ಬಿಜೆಪಿ ಪ್ರಭಾವದಲ್ಲಿ ಬಿರುಕು, ಕುಂದುತ್ತಿದೆ ಮೋದಿ ವರ್ಚಸ್ಸು; ಪ್ರತಿಪಕ್ಷಗಳಿಗೆ ಅಪರೂಪದ ಅವಕಾಶ!

Date:

ಜಂತರ್‌ ಮಂತರ್‌ನಲ್ಲಿ ಯುವಜನರ ಆಕ್ರೋಶದಿಂದ ಆರಂಭವಾದ ಆಡಳಿತ ವಿರೋಧಿ ಅಲೆ ಈಗ ಸಂಸತ್ತಿನವರೆಗೂ ತಲುಪಿದೆ. NEET ಪೇಪರ್‌ ಲೀಕ್‌, ನಿರುದ್ಯೋಗ, ಶಿಕ್ಷಣ, ವಿದ್ಯಾರ್ಥಿಗಳ ಮೇಲಿನ ಪೊಲೀಸ್‌ ಕ್ರಮದಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ನಿಂತ ಪ್ರತಿಪಕ್ಷಗಳು ನಡೆಸಿದ ನ್ಯಾಯಯುತ ಹೋರಾಟ ಮುಂಗಾರು ಅಧಿವೇಶನದ ಕಲಾಪಗಳನ್ನು ಅಸ್ತವ್ಯಸ್ತಗೊಳಿಸಿದ್ದಲ್ಲದೆ, ಕ್ಷೇತ್ರ ಮರುವಿಂಗಡಣೆ, ‘ಒಂದು ದೇಶ-ಒಂದು ಚುನಾವಣೆ’, ವಿಕಸಿತ ಭಾರತ ಸೇರಿದಂತೆ ಸರ್ಕಾರದ ಹಲವು ಪ್ರಮುಖ ಮಸೂದೆಗಳಿಗೂ ತಡೆ ಒಡ್ಡಿದೆ. ಈ ಬೆನ್ನಲ್ಲೇ ಬಾಂಕಿಪುರ ಸೇರಿದಂತೆ ಉಪಚುನಾವಣೆಗಳಲ್ಲಿನ ಬಿಜೆಪಿಯ ಹಿನ್ನಡೆ, ನಗರ ಮಧ್ಯಮ ವರ್ಗ ಹಾಗೂ ಯುವ ಮತದಾರರಲ್ಲಿ ಹೆಚ್ಚುತ್ತಿರುವ ಅಸಮಾಧಾನ ಮತ್ತು ‘ಡಬಲ್‌ ಎಂಜಿನ್‌’ ಬೂಟಾಟಿಕೆಗಳು ಬಿಜೆಪಿಯ 2027ರ ವಿಧಾನಸಭಾ ಚುನಾವಣೆಗಳು ಹಾಗೂ 2029ರ ಲೋಕಸಭಾ ಚುನಾವಣಾ ಹಾದಿಗೆ ಮುಳ್ಳಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

- Advertisement -

2024ರ ಲೋಕಸಭಾ ಚುನಾವಣೆಯ ಬಳಿಕ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಭಾರೀ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿಗೆ ಇತ್ತೀಚಿನ ಬೆಳವಣಿಗೆಗಳು ಅಷ್ಟೊಂದು ಸಮಾಧಾನಕರವಾಗಿಲ್ಲ. ಯುವಜನರ ನಿರುದ್ಯೋಗ, ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ, ಶಿಕ್ಷಣ ವ್ಯವಸ್ಥೆಯ ಕುರಿತ ಅಸಮಾಧಾನ, ಹಣದುಬ್ಬರ ಮತ್ತು ಆಡಳಿತದ ಮೇಲಿನ ಬೇಸರದಂತಹ ಹಲವು ವಿಚಾರಗಳು ನಿಧಾನವಾಗಿ ಚುನಾವಣಾ ರಾಜಕೀಯದ ಕೇಂದ್ರಕ್ಕೆ ಬರುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಪರಿಣಾಮವಾಗಿ ಮುಂಗಾರು ಅಧಿವೇಶನದ ಬಹುತೇಕ ಅವಧಿ ಪ್ರತಿಭಟನೆ, ಗದ್ದಲ ಮತ್ತು ರಾಜಕೀಯ ಸಂಘರ್ಷದಲ್ಲೇ ಮುಗಿದುಹೋಯಿತು. ಅಯೋಧ್ಯೆ ರಾಮಮಂದಿರದ ದೇಣಿಗೆ ಕಳ್ಳತನದ ಆರೋಪದ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಮತ್ತು ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧದ ಪೊಲೀಸ್‌ ಕ್ರಮದ ಕುರಿತು ಗೃಹ ಸಚಿವ ಅಮಿತ್‌ ಶಾ ಹೇಳಿಕೆ ನೀಡಬೇಕು ಎಂಬ ಬೇಡಿಕೆಯಲ್ಲಿ ಪ್ರತಿಪಕ್ಷ ಪಟ್ಟು ಹಿಡಿಯಿತು. ಕಾಂಗ್ರೆಸ್‌ ನಾಯಕ ಕೆ.ಸಿ. ವೇಣುಗೋಪಾಲ್‌ ಆರೋಪಿಸಿರುವಂತೆ, ಮೋದಿ ಮತ್ತು ಶಾ ಅವರು ಅಧಿವೇಶನದ ಬಹುತೇಕ ದಿನಗಳಲ್ಲಿ ಸಂಸತ್ತಿನ ಕಲಾಪಕ್ಕೆ ಹಾಜರಾಗದೆ ದೂರ ಉಳಿದರು. ಈ ಆರೋಪಗಳ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಏನೇ ಇರಲಿ, ಪ್ರಮುಖ ರಾಜಕೀಯ ಪ್ರಶ್ನೆಗಳಿಗೆ ಪ್ರಧಾನಿ ಮತ್ತು ಗೃಹ ಸಚಿವರು ಸದನದೊಳಗೆ ಉತ್ತರಿಸಬೇಕೆಂಬ ಪ್ರತಿಪಕ್ಷದ ಒತ್ತಡ ಮಾತ್ರ ಕಡಿಮೆಯಾಗಲಿಲ್ಲ. ಕೊನೆಗೆ ಅಧಿವೇಶನ ಮುಗಿಯುವ ಒಂದು ದಿನ ಮೊದಲು ಅಮಿತ್‌ ಶಾ ಅವರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಸಂಬಂಧಿಸಿದ ವಿಚಾರದಲ್ಲಿ ಮಾತನಾಡಲು ಸಿದ್ಧ ಎಂದು ತಿಳಿಸಬೇಕಾಯಿತು.

ಇದರ ಇನ್ನೊಂದು ಮುಖ ಬಿಜೆಪಿಯ ಆಂತರಿಕ ರಾಜಕೀಯದಲ್ಲಿನ ಬಿರುಕು. ಪಕ್ಷ ವಿಸ್ತರಣೆಯ ಹೆಸರಿನಲ್ಲಿ OBC–ದಲಿತ ಮತಗಳತ್ತ ತಿರುಗಿದ ನಂತರ, ತನ್ನ ಹಳೆಯ ಮೇಲ್ಜಾತಿ, ನಗರ ಮಧ್ಯಮ ವರ್ಗದ ನೆಲೆಯೊಂದಿಗೆ ಹೊಂದಾಣಿಕೆ ಸಾಧಿಸುವಲ್ಲಿ ಬಿಜೆಪಿ ಎಡವುತ್ತಿದೆ. ಬಾಂಕಿಪುರದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಿತಿನ್‌ ನಬಿನ್‌ ಅವರೇ ಪ್ರತಿನಿಧಿಸಿದ್ದ ಕ್ಷೇತ್ರ ಸೋತಿರುವುದು ಈ ವೈರುಧ್ಯವನ್ನು ಇನ್ನಷ್ಟು ಎದ್ದು ಕಾಣುವಂತೆ ಮಾಡಿದೆ. ಮೇಲಿನಿಂದ ಹೇರಲ್ಪಡುವ ನಾಯಕತ್ವ ಮತ್ತು ತಳಮಟ್ಟದ ಕಾರ್ಯಕರ್ತರ ನಡುವಿನ ಅಂತರ ಹೆಚ್ಚಾದರೆ, ಮೋದಿ ಹೆಸರಿನ ಬ್ರ್ಯಾಂಡ್‌ ಮಾತ್ರ ಚುನಾವಣಾ ಯಂತ್ರವನ್ನು ಎಳೆಯುತ್ತದೆ ಎಂಬ ಲೆಕ್ಕಾಚಾರವೂ ಹೆಚ್ಚು ಕಾಲ ಕೆಲಸ ಮಾಡದು.

ಇದರ ಜೊತೆಗೆ ತಳಮಟ್ಟದ ಸಂಘಟನೆಯಲ್ಲಿನ ಅಸಮಾಧಾನ ಮತ್ತು ಶಿಸ್ತಿನ ಕೊರತೆ ಬಿಜೆಪಿಗೆ ಇನ್ನಷ್ಟು ಅಪಾಯಕಾರಿ ಸೂಚನೆ ನೀಡಿದೆ. ಮಧ್ಯಪ್ರದೇಶದ ದತಿಯಾದಲ್ಲಿ ಸ್ಥಳೀಯ ಪ್ರಭಾವಿ ನಾಯಕ ನರೋತ್ತಮ್‌ ಮಿಶ್ರಾ ಅವರಿಗೆ ಟಿಕೆಟ್‌ ನಿರಾಕರಿಸಿದ ಬಳಿಕ ಕಾರ್ಯಕರ್ತರ ಆಕ್ರೋಶ ಬಹಿರಂಗ ಪ್ರತಿಭಟನೆ ಹಾಗೂ ರಸ್ತೆ ತಡೆವರೆಗೂ ತಲುಪಿತು. ಒಮ್ಮೆ ಕಾರ್ಯಕರ್ತರೇ ಬಿಜೆಪಿಯ ಚುನಾವಣಾ ಯಂತ್ರದ ನಿಜವಾದ ಶಕ್ತಿಯಾಗಿದ್ದರು; ಈಗ ನಿರ್ಧಾರಗಳು ಮೇಲಿನಿಂದ ಬರುತ್ತವೆ, ಸೋಲಿನ ಹೊಣೆ ಮಾತ್ರ ಕೆಳಗಿನವರ ಮೇಲೆ ಬೀಳುತ್ತದೆ ಎಂಬ ಅಸಮಾಧಾನ ಬೆಳೆದರೆ, ಪಕ್ಷದ ‘ಕ್ಯಾಡರ್‌ ಪಾರ್ಟಿ’ ಎಂಬ ಹಳೆಯ ಬಲವೇ ದುರ್ಬಲವಾಗಲಿದೆ. ನಾಯಕತ್ವದ ಕೇಂದ್ರೀಕರಣ ಎಷ್ಟೇ ಬಲವಾಗಿದ್ದರೂ, ಮತಗಟ್ಟೆಯ ದಿನ ಮತದಾರನನ್ನು ಮನೆಬಾಗಿಲಿನಿಂದ ಮತಗಟ್ಟೆಗೆ ಕರೆತರುವ ಕಾರ್ಯಕರ್ತನ ವಿಶ್ವಾಸ ಕಳೆದುಕೊಂಡರೆ ಯಾವುದೇ ‘ಬ್ರ್ಯಾಂಡ್‌’ ಗೆಲುವನ್ನು ಖಚಿತಪಡಿಸಲಾರದು ಎನ್ನುತ್ತವೆ ಹಲವು ವಿಶ್ಲೇಷಣೆಗಳು.

ಇದೇ ಹಿನ್ನೆಲೆಯಲ್ಲೇ ಬಿಜೆಪಿಗೆ ಇನ್ನೊಂದು ದೊಡ್ಡ ಸವಾಲು ಎದುರಾಗುತ್ತಿರುವುದು ‘ಹಿಂದುತ್ವ-ವಿರೋಧಿ ಹಿಂದುತ್ವ’ ಎಂಬ ಹಳೆಯ ದ್ವಿಧ್ರುವೀಯ ರಾಜಕಾರಣದಾಚೆ ಪರ್ಯಾಯಗಳು ರೂಪುಗೊಳ್ಳುತ್ತಿರುವುದು. ಬಾಂಕಿಪುರದಲ್ಲಿ ಪ್ರಶಾಂತ್‌ ಕಿಶೋರ್‌ ಅವರ ಜನಸುರಾಜ್‌ ಗೆಲುವು, ದತಿಯಾದ ಫಲಿತಾಂಶ ಮತ್ತು ಗುಜರಾತ್‌ನ ಮಂಜಲ್ಪುರದಲ್ಲಿ ಬಿಜೆಪಿ ಗೆದ್ದರೂ ಮತದ ಪ್ರಮಾಣದಲ್ಲಿ ಕಂಡಿರುವ ಕುಸಿತ.. ಇವೆಲ್ಲವೂ ನೀಡಿರುವುದು ಒಂದೇ ಸಂದೇಶ. ಇದು ಮತದಾರರು ಬಿಜೆಪಿಗೆ ಪರ್ಯಾಯವಿಲ್ಲ ಎಂಬ ಮನಸ್ಥಿತಿಯಿಂದ ನಿಧಾನವಾಗಿ ಹೊರಬರುತ್ತಿದ್ದಾರೆ ಎಂಬುದನ್ನು ತೋರಿಸುತ್ತಿದೆ. ‘ಡಬಲ್‌ ಎಂಜಿನ್‌’ ಸರ್ಕಾರದ ಘೋಷಣೆ ಬ್ರ್ಯಾಂಡಿಂಗ್‌ನ ಸಾಧನವಾಗಿ ಮಾತ್ರ ಉಳಿದರೆ ಅದರ ಪರಿಣಾಮವೂ ಸೀಮಿತವಾಗಲಿದೆ. ಯುವಜನರ ಆಕ್ರೋಶದ ಹಿಂದೆ ಆಡಳಿತದ ದುರಹಂಕಾರ, ಕೇಂದ್ರದ ಅತಿಯಾದ ಹಸ್ತಕ್ಷೇಪ ಮತ್ತು ಸ್ಥಳೀಯ ಸಮಸ್ಯೆಗಳ ನಿರ್ಲಕ್ಷ್ಯವೂ ಇದೆ. ಹೀಗಾಗಿ ಜಂತರ್‌ ಮಂತರ್‌ನಲ್ಲಿ ಆರಂಭವಾದ ಅಸಮಾಧಾನ ಒಂದೆರಡು ವಿಷಯಗಳ ಕುರಿತು ಮಾತ್ರವಲ್ಲ, ಬಿಜೆಪಿ ತಾನೇ ಒಂದೊಂದಾಗಿ ನಿರ್ಮಿಸಿಕೊಂಡ ಹುಸಿ ʼಜಾಹೀರಾತುʼಗಳ ಪರಿಣಾಮ.

ಬಿಜೆಪಿಯ ಸಂಕಷ್ಟಕ್ಕೆ ಮತ್ತೊಂದು ಕಾರಣವೆಂದರೆ, ಸೋಲಿನ ಹೊಣೆಗಾರಿಕೆಯನ್ನು ಕೆಳಮಟ್ಟದ ಕಾರ್ಯಕರ್ತರತ್ತ ತಳ್ಳುವ, ಗೆಲುವಿನ ಶ್ರೇಯಸ್ಸನ್ನು ಮಾತ್ರ ಕೇಂದ್ರ ನಾಯಕತ್ವಕ್ಕೆ ನೀಡುವ ಸಂಸ್ಕೃತಿ. ಫಲಿತಾಂಶ ಕೈಕೊಟ್ಟಾಗ ಅಭ್ಯರ್ಥಿ, ರಾಜ್ಯ ನಾಯಕತ್ವ ಅಥವಾ ಸ್ಥಳೀಯ ಸಂಘಟನೆಯೇ ಹೊಣೆಗಾರವಾಗುವ ಪರಿಸ್ಥಿತಿ ಪಕ್ಷದೊಳಗಿನ ಅಸಮಾಧಾನವನ್ನು ಗಾಢಗೊಳಿಸುತ್ತಿದೆ. ದತಿಯಾದಿಂದ ಬಾಂಕಿಪುರದವರೆಗೆ ಕಾಣಿಸಿಕೊಂಡ ಕಾರ್ಯಕರ್ತರ ಆಕ್ರೋಶ ಇದಕ್ಕೆ ಉದಾಹರಣೆ. ತಳಮಟ್ಟದ ಕ್ಯಾಡರ್‌ ಕುಗ್ಗಿದರೆ, ಚುನಾವಣಾ ಯಂತ್ರದ ಮೇಲೆ ಮೋದಿ ಹೆಸರಿನ ಪ್ರಭಾವವೂ ಅನಂತವಲ್ಲ.

ಇದನ್ನೂ ಓದಿ: ಕಪ್ಪು-ಕೆಂಪು ಸಮುದ್ರಗಳಿಗೆ ಯಾಕೆ ಆ ಹೆಸರುಗಳು ಬಂದವು? ಹೋರ್ಮುಜ್ ಬಳಿಕ ಇವುಗಳ ನಿಯಂತ್ರಣಕ್ಕೆ ಯಾಕಾಗಿ ಪೈಪೋಟಿ ನಡೆದಿದೆ?

ಈ ಹಿನ್ನಡೆಯನ್ನು ಕೇವಲ ಕೆಲವು ಕ್ಷೇತ್ರಗಳ ಉಪಚುನಾವಣೆ ಸೋಲು ಅಥವಾ ಸಂಸತ್ತಿನ ಗದ್ದಲಕ್ಕೆ ಸೀಮಿತಗೊಳಿಸುವುದು ಬಿಜೆಪಿಗೆ ತಾನೇ ತಾನಾಗಿ ಮಾಡಿಕೊಳ್ಳುವ ಸುಳ್ಳು ಸಮಾಧಾನ. ದಶಕಗಳಿಂದ ನಗರ, ವಿದ್ಯಾವಂತ, ಮೇಲ್ಜಾತಿ ಹಾಗೂ ಮಧ್ಯಮ ವರ್ಗದ ಮತದಾರರನ್ನು ತನ್ನ ಸೈದ್ಧಾಂತಿಕ ಬೆನ್ನೆಲುಬಾಗಿ ಕಟ್ಟಿಕೊಂಡಿದ್ದ ಪಕ್ಷ, ಈಗ ಅದೇ ವರ್ಗದ ಕೆಲವು ಭಾಗಗಳಲ್ಲಿ ವಿರೋಧ ಎದುರಿಸುತ್ತಿದೆ. ನಿರುದ್ಯೋಗ, ನೇಮಕಾತಿ ಪರೀಕ್ಷೆಗಳ ಅಕ್ರಮ, ಶಿಕ್ಷಣದ ಅವ್ಯವಸ್ಥೆ ಮತ್ತು ಆಡಳಿತದ ಮೇಲಿನ ಅಸಮಾಧಾನಗಳು ಯುವ ಮತದಾರರನ್ನು ಮಾತ್ರವಲ್ಲ, ಬಿಜೆಪಿಯ ಸಾಂಪ್ರದಾಯಿಕ ನಗರ ಮಧ್ಯಮ ವರ್ಗವನ್ನೂ ಕಾಡತೊಡಗಿವೆ. ಜಂತರ್‌ ಮಂತರ್‌ನಲ್ಲಿ ಯುವಕರು ಎತ್ತಿದ ಪ್ರಶ್ನೆಗಳು ಎಲ್ಲಾ ರಾಜ್ಯಗಳ ಮತಪೆಟ್ಟಿಗೆಯವರೆಗೂ ಬಂದರೆ, ಹಿಂದುತ್ವದ ರಾಜಕಾರಣವೊಂದೇ ಸಾಕು ಎಂಬ ಬಿಜೆಪಿಯ ಲೆಕ್ಕಾಚಾರವನ್ನು ತಲೆಕೆಳಗು ಮಾಡಲಿದೆ.

ಬಿಜೆಪಿಯ ಹಾಗೂ ಮೋದಿಯ ವರ್ಚಸ್ಸಿನ ಧಕ್ಕೆಗೆ ಕಾರಣವಾಗುತ್ತಿರುವ ಮತ್ತೊಂದು ಪ್ರಮುಖ ಅಂಶ ಯುವಜನರ ಆಕ್ರೋಶವನ್ನು ಅರ್ಥಮಾಡಿಕೊಳ್ಳುವ ಬದಲು, ಅವರನ್ನೇ ಅವಮಾನಿಸಿದ್ದು. NEET ಮತ್ತು ನೇಮಕಾತಿ ಅಕ್ರಮಗಳ ವಿರುದ್ಧ ಬೀದಿಗಿಳಿದ ಯುವಕರ ಪ್ರಶ್ನೆಗಳಿಗೆ ಉತ್ತರಿಸುವ ಬದಲು, ಪ್ರತಿಭಟನೆಯನ್ನು ತಳ್ಳಿಹಾಕುವ ಮತ್ತು ಯುವಜನರನ್ನೇ ಗುರಿಯಾಗಿಸುವ ಹೇಳಿಕೆಗಳು ಬಿಜೆಪಿಗೆ ರಾಜಕೀಯವಾಗಿ ದುಬಾರಿಯಾದವು. ಕಾಕ್ರೋಚ್‌ ಚಳವಳಿ ಆರಂಭವಾಗಿದ್ದೇ ನಿರುದ್ಯೋಗಿ ಯುವಕರನ್ನು ‘ಕಾಕ್ರೋಚ್‌’ಗಳಿಗೆ ಹೋಲಿಸಿದ ಹೇಳಿಕೆಯ ವಿರುದ್ಧ. “Gen Z ಗಳನ್ನು ದಾರಿ ತಪ್ಪಿಸಲಾಗಿದೆ” ಎಂಬ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಇತ್ತೀಚಿನ ಹೇಳಿಕೆ, ಪ್ರತಿಭಟನಾಕಾರರ ಅಸಮಾಧಾನವನ್ನು ಹೆಚ್ಚಿಸಿತು. ಇದೇ ವೇಳೆ, ಸಂಸದೆ ಕಂಗನಾ ರಣಾವತ್‌ ಪ್ರತಿಭಟನಾಕಾರರನ್ನು ‘Generation Gutter’ ಎಂದು ಕರೆದ ವಿವಾದವೂ ಯುವಜನರ ಆಕ್ರೋಶಕ್ಕೆ ಮತ್ತಷ್ಟು ಪೆಟ್ರೋಲ್‌ ಸುರಿಯಿತು. ಸರ್ಕಾರದ ವಿರುದ್ಧ ಪ್ರಶ್ನೆ ಕೇಳಿದ ಯುವಕರನ್ನು ದೇಶದ್ರೋಹಿ, ದಾರಿ ತಪ್ಪಿದವರು ಅಥವಾ ಕೆಲಸವಿಲ್ಲದವರು ಎಂದು ಬಿಂಬಿಸುವ ಪಕ್ಷದ ನಾಯಕರ ಪ್ರತಿಯೊಂದು ಹೇಳಿಕೆಯೂ ಬಿಜೆಪಿ ತನಗೆ ತಾನೇ ಇರಿದುಕೊಳ್ಳುವಂತೆ ಮಾಡಿತು.

ದೇಶದಾದ್ಯಂತ ವಿದ್ಯಾರ್ಥಿಗಳು NEET ಅಕ್ರಮ, ನಿರುದ್ಯೋಗ ಮತ್ತು ಪರೀಕ್ಷಾ ವ್ಯವಸ್ಥೆಯ ವೈಫಲ್ಯಗಳ ಬಗ್ಗೆ ಉತ್ತರ ಕೇಳುತ್ತಿದ್ದಾಗ, ಸರ್ಕಾರ ಹೊಣೆಗಾರಿಕೆ ಹೊತ್ತು ಪ್ರತಿಕ್ರಿಯಿಸಬೇಕಿತ್ತು. ಆದರೆ ಪ್ರತಿಭಟನೆಯಲ್ಲಿ ಮೋದಿ ಹಾಗೂ ಅವರ ತಾಯಿಯ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಕೆಯಾದ ವಿಚಾರ ಮುಖ್ಯವಾಯಿತು. ಬಳಿಕ ಮೋದಿ ಅವರು ವಿಡಿಯೋ ಸಂದೇಶದಲ್ಲಿ ಪ್ರತಿಭಟನಾಕಾರರನ್ನು ‘ದಾರಿ ತಪ್ಪಿದ ಮಕ್ಕಳು’ ಎಂದು ಕರೆದು, ಅವರನ್ನು ತಾವೇ ಕ್ಷಮಿಸುವುದಾಗಿ ಹೇಳಿಕೆ ಕೊಟ್ಟರು. ಇದು ಲೆಕ್ಕಾಚಾರ ತಲೆಕೆಳಗಾದದ್ದು ಇಲ್ಲೇ. ಪ್ರಶ್ನೆಗೆ ಉತ್ತರ ಕೊಡಿ ಎಂದು ಕೇಳಿದ ವಿದ್ಯಾರ್ಥಿಗಳಿಗೆ ಪ್ರಧಾನಿಯವರು, “ನಾನು ನಿಮ್ಮನ್ನು ಕ್ಷಮಿಸುತ್ತೇನೆ” ಎಂದರು. ದೇಶಾದ್ಯಂತ ಭಾರೀ ಟೀಕೆಗೆ ಗುರಿಯಾಯಿತು. ಕಾಂಗ್ರೆಸ್‌ನ ಸುಪ್ರಿಯಾ ಅವರಿಂದ ಹಿಡಿದು ರಾಹುಲ್‌ ಗಾಂಧಿವರೆಗೆ ಪ್ರತಿಪಕ್ಷ ಇದೇ ಅಂಶವನ್ನು ಹಿಡಿದುಕೊಂಡಿತು. “ಯುವಕರು ಕ್ಷಮೆ ಕೇಳಬೇಕಾದವರಲ್ಲ, ಸರ್ಕಾರವೇ ಉತ್ತರ ಕೊಡಬೇಕು” ಎಂಬ ಬೇಡಿಕೆಯನ್ನು ಮುಂದಿಟ್ಟಿತು. ಸರ್ಕಾರದ ವಿರುದ್ಧದ ಅಸಮಾಧಾನವನ್ನು ಶಮನಗೊಳಿಸುವ ಉದ್ದೇಶದಿಂದ ಮಾಡಿದ ವಿಡಿಯೋವೇ ಮತ್ತೊಂದು ವಿವಾದಕ್ಕೆ ಕಾರಣವಾಯಿತು. ಯುವಜನರನ್ನು ‘ನಮ್ಮ ಮಕ್ಕಳು’ ಎಂದು ಕರೆಯುವುದು ಸಾಕಾಗುವುದಿಲ್ಲ; ಅವರ ಭವಿಷ್ಯದ ಬಗ್ಗೆ ಸರ್ಕಾರ ತನ್ನ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಕು. ಈ ವ್ಯತ್ಯಾಸವೇ ಮೋದಿ–ಶಾ ರಾಜಕೀಯದ ಹೊಸ ತಲೆಮಾರಿನೊಂದಿಗಿನ ಅಂತರವನ್ನು ಇನ್ನಷ್ಟು ಹೆಚ್ಚು ಮಾಡಿತು.

ಒಂದು ಕಾಲದಲ್ಲಿ ಸರ್ಕಾರದ ವಿರುದ್ಧದ ಯಾವುದೇ ಪ್ರಶ್ನೆಯನ್ನು ರಾಷ್ಟ್ರವಾದ, ಜಾತಿವಾದ, ಧಾರ್ಮಿಕವಾದದ ಕಥೆಯಲ್ಲೇ ಹೀರಿಕೊಳ್ಳುವ ಸಾಮರ್ಥ್ಯ ಬಿಜೆಪಿಗಿತ್ತು. ಈಗ ನಿರುದ್ಯೋಗ, ಪೇಪರ್‌ ಲೀಕ್‌, ವಿದ್ಯಾರ್ಥಿಗಳ ಪ್ರತಿಭಟನೆ, ಆಡಳಿತದ ಅಸಮಾಧಾನ ಮತ್ತು ಹಣದುಬ್ಬರದಂತಹ ಪ್ರಶ್ನೆಗಳು ಒಂದಕ್ಕೊಂದು ಸೇರಿಕೊಂಡು ಬಿಜೆಪಿಗೆ ದುಃಸ್ವಪ್ನವಾಗಿವೆ. ಸಂಸತ್ತಿನ ಮುಂಗಾರು ಅಧಿವೇಶನ ಇದಕ್ಕೆ ಮತ್ತೊಂದು ಸೂಚನೆ. ಸರ್ಕಾರ ಹಲವು ಮಸೂದೆಗಳನ್ನು ಅಂಗೀಕರಿಸಿದರೂ, ಅಧಿವೇಶನದ ರಾಜಕೀಯ ನಿಯಂತ್ರಣ ಪ್ರತಿಪಕ್ಷದ ಕೈಗೆ ಜಾರಿದಂತೆ ಕಂಡಿತು. FCRA ತಿದ್ದುಪಡಿ ಮಸೂದೆ ಜಂಟಿ ಸಂಸದೀಯ ಸಮಿತಿಗೆ ಹೋಗಬೇಕಾಯಿತು; ಕ್ಷೇತ್ರ ಪುನರ್‌ವಿಂಗಡಣೆ ಮತ್ತು ‘ಒಂದು ದೇಶ-ಒಂದು ಚುನಾವಣೆ’ ಸೇರಿದಂತೆ ಹಲವು ಪ್ರಮುಖ ವಿಷಯಗಳು ಮುಂದಕ್ಕೆ ಸಾಗಲಿಲ್ಲ. ಮತ್ತೊಂದೆಡೆ, ಲೋಕಸಭೆಯ ಉತ್ಪಾದಕತೆ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿಯಿತು. ಅಂದರೆ ಸರ್ಕಾರಕ್ಕೆ ಸದನದಲ್ಲಿ ಸಂಖ್ಯಾಬಲವಿದ್ದರೂ, ರಾಜಕೀಯ ನಿರೂಪಣೆಯ ಮೇಲಿನ ಸಂಪೂರ್ಣ ಹಿಡಿತ ಉಳಿದಿಲ್ಲ.

ಇದನ್ನೂ ಓದಿ: ಬಿಸಿ ತಟ್ಟಿದ ಮೇಲೆ ಎಚ್ಚೆತ್ತರಾ CJI ಸೂರ್ಯಕಾಂತ್?

ಈ ಅಧಿವೇಶನದಲ್ಲಿ ಪ್ರತಿಪಕ್ಷ ಮಾಡಿದ ಒಂದೊಳ್ಳೆ ಕೆಲಸ ಬೀದಿಯಲ್ಲಿ ಕೇಳಿಬಂದ ಯುವಜನರ ಆಕ್ರೋಶಕ್ಕೆ ಸಂಸತ್ತಿನಲ್ಲಿ ಧ್ವನಿ ನೀಡಿರುವುದು. ಕಾಂಗ್ರೆಸ್‌ ಸೇರಿದಂತೆ INDIA ಬ್ಲಾಕ್‌ ಪಕ್ಷಗಳು ಒಗ್ಗಟ್ಟಿನಿಂದ ಒತ್ತಡ ಹೇರಿದವು. ಜಂತರ್‌ ಮಂತರ್‌ನ ಪ್ರತಿಭಟನೆಯ ರಾಜಕೀಯ ಶಕ್ತಿಯನ್ನು ಸಂಸತ್ತಿನೊಳಗೆ ಕೊಂಡೊಯ್ಯುವಲ್ಲಿ ಅವು ಯಶಸ್ವಿಯಾದವು. ಈ ಒಗ್ಗಟ್ಟೇ ಸರ್ಕಾರದ ಕೆಲವು ಪ್ರಮುಖ ಮಸೂದೆಗಳನ್ನು ಮುಂದೂಡುವಂತೆ ಮಾಡಿತು. ಆದರೆ ಇಲ್ಲಿಂದಲೇ ಪ್ರತಿಪಕ್ಷದ ನಿಜವಾದ ಪರೀಕ್ಷೆ ಆರಂಭವಾಗಿದೆ. ಸರ್ಕಾರವನ್ನು ಸದನದಲ್ಲಿ ಮಾತನಾಡದಂತೆ ತಡೆಯುವುದು ಒಂದು ರಾಜಕೀಯ ತಂತ್ರ; ಜನರ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಪರ್ಯಾಯ ರಾಜಕೀಯ ಶಕ್ತಿಯಾಗಿ ಕಾಣಿಸಿಕೊಳ್ಳುವುದು ಅದಕ್ಕಿಂತ ದೊಡ್ಡ ಸವಾಲು. ಈಗ ಪ್ರತಿಪಕ್ಷದ ಕೈಯಲ್ಲಿರುವ ನೈತಿಕ ಬಲದೊಂದಿಗೆ ಮುಂದಿನ ಹಂತದಲ್ಲಿ ಚರ್ಚೆ, ದಾಖಲೆ, ಪರ್ಯಾಯ ನೀತಿ ಮತ್ತು ಜನರ ಮುಂದೆ ಸ್ಪಷ್ಟ ಉತ್ತರಗಳೊಂದಿಗೆ ಹೋರಾಟವನ್ನು ವಿಸ್ತರಿಸುವ ಅಗತ್ಯವಿದೆ.

ವಿಶೇಷವಾಗಿ ಯುವಜನರ ವಿಚಾರದಲ್ಲಿ ಪ್ರತಿಪಕ್ಷಕ್ಕೆ ಅಪರೂಪದ ರಾಜಕೀಯ ಅವಕಾಶ ಸಿಕ್ಕಿದೆ. ಉದ್ಯೋಗ, ಪರೀಕ್ಷಾ ಅಕ್ರಮ, ಶಿಕ್ಷಣದ ವೆಚ್ಚ, ನೇಮಕಾತಿಯ ಪಾರದರ್ಶಕತೆ.. ಇವುಗಳನ್ನು ಕೇವಲ ಸರ್ಕಾರವನ್ನು ವಿರೋಧಿಸುವಲ್ಲಿ ಮಾತ್ರ ಬಳಸಿದರೆ ಈ ಅವಕಾಶವೂ ಕೈತಪ್ಪಬಹುದು. ಯುವಜನರು ಬಿಜೆಪಿಯ ವಿರುದ್ಧ ಮತ ಹಾಕಬೇಕು ಎನ್ನುವುದಕ್ಕಿಂತ, ತಮ್ಮ ಭವಿಷ್ಯಕ್ಕೆ ಯಾರು ಏನು ಮಾಡುತ್ತಾರೆ ಎಂಬ ಪ್ರಶ್ನೆಗೆ ಪ್ರತಿಪಕ್ಷ ಉತ್ತರವಾಗಿ ನಿಲ್ಲಬೇಕು. ಇನ್ನೊಂದೆಡೆ, ಈ ಒಗ್ಗಟ್ಟು ಎಷ್ಟು ಕಾಲ ಉಳಿಯುತ್ತದೆ ಎಂಬುದೂ ಮುಖ್ಯ. INDIA ಬ್ಲಾಕ್‌ನ ಪಕ್ಷಗಳು ಸಂಸತ್ತಿನಲ್ಲಿ ಒಂದೇ ವೇದಿಕೆಯಲ್ಲಿ ನಿಂತರೂ, ರಾಜ್ಯಗಳ ರಾಜಕೀಯದಲ್ಲಿ ಅವು ಪರಸ್ಪರ ಎದುರಾಳಿಗಳಾಗಿವೆ. ಅಧಿವೇಶನ ಮುಗಿದ ಬಳಿಕವೂ ಇದೇ ಸಮನ್ವಯ ಮುಂದುವರಿಯದಿದ್ದರೆ, ಬಿಜೆಪಿಯ ವಿರುದ್ಧ ಮೂಡಿರುವ ರಾಜಕೀಯ ಅಸಮಾಧಾನ ಮತ್ತೆ ಚದುರಿ ಹೋಗಬಹುದು. ಅಧಿವೇಶನದ ಕೊನೆಯಲ್ಲಿ ಕೆಲವು INDIA ಬ್ಲಾಕ್‌ ಪಕ್ಷಗಳು ಸ್ಪೀಕರ್‌ ಅವರ ಸಾಂಪ್ರದಾಯಿಕ ಚಹಾ ಕೂಟವನ್ನೂ ಬಹಿಷ್ಕರಿಸಿದರೆ, DMK ಅದರಲ್ಲಿ ಭಾಗವಹಿಸಿದ್ದು ಮೈತ್ರಿಯೊಳಗಿನ ಭಿನ್ನತೆಗಳನ್ನೂ ತೋರಿಸಿದೆ. ಹೀಗಾಗಿ ಬಿಜೆಪಿಯ ಹಿನ್ನಡೆ ಪ್ರತಿಪಕ್ಷಕ್ಕೆ ದೊರೆತ ಉಚಿತ ಗೆಲುವಲ್ಲ; ಅದು ಗಳಿಸಬೇಕಾದ ಅವಕಾಶ. ಸರ್ಕಾರದ ವಿರುದ್ಧದ ಜನರ ಅಸಮಾಧಾನವನ್ನು ಸಂಘಟಿಸುವುದು, ಅದಕ್ಕೆ ಪರ್ಯಾಯ ಆಡಳಿತದ ರೂಪುರೇಷೆ ನೀಡುವುದು ಮತ್ತು ತಮ್ಮದೇ ನಾಯಕತ್ವದ ಮೇಲಿನ ವಿಶ್ವಾಸವನ್ನು ಕಟ್ಟುವುದು.. ಈ ಮೂರು ಕೆಲಸಗಳನ್ನು ಪ್ರತಿಪಕ್ಷ ಮಾಡಬೇಕಿದೆ. ಇಲ್ಲವಾದರೆ ಜಂತರ್‌ ಮಂತರ್‌ನಲ್ಲಿ ಹುಟ್ಟಿದ ಅಲೆ ಸಂಸತ್ತನ್ನು ಅಲುಗಾಡಿಸಿ ಅಲ್ಲೇ ನಿಂತುಹೋಗುತ್ತದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೇವಿಯಿಂದ ಕತ್ತಿ ಪಡೆದ ರಾಜರ ಕಥೆಗಳು ಶಾಲಾ ಪಠ್ಯದಲ್ಲಿ; NCERTಯಿಂದ ಮತ್ತೊಂದು ವಿವಾದ?

"ಭಾರತದಲ್ಲಿ ದೇವಿಯರ ಆರಾಧನೆಗೂ, ಯುದ್ಧಕ್ಕೂ ಅನಾದಿ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಪ್ರಾಚೀನ...

‘INDIA’ ಮೈತ್ರಿಕೂಟದ ಸಭೆಗಾಗಿ ದೆಹಲಿಗೆ ಮಮತಾ ಪ್ರಯಾಣ: ‘ದಿಮಾಗಿ ನಕ್ಸಲರ’ ಜತೆ ಸಮಾಲೋಚನೆ ಎಂದ ಸುವೇಂದು ಅಧಿಕಾರಿ

ಬುಧವಾರ ನಡೆಯಲಿರುವ 'INDIA' ಮೈತ್ರಿಕೂಟದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳದ...

ಮೋದಿ ಪ್ರಮಾಣಪತ್ರ ವಿವಾದ: ಕೇಜ್ರಿವಾಲ್ ಮೇಲ್ಮನವಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿ ಪ್ರಮಾಣಪತ್ರವನ್ನು ಬಹಿರಂಗಪಡಿಸುವಂತೆ ಗುಜರಾತ್...

ಪಿಎನ್‌ಬಿ ಹಗರಣ: ನೀರವ್ ಮೋದಿ ಸಹಚರ ಸಂದೀಪ್ ಮಿಸ್ತ್ರಿ UAEಯಿಂದ ಹಸ್ತಾಂತರ – ಮುಂಬೈನಲ್ಲಿ ಬಂಧನ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (ಪಿಎನ್‌ಬಿ) ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ...