ಪ್ರಕರಣವೂ ದಾಖಲಾಗಿತ್ತು.
ಕಳೆದ ವರ್ಷ ಏಪ್ರಿಲ್‌ನಲ್ಲಿ ಅವಿಶ್ವಾಸದ ಮತದ ಮೂಲಕ ಅವರನ್ನು ಪದಚ್ಯುತಗೊಳಿಸಿದ ನಂತರ ಭಯೋತ್ಪಾದನೆ, ಧರ್ಮ ನಿಂದನೆ, ಕೊಲೆ, ಹಿಂಸೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಇಷ್ಟಲ್ಲದೆ ಇಮ್ರಾನ್ ಖಾನ್ ವಿರುದ್ಧ ಭ್ರಷ್ಟಾಚಾರದ ಹಲವು ಪ್ರಕರಣಗಳು ದಾಖಲಾಗಿವೆ.