ಡೈಪರ್ ಸೋರಲ್ಲ, ಕ್ವೆಶ್ಚನ್ ಪೇಪರ್ ಸೋರುತ್ತೆ! ಮತ್ತೆ ಸದ್ದು ಮಾಡಿದೆ ಮೋದಿ ಸರ್ಕಾರದ ನೀಟ್ ಹಗರಣ

Date:

ಭಾರತದಂತಹ ದೇಶದಲ್ಲಿ ಶಿಕ್ಷಣ ಮತ್ತು ಉದ್ಯೋಗ ಎನ್ನುವುದು ಕೇವಲ ವೈಯಕ್ತಿಕ ಬೆಳವಣಿಗೆಯಲ್ಲ, ಅದು ಕೋಟ್ಯಂತರ ಕುಟುಂಬಗಳ ಏಳಿಗೆಯ ಕನಸು. ಆದರೆ, ಕಳೆದ ಹತ್ತು ವರ್ಷಗಳಲ್ಲಿ ಈ ಕನಸುಗಳ ಮೇಲೆ ಪದೇ ಪದೇ ತಣ್ಣೀರು ಎರಚಲಾಗುತ್ತಿದೆ. ಇತ್ತೀಚೆಗೆ ನಡೆದ NEET-UG 2026 ಪರೀಕ್ಷೆಯ ರದ್ದತಿ ಮತ್ತು ಅದಕ್ಕೆ ಸಂಬಂಧಿಸಿದ ಹಗರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ಸುಮಾರು 22 ಲಕ್ಷ ವಿದ್ಯಾರ್ಥಿಗಳ ಶ್ರಮ, ಪೋಷಕರ ಹಗಲು-ರಾತ್ರಿ ಎನ್ನದೇ ಪಟ್ಟ ಕಷ್ಟ ಮತ್ತು ದೇಶದ ಭವಿಷ್ಯ ಇಂದು ಪ್ರಶ್ನೆ ಪತ್ರಿಕೆ ಸೋರಿಕೆ ಎಂಬ ಮಾಫಿಯಾದ ಕೈಗೆ ಸಿಲುಕಿ ನಲುಗಿಹೋಗಿದೆ.

- Advertisement -

10 ವರ್ಷ, 89 ಪ್ರಕರಣಗಳು: ಇದೊಂದು ವ್ಯವಸ್ಥಿತ ವೈಫಲ್ಯ ಹಗರಣ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ನ್ಯೂಸ್‌ ಲಾಂಡ್ರಿ ಮಾಡಿರುವ ಆಳವಾದ ವಿಶ್ಲೇಷಣೆಯ ಪ್ರಕಾರ, ಕಳೆದ ಒಂದು ದಶಕದಲ್ಲಿ ದೇಶಾದ್ಯಂತ ಸುಮಾರು 89 ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ದಾಖಲಾಗಿವೆ. ಈ ಅಕ್ರಮಗಳಿಂದಾಗಿ ದೇಶದ ಸುಮಾರು 6.5 ಕೋಟಿ ಅಭ್ಯರ್ಥಿಗಳ ಜೀವನದ ಅಮೂಲ್ಯ ಸಮಯ ವ್ಯರ್ಥವಾಗಿದೆ. ಅಚ್ಚರಿಯ ಮತ್ತು ಆಘಾತಕಾರಿ ವಿಷಯವೆಂದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಈ ಅವಧಿಯಲ್ಲಿ, ಕೇಂದ್ರ ಸಂಸ್ಥೆಗಳ ಕಣ್ಗಾವಲಿನಲ್ಲಿ ನಡೆಯುವ ಪರೀಕ್ಷೆಗಳಲ್ಲೇ 21 ದೊಡ್ಡ ಅಕ್ರಮ ಪ್ರಕರಣಗಳು ವರದಿಯಾಗಿವೆ.

ಇದು ಕೇವಲ ತಾಂತ್ರಿಕ ದೋಷವಲ್ಲ, ಬದಲಾಗಿ ದೇಶದ ಶೈಕ್ಷಣಿಕ ವ್ಯವಸ್ಥೆಯನ್ನು ಆಳುತ್ತಿರುವವರ ದೂರದೃಷ್ಟಿಯ ಕೊರತೆ ಮತ್ತು ಹೊಣೆಗೇಡಿತನಕ್ಕೆ ಸಾಕ್ಷಿಯಾಗಿದೆ. ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಸಂಸ್ಥೆಗಳು ಇಂದು ಭ್ರಷ್ಟಾಚಾರದ ಕೂಪಗಳಾಗಿ ಬದಲಾಗಿವೆಯೇ ಎಂಬ ಸಂಶಯ ಜನಸಾಮಾನ್ಯರಲ್ಲಿ ಮೂಡಿದೆ.

NEET-UG 2026: ವ್ಯವಸ್ಥೆಯ ಬೆತ್ತಲೆ ಪ್ರದರ್ಶನ:-

ಸುಮಾರು 22 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದ NEET-UG 2026 ಪರೀಕ್ಷೆ ದೇಶದ ಅತ್ಯಂತ ಪ್ರಮುಖ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿದೆ. ಆದರೆ ಮೇ 3ರಂದು ಪರೀಕ್ಷೆ ನಡೆದ ಕೆಲವೇ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಅನುಮಾನಗಳು ಬಲವಾಗತೊಡಗಿದವು. ರಾಜಸ್ಥಾನದಲ್ಲಿ ನಡೆದ ಪ್ರಾಥಮಿಕ ತನಿಖೆಯಲ್ಲಿ, ಪರೀಕ್ಷೆಗೆ ಮುನ್ನವೇ ಮೂಲ ಪ್ರಶ್ನೆ ಪತ್ರಿಕೆಗೆ ಹೋಲುವ ಪ್ರಶ್ನೆಗಳು ಹರಿದಾಡಿದ್ದವು ಎಂಬ ಮಾಹಿತಿ ಬಹಿರಂಗವಾಯಿತು.

ರಾಜಸ್ಥಾನದಿಂದ ಹಿಡಿದು ಬಿಹಾರದವರೆಗೆ ಹಬ್ಬಿರುವ ಈ ಸೋರಿಕೆ ಜಾಲದಲ್ಲಿ 45ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಮುದ್ರಣಾಲಯದಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಪರೀಕ್ಷಾ ವ್ಯವಸ್ಥೆಯೊಳಗಿನ ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತದೆ. ಕೇರಳದ ಮೆಡಿಕಲ್ ವಿದ್ಯಾರ್ಥಿಯೊಬ್ಬ ಈ ಜಾಲದಲ್ಲಿ ಭಾಗಿಯಾಗಿರುವುದು ವ್ಯವಸ್ಥೆ ಎಷ್ಟು ಆಳವಾಗಿ ಕೊಳೆತು ನಾರುತ್ತಿದೆ ಎಂಬುದಕ್ಕೆ ನಿದರ್ಶನ. ಸಿಬಿಐ ತನಿಖೆಗೆ ಆದೇಶ ನೀಡಲಾಗಿದೆಯಾದರೂ, ಕಳೆದುಹೋದ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಮರಳಿ ತರಲು ಸಾಧ್ಯವೇ? ಈಗಾಗಲೇ ಗೋವಾದಲ್ಲಿ ನೀಟ್‌ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಹೊಣೆ ಯಾರು? 

image 129

ಯಾವುದೇ ದೊಡ್ಡ ಹಗರಣ ನಡೆದಾಗ ಅದನ್ನು ಒಪ್ಪಿಕೊಂಡು ಸರಿಪಡಿಸುವ ಬದಲು, “ಸೋರಿಕೆಯೇ ಆಗಿಲ್ಲ” ಎಂದು ಹಠ ಹಿಡಿಯುವುದು ಮೋದಿ ಸರ್ಕಾರದ ಅಭ್ಯಾಸವಾಗಿಬಿಟ್ಟಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಂಸತ್ತಿನಲ್ಲಿ ಮತ್ತು ಮಾಧ್ಯಮಗಳ ಮುಂದೆ “ಯಾವುದೇ ಪುರಾವೆಗಳಿಲ್ಲ” ಎಂದು ಮೂರು ಬಾರಿ ಹೇಳಿಕೆ ನೀಡಿದ್ದರು. ಆದರೆ ಸುಪ್ರೀಂ ಕೋರ್ಟ್ ಸ್ವತಃ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಅಕ್ರಮ ನಡೆದಿರುವುದನ್ನು ಗಮನಿಸಿದೆ.

ಸಂಸತ್ತಿನಲ್ಲಿ ವಿರೋಧ ಪಕ್ಷಗಳು ಪ್ರಶ್ನೆ ಕೇಳಿದಾಗ, ಸರ್ಕಾರದ ಬಳಿ ಸರಿಯಾದ ದತ್ತಾಂಶಗಳೇ ಇಲ್ಲದಿರುವುದು ಆಘಾತಕಾರಿ. ಕಳೆದ ಹತ್ತು ವರ್ಷಗಳಲ್ಲಿ ಎಷ್ಟು ಪರೀಕ್ಷೆಗಳು ರದ್ದಾಗಿವೆ ಎಂಬ ಮಾಹಿತಿಯನ್ನು “ನಿರ್ವಹಿಸಲಾಗಿಲ್ಲ” ಎಂದು ಸರ್ಕಾರ ಉತ್ತರಿಸುವುದು ಕೋಟ್ಯಂತರ ನಿರುದ್ಯೋಗಿ ಯುವಕರಿಗೆ ಮಾಡುವ ಅಪಮಾನ. ಪರೀಕ್ಷಾ ವ್ಯವಸ್ಥೆಯಲ್ಲಿ ಎಷ್ಟೊಂದು ಗಂಭೀರ ದೋಷಗಳಿವೆ ಎಂಬುದನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ “ಪಾರದರ್ಶಕತೆ”, “ಡಿಜಿಟಲ್ ಇಂಡಿಯಾ”, “ಭ್ರಷ್ಟಾಚಾರ ಮುಕ್ತ ಆಡಳಿತ” ಎಂಬ ಘೋಷಣೆಗಳನ್ನು ಕೂಗಿಯೇ ಅಧಿಕಾರ ಗಿಟ್ಟಿಸಿಕೊಂಡಿದೆ.  ಆದರೆ ಪರೀಕ್ಷಾ ವ್ಯವಸ್ಥೆಯ ವಾಸ್ತವ ಚಿತ್ರಣ ಇದಕ್ಕೆ ವಿರುದ್ಧವಾಗಿದೆ. ಪರೀಕ್ಷೆ ನಡೆಸುವ ಸಂಸ್ಥೆಗಳ ಸಾಮರ್ಥ್ಯ, ಪ್ರಶ್ನೆ ಪತ್ರಿಕೆಗಳ ಭದ್ರತೆ, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆ – ಎಲ್ಲದರ ಮೇಲೂ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ. NEET ಮಾತ್ರವಲ್ಲ, ವಿವಿಧ ಸರ್ಕಾರಿ ನೇಮಕಾತಿ ಪರೀಕ್ಷೆಗಳು, ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಇದೇ ರೀತಿಯ ಆರೋಪಗಳು ಕೇಳಿಬಂದಿವೆ. 

2024ರಲ್ಲಿ ನೀಟ್ ಪತ್ರಿಕೆ ಸೋರಿಕೆಯಾದಾಗ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ರಾಘವ್ ಚಡ್ಡಾ, ಅಂದು ಇದನ್ನು ‘IPL’ (ಇಂಡಿಯನ್ ಪೇಪರ್ ಲೀಕ್) ಎಂದು ಲೇವಡಿ ಮಾಡಿ ಯುವಜನತೆಯ ಪರವಾಗಿ ಮಾತನಾಡಿದ್ದರು. ಆದರೆ ಇಂದು, ಅದೇ ಅಕ್ರಮಗಳು ಮರುಕಳಿಸುತ್ತಿದ್ದರೂ ಅವರು ತುಟಿಯನ್ನ ಹೊಲೆದುಕೊಂಡಿದ್ದಾರೆ.  ವಿರೋಧ ಪಕ್ಷದಲ್ಲಿದ್ದಾಗ ವ್ಯವಸ್ಥೆಯ ವೈಫಲ್ಯಗಳನ್ನು ಕಟುವಾಗಿ ಟೀಕಿಸುವ ನಾಯಕರು, ಅಧಿಕಾರ ಅಥವಾ ರಾಜಕೀಯ ಸಮೀಕರಣಗಳ ಮುಂದೆ ಅದೇ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಮುಂದಾಗುವುದು ವಿದ್ಯಾರ್ಥಿಗಳಿಗೆ ಮಾಡುವ ದ್ರೋಹವಾಗಿದೆ. ಇಂತಹ ‘ಅನುಕೂಲಸಿಂಧು’ ರಾಜಕಾರಣದಿಂದಾಗಿ ಅಸಲಿ ಸಮಸ್ಯೆಗಳು ಮರೆಮಾಚಲ್ಪಡುತ್ತಿವೆಯೇ ಹೊರತು, ಭ್ರಷ್ಟ ವ್ಯವಸ್ಥೆಗೆ ಯಾವುದೇ ಸರ್ಜರಿ ನಡೆಯುತ್ತಿಲ್ಲ. 

ರಾಘವ್‌ ಚಡ್ಡಾ ಒಂದು ಕಡೆ ಆದರೆ, ನೀಟ್ ಪತ್ರಿಕೆ ಸೋರಿಕೆಯಂತಹ ಗಂಭೀರ ವಿಷಯಗಳ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದಾಗ, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಉತ್ತರಿಸಲಾಗದೆ ಮುಖ ತಿರುಗಿಸಿ ಹೋಗುವುದು ಅತ್ಯಂತ ಖೇದಕರ ಸಂಗತಿ. ಇದೇ ನಾಯಕರು ಮೋದಿಯವರನ್ನು ಹೊಗಳುವ ಸಂದರ್ಭ ಬಂದಾಗ ಅಥವಾ ಕೇವಲ ಪ್ರಚಾರದ ವಿಚಾರಗಳಿದ್ದಾಗ ಗಂಟೆಗಟ್ಟಲೆ ಕ್ಯಾಮೆರಾ ಮುಂದೆ ನಿಂತು ಮಾತುಗಳ ಸುರಿಮಳೆಗೈಯುತ್ತಾರೆ.  ಇದೆಲ್ಲವನ್ನ ನೋಡಿದರೆ ಅಕ್ಷರಶಃ ಸಾಮಾನ್ಯ ಜನತೆ ವಿದೂಷಕರ ಕೈಯಲ್ಲಿ ಸಿಲುಕಿದಂತಾಗುತ್ತದೆ. 

ಅಭ್ಯರ್ಥಿಗಳ ಮೇಲೆ ಆರ್ಥಿಕ ಮತ್ತು ಮಾನಸಿಕ ಹೊರೆ

ನೋಂದಣಿ ಶುಲ್ಕವನ್ನು ವಾಪಸ್ ನೀಡುತ್ತೇವೆ ಎಂದು ಹೇಳುವ ಮೂಲಕ ಎನ್‌ಟಿಎ (NTA) ವಿದ್ಯಾರ್ಥಿಗಳಿಗೆ ದೊಡ್ಡ ಉಪಕಾರ ಮಾಡುತ್ತಿದ್ದೇವೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಅತ್ಯಂತ ಹಾಸ್ಯಾಸ್ಪದ. ಪರೀಕ್ಷೆ ಬರೆಯಲು ನೂರಾರು ಕಿಲೋಮೀಟರ್ ಪ್ರಯಾಣಿಸಿ, ಹಣವಿಲ್ಲದೆ ಬಸ್ ನಿಲ್ದಾಣ ಮತ್ತು ರೈಲ್ವೇ ಸ್ಟೇಷನ್‌ಗಳಲ್ಲಿ ರಾತ್ರಿ ಕಳೆದ ವಿದ್ಯಾರ್ಥಿಗಳ ಕಷ್ಟಕ್ಕೆ ಆ ಶುಲ್ಕದ ಹಣ ಪರಿಹಾರವಾಗಬಲ್ಲದೇ? ಈ ವ್ಯವಸ್ಥೆಯ ವೈಫಲ್ಯದಿಂದಾಗಿ ಬಡ ಕುಟುಂಬಗಳ ಆರ್ಥಿಕ ಚೇತರಿಕೆ ಸಾಧ್ಯವೇ ಇಲ್ಲದಂತಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಹೆಣ್ಣುಮಕ್ಕಳ ಸ್ಥಿತಿ ಅತ್ಯಂತ ಶೋಚನೀಯವಾಗಿದೆ; ನಮ್ಮ ಸಮಾಜದಲ್ಲಿ ಒಂದು ವಿಫಲ ಪ್ರಯತ್ನದ ನಂತರ ಎರಡನೇ ಅವಕಾಶ ನೀಡಲು ಒಪ್ಪದ ಎಷ್ಟೋ ಕುಟುಂಬಗಳಿವೆ. ಅಂತಹ ಹೆಣ್ಣುಮಕ್ಕಳ ವೈದ್ಯಕೀಯ ಕನಸು ಈ ಒಂದು ಸೋರಿಕೆಯಿಂದಾಗಿ ಶಾಶ್ವತವಾಗಿ ಕಮರಿಹೋಗಿದೆ. ಮರು ಪರೀಕ್ಷೆ ನಡೆಸುವುದೊಂದೇ ಎಲ್ಲದಕ್ಕೂ ಮದ್ದು ಎಂದು ಭಾವಿಸಿರುವ ಎನ್‌ಟಿಎಗೆ, ವಿದ್ಯಾರ್ಥಿಗಳು ಅನುಭವಿಸಿರುವ ಮಾನಸಿಕ ಹಿಂಸೆ, ಆರ್ಥಿಕ ನಷ್ಟ ಮತ್ತು ಕಳೆದುಹೋದ ಅಮೂಲ್ಯ ಸಮಯದ ಅರಿವೇ ಇಲ್ಲದಂತಿದೆ. 

ಅಷ್ಟೇ ಯಾಕೆ, ಒಂದು ಪರೀಕ್ಷೆಯನ್ನು ನಡೆಸಲು ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹೋಗಲು ಮಾಡಿದ ಖರ್ಚು, ಕೋಚಿಂಗ್ ಸೆಂಟರ್‌ಗಳಿಗೆ ನೀಡಿದ ಲಕ್ಷಾಂತರ ರೂಪಾಯಿ ಶುಲ್ಕ ಮತ್ತು ವರ್ಷಗಟ್ಟಲೆ ಮಾಡಿದ ಶ್ರಮ ಎಲ್ಲವೂ ಬೂದಿಯಲ್ಲಿ ಸುರಿದ ಪನ್ನೀರಾಗಿದೆ. ಈ ವ್ಯವಸ್ಥೆ  ವೈದ್ಯರಾಗಬೇಕೆಂಬ ಕನಸಿನೊಂದಿಗೆ ಓದುತ್ತಿರುವ ವಿದ್ಯಾರ್ಥಿಯೊಬ್ಬನಿಗೆ “ನಿನ್ನ ಶ್ರಮಕ್ಕಿಂತ ಲೀಕ್ ಮಾಫಿಯಾ ಶಕ್ತಿಶಾಲಿ” ಎಂದು ಹೇಳುತ್ತಿರುವಂತಾಗಿದೆ. ಪದೇ ಪದೇ ಪರೀಕ್ಷೆಗಳು ರದ್ದಾಗುತ್ತಿರುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳು ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. 

WhatsApp Image 2026 05 13 at 6.37.25 PM

ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತಿನ ಹೆಸರಿನಲ್ಲಿ ವಿದ್ಯಾರ್ಥಿನಿಯರ ಕೂದಲಿನ ಕ್ಲಿಪ್, ಕೈಬಳೆ, ಜಿಪ್‌ಗಳಿಂದ ಹಿಡಿದು ಕೈಗೆ ಕಟ್ಟಿದ ನಂಬಿಕೆಯ ದಾರಗಳವರೆಗೆ ಎಲ್ಲವನ್ನೂ ಕಳಚುವ ಎನ್‌ಟಿಎ (NTA), ಸುರಕ್ಷತೆಯ ನಾಟಕವನ್ನು ಆಡುತ್ತಿದೆ. ಪರೀಕ್ಷೆ ಬರೆಯಲು ಬರುವ ಬಡ ವಿದ್ಯಾರ್ಥಿಗಳನ್ನು ಶಂಕಿತ ಅಪರಾಧಿಗಳಂತೆ ನಡೆಿಸಿಕೊಳ್ಳುವ ಅಧಿಕಾರಿಗಳು, ತಮ್ಮದೇ ಮೂಗಿನ ನೇರಕ್ಕೆ ನಡೆಯುವ ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ತಡೆಯಲು ವಿಫಲರಾಗಿದ್ದಾರೆ. ವಿದ್ಯಾರ್ಥಿಗಳ ಮೈಮೇಲಿನ ದಾರವನ್ನು ಕತ್ತರಿಸುವ ಸರ್ಕಾರಿ ಯಂತ್ರಕ್ಕೆ, ಪ್ರಶ್ನೆ ಪತ್ರಿಕೆಯನ್ನೇ ಮಾರಾಟ ಮಾಡುವ ಆಂತರಿಕ ಮಾಫಿಯಾವನ್ನು ಕತ್ತರಿಸಲು ಸಾಧ್ಯವಾಗುತ್ತಿಲ್ಲ. 

ಈ ವ್ಯವಸ್ಥೆಯ ವೈಫಲ್ಯ ಎಷ್ಟೊಂದು ಹಾಸ್ಯಾಸ್ಪದವಾಗಿದೆ ಎಂದರೆ, ಮಾರುಕಟ್ಟೆಯಲ್ಲಿ ಸಿಗುವ ಕೇವಲ 10 ರೂಪಾಯಿಯ ಮಗುವಿನ ಡೈಪರ್ ಕೂಡ ಸೋರಿಕೆಯಾಗದಂತೆ ಎಚ್ಚರ ವಹಿಸಲಾಗುತ್ತದೆ, ಆದರೆ ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಪರೀಕ್ಷಾ ಪ್ರಶ್ನೆ ಪತ್ರಿಕೆಗಳು ಮಾತ್ರ ಪ್ರತಿ ವರ್ಷ ಸೋರಿಕೆಯಾಗುತ್ತಲೇ ಇವೆ!. ಪದೇ ಪದೇ ಇಂತಹ ಪ್ರಮಾದಗಳನ್ನು ಎಸಗುತ್ತಿರುವ ‘ರಾಷ್ಟ್ರೀಯ ಪರೀಕ್ಷಾ ಸಂಸ್ಥೆ’ಯನ್ನು (NTA) ಆ ಹೆಸರಿನಿಂದ ಕರೆಯುವ ಬದಲು ‘ಎಂದಿಗೂ ನಂಬಲರ್ಹವಲ್ಲದ ಸಂಸ್ಥೆ’ ಎಂದು ಕರೆಯುವುದೇ ಸೂಕ್ತವಾಗಿದೆ. ಕೇವಲ ನಾಮಮಾತ್ರದ ತನಿಖೆಗಳಿಂದ ನ್ಯಾಯ ಸಿಗಲು ಸಾಧ್ಯವಿಲ್ಲ; ಈ ಬೃಹತ್ ಹಗರಣದ ಸತ್ಯ ಹೊರಬರಬೇಕಾದರೆ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ವಿದ್ಯಾರ್ಥಿಗಳ ಕನಸಿನ ಮೇಲೆ ವ್ಯಾಪಾರ ಮಾಡುತ್ತಿರುವ ಈ ಭ್ರಷ್ಟ ಜಾಲದ ಪ್ರತಿಯೊಬ್ಬರಿಗೂ ಕಠಿಣಾತಿ-ಕಠಿಣ ಶಿಕ್ಷೆ ವಿಧಿಸಿದಾಗ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳಿಗೆ ಅಂತ್ಯ ಹಾಡಲು ಸಾಧ್ಯ. ಅಲ್ಲಿಯವರೆಗೆ ನಮ್ಮ ಯುವಜನತೆಗೆ ‘ಪರೀಕ್ಷೆ’ ಎಂದರೆ ‘ಭವಿಷ್ಯ’ವಾಗಿರದೆ ‘ಭಯ’ವಾಗಿ ಉಳಿಯುತ್ತದೆ. 

ರಾಜಕೀಯ ಇಚ್ಛಾಶಕ್ತಿಯ ಕೊರತೆ:-

ಕಳೆದ 10 ವರ್ಷಗಳಲ್ಲಿ  89 ಬಾರಿ ಪೇಪರ್‌ ಲೀಕ್‌ ಆಗಿದೆ, 48 ಬಾರಿ ಮರು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದರೆ, ಪ್ರತಿ ಎರಡು ತಿಂಗಳಿಗೊಮ್ಮೆ ಒಂದಲ್ಲ ಒಂದು ಪರೀಕ್ಷೆ ಹಳಿ ತಪ್ಪುತ್ತಿದೆ ಎಂದರ್ಥ. ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಪರೀಕ್ಷಾ ಮಾಫಿಯಾಗಳು ಬಲವಾಗಿ ಬೇರೂರಿವೆ. ಈ ಮಾಫಿಯಾಗಳನ್ನು ಮಟ್ಟ ಹಾಕಲು ಕಠಿಣ ಕಾನೂನು ತರುವುದಾಗಿ ಸರ್ಕಾರ ಹೇಳುತ್ತದೆಯಾದರೂ, ಕಾರ್ಯರೂಪಕ್ಕೆ ಬಂದಿದ್ದು ಮಾತ್ರ ಶೂನ್ಯ.

ಗುಜರಾತ್ ಮತ್ತು ಉತ್ತರ ಪ್ರದೇಶದಂತಹ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ಅತಿ ಹೆಚ್ಚು ಪೇಪರ್ ಲೀಕ್ ಪ್ರಕರಣಗಳು ನಡೆಯುತ್ತಿರುವುದು ಕಾಕತಾಳೀಯವಲ್ಲ. ಪರೀಕ್ಷಾ ಮಂಡಳಿಗಳಲ್ಲಿ ರಾಜಕೀಯ ನೇಮಕಾತಿಗಳು ಮತ್ತು ಖಾಸಗಿ ಏಜೆನ್ಸಿಗಳಿಗೆ ಪರೀಕ್ಷಾ ಜವಾಬ್ದಾರಿ ನೀಡಿರುವುದು ಇಷ್ಟೆಲ್ಲಾ ಅವಾಂತರಗಳಿಗೆ ಮೂಲ ಕಾರಣವಾಗಿದೆ.

ಯುವಶಕ್ತಿಯೇ ದೇಶದ ಆಸ್ತಿ ಎಂದು ಭಾಷಣ ಮಾಡುವ ಮೋದಿ ಸರ್ಕಾರ, ಆ ಯುವಶಕ್ತಿಯನ್ನು ಬೀದಿಪಾಲು ಮಾಡುತ್ತಿದೆ. ಹತ್ತು ವರ್ಷಗಳ ಕಾಲ “ಅಚ್ಛೇ ದಿನ್” ಕನಸು ಕಂಡ ಯುವಕರಿಗೆ ಇಂದು ಸಿಗುತ್ತಿರುವುದು ಕೇವಲ ಪೇಪರ್ ಲೀಕ್ ಸುದ್ದಿಗಳು ಮತ್ತು ರದ್ದಾದ ಪರೀಕ್ಷೆಯ ನೋಟಿಸ್‌ಗಳು ಮಾತ್ರ.

ನೇಪಾಳ ಮತ್ತು ಬಾಂಗ್ಲಾದೇಶದ ಯುವಜನತೆ ವ್ಯವಸ್ಥೆಯ ಅನ್ಯಾಯದ ವಿರುದ್ಧ ಸಿಡಿದೆದ್ದು ಇಡೀ ಆಡಳಿತವನ್ನೇ ಬದಲಿಸಿದ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಆದರೆ, ನಮ್ಮ ದೇಶದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಇಲ್ಲಿನ ಶ್ರೀಮಂತರು ಮತ್ತು ರಾಜಕಾರಣಿಗಳ ಮಕ್ಕಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸುರಕ್ಷಿತವಾಗಿ ಓದುತ್ತಿದ್ದರೆ, ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಇದೇ ಶಿಥಿಲಗೊಂಡ ವ್ಯವಸ್ಥೆಯನ್ನು ನಂಬಿ ತಮ್ಮ ಜೀವನವನ್ನು ಪಣಕ್ಕಿಡುತ್ತಿದ್ದಾರೆ. ಪೇಪರ್ ಲೀಕ್ ಎಂಬುದು ಈ ದೇಶದ ಶ್ರಮಿಕ ವರ್ಗದ ಮಕ್ಕಳ ಭವಿಷ್ಯದ ಮೇಲೆ ನಡೆಯುತ್ತಿರುವ ಸರ್ಜಿಕಲ್ ಸ್ಟ್ರೈಕ್.

WhatsApp Image 2026 05 13 at 6.38.02 PM

ದುರಂತವೆಂದರೆ, ನಮ್ಮ ಯುವಶಕ್ತಿ ಇಂದು ಜಾತಿ, ಧರ್ಮ ಮತ್ತು ರಾಜಕೀಯ ಪಕ್ಷಗಳ ಅಂಧಾಭಿಮಾನದ ಹೆಸರಲ್ಲಿ ಹರಿದು ಹಂಚಿಹೋಗಿದೆ. ನೇಪಾಳ ಅಥವಾ ಬಾಂಗ್ಲಾದ ಯುವಕರಲ್ಲಿರುವ ಆ ‘ಒಗ್ಗಟ್ಟು’ ಮತ್ತು ‘ಪ್ರಶ್ನಿಸುವ ಧೈರ್ಯ’ ನಮ್ಮಲ್ಲಿ ಮಾಯವಾಗುತ್ತಿದೆ. ಭ್ರಷ್ಟ ಮಂತ್ರಿಗಳನ್ನು ಅಧಿಕಾರದಿಂದ ಕೆಳಗಿಳಿಸಿ ಜೈಲಿಗೆ ಕಳುಹಿಸುವ ಶಕ್ತಿ ಯುವಜನತೆಗಿದ್ದರೂ, ವ್ಯವಸ್ಥೆಯು ಅವರನ್ನು ಕೇವಲ ಮತಬ್ಯಾಂಕ್‌ಗಳನ್ನಾಗಿ ಬಳಸಿಕೊಳ್ಳುತ್ತಿದೆ. ಸಾಮಾನ್ಯ ಜನರ ಮಕ್ಕಳು ಪರೀಕ್ಷಾ ಕೇಂದ್ರಗಳ ಮುಂದೆ ಕಣ್ಣೀರು ಹಾಕುತ್ತಿರುವಾಗ, ಸಮಾಜದ ಪ್ರಭಾವಿ ವರ್ಗದ ಮಕ್ಕಳು ವಿದೇಶಗಳಲ್ಲಿ ನೆಲೆಸುತ್ತಿರುವುದು ಈ ದೇಶದ ಶೈಕ್ಷಣಿಕ ಅಸಮಾನತೆಯ ಪರಮಾವಧಿ. ನಮ್ಮ ಯುವಕರು ಸಂಘಟಿತರಾಗಿ ತಮ್ಮ ಹಕ್ಕಿಗಾಗಿ ಹೋರಾಡದ ಹೊರತು, ಭ್ರಷ್ಟಾಚಾರದ ಈ ಗುಂಡಾಂತರ ನಿಲ್ಲದು.

ಇನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಇಂದು ವಿಶ್ವಾಸಾರ್ಹತೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದರೂ, ಕೇಂದ್ರ ಸರ್ಕಾರ ಮೌನಕ್ಕೆ ಶರಣಾಗಿರುವುದು ಪ್ರಜಾಪ್ರಭುತ್ವದ ದುರಂತ. ಈ ಪ್ರಶ್ನೆಪತ್ರಿಕೆ ಸೋರಿಕೆಯ ಜಾಲವು ಕೇವಲ ಒಬ್ಬಿಬ್ಬರ ಕೆಲಸವಾಗಿರಲು ಸಾಧ್ಯವಿಲ್ಲ; ಇದರ ಹಿಂದೆ ವ್ಯವಸ್ಥೆಯ ಒಳಗೇ ಕುಳಿತಿರುವ ಪ್ರಭಾವಿ ತಿಮಿಂಗಿಲಗಳ ಕೈವಾಡವಿರುವುದು ಸ್ಪಷ್ಟ. ಇಷ್ಟೆಲ್ಲಾ ಅವಾಂತರಗಳಾದರೂ ನೈತಿಕ ಹೊಣೆ ಹೊತ್ತು ಯಾರೊಬ್ಬರೂ ರಾಜೀನಾಮೆ ನೀಡದಿರುವುದು ಅಧಿಕಾರ ಲಾಲಸೆಯನ್ನು ತೋರಿಸುತ್ತದೆಯೇ ಹೊರತು ಜನರ ಮೇಲಿನ ಕಾಳಜಿಯನ್ನಲ್ಲ. ಪ್ರತಿಭಾವಂತ ಯುವಜನತೆಯ ಭವಿಷ್ಯವನ್ನು ಬಲಿಗೊಡುತ್ತಿರುವ ಈ ಭ್ರಷ್ಟ ವ್ಯವಸ್ಥೆಗೆ ಇತಿಶ್ರೀ ಹಾಡುವುದು ಯಾವಾಗ? ಸರ್ಕಾರವು ಕೇವಲ ತನಿಖೆಯ ಭರವಸೆ ನೀಡುವ ಬದಲು, ತಪ್ಪಿತಸ್ಥರನ್ನು ಜೈಲಿಗಟ್ಟಿ ವ್ಯವಸ್ಥೆಯನ್ನು ಶುದ್ಧೀಕರಿಸುವುದು ಯಾವಾಗ? 

ಒಂದೆಡೆ ದೇಶವನ್ನು ‘ವಿಶ್ವಗುರು’ ಮಾಡುತ್ತೇವೆಂದು ಅಬ್ಬರದ ಪ್ರಚಾರ ನಡೆಯುತ್ತಿದ್ದರೆ, ಇನ್ನೊಂದೆಡೆ ಅದೇ ದೇಶದ ಭವಿಷ್ಯವಾದ ಯುವಜನತೆ ಒಂದು ಪರೀಕ್ಷೆಯನ್ನು ಪಾರದರ್ಶಕವಾಗಿ ಬರೆಯಲು ಪರದಾಡುತ್ತಿರುವುದು ದೊಡ್ಡ ವಿಪರ್ಯಾಸ. ಜಗತ್ತಿಗೆ ಜ್ಞಾನದ ದಾರಿ ತೋರಿಸುತ್ತೇವೆ ಎನ್ನುವ ಸರ್ಕಾರಕ್ಕೆ, ತನ್ನದೇ ಕಣ್ಗಾವಲಿನಲ್ಲಿ ನಡೆಯುವ ಪ್ರಶ್ನೆ ಪತ್ರಿಕೆಗಳ ಸೋರಿಕೆಯನ್ನು ತಡೆಯಲಾಗುತ್ತಿಲ್ಲ ಎನ್ನುವುದು ಈ ‘ವಿಶ್ವಗುರು’ ಅಭಿಯಾನದ ಅತಿ ದೊಡ್ಡ ವೈಫಲ್ಯ. ಇದು ಕೇವಲ ಬಾಯಿಮಾತಿನ ವಿಶ್ವಗುರು ಪಟ್ಟವೇ ಹೊರತು, ವಾಸ್ತವದಲ್ಲಿ ನಮ್ಮ ವಿದ್ಯಾರ್ಥಿಗಳು ಅಂಧಕಾರದ ಗುಂಡಿಗೆ ತಳ್ಳಲ್ಪಡುತ್ತಿದ್ದಾರೆ. 

“ಪೇಪರ್ ಲೀಕ್ ಮುಕ್ತ ಭಾರತ” ನಿರ್ಮಾಣ ಮಾಡುವುದು ಸರ್ಕಾರದ ಆದ್ಯತೆಯಾಗಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿದರೆ ಮೋದಿ ಸರ್ಕಾರವು ಪರೀಕ್ಷಾ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಮಕ್ಕಳ ಭವಿಷ್ಯವನ್ನು ನೀಟಾಗಿ ಗುಡಿಸಿ ಗುಂಡಾಂತರ ಮಾಡಿರುವ ಈ ವ್ಯವಸ್ಥೆಯು ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಭಾರತದ ಶೈಕ್ಷಣಿಕ ಮೌಲ್ಯಗಳು ಜಾಗತಿಕ ಮಟ್ಟದಲ್ಲಿ ಹಾಸ್ಯಸ್ಪದವಾಗುವುದರಲ್ಲಿ ಸಂಶಯವಿಲ್ಲ.

ಬದಲಾವಣೆ ಕೇವಲ ಪರೀಕ್ಷಾ ದಿನಾಂಕಗಳಲ್ಲಲ್ಲ, ಬದಲಾಗಿ ಆ ಪರೀಕ್ಷೆಯನ್ನು ನಡೆಸುವ ಭ್ರಷ್ಟ ವ್ಯವಸ್ಥೆಯಲ್ಲಿ ಆಗಬೇಕಿದೆ. ಅಲ್ಲಿಯವರೆಗೆ ನಮ್ಮ ದೇಶದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವು ಗಾಳಿಯಲ್ಲಿ ತೂಗುಯ್ಯಾಲೆಯಾಡುತ್ತಲೇ ಇರುತ್ತದೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...