ದೇಶದ ಗಲ್ಲಿ ಗಲ್ಲಿಗಳಲ್ಲಿ ಬೇರೂರಿದೆ ಭೀಕರ ಅಸಮಾನತೆ; ‘ಕೇರಿ ಸಂಸ್ಕೃತಿʼ ಆಧುನಿಕ ರೂಪದಲ್ಲಿ ಮರುಸೃಷ್ಟಿ!

Date:

ಅಂದು ಅಮೆರಿಕದಲ್ಲಿ ಕಪ್ಪು ವರ್ಣೀಯರ ಪ್ರದೇಶಗಳನ್ನು ಅಭಿವೃದ್ಧಿಯಿಂದ ವಂಚಿಸಲಾಗಿತ್ತು, ಇಂದು ಭಾರತದಲ್ಲಿ ಅಂತಹದ್ದೇ ಒಂದು ಅಘೋಷಿತ, ಅದೃಶ್ಯ ಪ್ರಕ್ರಿಯೆ ನಡೆಯುತ್ತಿದೆ. ಬ್ರೆಜಿಲ್‌ನಂತಹ ದೇಶಗಳಿಗಿಂತಲೂ ಭಾರತದಲ್ಲಿ ಈ ವಸತಿ ಪ್ರತ್ಯೇಕತೆ ಹೆಚ್ಚಿರುವುದು ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಎದುರಾಗಿರುವ ದೊಡ್ಡ ಸವಾಲು.

ಜಾಗತಿಕ ವೇದಿಕೆಗಳಲ್ಲಿ ಭಾರತ ಆರ್ಥಿಕ ಮಹಾಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಬಣ್ಣಿಸಲಾಗುತ್ತಿದೆ. ಈ ಅಬ್ಬರದ ಪ್ರಚಾರವನ್ನು ಅನೇಕರು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಒಂದು ದೇಶದ ನೈಜ ಅಭಿವೃದ್ಧಿ ಅಳೆಯಬೇಕಿರುವುದು ಆ ದೇಶದ ಕಟ್ಟಕಡೆಯ ಹಳ್ಳಿಯ ಅಥವಾ ಬಡಾವಣೆಯ ಪ್ರಗತಿಯಿಂದ ಎನ್ನುವುದನ್ನು ನಾವು ಮರೆತೇ ಬಿಡುತ್ತೇವೆ. ಇಂತಹ ಸಂದರ್ಭದಲ್ಲಿ, ಅಮೆರಿಕದ ಯುನಿವರ್ಸಿಟಿ ಆಫ್ ಚಿಕಾಗೋದ ‘ಸ್ಟೋನ್ ಸೆಂಟರ್ ಫಾರ್ ರಿಸರ್ಚ್ ಆನ್ ವೆಲ್ತ್ ಇನ್ಇಕ್ವಾಲಿಟಿ ಅಂಡ್ ಮೊಬಿಲಿಟಿ’ (Stone Centre for Research on Wealth Inequality and Mobility) ಸಂಸ್ಥೆಯು ಹೊರತಂದಿರುವ ಸಂಶೋಧನಾ ವರದಿಯೊಂದು ನಿಜಕ್ಕೂ ಬೆಚ್ಚಿಬೀಳಿಸುವಂತಿದೆ. ನಾವು ಊಹೆ ಕೂಡ ಮಾಡಲಾಗದಷ್ಟು ಭೀಕರ ಸಾಮಾಜಿಕ ಅಸಮಾನತೆ ನಮ್ಮ ದೇಶದ ಗಲ್ಲಿ ಗಲ್ಲಿಗಳಲ್ಲಿ ಬೇರೂರಿದೆ ಎನ್ನುವ ಸತ್ಯವನ್ನು ಈ ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ.

- Advertisement -

ಒಂದು ಕಾಲದಲ್ಲಿ ಹಳ್ಳಿಗಳ ಜಾತಿ ಪದ್ಧತಿ ಮತ್ತು ಧರ್ಮ-ಮೌಢ್ಯದ ಸಂಕೋಲೆಗಳಿಂದ ಮುಕ್ತಿ ಪಡೆಯಲು ‘ನಗರ’ಗಳು ‘ಮುಕ್ತಿ ಮಾರ್ಗ’ ಎಂದು ಸಮಾಜಶಾಸ್ತ್ರಜ್ಞರು ನಂಬಿದ್ದರು. ಆದರೆ, ಆಧುನಿಕ ಭಾರತದ ನಗರಗಳು ಆ ಹಳೆಯ ಕಂದಕಗಳನ್ನು ಹಗುರಗೊಳಿಸಿ ಮುಚ್ಚುವ ಬದಲಿಗೆ, ಅವುಗಳಿಗೆ ಸಿಮೆಂಟ್ ಮತ್ತು ಕಾಂಕ್ರೀಟ್ ಮೆತ್ತಿ ಮತ್ತಷ್ಟು ಗಟ್ಟಿ ಮಾಡುತ್ತಿವೆ. ಈ ವರದಿ ಕೂಡ ಅಂಥದ್ದೇ ಸೂಕ್ಷ್ಮ ವಿಚಾರದ ಸುತ್ತ ಹೆಣೆದುಕೊಂಡಿದೆ. ‘SSRN ವರ್ಕಿಂಗ್ ಪೇಪರ್ ಸೀರೀಸ್’ನಲ್ಲಿ ಪ್ರಕಟವಾಗಿರುವ ಈ ಪ್ರಬಂಧದ ಹೆಸರು, “Residential Segregation and Unequal Access to Local Public Services in India: Evidence from 1.5m Neighborhoods”. ಇಂಪೀರಿಯಲ್ ಕಾಲೇಜ್ ಲಂಡನ್‌ನ ಸ್ಯಾಮ್ ಆಶರ್, ಡಾರ್ಟ್‌ಮೌತ್ ಕಾಲೇಜ್‌ನ ಪೌಲ್ ನೊವೊಸಾದ್, ಯುನಿವರ್ಸಿಟಿ ಆಫ್ ಚಿಕಾಗೋದ ಅಂಜಲಿ ಅಡುಕಿಯಾ ಸೇರಿದಂತೆ ಐದು ಮಂದಿ ಸಂಶೋಧಕರ ತಂಡ ಭಾರತದ ಸುಮಾರು 15 ಲಕ್ಷ ನಗರ ಮತ್ತು ಗ್ರಾಮೀಣ ಬಡಾವಣೆಗಳನ್ನು (Neighborhoods), ವಿಶೇಷವಾಗಿ ಪರಿಶಿಷ್ಟ ಜಾತಿ (SC) ಮತ್ತು ಮುಸ್ಲಿಂ ಸಮುದಾಯಗಳಿರುವ ವಸತಿ ಪ್ರದೇಶಗಳನ್ನು ವಿಶ್ಲೇಷಣೆಗೊಳಪಡಿಸಿ ಈ ಮಹಾ ಪ್ರಬಂಧವನ್ನು ಸಿದ್ಧಪಡಿಸಿದ್ದು, ಇಲ್ಲಿನ ಅಸಮಾನತೆಯ ಪ್ರತಿ ಅಂಚಿಗೂ ಬೆಳಕು ಚೆಲ್ಲಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಮೋದಿ ಪರವಿದ್ದ ಯುವಜನರು ತಿರುಗಿಬಿದ್ದಿದ್ದು ಹೇಗೆ?

ಚುನಾವಣಾ ಆಯೋಗದಲ್ಲಿ ಎಸ್‌ಐಆರ್‌ ಮತ್ತು ಚುನಾವಣಾ ಪ್ರಕ್ರಿಯೆಗಳ ಕುರಿತು ಮುಖ್ಯಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಅವರು ಸರ್ವಾಧಿಕಾರಿಯಂತೆ, ಏಕಪಕ್ಷೀಯವಾಗಿ ನಿರ್ಧಾರಗಳ ತೆಗೆದುಕೊಂಡು, ಜಾರಿ ಮಾಡುತ್ತಿದ್ದಾರೆ ಎಂಬ ತನಿಖಾ ವರದಿ ದೇಶಾದ್ಯಂತ ಭಾರೀ ಚರ್ಚೆ...
dh

ನಮ್ಮ ದೇಶದಲ್ಲಿ ಯಾವುದಾದರೂ ಒಂದು ಸಮುದಾಯದ ಜನರು ಅನಾದಿ ಕಾಲದಿಂದಲೂ ಬಡ ಬಡಾವಣೆಗಳಲ್ಲೇ ಗುಂಪು ಗುಂಪಾಗಿ ವಾಸಿಸುವಂತಾದರೆ ಅಥವಾ ವಾಸಿಸುತ್ತಿದ್ದರೆ ಅದು ವಾಸಸ್ಥಳದ ಸಮಸ್ಯೆಯಲ್ಲ; ಆ ಸಮುದಾಯದ ಅಭಿವೃದ್ಧಿಯ ಹಾದಿ ಬಂದ್ ಆಗಿದೆ ಎಂದರ್ಥ. ಅಂತಹ ಪ್ರತ್ಯೇಕ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಉತ್ತಮ ಶಾಲೆಗಳು, ಉದ್ಯೋಗದ ಮಾಹಿತಿ ಅಥವಾ ಒಳ್ಳೆಯ ಆಸ್ಪತ್ರೆಗಳು ಕೂಡ ಸಿಗುವುದು ದುಸ್ತರ. ಅಲ್ಲದೆ, ಸಮಾಜದ ಇತರೆ ಜನರು ಆ ಸಮುದಾಯದ ಬಗ್ಗೆ ಇಟ್ಟುಕೊಂಡ ತಪ್ಪು ಕಲ್ಪನೆಗಳನ್ನು (Stereotype) ಅಳಿಸುವುದು ಕೂಡ ಅಸಾಧ್ಯ. ಅಮೆರಿಕ, ಯುರೋಪಿನಂತಹ ಶ್ರೀಮಂತ ದೇಶಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಆದರೆ ಭಾರತದಂತಹ ದೇಶದಲ್ಲಿ, ನಗರಗಳು ಇನ್ನೂ ಬೆಳೆಯುವ ಹಂತದಲ್ಲೇ ಇವೆ. ಈ ಹಂತದಲ್ಲೇ ಇಂತಹ ಪ್ರತ್ಯೇಕತೆಯ ಗೋಡೆಗಳು ಗಟ್ಟಿಯಾದರೆ, ಅವು ಮುಂದಿನ ನೂರಾರು ವರ್ಷಗಳ ಕಾಲ ನಮ್ಮ ದೇಶದ ಅಸಮಾನತೆಯನ್ನು ಹಾಗೆಯೇ ಉಳಿಸಿಬಿಡುತ್ತವೆ.

ಸಾಮಾನ್ಯವಾಗಿ ಸರ್ಕಾರಗಳು ಜಿಲ್ಲಾ ಮಟ್ಟದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತವೆ. ಆದರೆ ಒಂದು ಮಗುವಿಗೆ ಶಾಲೆಯ ಪ್ರಯೋಜನ ಸಿಗಬೇಕೆಂದರೆ, ಆ ಶಾಲೆ ಆ ಮಗುವಿನ ಬಡಾವಣೆಯಲ್ಲೇ ಇರಬೇಕು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಅಂಕಿಅಂಶಗಳು ಬಡಾವಣೆಗಳಲ್ಲಿರುವ ನಿಜಚಿತ್ರಣವನ್ನು ತೋರಿಸುವುದಿಲ್ಲ. ಆದರೆ, ಈ ವರದಿಯು ಮುಖ್ಯವಾಗಿ ನಮ್ಮ ದೇಶದ 30 ಕೋಟಿಗೂ ಅಧಿಕ ಜನಸಂಖ್ಯೆ ಇರುವ ಪರಿಶಿಷ್ಟ ಜಾತಿ (ದಲಿತರು) ಮತ್ತು ಮುಸ್ಲಿಂ ಸಮುದಾಯಗಳ ಬದುಕನ್ನು ಅನಾವರಣಗೊಳಿಸಲು ಪ್ರಯತ್ನಿಸಿದೆ. ಬೆಳೆಯುವ ಹಂತದ ದೇಶಗಳಲ್ಲಿ ಈ ಅಸಮಾನತೆ ಮುಂದಿನ ಶತಮಾನಗಳವರೆಗೆ ಎಷ್ಟೆಲ್ಲಾ ಕಂದಕ ಸೃಷ್ಟಿಸಬಹುದು ಎನ್ನುವುದನ್ನು ಪತ್ತೆಹಚ್ಚಲು ಸಂಶೋಧಕರ ತಂಡ ಭಾರತದ ಸುಮಾರು 15 ಲಕ್ಷ ಪುಟ್ಟ ಪುಟ್ಟ ಬಡಾವಣೆಗಳನ್ನು (ಪ್ರತಿ ಬಡಾವಣೆ ಅಂದರೆ ಸುಮಾರು 500 ಜನರ ಗುಂಪು) ಅಧ್ಯಯನಕ್ಕೊಳಪಡಿಸಿದೆ.

ಭಾರತದಲ್ಲಿ ಮುಸ್ಲಿಮರು ಮತ್ತು ದಲಿತರು ವಾಸಿಸುವ ರೀತಿ ಜಗತ್ತಿನ ಬೇರೆಲ್ಲಾ ದೇಶಗಳ ಅಲ್ಪಸಂಖ್ಯಾತರಿಗಿಂತ ಹೆಚ್ಚು ಭಿನ್ನವಾಗಿದೆ. ಇದು ಅಮೆರಿಕದಲ್ಲಿ ಹಿಂದೆ ಇದ್ದ ವರ್ಣಭೇದ ನೀತಿಯಷ್ಟೇ ತೀವ್ರ ಸ್ವರೂಪದ್ದು. ಅಂಕಿಅಂಶಗಳ ಪ್ರಕಾರ, ಶೇ. 26ರಷ್ಟು ಮುಸ್ಲಿಮರು ಮತ್ತು ಶೇ. 16ರಷ್ಟು ಪರಿಶಿಷ್ಟ ಜಾತಿಯವರು ಇಂದಿಗೂ ತಮ್ಮ ಸಮುದಾಯದ ಜನರೇ ತುಂಬಿರುವ ಪ್ರತ್ಯೇಕ ಬಡಾವಣೆಗಳಲ್ಲಿ ವಾಸಿಸುತ್ತಿದ್ದಾರೆ. ಈ ರೀತಿ ಜನರು ಪ್ರತ್ಯೇಕವಾಗಿ ಬದುಕುತ್ತಿರುವುದೇ, ಅವರ ಬಡಾವಣೆಗಳಿಗೆ ಒಳ್ಳೆಯ ರಸ್ತೆ, ಕುಡಿಯುವ ನೀರು, ಒಳಚರಂಡಿ ಮತ್ತು ಶಾಲೆಗಳು ಬರದೇ ಇರಲು ಮುಖ್ಯ ಕಾರಣ ಎಂದು ವರದಿ ಬೊಟ್ಟು ಮಾಡಿದೆ.

ಭಾರತದ ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ವಸತಿ ಪ್ರತ್ಯೇಕತೆಯು ಒಂದಕ್ಕೊಂದು ನಿಕಟ ಸಂಬಂಧ ಹೊಂದಿವೆ. ಅಂದರೆ, ಭಾರತದ ಆಧುನಿಕ ನಗರಗಳು ನೂರಾರು ವರ್ಷಗಳಿಂದ ಹಳ್ಳಿಗಳಲ್ಲಿ ಜಾರಿಯಲ್ಲಿದ್ದ ಅದೇ ಹಳೆಯ ವಸತಿ ವಿನ್ಯಾಸಗಳನ್ನು (ಕೇರಿ) ಮತ್ತು ಜಾತಿ-ಧರ್ಮದ ಪ್ರತ್ಯೇಕತೆಯನ್ನು ಇಂದಿಗೂ ಮರುಸೃಷ್ಟಿಸುತ್ತಿವೆ. ವಿಶೇಷವಾಗಿ ಮುಸ್ಲಿಂ ಸಮುದಾಯವು ಹಳ್ಳಿಗಳಿಗಿಂತ ನಗರಗಳಲ್ಲೇ ಹೆಚ್ಚು ಪ್ರತ್ಯೇಕಿಸಲ್ಪಟ್ಟಿದೆ (Segregated). ಇನ್ನು ಪರಿಶಿಷ್ಟ ಜಾತಿಯವರ ವಿಷಯದಲ್ಲಿ 2001ರಿಂದ 2011ರ ಅವಧಿಯಲ್ಲಿ ಪ್ರತ್ಯೇಕತೆಯ ಪ್ರಮಾಣ ಅಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ, ಸಣ್ಣ ಮತ್ತು ದೊಡ್ಡ ನಗರಗಳಲ್ಲಿ ಹಾಗೂ ಧಾರ್ಮಿಕ ಹಿಂಸಾಚಾರ ನಡೆದ ಇತಿಹಾಸವಿರುವ ನಗರಗಳಲ್ಲಿ ಈ ಅಸಮಾನತೆಯ ಪ್ರಮಾಣ ಇಂದಿಗೂ ಹಾಗೇ ಇದೆ.

ಈ ವರದಿಯು ವಿವರಿಸುವ ವಸತಿ ಪ್ರತ್ಯೇಕತೆಯು ನಮಗೆ ಏಷ್ಯಾದ ಅತಿದೊಡ್ಡ ಕೊಳಗೇರಿ ಮುಂಬೈನ ಧಾರಾವಿ ಮತ್ತು ಅದರ ಪಕ್ಕದಲ್ಲೇ ತಲೆಯೆತ್ತಿ ನಿಂತಿರುವ ಐಷಾರಾಮಿ ಗಗನಚುಂಬಿ ಕಟ್ಟಡಗಳನ್ನು ನೆನಪಿಸುತ್ತದೆ. ಒಂದೇ ಭೂ ಪ್ರದೇಶದಲ್ಲಿದ್ದರೂ ಈ ಎರಡು ಜಗತ್ತುಗಳ ನಡುವೆ ಸೌಲಭ್ಯಗಳ ಹಂಚಿಕೆಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹಳ್ಳಿಗಳ ಜಾತಿ ಪದ್ಧತಿಯ ಗೋಡೆಗಳು ನಗರಗಳಲ್ಲಿ ಇಂತಹದ್ದೇ ಭೌತಿಕ ರೂಪ ಪಡೆದುಕೊಳ್ಳುತ್ತಿವೆ.

WhatsApp Image 2026 04 07 at 5.17.26 PM

ಸರ್ಕಾರಗಳು ಜಿಲ್ಲಾ ಮಟ್ಟದ ಅಂಕಿಅಂಶಗಳನ್ನು ತೋರಿಸಿ ಅಭಿವೃದ್ಧಿಯ ಹಾದಿಯಲ್ಲಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುತ್ತವೆ. ಆದರೆ, ಸಂಶೋಧಕರು ಬಳಸಿದ ‘ಆಲ್ಫಾ ವಿಶ್ಲೇಷಣೆ'(ಯಾವುದೇ ಒಂದು ಸೌಲಭ್ಯ {ಉದಾಹರಣೆಗೆ ಶಾಲೆ ಅಥವಾ ಆಸ್ಪತ್ರೆ} ಹಂಚಿಕೆಯಾಗುವಾಗ ಅದು ಯಾವ ಹಂತದಲ್ಲಿ ತಾರತಮ್ಯಕ್ಕೆ ಒಳಗಾಗುತ್ತಿದೆ ಎಂಬುದನ್ನು ಪತ್ತೆಹಚ್ಚುವುದು)ಯ ಪ್ರಕಾರ, ಈ ಸೌಲಭ್ಯಗಳು ಬಡಾವಣೆ ಮಟ್ಟಕ್ಕೆ ತಲುಪುವಾಗ ದಾರಿ ತಪ್ಪುತ್ತಿವೆ. ಜಿಲ್ಲಾ ಮಟ್ಟದಲ್ಲಿ ಶಾಲೆಗಳು ಮಂಜೂರಾಗುವುದು ನಿಜ, ಆದರೆ ಅದೇ ಜಿಲ್ಲೆಯ ಒಳಗೆ ಆ ಶಾಲೆಗಳು ಮುಸ್ಲಿಂ ಅಥವಾ ದಲಿತ ಬಡಾವಣೆಗಳನ್ನು ಬಿಟ್ಟು ಪ್ರಭಾವಿಗಳ ಪ್ರದೇಶದತ್ತ ವ್ಯವಸ್ಥಿತವಾಗಿ ತಿರುಗಿಸಲಾಗುತ್ತದೆ. ಈ ‘ಅದೃಶ್ಯ ಹಸ್ತಕ್ಷೇಪ’ವು ಮೇಲ್ಮಟ್ಟದ ಅಧಿಕೃತ ದಾಖಲೆಗಳಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ.

ಭಾರತದಲ್ಲಿ ಪರಿಶಿಷ್ಟ ಜಾತಿಯ (SC) ಸಮುದಾಯಕ್ಕೆ ರಾಜಕೀಯವಾಗಿ ಮೀಸಲಾತಿ ಇದೆ. ಇದರ ಪರಿಣಾಮ, ಜಿಲ್ಲಾ ಮಟ್ಟದಲ್ಲಿ ಎಸ್‌ಸಿ ಸಮುದಾಯಕ್ಕೆ ಹೆಚ್ಚಿನ ಶಾಲೆಗಳು ಅಥವಾ ಚಿಕಿತ್ಸಾಲಯಗಳು ಮಂಜೂರಾಗಿರುವುದು ಕಂಡುಬರುತ್ತದೆ. ಅಂದರೆ, ಸಂಘಟನೆಯ ಮೂಲಕ ಈ ಸಮುದಾಯವು ಸರ್ಕಾರದ ಮಟ್ಟದಲ್ಲಿ ಸೌಲಭ್ಯಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಆದರೆ, ಅಸಲಿ ಆಟ ಶುರುವಾಗುವುದು ಈ ಸೌಲಭ್ಯಗಳನ್ನು ನಿರ್ದಿಷ್ಟ ಬಡಾವಣೆಗಳಿಗೆ ಹಂಚುವಾಗ. ನಿರ್ದಿಷ್ಟ ಜಿಲ್ಲೆಗೆ ಮಂಜೂರಾದ ಶಾಲೆಯು ಯಾವ ಜಾಗದಲ್ಲಿ ನಿರ್ಮಾಣವಾಗಬೇಕು ಎಂಬ ನಿರ್ಧಾರ ಸ್ಥಳೀಯ ಮಟ್ಟದ ಪ್ರಭಾವಿಗಳು ಮತ್ತು ಅನೌಪಚಾರಿಕ ರಾಜಕೀಯ ‘ಬ್ರೋಕರ್’ಗಳ ಕೈಯಲ್ಲಿರುತ್ತದೆ. ಇಲ್ಲಿ ಮೇಲ್ವರ್ಗದ ಅಥವಾ ಪ್ರಭಾವಿ ಗುಂಪುಗಳು ಸೌಲಭ್ಯಗಳನ್ನು ತಮ್ಮ ಬಡಾವಣೆಗಳತ್ತ ಸೆಳೆದುಕೊಳ್ಳುತ್ತವೆ. ಇದರಿಂದಾಗಿ, ಜಿಲ್ಲಾ ಮಟ್ಟದಲ್ಲಿ ‘ಪ್ರಗತಿಪರ’ವಾಗಿ ಕಾಣುವ ಹಂಚಿಕೆಯು, ಬಡಾವಣೆ ಮಟ್ಟಕ್ಕೆ ಬರುವಷ್ಟರಲ್ಲಿ ಸೊರಗಿರುತ್ತದೆ.

ಇನ್ನು ಮುಸ್ಲಿಂ ಸಮುದಾಯದ ಸ್ಥಿತಿ ಇದಕ್ಕಿಂತ ಭಿನ್ನ ಮತ್ತು ಆತಂಕಕಾರಿಯಾಗಿದೆ. ಒಂದು ಬಡಾವಣೆಯಲ್ಲಿ ಸಮುದಾಯದ ಜನಸಂಖ್ಯೆ ಹೆಚ್ಚಾದಂತೆ ಅಲ್ಲಿ ಸರ್ಕಾರಿ ಪ್ರೌಢಶಾಲೆಗಳ ಲಭ್ಯತೆ ಶೇ. 46ರಷ್ಟು ಕುಸಿಯುತ್ತದೆ. ವರದಿಯ ಪ್ರಕಾರ, ಮುಸ್ಲಿಮರು ಜಿಲ್ಲಾ ಮಟ್ಟದ ರಾಜಕೀಯ ಪ್ರಾತಿನಿಧ್ಯದಲ್ಲೂ ಹಿನ್ನಡೆ ಅನುಭವಿಸುತ್ತಿದ್ದಾರೆ ಮತ್ತು ಸ್ಥಳೀಯ ಬಡಾವಣೆ ಮಟ್ಟದಲ್ಲೂ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇವರು ವಾಸಿಸುವ ಬಡಾವಣೆಗಳಿಗೆ ಸರ್ಕಾರಿ ಸೌಲಭ್ಯಗಳು ಬರುವುದು ಹಾಗಿರಲಿ, ಖಾಸಗಿ ಹೂಡಿಕೆದಾರರು ಕೂಡ ಅಲ್ಲಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಭಾರತದ ಮೀಸಲಾತಿ ಮತ್ತು ಸಬಲೀಕರಣದ ನೀತಿಗಳು ಕೇವಲ ಮೇಲ್ಮಟ್ಟದ (ಜಿಲ್ಲಾ ಅಥವಾ ರಾಜ್ಯ) ಅಂಕಿಅಂಶಗಳನ್ನು ಆಗಾಗ ತಿದ್ದಪಡಿ ಮಾಡಲು ರಚನೆಯಾಗುತ್ತಿವೆಯೇ ಹೊರತು, ಅತ್ಯಂತ ಕೆಳಮಟ್ಟದ ಅಥವಾ ಅನೌಪಚಾರಿಕ ಆಡಳಿತದಲ್ಲಿ ಅಡಗಿರುವ ಜಾತಿ ಮತ್ತು ಧರ್ಮದ ಪೂರ್ವಗ್ರಹಗಳನ್ನು ಮೆಟ್ಟಿ ನಿಲ್ಲಲು ಇನ್ನೂ ಸಾಧ್ಯವಾಗಿಲ್ಲ.

ಶೇ.100ರಷ್ಟು ಮುಸ್ಲಿಮರಿರುವ ಬಡಾವಣೆಯು ಇತರೆ ಬಡಾವಣೆಗಳಿಗಿಂತ ಪೈಪ್ ನೀರು ಪಡೆಯುವಲ್ಲಿ ಶೇ.10ರಷ್ಟು ಹಿಂದೆ ಬಿದ್ದಿದೆ. ಇತ್ತ ಪರಿಶಿಷ್ಟ ಜಾತಿಯ ಬಡಾವಣೆಗಳಲ್ಲಿ ಶಿಕ್ಷಣದ ಹಂಚಿಕೆ ಕೊಂಚ ಸುಧಾರಿಸಿದ್ದರೂ, ಸೌಲಭ್ಯ ಹಂಚಿಕೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಒಂದು ಬಡಾವಣೆಯ ಜಾತಿ ಗುರುತು ಅಲ್ಲಿನ ಚರಂಡಿ ಸ್ವಚ್ಛತೆಯನ್ನು ನಿರ್ಧರಿಸುತ್ತದೆ ಎಂಬುದು ನವ ಭಾರತದ ಕರಾಳ ಮುಖ ಎಂಬುದನ್ನು ಇಲ್ಲಿ ಗಮನಿಸಲೇಬೇಕು.

ಸದ್ಯ ಭಾರತದ ಈ ಸ್ಥಿತಿ ಅಮೆರಿಕದ ‘ರೆಡ್-ಲೈನಿಂಗ್’ ಇತಿಹಾಸವನ್ನು ನೆನಪಿಸುತ್ತದೆ. ಅಂದು ಅಮೆರಿಕದಲ್ಲಿ ಕಪ್ಪು ವರ್ಣೀಯರ ಪ್ರದೇಶಗಳನ್ನು ಅಭಿವೃದ್ಧಿಯಿಂದ ವಂಚಿಸಲಾಗಿತ್ತು, ಇಂದು ಭಾರತದಲ್ಲಿ ಅಂತಹದ್ದೇ ಒಂದು ಅಘೋಷಿತ, ಅದೃಶ್ಯ ಪ್ರಕ್ರಿಯೆ ನಡೆಯುತ್ತಿದೆ. ಬ್ರೆಜಿಲ್‌ನಂತಹ ದೇಶಗಳಿಗಿಂತಲೂ ಭಾರತದಲ್ಲಿ ಈ ವಸತಿ ಪ್ರತ್ಯೇಕತೆ ಹೆಚ್ಚಿರುವುದು ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಎದುರಾಗಿರುವ ದೊಡ್ಡ ಸವಾಲು.

ಗಮನಿಸಿ: ರೆಡ್-ಲೈನಿಂಗ್ (Redlining) ಎನ್ನುವುದು ಒಂದು ವ್ಯವಸ್ಥಿತ ತಾರತಮ್ಯದ ಪ್ರಕ್ರಿಯೆ. ಇದನ್ನು ಮೂಲತಃ ಅಮೆರಿಕದಲ್ಲಿ 1930ರ ದಶಕದಲ್ಲಿ ಜಾರಿಗೆ ತರಲಾಗಿತ್ತು. ಅಮೆರಿಕದ ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು (ಮುಖ್ಯವಾಗಿ HOLC – Home Owners’ Loan Corporation) ನಗರಗಳ ನಕ್ಷೆಗಳನ್ನು ತಯಾರಿಸಿದವು. ಈ ನಕ್ಷೆಗಳಲ್ಲಿ ಬಡಾವಣೆಗಳನ್ನು ಅವುಗಳ ‘ಸುರಕ್ಷತೆ’ ಮತ್ತು ‘ಹೂಡಿಕೆಯ ಯೋಗ್ಯತೆ’ಯ ಆಧಾರದ ಮೇಲೆ ನಾಲ್ಕು ಬಣ್ಣಗಳಲ್ಲಿ ವಿಂಗಡಿಸಲಾಯಿತು. ಹಸಿರು: ಅತಿ ಸುರಕ್ಷಿತ ಮತ್ತು ಶ್ರೀಮಂತ ಪ್ರದೇಶಗಳು, ನೀಲಿ: ಮಧ್ಯಮ ದರ್ಜೆಯ ಪ್ರದೇಶಗಳು, ಹಳದಿ: ಅಪಾಯದ ಮುನ್ಸೂಚನೆಯಿರುವ ಪ್ರದೇಶಗಳು ಹಾಗೂ ಕೆಂಪು (Red): ಅತ್ಯಂತ ಅಪಾಯಕಾರಿ ಎಂದು ಗುರುತಿಸಲಾದ ಪ್ರದೇಶಗಳು. ಈ ‘ಕೆಂಪು ಬಣ್ಣ’ ಬಳಿಯಲಾದ ಪ್ರದೇಶಗಳಲ್ಲಿ ಹೆಚ್ಚಾಗಿ ಕಪ್ಪು ವರ್ಣೀಯರು (African Americans) ವಾಸಿಸುತ್ತಿದ್ದರು. ಬ್ಯಾಂಕುಗಳು ಮತ್ತು ವಿಮಾ ಕಂಪನಿಗಳು ಈ ‘ರೆಡ್-ಲೈನ್’ ಪ್ರದೇಶದ ಜನರಿಗೆ ಸಾಲ ನೀಡಲು ಅಥವಾ ವಿಮೆ ನೀಡಲು ನಿರಾಕರಿಸುತ್ತಿದ್ದವು. ಇದನ್ನೇ ‘ರೆಡ್-ಲೈನಿಂಗ್’ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಪ್ರೀಮಿಯಂ ಲೇಖನ | ಯುದ್ಧ ನಿಂತರೂ ಕಾದಿವೆ ದುರ್ದಿನಗಳು! ಬದಲಾಗಲಿದೆ ಜಗತ್ತು, ಹಸಿರು ಇಂಧನವೊಂದೇ ಪರಿಹಾರ

ಭಾರತದಲ್ಲಿ ಅಮೆರಿಕದಂತೆ ಅಧಿಕೃತ ನಕ್ಷೆಗಳಿಲ್ಲದಿದ್ದರೂ, ಮಾನಸಿಕವಾಗಿ ಮತ್ತು ಆಡಳಿತಾತ್ಮಕವಾಗಿ ಅಂತಹದ್ದೇ ಒಂದು ಗೆರೆ ಎಳೆಯಲಾಗಿದೆ. ಅರ್ಥಾತ್‌ “ಮುಸ್ಲಿಂ ಅಥವಾ ದಲಿತ ಕೇರಿಗಳೆಂದರೆ ಅಲ್ಲಿಗೆ ಸೌಲಭ್ಯಗಳನ್ನು ನೀಡುವ ಅಗತ್ಯವಿಲ್ಲ ಅಥವಾ ಅಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಲ್ಲ” ಎಂಬ ಪೂರ್ವಗ್ರಹವು ಭಾರತದ ಆಡಳಿತ ವ್ಯವಸ್ಥೆಯಲ್ಲಿದೆ.

ಅಮೆರಿಕವು ಕಡೆಪಕ್ಷ ತನ್ನ ಇತಿಹಾಸದ ‘ವರ್ಣಭೇದ’ ನೀತಿಯ ತಪ್ಪುಗಳನ್ನು ತಿದ್ದಿಕೊಂಡು ಸಮಾನತೆಯತ್ತ ಹೆಜ್ಜೆ ಹಾಕುವ ಪ್ರಯತ್ನದಲ್ಲಿದೆ. ಆದರೆ, ವೇಗವಾಗಿ ಬೆಳೆಯುತ್ತಿರುವ ಭಾರತದ ನಗರಗಳು ಮಾತ್ರ ಅದೇ ಹಳೆಯ ‘ಕೇರಿ’ ಸಂಸ್ಕೃತಿಯನ್ನು ಆಧುನಿಕ ರೂಪದಲ್ಲಿ ಮರುಸೃಷ್ಟಿಸುತ್ತಿವೆ. ಈ ‘ಅದೃಶ್ಯ ಗೋಡೆʼಗಳನ್ನು ನಾವಿಂದು ಕೆಡವದಿದ್ದರೆ, ನಾಳೆ ಇವೇ ಗೋಡೆಗಳು ಭಾರತದ ಅಖಂಡ ಪ್ರಗತಿಯ ಹರಿವನ್ನು ತಡೆದು ಅಭಿವೃದ್ಧಿಯನ್ನು ಕುಂಠಿತಗೊಳಿಸಲಿವೆ. ನವ ಭಾರತದ ಕನಸು ನನಸಾಗಬೇಕೆಂದರೆ ಅದು ಪ್ರತಿಯೊಂದು ಗಲ್ಲಿಯಿಂದ ಆರಂಭವಾಗಬೇಕಿದೆ. ಅಭಿವೃದ್ಧಿಯನ್ನು ಅಂಕಿ ಅಂಶಗಳಲ್ಲಿ, ಭಾಷಣಗಳಲ್ಲಿ ಒತ್ತಾಯಪೂರ್ವಕವಾಗಿ ತೋರಿಸಿಕೊಳ್ಳುವ ಬದಲು, ಈ ದೇಶದ ಪ್ರತಿ ಗ್ರಾಮವೂ ತನ್ನ ಏಳಿಗೆಯನ್ನು ತಾನೇ ಹೇಳಿಕೊಳ್ಳುವಂತೆ ಮಾಡಬೇಕಿದೆ.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...

ಪದೇ ಪದೇ ಬಂಧನವಾದರೂ ಹಿಂಜರಿಯದ ವಿಪಕ್ಷಗಳು: ಮತ್ತೆ ಜಂತರ್ ಮಂತರ್‌ನತ್ತ ಹೆಜ್ಜೆಯಿಟ್ಟ ಇಂಡಿಯಾ ಒಕ್ಕೂಟ

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸೇರಿದಂತೆ ಚುನಾವಣಾ...