ಗದಗ ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಮಳೆಯಾಗದೆ, ಕೃಷಿ ಚಟುವಟಿಕೆಗಳು ಕುಂಠಿತಗೊಂಡು ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬರಗಾಲದ ಛಾಯೆ ಆವರಿಸಿದ ಪರಿಣಾಮ ಹಸಿರಿನಿಂದ ಕಂಗೊಳಿಸಬೇಕಿದ್ದ ಬೆಳೆಗಳು ಒಣಗುವ ಹಂತಕ್ಕೆ ತಲುಪಿವೆ. ಬಿತ್ತಿದ ಬೀಜಗಳು ಮೊಳಕೆಯೊಡೆಯದೆ ಕಣ್ಣ ಮುಂದೆಯೇ ಬಾಡುತ್ತಿವೆ. ಬಿತ್ತನೆ ಭೂಮಿ ತೇವಾಂಶವಿಲ್ಲದೆ ಒಣಗುತ್ತಿದ್ದು, ರೈತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.
ಕೃಷಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ, ಕೃಷಿ ಪ್ರಧಾನ ಜಿಲ್ಲೆ ಗದಗದ ರೈತರು ಈ ಬಾರಿ ಮುಂಗಾರು ಮಳೆ ವಾಡಿಕೆಯಷ್ಟು ಆಗಿಲ್ಲ ಎಂದು ಹೇಳುತ್ತಾರೆ. ಜುಲೈ ಮೊದಲ ವಾರ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆ ಮಾಡಲಾಗಿತ್ತು. ಸದ್ಯ ಮಳೆ ಕೊರತೆ ಕಾಡುತ್ತಿದ್ದು, ಜಿಲ್ಲೆಯಲ್ಲಿ 121.4 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. 82.50 ಮಿ.ಮೀ. ಮಾತ್ರ ಮಳೆಯಾಗಿದ್ದು, ಶೇ. -32.04 ರಷ್ಟು ಮಳೆ ಕೊರತೆಯಾಗಿದೆ. ಪರಿಣಾಮ ರೈತರು ಬಿತ್ತಿದ ಬೆಳೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಜಿಲ್ಲೆಯಲ್ಲಿ 2026-2027ರ ಮುಂಗಾರು ಹಂಗಾಮಿನಲ್ಲಿ 3,13,719 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಈಗಾಗಲೇ 2,57,401 ಹೆಕ್ಟೇರ್ (ಶೇ. 82.05) ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಮೆಕ್ಕೆಜೋಳ, ಹೆಸರು, ಹತ್ತಿ, ಶೇಂಗಾ, ಉದ್ದು, ಉಳ್ಳಾಗಡ್ಡಿ, ಮೆಣಸಿನಕಾಯಿ ಹಾಗೂ ಸೂರ್ಯಕಾಂತಿ ಪ್ರಮುಖ ಬೆಳೆಗಳನ್ನು ಬಿತ್ತಲಾಗಿದೆ. ಹೆಸರು ಬಿತ್ತನೆಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿದೆ. ನರಗುಂದ ತಾಲೂಕಿನಲ್ಲಿ ಮಲಪ್ರಭಾ ನದಿಗೆ ನಿರ್ಮಿಸಲಾದ ನವಿಲುತೀರ್ಥ ಜಲಾಶಯದಿಂದ ನರಗುಂದ ತಾಲೂಕಿನ ಕೃಷಿ ಭೂಮಿಗೆ ನೀರುಣಿಸುವ ಪ್ರಮುಖ ನೀರಾವರಿ ಕಾಲುವೆಯಾಗಿದೆ. ಆದರೆ ನವಿಲುತೀರ್ಥಕ್ಕೆ ಹೆಚ್ಚು ನೀರು ಬರುವ ಯಾವುದೇ ಮುನ್ಸೂಚನೆಗಳು ಕಾಣುತ್ತಿಲ್ಲ. ರೈತರು ಬಿತ್ತಿ ಬೆಳೆದ ಬೆಳೆಗಳು ಬಾಡುತ್ತಿರುವುದನ್ನು ಕಂಡು ಕಣ್ಣೀರು ಹಾಕುತ್ತಿದ್ದಾರೆ.
ರೈತರು ಸಾಲ ಮಾಡಿ ಹೊಲದಲ್ಲಿ ಬಿತ್ತನೆ ಮಾಡುತ್ತಾರೆ. ಬೀಜ, ಗೊಬ್ಬರ, ಬಿತ್ತನೆ ಖರ್ಚು, ಕಳೆ ತೆಗೆಯುವುದು ಸೇರಿದಂತೆ ಒಂದು ಎಕರೆಗೆ ಮೂವತ್ತರಿಂದ ನಲವತ್ತು ಸಾವಿರ ರೂಪಾಯಿ ಖರ್ಚಾಗುತ್ತದೆ. ಈ ಸಲ ಮಳೆ ಕೊರತೆಯಿಂದ ಬೆಳೆದ ಬೆಳೆ ಬಾಡುತ್ತಿದ್ದು, ಇಳುವರಿ ಆಗುವ ಭರವಸೆಯನ್ನೇ ಕಳೆದುಕೊಳ್ಳುವ ಆತಂಕ ಮನೆಮಾಡಿದೆ.
ನರಗುಂದ ತಾಲೂಕಿನ ಹದಲಿ, ಬೈರನಹಟ್ಟಿ, ಕಲಕೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆದ ಬೆಳೆಯನ್ನು ಕಾಪಾಡಿಕೊಳ್ಳಲು ಪಡಬಾರದ ಸಾಹಸ ಪಡುತ್ತಿದ್ದಾರೆ. ಪಟ್ಟಣ ಹಾಗೂ ಗ್ರಾಮೀಣ ಭಾಗದ ಕೊಳವೆಬಾವಿ, ಊರಿನ ಸಮೀಪದ ಕೆರೆ ನೀರನ್ನು 1000ದಿಂದ 12000 ರೂ ಕೊಟ್ಟು ಟ್ಯಾಂಕರ್ ಮೂಲಕ ತರಿಸಿಕೊಂಡು ಹಾಯಿಸುತ್ತಾರೆ. ಹೀಗೆ ಒಂದು ಎಕರೆಗೆ ಟ್ಯಾಂಕರ್ ನೀರು ಹಾಯಿಸಲು 9ರಿಂದ 10 ಸಾವಿರ ರೂಪಾಯಿ ಖರ್ಚಾಗುತ್ತದೆ ಎಂದು ರೈತರು ಹೇಳುತ್ತಾರೆ.
ಈದಿನ.ಕಾಮ್ ಜೊತೆಗೆ ರೈತ ವಿಠ್ಠಲ್ ಜಾದವ್ ಮಾತನಾಡಿ, “ನಮ್ಮ ನರಗುಂದ ಭಾಗದಲ್ಲಿ ಬಹಳವೇ ಮಳೆ ಕೊರತೆ ಇದೆ. ಇಳುವರಿ ಕಾಣುವ ಭರವಸೆ ಇಲ್ಲ. ಹೀಗಾಗಿ ಹತ್ತಿ, ಮೆಣಸಿನಕಾಯಿ ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟ ಪಡುತ್ತಿದ್ದೇವೆ. ನೀರಿನ ಟ್ಯಾಂಕರ್ ಮೂಲಕ ಹೊಲಗಳಿಗೆ ನೀರು ಹಾಯಿಸುತ್ತಿದ್ದೇವೆ. ಒಂದು ಟ್ಯಾಂಕರ್ ನೀರು ತುಂಬಿಸಿಕೊಂಡು ಹೊಲ ಮುಟ್ಟಬೇಕಾದರೆ ಒಂದು ಸಾವಿರ ಖರ್ಚಾಗುತ್ತದೆ. ಹಾಗೆ ಒಂದು ಎಕರೆಗೆ ಟ್ಯಾಂಕರ್ ಮೂಲಕ ನೀರು ತರಿಸಿದರೆ ಒಂಬತ್ತರಿಂದ ಹತ್ತು ಸಾವಿರ ಖರ್ಚಾಗುತ್ತದೆ. ಇಷ್ಟೆಲ್ಲ ಖರ್ಚು ಮಾಡಿ ಉತ್ತಮ ಬೆಲೆ ಸಿಕ್ಕರೆ ಸರಿ, ಇಲ್ಲದಿದ್ದರೆ ಮತ್ತೆ ಸಾಲಗಾರನಾಗಿ ಬದುಕುವ ಪರಿಸ್ಥಿತಿ ಬರುತ್ತದೆ” ಎಂದು ಸಂಕಟ ವ್ಯಕ್ತಪಡಿಸಿದರು.
ಮಾರುಕಟ್ಟೆಯಲ್ಲಿ ಬೆಳೆದ ಬೆಳೆಗೆ ಉತ್ತಮ ಬೆಲೆ ಬರುತ್ತದೆ ಎಂಬ ಭರವಸೆಯಲ್ಲಿ ರೈತರು, ಮಳೆ ಕೊರತೆಯಿಂದ ಬಾಡುತ್ತಿರುವ ಬೆಳೆಗಳನ್ನು ಹೇಗಾದರೂ ಮಾಡಿ ಬೆಳೆಯನ್ನು ಉಳಿಸಿಕೊಳ್ಳಲು ಸಾಲ ಮಾಡಿ ಬಾಡಿಗೆ ಟ್ಯಾಂಕರ್ ಮೂಲಕ ನೀರನ್ನು ಹಾಯಿಸುತ್ತಿದ್ದಾರೆ. ಇಂತಹ ಬರಗಾಲ ಪರಿಸ್ಥಿತಿಯಲ್ಲಿ ಸರ್ಕಾರ ರೈತರ ಬೆನ್ನಿಗೆ ನಿಂತು, ಭರವಸೆ ನೀಡಬೇಕಿದೆ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.



