ರಾಮಮಂದಿರ ದೇಣಿಗೆ ಅವ್ಯವಹಾರದ ಆರೋಪ ಸಂಘ ಪರಿವಾರವನ್ನು ಇನ್ನಿಲ್ಲದಂತೆ ಕಾಡಲು ಶುರುಮಾಡಿದೆ. RSS ವರ್ಚಸ್ಸಿಗೆ ಭಾರಿ ಪೆಟ್ಟು ನೀಡಿದೆ. ಟ್ರಸ್ಟ್‌ನ ಪ್ರಮುಖರ ನಿರ್ಗಮನದ ಬಳಿಕ ಆರ್‌ಎಸ್‌ಎಸ್ ಅಂಗಳದಲ್ಲಿ ಆತಂಕ ಮನೆಮಾಡಿದ್ದು, ಬೆಳಗಾವಿಯಲ್ಲಿ ನಡೆಯಲಿರುವ ಅಖಿಲ ಭಾರತ ಪ್ರಾಂತ ಪ್ರಚಾರಕರ ಸಮಾವೇಶದಲ್ಲಿ ಈ ಪ್ರಕರಣವು ಸಂಘಟನೆಯ ಆಂತರಿಕ ಶಿಸ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ದಶಕಗಳ ನಂಬಿಕೆಗೆ ಧಕ್ಕೆ ತಂದಿರುವ ಈ ದೇಣಿಗೆ ಲೂಟಿಯ ಹಿನ್ನೆಲೆ ಹಾಗೂ ಸಂಘದ ಪ್ರತಿಷ್ಠೆಯನ್ನು ಮರುಸ್ಥಾಪಿಸಲು ನಾಯಕತ್ವ ಹರಸಾಹಸ ಪಡುತ್ತಿದೆ.
ಕೋಟ್ಯಂತರ ಸನಾತನ ಧರ್ಮೀಯರ ಶತಮಾನಗಳ ಕನಸು, ಅಪಾರ ಭಕ್ತಿ ಹಾಗೂ ಶ್ರದ್ಧೆಯ ಪ್ರತೀಕದಂತೆ ಅಯೋಧ್ಯೆಯಲ್ಲಿ ತಲೆಯೆತ್ತಿರುವ ಭವ್ಯ ರಾಮಮಂದಿರದ ಆಡಳಿತ ಮಂಡಳಿಯಲ್ಲಿ ಬಿರುಗಾಳಿ ಎದ್ದು ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿರುವುದು ಗೊತ್ತೇ ಇದೆ. ಮಂದಿರದ ಪಾವಿತ್ರ್ಯತೆ ಮತ್ತು ಭಕ್ತರ ನಂಬಿಕೆಯ ತಳಹದಿಯ ಮೇಲೆ ಸಂಗ್ರಹಿಸಲಾದ ಕೋಟ್ಯಂತರ ರೂಪಾಯಿಗಳ ದೇಣಿಗೆಯ ಹಣ ಹಾಗೂ ಬೆಳ್ಳಿ-ಬಂಗಾರದ ಕಾಣಿಕೆಗಳಲ್ಲಿ ಭಾರಿ ಅವ್ಯವಹಾರ ಮತ್ತು ಲೂಟಿ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ವಿವಾದದ ಬಿಸಿ ಇಡೀ ಸಂಘ ಪರಿವಾರವನ್ನು ತಲ್ಲಣಗೊಳಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಇತಿಹಾಸದಲ್ಲೇ ಇಂತಹ ಭ್ರಷ್ಟಾಚಾರದ ಕಲೆ ಅಂಟಿಕೊಂಡಿರುವುದು ಇದೇ ಮೊದಲು. ಈ ಇಡೀ ವಿವಾದವು ಇದೀಗ ಆರ್‌ಎಸ್‌ಎಸ್‌ಗೆ ದೊಡ್ಡ ಮುಳುವಾಗಿ ಪರಿಣಮಿಸಿದೆ.
ಇಂದು (ಜು.6) ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅತ್ಯಂತ ನಿರ್ಣಾಯಕ ಹಾಗೂ ತುರ್ತು ಸಭೆ ನಡೆಯಿತು. ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ತಡವಾಗಿ ಅಂದರೆ ಮಧ್ಯಾಹ್ನ 3.30ಕ್ಕೆ ಆರಂಭವಾದ ಈ ಸಭೆಯ ವಾತಾವರಣ ತೀವ್ರ ಗಂಭೀರತೆಯಿಂದ ಕೂಡಿತ್ತು. ಇತ್ತೀಚಿನ ದೇಣಿಗೆ ದುರುಪಯೋಗ ಮತ್ತು ಕಳ್ಳತನದ ಘಟನೆಗಳ ಕುರಿತು ಸಭೆಯಲ್ಲಿದ್ದ ಎಲ್ಲಾ ಸದಸ್ಯರು ತೀವ್ರ ವಿಷಾದ ಮತ್ತು ನೋವನ್ನು ವ್ಯಕ್ತಪಡಿಸುವ ಮೂಲಕ ಸಭೆ ಆರಂಭವಾಯಿತು.
ಸಭೆಯ ಕಾರ್ಯಸೂಚಿಯ ಮೊದಲ ಮತ್ತು ಪ್ರಮುಖ ಅಂಶವೇ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಹಾಗೂ ಪ್ರಮುಖ ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರ ರಾಜೀನಾಮೆ ಪ್ರಸ್ತಾವನೆಯಾಗಿತ್ತು. ನೈತಿಕ ಹೊಣೆಗಾರಿಕೆ ಹೊತ್ತು ಇವರಿಬ್ಬರೂ ನೀಡಿದ್ದ ರಾಜೀನಾಮೆಯನ್ನು ಟ್ರಸ್ಟ್ ಸುದೀರ್ಘ ಚರ್ಚೆಯ ಬಳಿಕ ಅಧಿಕೃತವಾಗಿ ಸ್ವೀಕರಿಸಿತು. ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆಯೇ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಸಭೆಯಿಂದ ಹೊರನಡೆದರು. 2020ರಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾದಾಗಿನಿಂದಲೂ ಇಡೀ ಆಡಳಿತದ ಚುಕ್ಕಾಣಿ ಹಿಡಿದು, ಸರ್ವೋಚ್ಚ ಅಧಿಕಾರ ಚಲಾಯಿಸುತ್ತಿದ್ದ ಚಂಪತ್ ರಾಯ್ ಮತ್ತು ದೈನಂದಿನ ಆಡಳಿತದ ಮುಖ್ಯಸ್ಥರಾಗಿದ್ದ ಅನಿಲ್ ಮಿಶ್ರಾ ಅವರ ನಿರ್ಗಮನ ವಿವಾದದ ಗಂಭೀರತೆಯನ್ನು ಸ್ಪಷ್ಟಪಡಿಸಿದೆ.

ಚಂಪತ್ ರಾಯ್ ಅವರ ನಿರ್ಗಮನದ ನಂತರ ಟ್ರಸ್ಟ್‌ನ ದೈನಂದಿನ ಕಾರ್ಯಕಲಾಪಗಳನ್ನು ನಿರ್ವಹಿಸಲು ಮಹಾರಾಷ್ಟ್ರ ಕೇಡರ್‌ನ ನಿವೃತ್ತ ಐಎಫ್‌ಎಸ್ (IFS) ಅಧಿಕಾರಿ ಕೃಷ್ಣ ಮೋಹನ್ ಅವರನ್ನು ಹಂಗಾಮಿ (Interim) ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ ಹರ್ದೋಯಿ ನಗರದಲ್ಲಿ ಸಕ್ರಿಯ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಕೃಷ್ಣ ಮೋಹನ್ ಅವರನ್ನು ಇತ್ತೀಚೆಗಷ್ಟೇ ಟ್ರಸ್ಟ್‌ಗೆ ಸರ್ವಾನುಮತದಿಂದ ಸೇರಿಸಿಕೊಳ್ಳಲಾಗಿತ್ತು. ಈ ಹಿಂದೆ ಟ್ರಸ್ಟ್‌ನಲ್ಲಿ ದಲಿತ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಕಾಮೇಶ್ವರ್ ಚೌಪಾಲ್ ಅವರ ನಿಧನದ ನಂತರ, ಟ್ರಸ್ಟ್‌ನಲ್ಲಿ ಸಮಾವೇಶದ ಪ್ರಾತಿನಿಧ್ಯ ಮುಂದುವರಿಸುವ ಸಲುವಾಗಿ ಕೃಷ್ಣ ಮೋಹನ್ ಅವರನ್ನು ತರಲಾಗಿತ್ತು. ಈಗ ಅವರಿಗೆ ಆಡಳಿತದ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ. ಅಧಿಕಾರ ವಹಿಸಿಕೊಂಡ ತಕ್ಷಣ ಮಾತನಾಡಿದ ಕೃಷ್ಣ ಮೋಹನ್, “ನಡೆದಿರುವ ಘಟನೆಯಿಂದ ನಾವೆಲ್ಲರೂ ತೀವ್ರ ನೊಂದಿದ್ದೇವೆ. ರಾಮನ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ. ಸದ್ಯದ ಲೋಪದೋಷಗಳನ್ನು ಸರಿಪಡಿಸಿ, ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವುದು ನನ್ನ ಮೊದಲ ಆದ್ಯತೆ” ಎಂದು ಹೇಳಿದ್ದಾರೆ.
ಇದೇ ವೇಳೆ, ರಾಜಸ್ಥಾನದ ಸೀಕರ್ ಜಿಲ್ಲೆಯವರಾದ ಪ್ರಸಿದ್ಧ ಅಕೌಂಟೆಂಟ್ ಹಾಗೂ ವಿಶ್ವ ಹಿಂದೂ ಪರಿಷತ್ (VHP) ಅಂತರರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಜರಂಗ್ ಲಾಲ್ ಬಾಗ್ಡಾ ಅವರ ಹೆಸರು ಕೂಡ ಈ ಹುದ್ದೆಗೆ ಪ್ರಬಲವಾಗಿ ಕೇಳಿಬಂದಿತ್ತು. ಕೇಂದ್ರ ಸರ್ಕಾರದ ಗಣಿ ಸಚಿವಾಲಯದ ಅಡಿಯಲ್ಲಿ ಬರುವ ಪ್ರಮುಖ ನವರತ್ನ ಸಂಸ್ಥೆಯಾದ ‘ನಾಲ್ಕೊ’ (NALCO) ಅಧ್ಯಕ್ಷರಾಗಿ ಹಾಗೂ ‘ಏಕಲ್ ಅಭಿಯಾನ’ದ ಸಿಇಒ ಆಗಿ ಅಪಾರ ಹಣಕಾಸು ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಬಾಗ್ಡಾ ಅವರನ್ನು ಭವಿಷ್ಯದಲ್ಲಿ ಕಾಯಂ ಜವಾಬ್ದಾರಿಗೆ ತರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಅಯೋಧ್ಯೆಯ ಬಿಕ್ಕಟ್ಟು ಇಲ್ಲಿಗೆ ಮುಗಿದಿಲ್ಲ. ಇದರ ಅಸಲಿ ಕ್ಲೈಮ್ಯಾಕ್ಸ್ ಇದೀಗ ಕರ್ನಾಟಕದ ಬೆಳಗಾವಿಯಲ್ಲಿ ತೆರೆದುಕೊಳ್ಳಲಿದೆ. ಜುಲೈ 10, 11 ಮತ್ತು 12ರಂದು ಬೆಳಗಾವಿಯ ‘ಫೌಂಡ್ರಿ ಕ್ಲಸ್ಟರ್’ ಆವರಣದಲ್ಲಿ ಆರ್‌ಎಸ್‌ಎಸ್‌ನ ಅತ್ಯಂತ ಪ್ರಮುಖವಾದ ‘ಅಖಿಲ ಭಾರತ ಪ್ರಾಂತ ಪ್ರಚಾರಕರ ಮೂರು ದಿನಗಳ ಬೈಠಕ್’ (ಸಮಾವೇಶ) ಆಯೋಜನೆಯಾಗಿದೆ. ಈ ಮಹಾ ಸಮಾವೇಶದಲ್ಲಿ ಸರಸಂಘಚಾಲಕ ಮೋಹನ್ ಭಾಗವತ್ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು ಹಾಗೂ ಸಂಘ ಪ್ರೇರಿತ 32 ವಿವಿಧ ಸಂಘಟನೆಗಳ ಅಖಿಲ ಭಾರತ ಸಂಘಟನಾ ಮಂತ್ರಿಗಳು ಭಾಗವಹಿಸುತ್ತಿದ್ದಾರೆ.
ಆದರೆ, ಈ ಬಾರಿ ಸಮಾವೇಶದ ಎಂದಿನ ಉತ್ಸಾಹ ಮಾಯವಾಗಿದೆ. ಕಾರ್ಯಕರ್ತರು ಮತ್ತು ಹಿರಿಯ ಪ್ರಚಾರಕರಲ್ಲಿ ಒಂದು ತೆರನಾದ ಆತಂಕ ಮತ್ತು ಕಳವಳ ಎದ್ದು ಕಾಣುತ್ತಿದೆ. ಸಂಘದ ಆಂತರಿಕ ವಲಯದಲ್ಲಿ ಕೇಳಿಬರುತ್ತಿರುವ ಪ್ರಕಾರ, RSSಗೆ ಈ ವಿವಾದ ದೊಡ್ಡ ಮುಳುವಾಗಿದೆ. ಒಂದು ವೇಳೆ ಬೆಳಗಾವಿಯ ಈ ಅಧಿಕೃತ ಸಭೆಯಲ್ಲಿ ದೇಣಿಗೆ ಲೂಟಿಯ ವಿಷಯ ಚರ್ಚೆಗೆ ಬಂದರೆ, ಆಂತರಿಕವಾಗಿ ಭಾರಿ ರಾದ್ಧಾಂತ ಶುರುವಾಗುವುದು ಖಚಿತ. ದಶಕಗಳಿಂದ ಕಷ್ಟಪಟ್ಟು, ನಿಸ್ವಾರ್ಥ ಸೇವೆ ಮತ್ತು ಶಿಸ್ತಿನ ಹೆಸರಿನಲ್ಲಿ ಗಳಿಸಿಕೊಂಡು ಬಂದಿರುವ ಸಂಘದ ನೇಮು-ಫೇಮು ಈ ಒಂದೇ ಹಗರಣದಿಂದ ಸಂಪೂರ್ಣವಾಗಿ ಧೂಳೀಪಟವಾಗುತ್ತದೆ ಎಂಬ ಭೀತಿ ನಾಯಕರನ್ನು ಕಾಡುತ್ತಿದೆ. ಶಿಸ್ತು ಮತ್ತು ಪ್ರಾಮಾಣಿಕತೆಯೇ ಸಂಘದ ಜೀವಾಳ ಎಂದು ಹೇಳಿಕೊಳ್ಳುತ್ತಿದ್ದ ಸಂಘಟನೆಯ ಒಳಗೆ ಇಂತಹ ಆರ್ಥಿಕ ಹಗರಣದ ಚರ್ಚೆಗಳು ಭಿನ್ನಾಭಿಪ್ರಾಯ ಮತ್ತು ಆಕ್ರೋಶಕ್ಕೆ ಕಾರಣವಾಗಬಹುದು ಎನ್ನಲಾಗುತ್ತಿದೆ.

ಈ ವಿವಾದಕ್ಕೆ ಕರ್ನಾಟಕದ ನಂಟೂ ಇರುವುದು ಇಲ್ಲಿನ ಸಂಘಟನೆಯನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಜನವರಿ 2021 ರಿಂದ ರಾಮಮಂದಿರದ ನಿರ್ಮಾಣ ಮತ್ತು ನಾಗರಿಕ ಕಾಮಗಾರಿಗಳ ಸಂಪೂರ್ಣ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕ ಮೂಲದ ಹಿರಿಯ ವಿಎಚ್‌ಪಿ (VHP) ಮುಖಂಡ ಗೋಪಾಲ್ ನಾಗರಕಟ್ಟೆ (ಗೋಪಾಲ್ ರಾವ್) ಅವರ ಪಾತ್ರದ ಮೇಲೂ ಈಗ ಸಂಶಯದ ನೆರಳು ಬಿದ್ದಿದೆ. ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ವಿವಾದ ಹತ್ತಿಕ್ಕಿದಾಗಿನಿಂದ ಮಂದಿರದ ಆವರಣದಲ್ಲಿ ಕಾಣಿಸಿಕೊಳ್ಳದಿದ್ದರೂ, ಗೋಪಾಲ್ ನಾಗರಕಟ್ಟೆ ಮಾತ್ರ ಕಾಮಗಾರಿ ಉಸ್ತುವಾರಿ ಮುಂದುವರಿಸಿದ್ದಾರೆ. ಈ ಸಮಾವೇಶ ಕರ್ನಾಟಕದಲ್ಲೇ ನಡೆಯುತ್ತಿರುವುದರಿಂದ ಮತ್ತು ಸ್ಥಳೀಯ ನಾಯಕನ ಹೆಸರು ಇದರಲ್ಲಿ ಕೇಳಿಬಂದಿರುವುದರಿಂದ ಬೆಳಗಾವಿ ಬೈಠಕ್‌ನಲ್ಲಿ ಇದರ ಕುರಿತು ಭಾರಿ ಜಟಾಪಟಿ ನಡೆಯುವ ಸಾಧ್ಯತೆಗಳಿವೆ.
ಈ ಇಡೀ ದೇಣಿಗೆ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ತನ್ನ ಪ್ರಾಥಮಿಕ ಮತ್ತು ಮಧ್ಯಂತರ ವರದಿಯನ್ನು ಟ್ರಸ್ಟ್‌ಗೆ ಸಲ್ಲಿಸಿದೆ. ಹೈದರಾಬಾದ್‌ಗೆ ಶುದ್ಧೀಕರಣಕ್ಕಾಗಿ ಕಳುಹಿಸಲಾಗಿದ್ದ ಸುಮಾರು 900 ಕೆಜಿ ಬೆಳ್ಳಿಯ ಇಟ್ಟಿಗೆಗಳ ಪ್ರಕ್ರಿಯೆಯಲ್ಲಿ ನಡೆದ ಅವ್ಯವಹಾರಗಳು ಮತ್ತು ಸಾರ್ವಜನಿಕರು ನೀಡಿದ ಹಣದ ಅನಧಿಕೃತ ವರ್ಗಾವಣೆಗಳು ತನಿಖೆಯಲ್ಲಿ ಬೆಳಕಿಗೆ ಬಂದಿವೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರನ್ನು ಬಂಧಿಸಲಾಗಿದೆ. ಇಷ್ಟೇ ಅಲ್ಲದೆ, 2025-26ರ ಆರ್ಥಿಕ ವರ್ಷದ ಆಡಿಟ್ ಮಾಡದ ಆದಾಯ ಮತ್ತು ವೆಚ್ಚದ ಹೇಳಿಕೆಗಳು ಹಾಗೂ ಬ್ಯಾಲೆನ್ಸ್ ಶೀಟ್‌ಗಳಲ್ಲಿ ಕೋಟ್ಯಂತರ ರೂಪಾಯಿಗಳ ವ್ಯತ್ಯಾಸ ಕಂಡುಬಂದಿರುವುದು ತನಿಖಾ ತಂಡದ ಗಮನಕ್ಕೆ ಬಂದಿದೆ.
ಈ ನಡುವೆ, ಟ್ರಸ್ಟ್‌ನ ಆಡಳಿತ ವ್ಯವಸ್ಥೆಯು ಸರ್ಕಾರದ ಹಿಡಿತದಲ್ಲಿಲ್ಲ ಎಂಬುದು ಮತ್ತೊಂದು ಪ್ರಮುಖ ಅಂಶ. 2024ರ ಆರಂಭದಲ್ಲಿ ನೀರಜ್ ಶರ್ಮಾ ಎಂಬುವವರು ಮಂದಿರ ಟ್ರಸ್ಟ್‌ನ ಮಾಹಿತಿ ಅಧಿಕಾರಿಯ ವಿವರ ಕೋರಿ ಆರ್‌ಟಿಐ ಅರ್ಜಿ ಸಲ್ಲಿಸಿದ್ದರು. ಕೇಂದ್ರ ಗೃಹ ಸಚಿವಾಲಯ ಅದನ್ನು ತಿರಸ್ಕರಿಸಿದಾಗ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂತಿಮವಾಗಿ ಕೇಂದ್ರ ಮಾಹಿತಿ ಆಯೋಗ (CIC) ತನ್ನ ಆದೇಶದಲ್ಲಿ, “ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ರಚನೆಯಾದ ಸ್ವತಂತ್ರ ಸಂಸ್ಥೆಯಾಗಿದೆ. ಇದಕ್ಕೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಯಾವುದೇ ಆರ್ಥಿಕ ಸಹಾಯ ಅಥವಾ ಆಡಳಿತಾತ್ಮಕ ನಿಯಂತ್ರಣ ಇಲ್ಲದಿರುವುದರಿಂದ ಇದು ಸಾರ್ವಜನಿಕ ಸಂಸ್ಥೆಯಲ್ಲ ಮತ್ತು ಇದು ಆರ್‌ಟಿಐ ವ್ಯಾಪ್ತಿಗೆ ಬರುವುದಿಲ್ಲ” ಎಂದು ಸ್ಪಷ್ಟಪಡಿಸಿತ್ತು.

ಹೀಗಾಗಿ, ಕಾನೂನಾತ್ಮಕವಾಗಿ ಕೇಂದ್ರ ಸರ್ಕಾರವಾಗಲಿ ಅಥವಾ ಉತ್ತರ ಪ್ರದೇಶ ಸರ್ಕಾರವಾಗಲಿ ಚಂಪತ್ ರಾಯ್ ಅಥವಾ ಅನಿಲ್ ಮಿಶ್ರಾ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಅಧಿಕಾರ ಹೊಂದಿರಲಿಲ್ಲ. ಟ್ರಸ್ಟ್‌ನ 15 ಸದಸ್ಯರ ಪೈಕಿ ಕೇವಲ 10 ಸದಸ್ಯರಿಗೆ ಮಾತ್ರ ಮತದಾನದ ಹಕ್ಕಿದ್ದು, ಅವರ ಆಂತರಿಕ ಒಮ್ಮತದ ನಿರ್ಧಾರ ಮತ್ತು ಸ್ವಯಂಪ್ರೇರಿತ ರಾಜೀನಾಮೆಯ ಮೂಲಕವೇ ಈ ಬದಲಾವಣೆಗಳನ್ನು ತರಬೇಕಾಯಿತು. ಟ್ರಸ್ಟ್‌ನಲ್ಲಿರುವ ಸರ್ಕಾರಿ ಐಎಎಸ್ ಅಧಿಕಾರಿಗಳಾದ ಪ್ರಶಾಂತ್ ಲೋಖಂಡೆ, ಸಂಜಯ್ ಪ್ರಸಾದ್ ಮತ್ತು ಅಯೋಧ್ಯೆ ಜಿಲ್ಲಾಧಿಕಾರಿ ಶಶಾಂಕ್ ತ್ರಿಪಾಠಿ ಅವರಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಥವಾ ಮತ ಚಲಾಯಿಸುವ ಹಕ್ಕಿರುವುದಿಲ್ಲ.
ಇದನ್ನೂ ಓದಿ: ಅಯೋಧ್ಯೆ ದೇಣಿಗೆ ಹಗರಣ: ಇಂದು ಟ್ರಸ್ಟ್‌ನ ನಿರ್ಣಾಯಕ ಸಭೆ; ಸದಸ್ಯರ ನಡುವೆ ಮೊದಲ ಬಾರಿಗೆ ಚುನಾವಣೆ ಸಾಧ್ಯತೆ
ರಾಮಮಂದಿರದ ವಿವಾದವು ದೇಶದ ಕೋಟ್ಯಂತರ ಜನರ ಧಾರ್ಮಿಕ ಭಾವನೆಗಳ ಮೌಲ್ಯವಾಗಿದೆ. ವಿರೋಧ ಪಕ್ಷಗಳು ಈಗಾಗಲೇ ಈ ವಿಷಯವನ್ನು ಮುಂದಿಟ್ಟುಕೊಂಡು “ರಾಮನ ಹೆಸರಿನಲ್ಲಿ ಲೂಟಿ” ಎಂದು ದೇಶಾದ್ಯಂತ ಜನಾಭಿಪ್ರಾಯ ರೂಪಿಸಲು ಮುಂದಾಗಿವೆ. ಆರೆಸ್ಸೆಸ್ ಉನ್ನತ ನಾಯಕರಾದ ಸುರೇಶ್ ಭಯ್ಯಾಜಿ ಜೋಶಿ ಮತ್ತು ದಿನೇಶ್ ಚಂದ್ರ ಅವರು ಈ ಬೆಳವಣಿಗೆಗಳ ಮೇಲೆ ತೀವ್ರ ಕಣ್ಗಾವಲು ಇಟ್ಟಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ಪ್ರಾಂತ ಪ್ರಚಾರಕರ ಸಮಾವೇಶವು ಈ ‘ದೇಣಿಗೆ ಕಳಂಕ’ವನ್ನು ತೊಳೆದು, ಸಂಘದ ನೈತಿಕ ಘನತೆ ಮತ್ತು ವಿಶ್ವಾಸಾರ್ಹತೆಯನ್ನು ಹೇಗೆ ಮರುಸ್ಥಾಪಿಸುತ್ತದೆ ಎಂಬುದರ ಮೇಲೆ ಸಂಘ ಪರಿವಾರದ ಭವಿಷ್ಯದ ವರ್ಚಸ್ಸು ನಿಂತಿದೆ. ಒಂದು ವೇಳೆ ಆಂತರಿಕ ರಾದ್ಧಾಂತಗಳು ಬೀದಿಗೆ ಬಂದರೆ, ಅದು ಇಡೀ ಸಂಘಟನೆಯ ಅಸ್ತಿತ್ವಕ್ಕೆ ಮತ್ತು ಸಾರ್ವಜನಿಕವಾಗಿ ಇರುವ ಗೌರವಕ್ಕೆ ದೊಡ್ಡ ಪೆಟ್ಟು ನೀಡಲಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಭಕ್ತರ ಪ್ರತಿ ಪೈಸೆಯ ಲೆಕ್ಕವನ್ನೂ ಪಾರದರ್ಶಕವಾಗಿ ಇಡುವುದು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವುದೊಂದೇ ಈಗ ಸಂಘದ ಮುಂದಿರುವ ಏಕೈಕ ಮಾರ್ಗ.




