ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕಾಗಿದ್ದು, ಆ ಹಕ್ಕಿಗೆ ಧಕ್ಕೆ ಉಂಟುಮಾಡುವ ಯಾವುದೇ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಚಿತ್ರನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಹೇಳಿದರು.
ಮಂಡ್ಯದ ನ್ಯೂ ತಮಿಳ್ ಕಾಲೋನಿಯಲ್ಲಿ ಜಿಲ್ಲಾ ಮತದಾರ ಕಾವಲು ಸಮಿತಿ ಹಾಗೂ ಎದ್ದೇಳು ಕರ್ನಾಟಕ ವತಿಯಿಂದ ಬುಧವಾರ ಆಯೋಜಿಸಿದ್ದ SIR (Special Intensive Revision) ಪರಿಶೋಧ-ಪ್ರತಿರೋಧ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾರರ ಹಕ್ಕುಗಳ ರಕ್ಷಣೆಯ ಅಗತ್ಯವನ್ನು ಒತ್ತಿ ಹೇಳಿದರು.
ಭಾರತದ ಸಂವಿಧಾನ ರಚನಾ ಪ್ರಕ್ರಿಯೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆಯನ್ನು ಉಲ್ಲೇಖಿಸಿದ ಪ್ರಕಾಶ್ ರಾಜ್, ಸ್ವಾತಂತ್ರ್ಯಾನಂತರ ಭಾರತವು ಸಾರ್ವತ್ರಿಕ ವಯಸ್ಕ ಮತದಾನದ ತತ್ವವನ್ನು ಅಳವಡಿಸಿಕೊಂಡಿರುವುದನ್ನು ನೆನಪಿಸಿದರು. ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ದೊರೆಯಬೇಕು ಎಂಬುದು ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ. SIR ಪ್ರಕ್ರಿಯೆಯಿಂದ ಆದಿವಾಸಿಗಳು, ಬಡವರು, ಕಾರ್ಮಿಕರು, ಅಲ್ಪಸಂಖ್ಯಾತರು ಹಾಗೂ ಶ್ರಮಿಕ ನಗರಗಳಲ್ಲಿ ವಾಸಿಸುವ ಜನರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕ ಎದುರಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು. ದಾಖಲೆಗಳು ಹಾಗೂ ಪರಿಶೀಲನಾ ಪ್ರಕ್ರಿಯೆಗಳ ಹೆಸರಿನಲ್ಲಿ ಅರ್ಹ ನಾಗರಿಕರಿಗೆ ತೊಂದರೆ ಉಂಟಾಗಬಾರದು ಎಂದರು.

“ಜನರ ಮತದಾನದ ಹಕ್ಕನ್ನು ಕಸಿಯುವಂತಹ ಯಾವುದೇ ವ್ಯವಸ್ಥೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಅತ್ಯಂತ ಮುಖ್ಯ” ಎಂದು ಪ್ರಕಾಶ್ ರಾಜ್ ಹೇಳಿದರು. SIR ಪ್ರಕ್ರಿಯೆಯಿಂದ ಸಮಸ್ಯೆ ಎದುರಿಸುತ್ತಿರುವ ಜನರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳನ್ನು ಗುರುತಿಸಿ, ಕಾನೂನುಬದ್ಧವಾಗಿ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ಮುಂದುವರಿಸುವುದಾಗಿ ಅವರು ತಿಳಿಸಿದರು.
SIR ಪ್ರಕ್ರಿಯೆಯಲ್ಲಿ ASDDO (Absent, Shifted, Duplicate, Dead, Others) ಸೇರಿದಂತೆ ವಿವಿಧ ವರ್ಗೀಕರಣಗಳ ಹಿನ್ನೆಲೆಯಲ್ಲಿ ನೋಟಿಸ್ ಹಾಗೂ ಪರಿಶೀಲನಾ ಪ್ರಕ್ರಿಯೆ ಎದುರಾಗುತ್ತಿದ್ದು, ಇದರಿಂದ ಬಡವರು, ಕಾರ್ಮಿಕರು ಹಾಗೂ ಶ್ರಮಿಕ ನಗರಗಳ ನಿವಾಸಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದು ಜಿಲ್ಲಾ ಮತದಾರ ಕಾವಲು ಸಮಿತಿಯ ಜಿಲ್ಲಾ ಸಂಯೋಜಕ ಸಿದ್ದರಾಜು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ SIR ಪ್ರಕ್ರಿಯೆಯಿಂದ ಸಮಸ್ಯೆ ಎದುರಿಸುತ್ತಿರುವ ಜನರನ್ನು ಭೇಟಿ ಮಾಡಿ, ಅವರ ಅಹವಾಲುಗಳು, ದಾಖಲೆಗಳು ಹಾಗೂ ಪರಿಶೀಲನಾ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. SIR ಮೂಲಕ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಕರ್ನಾಟಕದಲ್ಲಿಯೂ ಲಕ್ಷಾಂತರ ಮತದಾರರಿಗೆ ಸಂಬಂಧಿಸಿದಂತೆ ಪರಿಶೀಲನೆ ಹಾಗೂ ನೋಟಿಸ್ ಪ್ರಕ್ರಿಯೆ ನಡೆದಿದೆ ಎಂದು ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಲಾಯಿತು. ಈ ಕುರಿತು ಚುನಾವಣಾ ಆಯೋಗದ ಅಧಿಕೃತ ದಾಖಲೆಗಳ ಆಧಾರದ ಮೇಲೆ ಸ್ಪಷ್ಟತೆ ನೀಡಬೇಕು ಎಂದು ಒತ್ತಾಯಿಸಲಾಯಿತು.

ಅರ್ಹ ನಾಗರಿಕರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳಬೇಕು. ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ವ್ಯಕ್ತವಾಯಿತು. SIR ಪ್ರಕ್ರಿಯೆಯ ಕುರಿತು ಹತ್ತು ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಸ ನಡೆಸಿ, ಜನರ ಸಮಸ್ಯೆಗಳನ್ನು ಆಲಿಸಲಾಗಿದೆ ಎಂದು ತಿಳಿಸಲಾಯಿತು. ಮತದಾರರ ಹಕ್ಕು, ಸಂವಿಧಾನ ಹಾಗೂ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ SIR ವಿರುದ್ಧ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಹೋರಾಟವನ್ನು ರಾಜ್ಯಾದ್ಯಂತ ಮುಂದುವರಿಸಲಾಗುವುದು ಎಂದು ಸಂಘಟಕರು ತಿಳಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಕರ್ನಾಟಕ ಮತ್ತೊಂದು ಬೆಂಗಾಲ್ ಆಗಲು ಬಿಡುವುದಿಲ್ಲ; SIR ರದ್ದಾಗಲೇಬೇಕು: ಪ್ರಕಾಶ್ ರಾಜ್
ಕಾರ್ಯಕ್ರಮದಲ್ಲಿ ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ವಿಶ್ವನಾಥ್, ಜಾಗೃತ ಕರ್ನಾಟಕದ ನಾಗೇಶ್, ಜಿಲ್ಲಾ ಮತದಾರ ಕಾವಲು ಸಮಿತಿಯ ಜಿಲ್ಲಾ ಸಂಯೋಜಕ ಸಿದ್ದರಾಜು, ಕರ್ನಾಟಕ ಜನಶಕ್ತಿಯ ಶಿಲ್ಪಾ, ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ಶಿವಣ್ಣ, ನಿಂಗಮ್ಮ, ಪ್ರಕಾಶ್, SDPIಯ ನಿಕತ್, CITUನ ಕುಮಾರಿ, ಪ್ರಗತಿಪರ ಸಂಘಟನೆಯ ಮುಕುಂದ, ಟಿ.ಡಿ. ನಾಗರಾಜ್, ಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸ್ಥಳೀಯ ಮುಖಂಡರು ಹಾಗೂ ನ್ಯೂ ತಮಿಳ್ ಕಾಲೋನಿಯ ನಿವಾಸಿಗಳು ಭಾಗವಹಿಸಿದ್ದರು.





