ಪ್ರಶ್ನಿಸುವವರ ಮೇಲೆ ಡಿಜಿಟಲ್ ಸೆನ್ಸಾರ್‌ಶಿಪ್: ಸಿಂಗರ್‌ ರಿಹಾನಾರಿಂದ ಜರ್ನಲಿಸ್ಟ್‌ ಲಿಂಗ್‌ವರೆಗೆ… 

Date:

ಜಾಗತಿಕ ವೇದಿಕೆಯಲ್ಲಿ ಅಧಿಕಾರಸ್ಥರೆಡೆಗೆ ಬೊಟ್ಟು ಮಾಡಿದ ಕೂಡಲೇ, ಪ್ರಶ್ನಿಸಿದವರ ಅಸ್ತಿತ್ವವನ್ನೇ ಹತ್ತಿಕ್ಕಲು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಯತ್ನಗಳು ನಡೆಯುತ್ತಿರುವುದು ನಿಜಕ್ಕೂ ಖೇದಕರ. ಸೋಷಿಯಲ್ ಮೀಡಿಯಾ ದೈತ್ಯ ಕಂಪನಿಗಳು ತಮ್ಮ ಮಾರುಕಟ್ಟೆ ಹಿತಾಸಕ್ತಿಗಾಗಿ ಇಂತಹ ಸೈಬರ್ ಬುಲ್ಲಿಯಿಂಗ್ ಮತ್ತು ಸರ್ಕಾರದ ಒತ್ತಡಗಳಿಗೆ ಸುಲಭವಾಗಿ ಶರಣಾಗುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕ.

- Advertisement -

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ ಎಂದು ಕರೆಯಲಾಗುವ ಪತ್ರಿಕೋದ್ಯಮದ ಮೂಲ ಉದ್ದೇಶವೇ ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು. ಆದರೆ, ಸದ್ಯಕ್ಕೆ ಭಾರತದ ಮಟ್ಟಿಗೆ ಈ ಮಾತು ಪೂರ್ತಿಯಾಗಿ ನಿಜವೆನಿಸುತ್ತಿಲ್ಲ. ಇದಕ್ಕೆ ನಾರ್ವೆಯ ಪತ್ರಕರ್ತೆ ಹೆಲೆ ಲಿಂಗ್ (Helle Lyng) ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳು ಸಸ್ಪೆಂಡ್ ಆಗಿರುವುದೇ ಸಾಕ್ಷಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ನಾರ್ವೆಯ ಓಸ್ಲೋದಲ್ಲಿ ನಡೆದ ಜಂಟಿ ಮಾಧ್ಯಮ ಗೋಷ್ಠಿಯ ವೇಳೆ, ಓಸ್ಲೋದ ಪ್ರಮುಖ ಪತ್ರಿಕೆ ʼದಾಗ್‌ಸಾವಿಸೆನ್ʼ (Dagsavisen) ವರದಿಗಾರ್ತಿ ಹೆಲೆ ಲಿಂಗ್, ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ನೇರ ಪ್ರಶ್ನೆಯೊಂದನ್ನು ಎಸೆದರು. “ಜಗತ್ತಿನ ಅತ್ಯಂತ ಸ್ವತಂತ್ರ ಮಾಧ್ಯಮಗಳನ್ನು ಹೊಂದಿರುವ ದೇಶದಿಂದ ನೀವೇಕೆ ಕೆಲವು ಪ್ರಶ್ನೆಗಳನ್ನು ಸ್ವೀಕರಿಸುತ್ತಿಲ್ಲ?” ಎಂದು. ಆದರೆ, ಭಾರತದ ಪ್ರಧಾನಿ ಆ ಪ್ರಶ್ನೆಗೆ ತಿರುಗಿಯೂ ನೋಡದೆ ಅಲ್ಲಿಂದ ಕಾಲ್ಕಿತ್ತರು.

ಘಟನೆಯ ವಿಡಿಯೋವನ್ನು ಹೆಲೆ ಲಿಂಗ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, “ದಿನವಿಡೀ ನಾನು ನನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಲಾಗಿನ್ ಆಗಲು ಹೆಣಗಾಡಿದ್ದೇನೆ. ಈಗ ನನ್ನ ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನಾನು ತೆತ್ತ ಒಂದು ಸಣ್ಣ ಬೆಲೆ. ಹಿಂದೆಂದೂ ನನಗೆ ಈ ರೀತಿ ಆಗಿರಲಿಲ್ಲ” ಎಂದು ಬರೆದುಕೊಂಡಿದ್ದಾರೆ. ಆ ವಿಡಿಯೋ ಹಾಗೂ ಸಂಬಂಧಿತ ಸುದ್ದಿಗಳು ವೈರಲ್ ಆದವು. ಕೆಲ ಭಾರತೀಯರು ಹೆಲೆಯ ಪರವಾಗಿ ನಿಂತರೆ, ಕೆಲವರು ವಿರೋಧಿಸುತ್ತಿದ್ದಾರೆ.

image 2026 05 20T182931.217

ಘಟನೆ ಬಳಿಕ ಹೆಲೆ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧಿಕಾರಿಗಳೊಂದಿಗೂ ಮಾಧ್ಯಮ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಕುರಿತು ವಾಗ್ವಾದ ನಡೆಸಿದ್ದರು. ಇದೇ ಕಾರಣಕ್ಕೆ ಮೋದಿ ಭಕ್ತಗಣ ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ʼವಿದೇಶಿ ಏಜೆಂಟ್ʼ, ʼಚೀನಾ ಪರ ಪ್ರಚಾರಕಿʼ ಎಂದು ತಲೆಬುಡವಿಲ್ಲದೆ ತೀವ್ರವಾಗಿ ಟ್ರೋಲ್ ಮಾಡಲು ಶುರುವಿಟ್ಟುಕೊಂಡಿತು.

ಭಿನ್ನಾಭಿಪ್ರಾಯಗಳನ್ನು ತಾರ್ಕಿಕವಾಗಿ ಎದುರಿಸಲಾಗದಿದ್ದಾಗ ಬಳಸಲಾಗುವ ಇತ್ತೀಚಿನ ಅಪಾಯಕಾರಿ ಅಸ್ತ್ರ ʼಮಾಸ್ ರಿಪೋರ್ಟಿಂಗ್ʼ (Mass Reporting). “ಭಾರತೀಯ ಮೂಲದ ಸಾವಿರಾರು ಟ್ರೋಲ್ ಖಾತೆಗಳು ಹೆಲೆ ವಿರುದ್ಧ ಮುಗಿಬಿದ್ದವು. ಈ ಗುಂಪುಗಳು ಸಂಘಟಿತವಾಗಿ ಅವರ ಖಾತೆಗಳ ವಿರುದ್ಧ ʼಮಾಸ್ ರಿಪೋರ್ಟ್ʼ (Mass Reporting) ಮಾಡಿವೆ. ಆದರೆ ಮೆಟಾ ಸರಿಯಾದ ತನಿಖೆ ನಡೆಸದೆ ಆಕೆಯ ಖಾತೆಗಳನ್ನು ಸಸ್ಪೆಂಡ್ ಮಾಡಿದೆ” ಎನ್ನುತ್ತಿದ್ದಾರೆ ತಾಂತ್ರಿಕ ತಜ್ಞರು.

ಕೇಂದ್ರ ಸರ್ಕಾರ ಬೆಂಬಲಿತ ಐಟಿ ಸೆಲ್‌ಗಳು ಮತ್ತು ಸಂಘಟಿತ ಸೈಬರ್ ಗುಂಪುಗಳು ವಿರೋಧಿಗಳನ್ನು ಹತ್ತಿಕ್ಕಲು ‘ಕಾನ್ಸರ್ಟೆಡ್ ರಿಪೋರ್ಟಿಂಗ್’ (Concerted Reporting) ತಂತ್ರವನ್ನು ಬಳಸುತ್ತವೆ. ತಾಂತ್ರಿಕವಾಗಿ, ಒಂದು ಖಾತೆಯ ವಿರುದ್ಧ ಏಕಕಾಲದಲ್ಲಿ ಸಾವಿರಾರು ದೂರುಗಳು ಹೋದಾಗ, ಮೆಟಾ ಅಥವಾ ಎಕ್ಸ್ ಸಂಸ್ಥೆಗಳ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಯು ಯಾವುದೇ ಮಾನವ ಪರಿಶೀಲನೆ ಇಲ್ಲದೆ ಆ ಖಾತೆಯನ್ನು ಬ್ಲಾಕ್ ಮಾಡುತ್ತದೆ.

ಮೇಲಾಗಿ, ಭಾರತವು ವಿಶ್ವದಲ್ಲೇ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ಗೆ ಅತಿ ದೊಡ್ಡ ಮಾರುಕಟ್ಟೆ. ಹೀಗಾಗಿ, ಈ ದೈತ್ಯ ಕಂಪನಿಗಳು ತಮ್ಮ ವ್ಯಾಪಾರ ಉಳಿಸಿಕೊಳ್ಳಲು ಸ್ಥಳೀಯ ಬಹುಸಂಖ್ಯಾತರ ಆಕ್ರೋಶಕ್ಕೆ ಅಥವಾ ಸರ್ಕಾರದ ಒತ್ತಡಕ್ಕೆ ಸುಲಭವಾಗಿ ಮಣಿಯುತ್ತವೆ ಎಂಬುದು ಜಾಗತಿಕ ಮಾಧ್ಯಮ ವಿಶ್ಲೇಷಕರ ಆಪಾದನೆ.

ಜಾಗತಿಕ ಪ್ರೆಸ್ ಫ್ರೀಡಂ ಇಂಡೆಕ್ಸ್ (World Press Freedom Index) ಪ್ರಕಾರ, ನಾರ್ವೆ ದೇಶವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ (Rank 1). ಆದರೆ ಅದೇ ಪಟ್ಟಿಯಲ್ಲಿ ಭಾರತ ತಳಮಟ್ಟದಲ್ಲಿದೆ. ಅಂದರೆ, 157ನೇ ಸ್ಥಾನಕ್ಕೆ ಕುಸಿದಿದೆ. ಈ ವೈರುಧ್ಯವೇ ಲಿಂಗ್ ಅವರ ಪ್ರಶ್ನೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟೊಂದು ತೂಕ ಬರಲು ಕಾರಣವಾಯಿತು.

ಹೆಲೆ ಲಿಂಗ್ ಎದುರಿಸಿದ ಈ ಪರಿಸ್ಥಿತಿ ಮೊದಲ ಬಾರಿಗೆ ಜರುಗಿದ್ದಲ್ಲ. ಈ ಹಿಂದೆ ದೆಹಲಿಯಲ್ಲಿ ರೈತರ ಪ್ರತಿಭಟನೆ (Farmers Protest) ನಡೆಯುತ್ತಿದ್ದ ಸಂದರ್ಭದಲ್ಲಿ ಜಾಗತಿಕ ಪಾಪ್ ಗಾಯಕಿ ರಿಹಾನಾ (Rihanna), ಪ್ರತಿಭಟನೆಯನ್ನು ಬೆಂಬಲಿಸಿ, “ನಾವೇಕೆ ಇದರ ಬಗ್ಗೆ ಮಾತನಾಡುತ್ತಿಲ್ಲ?” ಎಂದು ಕೆಲವೇ ಪದಗಳ ಒಂದು ಟ್ವೀಟ್ ಮಾಡಿದ್ದರಷ್ಟೇ. ಆಗಲೂ ಇಂತಹುದೇ ಡಿಜಿಟಲ್ ದಾಳಿ ನಡೆದಿತ್ತು. ರಿಹಾನಾ ಹಣ ಪಡೆದು ಭಾರತದ ವಿರುದ್ಧ ಟ್ವೀಟ್ ಮಾಡುತ್ತಿದ್ದಾರೆ ಎಂದು ಬಿಂಬಿಸಲಾಯಿತು. ಆಕೆಯ ಹಳೆಯ ಫೋಟೋಗಳನ್ನು ದುರುಪಯೋಗಪಡಿಸಿಕೊಂಡು ಚಾರಿತ್ರ್ಯ ಹರಣ ಮಾಡಲು ಯತ್ನಿಸಲಾಯಿತು. ಭಾರತದಲ್ಲಿ ಆಕೆಯ ಹಾಡುಗಳನ್ನು ಬಹಿಷ್ಕರಿಸುವಂತೆ ಅಭಿಯಾನವನ್ನೂ ನಡೆಸಲಾಯಿತು.

ಜಾಗತಿಕ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಕೂಡ ದೆಹಲಿಯ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು. ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬ ಮಾಹಿತಿ ಹೊಂದಿದ್ದ ʼಟೂಲ್‌ಕಿಟ್ʼ ಎಂಬ ಗೂಗಲ್ ದಾಖಲೆಯನ್ನು ಇಂಟರ್ನೆಟ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ಭಾರತ ಸರ್ಕಾರದ ವಿರುದ್ಧ ನಡೆದ ಅಂತಾರಾಷ್ಟ್ರೀಯ ಪಿತೂರಿ ಎಂದು ಬಿಂಬಿಸಿದ ದೆಹಲಿ ಪೊಲೀಸರು, ಗ್ರೆಟಾ ವಿರುದ್ಧ ದೇಶದ್ರೋಹದ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದರು. ಅಲ್ಲದೆ, ಈ ಟೂಲ್‌ಕಿಟ್ ತಯಾರಿಕೆಯಲ್ಲಿ ಗ್ರೆಟಾಗೆ ಆನ್‌ಲೈನ್ ಮೂಲಕ ನೆರವಾಗಿದ್ದ ಬೆಂಗಳೂರಿನ ಯುವ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿ ಜೈಲಿಗಟ್ಟಿದ್ದರು.

WhatsApp Image 2026 05 20 at 6.34.06 PM
ಗ್ರೆಟಾ ಥನ್‌ಬರ್ಗ್

ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ ನಾರ್ವೆ ಪತ್ರಕರ್ತೆ ಹೆಲೆ ಲಿಂಗ್ ಫೇಸ್‌ಬುಕ್, ಇನ್‌ಸ್ಟಾ ಖಾತೆಗಳು ಸಸ್ಪೆಂಡ್!

ಬ್ರಿಟಿಷ್ ಮತ್ತು ಆಸ್ಟ್ರೇಲಿಯನ್ ಪೌರತ್ವ ಹೊಂದಿದ್ದ ಮಹಿಳಾ ಪತ್ರಕರ್ತೆ ಅವನಿ ಡಯಾಸ್ ಅವರು ABC (ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ಸಂಸ್ಥೆಯ ದಕ್ಷಿಣ ಏಷ್ಯಾ ಮುಖ್ಯಸ್ಥರಾಗಿ ಭಾರತದಲ್ಲೇ ಇದ್ದು ವರದಿ ಮಾಡುತ್ತಿದ್ದರು. ಅವರು ಭಾರತದ ಪ್ರಜಾಪ್ರಭುತ್ವದ ಸ್ಥಿತಿಗತಿ ಮತ್ತು ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕ್ಷ್ಯಚಿತ್ರವೊಂದನ್ನು ಸಿದ್ಧಪಡಿಸಿದ್ದರು. ಇದು ಹೊರಬರುತ್ತಿದ್ದಂತೆ ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶದ ಮೇರೆಗೆ ಯೂಟ್ಯೂಬ್‌ನಲ್ಲಿ ಆ ವಿಡಿಯೋವನ್ನು ಭಾರತೀಯರಿಗೆ ಕಾಣಿಸದಂತೆ ಬ್ಲಾಕ್ ಮಾಡಲಾಯಿತು. ಜೊತೆಗೆ ಆಕೆಯ ವಿರುದ್ಧ ತೀವ್ರ ಡಿಜಿಟಲ್ ಟ್ರೋಲಿಂಗ್ ನಡೆಸಿ, ಸಾರ್ವತ್ರಿಕ ಚುನಾವಣೆಯ ವರದಿಗಾರಿಕೆಗೆ ಆಕೆಗೆ ವೀಸಾ ನವೀಕರಣ ಮಾಡಲು ಭಾರತ ಸರ್ಕಾರ ನಿರಾಕರಿಸಿತು. ಇದರಿಂದಾಗಿ ಆಕೆ ಅನಿವಾರ್ಯವಾಗಿ ಭಾರತವನ್ನು ತೊರೆಯಬೇಕಾಯಿತು.

WhatsApp Image 2026 05 20 at 6.34.38 PM
ಅವನಿ ಡಯಾಸ್

BBC ಮಾಧ್ಯಮ ಸಂಸ್ಥೆ ಲಂಡನ್‌ನಲ್ಲಿದ್ದುಕೊಂಡು 2002ರ ಗುಜರಾತ್ ಗಲಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರದ ಕುರಿತು ಎರಡು ಭಾಗಗಳ ವಿಶೇಷ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಸಾಕ್ಷ್ಯಚಿತ್ರ ಜಾಗತಿಕವಾಗಿ ತೆರೆಕಾಣುತ್ತಿದ್ದಂತೆ ಭಾರತ ಸರ್ಕಾರ ತಕ್ಷಣವೇ ಎಚ್ಚೆತ್ತು, ತನ್ನ ತುರ್ತು ಅಧಿಕಾರ ಬಳಸಿ ಯೂಟ್ಯೂಬ್ ಮತ್ತು ಟ್ವಿಟರ್‌ನಿಂದ ಇದರ ಲಿಂಕ್‌ಗಳನ್ನು ಭಾರತದಲ್ಲಿ ನಿಷೇಧಿಸಿತು. ಈ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಸಾಮಾನ್ಯ ಭಾರತೀಯರ ಖಾತೆಗಳನ್ನೂ ಸಸ್ಪೆಂಡ್ ಮಾಡಲಾಯಿತು. ಈ ಬೆನ್ನಲ್ಲೇ, ದೆಹಲಿ ಮತ್ತು ಮುಂಬೈನಲ್ಲಿದ್ದ ಬಿಬಿಸಿ ಕಚೇರಿಗಳ ಮೇಲೆ ಭಾರತದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ದಿನಗಟ್ಟಲೆ ಪರಿಶೀಲನೆ ನಡೆಸಿದ್ದರು.

ಟ್ವಿಟರ್ (ಇಂದಿನ ಎಕ್ಸ್) ಸಂಸ್ಥೆಯ ಸಹ-ಸ್ಥಾಪಕ ಮತ್ತು ಮಾಜಿ ಸಿಇಒ ಜ್ಯಾಕ್ ಡೋರ್ಸಿ, ಅಮೆರಿಕದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಭಾರತ ಸರ್ಕಾರದ ಡಿಜಿಟಲ್ ಒತ್ತಡದ ಕರಾಳ ಮುಖವನ್ನು ಬಹಿರಂಗಪಡಿಸಿದ್ದರು. ಭಾರತದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದ್ದ ಸಮಯದಲ್ಲಿ ಸರ್ಕಾರದ ನೀತಿಗಳನ್ನು ಟೀಕಿಸುತ್ತಿದ್ದ ಪತ್ರಕರ್ತರು ಮತ್ತು ಸಕ್ರಿಯ ಹೋರಾಟಗಾರರ ಟ್ವಿಟರ್ ಖಾತೆಗಳನ್ನು ಸಂಪೂರ್ಣವಾಗಿ ಬ್ಯಾನ್ ಮಾಡುವಂತೆ ಭಾರತ ಸರ್ಕಾರ ತಮಗೆ ಸತತವಾಗಿ ಆನ್‌ಲೈನ್ ಮೂಲಕ ಒತ್ತಡ ಹೇರಿತ್ತು ಎಂದು ಅವರು ಒಪ್ಪಿಕೊಂಡಿದ್ದರು. ಒಂದು ವೇಳೆ ಟ್ವಿಟರ್ ಸಂಸ್ಥೆಯು ಸರ್ಕಾರದ ಆದೇಶಗಳನ್ನು ಪಾಲಿಸದಿದ್ದರೆ ಭಾರತದಲ್ಲಿರುವ ಟ್ವಿಟರ್ ಕಚೇರಿಗಳನ್ನು ಮುಚ್ಚಿಸುವುದಾಗಿ ಮತ್ತು ಅಲ್ಲಿನ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡಿಸುವುದಾಗಿ ತಮಗೆ ಬೆದರಿಕೆ ಹಾಕಲಾಗಿತ್ತು ಎಂದು ವಿಶ್ವದ ಮುಂದೆ ಹೇಳಿಕೆ ನೀಡಿದ್ದರು.

WhatsApp Image 2026 05 20 at 6.35.13 PM
ಜ್ಯಾಕ್ ಡೋರ್ಸಿ

ಇದನ್ನೂ ಓದಿ: ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: ನಾರ್ವೆ ನಂ.1, ಭಾರತ 157; ಈ ಕುಸಿತಕ್ಕೆ ಕಾರಣಗಳೇನು?

ಇಂತಹ ಸಂಘಟಿತ ಸೈಬರ್ ಬುಲ್ಲಿಯಿಂಗ್ (Cyber Bullying) ಮುಖಾಂತರ ಸಮಾಜದಲ್ಲಿ ಒಂದು ರೀತಿಯ ಭಯದ ವಾತಾವರಣ ಸೃಷ್ಟಿಸಲಾಗುತ್ತದೆ. “ನಾವು ಪ್ರಶ್ನೆ ಕೇಳಿದರೆ ನಮ್ಮ ಖಾತೆಗಳೂ ನಾಶವಾಗಬಹುದು, ನಮ್ಮ ಮೇಲೂ ದಾಳಿ ನಡೆಯಬಹುದು” ಎಂದು ಸಾಮಾನ್ಯ ಜನರೂ ಪ್ರಶ್ನೆ ಕೇಳಲು ಹೆದರುವಂತೆ ಮಾಡುವುದೇ ಇದರ ಮುಖ್ಯ ಉದ್ದೇಶ.

ಜಾಗತಿಕ ವೇದಿಕೆಯಲ್ಲಿ ಅಧಿಕಾರಸ್ಥರೆಡೆಗೆ ಬೊಟ್ಟು ಮಾಡಿದ ಕೂಡಲೇ, ಪ್ರಶ್ನಿಸಿದವರ ಅಸ್ತಿತ್ವವನ್ನೇ ಹತ್ತಿಕ್ಕಲು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಯತ್ನಗಳು ನಡೆಯುತ್ತಿರುವುದು ನಿಜಕ್ಕೂ ಖೇದಕರ. ಸೋಷಿಯಲ್ ಮೀಡಿಯಾ ದೈತ್ಯ ಕಂಪನಿಗಳು ತಮ್ಮ ಮಾರುಕಟ್ಟೆ ಹಿತಾಸಕ್ತಿಗಾಗಿ ಇಂತಹ ಸೈಬರ್ ಬುಲ್ಲಿಯಿಂಗ್ ಮತ್ತು ಸರ್ಕಾರದ ಒತ್ತಡಗಳಿಗೆ ಸುಲಭವಾಗಿ ಶರಣಾಗುತ್ತಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ಮಾರಕ. ಈಗ ಧ್ವನಿ ಹತ್ತಿಕ್ಕಿ ತಾತ್ಕಾಲಿಕವಾಗಿ ತಪ್ಪಿಸಿಕೊಳ್ಳಬಹುದು, ದಾಖಲೆಗಳನ್ನು ಮರೆಮಾಚಿ ಕತ್ತಲೆಗೆಸೆಯಬಹುದು.. ಆದರೆ, ಸರಿಯಾದ ಬೆಳಕು ಬಿದ್ದಾಗ ಅವು ಗೋಚರಿಸದೇ ಇರಲಾರವು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...