ಡಿಜಿಟಲ್ ಕ್ರಾಂತಿ, ಚಂದ್ರಯಾನದ ದಿಗ್ವಿಜಯ, ವಿಶ್ವದ ಅತಿ ದೊಡ್ಡ ಆರ್ಥಿಕತೆ ಎಂದು ಹೇಳಿಕೊಂಡು ಜಾಗತಿಕ ವೇದಿಕೆಯಲ್ಲಿ ಭಾರತ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಆದರೆ, ಸ್ವಾತಂತ್ರ್ಯದ 79 ವರ್ಷಗಳನ್ನು ಪೂರೈಸಿ 80ನೇ ವಸಂತಕ್ಕೆ ಕಾಲಿಟ್ಟಿರುವ ಈ ದೇಶದ ಅಸಲಿಯತ್ತನ್ನು ನೋಡಿದರೆ, ಅದು ಒಂದೇ ರಾಷ್ಟ್ರದೊಳಗೆ ಸಂಪೂರ್ಣವಾಗಿ ಒಡೆದುಹೋದ ಎರಡು ಭಿನ್ನ ಲೋಕಗಳಲ್ಲಿ ನಾವು ಬದುಕುತ್ತಿದ್ದೇವೆ ಎಂಬ ಕಟುಸತ್ಯದ ಎದುರಿಗೆ ನಮ್ಮನ್ನು ನಿಲ್ಲಿಸುತ್ತದೆ. ಮೇಲ್ನೋಟಕ್ಕೆ ಕಾಣುವ ಅಖಂಡ ಭಾರತದ ಪ್ರಗತಿಯ ರಾರಾಜಿಸುವ ಬೆಳಕಿನ ಅಂತರಾಳದಲ್ಲಿ, ಹಸಿವು, ನಿರುದ್ಯೋಗ, ಹತ್ತಿಕ್ಕಲ್ಪಟ್ಟ ಧ್ವನಿಗಳೊಂದಿಗೆ ಕತ್ತಲು ಕವಿದು ರೋದಿಸುತ್ತಿರುವ 'ಖಂಡ ಭಾರತ'ವೊಂದಿದೆ!
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಘನತೆ ಮತ್ತು ಮುಕ್ತವಾಗಿ ಧ್ವನಿ ಎತ್ತುವ ಹಕ್ಕನ್ನು ಕೊಡುಗೆಯಾಗಿ ನೀಡಿದೆ. ಆದರೆ ವರ್ತಮಾನದ ಭಾರತದಲ್ಲಿ ಸರ್ಕಾರದ ನೀತಿಗಳನ್ನು, ಆಡಳಿತಾತ್ಮಕ ವೈಫಲ್ಯಗಳನ್ನು ಅಥವಾ ಸಮಾಜದ ಬಿರುಕುಗಳನ್ನು ಪ್ರಶ್ನಿಸುವವರನ್ನು ‘ದೇಶದ್ರೋಹಿಗಳು’ ಎಂದು ಬಿಂಬಿಸಿ ಬಾಯಿಮುಚ್ಚಿಸುವ ದಬ್ಬಾಳಿಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಮಹಾತ್ಮ ಗಾಂಧಿಯವರು, “ಸ್ವಾತಂತ್ರ್ಯದ ನಿಜವಾದ ಅರ್ಥವೆಂದರೆ ಭಯವಿಲ್ಲದೆ ಬದುಕುವುದು ಮತ್ತು ಸರ್ಕಾರದ ತಪ್ಪುಗಳನ್ನು ನಿರ್ಭಯವಾಗಿ ಪ್ರಶ್ನಿಸುವುದು” ಎಂದಿದ್ದರು. ಇಂದು ಗಾಂಧಿಯವರ ಈ ಪವಿತ್ರ ವ್ಯಾಖ್ಯಾನಕ್ಕೆ ವ್ಯವಸ್ಥಿತವಾಗಿ ತಿಲಾಂಜಲಿ ಇಡಲಾಗುತ್ತಿದೆ. ಬಾಬಾ ಸಾಹೇಬರು ಅಂದೇ ಎಚ್ಚರಿಸುತ್ತಾ, “ನಾವು ರಾಜಕೀಯ ಸಮಾನತೆಯನ್ನು ಪಡೆದಿದ್ದರೂ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಹಾಗೇ ಮುಂದುವರಿದರೆ ಈ ಪ್ರಜಾಪ್ರಭುತ್ವ ಧ್ವಂಸವಾಗುತ್ತದೆ” ಎಂದು ನುಡಿದಿದ್ದರು.
ಹೌದು, ಅಂಬೇಡ್ಕರ್ ಅವರ ಅಂದಿನ ಆ ಎಚ್ಚರಿಕೆ ಇಂದಿಗೆ ಅಕ್ಷರಶಃ ಸತ್ಯವಾಗುತ್ತಿದೆ. ಮುಕ್ತತೆಯ ಮುಖವಾಡದ ಹಿಂದೆ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯ ಭೀಕರ ಕಂದಕವೊಂದು ದೇಶವನ್ನು ಇನ್ನಿಲ್ಲದಂತೆ ಆವರಿಸಿಕೊಂಡಿದೆ. ಇಂದು ದೇಶದ ಸಂಪತ್ತು ಕೆಲವೇ ಕೆಲವು ಕಾರ್ಪೊರೇಟ್ ಕುಳಗಳ ಕಪಿಮುಷ್ಟಿ ಸೇರಿದೆ. ಅಧಿಕೃತ ವರದಿಗಳ ಪ್ರಕಾರ, ದೇಶದ ಒಟ್ಟು ಸಂಪತ್ತಿನ ಶೇ. 40 ಕ್ಕಿಂತ ಹೆಚ್ಚಿನ ಪಾಲು ಕೇವಲ ಶೇ. 1ರಷ್ಟು ಶ್ರೀಮಂತರ ಪಾಲಾಗಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಮತ್ತು ಇನ್‌ಸ್ಟಿಟ್ಯೂಟ್ ಫಾರ್ ಹ್ಯೂಮನ್ ಡೆವಲಪ್‌ಮೆಂಟ್ ಜಂಟಿಯಾಗಿ ಬಿಡುಗಡೆ ಮಾಡಿರುವ ಭಾರತ ಉದ್ಯೋಗ ವರದಿಗಳ ಪ್ರಕಾರ, ದೇಶದ ಒಟ್ಟು ನಿರುದ್ಯೋಗಿಗಳಲ್ಲಿ ಶೇ. 83 ರಷ್ಟು ಮಂದಿ ಯುವಜನರೇ ಇದ್ದು, ಪದವೀಧರರ ಯುವ ನಿರುದ್ಯೋಗ ದರವು ಆತಂಕಕಾರಿಯಾಗಿ ಮುಂದುವರಿಯುತ್ತಲೇ ಇದೆ. ಒಂದು ಬದಿಯಲ್ಲಿ ಡಿಜಿಟಲ್ ಇಂಡಿಯಾ ಘೋಷಣೆ ಮೊಳಗುತ್ತಿದ್ದರೆ, ಇನ್ನೊಂದು ಬದಿಯಲ್ಲಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ (Global Hunger Index) ಭಾರತವು 100ರ ಗಡಿ ದಾಟಿದೆ. 123 ದೇಶಗಳ ಪೈಕಿ 102ನೇ ಸ್ಥಾನದಲ್ಲಿದ್ದು, 25.8 ಅಂಕಗಳೊಂದಿಗೆ ದೇಶ ಗಂಭೀರ ಹಸಿವಿನ ವರ್ಗದಲ್ಲಿದೆ. ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಮೇಘಾಲಯ ರಾಜ್ಯಗಳಲ್ಲಿ ಲಕ್ಷಾಂತರ ಮಕ್ಕಳು ಇಂದಿಗೂ ಪೌಷ್ಟಿಕತೆಯ ಕೊರತೆ ಹಾಗೂ ಹಸಿವಿನಿಂದ ಬಳಲುತ್ತಿದ್ದಾರೆ. ನಿತ್ಯ ಸಾವಿನ ಹಾದಿ ಹಿಡಿಯುತ್ತಿದ್ದಾರೆ.
ಅದೇ ರೀತಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ಸ್ವಾತಂತ್ರ್ಯವಂತೂ ಇಂದು ಅಕ್ಷರಶಃ ಉಸಿರುಗಟ್ಟಿ ಪ್ರಾಣ ಬಿಡುವ ಹಂತ ತಲುಪಿದೆ! ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ (World Press Freedom Index) ಭಾರತದ ಸ್ಥಾನ ನತದೃಷ್ಟವೆಂಬಂತೆ ಪಾತಾಳಕ್ಕೆ ಕುಸಿದಿದ್ದರೂ ಆಡಳಿತಗಾರರಿಗೆ ಕಿಂಚಿತ್ತೂ ನಾಚಿಕೆಯಿಲ್ಲ. ನಿರ್ಭೀತವಾಗಿ ಸತ್ಯದ ಮುಖವಾಡ ಕಳಚಿ ಸತ್ಯವನ್ನು ಬರೆಯಬೇಕಾದ ಪ್ರಮುಖ ಮಾಧ್ಯಮಗಳು ಇಂದು ಅಧಿಕಾರದ ಬೆತ್ತಕ್ಕೆ ಹೆದರಿ, ಮಣಿದು, ಬಾಲ ಮುದುರಿಕೊಂಡು ಆಡಳಿತ ನಡೆಸುವವರ ಮಡಿಲು ಸೇರಿವೆ. ನಿತ್ಯ ಸರ್ಕಾರದ ಭಜನಾ ಮಂಟಪಗಳಾಗಿ ಮಾರ್ಪಟ್ಟಿರುವುದು ನಮ್ಮ ಕಣ್ಣಮುಂದಿರುವ ಅತ್ಯಂತ ನಾಚಿಕೆಗೇಡಿನ ಸಂಗತಿ. ಅಧಿಕಾರದ ದರ್ಪವನ್ನು, ಆಡಳಿತದ ಹಸಿ ಹಸಿ ಲೋಪದೋಷಗಳನ್ನು ದಿಟ್ಟತನದಿಂದ ಬೊಟ್ಟುಮಾಡಿ ತೋರಿಸಬೇಕಾದ ಪತ್ರಕರ್ತರು ಮತ್ತು ಸ್ವತಂತ್ರ ಧ್ವನಿಗಳ ಬಾಯಿಗೆ ಬೀಗ ಹಾಕಲು ಇಂದು ಅಕ್ಷರಶಃ ಕಾನೂನಿನ ಕುಣಿಕೆಗಳನ್ನು ಬಿಗಿಯಲಾಗುತ್ತಿದೆ. ಸತ್ಯವನ್ನು ಬರೆಯುವುದೇ ಅರಾಜಕತೆ ಅಥವಾ ‘ದೇಶದ್ರೋಹ’ ಎಂಬಂತೆ ಬಿಂಬಿಸುತ್ತಿರುವ ಈ ದಬ್ಬಾಳಿಕೆಯು ಪ್ರಜಾಪ್ರಭುತ್ವದ ಕಂಠವನ್ನು ಹಿಸುಕಿ ಸಾಯಿಸುತ್ತಿದೆ.
ದುಬಾರಿ ಖಾಸಗಿ ಶಾಲೆಗಳ ದೊಡ್ಡ ದೊಡ್ಡ ಜಾಹೀರಾತುಗಳ ಪಕ್ಕದಲ್ಲೇ, ಕನಿಷ್ಠ ಸೂರು, ಕುಡಿಯುವ ನೀರು, ಶೌಚಾಲಯವೂ ಇಲ್ಲದೆ, ಗೋಡೆಗಳು ಬಿರುಕುಬಿಟ್ಟು ಬೀಳುವ ಹಂತದಲ್ಲಿರುವ ಸರ್ಕಾರಿ ಶಾಲೆಗಳು ಬಡ ಕೂಲಿ ಕಾರ್ಮಿಕರ ಮಕ್ಕಳ ಭವಿಷ್ಯವನ್ನು ಅಕ್ಷರಶಃ ಅತಂತ್ರಗೊಳಿಸುತ್ತಿವೆ. ಶ್ರೀಮಂತರ ಮಕ್ಕಳು ಹೈಟೆಕ್ ಅಂಗಳದಲ್ಲಿ ಓದುತ್ತಿದ್ದರೆ, ಬಡವನ ಮಗು ಮಾತ್ರ ಶಿಥಿಲಗೊಂಡ ಶಾಲೆಯ ಕೆಳಗೆ ಸಾವಿನ ಭಯದಲ್ಲೇ ಅಕ್ಷರ ಕಲಿಯುವಂತೆ ಮಾಡುತ್ತಿರುವ ಈ ವ್ಯವಸ್ಥೆಯ ಕ್ರೌರ್ಯಕ್ಕೆ ಏನು ಹೇಳಬೇಕು? ಇನ್ನು, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ವರದಿಗಳು ಬಿಚ್ಚಿಡುತ್ತಿರುವ ಕರಾಳ ಸತ್ಯಗಳಂತೂ ಬೆಚ್ಚಿಬೀಳಿಸುವಂತಿವೆ. ವರ್ಷಕ್ಕೆ ಬರೋಬ್ಬರಿ 4.4 ಲಕ್ಷಕ್ಕೂ ಅಧಿಕ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಮತ್ತು ಅಂಚಿನಲ್ಲಿರುವ ದಲಿತ-ಶೋಷಿತರ ಮೇಲಿನ ದಬ್ಬಾಳಿಕೆಗಳು ದಿನದಿಂದ ದಿನಕ್ಕೆ ವಿರಾಮವಿಲ್ಲದೆ ಹೆಮ್ಮರವಾಗಿ ಬೆಳೆಯುತ್ತಿವೆ. ಜೊತೆಗೆ, ಚುನಾವಣೆಗಳಲ್ಲಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಮಾಜದಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗುತ್ತಿರುವ ಧರ್ಮದ ಅಮಲು ಮತ್ತು ವಿಷಪೂರಿತ ಮತೀಯ ದ್ವೇಷವು, ಶತಮಾನಗಳ ಕಾಲ ಈ ದೇಶದ ಅತಿ ದೊಡ್ಡ ಹೆಮ್ಮೆಯಾಗಿದ್ದ ‘ಗಂಗಾ-ಜಮುನಿ ತಹಜೀಬ್’ ಅಂದರೆ ಗಂಗೆಯಂತೆ ಹರಿದುಬಂದ ಗಟ್ಟಿಯಾದ ಸಾಮರಸ್ಯ ಮತ್ತು ಸಹಬಾಳ್ವೆಯನ್ನು ಇಂದು ಬುಡಸಮೇತ ಧ್ವಂಸ ಮಾಡುತ್ತಿದೆ!
“ಕೇವಲ ವಿದೇಶಿ ಆಡಳಿತಗಾರರನ್ನು ಬದಲಾಯಿಸುವುದರಿಂದ ಸ್ವಾತಂತ್ರ್ಯ ಸಿಗುವುದಿಲ್ಲ; ಮನುಷ್ಯನಿಂದ ಮನುಷ್ಯನ ಶೋಷಣೆ ಮತ್ತು ಅಮಾನವೀಯತೆ ಸಂಪೂರ್ಣವಾಗಿ ಕೊನೆಗೊಂಡಾಗ ಮಾತ್ರ ಪ್ರಜೆಗಳು ನಿಜವಾದ ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯ” ಎಂದಿದ್ದರು ಭಗತ್ ಸಿಂಗ್. “ನಾವು ರಾಜಕೀಯ ಪ್ರಜಾಪ್ರಭುತ್ವವನ್ನು (ಒಂದು ವ್ಯಕ್ತಿ, ಒಂದು ಮತ, ಒಂದು ಮೌಲ್ಯ) ಪಡೆದಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಯನ್ನು ಹಾಗೇ ಮುಂದುವರಿಸಿಕೊಂಡು ಹೋದರೆ, ಅಸಮಾಧಾನಿತರು ನಮ್ಮ ಈ ರಾಜಕೀಯ ಪ್ರಜಾಪ್ರಭುತ್ವದ ಕಟ್ಟಡವನ್ನೇ ಧ್ವಂಸಗೊಳಿಸುತ್ತಾರೆ” ಎಂದು ಎಚ್ಚರಿಸುವ ಮೂಲಕ, ಆರ್ಥಿಕ ಹಾಗೂ ಸಾಮಾಜಿಕ ಮುಕ್ತತೆಯಿಲ್ಲದೆ ನಿಜವಾದ ಸ್ವಾತಂತ್ರ್ಯ ಅಸಾಧ್ಯ ಎಂದಿದ್ದರು ಅಂಬೇಡ್ಕರ್. ಭಾರತದ ಸ್ವಾತಂತ್ರ್ಯ ಹೋರಾಟದ ಜೊತೆಗೆ ವಿಶ್ವ ಮಟ್ಟದಲ್ಲಿ ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸಿದ ಮಂಡೇಲಾ ಅವರು, “ಸ್ವಾತಂತ್ರ್ಯ ಎನ್ನುವುದು ಕೇವಲ ತನ್ನದೇ ಸರಪಳಿಗಳನ್ನು ಕಳಚಿಕೊಳ್ಳುವುದಲ್ಲ, ಬದಲಿಗೆ ಇತರರ ಸ್ವಾತಂತ್ರ್ಯವನ್ನು ಗೌರವಿಸುವ ಮತ್ತು ಬೆಂಬಲಿಸುವ ರೀತಿಯಲ್ಲಿ ಬದುಕುವುದು” ಎಂದು ಹೇಳಿದ್ದರು. ಯಾವ ದೇಶದಲ್ಲಿ ಮನಸ್ಸು ಭಯರಹಿತವಾಗಿರುತ್ತದೋ ಮತ್ತು ತಲೆಯೆತ್ತಿ ನಿಲ್ಲಲು ಸ್ವಾತಂತ್ರ್ಯವಿರುತ್ತದೋ, ಯಾವ ದೇಶದಲ್ಲಿ ಜ್ಞಾನವು ಮುಕ್ತವಾಗಿರುತ್ತದೋ… ಅಂತಹ ಸ್ವಾತಂತ್ರ್ಯದ ಸ್ವರ್ಗಕ್ಕೆ ನನ್ನ ದೇಶವು ಎಚ್ಚೆತ್ತುಕೊಳ್ಳಲಿ” ಎಂದು ಆಶಿಸಿದ್ದರು ರವೀಂದ್ರನಾಥ್ ಟ್ಯಾಗೋರ್. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಮಟ್ಟದಲ್ಲಿ ಗುಲಾಮಗಿರಿಯಿಂದ ಹೊರಬರುವುದೇ ನಿಜವಾದ ಸ್ವಾತಂತ್ರ್ಯ ಎಂದು ಸಾರಿದ್ದರು ಸ್ವಾಮಿ ವಿವೇಕಾನಂದ.
ಇವರೆಲ್ಲರ ಆಶಯದ ಸ್ವಾತಂತ್ರ್ಯದ ಭಾರತ ಇಂದು ನಿಜಕ್ಕೂ ನಮ್ಮ ಕಣ್ಣಮುಂದಿದೆಯೇ? ನಾವು ಅದೇ ಭಾರತದಲ್ಲಿ ಜೀವಿಸುತ್ತಿದ್ದೇವೆಯೇ ಎಂದರೆ, ಖಂಡಿತ ಇಲ್ಲ. ಒಂದೇ ದೇಶ, ಒಂದೇ ಸಂವಿಧಾನ, ಒಂದೇ ತ್ರಿವರ್ಣ ಧ್ವಜ. ಆದರೆ ಬದುಕು ಮಾತ್ರ ಎರಡು ವಿಭಿನ್ನ ಭಾರತಗಳದ್ದು.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಕಳಪೆ ಶಿಕ್ಷಣದ ವಿರುದ್ಧ ಸಿಡಿದೆದ್ದ ಜೆನ್- ಆಲ್ಫಾಗಳು, ಮೈ ಕೊಡವಿದೆ ಯುವ ಭಾರತ!
ಒಂದು ಭಾರತ ಚಂದ್ರನ ಅಂಗಳಕ್ಕೆ ಹೆಜ್ಜೆ ಇಡುತ್ತಿದೆ. ಮತ್ತೊಂದು ಭಾರತದಲ್ಲಿ ಮಗು ಶಾಲೆಯ ಅಂಗಳ ತಲುಪುವುದಕ್ಕೂ ನದಿ, ಹಳ್ಳ, ಕೆಸರು, ಕುಸಿದ ಸೇತುವೆಗಳನ್ನು ದಾಟಬೇಕಾಗಿದೆ. ಒಂದು ಭಾರತ ಕೃತಕ ಬುದ್ಧಿಮತ್ತೆಯ ಮೂಲಕ ಜಗತ್ತಿನ ಭವಿಷ್ಯವನ್ನು ರೂಪಿಸುವ ಕನಸು ಕಾಣುತ್ತಿದೆ. ಮತ್ತೊಂದು ಭಾರತದಲ್ಲಿ ಸರ್ಕಾರಿ ಶಾಲೆಯ ಮೇಲ್ಛಾವಣಿ ಯಾವಾಗ ಕುಸಿಯುತ್ತದೋ ಎಂಬ ಭಯದಲ್ಲೇ ಮಕ್ಕಳು ಪಾಠ ಕೇಳಬೇಕಾಗಿದೆ. ಒಂದು ಭಾರತ ಬುಲೆಟ್ ರೈಲಿನ ವೇಗವನ್ನು ಅಳೆಯುತ್ತಿದೆ. ಮತ್ತೊಂದು ಭಾರತದಲ್ಲಿ ಬಡ ಕುಟುಂಬದ ಮಗು ಶಾಲೆಗೆ ಹೋಗಲು ಸರಿಯಾದ ರಸ್ತೆ, ಬಸ್ ಅಥವಾ ಸೇತುವೆಯ ನಿರೀಕ್ಷೆಯಲ್ಲಿದೆ. ಒಂದು ಭಾರತ ಡಿಜಿಟಲ್ ಇಂಡಿಯಾದಲ್ಲಿ ಬೆರಳ ತುದಿಯಿಂದ ವ್ಯವಹಾರ ನಡೆಸುತ್ತಿದೆ. ಇನ್ನೊಂದು ಭಾರತ ಎರಡು ಹೊತ್ತಿನ ಊಟಕ್ಕಾಗಿ ಬೆವರಿಳಿಸುತ್ತಿದೆ. ಒಂದು ಭಾರತ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕತೆಯೆಂಬ ಹಿರಿಮೆಯಿಂದ ಬೀಗುತ್ತಿದೆ. ಮತ್ತೊಂದು ಭಾರತದ ಯುವಕ ಕೈಯಲ್ಲಿ ಪದವಿ ಹಿಡಿದು ಕೆಲಸಕ್ಕಾಗಿ ಬೀದಿ ಬೀದಿ ಅಲೆಯುತ್ತಿದ್ದಾರೆ. ಒಂದು ಭಾರತದಲ್ಲಿ ಗಗನಚುಂಬಿ ಕಟ್ಟಡಗಳು, ಐಷಾರಾಮಿ ಆಸ್ಪತ್ರೆಗಳು, ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳು. ಮತ್ತೊಂದು ಭಾರತದಲ್ಲಿ ಸರ್ಕಾರಿ ಆಸ್ಪತ್ರೆಯ ಸರತಿ ಸಾಲು, ಬಾಗಿಲು, ಕೋಣೆ, ಕೊನೆಗೆ ಮಕ್ಕಳೂ ಇಲ್ಲದ ಸರ್ಕಾರಿ ಶಾಲೆ.
ಹೌದು, ಇದುವೇ ಇಂದಿನ ಅಖಂಡ ಭಾರತದೊಳಗೆ ಹೆಪ್ಪುಗಟ್ಟಿ ನಿಂತಿರುವ ಇನ್ನೊಂದು ‘ಖಂಡ ಭಾರತ’. ಭೌತಿಕವಾಗಿ ನಾವೆಲ್ಲರೂ ಒಂದೇ ಧ್ವಜದ ಕೆಳಗೆ ನಿಂತಿದ್ದರೂ, ಆರ್ಥಿಕ ಕಂದಕಗಳು, ಹಸಿವು, ನಿರುದ್ಯೋಗ, ದೌರ್ಜನ್ಯಗಳು ಮತ್ತು ಹತ್ತಿಕ್ಕಲ್ಪಟ್ಟ ಧ್ವನಿಗಳು ನಮ್ಮ ನಡುವಿನ ಅಂತರವನ್ನು ದಿನೇ ದಿನೇ ಹೆಚ್ಚಿಸುತ್ತಿವೆ. ಬುಲೆಟ್ ರೈಲುಗಳ ಓಟದ ವೇಗದಲ್ಲಿ ಬಡವರ ಕಣ್ಣೀರು ಮರೆತುಹೋಗಬಾರದು. ಡಿಜಿಟಲ್ ಪರದೆಗಳ ಹೊಳಪಿನ ಹಿಂದೆ ಹಸಿವಿನಿಂದ ಒಣಗಿದ ಮುಖಗಳು ಕಣ್ಣಿಗೆ ಕಾಣಿಸಬೇಕು. ಭಾಷಣಗಳ ಅಬ್ಬರದಿಂದ, ಕೇಕೆ-ಚಪ್ಪಾಳೆಗಳ ಆಚರಣೆಗಳಿಂದ ಸ್ವಾತಂತ್ರ್ಯದ ಪರಿಪೂರ್ಣತೆ ಸಿದ್ಧಿಸುವುದಿಲ್ಲ. ಮಾನವೀಯ ಮೌಲ್ಯಗಳು, ಸಾಮಾಜಿಕ ನ್ಯಾಯ, ಪತ್ರಿಕಾ ಸ್ವಾತಂತ್ರ್ಯ, ಸಮಾನ ಅವಕಾಶಗಳು ಒಂದೇ ತಕ್ಕಡಿಯಲ್ಲಿ ತೂಗಿದಾಗ ಮಾತ್ರ ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ನಿಜವಾದ ಸ್ವಾತಂತ್ರ್ಯ ಸಿಗುತ್ತದೆ. ಆ ಮಹಾನ್ ನಾಯಕರ ಕನಸುಗಳು ನನಸಾಗುವ, ಪ್ರತಿಯೊಬ್ಬ ನಾಗರಿಕನೂ ಭಯವಿಲ್ಲದೆ, ತಲೆಯೆತ್ತಿ ಗೌರವದಿಂದ ಬದುಕುವ ಆ ಸುವರ್ಣ ದಿನವೇ ಭಾರತ ಮಾತೆಗೆ ಲಭಿಸುವ ಅಪ್ಪಟ ಮತ್ತು ನಿಜವಾದ ಸ್ವಾತಂತ್ರ್ಯ. ಆ ದಿನಕ್ಕಾಗಿ ಈ ದೇಶದ ಆತ್ಮಸಾಕ್ಷಿ ಎಚ್ಚೆತ್ತುಕೊಳ್ಳಲೇಬೇಕಿದೆ.




