ಅರಸು ಹೆಸರು ಹೇಳದ ಒಬ್ಬ ರಾಜಕಾರಣಿ ರಾಜ್ಯದಲ್ಲಿಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ. ರಾಜ್ಯದಲ್ಲಿ ಹಲವು ಮುಖ್ಯಮಂತ್ರಿಗಳು ಬಂದಿದ್ದಾರೆ, ಹೋಗಿದ್ದಾರೆ. ಆದರೆ, ಇಂದಿಗೂ ಜನ ಮಾನಸದಲ್ಲಿ ಉಳಿದುಕೊಂಡಿರುವ ಏಕೈಕ ವ್ಯಕ್ತಿ ಕರ್ನಾಟಕ ಏಕೀಕರಣ ಕರ್ತೃ ಡಿ. ದೇವರಾಜ ಅರಸು. ಹಿಂದುಳಿದ ವರ್ಗಗಳಿಂದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ. ಐದು ವರ್ಷ ಪೂರ್ಣಗೊಳಿಸಿದ ಮೊದಲಿಗರೂ ಹೌದು. ಇಂತಹ ವ್ಯಕ್ತಿಯನ್ನು ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರು ಮತ್ತು ಅವರ ಕಾಂಗ್ರೆಸ್ ಸರ್ಕಾರವೇ ಮರೆತಿರುವುದು ದುರಂತ.
‘ದೇವರಾಜ ಅರಸು‘ ಎಂಬ ಹೆಸರೇ ಒಂದು ಶಕ್ತಿ. ಮಾಜಿ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಪಾಲಿನ ಆಶಾಕಿರಣ ಅರಸು ನಾಡಿಗಾಗಿ ಶ್ರಮಿಸಿದ, ದೀನ-ದಲಿತರ, ಹಿಂದುಳಿದವರ ಅಸ್ಮಿತೆಗಾಗಿ ಹೋರಾಡಿದ ಮಹಾನ್ ನಾಯಕ. ಆದರೆ ಇಂದು ನಾಯಕನ ಮನೆ ಅನಾಥವಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿರುವ ಅರಸು ಅವರ ಹಳೆಯ ಮನೆ, ಇಂದು ನಿರ್ವಹಣೆಯಿಲ್ಲದೆ ನಶಿಸಿ ಹೋಗುವ ಸ್ಥಿತಿಯಲ್ಲಿದೆ. ಕೆಂಪು ಹೆಂಚಿನ ನಾಲ್ಕು ಕಂಬದ ಆ ಹಳೆಯ ತೊಟ್ಟಿ ಮನೆ, ಒಂದು ಕಾಲದಲ್ಲಿ ರಾಜಕೀಯ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಅಂದಿನ ವೈಭವದ ಸಾಕ್ಷಿಗಳಂತಿರುವ 40ಕ್ಕೂ ಹೆಚ್ಚು ಫೋಟೊಗಳು ಈಗ ದೂಳಿನ ಪದರದಡಿ ಮರೆಯಾಗಿವೆ. ಗೋಡೆಗಳು ಬಣ್ಣ ಕಳೆದುಕೊಂಡು ಕಳೆಗುಂದಿವೆ. ಅಡುಗೆ ಮನೆಯ ಮೂಲೆಯಲ್ಲೊಂದು ಫಲಕ ಮಾತ್ರ ಆ ಮನೆ ಅರಸು ಅವರದ್ದು ಎಂದು ಸಾಕ್ಷಿ ಹೇಳುತ್ತಿದೆ.
ಅರಸು ಅವರ ಹುಟ್ಟೂರಾದ ಬೆಟ್ಟದತುಂಗಾದಲ್ಲಿ ಹೆಜ್ಜೆಯಿಟ್ಟಲೆಲ್ಲಾ ಗುಂಡಿ. ಇನ್ನು ಗ್ರಾಮದ ದೇವಸ್ಥಾನಗಳ ಸ್ಥಿತಿಯಂತೂ ಕೇಳುವವರಿಲ್ಲ; ಸೂರಿದ್ದರೂ ಮಳೆಗಾಲದಲ್ಲಿ ಸೋರುವ ಪರಿಸ್ಥಿತಿಗೆ ತಲುಪಿವೆ. ಪಾರಂಪರಿಕ ಮಹತ್ವವಿರಬೇಕಾದ ತಾಣಗಳು ಇಂದು ನಿರ್ವಹಣೆಯಿಲ್ಲದೆ ನಶಿಸುತ್ತಿವೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ʼದೇವರಾಜ ಅರಸು ಜನ್ಮಶತಮಾನೋತ್ಸವʼ ಕಾರ್ಯಕ್ರಮವನ್ನು 2015ರ ಆಗಸ್ಟ್ 20ರಂದು ಅರಸು ಹುಟ್ಟೂರು ಬೆಟ್ಟದತುಂಗಾ ಹಾಗೂ ಕರ್ಮಭೂಮಿ ಕಲ್ಲಹಳ್ಳಿ ಗ್ರಾಮದಲ್ಲಿ ಆಚರಿಸಿತ್ತು. ಅಂದು ಎರಡೂ ಗ್ರಾಮವನ್ನು ದತ್ತುಪಡೆದು, ಮಾದರಿ ಗ್ರಾಮ ಮಾಡುವುದಕ್ಕಾಗಿ, ಪ್ರತಿ ಗ್ರಾಮಕ್ಕೂ 10 ಕೋಟಿ ಅನುದಾನವನ್ನು ಘೋಷಿಸಲಾಗಿತ್ತು. ದತ್ತು ಸ್ವೀಕರಿಸಿ 11 ವರ್ಷಗಳು ಕಳೆದಿದೆ. ಆದರೆ ಗ್ರಾಮಗಳು ಮಾತ್ರ ತಂದೆ-ತಾಯಿ ಇಲ್ಲದೆ ಅನಾಥವಾಗಿವೆ.
ʼಈ ದಿನ.ಕಾಮ್ʼ ತಂಡ ವರದಿಗಾಗಿ ಪ್ರವೇಶಿಸಿದಾಗ ಕಾಣಿಸಿದ್ದು, ಕಳೆದ ಹತ್ತು ವರ್ಷಗಳ ಹಿಂದೆ ಸುಣ್ಣ-ಬಣ್ಣ ಕಂಡಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಅರಸು ಅವರು ವಾಸವಿದ್ದ ಮನೆ ಎನ್ನುವ ಸಣ್ಣ ನಾಮಫಲಕವೂ ಇಲ್ಲ. ಅರಸು ಅವರ ದೌರ್ಭಾಗ್ಯವೋ, ಇಲ್ಲ ಹುಣಸೂರಿನ ದುರ್ದೈವವೋ? ತಾಲೂಕು ಆಡಳಿತ ಅರಸು ಅವರು ಬಾಳಿ ಬದುಕಿದ ಮನೆಗೆ ಸುಣ್ಣ ಬಣ್ಣ ತೋರಿಸಿಲ್ಲ. ಇತ್ತ ಹಕ್ಕಿಗಳು ತೂರಿದರೆ ಅತ್ತ ಹಾದುಹೋಗಬಹುದು. ಮನೆಯೊಳಗೇ ಆಕಾಶ ನೋಡಬಹುದು. ಮನೆಯೆಲ್ಲಾ ದುಂಬು ತುಂಬಿ ಜೇಡ ಕಟ್ಟಿದೆ. ಹೆಂಚೆಲ್ಲಾ ಒಡೆದು ಹೋಗಿದೆ. ಕೈಯಾಡಿಸಿ ಅದೆಷ್ಟು ವರ್ಷ ಕಳೆಯಿತೋ. ಗೋಡೆಯೆಲ್ಲಾ ಬಿರುಕು ಬಿಟ್ಟಿದೆ. ಮಳೆ ಬಂದರೆ ನೀರೆಲ್ಲ ಮನೆಯೊಳಕ್ಕೆ. ಇವತ್ತೋ ನಾಳೆಯೋ ಕುಸಿಯುವ ಹಂತಕ್ಕೆ ಬಂದಿರುವ ಮನೆಯ ರಕ್ಷಣೆಗೆ ಯಾರೊಬ್ಬರೂ ಧಾವಿಸಿಲ್ಲ.

ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಕಲ್ಲಹಳ್ಳಿ ಗ್ರಾಮದ ಅಭಿವೃದ್ಧಿಗೆ 1 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಆ ಹಣದಲ್ಲಿ ಸಾಹಿತಿ ಚದುರಂಗ ಅವರ ಮನೆಯನ್ನು ಕೆಡವಿ ʼಚದುರಂಗ ಭವನʼವನ್ನು ನಿರ್ಮಿಸಲಾಯಿತು. ಇಂದು ಚದುರಂಗ ಭವನ ಪಾರಿವಾಳಗಳ ವಾಸಸ್ಥಳವಾಗಿದೆ. ಚದುರಂಗ ಭವನ ನಿರ್ಮಿಸಿದಾಗಿನಿಂದಲೂ ಬಳಕೆಗೆ ಸಿಕ್ಕಿಲ್ಲ. ಗ್ರಾಮದ ಯಾರಿಗೂ ಮಾಹಿತಿ ಕೊಡದೆ ಭೂಮಿಯನ್ನು ಅಗೆದು ನೆಲ ಅಂತಸ್ತಿನಲ್ಲಿ ಭವನ ನಿರ್ಮಿಸಿದ್ದಾರೆ. ಮಳೆಯಾದರೆ ಭವನದ ನೆಲದಲ್ಲಿ ನೀರು ನಿಲ್ಲುತ್ತದೆ. ಕಟ್ಟಡ ನಿರ್ವಹಣೆಯ ಜವಾಬ್ದಾರಿಯನ್ನು ಕೂಡ ಸರ್ಕಾರ ತೆಗೆದುಕೊಂಡಿಲ್ಲ. ಇನ್ನೊಂದೆರಡು ವರ್ಷ ಹೀಗೆ ಬಿಟ್ಟರೆ ಇಡೀ ಭವನವೇ ಕಳಚಿ ಬೀಳುತ್ತದೆ.

ಇದಕ್ಕಿಂತಲೂ ದುರಂತವೆಂದರೆ, 2015ರಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವರಾಗಿದ್ದ ವಿ. ಶ್ರೀನಿವಾಸ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಚಿವ ಹೆಚ್. ಆಂಜನೇಯ, ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಪಶು ಸಂಗೋಪನಾ ಸಚಿವ ಟಿ. ಬಿ. ಜಯಚಂದ್ರ, ಶಾಸಕ ಹೆಚ್. ಪಿ. ಮಂಜುನಾಥ್ ಇವರುಗಳ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆರವೇರಿಸಿದ್ದ ʼಶಿಲಾನ್ಯಾಸ ಫಲಕʼ ಇವತ್ತು ಯಾರಿಗೂ ಕಾಣದ ಹಾಗೆ ಅರಸು ಅವರು ಬಾಳಿ ಬದುಕಿದ ಮನೆಯ ಅಡುಗೆ ಕೋಣೆಯಲ್ಲಿ ಇದೆ. ವೇದಿಕೆ ಮೇಲೆ ಉದ್ಘಾಟನೆಗೊಂಡಿದ್ದು ಬಿಟ್ಟರೆ, ಫಲಕ ಯಾರಿಗೂ ಕಾಣದ ಹಾಗೇ ಅಡುಗೆ ಕೋಣೆಯಲ್ಲಿ ಮುಚ್ಚಿಡಲಾಗಿದೆ.
“ಅರಸು ಅವರಿಗೆ ಕಲ್ಲಹಳ್ಳಿ ಎಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲೂ, ಕರ್ಮಭೂಮಿಯ ಜೊತೆ ತಮ್ಮ ಹೆಸರು ಸೇರಿ ʼಅರಸು ಕಲ್ಲಹಳ್ಳಿʼ ಎಂದು ಕರೆಯುತ್ತಿದ್ದರೆ, ಅವರಿಗೆ ವಿಶೇಷ ರೋಮಾಂಚನವೇ. ಅರಸು ಅವರು ಊರಿಗೆ ಬಂದ ತಕ್ಷಣ ಮೊದಲು ಕಾಲಿನ ಚಪ್ಪಲಿ ಕಳಚಿ ಮನೆ ಪಕ್ಕದ ದನದ ಕೊಟ್ಟಿಗೆಗೆ ತೆರಳಿ ಎತ್ತು, ಕರು, ಹಸುಗಳ ಮೈತಡವಿ, ಮುದ್ದಿಸುತ್ತಿದ್ದರು. ಮನಸ್ಸಿಗೆ ಸಮಾಧಾನ ಆಗುವ ತನಕ ಕೊಟ್ಟಿಗೆಯಲ್ಲಿ ಕಾಲ ಕಳೆದು, ಆಗತಾನೆ ಕರೆದ ಹಸುವಿನ ಹಸಿ ಹಾಲು ಕುಡಿದು ತಲೆ ಬಾಗಿ ಮನೆಯೊಳಗೆ ಕಾಲಿಡುತ್ತಿದ್ದರು” ಎಂದು ನೆನೆಯುತ್ತಾರೆ ಗ್ರಾಮದ ಮುಖ್ಯಸ್ಥ ಮಹಾದೇವಪ್ಪ.

ಅರಸು ಅವರ ಕನಸಿನ ಕೂಸಾಗಿದ್ದ ದೊಡ್ಡಕೆರೆಗೆ ಹಾಗೂ ಇನ್ನಿತರ 22 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇಂದಿಗೂ ನೆನೆಗುದಿಗೆ ಬಿದ್ದಿದೆ. ಕೆರೆಗಳು ಸಂಪೂರ್ಣ ಬತ್ತಿ ಹೋಗಿವೆ. ಮಳೆ ಬಂದರೆ ಮಾತ್ರ ನೀರು, ಇಲ್ಲದೆ ಹೋದರೆ ಕೆರೆಗೂ ನೀರಿಲ್ಲ, ಹೊಲಗಳಿಗೂ ನೀರಿಲ್ಲ. ಕೃಷಿ ಪ್ರಧಾನವಾದ ಗ್ರಾಮಕ್ಕೆ ನೀರಿನ ಸಮಸ್ಯೆಯಿರಕೂಡದು ಎಂಬುದು ಅರಸು ಅವರ ಬಯಕೆಯಾಗಿತ್ತು. ಆದರೀಗ ಇಡೀ ಗ್ರಾಮ ನೀರಿಲ್ಲದೆ ಒಣಗುತ್ತಿದೆ.
“ಅರಸು ಅವರ ಮನೆಯನ್ನು ಮ್ಯೂಸಿಯಂ ಮಾಡ್ತೀವಿ, ಸಂಶೊಧನ ಯೋಗ್ಯವಾದ ಕೇಂದ್ರ ಮಾಡ್ತೀವಿ ಅಂತೆಲ್ಲ ಸರ್ಕಾರ ಹೇಳಿತ್ತು. ಅದ್ಯಾವುದನ್ನು ಸರ್ಕಾರ ಮಾಡುವಂತೆ ಕಾಣುತ್ತಿಲ್ಲ. ಅರಸು ಅವರು ಬಾಳಿ ಬದುಕಿದ್ದ ಮನೆಯನ್ನು ಉಳಿಸಿಕೊಟ್ಟರೆ ಸಾಕು. 10 ಕೋಟಿ ಘೋಷಣೆ ಮಾಡಿ ಇದುವರೆಗೆ ನಯಾಪೈಸೆ ಕೆಲಸ ಆಗಲಿಲ್ಲ. ಮನೆ ಬಿದ್ದೋದ ಮೇಲೆ ಯಾವ ಕೆಲಸ ಮಾಡಿ ಏನು ಪ್ರಯೋಜನ. ಎಲ್ಲರೂ ಅರಸು ಅವರ ಹೆಸರನ್ನು ಹೇಳಿ ರಾಜಕೀಯ ಮಾಡ್ತಾರೆ ಹೊರತು, ಅರಸು ಹೆಸರಿಗೆ ನ್ಯಾಯ ಕೊಡುತ್ತಿಲ್ಲ” ಎಂದು ಗ್ರಾಮದ ಮುಖ್ಯಸ್ಥ ಮಹಾದೇವಪ್ಪ ಬೇಸರ ವ್ಯಕ್ತಪಡಿಸಿದರು.

ಇನ್ನೊಂದೆಡೆ, ಪಿರಿಯಾಪಟ್ಟಣದ ಬೆಟ್ಟದತುಂಗಾ ಗ್ರಾಮವಂತೂ ಅಭಿವೃದ್ಧಿಗಾಗಿ ಸರ್ಕಾರ ಕೊಟ್ಟ ಭರವಸೆಗಳು ಇಂದಲ್ಲ ನಾಳೆ ತಲುಪಬಹುದೇನೋ ಎಂಬ ಆಸೆಯಲ್ಲಿದೆ. 2015ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಗ್ರಾಮಕ್ಕೆ ಬಂದು ಕಾರ್ಯಕ್ರಮ ಮಾಡಿ ಆಶ್ವಾಸನೆ ಕೊಟ್ಟಿದ್ದು ಬಿಟ್ಟರೆ, ಸಣ್ಣ ಅಭಿವೃದ್ಧಿ ಕೆಲಸವೂ ಗ್ರಾಮಕ್ಕೆ ಆಗಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು.

ಬೆಟ್ಟದತುಂಗಾ ಗ್ರಾಮಕ್ಕೆ ಪ್ರವೇಶಿಸುವಾಗ, ಬಲಬದಿಯಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಆದರೆ ಗ್ರಾಮಕ್ಕೆ ಬರುವ ಬಸ್ ಮಾತ್ರ ಇಂದಿಗೂ ಗ್ರಾಮಸ್ಥರಿಗೆ ಸಿಗುತ್ತಿಲ್ಲ. ”ಅರಸು ಅವರ ಕಾಲದಲ್ಲಿಯೇ ʼಬೆಟ್ಟದತುಂಗಾ – ಬೆಂಗಳೂರುʼ ಬಸ್ಸೆಂದರೆ ಇಡೀ ಕರ್ನಾಟಕಕ್ಕೆ ಪರಿಚಿತವಾಗಿತ್ತು. ಇಂದು ಆ ಬಸ್ ಹೆಸರು ಮಾತ್ರ ʼಬೆಟ್ಟದತುಂಗಾ – ಬೆಂಗಳೂರುʼ ಎಂದು. ಆದರೆ ಬೆಳಗಿನ ಜಾವ 5 ಗಂಟೆಗೆ ಬಸ್ ಬೇರೆ ಊರಿಂದ ಹೊರಡುತ್ತದೆ” ಎಂದು ಗ್ರಾಮಸ್ಥರು ಆರೋಪಿಸಿದರು.
ಸಿದ್ದರಾಮಯ್ಯನವರು ಬೆಟ್ಟದತುಂಗಾ ಗ್ರಾಮವನ್ನು ದತ್ತು ಪಡೆದು, ಮಾದರಿ ಗ್ರಾಮವಾಗಿ ನಿರ್ಮಾಣ ಮಾಡಲು 10 ಕೋಟಿ ಅನುದಾನವನ್ನು ನೀಡಿದ್ದರು. ಆದರೆ ಆ ಹತ್ತು ಕೋಟಿ ಹಣದಲ್ಲಿ, 7.5 ಕೋಟಿಯಷ್ಟು ಹಣವನ್ನು ತಾಲ್ಲೂಕು ಕೇಂದ್ರ ಪಿರಿಯಾಪಟ್ಟಣದಲ್ಲಿ ʼದೇವರಾಜ ಅರಸು ಭವನʼವನ್ನು ನಿರ್ಮಾಣ ಮಾಡಲಾಗಿದೆ. ಗ್ರಾಮಕ್ಕೆಂದು ಕೊಟ್ಟ ಹಣವನ್ನು ತಾಲ್ಲೂಕು ಕೇಂದ್ರಕ್ಕೆ ವರ್ಗಾಯಿಸಲಾಗಿದೆ. ಇನ್ನುಳಿದ 2.5 ಕೋಟಿ ಹಣದಲ್ಲಿ, ಗ್ರಾಮದ ಎರಡು ಬದಿಯಲ್ಲಿ ದ್ವಾರವನ್ನು, ಗ್ರಾಮಪಂಚಾಯಿತಿ ಪಕ್ಕದಲ್ಲಿ ಅರಸು ಅವರ ಪ್ರತಿಮೆಯನ್ನು, ವೀರಭದ್ರೇಶ್ವರ ಮತ್ತು ಈಶ್ವರ ದೇವಸ್ಥಾನದ ದುರಸ್ತಿ ಕಾರ್ಯವನ್ನು, ದೇವಸ್ಥಾನದ ಒಂದು ಬದಿಯಲ್ಲಿ ಸಿಮೆಂಟ್ ರಸ್ತೆಯನ್ನು ಮಾಡಲಾಗಿದೆ. ಆದರೆ ಇದ್ಯಾವುದು ಕೂಡ ಸಂಪೂರ್ಣ ಉಪಯೋಗಕ್ಕೆ ಬರುವ ರೀತಿಯಲ್ಲಿ ನಿರ್ಮಾಣ ಮಾಡಿಕೊಟ್ಟಿಲ್ಲವೆಂದು ಗ್ರಾಮಸ್ಥರು ಆರೋಪಿಸುತ್ತಾರೆ.

“ಬೆಟ್ಟದತುಂಗಾ ಗ್ರಾಮದಲ್ಲಿ ಅರಸು ಅವರ ವಂಶಸ್ಥರು ಹೆಚ್ಚಿದ್ದಾರೆ. ಇಡೀ ಕರ್ನಾಟಕದಲ್ಲಿ ಅರಸು ವಂಶಸ್ಥರು ಹೆಚ್ಚಿರುವ ಗ್ರಾಮ ಇದೊಂದೆ. ಗ್ರಾಮದ ಅಭಿವೃದ್ಧಿಗಾಗಿ ಕೊಟ್ಟ ಹಣವನ್ನು ಗ್ರಾಮಕ್ಕಾಗಿಯೇ ಉಪಯೋಗಿಸದೆ ಅಧಿಕಾರಿಗಳು ಬೇಕಾಬಿಟ್ಟಿ ಕೆಲಸ ಮಾಡಿದ್ದಾರೆ” ಎನ್ನುತ್ತಾರೆ ಗ್ರಾಮದ ಪ್ರಮುಖರಾದ ಅರುಣ್ ರಾಜೇ ಅರಸ್.
ಅರಸು ಈ ನಾಡು ಕಂಡಂತಹ ಅಪರೂಪದ ರಾಜಕಾರಣಿ. ಮೈಸೂರು ರಾಜ್ಯದ ಸಂದರ್ಭದಲ್ಲಿ ಗ್ರಾಮ(ಮಂಡಲ) ಪಂಚಾಯತಿಯಿಂದ ಹಿಡಿದು ಮುಖ್ಯಮಂತ್ರಿಗಾದಿಗೆ ಏರಿ, ಉತ್ತಮ ಆಡಳಿತದಿಂದ, ತಮ್ಮ ವಿವೇಕಯುತ ತೀರ್ಮಾನಗಳಿಂದ ಜನ ಸಾಮಾನ್ಯರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದವರು. ಶೋಷಣೆ ಹಾಗೂ ಬಡತನ ನಿವಾರಣೆಗೆ ಪಣತೊಟ್ಟು ಹೋರಾಡಿದ ಧೀಮಂತ ನಾಯಕ. 1970 ರ ದಶಕವನ್ನು ‘ದೇವರಾಜ ಅರಸರ ಯುಗ’ ಎಂದೇ ಈಗಲೂ ಪರಿಗಣಿಸಲಾಗುತ್ತದೆ.
ಅರಸು ಅವರ ಅಧಿಕಾರವಧಿಯನ್ನು ಕೆದಕಿದರೆ ಭೂ ಸುಧಾರಣೆ ಕಾಯಿದೆ, ‘ಉಳುವವನೇ ಭೂಮಿಯ ಒಡೆಯ’, ವೃದ್ಧಾಪ್ಯ ವೇತನ, ನಿರುದ್ಯೋಗಿ ಪದವೀಧರರಿಗೆ ಸಹಾಯಧನ, ಬಡವರಿಗೆ ಭಾಗ್ಯಜ್ಯೋತಿ, ಹಾವನೂರು ವರದಿ, ವಿಧವಾ ವೇತನ, ಜೀತ ಪದ್ಧತಿ ವಿಮುಕ್ತಿ, ಕೃಷಿ ಬ್ಯಾಂಕುಗಳ ಸ್ಥಾಪನೆ, ಮಲ ಹೊರುವ ಪದ್ಧತಿ ನಿಷೇಧ, ಕರ್ನಾಟಕ ಮರು ನಾಮಕರಣ, ವಿಶ್ವವಿದ್ಯಾನಿಲಯಗಳ ಸ್ವಾಯುತ್ತತೆಗಾಗಿ 1976 ರ ಕಾಯಿದೆ, ಕೃಷಿ ಕಾರ್ಮಿಕರ ಕನಿಷ್ಠ ವೇತನ ನಿಗದಿ. ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ವಿದ್ಯಾರ್ಥಿ ವೇತನ ಹೀಗೆ ಪಟ್ಟಿ ಮುಂದುವರೆಯುತ್ತಲೇ ಹೋಗುತ್ತದೆ.
ಅರಸು ಹೆಸರು ಹೇಳದ ಒಬ್ಬ ರಾಜಕಾರಣಿ ರಾಜ್ಯದಲ್ಲಿಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ. ರಾಜ್ಯದಲ್ಲಿ ಹಲವು ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ಆದರೇ, ಇಂದಿಗೂ ಜನ ಮಾನಸದಲ್ಲಿ ಉಳಿದುಕೊಂಡಿರುವ ಏಕೈಕ ವ್ಯಕ್ತಿ ಕರ್ನಾಟಕ ಏಕೀಕರಣ ಕರ್ತೃ ಡಿ. ದೇವರಾಜ ಅರಸು. ಹಿಂದುಳಿದ ವರ್ಗಗಳಿಂದ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಮೊದಲ ವ್ಯಕ್ತಿ. ಐದು ವರ್ಷ ಪೂರ್ಣಗೊಳಿಸಿದ ಮೊದಲಿಗರೂ ಹೌದು. ಇಂತಹ ವ್ಯಕ್ತಿಯನ್ನು ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯನವರು ಮತ್ತು ಅವರ ಕಾಂಗ್ರೆಸ್ ಸರ್ಕಾರವೇ ಮರೆತಿರುವುದು ದುರಂತ.




