ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಅಂತಿಮ ಹಂತಕ್ಕೆ ತಲುಪಿದೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ನಡುವೆ ಸರಣಿ ಸಮಾಲೋಚನೆಗಳು ನಡೆಯುತ್ತಿವೆ. ಈ ವಾರವೇ ಅಂತಿಮ ಪಟ್ಟಿಗೆ ದೆಹಲಿಯಲ್ಲಿ ಮುದ್ರೆ ಬೀಳುವ ಸಾಧ್ಯತೆ ಇದ್ದು, ಸಚಿವ ಸಂಪುಟ ವಿಸ್ತರಣೆಯೂ ನಡೆಯುವ ನಿರೀಕ್ಷೆಗಳಿವೆ.
ಆದರೆ, ಈ ಬಾರಿ ಸಚಿವ ಸಂಪುಟ ವಿಸ್ತರಣೆ ಕೇವಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯಾಗಿಲ್ಲ. ಬದಲಾಗಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿರುವ ಸೂಚನೆ, ಸಂಪುಟ ವಿಸ್ತರಣೆಯ ಇಡೀ ಲೆಕ್ಕಾಚಾರವನ್ನೇ ಬದಲಿಸಿದೆ. ಪಕ್ಷದ ಮೂಲಗಳ ಪ್ರಕಾರ, ರಾಜ್ಯದ ಸಚಿವ ಸಂಪುಟದಲ್ಲಿ ಸುಮಾರು ಮೂರರಲ್ಲಿ ಎರಡು (2:3) ಭಾಗ ಹೊಸ ಮುಖಗಳಾಗಿರಬೇಕು. ಅಂದರೆ, ಮೊದಲ ಬಾರಿಗೆ ಮಂತ್ರಿ ಹುದ್ದೆ ಪಡೆಯುವವರೇ ಇರಬೇಕು. ಜೊತೆಗೆ ಎಸ್‌ಸಿ, ಎಸ್‌ಟಿ, ಒಬಿಸಿ, ಮಹಿಳೆಯರು ಹಾಗೂ ಪ್ರಾದೇಶಿಕ ಸಮತೋಲನಕ್ಕೂ ಆದ್ಯತೆ ನೀಡಬೇಕು ಎಂದು ರಾಹುಲ್ ಗಾಂಧಿ ತಾಕೀತು ಮಾಡಿದ್ದಾರೆ. ಈ ಎಲ್ಲ ಸಮೀಕರಣಗಳ್ಳುಳ್ಳ ಪಟ್ಟಿಯನ್ನು ಸಿದ್ದಪಡಿಸುವ ಹೊಣೆಯನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರ ಹೆಗಲಿಗೆ ಹೊರಿಸಲಾಗಿದೆ.
ಪ್ರಸ್ತುತ, ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ 136 ಶಾಸಕರ ಬಲವಿದೆ. ಅವರಲ್ಲಿ ಮೂರು, ನಾಲ್ಕು, ಐದು ಹಾಗೂ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಲವು ಹಿರಿಯ ನಾಯಕರಿದ್ದಾರೆ. ಬಿ.ಆರ್ ಪಾಟೀಲ, ಹಂಪನಗೌಡ ಬಾದರ್ಲಿ ಸೇರಿದಂತೆ ಹಲವು ಹಿರಿಯ ಶಾಸಕರು ಮೂರಕ್ಕಿಂತ ಹೆಚ್ಚು ಬಾರಿ ಗೆದ್ದಿದ್ದರೂ ಇದುವರೆಗೆ ಸಚಿವರಾಗುವ ಅವಕಾಶ ಪಡೆದಿಲ್ಲ. ಇಂತಹ ಹಿರಿಯ ಶಾಸಕರ ಸಂಖ್ಯೆ ಎರಡು ಅಂಕೆಯನ್ನು ದಾಟುತ್ತದೆ. ಇಂತಹ ಹಿರಿಯ ಶಾಸಕರಿಗೆ ಅನುಭವ ಮತ್ತು ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು ಎಂಬ ಚರ್ಚೆಗಳು/ಬೇಡಿಕೆಗಳೂ ಇವೆ.
ಇನ್ನೊಂದು ಕಡೆ, ಈಗಾಗಲೇ ಹಲವು ಬಾರಿ ಸಚಿವರಾಗಿರುವ ನಾಯಕರು ಇದ್ದಾರೆ. ಅವರೆಲ್ಲರೂ, ತಮಗೆ ಆಡಳಿತ ನಡೆಸಿದ ಅನುಭವ, ಇಲಾಖೆಗಳ ಮೇಲಿನ ಹಿಡಿತ ಹಾಗೂ ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ನಿರಂತರತೆ ಬೇಕಾದರೆ ಅನುಭವಿ ಸಚಿವರನ್ನೇ ಮುಂದುವರಿಸಬೇಕು. ಆದ್ದರಿಂದ, ತಮಗೇ ಮಣೆ ಹಾಕಬೇಕೆಂದು ಒತ್ತಾಯಿಸುತ್ತಿದ್ದಾರೆ.
ಸದ್ಯ, ಸಚಿವ ಸ್ಥಾನಕ್ಕಾಗಿ ಕಾಯುತ್ತಿರುವವರಲ್ಲಿ ಒಂದು ಕಡೆ ‘ಹಿರಿತನ ಮತ್ತು ಅವಕಾಶ ವಂಚಿತ’ ಎಂಬ ವಾದವಿದ್ದರೆ, ಇನ್ನೊಂದು ಕಡೆ ‘ಆಡಳಿತ ಅನುಭವ’ದ ವಾದವಿದೆ. ಇದರ ಜೊತೆಗೆ ಮೊದಲ ಬಾರಿಗೆ ಸಚಿವರಾಗುವ ನಿರೀಕ್ಷೆಯಲ್ಲಿರುವ ಯುವ ಶಾಸಕರೂ ಇದ್ದಾರೆ. ಈ ಎಲ್ಲರನ್ನೂ ಒಟ್ಟುಗೂಡಿಸಿದರೆ, ಸುಮಾರು 60 ಮಂದಿ ಸಚಿವ ಅಕಾಂಕ್ಷಿಗಳು ಕಾಂಗ್ರೆಸ್‌ನಲ್ಲಿದ್ದಾರೆ.
ಗಮನಾರ್ಹವಾಗಿ, ಸಂವಿಧಾನದ 91ನೇ ತಿದ್ದುಪಡಿಯ ಪ್ರಕಾರ 224 ಸದಸ್ಯರ ಕರ್ನಾಟಕ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ‘ಗರಿಷ್ಠ 34 ಸಚಿವ’ರನ್ನು ನೇಮಿಸುವ ಅವಕಾಶವಿದೆ. ಪ್ರಸ್ತುತ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿ ಸೇರಿದಂತೆ 14 ಮಂದಿ ಮಾತ್ರ ಸಚಿವರಾಗಿದ್ದಾರೆ. ಇನ್ನೂ 20 ಮಂತ್ರಿ ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಈಗ 60 ಮಂದಿ ಆಕಾಂಕ್ಷಿಗಳೂ ಇದ್ದಾರೆ.
ರಾಹುಲ್ ಗಾಂಧಿ ಹೇಳಿದಂತೆ ಸಚಿವ ಸಂಪುಟದಲ್ಲಿ 2:3 (ಮೂರನೇ ಎರಡು ಭಾಗ) ಹೊಸಬರಾಗಿರಬೇಕು. ಅಂದರೆ, ಒಟ್ಟು 34 ಮಂದಿ ಸಚಿವರಲ್ಲಿ, ಕನಿಷ್ಠ 22 ಮಂದಿ ಹೊಸಬರು ಇರಬೇಕು. ಈ ಲೆಕ್ಕಾಚಾರದಲ್ಲಿ ನೋಡಿದರೆ, ಈ ಬಾರಿ ಸಂಪುಟಕ್ಕೆ ಸೇರ್ಪಡೆಯಾಗುವ ಬಹುತೇಕ ಎಲ್ಲ ಸಚಿವರೂ ಮೊದಲ ಬಾರಿಗೆ ಸಚಿವರಾಗುವವರೇ ಆಗಬೇಕಾಗುತ್ತದೆ. ಯಾಕೆಂದರೆ, ಹಾಲಿ ಸಂಪುಟದಲ್ಲಿ ಯತೀಂದ್ರ ಸಿದ್ದರಾಮಯ್ಯರನ್ನು ಹೊರತುಪಡಿಸಿದರೆ, ಉಳಿದ 13 ಮಂದಿ ಸಚಿವರೂ ಈಗಾಗಲೇ ಹಲವು ಬಾರಿ ಸಚಿವರಾಗಿದ್ದವರು. ಆದ್ದರಿಂದ, ಈಗ ಈಗಾಗಲೇ ಮಂತ್ರಿ ಅನುಭವಿಸಿದ್ದ ನಾಯಕರಲ್ಲಿ ಆತಂಕ, ಅಸಮಾಧಾನ ಹೊಗೆಯಾಡಲಾರಂಭಿಸಿದೆ.
ಇದೇ ಸಮಯದಲ್ಲಿ, ಜಾತಿ ಮತ್ತು ಪ್ರಾದೇಶಿಕ ಸಮತೋಲನದ ಬಗ್ಗೆಯೂ ಗಮನ ಹರಿಸಬೇಕಿದೆ. ಎಸ್‌ಸಿ, ಎಸ್‌ಟಿ, ಒಬಿಸಿ, ಲಿಂಗಾಯತ, ವೊಕ್ಕಲಿಗ, ಕುರುಬ, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಪ್ರತಿ ಭಾಗಕ್ಕೂ ಸೂಕ್ತ ಪ್ರಾತಿನಿಧ್ಯ ನೀಡಬೇಕಾಗಿದೆ. ಈ ಲೆಕ್ಕಾಚಾರದಲ್ಲಿ ಒಂದೇ ಜಿಲ್ಲೆಗೆ ನಾಲ್ಕೈದು ಸಚಿವ ಸ್ಥಾನಗಳು ಸಿಕ್ಕರೂ, ಕೆಲವು ಜಿಲ್ಲೆಗಳಿಗೆ ಒಂದೂ ಸ್ಥಾನ ಸಿಗದೇ ಹೋದರೂ ಆಶ್ಚರ್ಯವಿಲ್ಲ. ಆಗ ಪ್ರಾದೇಶಿಕ ಅಸಮಾಧಾನವೂ ಹೆಚ್ಚಾಗುವ ಸಾಧ್ಯತೆ ಇದೆ.
ಈ ಲೇಖನ ಓದಿದ್ದೀರಾ?: SIR | ಕನ್ನಡಿಗರೇ ಎಚ್ಚರ: ಒಂದು ಕೋಟಿ ಮತದಾರರ ಹೆಸರು ಅಳಿಸಿಹೋಗುವ ಅಪಾಯ!
ಈ ಹಿನ್ನೆಲೆಯಲ್ಲಿ ಸುರ್ಜೇವಾಲ ಅವರು ಹಲವು ಸುತ್ತಿನ ಸಮಾಲೋಚನೆಗಳನ್ನು ನಡೆಸಿ, ಒಂದು ಪ್ರಾಥಮಿಕ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಪಟ್ಟಿಯಲ್ಲಿಯೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆಲವು ಹೆಸರುಗಳನ್ನು ಕೈಬಿಡುವ ಮತ್ತು ಸೇರಿಸುವ ಸಾಧ್ಯತೆಗಳಿವೆ. ಈ ಎಲ್ಲ ಕಸರತ್ತುಗಳ ಬಳಿಕ, ಅಂತಿಮ ಪಟ್ಟಿ ರಾಹುಲ್ ಗಾಂಧಿ ಅವರ ಮುಂದೆ ಹೋಗಲಿದೆ. ಪಕ್ಷದ ಹೈಕಮಾಂಡ್, ಪಟ್ಟಿಯನ್ನು ಅಂತಿಮಗೊಳಿಸಿ, ಮುದ್ರೆ ಒತ್ತಲಿದೆ.
ಹೊಸಬರಿಗೆ ಅವಕಾಶ ಇರಬೇಕು ಎಂಬ ರಾಹುಲ್ ಗಾಂಧಿ ಅವರ 2:3 ಸೂತ್ರವು, ಹಿರಿಯರಿಗೆ ಅಸಮಾಧಾನ ಉಂಟುಮಾಡಿದೆ. ಆದ್ದರಿಂದ, ಸಚಿವ ಸಂಪುಟ ವಿಸ್ತರಣೆಯಾದ ನಂತರ ಕಾಂಗ್ರೆಸ್‌ನಲ್ಲಿ ಅಸಮಾಧಾನದ ಅಲೆ ತೀವ್ರವಾಗುವ ಸಾಧ್ಯತೆ ಇದೆ. ಸಚಿವ ಸ್ಥಾನ ಸಿಗದ ಹಿರಿಯ ಶಾಸಕರು, ಮತ್ತೆ ಸಚಿವರಾಗುವ ನಿರೀಕ್ಷೆಯಲ್ಲಿರುವ ಮಾಜಿ ಸಚಿವರು ಹಾಗೂ ಇನ್ನೂ ಹಲವರು ಬಹಿರಂಗವಾಗಿ ಅಸಮಾಧಾನ ಹೊರಹಾಕುವ, ಪ್ರತಿಭಟನೆಗಳನ್ನು ನಡೆಸುವ ಸಾಧ್ಯತೆಗಳಿವೆ. ಪ್ರಸ್ತುತ ಸನ್ನಿವೇಶವನ್ನು ಗಮನಿಸಿದರೆ, ಕೆಲವು ಆಕಾಂಕ್ಷಿಗಳು ಸಚಿವ ಸ್ಥಾನ ದೊರೆಯದೆ, ಶಾಸಕತ್ವಕ್ಕೇ ರಾಜೀನಾಮೆ ಕೊಟ್ಟುಬಿಡುವ ಸಾಧ್ಯತೆಗಳೂ ಇವೆ.
ಇದೆಲ್ಲದ ಅರಿವಿದ್ದರೂ, ಕಾಂಗ್ರೆಸ್ ಹೈಕಮಾಂಡ್, ಪದೇ-ಪದೇ ಕೆಲವರಿಗೆ ಮಾತ್ರವೇ ಮಣೆ ಹಾಕದೆ, ಎಲ್ಲರಿಗೂ ಅವಕಾಶ ನೀಡಬೇಕೆಂಬ ಹೊಸ ಸೂತ್ರವನ್ನು ಬಲವಾಗಿ ಪ್ರತಿಪಾಸಿದಿದೆ. ಸಚಿವ ಸಂಪುಟ ವಿಸ್ತರಣೆ ಕೇವಲ 20 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯಲ್ಲ. ಇದು ಕಾಂಗ್ರೆಸ್ ಸರ್ಕಾರದ ಆಂತರಿಕ ಶಕ್ತಿ ಸಮತೋಲನ, ಜಾತಿ-ಪ್ರಾದೇಶಿಕ ಪ್ರತಿನಿಧಿತ್ವ, ತಲೆಮಾರಿನ ಬದಲಾವಣೆ ಹಾಗೂ ಪಕ್ಷದ ಸಂಘಟನಾ ರಾಜಕಾರಣವನ್ನು ಬದಲಾಯಿಸುವ ಉದ್ದಿಷ್ಯವನ್ನೂ ಹೊಂದಿದೆ. ಆದ್ದರಿಂದ, ಸಚಿವ ಸಂಪುಟ ವಿಸ್ತರಣೆ ಮುಗಿದ ನಂತರವೇ ಕಾಂಗ್ರೆಸ್ ಸರ್ಕಾರದ ನಿಜವಾದ ರಾಜಕೀಯ ಪರೀಕ್ಷೆಯೂ ಆರಂಭವಾಗಲಿದೆ!



