ಭಾರತದಲ್ಲಿ ಮೂರು ಬಾರಿ ಅಧಿಕೃತವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆಯಾದರೂ ಇಂದಿರಾ ಗಾಂಧಿಯವರು ಹೇರಿದ ‘ಎಮರ್ಜೆನ್ಸಿ’ ನಾಗರಿಕ ಹಕ್ಕುಗಳ ಮೇಲೆ ನಡೆದ ಭೀಕರ ದಾಳಿಯಾಗಿತ್ತು. ಆದರೆ, ಈಗ ಮೋದಿ ಯುಗದಲ್ಲಿ 12 ವರ್ಷಗಳಿಂದಲೂ ಅಘೋಷಿತ ತುರ್ತುಪರಿಸ್ಥಿತಿ ಜಾರಿಯಲ್ಲಿದೆ. ಜನರನ್ನು ದಮನಿಸುತ್ತಿದೆ.
ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು 1962ರ ಅಕ್ಟೋಬರ್ 26 ರಂದು ಚೀನಾ-ಭಾರತ ಯುದ್ಧದ ಸಂದರ್ಭದಲ್ಲಿ ಘೋಷಿಸಲಾಗಿತ್ತು. ನಂತರ, 1968ರ ಜನವರಿ 10ರಂದು ಭಾರತದ ಮೊದಲ ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸಲಾಯಿತು. ಎರಡನೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು 1971ರ ಡಿಸೆಂಬರ್ 3ರಂದು ಘೋಷಿಸಲಾಯಿತು. ಪಾಕಿಸ್ತಾನವು ನಡೆಸಿದ ವೈಮಾನಿಕ ದಾಳಿಯಿಂದಾಗಿ ಭಾರತ-ಪಾಕಿಸ್ತಾನ ಯುದ್ಧ ಪ್ರಾರಂಭವಾದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆಗ ಪೂರ್ವ ಪಾಕಿಸ್ತಾನದ ವಿಮೋಚನೆ ಮತ್ತು ಬಾಂಗ್ಲಾದೇಶದ ಸೃಷ್ಟಿಯೂ ಆಯಿತು. ಈ ತುರ್ತು ಪರಿಸ್ಥಿತಿ ಮೂರನೇ ತುರ್ತು ಪರಿಸ್ಥಿತಿಯೊಂದಿಗೆ ಜಾರಿಯಲ್ಲಿತ್ತು ಮತ್ತು ಎರಡೂ ತುರ್ತು ಪರಿಸ್ಥಿತಿಗಳನ್ನು 1977ರ ಮಾರ್ಚ್ 21ರಂದು ಒಟ್ಟಾಗಿ ಹಿಂತೆಗೆದುಕೊಳ್ಳಲಾಯಿತು.
ಅತಿಹೆಚ್ಚು ಚರ್ಚೆಗೂ ರಾಜಕೀಯ ಪಲ್ಲಟಗಳಿಗೂ ಕಾರಣವಾಗಿದ್ದು ಇಂದಿರಾ ಗಾಂಧಿಯವರು ಘೋಷಿಸಿದ 3ನೇ ರಾಷ್ಟ್ರೀಯ ತುರ್ತುಪರಿಸ್ಥಿತಿ. ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿದ್ದವು. ಇತ್ತ ಇಂದಿರಾ ಗಾಂಧಿಯವರ ಚುನಾವಣೆಯನ್ನು ನ್ಯಾಯಾಲಯವು ಅಸಿಂಧುಗೊಳಿಸಿತ್ತು. ಇದರ ಹಿನ್ನೆಲೆಯಲ್ಲಿ ಉಂಟಾದ ಒತ್ತಡಗಳಿಂದಾಗಿ ಈ ತುರ್ತು ಪರಿಸ್ಥಿತಿಯನ್ನು ಹೇರಲಾಗಿತ್ತು. 1975ರ ಜೂನ್ 25 ರಿಂದ 1977ರ ಮಾರ್ಚ್ 21 ರವರೆಗೆ ಒಟ್ಟು 21 ತಿಂಗಳ ಕಾಲ ದೇಶದಲ್ಲಿ ಜಾರಿಯಲ್ಲಿದ್ದ ಈ ತುರ್ತುಪರಿಸ್ಥಿತಿಯು ಇಂದಿರಾ ಗಾಂಧಿಯವರ ಆಡಳಿತಕ್ಕೆ ಎಂದಿಗೂ ಕಪ್ಪುಚುಕ್ಕೆ. ಈಗಾಗಲೇ 50 ವರ್ಷಗಳನ್ನು ಪೂರೈಸಿರುವ ಇದರ ಕರಾಳ ನೆನಪುಗಳನ್ನು ಹಸಿಹಸಿಯಾಗಿಡಲು ನರೇಂದ್ರ ಮೋದಿ ಸರ್ಕಾರ ಜೂನ್ 25ನೇ ತಾರೀಕನ್ನು ‘ಸಂವಿಧಾನ ಹತ್ಯಾ ದಿನ’ ಎಂದು ಆಚರಿಸುತ್ತಾ ಬಂದಿದೆ. ಸಂವಿಧಾನ ಬದಲಿಸಲು ಬಿಜೆಪಿ ಯೋಚಿಸುತ್ತಿದೆ ಎಂಬ ಟೀಕೆಗಳು ಗಂಭೀರವಾಗಿ ಮೂಡಿಬಂದಿರುವ ಕಾರಣ, ಆ ಆರೋಪಗಳನ್ನು ಅಲ್ಲಗಳೆದು ‘ಸಂವಿಧಾನವನ್ನು ದಮನ ಮಾಡಿದ್ದೇ ಕಾಂಗ್ರೆಸ್’ ಎಂಬ ವಾದವನ್ನು ಬಿತ್ತಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ.
ತುರ್ತು ಪರಿಸ್ಥಿತಿ ಕಾಲದ ಇಂದಿರಾ ಗಾಂಧಿಯವರ ಆಡಳಿತಕ್ಕೂ ಮೋದಿಯವರ ಆಡಳಿತಕ್ಕೂ ಏನಾದರೂ ವ್ಯತ್ಯಾಸಗಳಿವೆ ಎಂದು ಪರಿಶೀಲಿಸಿದರೆ, ಮೋದಿಯವರು ಕೂಡ ಸರ್ವಾಧಿಕಾರಿ ಧೋರಣೆ ಉಳ್ಳವರೆಂಬುದು ಸ್ಪಷ್ಟವಾಗುತ್ತದೆ. ಇಂದಿರಾ ಗಾಂಧಿಯವರು ಒಂದಿಷ್ಟು ಬಡವರ ಪರವಾದ ಕೆಲಸಗಳನ್ನಾದರೂ ಮಾಡಿದ್ದಾರೆ, ಆದರೆ ಮೋದಿ ಆಡಳಿತದಲ್ಲಿ ಬಡವರ ಬದುಕು ಮತ್ತಷ್ಟು ಮೂರಾಬಟ್ಟೆಯಾಗಿದೆ. ಇಂದಿರಾ ಗಾಂಧಿಯವರು ಹೇರಿದ್ದು ಘೋಷಿತ ತುರ್ತುಪರಿಸ್ಥಿತಿಯಾದರೆ, ನರೇಂದ್ರ ಮೋದಿ- ಅಮಿತ್ ಶಾ ಜೋಡಿ ಜಾರಿಗೆ ತಂದಿರುವುದು ಅಘೋಷಿತ ತುರ್ತು ಪರಿಸ್ಥಿತಿ. ಎರಡು ವಿಭಿನ್ನ ಕಾಲಘಟ್ಟದ ಧೋರಣೆಗಳನ್ನು ತುಲನೆ ಮಾಡಿ ನೋಡಿದರೆ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ.
ತುರ್ತುಪರಿಸ್ಥಿತಿ ಕಾಲಘಟ್ಟದಲ್ಲಿ ಇಂದಿರಾ ಗಾಂಧಿಯವರು ಮಾಡಿದ್ದೇನು?
- ಇಂದಿರಾ ಗಾಂಧಿ ಸರ್ಕಾರವು ತುರ್ತು ಪರಿಸ್ಥಿತಿಗೆ ಮೊದಲು ಮತ್ತು ನಂತರ ಹಲವು ಕಾನೂನುಗಳನ್ನು ತಿದ್ದುಪಡಿ ಮಾಡಿತು. ರಾಜಕೀಯ ವಿರೋಧಿಗಳನ್ನು ಬಂಧಿಸಲು ಆ ಕಾನೂನುಗಳನ್ನು ಬಳಸಿಕೊಂಡಿತು. ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ (MISA) ಬಿಗಿಗೊಳಿಸಲಾಯಿತು. ರಕ್ಷಣಾ ಕಾಯ್ದೆ ನವೀಕರಣಗೊಂಡಿತು. ಸಂವಿಧಾನದಡಿ ನೀಡಲಾದ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಯಿತು.
- ಭಾರತೀಯ ಸಂವಿಧಾನದ 352 ಮತ್ತು 356 ನೇ ವಿಧಿಗಳನ್ನು ಬಳಸಿಕೊಂಡು ತಮಗೆ ಅಸಾಧಾರಣ ಅಧಿಕಾರವನ್ನು ಇಂದಿರಾ ಗಾಂಧಿ ಪಡೆದುಕೊಂಡರು. ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲಾಯಿತು. ವಿಜಯರಾಜೆ ಸಿಂಧಿಯಾ, ಜಯಪ್ರಕಾಶ್ ನಾರಾಯಣ್, ಮುಲಾಯಂ ಸಿಂಗ್ ಯಾದವ್, ರಾಜ್ ನಾರಾಯಣ್, ಮೊರಾರ್ಜಿ ದೇಸಾಯಿ, ಚರಣ್ ಸಿಂಗ್, ಜೀವರಾಮ್ ಕೃಪಲಾನಿ, ಜಾರ್ಜ್ ಫರ್ನಾಂಡಿಸ್, ಅನಂತರಾಮ್ ಜೈಸ್ವಾಲ್, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಅರುಣ್ ಜೇಟ್ಲಿ, ಜೈ ಕಿಶನ್ ಗುಪ್ತ, ಸತ್ಯೇಂದ್ರ ನಾರಾಯಣ್ ಸಿನ್ಹಾ, ಗಾಯತ್ರಿ ದೇವಿ (ಜೈಪುರದ ರಾಣಿ) ಮತ್ತು ಇತರ ಪ್ರತಿಭಟನಾ ನಾಯಕರನ್ನು ತಕ್ಷಣವೇ ಬಂಧಿಸಲಾಯಿತು. ಸಿಪಿಐ(ಎಂ) ನಾಯಕರಾದ ವಿ.ಎಸ್. ಅಚ್ಯುತಾನಂದನ್ ಮತ್ತು ಜ್ಯೋತಿರ್ಮಯ್ ಬಸು ಅವರೂ ಬಂಧನಕ್ಕೆ ಒಳಗಾದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ, 34,988 ಜನರನ್ನು MISA ಅಡಿಯಲ್ಲಿ ಮತ್ತು 75,818 ಜನರನ್ನು DISIR ಅಡಿಯಲ್ಲಿ ಬಂಧಿಸಲಾಯಿತು.
- ಪತ್ರಿಕೆಗಳಿಗೆ ಕಠಿಣ ಸೆನ್ಸಾರ್ಶಿಪ್ ವಿಧಿಸಲಾಯಿತು. ಸರ್ಕಾರಿ ಅನುಮೋದನೆ ಇಲ್ಲದೆ ಯಾವುದೇ ಸುದ್ದಿ ಅಥವಾ ಸಂಪಾದಕೀಯವನ್ನು ಪ್ರಕಟಿಸುವಂತಿರಲಿಲ್ಲ. ದೆಹಲಿಯಲ್ಲಿ ಪತ್ರಿಕೆಗಳ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಲಾಗಿತ್ತು. ತುರ್ತು ಪರಿಸ್ಥಿತಿ ಹೇರಿದ ಕೆಲವು ದಿನಗಳ ನಂತರ, ‘ದಿ ಟೈಮ್ಸ್ ಆಫ್ ಇಂಡಿಯಾ’ದ ಬಾಂಬೆ ಆವೃತ್ತಿಯು ಹೀಗೆಂದು ಶೋಕಸಂದೇಶ ಪ್ರಕಟಿಸಿತು: “ಪ್ರಜಾಪ್ರಭುತ್ವ, ಸತ್ಯದ ಪ್ರಿಯ ಪತಿ, ಸ್ವಾತಂತ್ರ್ಯದ ಪ್ರೀತಿಯ ತಂದೆ, ನಂಬಿಕೆ, ಭರವಸೆ ಮತ್ತು ನ್ಯಾಯದ ಸಹೋದರ, ಜೂನ್ 26 ರಂದು ನಿಧನರಾದರು.” ‘ಇಂಡಿಯನ್ ಎಕ್ಸ್ಪ್ರೆಸ್’ನ ದೆಹಲಿ ಆವೃತ್ತಿಯು ಜೂನ್ 28 ರಂದು ಖಾಲಿ ಸಂಪಾದಕೀಯವನ್ನು ಪ್ರಕಟಿಸಿತು. ಇನ್ನು ‘ಫೈನಾನ್ಷಿಯಲ್ ಎಕ್ಸ್ಪ್ರೆಸ್’ ಪತ್ರಿಕೆ ರವೀಂದ್ರನಾಥ ಟ್ಯಾಗೋರ್ ಅವರ “ಎಲ್ಲಿ ಮನಸ್ಸು ಭಯವಿಲ್ಲದಿದೆಯೋ” (Where the mind is without fear) ಎಂಬ ಕವಿತೆಯನ್ನು ದೊಡ್ಡ ಅಕ್ಷರಗಳಲ್ಲಿ ಮರುಪ್ರಕಟಿಸಿತು.
- ನ್ಯಾಯಾಂಗದ ಸ್ವಾತಂತ್ರ್ಯವನ್ನು ಕುಗ್ಗಿಸಲಾಯಿತು. 42ನೇ ತಿದ್ದುಪಡಿಯ ಮೂಲಕ ನ್ಯಾಯಾಲಯಗಳ ‘ನ್ಯಾಯಾಂಗ ವಿಮರ್ಶೆ’ ಅಧಿಕಾರವನ್ನು ಸೀಮಿತಗೊಳಿಸಲಾಯಿತು. ಕಾರ್ಮಿಕರ ಮುಷ್ಕರಗಳನ್ನು ನಿಷೇಧಿಸಲಾಯಿತು, ವೇತನವನ್ನು ಸ್ಥಗಿತಗೊಳಿಸಲಾಯಿತು ಮತ್ತು ಬೋನಸ್ ಪದ್ಧತಿಯನ್ನು ತೆಗೆದುಹಾಕಲಾಯಿತು. ಆ ಸಮಯದಲ್ಲಿ ದೇಶದ ಅತಿದೊಡ್ಡ ಕಾರ್ಮಿಕ ಸಂಘಗಳಾದ ಕಾಂಗ್ರೆಸ್‌ನ ಐಎನ್‌ಟಿಯುಸಿ, ಸಿಪಿಐನ ಎಐಟಿಯುಸಿ ಮತ್ತು ಸಮಾಜವಾದಿ ಸಂಯೋಜಿತ ಎಚ್ಎಂಎಸ್ ಹೊಸ ಆಡಳಿತಕ್ಕೆ ಮಣಿದವು. ಆದರೆ ಸಿಪಿಐ(ಎಂ)ನ ಸಿಐಟಿಯು ವಿರೋಧವನ್ನು ಮುಂದುವರಿಸಿತು, ಇದಕ್ಕಾಗಿ ಅದರ 20 ನಾಯಕರನ್ನು ಬಂಧಿಸಲಾಯಿತು. ಜನವರಿ 1976 ರಲ್ಲಿ ಬೋನಸ್ ಕಡಿತವನ್ನು ಪ್ರತಿಭಟಿಸಲು ಎಐಟಿಯುಸಿ ಒಂದು ದಿನದ ಮುಷ್ಕರವನ್ನು ಆಯೋಜಿಸಿದಾಗ, ಸರ್ಕಾರವು 30,000 ರಿಂದ 40,000 ಕಾರ್ಮಿಕರನ್ನು ಬಂಧಿಸಿ ಪ್ರತಿಕ್ರಿಯಿಸಿತು.
- 39ನೇ ಮತ್ತು 42ನೇ ಸಂವಿಧಾನ ತಿದ್ದುಪಡಿಗಳ ಮೂಲಕ ಪ್ರಧಾನಮಂತ್ರಿಯವರ ಆಯ್ಕೆಯನ್ನು ನ್ಯಾಯಾಲಯದ ವ್ಯಾಪ್ತಿಯಿಂದ ಹೊರಗಿಡಲಾಯಿತು ಮತ್ತು ಸಂಸತ್ತಿಗೆ ಅನಿರ್ಬಂಧಿತ ಅಧಿಕಾರವನ್ನು ನೀಡಲಾಯಿತು. ಆರ್ಎಸ್ಎಸ್ (RSS), ಜಮಾತೆ ಇಸ್ಲಾಮಿ ಸೇರಿದಂತೆ ಹಲವು ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳನ್ನು ನಿಷೇಧಿಸಲಾಯಿತು. (ಇದೇ ಸಂದರ್ಭದಲ್ಲಿ ಆರ್ಎಸ್ಎಸ್ ನವರು ಉಲ್ಟಾ ಹೊಡೆದು ಇಂದಿರಾ ಗಾಂಧಿಯವರ ಪಾದಸೇವೆ ಮಾಡಲು ಒಪ್ಪಿಕೊಂಡರು. ಈಗ ಆರ್ಎಸ್ಎಸ್ನವರು ತುರ್ತುಪರಿಸ್ಥಿತಿಯನ್ನು ವಿರೋಧಿಸುತ್ತಿರುವುದು ಇತಿಹಾಸದ ವ್ಯಂಗ್ಯವೇ ಸರಿ).
ಮೋದಿ ಕಾಲ ಸುವರ್ಣಯುಗವೇ?
ಅಸಲಿ ವಿಷಯಕ್ಕೆ ಈಗ ನೋಡೋಣ. ರಾಷ್ಟ್ರ ಕವಿ ಕುವೆಂಪು ಅವರು ಕವಿತೆಯೊಂದರಲ್ಲಿ, “ಕತ್ತಿ ಪರದೇಶಿಯಾದರೆ ಮಾತ್ರ ನೋವೆ? ನಮ್ಮವರೆ ಹದಹಾಕಿ ತಿವಿದರದು ಹೂವೇ?” ಎಂದು ಪ್ರಶ್ನಿಸುತ್ತಾರೆ. ನಾಡದ್ರೋಹಿಗಳನ್ನು ಉದ್ದೇಶಿಸಿ ಬರೆದಿರುವ ಈ ಸಾಲನ್ನು ಕೊಂಚ ಬದಲಾಯಿಸಿ, “ಬಿಜೆಪಿಯವರೇ, ಕತ್ತಿ ಇಂದಿರಾ ಅವರದ್ದಾದರೆ ಮಾತ್ರ ನೋವೇ? ಮೋದಿಯವರು ಹದಹಾಕಿ ತಿವಿದರದು ಹೂವೇ?” ಎಂದು ಕೇಳಬೇಕಾಗುತ್ತದೆ. 50 ವರ್ಷಗಳ ಹಿಂದೆ ಮಾಡಲಾದ ತುರ್ತುಪರಿಸ್ಥಿತಿಯ ಕಥೆಗಳನ್ನು ಹೇಳುವ ನರೇಂದ್ರ ಮೋದಿ ಸರ್ಕಾರ, ತಾನು ಜನಪರ ಎಂಬಂತೆ ಬಿಂಬಿಸಿಕೊಳ್ಳುತ್ತದೆ. ಮೋದಿ ಸರ್ಕಾರದ ದಮನಕಾರಿ, ಪಕ್ಷಪಾತೀಯ ಧೋರಣೆಗಳು ಅಘೋಷಿತ ತುರ್ತುಪರಿಸ್ಥಿತಿಯನ್ನು ಸ್ಪಷ್ಟವಾಗಿ ಹೇಳುತ್ತವೆ.
ಪತ್ರಿಕಾ ಸ್ವಾತಂತ್ರ್ಯ ಮೊಟುಕು
ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿಗತಿ ಕುರಿತು ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯು ಪ್ರತಿವರ್ಷ ವರದಿಯನ್ನು ಬಿಡುಗಡೆ ಮಾಡುತ್ತದೆ. ಇದರ 2026ರ ವರದಿಯ ಪ್ರಕಾರ, ಭಾರತದ ಶ್ರೇಯಾಂಕ 157ನೇ ಸ್ಥಾನ (ಒಟ್ಟು 180 ದೇಶಗಳ ಪೈಕಿ). 2025ರಲ್ಲಿ ಭಾರತವು 151ನೇ ಸ್ಥಾನದಲ್ಲಿತ್ತು. ಈ ವರ್ಷದ ವರದಿಯಲ್ಲಿ ಭಾರತವು 6 ಸ್ಥಾನಗಳನ್ನು ಕುಸಿದಿದೆ. ಪತ್ರಕರ್ತರ ವಿರುದ್ಧದ ದೌರ್ಜನ್ಯಗಳು, ಸಾಮಾಜಿಕ ಜಾಲತಾಣಗಳಲ್ಲಿನ ಆನ್ಲೈನ್ ಟ್ರೋಲಿಂಗ್ ಮತ್ತು ಬೆದರಿಕೆಗಳು ಹೆಚ್ಚಾಗಿವೆ ಎಂದು ವರದಿ ಹೇಳಿದೆ. ರಾಷ್ಟ್ರೀಯ ಭದ್ರತಾ ಕಾನೂನುಗಳು, ಭಯೋತ್ಪಾದನಾ ವಿರೋಧಿ ಕಾಯ್ದೆಗಳು ಮತ್ತು ಅವಹೇಳನಕಾರಿ ಮೊಕದ್ದಮೆಗಳನ್ನು ಪತ್ರಕರ್ತರನ್ನು ನಿಯಂತ್ರಿಸಲು ಬಳಸಲಾಗುತ್ತಿದೆ. ಸರ್ಕಾರಿ ಭಟ್ಟಂಗಿ ಮಾಧ್ಯಮಗಳ ಹೊಸ ಪರಂಪರೆಯನ್ನು ಹುಟ್ಟುಹಾಕಿದ ಕೀರ್ತಿ ಮೋದಿ ಯುಗಕ್ಕೆ ಸಲ್ಲುತ್ತದೆ. ಇಂತಹ ಮಾಧ್ಯಮಗಳನ್ನು ‘ಗೋದಿ ಮೀಡಿಯಾ’ ಎಂದು ಜನರು ಕರೆದಿದ್ದಾರೆ.
ಈ ಲೇಖನ ಓದಿದ್ದೀರಾ?: RSSಗೆ ಹೊಣೆಗಾರಿಕೆಯ ಭಯವೇ?
ಫ್ರೀಡಮ್ ಹೌಸ್ (2026) ವರದಿಯು ಭಾರತಕ್ಕೆ 100ಕ್ಕೆ 62 ಅಂಕಗಳನ್ನು ನೀಡಿದ್ದು, ದೇಶವನ್ನು ‘ಭಾಗಶಃ ಮುಕ್ತ” (Partly Free) ಎಂದು ವರ್ಗೀಕರಿಸಿದೆ. ಸಂವಿಧಾನವು ವಾಕ್ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯವನ್ನು ಎತ್ತಿಹಿಡಿದಿದ್ದರೂ, ಸರ್ಕಾರದ ನೀತಿಗಳು ಮತ್ತು ಟೀಕಾಕಾರರ ವಿರುದ್ಧದ ದೌರ್ಜನ್ಯಗಳು ನಾಗರಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುತ್ತಿವೆ ಎಂದು ವರದಿ ಹೇಳುತ್ತದೆ. “ಧಾರ್ಮಿಕ ಅಲ್ಪಸಂಖ್ಯಾತರು, ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ದ್ವೇಷಪೂರಿತ ಭಾಷಣಗಳು ನಾಗರಿಕ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿವೆ” ಎಂದು ಹ್ಯೂಮನ್ ರೈಟ್ಸ್ ವಾಚ್ (2026) ವರದಿ ಹೇಳುತ್ತದೆ. ಎಫ್ಸಿಆರ್ಎ ಕಾಯ್ದೆಯನ್ನು ಬಳಸಿಕೊಂಡು ಮಾನವ ಹಕ್ಕುಗಳ ಸಂಘಟನೆಗಳು ಮತ್ತು ಎನ್ಜಿಒಗಳ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತಿದೆ ಎಂದು ವರದಿ ಆರೋಪಿಸಿದೆ.
ವಿರೋಧ ಪಕ್ಷಗಳ ದಮನ
ಸಿಬಿಐ (CBI) ಮತ್ತು ಜಾರಿ ನಿರ್ದೇಶನಾಲಯ (ED) ದಂತಹ ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷದ ನಾಯಕರನ್ನು ಮಟ್ಟ ಹಾಕಲು ಬಳಸಲಾಗುತ್ತಿದೆ. ಪಿಎಂಎಲ್ಎ ಕಾಯ್ದೆಗೆ ತಂದ ತಿದ್ದುಪಡಿಗಳು ಆರೋಪಿಗಳಿಗೆ ಜಾಮೀನು ಕೊಡುವುದನ್ನು ಕಠಿಣಗೊಳಿಸಿವೆ. ಇದು ದೀರ್ಘಕಾಲದವರೆಗೆ ನಾಯಕರನ್ನು ಬಂಧನದಲ್ಲಿಡಲು ಸಹಾಯ ಮಾಡುತ್ತಿದೆ. ಸಂವಿಧಾನವು ಪ್ರತಿಪಕ್ಷಗಳ ಅಸ್ತಿತ್ವ ಮತ್ತು ಕಾರ್ಯನಿರ್ವಹಣೆಗೆ ಅವಕಾಶ ನೀಡುತ್ತದೆ. ಆದರೆ ವಿರೋಧ ಪಕ್ಷಗಳು ಸಂಸತ್ತಿನಲ್ಲಿ ಚರ್ಚೆ ಮತ್ತು ವಿರೋಧ ವ್ಯಕ್ತಪಡಿಸಲು ಹೆಚ್ಚಿನ ಅವಕಾಶ ದೊರಕುತ್ತಿಲ್ಲ. ವಿರೋಧ ಪಕ್ಷಗಳ ಅಸ್ತಿತ್ವವನ್ನೇ ಇಲ್ಲವಾಗಿಸುವಂತೆ ಪ್ರತಿಪಕ್ಷಗಳನ್ನು ಕುತಂತ್ರದಿಂದ ಒಡೆಯಲಾಗುತ್ತಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ನಡೆದಿರುವ ವಿಷಕಾರಿ ರಾಜಕಾರಣ ಸಂವಿಧಾನಕ್ಕೆ ಆಪತ್ತನ್ನು ತಂದಿದೆ. ಪಕ್ಷಾಂತರವು ಎಗ್ಗಿಲ್ಲದೆ ನಡೆಯುತ್ತಿದೆ. ಬಿಜೆಪಿಯ ಸೈದ್ಧಾಂತಿಕ ವಿರೋಧಿಗಳ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸಲಾಗುತ್ತಿದೆ.
ಟೀಕೆಗೆ ಒಳಗಾದ ನ್ಯಾಯಾಂಗ
ನ್ಯಾಯಾಂಗವು ಪಕ್ಷಪಾತಿಯಾಗಿ ನಡೆದುಕೊಳ್ಳುತ್ತಿರುವುದು, ಜನಸಾಮಾನ್ಯರ ಬದುಕಿನ ಮೇಲೆ ದುಷ್ಪರಿಣಾಮ ಬೀರುವಂತಹ ತೀರ್ಪುಗಳನ್ನು ನೀಡುತ್ತಿರುವುದು ವಿಮರ್ಶೆಗೆ ಒಳಪಟ್ಟಿವೆ. ಕೇಂದ್ರದ ಆಣತಿಯಂತೆ ನ್ಯಾಯಾಂಗ ಕುಣಿಯುತ್ತಿದೆ ಎಂಬ ಗುಮಾನಿಗಳು ದಟ್ಟವಾಗಿವೆ. ಇತ್ತ ಕೇಂದ್ರ ಸರ್ಕಾರವು ನ್ಯಾಯಾಂಗದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಲೇ ಇದೆ. ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರ ನೇಮಕಾತಿಯನ್ನು ಸರ್ಕಾರವು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದ್ದು ಚರ್ಚೆಯಾಗಿತ್ತು. ‘ನ್ಯಾಷನಲ್ ಜ್ಯುಡಿಷಿಯಲ್ ಅಪಾಯಿಂಟ್ಮೆಂಟ್ ಕಮಿಷನ್’ (NJAC) ನಂತಹ ಪ್ರಯತ್ನಗಳ ಮೂಲಕ ನ್ಯಾಯಾಧೀಶರ ನೇಮಕಾತಿಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಹೆಚ್ಚಿಸಲು ಸರ್ಕಾರ ಪ್ರಯತ್ನಿಸಿತು. ಪ್ರಜಾಪ್ರಭುತ್ವದ ಮೇಲೆ ಸವಾರಿ ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿದ್ದು ಇದೇ ಮೋದಿ ಕಾಲಘಟ್ಟದಲ್ಲಿ ಎಂಬುದನ್ನು ಮರೆಯುವಂತಿಲ್ಲ. ದುರಾದೃಷ್ಟವಶಾತ್ ನ್ಯಾಯಮೂರ್ತಿಗಳು ನಿವೃತ್ತಿಯ ನಂತರ ಬಿಜೆಪಿಯಲ್ಲಿ ಗುರುತಿಸಿಕೊಳ್ಳುತ್ತಿರುವ ವಿಚಿತ್ರ ಕಾಲಘಟ್ಟವನ್ನು ನಾವು ನೋಡುತ್ತಿದ್ದೇವೆ.
ಅಲ್ಪಸಂಖ್ಯಾತರ ಮೇಲೆ ದಾಳಿ
ಸಿಎಎ, ಎನ್ಆರ್‌ಸಿ ಹೆಸರಲ್ಲಿ ಈ ದೇಶದ ಅಲ್ಪಸಂಖ್ಯಾತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದು ಇದೇ ಮೋದಿ ಸರ್ಕಾರ. ಮತಾಂಧರು ಮುಸ್ಲಿಮರ ಮೇಲೆ ನಡೆಸುವ ದಾಳಿಗಳಿಗೆ ಪ್ರಭುತ್ವ ರಕ್ಷಣೆ ನೀಡಿತು. ಚುನಾವಣೆ ಸಂದರ್ಭದಲ್ಲಿ ಸ್ವತಃ ಮೋದಿಯವರೇ ಒಂದು ಸಮುದಾಯವನ್ನು ನಿಂದಿಸಿ, ಅವಮಾನಿಸಿ ಭಾಷಣ ಗಳನ್ನು ಮಾಡಿದ್ದು ಸಂವಿಧಾನಕ್ಕೆ ಮಾಡಿದ ಅಪಚಾರವಾಗಿತ್ತು. ಉತ್ತರ ಪ್ರದೇಶದ ದಾದ್ರಿಯಲ್ಲಿ ಮಹಮ್ಮದ್ ಅಖ್ಲಾಕ್ ಎಂಬವರನ್ನು ‘ಗೋಮಾಂಸ ತಿಂದಿದ್ದಾರೆ’ ಎಂಬ ಸುಳ್ಳು ಆರೋಪದ ಮೇಲೆ ಗುಂಪೊಂದು ಹತ್ಯೆ ಮಾಡಿತು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ 2020ರಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ದೆಹಲಿಯಲ್ಲಿ ಭುಗಿಲೆದ್ದ ಕೋಮು ದಂಗೆಯಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟರು, ಅವರಲ್ಲಿ ಹೆಚ್ಚಿನವರು ಮುಸ್ಲಿಮರಿದ್ದರು. ಗಲಭೆಗೆ ಪ್ರಚೋದನೆ ನೀಡಿದವರು ಈಗಲೂ ಹೊರಗೆ ಆರಾಮವಾಗಿದ್ದಾರೆ. ಹೋರಾಟಗಾರರನ್ನು ಬಂಧಿಸಿ, ಕರಾಳ ಯುಎಪಿಎ ಕಾಯ್ದೆಯಡಿ ಜೈಲಿಗೆ ಹಾಕಲಾಯಿತು. ಇಂಡಿಯಾ ಹೇಟ್ ಲ್ಯಾಬ್ (2025-26) ವರದಿಯ ಪ್ರಕಾರ ಭಾರತದಲ್ಲಿ ನಡೆಯುತ್ತಿರುವ ಶೇ. 98% ದ್ವೇಷಭಾಷಣಗಳು ಮುಸ್ಲಿಮರನ್ನು ಟಾರ್ಗೆಟ್ ಮಾಡಿವೆ. ಮುಸ್ಲಿಮರ ಧಾರ್ಮಿಕ ಹಕ್ಕುಗಳ ಮೇಲೆ ಸವಾರಿ ಮಾಡುವ ವಕ್ಫ್ ತಿದ್ದುಪಡಿ ಕಾಯ್ದೆ, ಏಕರೂಪ ನಾಗರಿಕ ಸಂಹಿತೆ, ಗೋಹತ್ಯೆ ನಿಷೇಧ ಕಾಯ್ದೆ- ಹೀಗೆ ಒಂದಲ್ಲ ಒಂದು ರೀತಿ ಮುಸ್ಲಿಮರನ್ನು ಹಿಂಸಿಸಲಾಗುತ್ತಿದೆ.
ಕಾರ್ಮಿಕ ಕಾನೂನುಗಳಲ್ಲಿನ ಪ್ರಮುಖ ಬದಲಾವಣೆಗಳು
ಕೇಂದ್ರ ಸರ್ಕಾರವು 29 ಕಾರ್ಮಿಕ ವಿಲೀನಗೊಳಿಸಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕರನ್ನು ಸುಲಭವಾಗಿ ಕೆಲಸದಿಂದ ತೆಗೆಯುವ ಅವಕಾಶ ಮಾಲಿಕರಿಗೆ ಸಿಕ್ಕಿದೆ. ಮುಷ್ಕರ ನಡೆಸುವ ಮುನ್ನ 60 ದಿನಗಳ ಮುನ್ಸೂಚನೆ ನೀಡಬೇಕು ಎಂಬ ನಿಯಮವು ಕಾರ್ಮಿಕರ ಪ್ರತಿಭಟನಾ ಹಕ್ಕನ್ನು ಮೊಟಕುಗೊಳಿಸಿದೆ. ಕಾರ್ಖಾನೆಯ ವ್ಯಾಖ್ಯಾನವನ್ನು ಬದಲಾಯಿಸಿರುವುದರಿಂದ, ಸಾವಿರಾರು ಸಣ್ಣ ಕೈಗಾರಿಕೆಗಳು ಸುರಕ್ಷತಾ ನಿಯಮಗಳ ವ್ಯಾಪ್ತಿಯಿಂದ ಹೊರಬೀಳಬೇಕಾಗಿದೆ.
ಸಂವಿಧಾನ ವಿರೋಧಿ ನಡೆಗಳು
ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (EWS) 10% ಮೀಸಲಾತಿ ನೀಡಿರುವುದು ಸಂವಿಧಾನ ಹೇಳುವ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಆದರೆ ಇದನ್ನು ಸಾಂವಿಧಾನಿಕ ತಿದ್ದುಪಡಿ ಮೂಲಕ ತಂದಿರುವುದು ಮಹಾವಂಚನೆಯೇ ಸರಿ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡಲಾಯಿತು. ಇದರಿಂದ ಪಕ್ಷಪಾತಿಯಾಗಿ ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸಲು ಅವಕಾಶ ದೊರಕಿತು. ಈಗ ನೇಮಕವಾಗಿರುವ ಆಯುಕ್ತರು ಆಳುವ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ಈ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರಿಗೆ ಮತದಾನದ ಹಕ್ಕನ್ನೇ ನಿರಾಕರಿಸುವ ರೀತಿಯಲ್ಲಿ ಎಸ್‌ಐಆರ್ ಮಾಡುತ್ತಿರುವ ಚುನಾವಣಾ ಆಯೋಗ, ಬಿಜೆಪಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲು ಕಟಿಬದ್ಧವಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಸಂಪೂರ್ಣ ದುರ್ಬಲ ಮಾಡಿದ ಮೋದಿ ಸರ್ಕಾರವೀಗ ‘ಸಂವಿಧಾನ ರಕ್ಷಣೆ’ಯ ಪಾಠವನ್ನು ಹೇಳುತ್ತಿರುವುದೇ ದೊಡ್ಡ ಬೂಟಾಟಿಕೆ.
ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ
ಭಾರತ ದೇಶವನ್ನು ರಾಜ್ಯಗಳ ಒಕ್ಕೂಟ ಎಂದು ನಮ್ಮ ಸಂವಿಧಾನ ಕರೆದಿದೆ. ಆದರೆ ಈ ಒಕ್ಕೂಟ ವ್ಯವಸ್ಥೆಯನ್ನೇ ಮೋದಿ ಸರ್ಕಾರ ಛಿದ್ರ ಮಾಡಲು ಹೊರಟಿದೆ. ಕೇಂದ್ರೀಕರಣವು ರಭಸವಾಗಿ ಸಾಗುತ್ತಿದೆ. ಜಿಎಸ್‌ಟಿ ಜಾರಿಯ ನಂತರ, ತೆರಿಗೆ ಸಂಗ್ರಹದ ಬಹುಪಾಲು ಅಧಿಕಾರ ಕೇಂದ್ರದ ಪಾಲಾಗಿದೆ. ರಾಜ್ಯಗಳು ತಮ್ಮ ಆರ್ಥಿಕ ಅಗತ್ಯಗಳಿಗಾಗಿ ಕೇಂದ್ರದ ಅನುದಾನ ಅಥವಾ ಜಿಎಸ್‌ಟಿ ಪರಿಹಾರದ ಮೇಲೆ ಅವಲಂಬಿತವಾಗುವಂತಾಗಿದೆ. ರಾಜ್ಯಪಾಲರ ಮೂಲಕ ರಾಜ್ಯ ಸರ್ಕಾರಗಳನ್ನು ನಿಯಂತ್ರಿಸಲಾಗುತ್ತಿದೆ. ಗವರ್ನರ್‌ಗಳು ಮಸೂದೆಗಳಿಗೆ ಅಂಕಿತ ಹಾಕಲು ವಿಳಂಬ ಮಾಡುವುದು, ರಾಜ್ಯ ಸರ್ಕಾರಗಳ ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುವುದು ಮತ್ತು ಕೇಂದ್ರದ ಏಜೆಂಟರಂತೆ ವರ್ತಿಸುವುದು ಹೆಚ್ಚಾಗಿದೆ.
ಮತೀಯವಾದಿ ಸಂಘಟನೆಗಳ ಅಟ್ಟಹಾಸ
ಫಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಜಮ್ಮು-ಕಾಶ್ಮೀರ ಲಿಬರೇಶನ್ ಫ್ರಂಟ್, ಜಮಾತ್-ಎ-ಇಸ್ಲಾಮಿ ಜಮ್ಮು-ಕಾಶ್ಮೀರ, ಖಲಿಸ್ತಾನ್ ಪರ ಸಂಘಟನೆಗಳು, ಮಾವೋವಾದಿ ಸಂಘಟನೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತು. ಆದರೆ ಸಂವಿಧಾನದ ಜಾತ್ಯತೀತ ಮೌಲ್ಯಗಳಿಗೆ ಧಕ್ಕೆ ತರುವಂತಹ ದ್ವೇಷಪೂರಿತ ಭಾಷಣಗಳನ್ನು ಮಾಡುವ ಮತ್ತು ಧರ್ಮದ ಹೆಸರಿನಲ್ಲಿ ಹಿಂಸೆಗೆ ಪ್ರಚೋದನೆ ನೀಡುವ ಹಲವು ಕಟ್ಟರ್ ಬಲಪಂಥೀಯ ಸಂಘಟನೆಗಳನ್ನು ಸರ್ಕಾರವೇ ಪೋಷಿಸುತ್ತಿದೆ. ಯಾವುದೇ ಪಕ್ಷಕ್ಕೆ ಸೇರಿದವರಾಗಿರಲಿ, ಹತ್ಯೆ ಮತ್ತು ದೌರ್ಜನ್ಯಗಳಲ್ಲಿ ನೇರವಾಗಿ ಭಾಗಿಯಾಗುವ ಗುಂಪುಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಸಂವಿಧಾನಕ್ಕೆ ತೋರುವ ನಿಜವಾದ ನಿಷ್ಠೆ. ಆದರೆ ಮೋದಿಯವರು ಹೇಳುವುದು ಒಂದು ಮಾಡುವುದು ಮತ್ತೊಂದು ಎಂಬುದು ಸಾಬೀತಾಗಿದೆ.



